Sunday, December 22, 2024

ಯುವರಾಜನಾಗುವವನಿಗೆ ದಶರಥನ ಉಪದೇಶ (Yuvarajanaguvavanige Dasarathana Upadesa)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ದಶರಥ ಮಹಾರಾಜನು ತನ್ನ ಹಿರಿಯ ಮಗನಾದ ಶ್ರೀರಾಮನಿಗೆ ಯೌವರಾಜ್ಯಾಭಿಷೇಕ ಮಾಡಬೇಕೆಂದು ನಿಶ್ಚಯಿಸಿ ಜನಪ್ರತಿನಿಧಿಗಳು, ಪ್ರಜಾಮುಖ್ಯರು ಮುಂತಾದವರನ್ನು ಕರೆಸಿದನು. ಅವರ ಮುಂದೆ ತನ್ನ ಅಭಿಲಾಷೆಯನ್ನಿಟ್ಟು, ಧರ್ಮದೃಷ್ಟಿಯಿಂದ ಅವರ ಅಭಿಪ್ರಾಯವನ್ನೂ ಕೇಳಿದನು. ಶ್ರೀರಾಮನಂತಹವನು ತಮ್ಮ ಮುಂದಿನ ರಾಜನಾಗುವುದನ್ನು ಅವರು ಸಂತೋಷದಿಂದ ಸ್ವಾಗತಿಸಿದರು. ಅದನ್ನು ಕೇಳಿದ ದಶರಥನ ಆನಂದಕ್ಕೇ ಪಾರವೇ ಇಲ್ಲದಾಯಿತು. ಇನ್ನೇನು? ಪಟ್ಟಾಭಿಷೇಕಕ್ಕೆ ತಯಾರಿ ಸಾಗಿತು. ತನ್ನ ಸಾರಥಿಯಾದ ಸುಮಂತ್ರನ ಮೂಲಕ ಹೇಳಿಕಳುಹಿಸಿ, ರಾಮನನ್ನು ಸಭೆಗೆ ದಶರಥನು ಬರಮಾಡಿಕೊಂಡನು - ಈ ಯೌವರಾಜ್ಯಾಭಿಷೇಕದ ಸುದ್ದಿಯನ್ನು ಅವನಿಗೆ ತಿಳಿಸಲು. ಅವನಿಗೆ ದಶರಥನು ಈ ಸುಖವಾರ್ತೆಯನ್ನು ಕೊಡುವುದರೊಂದಿಗೇ, ಸಭೆಯಲ್ಲೇ ಹಲವು ಬುದ್ಧಿಮಾತುಗಳನ್ನೂ ಹೇಳಿದನು. ಹೇಳಿದ ಕೆಲವು ಬುದ್ಧಿಮಾತುಗಳೆಂದರೆ: "ವ್ಯಸನಗಳಿಂದ ದೂರವಿರು; ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಆಳ್ವಿಕೆಯ ಎಲ್ಲ ವಿಷಯಗಳತ್ತಲೂ ಗಮನ ಕೊಡು; ಆಯುಧಶಾಲೆಯನ್ನೂ ಭಂಡಾರವನ್ನೂ ತುಂಬಿರು; ಪ್ರಜೆಗಳ ಪ್ರೀತಿಯನ್ನು ಗಳಿಸು; ಮನಸ್ಸನ್ನು ನಿಗ್ರಹಿಸಿ ವ್ಯವಹಾರ ಮಾಡು" ಎಂದು.

ಸಕಲಸದ್ಗುಣೋಪೇತನಾದ ಶ್ರೀರಾಮನಂತಹ ರಾಜಕುಮಾರನಿಗೆ ದಶರಥನು ಹೀಗೆಲ್ಲಾ ಬೋಧನೆ ಮಾಡಬೇಕಿತ್ತೇ ಎಂಬ ಪ್ರಶ್ನೆ ಬರುತ್ತದೆ. ಒಂದು ಮಟ್ಟಿಗೆ ದಶರಥನೇ ಅದನ್ನು ಅಲ್ಲಿ ಉತ್ತರಿಸಿದ್ದಾನೆ. "ಈ ಪ್ರಜೆಗಳೆಲ್ಲರೂ ನಿನ್ನ ಗುಣಗಳಿಂದ ಸಂತುಷ್ಟರಾಗಿದ್ದಾರೆ. ನೀನು ಸ್ವಭಾವತಃ ಗುಣಶಾಲಿಯೂ ವಿನಯವಂತನೂ ಆಗಿದ್ದೀಯೆ. ಈ ಗುಣಗಳೆಲ್ಲ ನಿನ್ನಲ್ಲಿದ್ದರೂ ಪುತ್ರನೆಂಬ ಸ್ನೇಹದಿಂದ ನಿನಗೆ ಹಿತವಾದದ್ದನ್ನು ಹೇಳುತ್ತಿದ್ದೇನೆ" ಎಂದು ಹೇಳಿಯೇ ಅವನು ಬುದ್ಧಿಮಾತುಗಳನ್ನಾಡಿರುವುದು. ಶ್ರೀರಂಗಮಹಾಗುರುಗಳು ಹೇಳಿದಂತೆ " ಜ್ಞಾನವೃದ್ಧತೆ ವಯೋವೃದ್ಧತೆ ಎರಡೂ ಒಂದೇ ಜಾಗದಲ್ಲಿದ್ದರೆ ವಿಶೇಷ ಲಾಭ... ಬಾಲ್ಯ, ಯೌವನ, ವಾರ್ಧಕ್ಯ ಮೂರು ಅವಸ್ಥೆಗಳಲ್ಲಿರುವ ಸುಖ, ದುಃಖ, ಚಿಂತೆ, ಮೋಹ, ಸಂತೋಷಗಳ್ಳೆಲ್ಲದರ ಅನುಭವವಿರುವುದರಿಂದ, ಅವನ ಉಪದೇಶವು ಕಾರ್ಯಶಾಲಿಯೂ, ಸಾಧನಾಪರನೂ ಆದವನಿಗೆ ಉಪಯುಕ್ತವಾಗುತ್ತದೆ. "

