Showing posts with label paper_udayavani. Show all posts
Showing posts with label paper_udayavani. Show all posts

Wednesday, June 22, 2022

ವಿದ್ಯೆ ಮಾತ್ರವೇ ಇದ್ದರೆ ಸಾಲದು (Vidye Matrave Iddare Saladu)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಬೃಹದ್ಯುಮ್ನನೆಂಬ ಅರಸನು ಪರಾವಸು, ಅರ್ವಾವಸುವೆಂಬ ವಿದ್ವಾಂಸರಾದ ಋಷಿಪುತ್ರರನ್ನು ಯಜ್ಞವನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸಿದನು. ಯಜ್ಞಕಾಲದ ಮಧ್ಯದಲ್ಲಿ ಕಾರಣಾಂತರದಿಂದ ಪರಾವಸುವಿಗೆ ಮನೆಗೆ ಹೋಗಿಬರುವ ಮನಸ್ಸಾಯಿತು. ಸಂಜೆಯವೇಳೆಗೆ ಆಶ್ರಮವನ್ನು ತಲುಪಿದ ಆತನಿಗೆ ಆಶ್ರಮದ ಬಾಗಿಲಲ್ಲಿ ಪ್ರಾಣಿಯೊಂದು ಹಾರಲು ಸಿದ್ಧವಾಗಿರುವಂತೆ ಕಂಡಿತು. ಗಾಬರಿಗೊಂಡ ಪರಾವಸುವು ಕೂಡಲೇ ಅದನ್ನು ಸಂಹರಿಸಲು ಕೈಯಲ್ಲಿದ್ದ ಆಯುಧವನ್ನೆಸೆದ. ಆದರೆ ಆಯುಧದಿಂದ ಹತವಾದದ್ದು ಪ್ರಾಣಿಯಾಗಿರಲಿಲ್ಲ, ಅವನ ತಂದೆಯಾದ ರೈಭ್ಯಮಹರ್ಷಿ! ಅನಿರೀಕ್ಷಿತ ಘಟನೆಯಿಂದ ದುಃಖಾಕ್ರಾಂತನಾದ ಆತನು ತಪ್ಪಿಗಾಗಿ ಪರಿತಪಿಸುತ್ತ, ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ. ಯಜ್ಞಕಾರ್ಯಕ್ಕೆ ತಡೆಯಾಗಬಾರದೆಂದೆಣಿಸಿದ ಆತನು ಸಹೋದರನ ಬಳಿಸಾರಿ "ನಾನು ಯಜ್ಞಕಾರ್ಯವನ್ನು ಮುಂದುವರಿಸುತ್ತೇನೆ. ಅರಿಯದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವನ್ನು ನನ್ನ ಪರವಾಗಿ ನೀನು ಮಾಡಿ ಬಾ" ಎಂದ. ಅರ್ವಾವಸುವು ಸಹೋದರನಿಗಾಗಿ ದೈಹಿಕ-ಮಾನಸಿಕ ಪ್ರಯಾಸಗಳಿಂದ ಕಠಿಣ ಪ್ರಾಯಶ್ಚಿತ್ತವನ್ನಾಚರಿಸಿ ಯಜ್ಞಶಾಲೆಗೆ ಹಿಂತಿರುಗಿದ. ಆದರೆ ಪ್ರಾಯಶ್ಚಿತ್ತವನ್ನು ತಾನೇ ಆಚರಿಸಲಿಲ್ಲವಾದ್ದರಿಂದ ಪರಾವಸುವು ಪಾಪಭಾಗಿಯಾದ. ತತ್ಪರಿಣಾಮವಾಗಿ ಅರ್ವಾವಸುವನ್ನು ನೋಡಿದೊಡನೆಯೇ ಪರಾವಸುವಿನಲ್ಲಿ ದುಷ್ಟಪ್ರವೃತ್ತಿ ತಲೆದೋರಿ ಅಲ್ಲಿದ್ದವರನ್ನು ಕುರಿತು "ಈತನು ತಂದೆಯನ್ನೇ ಕೊಂದ ಮಹಾಪಾಪಿ. ಇವನ ಉಪಸ್ಥಿತಿಯು ಯಜ್ಞಶಾಲೆಯ ಪಾವಿತ್ರ್ಯಕ್ಕೆ ಭಂಗವನ್ನುಂಟುಮಾಡುತ್ತದೆ" ಎಂದ! ನಿಜವನ್ನು ತಿಳಿಸಲು ಅರ್ವಾವಸುವು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬೇಸರಗೊಂಡಾತನು ವನಕ್ಕೆ ತೆರಳಿ ತಪೋಮಗ್ನನಾದ.  ದೇವತೆಗಳು ಪ್ರತ್ಯಕ್ಷವಾಗಿ ವರ ನೀಡುತ್ತೇವೆಂದಾಗ ಅವನು "ನನ್ನ ತಂದೆಯು ಜೀವಂತನಾಗಲಿ ಮತ್ತು ನನ್ನ ಸಹೋದರನಿಗೆ ಸದ್ಬುದ್ಧಿಯುಂಟಾಗಲಿ" ಎಂದು ಪ್ರಾರ್ಥಿಸಿದ!  ತನಗೆ ಕೇಡು ಬಯಸಿದವನಲ್ಲಿ ಕ್ಷಮೆತೋರುವುದಲ್ಲದೆ ಆತನ ಒಳಿತಿಗಾಗಿ ಪ್ರಾರ್ಥನೆ!  ಅದೆಷ್ಟು ಕ್ಷಮೆ! ದಯೆ!


ದಯೆ(ಸರ್ವಭೂತಗಳಲ್ಲೂ ಕರುಣೆ), ಕ್ಷಮೆ(ದೇಹ-ಮನಸ್ಸುಗಳಿಗೆ ದುಃಖವನ್ನುಂಟುಮಾಡಿದರೂ ಸಮಾಧಾನವಾಗಿಯೇ ವರ್ತಿಸುವುದು)-ಇವೆರಡೂ ಆತ್ಮನಿಗೆ ಸ್ವಭಾವವಾದ-ಸಹಜಗುಣಗಳ ಪಟ್ಟಿಯಲ್ಲಿ ಪ್ರಥಮಸ್ಥಾನ ವಹಿಸುವುವು. ಯೋಗಿಗಳಿಗೆ ಸಹಜವೂ, ಸಾಮಾನ್ಯರಿಗೆ ಅಭ್ಯಾಸದಿಂದ ಮಾತ್ರವೇ ಲಭ್ಯವೂ ಆದ ಆತ್ಮಗುಣಗಳ ಫಲ ಶಾಂತಿಸಮೃದ್ಧಿ-ಸಮಾಧಾನ; ಅನಾತ್ಮಗುಣಗಳ ಫಲ ಮನಃಪತನ.


ಶ್ರೀರಂಗಮಹಾಗುರುಗಳು ವಿದ್ಯೆಗೆ ಕೊಟ್ಟಿರುವ ವಿವರಣೆಯನ್ನು ಸ್ಮರಿಸುವುದಾದರೆ-ಜ್ಞಾನಕ್ಕೆ(ಭಗವಂತನೆಡೆಗೆ) ಒಯ್ಯುವುದೇ ವಿದ್ಯೆ. ಈ ನೇರದಲ್ಲಿ ವಿದ್ಯೆಯೆನಿಸುವ ವೇದ-ಶಾಸ್ತ್ರಾದಿಗಳ ಅಭ್ಯಾಸವು ಬುದ್ಧಿಯ  ಮಟ್ಟಕ್ಕೇ ಸೀಮಿತವಾಗದೆ ಮನಸ್ಸನ್ನೂ ಸಂಸ್ಕರಿಸುವಂತಾಗಬೇಕು. ಹಾಗಾದಾಗ ನಮ್ಮೊಳಗಿನ ಆತ್ಮಗುಣಗಳನ್ನರಳಿಸಿ ಭಗವಂತನೆಡೆ ಸಾಗಲು ಸಹಕರಿಸುವುದರಿಂದ ವಿದ್ಯಾಭ್ಯಾಸವು ಅರ್ಥವತ್ತಾಗುವುದು. ಜೀವನದಲ್ಲಿ ಯಶಸ್ವಿಯಾಗಲು ವಿದ್ಯೆ ಮಾತ್ರವೇ ಸಾಲದು, ಆತ್ಮಗುಣಗಳೂ ಅಗತ್ಯವಾದ್ದರಿಂದ ಅವುಗಳನ್ನೂ ಗಳಿಸಿ ಶಾಂತಿ-ಸಮೃದ್ಧವಾದ  ಬಾಳಾಟ ನಡೆಸೋಣ.


ಸೂಚನೆ: 22/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Thursday, September 9, 2021

ಸೌಭಾಗ್ಯಗಳನ್ನು ದಯಪಾಲಿಸುವ ಸ್ವರ್ಣಗೌರೀ-ಮಂಗಳಗೌರೀ (Saubhagyagalannu Dayapaalisuva Svarnagauri-Mangalagauri)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಭಾದ್ರಪದಮಾಸದಲ್ಲಿ ಬರುವ ಪ್ರಮುಖ, ಸಂಭ್ರಮದ ಹಬ್ಬವೆಂದರೆ "ಗೌರೀಹಬ್ಬ"ವೆಂದು ಪ್ರಸಿದ್ಧವಾಗಿರುವ ಸ್ವರ್ಣಗೌರೀವ್ರತ.  ಮರುದಿನದ ಗಣೇಶನ ಹಬ್ಬವೂ ಸೇರಿದಂತೆ 'ಗೌರೀ-ಗಣೇಶ' ಎಂಬುದಾಗಿ ಜನರ ಸಂತಸ-ಸಂಭ್ರಮಗಳಿಗೆ ವಿಷಯವಾಗಿದೆ ಇದು.

ಇದನ್ನು 'ಹೆಂಗಸರ ಹಬ್ಬ' ಎಂಬುದಾಗಿ ವ್ಯವಹರಿಸುವುದನ್ನು ಕಾಣುತ್ತೇವೆ. ಕಾರಣ, ಇಂದು ಪ್ರಧಾನವಾಗಿ ಪೂಜೆಯನ್ನು ನಡೆಸುವವರು ಹೆಂಗಸರೇ. ಆದರೂ ಹೆಂಗಸರ ಪೂಜೆಗೆ ಸಹಕಾರವನ್ನು ನೀಡುವುದಲ್ಲದೆ ಪುರುಷರೂ ಸಹ ಜಗನ್ಮಾತೆಯಾದ ಗೌರೀದೇವಿಯನ್ನು ಕುಟುಂಬಕ್ಷೇಮಕ್ಕಾಗಿ ನಮಿಸಿ-ಪ್ರಾರ್ಥಿಸಬೇಕಾಗಿದೆ. ಸ್ತ್ರೀಯರೂ ಸಹ ಪುರುಷರನ್ನು ಹಬ್ಬದ ಸಂಭ್ರಮದಿಂದ ದೂರವಿಡಬೇಕಾಗಿಲ್ಲ. ಗೌರಿದೇವಿಯೊಬ್ಬಳನ್ನೇ ಪೂಜಿಸಿದಾಗಲೂ, ಪರಮೇಶ್ವರ ಸಹಿತವಾಗಿ 'ಪಾರ್ವತೀ-ಪರಮೇಶ್ವರರು', ಜಗನ್ಮಾತಾಪಿತೃಗಳು ಎಂಬುದಾಗಿಯೇ ಸ್ತುತಿಸುತ್ತಾರೆ.

ಇಲ್ಲಿ ಪುರಾಣದ ಕಥೆಯೊಂದನ್ನು ಸ್ಮರಿಸಬಹುದಾಗಿದೆ. ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿಯರಲ್ಲಿ ಯಾರು ಹೆಚ್ಚು ಶ್ರೇಷ್ಠರು? ಎಂಬ ಪ್ರಶ್ನೆಯೆದ್ದಿತು. ಶಿವಗಣಗಳೆಲ್ಲರೂ ಉತ್ತರಿಸದೆ ಮೌನವನ್ನು ವಹಿಸಿದರು. ಆಗ ಭೃಂಗಿಮುನಿಯು 'ಶಿವನೇ ಶ್ರೇಷ್ಠ' ಎಂದು ಉತ್ತರಿಸಿದನಂತೆ.  ಶಕ್ತಿಯ ಹಿರಿಮೆಯನ್ನು ಒಪ್ಪದೆ ಶಿವನೇ  ಹೆಚ್ಚು ಎಂದು ಸಾರಿದರು. ಇದರಿಂದ ಕೋಪಗೊಂಡ ದೇವಿಯು "ನಿನ್ನಲ್ಲಿರುವ ನನ್ನ ಅಂಶವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ" ಎಂದು ಆತನ ಶರೀರದಲ್ಲಿನ ಸಪ್ತಧಾತುಗಳನ್ನೂ ಶೋಷಿಸಿಬಿಟ್ಟಳು. ಮುನಿಯು ಬರಿ ಅಸ್ತಿಪಂಜರವಾಗಿ ಉಳಿಯಬೇಕಾಯಿತು.  ಇದು ಸೂಚಿಸುವ ತತ್ತ್ವಾರ್ಥವೆಂದರೆ,  ಶಿವ-ಶಕ್ತಿಯರ ಸಮಾಯೋಗದಿಂದಲೇ ಸೃಷ್ಟಿಯು ಮುಂದುವರಿದಿರುವುದು.  ಆದ್ದರಿಂದ ಅವರಿಬ್ಬರ ಪಾತ್ರವೂ ಸಮಾನವಾಗಿದೆ.  ಲೋಕದಲ್ಲಿ ಪತಿ-ಪತ್ನಿಯರು ಶಿವ-ಶಕ್ತಿಯರ ಪ್ರತಿನಿಧಿಗಳಾಗಿ ವರ್ತಿಸಬೇಕಾಗಿರುವುದರಿಂದ ಇಬ್ಬರೂ ಸೇರಿಯೇ ಪೂಜಿಸುವುದೆಂಬುದು ಜ್ಞಾನಿಸಮ್ಮತವಾದದ್ದು.

 ಶಿವ-ಶಕ್ತಿಯರು ಸೇರಿಯೇ ಇರುವವರಾಗಿದ್ದರೆ, ಗೌರಿಯನ್ನು ಮಾತ್ರವೇ ಅಂದು ಪೂಜಿಸಬಹುದೇ? ಎಂದರೆ, ಅದಕ್ಕೆ ಜ್ಞಾನಿಗಳ ಉತ್ತರ, ಪುರುಷಾರ್ಥಗಳ ಕೆಲವು ವಿಶೇಷಭಾಗಗಳ ಪ್ರಾಪ್ತಿಗಾಗಿ ಅವುಗಳನ್ನನುಗ್ರಹಿಸುವ ದೇವಿಯನ್ನು ಪ್ರತ್ಯೇಕವಾಗಿ ಪೂಜಿಸುವುದು ಸೂಕ್ತವೇ ಆಗಿದೆ. ದೇವಿಯ ಪೂಜೆಯಿಂದ ದೇವನೂ ಸಂತುಷ್ಟನಾಗುತ್ತಾನೆ ಎಂಬ ಅಂಶವನ್ನೂ ನೆನಪಿಡಬೇಕಾಗಿದೆ.

