Monday, December 16, 2024

ಹನುಮ ಲಂಕೆಗೆ ಹಾರಿದ್ದು ಹೇಗೆ? (Hanuma lankege Hariddu Hege?)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)


ಈ ಹಿಂದೆ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ಶ್ರೀರಾಮ ಹಾಗೂ ರಾಮಾಯಣದ ಬಗ್ಗೆ ಸಾಕಷ್ಟು ಪರ-ವಿರೋಧ ವಾದಗಳು ಕೇಳಿ ಬರುತ್ತಿದ್ದವು. ವಿರೋಧದ ಧ್ವನಿಗಳಲ್ಲಿ ಒಂದು ಏನೆಂದರೆ, ರಾಮಾಯಣ ಕಾಲ್ಪನಿಕ ಏಕೆಂದರೆ, ರಾಮಾಯಣದಲ್ಲಿ ಬರುವ ಹಲವಾರು ಘಟನೆಗಳು ಅತಿಮಾನುಷ, ಅವಾಸ್ತವ ಆದುದರಿಂದ ರಾಮಾಯಣ ನಡೆದಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯಿಂದ ಅಲ್ಲಗೆಳೆಯುವುದು ಒಂದು ವಾದ.  ಈ ವಾದಕ್ಕೆ ಬಳಸುವ ಹಲವಾರು ಉದಾಹರಣೆಗಳಲ್ಲಿ ಒಂದೆಂದರೆ ಹನುಮಂತನು ಲಂಕೆಗೆ ಹಾರಿದ ಘಟನೆ. ಇದೆಲ್ಲಿ ಸಾಧ್ಯ ಎಂದು ಈ ಘಟನೆಯ ವಾಸ್ತವಿಕತೆಯನ್ನು ಮತ್ತು ತನ್ಮೂಲಕ ರಾಮಾಯಣದ ವಾಸ್ತವಿಕತೆಯನ್ನೂ ಅಲ್ಲಗೆಳೆಯುತ್ತಾರೆ. ಈಗ ಈ ಪರ-ವಿರೋಧ ಚರ್ಚೆಗಳು ತಣ್ಣಗಾಗಿದ್ದರೂ ವೈಚಾರಿಕವಾಗಿ ಈ ಘಟನೆಯನ್ನು ಪರಿಶೀಲಿಸುವುದು ಉಚಿತವಾಗಿಯೇ ಇದೆ. 

ಹನುಮಂತನು ಲಂಕೆಗೆ ಹಾರಿರುವ ವಿಷಯದ ವಾಸ್ತವತೆಯನ್ನು ವಿಮರ್ಶೆ ಮಾಡುವವರಲ್ಲಿ ಕೆಲವರು ಹನುಮಂತ ಲಂಕೆಗೆ ಹಾರಿದ್ದು ನಿಜವಾದಲ್ಲಿ ನ್ಯೂಟನ್ನಿನ ಗುರುತ್ವಾಕರ್ಷಣೆಯ ನಿಯಮವನ್ನು ಉಲ್ಲಂಘಿಸಿದ ಹಾಗೆ ಆಗುವುದಿಲ್ಲವಾ? ಆದುದರಿಂದ ಈ ಘಟನೆಯ ಉಲ್ಲೇಖ ಎಷ್ಟು ಅವೈಜ್ಞಾನಿಕ ಎಂದು ಹೀಗಳೆಯುತ್ತಾರೆ. ಆದರೆ ಈ ಆಕ್ಷೇಪಣೆಗೆ ಬಹಳ ಸುಲಭವಾಗಿ, ತಾರ್ಕಿಕವಾಗಿಯೇ ಉತ್ತರಿಸಬಹುದು. ಬಹಳ ಪ್ರಾಣಿಗಳು, ಅದರಲ್ಲೂ ಕೋತಿಗಳೂ ಮನುಷ್ಯರೂ ಸಹ ನೆಗೆಯುತ್ತಾರೆ. ಹೀಗೆ ನೆಗೆಯುವಾಗ ಕೆಲಕ್ಷಣಗಳು ಅಂತರಿಕ್ಷದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ನ್ಯೂಟನ್ನಿನ ನಿಯಮವು ಭಂಗವಾಗಲಿಲ್ಲ ಎಂದರೆ ಹನುಮಂತ ನೆಗೆದಾಗಲೂ ನ್ಯೂಟನ್ನಿನ ನಿಯಮದ ಉಲ್ಲಂಘನೆ ಆಗಲಿಲ್ಲ ಎಂದು ಹೇಳಬಹುದು. ಆದುದರಿಂದ ಹನುಮಂತ ಸಮುದ್ರೋಲ್ಲಂಘನ ಮಾಡಿದಾಗ ಪ್ರಶ್ನೆ ಬರುವುದು ಅಷ್ಟು ದೂರ ನೆಗೆಯುವುದು ಸಾಧ್ಯವೇ ಎನ್ನುವುದು ಮಾತ್ರ ಅಷ್ಟೇ ಹೊರತು ನ್ಯೂಟನ್ನಿನ ನಿಯಮದ ಬಗ್ಗೆ ಅಲ್ಲ. 

