ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ರಾಮಾಯಣವನ್ನು ಓದುವವರಿಗೆ ಸಮಸ್ಯೆಯೊಂದು ತೋರುವುದುಂಟು. ಭಗವಂತನು ಸರ್ವ-ಶಕ್ತನಲ್ಲವೇ? ಆತನು ರಾವಣನನ್ನು ಸಂಹರಿಸಲು ಅಷ್ಟೊಂದು ಹೆಣಗಾಡಬೇಕಿತ್ತೇ? ರಣಾಂಗಣದಲ್ಲಿ ಏಟುತಿಂದು, ಮೂರ್ಛೆಹೋಗಿ, ಬವಣೆಪಟ್ಟು, ಪರಿಶ್ರಾಂತನೂ ಚಿಂತಾಕುಲನೂ ಆಗಿ, ಕೊನೆಗೆ ಅಗಸ್ತ್ಯ-ಮಹರ್ಷಿಗಳಿಂದ ಆದಿತ್ಯ-ಹೃದಯದ ಉಪದೇಶವಾದಮೇಲೆಯೇ, ರಾವಣ-ಸಂಹಾರ ಮಾಡಲು ಸಮರ್ಥನಾದದ್ದು! - ಎಂದಾಗಿಹೋಯಿತಲ್ಲಾ!
"ರಾವಣಾ, ಇದೋ ನೀನು ಈ ಕ್ಷಣದಲ್ಲಿ ಇಲ್ಲವಾದೆ!" ಎಂದೊಮ್ಮೆ ಘೋಷಿಸಿದ್ದರೆ ಸಾಕಾಗಿತ್ತು - ಆತನು ಭಗವಂತನೇ ಆಗಿದ್ದರೆ. ಘೋಷಿಸುವುದೇನು, ಮನಸ್ಸಿನಲ್ಲಿ ಸಂಕಲ್ಪಿಸಿದ್ದರೇ ಸಾಕಾಗಬೇಕಿತ್ತು!
ರಾಮಾಯಣದ ಪ್ರಥಮಸರ್ಗದಲ್ಲೇ, ಹದಿನಾರು ಗುಣಗಳನ್ನು ಪಟ್ಟಿಮಾಡಿ, "ಇವೆಲ್ಲವನ್ನೂ ಹೊಂದಿರುವ ನರನುಂಟೇ?" - ಎಂದು ವಾಲ್ಮೀಕಿಗಳು ನಾರದರನ್ನು ಕೇಳುತ್ತಾರೆ. ನಾರದರೂ, "ಆ ಗುಣಗಳಿಂದ ಕೂಡಿರುವ ನರನನ್ನು ಅರಿತು ಹೇಳುತ್ತಿದ್ದೇನೆ" - ಎಂದೇ ಆರಂಭಿಸುತ್ತಾರೆ. ಹೀಗೆ ಕೇಳುಗನೂ ಹೇಳುಗನೂ - ನರನನ್ನು - ಎಂದರೆ ಮನುಷ್ಯನನ್ನು ಕುರಿತೇ ಮಾತನಾಡುತ್ತಿರುವುದು. ಹಾಗೆಂದ ಮೇಲೆ ರಾಮನನ್ನು ದೇವನೆನ್ನಬೇಕೇ?
ಆದರೆ ನಮ್ಮ ಪರಂಪರೆಯು ಸಾವಿರಾರು ವರ್ಷಗಳಿಂದ ರಾಮನನ್ನು ದೇವನೆಂದೇ ಪೂಜಿಸುತ್ತಿದೆಯಷ್ಟೆ. ಅದಕ್ಕೂ ರಾಮಾಯಣದಲ್ಲೇ ಆಧಾರಗಳಿವೆಯೆಂಬುದನ್ನೂ ಮನಗಾಣಬೇಕು. ಎಲ್ಲಿ? ಶರಭಂಗ-ಸುತೀಕ್ಷ್ಣರಿಗೆ ಉತ್ತಮಲೋಕವನ್ನೂ, ಜಟಾಯುವಿಗೆ ಸದ್ಗತಿಯನ್ನೂ, ಶಬರಿಗೆ ಮೋಕ್ಷವನ್ನೂ ಕೊಡುವಲ್ಲಿ; ಯುದ್ಧಸಂದರ್ಭದಲ್ಲಿ ಗರುಡನೇ ಬಂದು ಸೇವೆ ಮಾಡುವಲ್ಲಿ; ಸೀತೆಯ ಅಗ್ನಿಪ್ರವೇಶ-ಸಂದರ್ಭದಲ್ಲಿ ದೇವತೆಗಳೇ ಬಂದು ರಾಮನ ದೇವ-ದೇವತ್ವವನ್ನು ಘೋಷಿಸುವಲ್ಲಿ - ಇತ್ಯಾದಿಗಳಲ್ಲಿ.