ಯಾರು ಈ ಗೌರೀ?

ಮೇಲೆ ಗಮನಿಸಿದಂತೆ ಗೌರಿಯು ಶಿವನ ಅರ್ಧಾಂಗಿ. ಶಿವನ ಮಡದಿಯಾಗಿದ್ದ ದಾಕ್ಷಾಯಣೀ(ಸತೀದೇವಿ). ತನ್ನ ಪತಿಗಾದ ಅಪಮಾನವನ್ನು ತಾಳಲಾರದೆ ದೇಹತ್ಯಾಗವನ್ನು ಮಾಡಿದಳು. ಮುಂದೆ ಹಿಮವಂತನ ಮಗಳಾಗಿ ಜನಿಸಿದಳು.  ಮಹಾದೇವನು ತಪಸ್ಸಿನಲ್ಲೇ ಮಗ್ನನಾಗಿದ್ದಾಗ  ಆತನನ್ನು ತಪಸ್ಯೆಯಿಂದ ಹೊರತರಲು ಕಾಮದೇವನ ಮೂಲಕ  ದೇವತೆಗಳು ಪ್ರಯತ್ನಿಸಿದಾಗ ಕುಪಿತನಾದ ಶಿವನು ಕಾಮನನ್ನು ಭಸ್ಮಮಾಡಿದ. ಹಿಮವಂತನ ಮಗಳಾದ ಗೌರಿಯು ಕಠಿಣ ತಪಸ್ಯೆಯಿಂದ ಶಿವನನ್ನು ಒಲಿಸಿಕೊಂಡಳು. ಪ್ರಸನ್ನನಾದ ಶಿವನು ಲೋಕಕಲ್ಯಾಣಕ್ಕಾಗಿ ತಾನಾಗಿಯೇ ಕಾಮನನ್ನು ಬರಮಾಡಿಕೊಂಡು ಗೌರಿಯನ್ನು ವಿವಾಹವಾದ ಎಂಬುದು ಪುರಾಣಕಥೆ.

 ಶ್ರೀಕೃಷ್ಣನೇ ತಾನು ದೇವಕಿಯ ಗರ್ಭದಲ್ಲಿ ಹುಟ್ಟುವಾಗ ಯೋಗಮಾಯೆಯಾದ ಗೌರಿದೇವಿಯು ಯಶೋದೆಯ ಗರ್ಭದಲ್ಲಿ ಅವತರಿಸಿದಳು. ಆತನ ಅವತಾರದಲ್ಲಿ ನೆರವಾದ ಆಕೆಯನ್ನು ಲೋಕವು ತನ್ನ(ನಾರಾಯಣನ)ಸೋದರಿಯೆಂದು ಕೊಂಡಾಡಲಿ ಎಂಬುದಾಗಿ ಶ್ರೀಕೃಷ್ಣನೇ ಹೇಳುತ್ತಾನೆ ಎನ್ನುತ್ತದೆ ಶ್ರೀಮದ್ಭಾಗವತ.

ಗೌರೀಪೂಜೆಯ ಉದ್ದೇಶ  

ಪ್ರಧಾನವಾಗಿ ಗೌರೀಪೂಜೆಯನ್ನು ಮಾಡುವುದು ಒಳ್ಳೆಯ ದಾಂಪತ್ಯಸೌಭಾಗ್ಯಕ್ಕಾಗಿ. ಇದನ್ನು ಸಾರುವ ಪುರಾಣದ ಕಥಾಭಾಗಗಳಲ್ಲಿ ಪ್ರಮುಖವಾದವುಗಳೆಂದರೆ ಗೋಪಿಕೆಯರು ಕೃಷ್ಣನನ್ನೇ ಪತಿಯಾಗಿ ಪಡೆಯಲು ಮಾಡಿದ ಪೂಜೆ, ರುಕ್ಮಿಣೀದೇವಿಯು ತನ್ನ ವಿವಾಹಸಂದರ್ಭದಲ್ಲಿ ಆಚರಿಸಿದ ಗೌರೀಪೂಜೆ. ಇದನ್ನೇ ಆಧರಿಸಿ ಇಂದೂ  ವಿವಾಹಪೂರ್ವಭಾವಿಯಾಗಿ ಗೌರೀಪೂಜೆಯನ್ನು ಮಾಡುವ ಪದ್ಧತಿಯಿದೆ. ದಾಂಪತ್ಯಸೌಖ್ಯವನ್ನಷ್ಟೇ ಅಲ್ಲದೆ ಸರ್ವಮಂಗಲಗಳನ್ನೂ-ಸತ್ಸಂತಾನವನ್ನೂ-ಸುಖಸಮೃದ್ಧಿಗಳನ್ನೂ ಕರುಣಿಸಬಲ್ಲ ಮಹಾತಾಯಿ ಈಕೆ.

ಪೂಜೆ/ವ್ರತದ ವಿಧಾನ

ಗೌರೀಪೂಜೆಯ ಆಚರಣೆಯ ಮೊದಲ ಹಂತ ಆಕೆಯನ್ನು ಹೃದಯದಲ್ಲಿ ಧ್ಯಾನಮಾಡುವುದೇ ಆಗಿದೆ.  ಒಳಗೆ ಕಂಡ-ಧ್ಯಾನ ಮಾಡಿದ ಜಗನ್ಮಾತೆಯನ್ನು ನಂತರ ಹೊರಗಡೆಯೂ ಇತರ ಮಾಧ್ಯಮಗಳಿಂದ ಪೂಜಿಸುವುದು ಮಹರ್ಷಿವಿಹಿತ ಪೂಜಾಕ್ರಮ.

ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ರಚಿಸಿ, ಅಲಂಕರಿಸಿ, ಕಲಶಸ್ಥಾಪನೆಯನ್ನು ಮಾಡುತ್ತಾರೆ. ಗೌರೀದೇವಿಯ ವಿಗ್ರಹವನ್ನು ಸ್ವರ್ಣದಿಂದಲೋ, ಅರಿಸಿನದಿಂದಲೋ ಅಥವಾ ಗಂಗಾತೀರದ ಮರಳು-ಮೃತ್ತಿಕೆಯಿಂದ ಮಾಡುತ್ತಾರೆ. ಗಂಗೆಯ ಸಾಮೀಪ್ಯವಿಲ್ಲದವರು ಯಾವುದಾದರೂ ಜಲಾಶಯದಲ್ಲಿ ಗಂಗೆಯನ್ನು ಆವಾಹನೆಮಾಡಿ ಅಲ್ಲಿನ ಮಣ್ಣನ್ನು ತಂದು ಮಾಡುವುದುಂಟು.

ಆವಾಹಿತಳಾದ ದೇವಿಯನ್ನು ಷೋಡಶೋಪಚಾರಗಳಿಂದ ಪೂಜಿಸುತ್ತಾರೆ. ಹದಿನಾರು ಗ್ರಂಥಿಗಳುಳ್ಳ ದಾರವನ್ನಿಟ್ಟು ಆ ಗ್ರಂಥಿಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಗೆ ಪ್ರಿಯವಾದ ಉಪಚಾರಗಳು, ಮಂತ್ರ-ತಂತ್ರಗಳಿಂದ ಪೂಜೆಯು ಸಂಪನ್ನಗೊಳ್ಳುತ್ತದೆ. ಪೂಜಾವಿಧಾನಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದರೂ ಎಲ್ಲದರ ಹಿಂದಿನ ಆಶಯವೂ ದೇವಿಯನ್ನು ಪ್ರಸನ್ನಗೊಳಿಸಿ ಆಕೆಯ ಅನುಗ್ರಹವನ್ನು ಪಡೆಯುವುದೇ ಆಗಿದೆ.

ಗೌರೀ-ಗೌರೀಪೂಜಾ ಕ್ರಮದಲ್ಲಿನ ತತ್ತ್ವಾರ್ಥಗಳು

ಗೌರಿಯು ಹಿಮವಂತನ ಪುತ್ರಿಯೆಂಬುದು ಪುರಾಣೋಕ್ತಿ. ಆದರೆ ಪುರಾಣಕಥೆಗಳು ಕೆಲವು ಗಹನವಾದ ತತ್ತ್ವಗಳನ್ನು, ಸತ್ಯಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಹೊರಟಿರುವವು ಎಂಬ ಶ್ರೀರಂಗಮಹಾಗುರುಗಳ ಮಾತು ಗಮನಾರ್ಹವಾಗಿದೆ. ಮಹರ್ಷಿಗಳು ಅಂತರಂಗಸಾಧನೆಯಲ್ಲಿ ತಮ್ಮ ಬೆನ್ನುಹುರಿಯ ಉನ್ನತಸ್ಥಾನವನ್ನು ಏರಿದಾಗ ಪರಮಾನಂದಭರಿತರಾಗಿ ಇಂದ್ರಿಯವ್ಯಾಪಾರಗಳೆಲ್ಲವೂ  ಸ್ತಬ್ಧವಾಗಿಬಿಡುತ್ತವೆ. ಮೈಮರಗಟ್ಟುತ್ತದೆ. ಈ ಅಂಶಗಳನ್ನು ಹೋಲುವ ಹಿಮವತ್ಪರ್ವತವನ್ನೇ ಕಥೆಯಲ್ಲಿ ಆರಿಸಿಕೊಂಡಿದ್ದಾರೆ. ಹಾಗೆ ಆನಂದತುಂದಿಲನಾದವನು ಅಲ್ಲಿಯೇ ನಿಂತುಬಿಡದೆ ಮುಂದೆ ಲೋಕದಲ್ಲಿ ತನ್ನ ಜ್ಞಾನಾನಂದಗಳನ್ನು ಬೆಳೆಸಬೇಕಾದರೆ ಆ ಸ್ಥಾನದಿಂದ ಕೆಳಗಿಳಿಯಬೇಕು. ಇಂದ್ರಿಯಗಳ ಕೆಲಸವೂ ಜರುಗಬೇಕು. ಆದ್ದರಿಂದ ಆತನನ್ನು ಅಲ್ಲಿಂದ ಲೋಕಪ್ರಜ್ಞೆಗೆ ಇಳಿಸಲು ಕಾಮನ ಮೂಲಕ ಇಂದ್ರಿಯಾಧೀಶರಾದ ದೇವತೆಗಳ ಪ್ರಯತ್ನ. ಅದು ಅಕಾಲದಲ್ಲಾದರೆ ಕೆಡಕು. ಸಕಾಲವಾದರೆ ಉತ್ತುಂಗಸ್ಥಾನದಿಂದ ಪ್ರಕೃತಿಮಾತೆಯು(ಶಕ್ತಿಸ್ವರೂಪಿಣಿಯು) ತನ್ನ ಚೈತನ್ಯಕ್ಕೆ ಮೂಲನಾದ ಶಿವನೊಡನೆ ಸೇರಿ ಕೆಳಗಿಳಿದಾಗ ಅಲ್ಲಿ ಶಿವ-ಶಿವೆಯರ ಸೇರುವೆ-ವಿವಾಹ. ಅಲ್ಲಿಂದ ಮುಂದೆ ಸಂತಾನಪ್ರಾಪ್ತಿ.  ಆದ್ದರಿಂದಲೇ ದಾಂಪತ್ಯಸೌಭಾಗ್ಯಕ್ಕಾಗಿ ಜಗನ್ಮಾತೆಯ ಪೂಜೆ.

ಪೂಜೆಗೆ ಸುವರ್ಣವೇ ಏಕೆ? ಸೌಲಭ್ಯವಿಲ್ಲದಿದ್ದಾಗ ಅರಿಸಿನವೇ ಏಕೆ? ಬೆಳ್ಳಿಯಿಂದಾಗಬಾರದೇಕೆ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ನೋಟದಿಂದಲೇ ಉತ್ತರವನ್ನು ಹುಡುಕಬೇಕಾಗಿದೆ. ಜ್ಞಾನಿಗಳ ಅನುಭವವು ಸಾರುವಂತೆ ಗೌರೀಮಾತೆಯು ಚಾಂಪೇಯ(ಸಂಪಿಗೆಹೂವಿನ) ವರ್ಣದವಳು. ಆ ವರ್ಣವನ್ನೂ, ಆಕೆಯ ಹೊಳಪನ್ನೂ ಬಹುಮಟ್ಟಿಗೆ ಹೋಲುವುದು ಸುವರ್ಣ. ಜೊತೆಗೆ ಸುವರ್ಣದ ದರ್ಶನ, ಸ್ಪರ್ಶಗಳು ನಮ್ಮೊಳಗೆ ದೇವಿಯ ಸಾಕ್ಷಾತ್ಕಾರಕ್ಕೆ ಪೋಷಕವಾದ ಕೇಂದ್ರಗಳನ್ನು ತೆರೆಯಲು ಸಹಕರಿಸುತ್ತದೆ. ದೇವ-ದೇವಿಯರನ್ನು ತಮ್ಮೊಳಗೆ ಸ್ವತಃ ಕಂಡನುಭವಿಸಿದವರೂ, ಮಹರ್ಷಿಹೃದಯವನ್ನರಿತವರೂ ಆಗಿದ್ದ ಶ್ರೀರಂಗಮಹಾಗುರುಗಳು ಸುವರ್ಣದ ಧರ್ಮವು ಬಹುಮಟ್ಟಿಗೆ ಅರಿಸಿನದಲ್ಲೂ ಕಂಡುಬರುವುದನ್ನೂ ತಮ್ಮ ನಾಡೀವಿಜ್ಞಾನದ ಮೂಲಕ ನಿರೂಪಿಸಿದರು. ಆದ್ದರಿಂದಲೇ ಸುವರ್ಣದ ಸೌಲಭ್ಯವಿಲ್ಲದಿದ್ದಾಗ  ಅರಿಸಿನವನ್ನುಪಯೋಗಿಸುವ ಕ್ರಮವನ್ನು ವಿಧಿಸಿರುವುದು ಸೂಕ್ತವಾಗಿದೆಯೆಂಬ ವಿವರಣೆಯನ್ನೂ ನೀಡಿದರು. ಪೂಜೆಯಲ್ಲಿ ಗ್ರಂಥಿಗಳ, ಉಪಚಾರಗಳ ಸಂಖ್ಯೆ ಮುಂತಾದವುಗಳಲ್ಲಿ ಹದಿನಾರೆಂಬ ಸಂಖ್ಯೆಯು ವಿಶೇಷವಾಗಿ ಎದ್ದು ಕಾಣುತ್ತದೆ. ಇದು ಜಗನ್ಮಾತೆಯ ಷೋಡಶಕಲೆಗಳ ಸೂಚಕ.