ಇನ್ನು ಇಂತಹಾ ಅಮೋಘವಾದ ಸಾಮರ್ಥ್ಯದಿಂದ ಕೂಡಿರುವ ನೆಗೆತ ಸಾಧ್ಯವೇ, ವಾಸ್ತವವೇ ಎನ್ನುವ ಪ್ರಶ್ನೆಯನ್ನು ವಿಮರ್ಶಿಸಬಹುದು. ಈ ವಿಮರ್ಶೆಗೆ ಆರ್ಷ ವಿಜ್ಞಾನದ ಶಾಸ್ತ್ರಗಳಲ್ಲೊಂದಾದ ಪತಂಜಲಿ ಯೋಗಸೂತ್ರದ ವಿಭೂತಿ ಪಾದವು ಬೆಳಕು ಚೆಲ್ಲುತ್ತದೆ.

ಪತಂಜಲಿ ಯೋಗ ಸೂತ್ರದ ವಿಭೂತಿ ಪಾದವು ಅನೇಕ ಯೋಗ ಸಿದ್ಧಿಗಳನ್ನು ವಿವರಿಸುತ್ತದೆ. ಅವುಗಳಲ್ಲೊಂದು ಆಕಾಶಗಮನ ಸಿದ್ಧಿ. ನಮ್ಮ ದೇಹದಲ್ಲಿ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ವಾಯುಗಳು ಕೆಲಸ ಮಾಡುತ್ತಿರುತ್ತವೆ. ಈ ವಾಯುಗಳನ್ನು force ಎನ್ನಬಹುದು. ಅವುಗಳಲ್ಲಿ ಉದಾನವಾಯುವು ಕಂಠದಿಂದ ಮೇಲೆ, ಮೇಲ್ಮುಖವಾಗಿ (upward) ಕೆಲಸ ಮಾಡುತ್ತಿರುತ್ತದೆ. ಆ ಉದಾನವಾಯುವನ್ನು ನಿಯಂತ್ರಿಸಿದರೆ, ನಮ್ಮ ದೇಹದಲ್ಲಿನ upward force ಜಾಸ್ತಿಯಾಗಿ ದೇಹವು ನೆಲದಿಂದ ಮೇಲೇಳುತ್ತದೆ. ಹನುಮಂತನು ಮಹಾ ಜ್ಞಾನಿಯಾಗಿದ್ದುದಲ್ಲದೇ, ಅಷ್ಟಸಿದ್ಧಿಗಳನ್ನೂ ಕರಗತ ಮಾಡಿಕೊಂಡಿದ್ದನು. ಆದುದರಿಂದ ದೇಹದಲ್ಲಿರುವ ವಾಯುವನ್ನು ಒಂದು ರೀತಿ ನಿಯಂತ್ರಣದಲ್ಲಿಟ್ಟುಕೊಂಡು, ಹೀಗೆ ಬಹಳ ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದನು. ವಾನರರನೇಕರು ಈ ರೀತಿ ಸಿದ್ಧಿಯನ್ನು ಹೊಂದಿ ಹಲವು ಯೋಜನ ನೆಗೆಯಬಲ್ಲವರಾಗಿದ್ದರು. ಇಂದಿಗೂ ಸಹ ಹಲವು ಯೋಗ ಸಾಧಕರು ಗಾಳಿಯಲ್ಲಿ ತೇಲುವಿಕೆಯನ್ನು (ಲೆವಿಟೇಷನ್) ಪ್ರದರ್ಶಿಸಿದ್ದಾರೆ. ಆದರೆ ಹನುಮಂತನು ವಾಯುಪುತ್ರನೇ ಆದುದರಿಂದ, ಈ ಹಾರುವ, ನೆಗೆಯುವ ವಿಷಯದಲ್ಲಿಯೂ ಅತ್ಯದ್ಭುತ ಸಾಮರ್ಥ್ಯದಿಂದಲೇ ಕೂಡಿ ಲಂಕೆಗೇ ಹಾರಬಲ್ಲವನಾಗಿದ್ದನು. 

ಒಟ್ಟಾರೆ ಹೇಳುವುದಾದರೆ, ಹನುಮ ಲಂಕೆಗೆ ಹಾರಿದ್ದು ತನ್ನ ದೇಹದಲ್ಲಿರುವ ವಾಯುಗಳ ನಿಯಂತ್ರಣದಿಂದ. ಈ ನಿಯಂತ್ರಣ ಹನುಮಂತನಲ್ಲಿ ಅತ್ಯದ್ಭುತವಾದ ಮಟ್ಟದಲ್ಲಿದ್ದುದರಿಂದ ಅವನು ಅದ್ಭುತ ಸಾಮರ್ಥ್ಯಶಾಲಿಯಾಗಿದ್ದನು. ಹೀಗೆ ತಾರ್ಕಿಕವಾಗಿಯೂ, ಆರ್ಷವಿಜ್ಞಾನದ ದೃಷ್ಟಿಕೋಣದಿಂದಲೂ ಗಮನಿಸಿದಾಗ ರಾಮಾಯಣದ ವಾಸ್ತವಿಕತೆಯು ಇನ್ನೂ ಚೆನ್ನಾಗಿ ಮನದಟ್ಟಗುತ್ತದೆ. ಆದುದರಿಂದ ರಾಮಾಯಣವನ್ನು ವಾಸ್ತವವೆಂದೇ ಪರಿಗಣಿಸಿ, ಆಸ್ವಾದಿಸಿ ಉದ್ಧಾರವಾಗೋಣ..

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.