ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರಶ್ನೆ – 116 ಯಾವುದು ಮಾರ್ಗ?
ಉತ್ತರ - ತರ್ಕ ನಿಲ್ಲದು, ವೇದಗಳು ಹಲವು, ಋಷಿಗಳು ಅನೇಕರು; ಹಾಗಾಗಿ ವಿಭಿನ್ನವಾದ ಅವರ ಮಾತೂ ಪ್ರಮಾಣವಲ್ಲ, ಧರ್ಮದ ಮರ್ಮವು ತಿಳಿಯಲು ಕಷ್ಟಸಾಧ್ಯ, ಶಿಷ್ಟರು ನಡೇದದ್ದೇ ದಾರಿ.
ಧರ್ಮ ಎಂದರೇನು? ಎಂಬ ವಿಷಯದ ಬಗ್ಗೆ ಈ ಹಿಂದೆ ಅನೇಕ ಲೇಖನಗಳಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ. ಧರ್ಮವು ಅತ್ಯಂತ ಸೂಕ್ಷ್ಮವಾದುದು, ಕಣ್ಣಿಗೆ ಅದು ಗೋಚರಿಸದು. ಹಾಗಾದರೆ ಅದರ ಅಸ್ತಿತ್ವವನ್ನು ತಿಳಿಯಲು ಏನು ಮಾಡಬೇಕು? ಯಾವುದು ಪ್ರಮಾಣ? ಯಾವುದು ಮಾರ್ಗ? ಎಂಬ ವಿಷಯವನ್ನು ಅಧಿಕರಿಸಿ ಯಕ್ಷನು ಈ ಪ್ರಶ್ನೆಯಲ್ಲಿ ಕೇಳುತ್ತಾನೆ, ಅದಕ್ಕೆ ಧರ್ಮಜನ ಉತ್ತರ ಬಹಳ ಸ್ಪಷ್ಟವಾಗಿದೆ. ಧರ್ಮವು ಯಾವುದೇ ವಿಚಾರ ಮಂಥನಗಳಿಗೆ ನಿಲುಕುವುದಲ್ಲ; ವೇದಗಳು ನಾಲ್ಕು ಇರಬಹುದು; ಆದರೆ ಈ ವೇದಗಳಿಂದಲೂ ಕೂಡ ಧರ್ಮವನ್ನು ತಿಳಿಯುವುದು ಕಷ್ಟವಾಗಬಹುದು. ಅಷ್ಟೇಕೆ ಧರ್ಮವನ್ನು - ಧರ್ಮದ ವಿಚಾರವನ್ನು ತಿಳುಹಿಸಲು ಅನೇಕ ಸ್ಮೃತಿಗ್ರಂಥಗಳು ಬಂದಿವೆ, ಅನೇಕ ಶಾಸ್ತ್ರಗ್ರಂಥಗಳು ಬಂದಿವೆ. ಆದರೆ ಆ ಎಲ್ಲಾ ಗ್ರಂಥಗಳು ಅನೇಕ ಋಷಿಗಳಿಂದ ಪ್ರಣೀತವಾಗಿವೆ. ವ್ಯಕ್ತಿಗಳಿಂದ ಪ್ರಣೀತವಾದ ಗ್ರಂಥಗಳಿಂದಲೂ ಕೂಡ ಈ ಧರ್ಮದ ವಿಷಯವನ್ನು ತಿಳಿಯಲು ಕಷ್ಟ ಸಾಧ್ಯ ಎಂಬುದಾಗಿ ಹೇಳುತ್ತಾನೆ. ಹಾಗಾದರೆ ಧರ್ಮವನ್ನು ತಿಳಿಯುವುದು ಹೇಗೆ? ಎಂದರೆ ಶಿಷ್ಟರು - ಮಹಾಜನರು - ಋಷಿಜನರು ಅಥವಾ ವೇದ, ಶಾಸ್ತ್ರ, ಪುರಾಣ ಪುಣ್ಯ, ಜನ್ಮ ಮುಂತಾದ ವಿಷಯಗಳಲ್ಲಿ ಆಸ್ತಿಕ್ಯಬುದ್ಧಿ ಇರುವ ಯಾವ ಮಹಾಪುರುಷರು ಇರುತ್ತಾರೋ, ಅವರು ಯಾವುದನ್ನು ಆಚರಣೆ ಮಾಡುತ್ತಾರೋ, ಅದನ್ನೇ 'ಧರ್ಮಮಾರ್ಗ' ಎಂಬುದಾಗಿ ತಿಳಿಯಬೇಕು ಎಂಬ ಉತ್ತರವನ್ನು ಇಲ್ಲಿ ಕೊಡುತ್ತಾನೆ. ಅಂದರೆ ಧರ್ಮಕ್ಕೆ ಪ್ರಮಾಣ ಯಾವುದು? ಎಂದರೆ "ಆಚಾರವೇ ಧರ್ಮಕ್ಕೆ ಮಾರ್ಗ" ಎಂಬುದು ಈ ಪ್ರಶ್ನೆಯಲ್ಲಿ ಅಡಕವಾದ ವಿಶೇಷ ಅಂಶವಾಗಿದೆ.