ಸೌಭಾಗ್ಯದಾಯಿನಿಯಾದ ಜಗನ್ಮಾತೆಯನ್ನು-ಜಗದಾದಿದಂಪತಿಗಳನ್ನು ದಂಪತೀಸಮೇತರಾಗಿ ಈ ಶುಭಪರ್ವದಲ್ಲಿ ಪೂಜಿಸಿ  ಸಕಲಸೌಭಾಗ್ಯಗಳನ್ನೂ ಗಳಿಸಿ ನಲಿಯೋಣ.

ಸೂಚನೆ: 9/9/2021 ರಂದು ಈ ಲೇಖನ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Tuesday, May 18, 2021

ದೀಪಕ್ಕೆ ಪ್ರಾಧಾನ್ಯ ಏಕೆ? (Dipakke Pradhanya Eke?)

ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)

ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೊಂದು ವಿಶೇಷಸ್ಥಾನವುಂಟು. ನಿತ್ಯವೂ ಪ್ರಾತಃಕಾಲ-ಸಾಯಂಕಾಲಗಳಲ್ಲಿ ಭಗವಂತನ ಸನ್ನಿಧಿಯಲ್ಲಿ ದೀಪ ಬೆಳಗಿಸುವ ಪದ್ಧತಿ ಪ್ರತಿಮನೆಯಲ್ಲಿಯೂ ಉಂಟು. 'ಪದಾರ್ಥಗಳ ಬೆಲೆ ಏರುತ್ತಿರುವ ಇಂದಿನ ಸನ್ನಿವೇಶದಲ್ಲಿ ಎಣ್ಣೆಗಾಗಿ ಹಣವನ್ನು ವೆಚ್ಚಮಾಡುವುದೇಕೆ? ಇದರಂತೆಯೇ ಬಣ್ಣ-ಆಕಾರಗಳುಳ್ಳ ವಿದ್ಯುತ್ಬಲ್ಬುಗಳನ್ನು ಬಳಸಿ ಉಳಿತಾಯಮಾಡಬಹುದಲ್ಲವೇ? ಅಥವಾ ಮೇಣದ ಬತ್ತಿಯನ್ನೇಕೆ ಬಳಸಬಾರದು? ಎನ್ನುವವರೂ ಇಲ್ಲದಿಲ್ಲ. ದೀಪಬೆಳಗುವಿಕೆಯೇ ಸಭಾ-ಸಮಾರಂಭಗಳ ಉದ್ಘಾಟನೆಯ ಚಿಹ್ನೆ. ಸಭಾಂಗಣದಲ್ಲಿ ದೀಪಕ್ಕಿಂತಲೂ ನೂರುಪಟ್ಟು ಪ್ರಕಾಶಮಾನವಾದ ವಿದ್ಯುದ್ದೀಪಗಳಿರುವಾಗ ದೀಪದ ಅಗತ್ಯವೇನು?  ಬುದ್ಧಿಜೀವಿಗಳೆನಿಸಿಕೊಳ್ಳುವವರ ಇಂತಹ ಪ್ರಶ್ನೆಗಳು  ಸಮಂಜಸವೆನಿಸುವುದು ಸಹಜವೇ.

ಇವುಗಳಿಗೆ ಉತ್ತರವನ್ನು ಭಾರತೀಯಮಹರ್ಷಿಗಳ ಆಶಯದಲ್ಲಿಯೇ ಹುಡುಕಬೇಕಾಗಿದೆ. ಮಹರ್ಷಿಗಳ ಅಂತರಂಗವನ್ನು ಅರಿತಿದ್ದ ಶ್ರೀರಂಗಮಹಾಗುರುಗಳ ವಿವರಣೆಗಳು ಇಲ್ಲಿ ಉಲ್ಲೇಖಾರ್ಹವಾಗಿವೆ. ಮಹರ್ಷಿಗಳು ಧ್ಯಾನ-ಸಮಾಧಿಯಲ್ಲಿ ತಮ್ಮೊಳಗೆ ಸರ್ವಮೂಲವಾದ ಅದ್ಭುತಪ್ರಕಾಶವೊಂದನ್ನು ಕಂಡರು.  ಅದು ಭೌತಿಕಪ್ರಪಂಚದಲ್ಲೆಲ್ಲೂ ಕಾಣಸಿಗದ  ಮಹದಾನಂದ-ನೆಮ್ಮದಿಗಳನ್ನು ನೀಡುವುದಾಗಿತ್ತು. ಆನಂದಾನುಭವದ  ಪರಾಕಾಷ್ಠೆಯನ್ನು ಮನುಕುಲವೆಲ್ಲವೂ ತಲುಪಲೆಂಬ ಹಿರಿದಾದ ಆಶಯದಿಂದ  ಅತ್ತಕಡೆ ಮನಸೆಳೆಯುವಂತೆ ಆ ಜ್ಯೋತಿಯನ್ನೇ ಹೋಲುವ ದೀಪವನ್ನು ನಿತ್ಯವೂ ಬೆಳಗಿಸುವ ಸಂಪ್ರದಾಯವನ್ನು ನಿಯೋಜಿಸಿದರು.

 ಸರ್ವಮೂಲಜ್ಯೋತಿಯ ಸ್ಮರಣೆಯೇ ಸರ್ವಕರ್ಮಗಳ ಮೂಲವಾಗಲೆಂದೇ ಸಭಾ- ಸಮಾರಂಭಗಳ ಪ್ರಾರಂಭದಲ್ಲಿ  ದೀಪಬೆಳಗುವಿಕೆ.  ಮಹರ್ಷಿಗಳ  ಸಂಶೋಧನಾತ್ಮಕ ಬುದ್ಧಿಯು ಮೂಲಜ್ಯೋತಿಯ ವರ್ಣ-ಆಕಾರಗಳನ್ನೇ ಹೊರತರುವ ಬತ್ತಿ-ಎಣ್ಣೆಗಳ ಸಂಯೋಗವನ್ನು ಪತ್ತೆ ಮಾಡಿತು. ತಾವರೆದಂಟಿನ ಬತ್ತಿ(ಮೃಣಾಳಸೂತ್ರ)-ಅಂದೇ ಕಾಯಿಸಿದ ಹಸುವಿನ ತುಪ್ಪಗಳ ಯೋಗದಿಂದ ಬೆಳಗುವ ನಿರ್ದಿಷ್ಟಪ್ರಮಾಣದ ದೀಪಶಿಖೆಯು ಬಹುಮಟ್ಟಿಗೆ  ಒಳಬೆಳಕನ್ನು ಹೋಲುವುದೆಂಬುವುದನ್ನರಿತರು.   ಅದರಿಂದ ಹೊರಬರುವ ಹೊಗೆಯೂ  ಮನಸ್ಸಿನ ಒಳಸೆಳೆಯುವಿಕೆಗೆ ಪೋಷಕವಾಗುತ್ತದೆ.  ಇತರ ಬತ್ತಿ-ಎಣ್ಣೆಗಳಿಂದಾಗುವ ಬೆಳಕೂ ಸ್ವಲ್ಪಮಟ್ಟಿನ ಹೋಲಿಕೆಯಿಂದಾಗಿ ಮೂಲಜ್ಯೋತಿಯ ಪ್ರತಿನಿಧಿಯಾಗುತ್ತದೆ.

ಸಣ್ಣ ಹಣತೆಯೇ ದೀಪವನ್ನು ಹೊರತರಬಲ್ಲದಾದರೂ ದೀಪಸ್ತಂಭದ ಬಳಕೆಯು ಹೆಚ್ಚು ಔಚಿತ್ಯಪೂರ್ಣವಾಗಿದೆ. ಸ್ತಂಭವು ನಮ್ಮೊಳಗಿನ ಮೇರುದಂಡವನ್ನು(ಬೆನ್ನುಹುರಿಯನ್ನು) ಸೂಚಿಸುತ್ತಿದ್ದರೆ ತುದಿಯಲ್ಲಿ ಬೆಳಗುವ ದೀಪಶಿಖೆಯು ಮೇರುದಂಡದ ತುಟ್ಟತುದಿಯಲ್ಲಿ ಸಹಸ್ರಾರಚಕ್ರದಲ್ಲಿ ಪ್ರಜ್ವಲಿಸುವ ಜ್ಯೋತಿಯನ್ನು ಪ್ರತಿನಿಧಿಸುತ್ತದೆ. ಆತ್ಮಮಾರ್ಗದ ವಿವಿಧಾಂಶಗಳನ್ನು ಸೂಚಿಸುವ ವಿವಿಧ ಆಕಾರಗಳ ದೀಪಸ್ತಂಭಗಳನ್ನೂ ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ದೀಪಸ್ತಂಭ-ಅದರಲ್ಲಿನ ದೀಪಗಳು ನಾವು ಸಾಗಬೇಕಾಗಿರುವ ಒಳ ಆತ್ಮಮಾರ್ಗದ, ತನ್ಮೂಲಕ ತಲುಪಬಹುದಾದ ಪರಮಾನಂದವೀಯುವ ಪರಂಜ್ಯೋತಿಯ ನಕ್ಷೆಗಳಾಗಿವೆ.

ಈಗ ದೀಪಬೆಳಗಿಸುವುದು ಬಹುಪಾಲು ಯಾಂತ್ರಿಕವಾಗಿಯೇ ಆಚರಿಸಲ್ಪಡುತ್ತಿದೆ. ಆದರೆ ಸತ್ಯಾರ್ಥವನ್ನು ಮನಗಂಡು ಅತ್ತ ಮನಹರಿಸಿ ದೀಪವನ್ನು ಬೆಳಗಿಸಿದಾಗ ಮೂಲದತ್ತ ಸಾಗಿ ಧನ್ಯರಾಗುತ್ತೇವೆ.

ಸೂಚನೆ: 18/05/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Saturday, April 24, 2021

ದರ್ಶನ ವೈವಿಧ್ಯ (Darsana vaividhya)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)

ಒಂದು ಸೊಂಪಾಗಿಬೆಳೆದಿರುವ ತೆಂಗಿನ ಮರಗಳ ತೋಟದ ಬಳಿ ಸಾಗುತ್ತಿರುವ ಬಾಯಾರಿದ ಒಬ್ಬ ದಾರಿಹೋಕನಿಗೆ ತೆಂಗಿನಮರವನ್ನು ನೋಡಿ ಇದರಲ್ಲಿ ಎಷ್ಟೊಂದು ಎಳನೀರಿದೆ!  ಅದನ್ನು ಕುಡಿದು ಬಾಯಾರಿಕೆ ಹೋಗಲಾಡಿಸಿ ಕೊಳ್ಳಬಹುದೆಂದು ಅವನದೃಷ್ಟಿ ಎಳನೀರಿನ ಮೇಲಿರುತ್ತದೆ,  ಕಸ ಗುಡಿಸುವವನಿಗೆ ಇದರಲ್ಲಿ ಎಷ್ಟೊಂದು ಗರಿಗಳಿವೆ ಅದರಿಂದ ಒಳ್ಳೆ ಪೊರಕೆಮಾಡಿಕೊಳ್ಳಬಹುದು, ಗುಡಿಸಲು ಅನುಕೂಲವಾಗುತ್ತದೆ!  ಎಂದೆನಿಸುತ್ತದೆ, ಆಯುರ್ವೇದ ವೈದ್ಯನಿಗೆ ಮರದ ಹೊಂಬಾಳೆ ಮೇಲೆದೃಷ್ಟಿ ಹರಿದು ಅದನ್ನು ಔಷಧಿಗೆ ಬಳಸಬಹುದೆಂದೆನಿಸುತ್ತದೆ. ಹೀಗೆ ಎಲ್ಲರೂ ತಮಗೆ ಬೇಕಾದ ಪ್ರಯೋಜನದ ದೃಷ್ಟಿಯಿಂದ ಮರವನ್ನುನೋಡುತ್ತಾರೆ.  ಆದರೆ ವ್ಯವಸಾಯಗಾರನ ಲಕ್ಷ್ಯ ಮಾತ್ರ ತೆಂಗಿನಮರದ ಬೇರಿನೆಡೆಗೇ ಇರುತ್ತದೆ. ಬೇರಿಗೆ ಚೆನ್ನಾಗಿ ಆರೈಕೆಮಾಡಿದರೆ ಇಡೀ ವೃಕ್ಷವೇ ಚೆನ್ನಾಗಿರುತ್ತದೆoಬುದು ಅವನ ನೋಟ, ಒಂದೇ ವಿಷಯದ ಬಗ್ಗೆ ಅನೇಕರು ತಮ್ಮಪ್ರಕೃತಿಗನುಗುಣವಾಗಿ ನಾನಾ ರೀತಿಯ ನೋಟವನ್ನು ಹೊಂದುತ್ತಾರೆ ಎಂಬುದನ್ನು ಶ್ರೀರಂಗ ಮಹಾಗುರುಗಳು ಹೀಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.

