Tuesday, December 17, 2024

ದಾಂಪತ್ಯವೆಂಬ ಅವಿಚ್ಛಿನ್ನ ಅನುಬಂಧ (Dampatyavemba Avicchinna Anubandha)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಜಗದಾದಿ ದಂಪತಿಗಳಾದಂತಹ ಲಕ್ಷ್ಮೀನಾರಾಯಣರು ರಾವಣಸಂಹಾರವನ್ನು ನಿಮಿತ್ತವಾಗಿಸಿಕೊಂಡು, ಮನುಕುಲಕ್ಕೆ ಆದರ್ಶ ಜೀವನದ  ಶಿಕ್ಷಣಕ್ಕಾಗಿ ತ್ರೇತಾಯುಗದಲ್ಲಿ ಸೀತಾರಾಮರ ರೂಪದಲ್ಲಿ ಭುವಿಯಲ್ಲಿ ಅವತರಿಸುತ್ತಾರೆ. ರಾಮನು ದಶರಥನ ಪುತ್ರನಾಗಿ ಜನಿಸಿದರೆ, ಸೀತೆಯು ಭೂಮಿಸುತೆಯಾಗಿ ಜನಕನಿಗೆ ಪುತ್ರಿಯಾಗಿ ದೊರಕುತ್ತಾಳೆ. ಜನಕ ಮಹಾರಾಜನು ಸೀತಾ ಸ್ವಯಂವರವನ್ನು ಏರ್ಪಡಿಸಿದಾಗ ಶ್ರೀರಾಮಚಂದ್ರನು ಸೀತೆಯನ್ನು ವರಿಸುತ್ತಾನೆ. ಜನಕ ಮಹಾರಾಜನು, ಪಾಣಿಗ್ರಹಣದ ಸಂದರ್ಭದಲ್ಲಿ ಸೀತೆಯ ಹಸ್ತವನ್ನು ರಾಮನ ಹಸ್ತದ ಮೇಲೆ ಇಟ್ಟು, ನನ್ನ ಮಗಳಾದ ಸೀತೆಯು ಇನ್ನು ಮುಂದೆ ಛಾಯೆಯಂತೆ ಸದಾಕಾಲ ನಿನ್ನ ಜೊತೆಯಲ್ಲಿಯೇ ಇರುತ್ತಾಳೆ, ನಿನ್ನನ್ನೇ ಅನುಸರಿಸುತ್ತಾಳೆ ಎಂಬುದಾಗಿ ಹೇಳುತ್ತಾನೆ. ಅಂತಯೇ ಸೀತೆಯು ಕೂಡ ಸದಾಕಾಲ ಪತಿಯ ಸಾನಿಧ್ಯದಲ್ಲಿಯೇ ಇರಲು ಬಯಸುತ್ತಾಳೆ. ಶ್ರೀರಾಮನು ವನವಾಸಕ್ಕೆ ಹೋಗಬೇಕಾದ ಸಂದರ್ಭದಲ್ಲಿಯೂ ಅರಮನೆಯ ಸೌಖ್ಯವನ್ನು ತೊರೆದು ಅವನನ್ನೇ ಅನುಸರಿಸುತ್ತಾಳೆ. ವಿಧಿವಶಾತ್ ರಾವಣನಿಂದ ಸೀತೆಯು ಅಪಹರಿಸಲ್ಪಟ್ಟು ಲಂಕೆಯಲ್ಲಿ ಇದ್ದಾಗಲೂ,ಶ್ರೀರಾಮಚಂದ್ರ ಸೀತಾಮಾತೆಯರು ಭೌತಿಕವಾಗಿ ದೂರವಾಗಿದ್ದರೂ ಅವರ ಮನಸ್ಸು, ಅವರ ಹೃದಯಗಳು ಒಂದಾಗಿಯೇ ಇರುತ್ತದೆ.  ಲೋಕಾಪವಾದದಿಂದ ಶ್ರೀರಾಮನು ಅಯೋಧ್ಯೆಯ ರಾಜನಾಗಿ ಸೀತೆಯನ್ನು ತ್ಯಜಿಸಬೇಕಾಗಿ ಬಂದಾಗಲೂ ಸೀತಾರಾಮರ ಮನಸ್ಸು ,ಹೃದಯಗಳು ಒಂದಾಗಿಯೇ ಇರುತ್ತವೆ. ಭೌತಿಕವಾದ ಅಗಲುವಿಕೆ ಅನ್ನುವುದು ಅವರಿಬ್ಬರ ಮನಸ್ಸನ್ನು ಬೇರ್ಪಡಿಸುವುದಿಲ್ಲ. ಸೀತೆಯು ತನ್ನ ಅವತಾರವನ್ನು ಮಂಗಳ ಮಾಡುವ ಸಂದರ್ಭದಲ್ಲಿ ನನಗೆ ಜನ್ಮ ಜನ್ಮದಲ್ಲಿಯೂ ಶ್ರೀ ರಾಮನೇ ಪತಿಯಾಗಬೇಕು ಆದರೆ ವಿರಹ ಅನ್ನುವುದು ಇರಬಾರದು ಎಂಬುದಾಗಿಯೇ ಬಯಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಅವರಿಬ್ಬರದು ಸರ್ವಕಾಲಕ್ಕೂ ಆದರ್ಶವಾದ, ಅವಿಚ್ಛಿನ್ನವಾದ (ಬೇರ್ಪಡುವಿಕೆ ಇಲ್ಲದ) ದಾಂಪತ್ಯ.