ಹಾಗಾದರೆ ಏತಕ್ಕಾಗಿ ದೇವತ್ವ-ಮಾನವತ್ವಗಳು ಹೀಗೆ ಬೆರಕೆಯಾಗಿಹೋಗಿವೆ? - ಎಂಬ ಪ್ರಶ್ನೆಯು ಬರುವುದಲ್ಲವೇ?
ದೀರ್ಘವಾದ ತಪಸ್ಸನ್ನು ಮಾಡಿ, ರಾವಣನು ಬ್ರಹ್ಮನಿಂದ ಪಡೆದುಕೊಂಡ ವರವೇ ಹೀಗಿದೆ: "ನಾಗ-ಯಕ್ಷ-ದೈತ್ಯ-ದಾನವ-ರಾಕ್ಷಸ-ದೇವತೆಗಳಿಂದ ನನಗೆ ಸಾವು ಬರಬಾರದು. ಮನುಷ್ಯರು ನನಗೆ ಹುಲ್ಲಿಗೆ ಸಮ!"
ಈ ಅದ್ಭುತ-ವರದಿಂದ ಕೊಬ್ಬಿಹೋದ ರಾವಣ ಲೋಕ-ಕಂಟಕನಾದ. ಆತನ ಉಪಟಳ ದೇವತೆಗಳಿಗೇ ತಡೆಯಲಾರದಾಯಿತು. ಅವರೆಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟರು. ಆಗ ಬ್ರಹ್ಮನು, "ಮನುಷ್ಯರ ಮೇಲಿನ ತಿರಸ್ಕಾರದಿಂದಾಗಿ, ಅವರಿಂದ ಅವಧ್ಯತ್ವವನ್ನು, ಎಂದರೆ ಸಂಹಾರವಾಗದಿರುವಿಕೆಯನ್ನು, ಈತ ವರವಾಗಿ ಕೇಳಿಕೊಂಡಿಲ್ಲ. ಆದ್ದರಿಂದ ಆತನು ಮನುಷ್ಯರಿಂದ ಮಾತ್ರವೇ ವಧ್ಯನಾಗಿದ್ದಾನೆ (ತಸ್ಮಾತ್ ಸ ಮಾನುಷಾದ್ ವಧ್ಯಃ)" - ಎಂದನು.
ಅಷ್ಟರಲ್ಲಿ ಅಲ್ಲಿಗೆ ವಿಷ್ಣುವೇ ಆಗಮಿಸಿದನು. ಲೋಕ-ಕಂಟಕನಾದ ರಾವಣನನ್ನು ಸಂಹರಿಸುವೆ, ಮತ್ತು ಅದಕ್ಕಾಗಿ, ಮನುಷ್ಯನಾಗಿಯೇ ದಶರಥ-ಪುತ್ರನಾಗಿ ಜನಿಸುವೆ - ಎಂದು ಮಾತುಕೊಟ್ಟನು. ಅಂತೆಯೇ ಅದನ್ನು ನೆರವೇರಿಸಿದನು.
ಭಗವಂತನು ಮನುಷ್ಯನಾಗಿ ಭುವಿಗಿಳಿದುಬಂದ ಪರಿಯನ್ನು, ಮತ್ತು ಮನುಷ್ಯನಾಗಿ ನಡೆದ ನಡೆಯನ್ನು, ಶ್ರೀರಂಗಮಹಾಗುರುಗಳು ಹೀಗೆ ವಿವರಿಸಿರುವರು: "ದೇವ-ದತ್ತವಾದ ಹಿರಣ್ಮಯ-ಪಾತ್ರದಲ್ಲಿ ಪಾಯಸ-ರೂಪವಾಗಿ ಬಂದು ಇಳಿದಿದ್ದಾನೆ. ಮನುಷ್ಯ-ರೂಪನಾಗಿ ಬಂದು, ಪರಮ-ಶಾಂತಿಮಯವಾದ ಜೀವನವನ್ನು ನಡೆಸುತ್ತಿರುವ ತಪಸ್ವಿ-ಸಮೂಹಕ್ಕೆ ಕಂಟಕನಾದ ರಾವಣನನ್ನು ಸಂಹರಿಸಿದ್ದಾನೆ."
ಅಷ್ಟೇ ಅಲ್ಲದೆ, ಬೀಜ-ವೃಕ್ಷನ್ಯಾಯದಿಂದಲೂ ಒಂದು ಒಟ್ಟಾರೆ ಚಿತ್ರವನ್ನು ಹೀಗೆ ಕೊಟ್ಟಿರುವರು: "ಹೇಗೆ ಒಂದು ಬೀಜವು ಭೂಮಿಗೆ ಇಳಿದು ಬಂದು ಶಾಖೋಪಶಾಖವಾಗಿ ಬೆಳೆದು, ಎಂದರೆ ರೆಂಬೆಕೊಂಬೆಗಳಾಗಿ ಹರಡಿ, ಮತ್ತೆ ಮೇಲೆ ದಿವಿಯಲ್ಲಿ ಬೀಜರೂಪವಾಗಿಯೇ ನಿಂತುಬಿಡುವುದೋ, ಹಾಗೆಯೇ ಇವನು ಮತ್ತೆ ಸ್ವಧಾಮದಲ್ಲೇ ಹೋಗಿ ನಿಂತುಬಿಡುತ್ತಾನೆ" – ಎಂದು.