ಅಂತೆಯೇ ಮಾನವ ಜೀವನದ ಬಗ್ಗೆಯೂ ಅನೇಕ ಸ್ತರದ ಜನರು ತಮ್ಮದೇ ಆದ ದರ್ಶನವನ್ನು ಇಟ್ಟುಕೊಂಡಿರುತ್ತಾರೆ, ದಿನನಿತ್ಯದ ಕೂಲಿಯನ್ನು ನಂಬಿ ಬದುಕುವವರು, ಇಂದಿನ ಹೊಟ್ಟೆಪಾಡಾದರೆ ಸಾಕು, ಸಾರ್ಥಕ ಜೀವನವೆಂದೂ, ಅದಕ್ಕಿಂತ ಸ್ವಲ್ಪಮೇಲ್ವರ್ಗದವರು ಸ್ವಲ್ಪ ಉಳಿತಾಯ, ಒಳ್ಳೆಯ ಬಟ್ಟೆ, ಮನೆ ಬಾಡಿಗೆಗೆ ವ್ಯವಸ್ಥೆಯಾದರೆ ಸಾರ್ಥಕವೆಂದೂ ಅದಕ್ಕಿಂತ ಇನ್ನೂಆರ್ಥಿಕವಾಗಿ ಸಧೃಢರಾಗಿರುವವರು ಸ್ವಂತ ಮನೆ, ಕಾರು, ಹೆಚ್ಚಿನ ಉಳಿತಾಯ, ವಿದೇಶಗಳಿಗೆ ಪ್ರವಾಸ ಇತ್ಯಾದಿಯಾಗಿ ಅವರವರ ಮಟ್ಟಕ್ಕೆ ತಕ್ಕಂತೆ ಸಾರ್ಥಕ ಜೀವನದ ಪರಿಕಲ್ಪನೆ ಇಟ್ಟುಕೊಂಡಿರುತ್ತಾರೆ. ಆದರೆ ಅಂತರ್ಬಾಹ್ಯ ದೃಷ್ಟಿಯನ್ನು ಹೊಂದಿದ್ದ ಮಹರ್ಷಿಗಳಜೀವನ ದರ್ಶನ, ಪೂರ್ಣವಾದ ಜೀವನದರ್ಶನ. ಹೇಗೆ ಬೀಜದಿಂದ ಆರಂಭವಾದ ಮರದ ಜೀವನ ಅಂಕುರ, ಕಾಂಡ, ಹೂವು,ಕಾಯಿ ಇತ್ಯಾದಿಯಾಗಿ ವಿಕಾಸಗೊಂಡು ಬೀಜದಲ್ಲಿಯೇ ಹೋಗಿ ನಿಂತಾಗ ಪೂರ್ಣವಾಗುತ್ತದೆಯೋ ಅಂತೆಯೇ ಪರಮಾತ್ಮನಿಂದಪ್ರಾರಂಭವಾದ ನಮ್ಮ ಜೀವನ- ಬಾಲ್ಯ,ಯೌವನ ಇತ್ಯಾದಿಯಾಗಿ ಜೀವನದ ಎಲ್ಲಾ ಅವಸ್ಥೆಗಳನ್ನು ದಾಟಿ ಮತ್ತೆ ಹೋಗಿಪರಮಾತ್ಮನಲ್ಲಿಯೇ ನೆಲೆ ನಿಂತಾಗ ಪೂರ್ಣವಾದ ಹಾಗೂ ಸಾರ್ಥಕವಾದ ಜೀವನವಾಗುತ್ತದೆ ಎಂಬುದನ್ನು ತಪಸ್ಯೆಯಿಂದರಿತುಅದಕ್ಕನುಗುಣವಾದ ಜೀವನ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ.ರಘುವಂಶ ಮಹಾಕಾವ್ಯದಲ್ಲಿ ಕಾಳಿದಾಸನು ರಘುವಂಶದ ರಾಜರ ಜೀವನ ವ್ಯವಸ್ಥೆಯನ್ನು ಹೀಗೆ ಚಿತ್ರಿಸಿದ್ದಾನೆ- ಅವರು ಬಾಲ್ಯದಲ್ಲಿಯೇಜೀವನಕ್ಕೆ ಬೇಕಾದಂತಹ ಸಮಗ್ರವಾದ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು, ಯೌವನದಲ್ಲಿ ಧರ್ಮಕ್ಕೆ ಅವಿರೋಧವಾದ ವಿಷಯಸುಖಗಳನ್ನು ಅನುಭವಿಸುತ್ತಿದ್ದರು, ವಾರ್ಧಕ್ಯದಲ್ಲಿ ಮುನಿಗಳಂತೆತೆ ಆತ್ಮಚಿಂತನೆಯನ್ನು ನಡೆಸುತ್ತಾ ಅಂತ್ಯದಲ್ಲಿ ಯೋಗಮಾರ್ಗದಿಂದ ಶರೀರವನ್ನು ತ್ಯಜಿಸಿ ಜೀವವನ್ನು ಭಗವಂತನಲ್ಲಿ ನೆಲೆಗೊಳಿಸುತ್ತಿದ್ದರು ಎಂದು ವರ್ಣಿಸಿದ್ದಾನೆ. ಜ್ಞಾನಿಗಳುಹಾಕಿಕೊಟ್ಟ ಜೀವನದ ಯೋಜನೆಯ ಸಂವಿಧಾನವನ್ನು ಮಹಾಕವಿಯಾದ ಕಾಳಿದಾಸನ ಈ ಮಾತು ಬಹು ಸ್ಫುಟವಾಗಿ, ಸಾರವತ್ತಾಗಿ ಪ್ರತಿಬಿಂಬಿಸುತ್ತದೆಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.

ಸೂಚನೆ: 23/4/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Wednesday, April 21, 2021

ಅವತಾರಪುರುಷ ಶ್ರೀರಾಮ (Avatarapurusha Sri Rama)


ಶ್ರೀಮತಿ ಶ್ರೀವಿದ್ಯಾ .ಸಿ. ಭಟ್
(ಪ್ರತಿಕ್ರಿಯಿಸಿರಿ lekhana@ayvm.in)




ಒಬ್ಬ ಈಜು ಬಾರದಿರುವ ಮನುಷ್ಯ ಪ್ರವಾಹದಲ್ಲಿ ಸಿಲುಕಿದಾಗ ಈಜಿನಲ್ಲಿ ಪರಿಣಿತನಾದವನು ಬಂದು ಅವನೂ ಪ್ರವಾಹದಲ್ಲಿ ಇಳಿದು, ಪ್ರವಾಹಕ್ಕೆ ಸಿಲುಕಿರುವವನ ಕೈಯನ್ನು ಹಿಡಿದು, ತಾನು ಪ್ರವಾಹಕ್ಕೆ ಸಿಲುಕದೆ, ಪ್ರವಾಹದಲ್ಲಿ ಸಿಲುಕಿದವನನ್ನು ಪಾರು ಮಾಡುತ್ತಾನೆ. ಪಾರು ಮಾಡಿದವನ ಪೂರ್ಣ ಕಾರ್ಯವನ್ನು ನೋಡದಿದ್ದರೆ ಇವನೂ ಒಬ್ಬ ಪ್ರವಾಹದಲ್ಲಿ ನಮ್ಮಂತೆಯೇ ಸಿಲುಕಿರುವವನು ಎಂದಷ್ಟೇ ಪ್ರವಾಹದಲ್ಲಿರುವ ಮನುಷ್ಯರು ಭಾವಿಸಬಹುದು. ಹಾಗೆಯೇ ಲೌಕಿಕಜೀವನವನ್ನು ಮಾಡುತ್ತಿರುವ ಮನುಷ್ಯರ ಮಧ್ಯದಲ್ಲಿ  ಒಬ್ಬ ಅವತಾರಪುರುಷನು ಭೂಮಿಯಲ್ಲಿ ಅವತಾರ ಮಾಡಿದರೂ ಸಾಮಾನ್ಯ ಜನರಿಗೆ ಮಾತ್ರ ಮನುಷ್ಯನಂತೆಯೇ ಕಾಣುತ್ತಾನೆ. ಅಂತಹ ಅವತಾರಪುರುಷನ ಗುಣ, ನಡವಳಿಕೆಗಳನ್ನು ಗುರುತಿಸಲು ಸಾಮಾನ್ಯದೃಷ್ಟಿ ಸಾಲದು, ವಿಶೇಷವಾದ ತಪಸ್ಸಿನಿಂದ ಪಡೆದ ದೃಷ್ಟಿಯು ಬೇಕಾಗುತ್ತದೆ. ಅವತಾರ ಪುರುಷರು ಲೌಕಿಕವಾದ ಜೀವನವನ್ನೇ ಮಾಡುತ್ತಿದ್ದರೂ, ಅವರ ಜೀವನದ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತದೆ. ಈ ಪ್ರವಾಹದಿಂದ ಪಾರು ಮಾಡುವವನ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಟ್ಟು, ಅವತಾರಪುರುಷರಿಗೂ- ಸಾಮಾನ್ಯಮನುಷ್ಯರಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಮಹರ್ಷಿಗಳಾದ ವಾಲ್ಮೀಕಿಗಳು ಮೊದಲು ಬೇಡರಾಗಿದ್ದಾಗ ಶ್ರೀರಾಮನ ಆದರ್ಶವ್ಯಕ್ತಿತ್ವವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಬಹುಕಾಲ ತಪಸ್ಸನ್ನು ಆಚರಿಸಿ, ತಮ್ಮ ಜ್ಞಾನದೃಷ್ಟಿಯಿಂದ ಶ್ರೀರಾಮನ ಆದರ್ಶಗುಣಗಳನ್ನು ಗುರುತಿಸಿ, ಅವುಗಳನ್ನು ಹಾಗೆಯೇ ತಮ್ಮ ಮಹಾಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. 

 ಶ್ರೀರಾಮನಲ್ಲಿ ಜಿತೇಂದ್ರಿಯತ್ವವಿತ್ತು; ಸ್ಥಿತಪ್ರಜ್ಞತ್ವವಿತ್ತು; ತಪಸ್ಸಿನಿಂದ ಮಾತ್ರ ಅರಿತುಕೊಳ್ಳಬಹುದಾದ ಶ್ರೀರಾಮನ ನಡೆಯು, ಅವನ ಜೀವನದ ಒಂದೊಂದು ಹೆಜ್ಜೆಯೂ ಧರ್ಮಮಯವಾಗಿತ್ತು ಎಂಬುದನ್ನು ಅರಿತು 'ರಾಮೋ ವಿಗ್ರಹವಾನ್ ಧರ್ಮಃ' (ಮೂರ್ತಿಮತ್ತಾದ ಧರ್ಮವೇ ಶ್ರೀರಾಮನು)ಎಂದು ತಮ್ಮ ಕಾವ್ಯದಲ್ಲಿ ಕೊಂಡಾಡಿದ್ದಾರೆ, ವಾಲ್ಮೀಕಿಗಳು. ಶ್ರೀರಾಮನು ಆದರ್ಶಪುತ್ರ, ಆದರ್ಶ ಪತಿ, ಆದರ್ಶ ರಾಜ ಹಾಗೂ ಆದರ್ಶ ಮಿತ್ರನಾಗಿದ್ದಾನೆ.  ವಾಲ್ಮೀಕಿಗಳು ತಮ್ಮ ತಪೋದೃಷ್ಟಿಯಿಂದ ಕಂಡ ಶ್ರೀರಾಮನಲ್ಲಿದ್ದ ಧರ್ಮದ ನಡೆಯಿಂದ ಕೂಡಿದ ಸೂಕ್ಷ್ಮವಿಷಯಗಳನ್ನು ಗುರುತಿಸುವ ಮನಸ್ಸನ್ನು ಶ್ರೀರಾಮನೇ ಅನುಗ್ರಹಿಸಬೇಕೆಂದು ಪುಣ್ಯತಮವಾದ ಈ ಶ್ರೀರಾಮನವಮೀ ಶುಭಸಂದರ್ಭದಲ್ಲಿ ಶ್ರೀರಾಮನಲ್ಲೇ ಪ್ರಾರ್ಥಿಸೋಣ. 

ಸೂಚನೆ: 21/04/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, April 7, 2021

ಅಹಿಂಸಾಮಯ ಜೀವನ ಸಾಧ್ಯವೇ? (Ahinsamaya Jivana Sadhyave?)

ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)


ಅಹಿಂಸೆಯೇ ಅತ್ಯಂತ ಶ್ರೇಷ್ಠ ಧರ್ಮವೆಂಬುದು ಪ್ರಸಿದ್ಧವಾಗಿದೆ. ಆದರೆ, ಇದನ್ನು ಪಾಲಿಸುವುದು ಜೀವನದಲ್ಲಿ ಎಷ್ಟರಮಟ್ಟಿಗೆಸಾಧ್ಯ? ಆಹಾರಾರ್ಥವಾಗಿ ಗಿಡಗಳಿಂದ ಹಣ್ಣು, ತರಕಾರಿಗಳನ್ನು ಬಿಡಿಸಿಕೊಳ್ಳುವುದು ಗಿಡಕ್ಕೆ ಹಿಂಸೆ. ಕುದಿಸಿ ಬೇಯಿಸುವಾಗ ಕಣ್ಣಿಗೆಕಾಣಿಸದ ಅನೇಕ ಕ್ರಿಮಿಗಳ ಹತ್ಯೆ. ಈ ಹಿಂಸೆಗಳನ್ನು ತಡೆಗಟ್ಟಿದರೆ ಅಹಾರವಿಲ್ಲದೆ ನಮಗೇ ಹಿಂಸೆ! ಕೊನೆಗೆ ಆತ್ಮಹತ್ಯೆ! ಗೋಡೆಯ ಮೇಲೆ ಕುಳಿತಿರುವ ಸೊಳ್ಳೆಯನ್ನು ಹಿಡಿಯಲು ಹಲ್ಲಿಯೊಂದು ಧಾವಿಸುತ್ತದೆ. ಆಗ 'ಅಯ್ಯೋ ಪಾಪ' ಎಂಬಮರುಕದಿಂದ ಅದನ್ನು ಕಾಪಾಡಿದರೆ ಹಲ್ಲಿಗೆ ಹಿಂಸೆ. ಹಲ್ಲಿಯ ರಕ್ಷಣೆ ಸೊಳ್ಳೆಗೆ ಹಿಂಸೆ! ರೋಗಿಗೆ ಔಷಧಿ ಕೊಟ್ಟು ಗುಣಪಡಿಸಿದರೆ ರೋಗಾಣುಗಳ ಹತ್ಯೆ! ಅವನ್ನು ಉಳಿಸಿದರೆ ರೋಗಿಗೆ ಹಿಂಸೆ! ಉಳಿಯಬೇಕಾದದ್ದುರೋಗಿಯೋ, ರೋಗಾಣುವೋ? ಹೀಗೆ ಅನೇಕ ಸಮಸ್ಯೆಗಳು ಏಳಬಹುದು. ಪರಿಹಾರ ಹುಡುಕುವುದು ಹೇಗೆ? ಜೀವನದಲ್ಲಿ ಅಹಿಂಸೆಯನ್ನು ಅಳವಡಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಹಿಂಸೆ-ಅಹಿಂಸೆಗಳಿಗೆ ಅರ್ಥಪೂರ್ಣವಾದ ವಿವರಣೆಯು ಆವಶ್ಯಕವೆನಿಸುತ್ತದೆ.

