Wednesday, November 25, 2020

ಶರಣಾಗತಿ (Sharanagati)

ಲೇಖಕಿ: ಯೋಗಶ್ರೀ. ಹೆಚ್.ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿನ ವಿಭೀಷಣ ಶರಣಾಗತಿಯ ಸಂದರ್ಭ. ರಾವಣನ ವರ್ತನೆಯಿಂದ ಬೇಸರಗೊಂಡ ವಿಭೀಷಣನು ರಾಮನಲ್ಲಿಗೆ ಶರಣಾರ್ಥಿಯಾಗಿ ಬಂದನು. ಅವನ ಆಗಮನವನ್ನು ಗಮನಿಸಿದ ಸುಗ್ರೀವನು ಇತರ ವಾನರರೊಂದಿಗೆ ರಾಮನ ಬಳಿಯಲ್ಲಿ ಬಂದು ಈ ರೀತಿಯಾಗಿ ಹೇಳುತ್ತಾನೆ "ಲಂಕಾಧಿಪನಾದ ರಾವಣನ ತಮ್ಮನಾದ ವಿಭೀಷಣನು ಆಶ್ರಯ ಕೇಳಿ ಬಂದಿದ್ದಾನೆ. ಶತ್ರುಪಕ್ಷದವನೂ, ಮಾಯಾವಿದ್ಯೆ ಬಲ್ಲವನೂ, ಕಷ್ಟಕಾಲದಲ್ಲಿ ತನ್ನ ಸ್ವಂತ ಅಣ್ಣನನ್ನು ತ್ಯಜಿಸಿ ಬಂದವನಾದ್ದರಿಂದ ನಂಬಿಕೆಗೆ ಅನರ್ಹ". ಈ ಮಾತುಗಳನ್ನು ಕೇಳಿದ ರಾಮನು ಹನುಮಂತ ಹಾಗೂ ಇತರ ವಾನರರ ಅಭಿಪ್ರಾಯಗಳನ್ನು ಕೇಳಿದನು. ಶತ್ರುಪಕ್ಷದವನಾದ ವಿಭೀಷಣನನ್ನು ನಂಬುವುದು ಅನುಚಿತ ಎನ್ನುವ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸುತ್ತಾರೆ. ಹನುಮಂತನು ಎಲ್ಲರ ವಾದವಿವಾದಗಳನ್ನು ಆಲಿಸಿದ ಬಳಿಕ ಈ ರೀತಿಯಾಗಿ ಹೇಳುತ್ತಾನೆ "ವಿಭೀಷಣನು ನಿಮ್ಮನ್ನು ರಾವಣನಿಗಿಂತ ಶ್ರೇಷ್ಠ, ಪರಾಕ್ರಮಿ ಹಾಗೂ ಅರ್ಹನೆಂದು ಅಭಯಾರ್ಥಿಯಾಗಿ ಬಂದಿದ್ದಾನೆ. ಅವನ ನಿರ್ಧಾರ ಸರಿಯಾಗಿದೆ". ಇದನ್ನು ಆಲಿಸಿದ ರಾಮನು    ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ  ದದಾಮ್ಯೇತತ್ ವ್ರತಂ ಮಮ ॥

(ಒಮ್ಮೆ ನನ್ನಲ್ಲಿ ಶರಣಾಗಿ, ನಾನು ನಿನ್ನವನು ಎಂದು ಯಾಚಿಸುವ ಎಲ್ಲರಿಗೂ ಅಭಯವನ್ನು ಕೊಡುತ್ತೇನೆ; ಇದು ನನ್ನ ವ್ರತ) ಎಂದು ಹೇಳಿ  ವಿಭೀಷಣನಿಗೆ ಅಭಯವನ್ನು ನೀಡಿದನು.

ಮನುಷ್ಯರು ಭಗವಂತನಲ್ಲಿ ಮಹತ್ತಾದ ವಿಶ್ವಾಸವನ್ನು ಇಟ್ಟು ತಮ್ಮದೆಲ್ಲವನ್ನೂ ಪರಿಪೂರ್ಣವಾಗಿ ಅವನ ಪಾದಾರವಿಂದಗಳಲ್ಲಿ ಸಮರ್ಪಿಸಿ ಶರಣುಹೋದಾಗ ಅವನು ಅಭಯವನ್ನಿತ್ತು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಾನೆ. ಜ್ಞಾನಯೋಗ, ಭಕ್ತಿಯೋಗಗಳಂತೆ ಶರಣಾಗತಿಯೂ(ಭರನ್ಯಾಸ) ಮೋಕ್ಷೋಪಾಯಗಳಲ್ಲಿ ಒಂದು. ಭರನ್ಯಾಸವೆಂದರೆ ನಮ್ಮ ಭಾರವನ್ನೆಲ್ಲಾ ಭಗವಂತನಲ್ಲಿ ನ್ಯಾಸ(ಸಮರ್ಪಣೆ) ಮಾಡಿ ಅವನನ್ನು ಆಶ್ರಯಿಸುವುದು.

ರಾವಣನುನು ಸ್ವಂತ ಅಣ್ಣನಾದರೂ ಮಹಾ ಅಧರ್ಮಿಯಾದ್ದರಿಂದ ಆತನನ್ನೂ, ರಾಜ್ಯವನ್ನೂ ಬಿಟ್ಟು ಶತ್ರುಪಕ್ಷದವನಾದರೂ ಧರ್ಮಿಷ್ಠನಾದ ಶ್ರೀರಾಮನಲ್ಲಿ ಪರಿಪೂರ್ಣವಾದ ವಿಶ್ವಾಸವನ್ನಿಟ್ಟು ಅವನ ಪದತಲಗಳಲ್ಲಿ ವಿಭೀಷಣನು ಅಭಯವನ್ನು ಅರಸಿ ಬಂದನು. ಭಗವಂತನಾದ ಶ್ರೀರಾಮನು ಆತನನ್ನು ಉದ್ಧರಿಸಿದನು. ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ಭಗವಂತನ ಪಾದಾವಲಂಬನವೇ ಭಕ್ತಿಯ ಮೂಲ. ಭಗವಂತನ ಪಾದವು ಸುವರ್ಲೋಕದಿಂದ ಭೂಲೋಕದವರೆಗೂ ವ್ಯಾಪಿಸಿದೆ. ಅಂತಹ ಪವಿತ್ರಪಾದವನ್ನು ನಂಬಿ ಶರಣಾದರೆ ನಮ್ಮ ಜೀವನವು ಸಾರ್ಥಕ ಹಾಗು ಪರಿಪೂರ್ಣ.

ಸೂಚನೆ: 25/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.