ಇಲ್ಲೊಂದು ಚಕ್ರಾಕಾರವಾದ ಗತಿಯನ್ನೂ ಕಾಣುತ್ತೇವೆ. ನೆಲದೊಳಗೆ ಬೀಜವನ್ನು ಬಿತ್ತುತ್ತೇವೆ; ಅದು ಹೊರಗೆ ವೃಕ್ಷವಾಗಿ ವಿಸ್ತಾರವಾಗಿ ಮುಂದುವರೆಯುತ್ತದೆ; ಇದು ಪ್ರವೃತ್ತಿ-ಮಾರ್ಗವಷ್ಟೆ. ಆದರೆ ಹೀಗೆ ಮುಂದುವರೆಯುತ್ತಲೂ, ಜೊತೆಗೇ ಅದು ಹಿಂದುವರೆಯುತ್ತಲೂ ಇದೆ - ಎಂಬ ಅದ್ಭುತವನ್ನು ಮನಗಾಣಬೇಕು. ಏನದು? ಜೊತೆಜೊತೆಗೇ ಅದು ಮತ್ತೆ ತನ್ನ ಮೂಲ-ರೂಪದತ್ತಲೇ, ಎಂದರೆ ಬೀಜರೂಪದತ್ತಲೇ, ಸಾಗುತ್ತಲೂ ಇದೆಯಲ್ಲವೇ? ಹೀಗೆ ಹಿಂದಿರುಗುವಿಕೆಯೇ ನಿವೃತ್ತಿ-ಮಾರ್ಗ. ಹೀಗೆ ಪ್ರವೃತ್ತಿ-ನಿವೃತ್ತಿಗಳೆರಡೂ ಒಟ್ಟಿಗೇ ಸಾಗುತ್ತಿರುವುದೇ ಆಶ್ಚರ್ಯಕರವೂ ಆದರ್ಶಭೂತವೂ ಆದ ನಡೆ.
ಆಕಾಶದಿಂದ ಭೂಮಿಗಿಳಿದದ್ದು ಮತ್ತೆ ಆಕಾಶದಲ್ಲೇ ನಿಂತಿದೆ: ಮರಗಳಲ್ಲಿ ಬಿಡುವ ಹಣ್ಣು ಎತ್ತರದಲ್ಲಿರುತ್ತದೆ. ಆಕಾಶವು ಎತ್ತರದ ಆ ದಿವಿಯೇ. ದಿವಿಯ ಪುರುಷನು - ಎಂದರೆ ವಿಷ್ಣುವು, ಭುವಿಗೆ - ಎಂದರೆ ಪ್ರಕೃತಿಗೆ, ಮನುಷ್ಯನಾಗಿ ಇಳಿದುಬಂದು, ಧರ್ಮಿಷ್ಠನಾಗಿ ಬೆಳೆದು ವಿಸ್ತಾರಗೊಂಡು, ಅಧರ್ಮವನ್ನಳಿಸಿ, ಕೊನೆಗೆ ತನ್ನ ಮೂಲ-ಸ್ಥಾನವನ್ನೇ ಸೇರಿದ್ದಾನೆ.
ಒಂದರ್ಥದಲ್ಲಿ ನಾವಿರಬೇಕಾದುದೂ ಹೀಗೆಯೇ. ನಮಗೂ "ಅಲ್ಲಿದೆ ನಮ್ಮನೆ!" ಅಲ್ಲವೇ? ಭೂಮಿಗೆ ನಾವು ಬಂದಿರುವುದು ಇಲ್ಲಿಯೇ ಇದ್ದುಬಿಡಲಲ್ಲವಷ್ಟೆ? ಕೊನೆಗೆ ಆ ಸ್ವಧಾಮಕ್ಕೆ ಸೇರಿಕೊಳ್ಳಲೆಂದೇ ತಾನೆ?
ಹಾಗಿದ್ದರೆ, ಅದಕ್ಕೊಪ್ಪುವಂತೆ, ನಾವೂ ಅಂತೆಯೇ ಅಧರ್ಮವನ್ನಳಿಸಿಕೊಂಡು ಸ್ವಧರ್ಮ-ಸ್ವಕರ್ಮಗಳಲ್ಲಿ ನಿರತರಾಗಿದ್ದುಕೊಂಡು, ವಿಷ್ಣುಪದವೆಂಬ ಮೂಲ-ಧಾಮವನ್ನು ಸೇರಿಕೊಳ್ಳಲೆಳಸು(ತ್ತಿರು)ವುದೇ ವಿವೇಕವೆನಿಸುವುದಲ್ಲವೇ?
ಸೂಚನೆ: 21/12/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.