 ಕಾಲಕಾಲಕ್ಕೆ ಧರ್ಮ ಪ್ರತಿಷ್ಠಾಪನೆಗೆ ಭಗವಂತನು ಭೂಮಿಗೆ ಇಳಿದು ಬಂದಾಗ ಅವನ ಮನದನ್ನೆಯಾದ ಭಗವತಿಯೂ ಕೂಡ ಇಳಿದು ಬಂದು ಅವನ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತಾಳೆ.

 ವಧೂ - ವರರು ವಿವಾಹವೆಂಬ ಸಂಸ್ಕಾರವನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ದಂಪತಿ ಗಳಾಗುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರ ಮನಸ್ಸುಗಳು, ಹೃದಯಗಳು ಒಂದಾಗಿ ಧರ್ಮ,ಅರ್ಥ, ಕಾಮ ಎಂಬ ಮೂರೂ ಪುರುಷಾರ್ಥಗಳನ್ನು ಒಟ್ಟಿಗೆ ಸಂಪಾದಿಸಿ ಮೋಕ್ಷದವರೆಗೂ ಜೊತೆ ಜೊತೆಯಾಗಿ ಸಾಗಬೇಕು ಎನ್ನುವುದೇ ಭಾರತೀಯ ವಿವಾಹ ಪದ್ಧತಿಯ ಪ್ರಧಾನ ಧ್ಯೇಯವಾಗಿದೆ. ಹಾಗಾದಾಲೇ ಅವರು ವಿವಾಹ ಸಂಸ್ಕಾರವನ್ನು ಪಡೆದುದ್ದಕ್ಕೆ ಸಾರ್ಥಕತೆ.

 ವಿವಾಹವನ್ನು ಒಂದು ಸಂಸ್ಕಾರ ಎಂಬುದಾಗಿ ಕರೆದಿದ್ದಾರೆ, ಸಂಸ್ಕಾರ ಎಂದರೆ ಶುದ್ದಿಗೊಳಿಸುವ ಪ್ರಕ್ರಿಯೆ. ನಮ್ಮ ಇಂದ್ರಿಯಗಳು, ಮನಸ್ಸು, ಬುದ್ಧಿ, ಎಲ್ಲವನ್ನೂ ಶುದ್ಧಿಗೊಳಿಸಿ ಅಂತಿಮವಾಗಿ ಆತ್ಮನನ್ನು ಮೂಲ ನೆಲೆಯಾದ ಪರಮಾತ್ಮನೆಡೆಗೆ ಕೊಂಡೊಯ್ಯುವುದೇ ಸಂಸ್ಕಾರದ ಉದ್ದೇಶ. ವಿವಾಹದ ಮಂತ್ರಗಳು ಮತ್ತು ವಿವಾಹದಲ್ಲಿ ನಡೆಯುವ ವಿಧಿ ವಿಧಾನಗಳೆಲ್ಲವೂ ಅದನ್ನೇ ಸಾರುತ್ತಿವೆ.