ಇಲ್ಲಿ ಜ್ಞಾನಿವರೇಣ್ಯರಾದ ಶ್ರೀರಂಗಮಹಾಗುರುಗಳ ವಿವರಣೆಯು ಸ್ಮರಣೀಯವಾಗಿದೆ. ಆಹಾರಾರ್ಥವಾಗಿ ಜೀವಿಗಳು ಇತರ ಜೀವಿಗಳನ್ನೇ ಅವಲಂಬಿಸಬೇಕೆಂಬುದು ಸೃಷ್ಟಿನಿಯಮ. ಇದರಿಂದಲೇ ಸೃಷ್ಟಿಯಲ್ಲಿ ಸಮತೋಲನವು ಕಾಪಾಡಲ್ಪಡುತ್ತಿದೆ.ಹಾಗಿಲ್ಲದಿದ್ದರೆ ಯಾವುದೇ ಒಂದು ವರ್ಗವು ಮಾತ್ರ ವೃದ್ಧಿಯಾಗಿ ಮತ್ತೊಂದು ನಶಿಸಿಹೋಗುವುದು ಸಿದ್ಧ. ಆದ್ದರಿಂದ ಸೃಷ್ಟಿನಿಯಮವನ್ನು ಕಾಪಾಡುವುದೇ ಧರ್ಮ, ಅದಕ್ಕಾದ ಕ್ರಿಯೆಗಳು ಅಹಿಂಸೆ, ತದ್ವಿರುದ್ಧವಾದದ್ದೆಲ್ಲವೂ ಹಿಂಸೆ.ಆರೋಗ್ಯವಾಗಿರುವುದೇ ಸೃಷ್ಟಿನಿಯಮವಾದ್ದರಿಂದ ರೋಗಿಯ ಉಳಿವು, ಅದಕ್ಕಾಗಿ ರೋಗಾಣುವಿನ ಅಳಿವು ಅಹಿಂಸೆಯೇ.ಆಹಾರ ತಯಾರಿಕೆಯಲ್ಲಿ ಅನೇಕರೀತಿಯ ಹಿಂಸೆಗಳು ಅನಿವಾರ್ಯವೇ ಸರಿ. ಆದರೆ ತಯಾರಿಸಿದ ಆಹಾರವು ಭಗವಂತನಿಗೆನಿವೇದನವಾದಾಗ ಆ ಪದಾರ್ಥಗಳಿಗೂ, ಅದನ್ನು ಒದಗಿಸಿಕೊಟ್ಟ ಗಿಡ-ಮರ ಇತ್ಯಾದಿಗಳಿಗೂ ಸಾರ್ಥಕ್ಯವು ಕೂಡಿಬರುವುದರಿಂದಅಲ್ಲಿ ಹಿಂಸೆಗೆ ವಿಷಯವಿಲ್ಲವಾಗುತ್ತದೆ. ಆಹಾರ ಪದಾರ್ಥಗಳಿಗೆ ಸಾರ್ಥಕ್ಯವನ್ನು ಕೊಟ್ಟು ನಮ್ಮ ಜೀವನವನ್ನೂ ಸಾರ್ಥಕಗೊಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಮಾನವ ಶರೀರವೇ ಭಗವತ್ಸಾಕ್ಷಾತ್ಕಾರಕ್ಕೆ ಉತ್ತಮ ಸಾಧನ. ಈ ಸಾಮರ್ಥ್ಯವೇ ಅವನನ್ನು ಬೇರೆ ಪ್ರಾಣಿಗಳಿಗಿಂತ ವಿಶಿಷ್ಟವಾಗಿಸುತ್ತದೆ. ಆದ್ದರಿಂದ ಸೃಷ್ಟಿಯ ಕೊಡುಗೆಯಾದ ಈ ಮಹಾಫಲ ಸಾಧನೆಗೆ ಪೋಷಕವಾದ ಕ್ರಿಯೆಗಳೆಲ್ಲವೂ ಅಹಿಂಸೆ.ತದ್ವಿರುದ್ಧವಾದುದೆಲ್ಲವೂ ಹಿಂಸೆಯೇ. ಅನಿವಾರ್ಯವಾದ ಕನಿಷ್ಠಪಕ್ಷದ ಹಿಂಸೆಯೂ ಅಹಿಂಸೆಯ ವ್ಯಾಪ್ತಿಯಲ್ಲೇ ಕೆಲವೊಮ್ಮೆ ಬರುತ್ತದೆ.

ಸೂಚನೆ: 7/04/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  



Thursday, April 1, 2021

ಪಾತಿವ್ರತ್ಯದ ಮಹತ್ವ (Pativratyada Mahatva)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಕೌಶಿಕನೆಂಬ ಬ್ರಾಹ್ಮಣ ತಪಸ್ಸನ್ನಾಚರಿಸಿ ಕೆಲವು ಸಿದ್ಧಿಗಳನ್ನು ಪಡೆದಿರುತ್ತಾನೆ. ಒಮ್ಮೆ ಅವನ ಮೇಲೆ ಮಲ ವಿಸರ್ಜಿಸಿದ ಪಕ್ಷಿಯನ್ನು ಕೋಪದಿಂದ ದಿಟ್ಟಿಸಿ ನೋಡಿದಾಗ ಪಕ್ಷಿ ಸುಟ್ಟು ಹೋಗಲಾಗಿ ಅವನಿಗೆ ಎಂತಹ ಸಿದ್ಧಪುರುಷ ನಾನು ಎಂಬ ಹೆಮ್ಮೆ ಉಂಟಾಗುತ್ತದೆ. ನಂತರ ಅವನು ಪತಿವ್ರತೆಯೊಬ್ಬಳ ಮನೆಗೆ ಭಿಕ್ಷೆಗೆ ಹೋದಾಗ ಅದೇ ಸಮಯದಲ್ಲಿ ಅವಳ ಪತಿಯೂ ಹೊರಗಡೆಯಿಂದ ಮನೆಗೆ ಬರುತ್ತಾನೆ, ಅನಾರೋಗ್ಯದಿಂದ ಕಷ್ಟದಲ್ಲಿದ್ದ ಪತಿಯನ್ನು ಮೊದಲು ಉಪಚರಿಸಿ ನಂತರ ಭಿಕ್ಷೆ ತೆಗೆದುಕೊಂಡು ಬರುತ್ತಾಳೆ. ಬ್ರಾಹ್ಮಣನು ತಪಸ್ವಿಯಾದ ನನ್ನನ್ನು ಕಾಯಿಸಿ, ಪತಿಯ ಉಪಚಾರಕ್ಕೆ ಹೋಗುವುದೇ ಎಂದು ಕೋಪದಿಂದ ಆಕೆಯನ್ನು ದಿಟ್ಟಿಸಿ ನೋಡಿದಾಗ ನಾನು ನಿನ್ನ ಕಣ್ಣಿನ ಅಗ್ನಿಯಿಂದ ಸುಡಲ್ಪಡುವ ಪಕ್ಷಿಯಲ್ಲ ಎನ್ನುತ್ತಾಳೆ. ಆಗ ಬ್ರಾಹ್ಮಣನು ಆಶ್ಚರ್ಯದಿಂದ ಆ ಘಟನೆ ಹೇಗೆ ತಿಳಿಯಿತು ಎಂದಾಗ ತನ್ನ ತಪೋಬಲದಿಂದ ಎನ್ನುತ್ತಾಳೆ, ಪತಿವ್ರತಾಧರ್ಮವನ್ನು ಚೆನ್ನಾಗಿ ಪಾಲನೆ ಮಾಡಿದ್ದರ ಪರಿಣಾಮ ಅವಳು ಸಹಜವಾಗಿಯೇ ಯೋಗದೃಷ್ಟಿಯನ್ನು ಹೊಂದಿರುತ್ತಾಳೆ. ಬಾಲ್ಯದಲ್ಲಿ ತಂದೆ-ತಾಯಿಗಳ ಆಶ್ರಯದಲ್ಲಿ ಬೆಳೆದ ಹೆಣ್ಣಿಗೆ ವಿವಾಹದ ನಂತರ ಪತಿಯೇ ಆಶ್ರಯ, ಲತೆಯು ವೃಕ್ಷದ ಅವಲಂಬನೆಯನ್ನು ಪಡೆದು ಸ್ಥಿರವಾಗಿರುವಂತೆ ಪತ್ನಿಗೆ ಪತಿಯ ಆಶ್ರಯ ನಿಸರ್ಗಸಹಜ. ಅಂತಹ ಆಶ್ರಯದಾತನಾದ ಪತಿಯ ಸುಖ-ದುಃಖಗಳಲ್ಲಿ ಬೆಂಗಾವಲಾಗಿ ನಿಲ್ಲಬೇಕಾದುದು ಪತ್ನಿಯ ಧರ್ಮ ಎಂಬುದು ಭಾರತೀಯ ಸಂಸ್ಕೃತಿ. ವಿಶ್ವವನ್ನೆಲ್ಲಾ ಸಲಹುವ ಪರಮಾತ್ಮನನ್ನು ತನ್ನ ಪತಿಯಲ್ಲಿಯೇ ಕಂಡು, ಪತಿಯ ಮೂಲಕ ಪರಮಾತ್ಮನ ಸೇವೆ ಮಾಡುವುದೇ ಪತಿವ್ರತಾಧರ್ಮ ಎಂಬುದು ಮಹರ್ಷಿಗಳ ನೋಟ. ಇಂತಹ ಪತಿವ್ರತಾಧರ್ಮ ಪಾಲನೆಯು ಕಠೋರವಾದ ತಪಸ್ಸಿಗೆ ಸಮಾನ ಎಂಬ ಮಾತನ್ನು ಮಹಾಪತಿವ್ರತೆಯಾದ ಅನಸೂಯೆಯು ಪತಿಯನ್ನು ಅನುಸರಿಸಿ ವನವಾಸಕ್ಕೆ ಬಂದಂತಹ ಸೀತೆಯನ್ನುದ್ದೇಶಿಸಿ ಸಂತೋಷದಿಂದ ನುಡಿಯುತ್ತಾಳೆ. ಭಾರತ ಭೂಮಿಯನ್ನಲಂಕರಿಸಿದ ಪ್ರಾತಃಸ್ಮರಣೀಯರಾದ ಸೀತೆ ದ್ರೌಪದಿ ಅನಸೂಯ ಇತ್ಯಾದಿ ಅನೇಕ ಪತಿವ್ರತಾ ಶಿರೋಮಣಿಯರೇ ನಮಗೆ ಸರ್ವಕಾಲಕ್ಕೂ ಆದರ್ಶಪ್ರಾಯರು. ತನ್ನ ಪತಿಯಲ್ಲಿಯೇ ಶ್ರೀಪತಿಯನ್ನು ಭಾವಿಸಬೇಕಾಗಿರುವುದರಿಂದ ಸ್ತ್ರೀಯರಿಗೆ ಪತಿವ್ರತಾ ಎಂಬ ಹೆಸರು ಅನ್ವರ್ಥವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.

ಸೂಚನೆ: 31/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, March 24, 2021

ಸುಶಿಕ್ಷಿತವಾದ ಮನಸ್ಸಿನ ಮಹತ್ತ್ವ (Susiksitavada Manassina Mahattva)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)

ದೇವರ್ಷಿ ನಾರದರಿಂದ ಶ್ರೀರಾಮಚಂದ್ರನ ಅನಂತ ಕಲ್ಯಾಣ ಗುಣಗಾನವನ್ನು ಕೇಳಿ ಹೃಷ್ಟಮಾನಸರಾದಂತಹ ಶ್ರೀಮದ್ವಾಲ್ಮೀಕಿ ಮಹರ್ಷಿಗಳು ಬ್ರಾಹ್ಮೀಮುಹೂರ್ತದಲ್ಲಿ ಸಂಧ್ಯಾಕಾರ್ಯವನ್ನು ನೆರವೇರಿಸುವ ಸಲುವಾಗಿ ತಮ್ಮ ಶಿಷ್ಯರಾದಂತಹ ಭಾರದ್ವಾಜರೊಂದಿಗೆ ಆಶ್ರಮದ ಸಮೀಪದಲ್ಲಿ ಹರಿಯುತ್ತಿರುವ ತಮಸಾನದಿಯ ತೀರಕ್ಕೆ ತೆರಳಿದ ಸಂದರ್ಭದಲ್ಲಿ ನಿರ್ಮಲವಾಗಿ ಹರಿಯುತ್ತಿರುವ ತಮಸಾನದಿಯ ನೀರನ್ನು ನೋಡಿ ಶಿಷ್ಯನನ್ನು ಕುರಿತು ವತ್ಸ ಭಾರದ್ವಾಜ, ಸತ್ಪುರುಷರ ಮನಸ್ಸಿನಂತೆ ನಿರ್ಮಲವೂ ಪ್ರಸನ್ನವೂ ಆದ ಈ ತಮಸಾ ನದಿಯ ಜಲವನ್ನು ನೋಡು ಎಂದು ತಮಸೆಯ ನೀರನ್ನು ಸತ್ಪುರುಷರ ಮನಸ್ಸಿಗೆ ಹೋಲಿಸುತ್ತಾರೆ.

ಸತ್ಪುರುಷರ ಮನಸ್ಸು ಸದ್ವಿಚಾರಗಳ ಶ್ರವಣ ಮನನಾದಿಗಳಿಂದ, ಸತ್ಸಹವಾಸದಿಂದ ಸದ್ಗುರುವಿನ ಮಾರ್ಗದರ್ಶನದಿಂದ ಸಂಸ್ಕಾರಗೊಂಡು ಪ್ರಸನ್ನವಾಗಿಯೂ, ನಿರ್ಮಲವಾಗಿಯೂ ಇರುತ್ತದೆ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:" ಎಂಬ ಶಾಸ್ತ್ರ ವಾಕ್ಯದಂತೆ ಮನಸ್ಸೇ ಸಂಸಾರ ಬಂಧನಕ್ಕೂ ಹಾಗೂ ಮೋಕ್ಷಕ್ಕೂ ಕಾರಣವಾಗುತ್ತದೆ. ಸುಶಿಕ್ಷಿತವಾದ, ಉತ್ತಮ ಸಂಸ್ಕಾರದಿಂದ ಕೂಡಿದ ಮನಸ್ಸು ಮೋಕ್ಷಕ್ಕೆ ಕಾರಣವಾದರೆ ಅಶಿಕ್ಷಿತವಾದ, ಮಾಲಿನ್ಯದಿಂದ ಕೂಡಿರುವ ಮನಸ್ಸು ಬಂಧನಕ್ಕೆ ಕಾರಣವಾಗುತ್ತದೆ. ಒಂದು ತಿಳಿಯಾದ ನೀರಿನ ಪಾತ್ರೆಯ ತಳಭಾಗದಲ್ಲಿರುವ ನಾಣ್ಯವು ಸ್ಪಷ್ಟವಾಗಿ ಗೋಚರವಾಗುವಂತೆ, ಜ್ಞಾನಿಗಳಿಗೆ ಅವರ ತಿಳಿಯಾದ ನಿರ್ಮಲವಾದ ಮನಸ್ಸಿನಿಂದ ಹೃದಯಗುಹೆಯಲ್ಲಿ ಸ್ಥಿತನಾಗಿರುವ ಭಗವಂತನು ಗೋಚರನಾಗುತ್ತಾನೆ ಎಂಬ ಮಾತನ್ನು ಜ್ಞಾನ-ವಿಜ್ಞಾನ ತೃಪ್ತಾತ್ಮರಾದಂತಹ ಶ್ರೀರಂಗ ಮಹಾಗುರುಗಳು ಹೇಳಿದ್ದಾರೆ. ಮನಸ್ಸನ್ನು ಇಂದ್ರಿಯಗಳ ರಾಜ ಎಂಬುದಾಗಿ ಕರೆದಿದ್ದಾರೆ.  ಒಂದು ಮನೆಯಲ್ಲಿ ಯಜಮಾನನ ಆಜ್ಞೆಯಂತೆ ಮನೆಯ ಸದಸ್ಯರು, ಕೆಲಸದಾಳುಗಳು ಕಾರ್ಯನಿರ್ವಹಿಸಿದಾಗ ಅಂತಹ ಮನೆಯು ಹೇಗೆ ಆದರ್ಶಗೃಹವೆನಿಸಿಕೊಳ್ಳುತ್ತದೆಯೋ ಅಂತೆಯೇ ಇಂದ್ರಿಯಗಳು ಸುಸಂಸ್ಕೃತವಾದ ಮನಸ್ಸಿನ ಅಧೀನದಲ್ಲಿ ಕಾರ್ಯನಿರ್ವಹಿಸಿದಾಗ ಉತ್ತಮವಾದ ಆದರ್ಶ ಜೀವನವೆನಿಸುತ್ತದೆ. ಸನಾತನಾರ್ಯ ಭಾರತೀಯ ಮಹರ್ಷಿಗಳಿಂದ ಬಂದಂತಹ ವಿದ್ಯೆಗಳೆಲ್ಲದರ ಪ್ರಧಾನವಾದ ಉದ್ದೇಶ ಮನಸ್ಸನ್ನು ಸುಶಿಕ್ಷಿತವನ್ನಾಗಿಯೂ ಸುಸಂಸ್ಕೃತವನ್ನಾಗಿಯೂ ಮಾಡುವುದೇ ಆಗಿದೆ. ತನ್ಮೂಲಕ ಉತ್ತಮವಾದ ಜೀವನವನ್ನು ನಡೆಸಲು ಸಹಾಯಕವಾಗುವುದಲ್ಲದೇ, ಆತ್ಮಸಾಕ್ಷಾತ್ಕಾರದಂತಹ ಪ್ರಧಾನವಾದ ಗುರಿಯನ್ನು ತಲುಪುವುದಕ್ಕೂ ಮನಸ್ಸೇ ವಾಹಕವಾಗಬಲ್ಲದು. ಆದ್ದರಿಂದ ಮನಸ್ಸಿನ ಸುಶಿಕ್ಷಣದ ಕಡೆಗೆ ಎಲ್ಲರೂ ಗಮನ ಹರಿಸಿದಾಗ ಸತ್ಪ್ರಜೆಗಳಾಗಿ ಉತ್ತಮ ಜೀವನ ನಡೆಸಲು ಸಾಧ್ಯ ಎಂಬುದು ಮಹಾತ್ಮರ ಅಭಿಪ್ರಾಯವಾಗಿದೆ.