ಧರ್ಮದ ತತ್ತ್ವವು ಅತ್ಯಂತ ಸೂಕ್ಷ್ಮವಾದದ್ದು, ಆದರೂ ಅದು ತಿಳಿಯಲೇಬೇಕಾದುದು. ಆದ್ದರಿಂದ ಅದನ್ನರಿಯುವ ಸಾಧನವು ನಮ್ಮ ಇಂದ್ರಿಯಗಳಿಗೂ ಗೋಚರವಾಗುವ ರೀತಿಯಲ್ಲಿ ಇರಬೇಕಾಗುತ್ತದೆ. ಅಂತಹ ಸಾಧನ ಯಾವುದೆಂದರೆ ಅದನ್ನೇ ಧರ್ಮದ ಆಚರಣೆ ಎಂಬುದಾಗಿ ಕರೆಯುತ್ತಾರೆ. ಈ ಹಿಂದಿನ ಲೇಖನದಲ್ಲಿ ಧರ್ಮದ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಆದರೂ ಪ್ರಸ್ತುತ ವಿಷಯಕ್ಕೆ ಒಮ್ಮೆ ಅದರ ಅನುಸಂಧಾನ ಅಗತ್ಯ ಎಂಬುದಾಗಿ ತಿಳಿದು ಧರ್ಮದ ಬಗೆಗಿನ ಒಂದು ವಾಕ್ಯವನ್ನು ಇಲ್ಲಿ ತಿಳಿಸಲಾಗಿದೆ. ಅದರದರ ಸಹಜತೆಯನ್ನು ಧರ್ಮ ಎಂದು ಕರೆದು, ಅಂತಹ ಸಹಜತೆಯನ್ನು ಉಳಿಸುವ ಯಾವ ಆಚರಣೆ ಇದೆಯೋ ಅದನ್ನು ಕೂಡ ಧರ್ಮ ಎಂಬುದಾಗಿ ಕರೆಯಲಾಗುತ್ತದೆ. ಹಾಗಾಗಿ ಅತ್ಯಂತ ಸೂಕ್ಷ್ಮವಾದ ಧರ್ಮವನ್ನು ತಿಳಿಯಬೇಕಾದರೆ ಧರ್ಮದ ಆಚರಣೆಯಿಂದ ಮಾತ್ರ ಸಾಧ್ಯ ಎಂಬುದು ಇದರ ಚರಿತಾರ್ಥವಾಗಿದೆ. ವೇದಗಳು, ಅವುಗಳನ್ನೇ ಅನುಸರಿಸಿ ಅಂತೆಯೇ ತಪ್ಪಸಿನಿಂದ ಋಷಿಗಳು ತಮ್ಮ ಬುದ್ಧಿಯಲ್ಲಿ ಧರಿಸಿದ ಸ್ಮೃತಿಗಳು, ಸದಾಚಾರ, ತನಗೆ ಅತ್ಯಂತ ಪ್ರಿಯವಾದದ್ದು, ಸತ್ಕಂಕಲ್ಪದಿಂದ ಹುಟ್ಟಿದ್ದ ಆಶೆ ಇವುಗಳನ್ನು ಧರ್ಮಕ್ಕೆ ಮೂಲ ಎಂದು ತಿಳಿಯಬೇಕು ಎಂದು ಯಾಜ್ಞವಲ್ಕ್ಯಸ್ಮೃತಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಅಧ್ಯಾತ್ಮಜ್ಞಾನವಿದನಾದ ಒಬ್ಬನೇ ಒಬ್ಬನು ಏನನ್ನು ಹೇಳುತ್ತಾನೋ ಅದನ್ನು ಧರ್ಮಮಾರ್ಗ ಅಂದು ತಿಳಿಯಬೇಕು ಎಂದೂ ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಯಾವುದರಿಂದ ಆತ್ಮಜ್ಞಾನ ಪ್ರಾಪ್ತವಾಗುತ್ತದೆಯೋ ಅದನ್ನು ಧರ್ಮ ಎನ್ನುತ್ತಾರೆ.
ಸೂಚನೆ : 08/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.