ಸರಿ, ಬುದ್ಧಿಮಾತುಗಳನ್ನು ಏಕಾಂತದಲ್ಲಿ ಆಡಿದಲ್ಲಿ(ಯೇ) ಮನಸ್ಸಿಗೆ ಅವು ಚೆನ್ನಾಗಿ ನಾಟುವುವಲ್ಲವೇ? ದಶರಥನು ಸಭೆಯಲ್ಲೇಕೆ ಹೀಗೆ ಮಾಡಿದನು? ಒಬ್ಬ ಸಾಮಾನ್ಯ ಯುವಕನಿಗೆ ಹೀಗೆ ಹೇಳಿದ್ದರೆ ಸಾಧಾರಣವಾಗಿ ಬರುವ ಪ್ರತಿಕ್ರಿಯೆಯೇನಿರಬಹುದು? "ನಾನೇನು ತಪ್ಪನ್ನು ಮಾಡಿರುವೆನೇ ಅಥವಾ ಮಾಡಹೊರಟಿರುವೆನೇ? ಮತ್ತೆ ಯಾಕಿಷ್ಟು ಬೋಧನೆ?" ಎಂದೋ, "ಅಯ್ಯೋ, ತಿಳಿದದ್ದನ್ನೇ ಇವರೆಲ್ಲರ ಮುಂದೆ ಮತ್ತೆ ಹೇಳುತ್ತಿದ್ದಾರಲ್ಲಾ!" ಎಂದೋ ಇರಬಹುದು. ವಿವೇಕವಿದ್ದವನಾದರೂ, " ಇದೆಲ್ಲ ಹೇಳಿದ್ದು ಸರಿಯಾದರೂ, ಏಕಾಂತದಲ್ಲಿ ಹೇಳಬಹುದಿತ್ತಲ್ಲಾ" ಎಂದೆನಿಸಬಹುದು. ರಾಮನಂತೂ ಎಲ್ಲವನ್ನೂ ಸಮಾಧಾನಚಿತ್ತದಿಂದಲೇ ಕೇಳಿಸಿಕೊಂಡನು.

ಎಷ್ಟೋ ಬಾರಿ ನಾವು ಸರಿಯಾದ ಕೆಲಸವನ್ನೇ ಮಾಡಿರಬಹುದು, ಆದರೆ ಸರಿಯಾದ ಕೆಲಸ ಮಾಡುತ್ತಿದ್ದೇವೆಂದು ಬೇರೆಯವರಿಗೆ ತೋರುವುದೂ ಮುಖ್ಯವಾಗುತ್ತದೆ. ಅದೂ ರಾಜನಂತಹ ಸ್ಥಾನದಲ್ಲಿದ್ದು, ಪ್ರಜೆಗಳಿಗೆ ತಾನು ಮಾದರಿಯಾಗಿರಬೇಕಿದ್ದರಂತೂ, ಇದು ಬಹುಮುಖ್ಯವೇ. ಎಲ್ಲರಿಗೂ ತಿಳಿದಂತೆಯೇ ರಾಮನು ಪ್ರಜೆಗಳಿಗೆ ಪ್ರಿಯನಾದವನು, ಧರ್ಮಿಷ್ಠ. ದಶರಥನೂ ಧರ್ಮಿಷ್ಠ. ಆದರೂ ತಂದೆಯಾದವನು ಮಕ್ಕಳನ್ನು ಸರಿಯಾದ ದಾರಿಯಲ್ಲಿಡುವ ಬುದ್ಧಿವಾದ ಆಗಾಗ್ಗೆ ಹೇಳುವುದು ಕರ್ತವ್ಯವೇ ಸರಿ. ಧರ್ಮದಿಂದ ನಡೆಯುವವರಿಗೂ ಈ ರೀತಿಯ ಸಂದರ್ಭಗಳಲ್ಲಿ ಹೇಳಿದ ಮಾತುಗಳು ಕೆಲವೊಮ್ಮೆ ಸಂದಿಗ್ಧಪರಿಸ್ಥಿತಿಗಳಲ್ಲಿ  ದಾರಿದೀಪವಾಗುವುವು, ಅಲ್ಲವೇ?

ಸೂಚನೆ: 21/12/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.