ಸೂಚನೆ: 24/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, March 10, 2021

ಸ್ತ್ರೀಯರ ಆಧ್ಯಾತ್ಮ ಜೀವನ (Striyara Adhyatma Jivana)

ಆಶಾ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


  
ಆಧ್ಯಾತ್ಮಜೀವನವನ್ನು  ನಡೆಸುವುದೆಂದರೆ ಒಳಬೆಳಗುವ ಆತ್ಮನಿಗೆ ಅನುಗುಣವಾಗಿ ಬಾಳುವುದು ಎಂಬುದು ಜ್ಞಾನಿಗಳ ಮಾತು. ಅದಕ್ಕಾಗಿ ತಪಸ್ಸು,ಸಾಧನೆ, ಅನುಷ್ಠಾನ ಎಲ್ಲವೂ ಬೇಕು. ಅನುಷ್ಠಾನಪರರು, ವಿದ್ವಾಂಸರು ವೇದಾದಿ ವಿದ್ಯೆಗಳನ್ನು ಅಭ್ಯಾಸ ಮಾಡಿ ಆಧ್ಯಾತ್ಮಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಮನೆಯ ಗೃಹಸ್ಥರು ನಿತ್ಯ ಪೂಜಾ ಪಾಠಗಳಿಂದ ವೇದ ಪಾರಾಯಣದಿಂದ ಅದನ್ನುತಿಳಿದು ಹೊಂದಲು ಪ್ರಯತ್ನಿಸುತ್ತಾರೆ.ಎಲ್ಲರೂ ಆಧ್ಯಾತ್ಮ ಜೀವನವನ್ನು ತಮ್ಮ ನೆಮ್ಮದಿಗಾಗಿ ಅಪೇಕ್ಷಿಸಲೇ ಬೇಕು. ಹಾಗಾದರೆ ಸ್ತ್ರೀಯರಿಗೆ ಆಧ್ಯಾತ್ಮ ಜೀವನಬೇಡವೇ? ಅವರ ಗೃಹಕೃತ್ಯಗಳಲ್ಲಿ ಮೇಲೆ ಹೇಳಿದಂತೆ ಮಾಡಲು ಅವರಿಗೆ ಸಮಯವೇ ಸಿಕ್ಕದಲ್ಲಾ? ಇನ್ನು ದುಡಿಯುವಮಹಿಳೆ ಆದರಂತೂ ಕೇಳುವುದೇ ಬೇಡ. ಸ್ತ್ರೀಯರು ಆಧ್ಯಾತ್ಮ ಜೀವನವನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಪ್ರಸ್ತುತವಾಗಿದೆ.

ಭಾರತೀಯರ ಜೀವನ ವಿಧಾನವನ್ನು ನಮ್ಮ ಮಹರ್ಷಿಗಳು ಸ್ತ್ರೀ-ಪುರುಷರೆಲ್ಲರಿಗೂ ಒಳ-ಹೊರ ಜೀವನಕ್ಕೆಅನುಕೂಲವಾಗುವಂತೆಯೇ ರೂಪಿಸಿದ್ದಾರೆ ಎಂಬುದನ್ನು ನಾವು ಮರೆಯಲಾಗದು. ಸ್ತ್ರೀಯರ ದಿನಚರಿಯಲ್ಲಿಯೇ ಭಗವಂತನನ್ನುಹೆಜ್ಜೆ ಹೆಜ್ಜೆಯಲ್ಲಿಯೂ ಸ್ಮರಿಸುವ ಜೀವನ ವಿಧಾನ ನಮ್ಮದು. ನಮ್ಮ ದಿನ ಭಗವಂತನ ಸ್ಮರಣೆಯಿಂದಲೇ ಆರಂಭ. ಬೆಳಿಗ್ಗೆಕರಾಗ್ರೇ ವಸತೇ ಲಕ್ಷ್ಮೀಃ ಎಂದು ದಿನ ಆರಂಭವಾಗುತ್ತದೆ. ಒಳಗೆ ಬೆಳಗುವ ಪರಮಾತ್ಮನಿಗೆ ಅಭಿಷೇಕವೆಂಬಭಾವದಿಂದ ಸ್ನಾನ, ಅವನ ಸ್ಮರಣೆಯಿಂದ ಒಳ-ಹೊರ ಜೀವನದ ಮಧ್ಯ ಭಾಗವಾದ ಬಾಗಿಲಿನ ಹೊಸಲನ್ನು ತೊಳೆದು,ರಂಗವಲ್ಲಿಯಿಂದ ಸಿಂಗರಿಸಿ ಆತ್ಮಸೂರ್ಯನ ಪ್ರತಿನಿಧಿಯಾದ ಸೂರ್ಯದೇವನನ್ನು ಸ್ವಾಗತಿಸುತ್ತಾಳೆ. ನಂತರ ದೇವರಕೋಣೆಯನ್ನು ಶುಚಿಗೊಳಿಸಿ ತನ್ನಲ್ಲಿ ಬೆಳಗುವ ದೇವನ ಪ್ರತಿನಿಧಿಯಾದ ದೀಪವನ್ನು ಬೆಳಗುವವಳೂ ಅವಳೇ.ಪತಿಯು ಮಾಡುವ ಪೂಜೆಗೆ ಪುಷ್ಪ, ಪತ್ರ, ಹಣ್ಣುಗಳನ್ನು ಒದಗಿಸಿ ಸಹಾಯ ಮಾಡುತ್ತಾಳೆ . ತನ್ನ ಕುಟುಂಬದ ಶ್ರೇಯಸ್ಸಿಗಾಗಿತುಳಸಿ ಮಾತೆಯನ್ನು ಪೂಜಿಸಿ ನಂತರ ಅಡಿಗಡಿಗೂ ಗೋವಿಂದನ ಸ್ಮರಣೆ ಮಾಡುತ್ತ ಅಡುಗೆ ಪದಾರ್ಥಗಳನ್ನು ತಯಾರಿಸಿ-ಎಲ್ಲವೂ ನಿನ್ನದೇ ಎಂದು ಭಗವಂತನಿಗೆ ನಿವೇದಿಸಿ ಅದನ್ನು ಪ್ರಸಾದವನ್ನಾಗಿಸಿಕೊಂಡು ಮನೆಮಂದಿಗೆಲ್ಲಾ ಬಡಿಸಿ ತಾನೂಸ್ವೀಕರಿಸಿ ಸಂತೋಷ ಪಡುತ್ತಾಳೆ. ಶ್ರೀರಂಗ ಮಹಾಗುರುಗಳು - "ಗೃಹಿಣಿಯಾದವಳು ಏಕನಿಷ್ಠೆ ,ಪ್ರಾಮಾಣಿಕತೆ, ನಿರ್ಮಲವಾದಮನಸ್ಸಿನಿಂದ ತನ್ನ ಎಲ್ಲಾ ಗೃಹಕೃತ್ಯಗಳನ್ನು ಭಗವಂತನಿಗೆ ಅರ್ಪಿಸಿದ್ದಲ್ಲಿ ಅದು ಖಂಡಿತ ಅವನಿಗೆ ತಲುಪುತ್ತದೆ" ಎಂದಿರುವುದುಇಲ್ಲಿ ಸ್ಮರಣೀಯ.

ಸೂಚನೆ: 10/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Thursday, February 18, 2021

ಆದರ್ಶ ದಿನಚರಿ (Adarsha Dinacari)

ಶ್ರೀಮತಿ ಶ್ರೀವಿದ್ಯಾ .ಸಿ. ಭಟ್

(ಪ್ರತಿಕ್ರಿಯಿಸಿರಿ lekhana@ayvm.in)

ದಿನಚರಿ ನಮ್ಮ ಜೀವನದ ಧ್ಯೇಯಕ್ಕೆ ತಕ್ಕಂತೆ ಇರುತ್ತದೆ. ಉದಾಹರಣೆಗೆ ಒಬ್ಬ ಕ್ರೀಡಾಪಟುವಿನ ದಿನಚರಿಯಲ್ಲಿ ಅವನ ಕ್ರೀಡೆಗೆಸಹಕಾರಿಯಾದ  ವ್ಯಾಯಾಮ, ಆಹಾರ ನಿಯಮಗಳು ಎಲ್ಲವೂ ಸೇರಿರುತ್ತದೆ. ಹಾಗೇ ಒಬ್ಬ ಉದ್ಯಮಿಯ ದಿನಚರಿವಿಭಿನ್ನವಾಗಿದ್ದು, ಇತರ ಉದ್ಯಮಿಗಳ ಜೊತೆ ಸಭೆ- ಮಾತುಕತೆ- ಪ್ರಯಾಣ ಎಲ್ಲವೂ ಇರುತ್ತದೆ. ಹಾಗೇ ಅನೇಕರುಆರೋಗ್ಯ, ನೆಮ್ಮದಿ, ಸಂತೋಷಕರವಾದ ಜೀವನಕ್ಕೆ ತಕ್ಕಂತಹ ದಿನಚರಿಯನ್ನು ಅಳವಡಿಸಿಕೊಂಡಿರುತ್ತಾರೆ.ಇವೆಲ್ಲವೂ ನಾವು ನಮ್ಮ ಜೀವನಕ್ಕೆ ಅಂಟಿಸಿಕೊಂಡ ಧ್ಯೇಯಗಳು ಮತ್ತು ಅವಕ್ಕೆ ತಕ್ಕಂತಹ ದಿನಚರಿಗಳಾದವು. ಆದರೆಭಾರತೀಯ ಮಹರ್ಷಿಗಳು, ಜೀವನಕ್ಕೇ ಸಹಜವಾದ ಧ್ಯೇಯ ಒಂದಿದೆ, ಅದನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾದದಿನಚರಿಯನ್ನು ಅಳವಡಿಸಿಕೊಂಡರೆ ಜೀವನ ಸರ್ವಾಂಗ ಸುಂದರವಾಗಿ ಇರುತ್ತದೆ ಎಂಬುದನ್ನು ಅರಿತು ಅದರಂತೆ ದಿನಚರಿಯನ್ನುರೂಪಿಸಿದ್ದಾರೆ.


ಶ್ರೀರಂಗಮಹಾಗುರುಗಳು ಬೀಜ-ವೃಕ್ಷದ ಉದಾಹರಣೆಯ ಮೂಲಕ ಜೀವನವೃಕ್ಷದ ಧ್ಯೇಯವನ್ನು ತಿಳಿಸಿಕೊಟ್ಟಿದ್ದಾರೆ. ಒಂದುಮಾವಿನ ವೃಕ್ಷದ ಧ್ಯೇಯ ಬೀಜದಿಂದ ಹೊರಟು ಕಾಂಡ, ಕೊಂಬೆ, ಎಲೆ, ಕಾಯಿ, ಹಣ್ಣು ಎಲ್ಲವೂ ಆಗಿ ಕಡೆಯಲ್ಲಿ ಬೀಜದಲ್ಲಿನಿಲ್ಲುವಂತಾಗುವುದು. ಹಾಗೆಯೇ ಮನುಷ್ಯ ಜೀವನದಲ್ಲೂ ಜೀವನ ಪ್ರಕಾಶನಾದ ಭಗವಂತನಿಂದ ಆರಂಭವಾದ ಬದುಕುಹಾದಿಯಲ್ಲಿ ಧರ್ಮ, ಅರ್ಥ ಕಾಮ ಗಳೆಲ್ಲವನ್ನೂ ಅನುಭವಿಸಿ ಕಡೆಯಲ್ಲಿ ಆ ಪ್ರಕಾಶದಲ್ಲೇ ಒಂದಾಗುವ ಮೋಕ್ಷದಲ್ಲಿ ಪರ್ಯವಸಾನಹೊಂದುವುದೇ ಆಗಿದೆ ಎಂಬುದನ್ನು ತಮ್ಮ ತಪಸ್ಯೆಯಿಂದ ತಿಳಿದವರು ನಮ್ಮ ಮಹರ್ಷಿಗಳು. ಅಂತಹ ಜೀವನ ವೃಕ್ಷದ ಕೃಷಿಯನ್ನುಚೆನ್ನಾಗಿ ಮಾಡುವ ದಿನಚರಿ ಅವರದು. ಪ್ರಾತಃಕಾಲ ಬ್ರಾಹ್ಮೀಮುಹೂರ್ತದಲ್ಲಿ ಭಗವಂತನ ಸ್ಮರಣೆಯಿಂದ ಬಲಗಡೆ ಮಗ್ಗುಲಿನಿಂದಎದ್ದು, ನಂತರ ನಿತ್ಯಕರ್ಮಗಳು. ಹಾಗೆಯೇ ಆಹಾರದ ವಿಷಯದಲ್ಲಿ ಭಗವಂತನ ಸ್ಮರಣೆಯೊಡನೆ ಸಾತ್ವಿಕ ಆಹಾರದ ತಯಾರಿಕೆ,ಅದರ ಸೇವನೆ – ಹೀಗೆ ಎಲ್ಲದರಲ್ಲೂ ಪರಮಾರ್ಥವನ್ನು ಸೇರಿಕೊಂಡ ಲೌಕಿಕ ಸುಖವಿರುವಂತೆ ನಮ್ಮ ದಿನಚರಿಯನ್ನಿಟ್ಟಿದ್ದಾರೆ.ಅಂತಹ ದಿನಚರಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನದ ಮುಖ್ಯ ಉದ್ದೇಶಕ್ಕೆ ಸೇರಿದದಿನಚರಿಯಾಗುತ್ತದೆ.