ವರನು ಜ್ಞಾನ ಸಂಪಾದನೆಗೆ ಕಾಶಿಯಾತ್ರೆಗೆ ಹೊರಟ ಸಂದರ್ಭದಲ್ಲಿ, ವಧುವಿನ ಕಡೆಯವರು ಅವನನ್ನು ತಡೆದು ನೀನೊಬ್ಬನೇ ಜ್ಞಾನಿಯಾದರೆ ಸಾಲದು, ನಮ್ಮಲ್ಲಿ ನಿನಗೆ ಅನುರೂಪವಾದ ಕನ್ಯೆಯೊಬ್ಬಳಿದ್ದಾಳೆ, ಅವಳನ್ನು ವರಿಸಿ ಆ ಮಾರ್ಗದಲ್ಲಿ ಕೊಂಡೊಯ್ದು, ನಿನ್ನಂತಯೇ ಜ್ಞಾನಿಯಾದ ಸಂತತಿಯನ್ನು ಲೋಕಕ್ಕೆ ನೀಡಬೇಕು ಎಂಬುದಾಗಿ ಹೇಳಿ ಅವನೊಂದಿಗೆ ವಿವಾಹವನ್ನು ಮಾಡಿಕೊಡುತ್ತಾರೆ.

 ವಿವಾಹದ ಸಂಕಲ್ಪವೇ ಹಿಂದಿನ ಹತ್ತು ತಲೆಮಾರು, ಮುಂದಿನ ಹತ್ತು ತಲೆಮಾರು, ತಾನು ಎಂಬ ಇಪ್ಪತ್ತೊಂದು ಕುಲದ ಉದ್ಧಾರಕ್ಕಾಗಿಯೂ ಭಗವಂತನ ಸಾಲೋಕ್ಯ,  ಸಾಯುಜ್ಯ ಮೊದಲಾದ ಅಂಶಗಳು ಸಿದ್ಧಿಸುವುದಕ್ಕಾಗಿಯೂ ಈ ವಿವಾಹವನ್ನು ಮಾಡಿಕೊಳ್ಳುತ್ತೇನೆ ಎಂಬುದಾಗಿದೆ.

 ಕನ್ಯಾದಾನ ಮಾಡುವ ಸಂದರ್ಭದಲ್ಲಿ, ವರನನ್ನು ನಾರಾಯಣ ಸ್ವರೂಪನೆಂದು ಭಾವಿಸಿ, ವಧುವನ್ನು ಲಕ್ಷ್ಮೀ ಸ್ವರೂಪಳೆಂದು  ಭಾವಿಸಿ, ಜಗದಾದಿ ದಂಪತಿಗಳ ಸ್ಮರಣೆಯಲ್ಲಿಯೇ ಆ ಕ್ರಿಯೆಯನ್ನು ಮಾಡುವ ಪದ್ಧತಿ ಬಂದಿದೆ. ಪ್ರತಿಯೊಬ್ಬ ಪುರುಷನಲ್ಲಿಯೂ ಪರಮಾತ್ಮನ ಅಂಶ ಹಾಗೂ ಸ್ತ್ರೀಯಲ್ಲಿ ಪರಾಪ್ರಕೃತಿಯ ಅಂಶ ಇರುವುದರಿಂದಲೇ ಈ ರೀತಿಯ ಪದ್ಧತಿಯನ್ನು ಮಹರ್ಷಿಗಳು ರೂಪಿಸಿ ಕೊಟ್ಟಿದ್ದಾರೆ.