ಹೀಗೆ ನಾವು ಅಳವಡಿಸಿಕೊಳ್ಳುವ ದಿನಚರಿಯಿಂದಲೇ ಇಂದ್ರಿಯ ಸುಖದ ಜೊತೆಗೇ ಜೀವನದ ಧ್ಯೇಯವಾದ ನಮ್ಮೊಳಗಿನ ಬೆಳಕನ್ನುಕಂಡು ಆನಂದಿಸುವ ಉಪಾಯವನ್ನು ಲೋಕಕ್ಕೆ ದಯಪಾಲಿಸಿದ ಮಹರ್ಷಿಗಳಿಗೆ ಕೃತಜ್ಞರಾಗಿರೋಣ. ಅಂತಹ ಆದರ್ಶದಿನಚರಿಯನ್ನು ನಾವೂ ಅನುಸರಿಸುವಂತಾಗಲಿ.


ಸೂಚನೆ: 18/02/2020 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, February 10, 2021

ಭಕ್ತಿ - ಭಕ್ತ - ಭಕ್ತ ಪರಾಧೀನ (Bhakti-Bhakta-Bhakta Paradhina)

ಲೇಖಕಿ : ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತ ಯುದ್ಧದ ಒಂಬತ್ತನೆಯ ದಿನ. ಭೀಷ್ಮಾಚಾರ್ಯರು ಅರ್ಜುನನ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಪ್ರತ್ಯಸ್ತ್ರಗಳಿಗಾಗಿ ಬಾಣಹೂಡುವುದೂ ಅಸಾಧ್ಯವಾಯಿತು ಅರ್ಜುನನಿಗೆ! ಶ್ರೀಕೃಷ್ಣನಿಗೂ ಬಾಣಗಳ ಹೊಡೆತ ತಪ್ಪಲಿಲ್ಲ. ನಿಷ್ಕ್ರಿಯನಾದ ಅರ್ಜುನನನ್ನು ಕಂಡು ಕುಪಿತನಾದ ಶ್ರೀಕೃಷ್ಣನು ಪಿತಾಮಹನನ್ನು ನಾನೇ ವಧಿಸುತ್ತೇನೆ ಎನ್ನುತ್ತಾ ಸುದರ್ಶನಚಕ್ರವನ್ನು ಕೈಗೆತ್ತಿಕೊಂಡು ಭೀಷ್ಮಾಚಾರ್ಯರ ಬಳಿ ಧಾವಿಸಿದ. ಒಡನೆಯೇ ಭೀಷ್ಮರು ಶಸ್ತ್ರಗಳನ್ನು ಕೆಳಗಿಟ್ಟು ಭಗವಂತನಿಂದ ಸಾವನ್ನಪ್ಪುವ ಸೌಭಾಗ್ಯವನ್ನು ನೆನೆದು ಭಕ್ತಿಯಿಂದ ಕೈಮುಗಿದುನಿಂತರು. ಅಷ್ಟರಲ್ಲಿ ಅರ್ಜುನನ ಪ್ರಾರ್ಥನೆಗೆ ಓಗೊಟ್ಟು ಕೃಷ್ಣನು ರಥಕ್ಕೆ ಹಿಂದಿರುಗಿದ.

ಆಯುಧವನ್ನು ತೆಗೆಯುವುದಿಲ್ಲವೆಂಬ ಕೃಷ್ಣನ ಪ್ರತಿಜ್ಞೆಯಂತೆಯೇ 'ಕೃಷ್ಣನಿಂದ ಆಯುಧವನ್ನು ತೆಗೆಸುತ್ತೇನೆ' ಎಂದು ಭೀಷ್ಮಪಿತಾಮಹರೂ ನುಡಿದಿದ್ದರು. ಭಗವಂತ ತನ್ನ ಪ್ರತಿಜ್ಞೆ ಸುಳ್ಳಾದರೂ ತನ್ನ ಭಕ್ತನ ಪ್ರತಿಜ್ಞೆ ಸುಳ್ಳಾಗಬಾರದೆಂದು ಕುಪಿತನಂತೆ ನಟಿಸುತ್ತಿರುವುದನ್ನು ಮನಗಂಡರು ಭೀಷ್ಮಾಚಾರ್ಯರು. ಕ್ಷಣಕಾಲವೂ ಕೃಷ್ಣನ ಭಗವತ್ಸ್ವರೂಪವನ್ನು ಮರೆಯದಿದ್ದ ಭಾಗವತೋತ್ತಮರು! ಇದು ಭಗವಂತನ ಭಕ್ತಪರಾಧೀನತೆಗೆ ಉತ್ತಮ ನಿದರ್ಶನವಲ್ಲವೇ?

ಶ್ರೀರಂಗಮಹಾಗುರುಗಳು 'ಭಕ್ತಿ'ಪದವನ್ನು 'ವಿಭಕ್ತಿ'(ಬೇರೆಯಾಗುವುದು)ಯ ವಿರುದ್ಧಪದವೆಂಬುದಾಗಿ ವಿವರಿಸಿದ್ದರು. ಭಗವಂತನಿಂದ ಮನಸ್ಸು ಬೇರೆಯಾಗದೆ-ಸರ್ವದಾ ಅವನಿಗೇ ಅಂಟಿಕೊಂಡಿರುವ ಸ್ಥಿತಿಯೇ ಭಕ್ತಿ. ಭಗವಂತನಲ್ಲಿ ನಿರತಿಶಯಪ್ರೇಮವೇ ಭಕ್ತಿಯೆಂಬುದಾಗಿ ಭಕ್ತಿಶಾಸ್ತ್ರಗಳು ಸಾರುತ್ತವೆ. ಲೌಕಿಕಜೀವನದಲ್ಲೂ ವಿಶೇಷಪ್ರೇಮವಿರುವಲ್ಲಿ ಮನಸ್ಸು ಅಂಟಿಕೊಂಡಿರುವುದು ಸಹಜವಲ್ಲವೇ? ಅಂತಹ ಪ್ರೀತಿಯನ್ನು ಭಗವಂತನ  ಕಡೆ ತಿರುಗಿಸಿದಾಗ ಅದು ಭಕ್ತಿಯೆನಿಸಿಕೊಳ್ಳುತ್ತದೆ.

ಇಂತಹ ಸ್ಥಿತಿಯನ್ನು(ಭಕ್ತಿಯನ್ನು) ಹೊಂದಿದವರು 'ಸಿದ್ಧ'ಭಕ್ತರೆನಿಸಿಕೊಳ್ಳುತ್ತಾರೆ. ಲೋಕಜೀವನದಲ್ಲಿದ್ದುಕೊಂಡೇ ಆ ಸ್ಥಿತಿಯನ್ನು ತಲುಪುವುದು ಕಷ್ಟಸಾಧ್ಯವೇ ಸರಿ. ಆದರೂ ನಿರಂತರ ಪ್ರಯತ್ನವೆಸಗುವ 'ಸಾಧಕ'ಭಕ್ತನಾದವನಿಗೆ ಕಾಲಕ್ರಮದಲ್ಲಿ ಅದನ್ನು ತಲುಪುವುದೂ ಅಸಾಧ್ಯವೇನಲ್ಲವೆನ್ನುವುದು ಜ್ಞಾನಿಗಳ ಮತ.

ಭೀಷ್ಮಾಚಾರ್ಯರು ತಮ್ಮ ರಾಜಕಾರ್ಯಗಳ, ಪರಿಪರಿಯಾದ ಗೊಂದಲಮಯ ಸನ್ನಿವೇಶಗಳ ನಡುವೆಯೂ, ಶ್ರೀಕೃಷ್ಣನ ಭಗವತ್ಸ್ವರೂಪವನ್ನು ಸದಾ ಸ್ಮರಿಸುತ್ತಿದ್ದವರು. ಘನಘೋರವಾದ ಕುರುಕ್ಷೇತ್ರಯುದ್ಧಭೂಮಿಯಲ್ಲಿ ಆವೇಶದಿಂದ ಸಾವಿರಾರು ಯೋಧರ ತಲೆಗಳನ್ನುರುಳಿಸುತ್ತಿದ್ದ ತರುಣದಲ್ಲೂ ಕೃಷ್ಣನು ಸಂಹರಿಸಲು ಧಾವಿಸಿಬಂದಾಗ ಕ್ಷಣಮಾತ್ರದಲ್ಲಿ ಶಸ್ತ್ರಗಳನ್ನು ತೊರೆದು ಭಕ್ತಿಭಾವಪೂರಿತರಾದರೆಂದರೆ ಅವರ ಸಂಯಮ-ಭಕ್ತಿಗಳ ಮಟ್ಟವು ಊಹಿಸಲಸಾಧ್ಯವಾದದ್ದು. ಇಂತಹವರನ್ನು ಪರಮಭಾಗವತರ ಪಟ್ಟಿಯಲ್ಲಿ ಸೇರಿಸಿ ಕೊಂಡಾಡಿರುವುದು ಅತ್ಯಂತ  ಸೂಕ್ತವಾಗಿದೆ. ಭಕ್ತನ ಮಾತನ್ನುಳಿಸಿದ ಭಗವಂತ ಭಕ್ತಪರಾಧೀನನಲ್ಲವೇ?

ಭಕ್ತರ ಪ್ರೀತಿ-ಭಕ್ತಿಗೆ ಮಾರುಹೋಗಿ ಅವರಿಗೆ ತಾನು ಅಧೀನನಾಗುವನೆಂಬ ಭಗವದ್ವಾಣಿಯು ಅನೇಕ ಕಡೆಗಳಲ್ಲಿ ಕಾಣಸಿಗುತ್ತದೆ. ಭಾಗವತೋತ್ತಮರ ಸ್ಮರಣೆಯ ನೆರವಿನಿಂದ ಭಕ್ತಿಯ ಉತ್ತುಂಗಶಿಖರವನ್ನೇರಿ ಭಕ್ತಪರಾಧೀನ-ಭಗವಂತನ ಕೃಪೆಗೆ ಪಾತ್ರರಾಗೋಣ.

ಸೂಚನೆ: 10/02/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.   

Wednesday, February 3, 2021

ಅಸೂಯೆಯ ಸದುಪಯೋಗ (Asuyeya Sadupayoga)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಅಸೂಯೆಯ ಸದುಪಯೋಗ ಲೇಖಕಿ: ಸೌಮ್ಯಾ ಪ್ರದೀಪ್ ಒಮ್ಮ ವೈಕುಂಠದಲ್ಲಿ ನಾರದರು ಹಾಗೂ ತುಂಬುರರು ಮಹಾವಿಷ್ಣುವಿನ ಮುಂದೆ ಗಾಯನ ಸೇವೆಯನ್ನು ಮಾಡಿ ವಿಷ್ಣುವಿನ ಪ್ರಶಂಸೆಗೆ ಪಾತ್ರರಾದರು. ನಾರದರು ಮಹಾವಿಷ್ಣುವಿನ ಬಳಿಸಾರಿ ಕುತೂಹಲದಿಂದ ನಮ್ಮಿಬ್ಬರಲ್ಲಿ ಯಾರ ಗಾಯನ ಉತ್ಕೃಷ್ಟವಾಗಿತ್ತು ಎಂದು ಪ್ರಶ್ನಿಸಿದಾಗ, ನಾರಾಯಣನು ನೀವಿಬ್ಬರೂ ನನ್ನ ಮಕ್ಕಳೇ, ಇಬ್ಬರ ಗಾಯನವೂ ಪ್ರಶಂಸನೀಯವಾಗಿತ್ತು ಎಂದು ಹೇಳುತ್ತಾನೆ. ಆದರೂ ನಾರದರು ಅನೇಕಬಾರಿ ಪ್ರಶ್ನಿಸಲಾಗಿ ತುಂಬುರರ ಗಾಯನವೇ ಅತ್ಯುತ್ಕೃಷ್ಟವಾಗಿತ್ತು ಎಂಬ ಉತ್ತರವನ್ನು ವಿಷ್ಣುವಿನಿಂದ ಪಡೆದ ನಾರದರ ಮನದಲ್ಲಿ ಅಸೂಯೆ ಉದ್ಭವಿಸುತ್ತದೆ. ಇದನ್ನು ಗಮನಿಸಿದ ಮಹಾವಿಷ್ಣು ಈ ಅಸೂಯೆಯ ಪರಿಣಾಮ ಒಳ್ಳೆಯದೇ ಆಗುತ್ತದೆ ಎಂದು ತಿಳಿದು ನಸುನಗುತ್ತಾನೆ.


ನಾರದರು ಉದ್ಭವಿಸಿದ ಅಸೂಯೆಯನ್ನು ಕೊಂಚ ತಡೆಹಿಡಿದು ನಾನೂ ತುಂಬುರರಂತೆ ಆಗಲು ಏನು ಮಾಡಬೇಕೆಂದು ಕೃಪೆಮಾಡಿ ತಿಳಿಸಬೇಕೆಂದು ಅರುಹಿದಾಗ, ನೀನು ಪ್ರತಿನಿತ್ಯವೂ ಶ್ರದ್ದೆಯಿಂದ ಅಭ್ಯಾಸಮಾಡು, ಮುಂದೆ ನಾನು ದ್ವಾಪರಯುಗದಲ್ಲಿ ಕೃಷ್ಣನಾಗಿ ಅವತರಿಸಿದಾಗ ನಿನಗೆ ಸಮಗ್ರವಾದ ಗಾನವಿದ್ಯೆಯನ್ನು ಉಪದೇಶಿಸುತ್ತೇನೆ.  ಅಲ್ಲಿಯವರೆಗೆ ಸಹನೆಯಿಂದಿರು ಎಂದು ಸಂತೈಸುತ್ತಾನೆ. ಅಂತೆಯೇ ನಾರದರು ದ್ವಾಪರಯುಗ ಬರುವವರೆಗೂ ಕಾದು ನಂತರ ಕೃಷ್ಣನ ಬಳಿಗೆ ಬಂದು ಗಾನವಿದ್ಯೆಯನ್ನು ಉಪದೇಶಿಸಬೇಕೆಂದು ಕೋರಿ ಕೃಷ್ಣನಿಂದ ಉಪದೇಶ ಪಡೆದು ಅವರೂ ಗಾನವಿದ್ಯೆಯಲ್ಲಿ ಪ್ರಾವಿಣ್ಯವನ್ನು ಹೊಂದುತ್ತಾರೆ.