 ಅಗ್ನಿಪ್ರದಕ್ಷಿಣೆಯನ್ನು ಮಾಡುವಾಗ ಅಗ್ನಿಯನ್ನು ಪರಮಾತ್ಮ ಸ್ವರೂಪನೆಂದು ಭಾವಿಸಿ ವಧೂ-ವರರಿಬ್ಬರೂ ಪರಮಾತ್ಮನಿಂದ ಹೊರಟ ನಮ್ಮ ಜೀವನ ಪ್ರಕೃತಿಯಲ್ಲಿ ಅವನ ಸ್ಮರಣೆಯೊಂದಿಗೇ ಸಾಗಿ ಮತ್ತೆ ಹೋಗಿ ಅವನಲ್ಲಿಯೇ ಸೇರಿಕೊಳ್ಳಲಿ ಎಂಬ ಭಾವದಿಂದ ಪ್ರದಕ್ಷಿಣೆಯನ್ನು ಮಾಡುತ್ತಾರೆ. ಹೀಗೆಯೇ ದಾಂಪತ್ಯ ಎನ್ನುವುದು ದೀರ್ಘಕಾಲದ, ಜನ್ಮ ಜನ್ಮದಲ್ಲೂ ಮುಂದುವರೆಯುವ ಅವಿಚ್ಛಿನ್ನವಾದ ಅನುಬಂಧ. "ಇದು ಕೇವಲ ಹೆಣ್ಣು-ಗಂಡು ಕೂಡಿಸುವುದಲ್ಲಪ್ಪ ದಿವಿಭುವಿಗಳನ್ನೇ ಕೂಡಿಸುವ ಕೆಲಸವಾಗಿದೆ" ಎಂಬ ಮಾತನ್ನು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಹೀಗೆ ಭುವಿಯಲ್ಲಿ ನಡೆಯುವ ವಿವಾಹ ದಿವಿಯವರೆಗೂ ನಮ್ಮನ್ನು ಕೊಂಡೊಯ್ಯುವುದಕ್ಕೆ ಸಹಕಾರಿಯಾಗುವಂತಹದ್ದು. ಸತಿಪತಿಗಳಿಬ್ಬರೂ ವಿವಾಹದ ಉದ್ದೇಶವನ್ನು ಅರಿತು ತಮ್ಮ ತಮ್ಮ ಜವಾಬ್ದಾರಿಯ ಜೊತೆಗೆ ಸಂಸಾರವನ್ನು ನಡೆಸಿದಾಗ ಆ ಸಂಸ್ಕಾರ ಫಲಪ್ರದವಾಗುತ್ತದೆ.

 ಇಂದು ವಿವಾಹ ಎನ್ನುವುದು ಕೇವಲ ಬಾಹ್ಯವಾದ ಆಡಂಬರದ ಕಾರ್ಯಕ್ರಮವಾಗಿ ಪರಿಣಮಿಸಿದೆ. ಅದರಲ್ಲಿ ಬರುವ ಮಂತ್ರಗಳ ಅಥವಾ ವಿಧಿ ವಿಧಾನದ ಅಂತ:ಸತ್ವವನ್ನು ಅರಿಯುವ ಕಡೆಗೆ ಗಮನವೇ ಇಲ್ಲವಾಗಿದೆ. ಕೇವಲ ಇಂದ್ರಿಯ ಸೌಖ್ಯವೇ ಮುಖ್ಯವಾಗಿದೆ. ಹಾಗಾಗಿ ಅದು ಸತ್ವಹೀನವಾಗಿ ವೈವಾಹಿಕ ಜೀವನದಲ್ಲಿ ವಿಚ್ಛಿತ್ತಿ (ಒಡಕು) ಅನ್ನುವಂತಹದ್ದು ಸಾಮಾನ್ಯವಾಗಿ ಬಿಟ್ಟಿದೆ.

ವಿವಾಹ ಸಂಸ್ಕಾರಕ್ಕೆ ಒಳಪಡುವ ಎಲ್ಲಾ ವಧೂ - ವರರು ವಿವಾಹದ ಮೂಲ ಉದ್ದೇಶ ಏನು? ನಮ್ಮಿಬ್ಬರ ಜವಾಬ್ದಾರಿಯ ವ್ಯಾಪ್ತಿ ಎಲ್ಲಿಯವರೆಗೂ ಇರುತ್ತದೆ? ಎಂಬುದನ್ನು ಅರಿತು, ಅದನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಸಂಸಾರವನ್ನು ನಡೆಸುತ್ತಾ ಬಂದಾಗ ಐಹಿಕ ಸುಖದ ಜೊತೆಗೆ ಪಾರಮಾರ್ಥಿಕ ಸುಖ ಅನ್ನುವಂತಹ ದೊಡ್ಡ ಲಾಭವನ್ನೂ ಪಡೆಯಬಹುದು. ಜಗನ್ಮಾತಾ ಪಿತೃಗಳ ದಾಂಪತ್ಯವನ್ನು ಆದರ್ಶವಾಗಿಟ್ಟುಕೊಂಡು ಭುವಿಯಿಂದ ದಿವಿಗೆ ಕೊಂಡೊಯ್ಯುವಂತಹ ಅವಿಚ್ಛಿನ್ನವಾದ ದಾಂಪತ್ಯವನ್ನು ಎಲ್ಲರೂ ಬಯಸುವಂತಾಗಲಿ.

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.