'ಅನಸೂಯಾ'(ಅಸೂಯೆ ಇಲ್ಲದಿರುವಿಕೆ) ಎಂಬುದು ಆತ್ಮಗುಣಗಳಲ್ಲಿ ಒಂದು. ಇಂತಹ ಆತ್ಮಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಆದರೆ ಬಲವಾಗಿ ಬೇರೂರಿರುವ ಅಸೂಯೆಯನ್ನು ಬೇಗನೆ ತ್ಯಜಿಸುವುದು ಕಷ್ಟಸಾಧ್ಯ. ಹಾಗಾಗಿ ಯಾವುದೇ ಕ್ಷೇತ್ರದಲ್ಲಾದರೂ ಕೂಡ ಇನ್ನೊಬ್ಬರ ಏಳಿಗೆಯನ್ನು ಕಂಡು ಮನದಲ್ಲಿ ಉದ್ಭವಿಸಿದ ಅಸೂಯೆಯನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲದಿದ್ದಾಗ ಅವರಿಗೆ ಏನಾದರೂ ತೊಂದರೆ ಕೊಟ್ಟು ಪತಿತರನ್ನಾಗಿ ಮಾಡಬೇಕು ಎಂಬ ಪ್ರವೃತ್ತಿಯನ್ನು ಬಿಟ್ಟು ನಾವೂ ಅವರಂತೆಯೇ ಏಳಿಗೆಯನ್ನು ಹೊಂದಲು ಸರ್ವರೀತಿಯಿಂದಲೂ ಪ್ರಯತ್ನಿಸಬೇಕು. ಈ ಪುರಾಣದ ಕಥೆಯಲ್ಲಿ, ಉದ್ಭವಿಸಿದ ಅಸೂಯೆಯನ್ನು ನಾರದರು ಮಾಡಿದಂತೆ ಒಳ್ಳೆಯ ಕಡೆ ತಿರುಗಿಸಿದಾಗ ನಾವೂ ಏಳಿಗೆಯನ್ನು ಹೊಂದಬಹುದು; ಪರರಿಗೂ ತೊಂದರೆಯಾಗುವುದಿಲ್ಲ. ಹೇಗೆ ಮೋಹವನ್ನು ಬಿಡಲಾಗದ ಪಕ್ಷದಲ್ಲಿ ಆ ಮೋಹವನ್ನು ಭಗವಂತನಲ್ಲಿಟ್ಟಾಗ ಭಕ್ತಿಯಾಗಿ ಭಗವಂತನನ್ನು ಹೊಂದಲು ದಾರಿಯಾಗುವುದೋ ಅಂತೆಯೇ, "ಅರಿಷಡ್ವರ್ಗಗಳನ್ನು ಹರಿಷಡ್ವರ್ಗಗಳನ್ನಾಗಿ ಮಾಡಿಕೊಳ್ಳಿ ಎಂಬ ಶ್ರೀರಂಗಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.


ಸೂಚನೆ: 3/02/2021 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, January 27, 2021

ಬೇಸರವಿಲ್ಲದ ಜೀವನ ಉಂಟೆ? (Besaravillada Jivana Unte?)

ಲೇಖಕಿ: ಪದ್ಮಿನಿ ಶ್ರೀನಿವಾಸನ್

(ಪ್ರತಿಕ್ರಿಯಿಸಿರಿ lekhana@ayvm.in)


 

 

ಬೇಸರವೆಂಬುದು ಜೀವನದಲ್ಲಿ ನಾವೆಲ್ಲರೂ ಅನುಭವಿಸಿರುವ ಒಂದು ಸಹಜವಾದ ಭಾವನೆ. ಕಾರಣಗಳು ಹಲವಾರು - ಆಪ್ತರ ಅಗಲಿಕೆ, ಧನವ್ಯಯ, ಅನಾರೋಗ್ಯ, ವೃತ್ತಿ/ಸಂಸಾರಗಳ ಒತ್ತಡ ಇತ್ಯಾದಿ. ನಮ್ಮ ಉತ್ಸಾಹ/ಉತ್ತೇಜನಗಳನ್ನು ಕುಂದಿಸುವ ಸ್ಥಿತಿಯನ್ನು ಬೇಸರವೆಂದು ಕರೆದು, ಆಧುನಿಕ ಸಂಶೋಧಕರು ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ನಿಮ್ಮ ಗುರಿ/ಆಸೆ/ಆಕಾಂಕ್ಷೆಗಳನ್ನು ಗುರುತಿಸಿ, ಸವಾಲು ಹಾಕಿಕೊಳ್ಳಿ, ಸಮಾಜದಲ್ಲಿ ಬೆರೆಯಿರಿ, ದಿನಚರಿಯಲ್ಲಿ ಏನಾದರೂ ಹೊಸತನ್ನು ಅಳವಡಿಸಿಕೊಳ್ಳಿ, ವಿಶ್ವ ಪರ್ಯಟನ ಮಾಡಿ, ಹೊಸ ರುಚಿಯನ್ನು ಆಸ್ವಾದಿಸಿ, ಹೊಸ ದೃಶ್ಯಗಳನ್ನು ನೋಡಿ/ಟೀವಿ /ಚಲನ ಚಿತ್ರ ವೀಕ್ಷಿಸಿ, ಹವ್ಯಾಸಗಳು/ಕ್ರೀಡೆ/ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಿ, ಸಂತೋಷದ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿರಿ ಇತ್ಯಾದಿ ನಾನಾ ರೀತಿಯ ಸಲಹೆಗಳು ಬರುತ್ತವೆ. ಮನಸ್ಸಿನ ಸಾತ್ತ್ವಿಕ ಪ್ರಚೋದನೆಗಳನ್ನು ಪುಷ್ಟೀಕರಿಸಿ, ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದರ ಮೂಲಕ, ಬೇಸರವನ್ನು ಹೋಗಲಾಡಿಸಿಕೊಳ್ಳಿ ಎನ್ನುವುದು ಮನೋವಿಜ್ಞಾನಿಗಳ  ಅಭಿಪ್ರಾಯ.


ಸಂತೋಷವನ್ನು  ಕೊಡುವುದಾಗಿ ನಾವು ಭಾವಿಸುವ ಸಂಗತಿಗಳು ನಮ್ಮಲ್ಲಿನ ಸಂತೋಷದ ಬಲ್ಬಿನ  'ಸ್ವಿಚ್ ಆನ್' ಮಾಡುತ್ತವೆ ಅಷ್ಟೇ. ಕಾಲವು ಉರುಳುತ್ತಾ, ಸ್ವಿಚ್ಚುಗಳ ಹಿಂದಿನ ತಂತಿಗಳು ಹಳತಾಗಿ ಕೆಟ್ಟು ಹೋಗುವುದು ಸಹಜ. ಆದರೆ ವಸ್ತುಸ್ಥಿತಿ ಅರಿಯದೆ ನಾವು ಹೊಸ ಹೊಸ ಆಸೆಗಳನ್ನು ಮನದುಂಬಿಕೊಂಡು 'ಸ್ವಿಚ್-ಆನ್' ಮಾಡುವ ವ್ಯರ್ಥಪ್ರಯತ್ನ ಮಾಡುತ್ತೇವೆ.  ಕಾಲವು ಆಡುತ್ತಿದೆ; ಆಯುಸ್ಸು ಕಳೆಯುತ್ತಿದೆ; ಆದರೆ ಆಶಾವಾಯುವು ಮಾತ್ರ ಬಿಟ್ಟುಹೋಗದಲ್ಲ!" ಎಂದು ಶಂಕರಭಗವತ್ಪಾದರು ಹೇಳಿರುವಂತೆ, ಜೀವನವೆಲ್ಲ  ತೀರದ  ಆಸೆ, ಬಾರದ ತೃಪ್ತಿ. ಆದರೆ ಸಂತೋಷದ 'ಬಲ್ಬಿ'ಗೆ ಗುಪ್ತವಾದ ಮತ್ತೊಂದು 'ಸ್ವಿಚ್' ಉಂಟು.    


ಯೋಗೇಶ್ವರ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು :"ಭಗವಂತನ ಸಮೀಪದಲ್ಲಿದ್ದ ಚೇತನನು ಭಗವತ್ಸನ್ನಿಧಿಯಿಂದ ಬಹುದೂರ ಬಂದಿದ್ದಾನೇಪ್ಪಾ". ನಮ್ಮೆಲ್ಲ ಚಟುವಟಿಕೆಗಳ ಹಿಂದೆ ಚೈತನ್ಯ ಶಕ್ತಿಯಾಗಿರುವ ಆತ್ಮನು, ಸೃಷ್ಟಿಗಿಳಿದು,  ಅವನ ಸ್ವಧಾಮವಾದ ಭಗವಂತನ ಮಡಿಲಿಗೆ ಹಿಂತಿರುಗಲಾಗದ ಬೇಸರದಿಂದ ಕೂಡಿದ್ದಾನೆಂಬ ಅರಿವು ಅವನಿಗಾಗುತ್ತಿಲ್ಲ. ಅಮೋಘವಾದ ಸಂಶೋಧನೆಯಿಂದ, ನಮ್ಮ ಮಹರ್ಷಿಗಳು ಅಂತರಂಗದಲ್ಲಿ  ಅಡಗಿರುವ 'ಸ್ವಿಚ್'ನ್ನು ಕಂಡು, ಆತ್ಮ-ಪರಮಾತ್ಮರನ್ನು ನಿತ್ಯವೂ ಒಂದಾಗಿಸಿ ನಿತ್ಯಾನಂದ ಸ್ವರೂಪಿಯಾದ ಆ ಪರಮಾತ್ಮನ ಮೂಲದಿಂದ ಉಕ್ಕುವ ಬ್ರಹ್ಮಾನಂದವನ್ನು ಅನುಭವಿಸಿದರು. ಯೋಗ ಪ್ರಕ್ರಿಯೆಯಿಂದ ಪಡೆದ ಪರಮಾನಂದದ ಗುಟುಕುಗಳನ್ನು ಭೋಗ ಜೀವನಕ್ಕೂ ತಂದುಕೊಂಡು, ಸಮರಸ ಜೀವನ ಮಾಡಿದರು.  ಮನುಷ್ಯನ ಉದ್ಧಾರಕ್ಕಾಗಿ, ಭವ್ಯವಾದ ಸಂಸ್ಕೃತಿಯನ್ನು ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದು ಕೊಟ್ಟು, ಆತ್ಮರಂಜನೆಯವರೆಗೆ ಮುಟ್ಟುವ ಮನೋರಂಜನೆಗಳನ್ನೂ ಕೃಪೆಯಿಂದ ತಂದುಕೊಟ್ಟರು. ಸದ್ಗುರುವಿನ ಆಶ್ರಯ ಪಡೆದು, ನಮ್ಮ ಚಿತ್ತವೃತ್ತಿಗಳನ್ನು ಶುದ್ಧಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದರೆ, ಕ್ರಮೇಣ ಆತ್ಮಾನಂದವನ್ನು  ನಾವು ಅನುಭವಿಸಬಹುದು.ಇತರ ಸುಖಗಳಿಗಿಂತ ಕೋಟಿ ಕೋಟಿ ಪಾಲು ಮಿಗಿಲಾದ ನಿರಂತರ ಆನಂದದ ಅರಿವು ನಮಗೆ ಬಂದಂತೆ, ಬೇಸರವೆನ್ನಲು ಸಮಯವೇ ಇರಲಾರದು.


ಸೂಚನೆ: 27/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Thursday, January 7, 2021

ಮಹತ್ಕಾರ್ಯದ ಸಾಧನೆಗೆ ಉಪಾಯದ ಅವಲಂಬನೆ (Mahatkaryada Sadhanege Upayada Avalambane)

ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಕೆಲವೊಮ್ಮೆ ದೊಡ್ಡ ವಿಷಯವನ್ನು ಕೊಡಬೇಕಾದಾಗ ಉಪಾಯವನ್ನು ಅವಲಂಬಿಸಬೇಕಾಗುತ್ತದೆ ಎಂಬುದಕ್ಕೆ ಶ್ರೀರಂಗಮಹಾಗುರುಗಳು ಒಂದು ಕಥೆಯನ್ನು ಹೇಳುತ್ತಿದ್ದರು. ಹಿಂದೆ ನಾಥಮುನಿಗಳು ಎಂಬ ಯೋಗಿಗಳ ಶಿಷ್ಯರ ಪೈಕಿ ಮಣಕ್ಕಾಲ್ ನಂಬಿ ಎಂಬುವವರಿದ್ದರು, ಅವರ ಕಾಲದಲ್ಲಿ ಮೊಮ್ಮಕ್ಕಳಾದ ಯಾಮುನರು ಇನ್ನೂ ಚಿಕ್ಕವರಾಗಿದ್ದರು. ಆಗ ಅವರು ಜ್ಞಾನವನ್ನು ಮುಂದುವರೆಸುವ ಜವಾಬ್ದಾರಿಯನ್ನು  ಮಣಕ್ಕಾಲ್ ನಂಬಿ ಎಂಬ ಶಿಷ್ಯನಿಗೆ ವಹಿಸಿದರು.  ಯಾಮುನರು ವಾದದಲ್ಲಿ ಗೆದ್ದು ರಾಜ್ಯಾಧಿಪತಿಗಳಾಗಿದ್ದರು. ರಾಜ್ಯಾಧಿಪತಿಗಳಾದ ಅವರಲ್ಲಿಗೆ ಮಣಕ್ಕಾಲ್ ನಂಬಿಗಳು ಹೋಗುವುದಾದರೂ ಹೇಗೆ? ಆದರೆ ಗುರುಗಳು ತಮ್ಮ ಜ್ಞಾನಸಂಪತ್ತನ್ನು ಅವರಿಗೆ ಕೊಡುವಂತೆ ವಹಿಸಿದ ಜವಾಬ್ದಾರಿಯಿದೆ, ಅದನ್ನು ಹೇಗೆ ನಿರ್ವಹಿಸುವುದು?  ಕೊನೆಗೆ ಪ್ರತಿದಿನವೂ ಒಂದು ತರಹದ ಸೊಪ್ಪನ್ನು ರಾಜನಿಗೆ ಅಡಿಗೆ ಮಾಡಿ ಬಡಿಸಲು ತರಕಾರಿಯಾಗಿ ಕೊಂಡೊಯ್ಯುತ್ತಿದ್ದರು. ರಾಜನಿಗೆ ಅದೊಂದು ಹೊಸತಿಂಡಿಯಾಗಿತ್ತು. 


ಹೀಗೆ ಪ್ರತಿದಿನವೂ ತಪ್ಪದೇ ಈ ಸೊಪ್ಪಿನ ಪದಾರ್ಥ ರಾಜನಿಗೆ ತಲುಪಿ ಅದು ಚೆನ್ನಾಗಿ ಅವನಿಗೆ ಹಿಡಿಸಿತು. ಒಂದು ದಿನ ಅವರು ಈ ಸೊಪ್ಪನ್ನು ತರಲಿಲ್ಲ, ಆಗ ರಾಜನು ಸೊಪ್ಪು ಏಕೆ ಇಲ್ಲ ಎಂದು ಕೇಳಿದ, ಯಾರೋ ಒಬ್ಬರು ಯಾವ ಪ್ರತಿಧನವನ್ನೂ ತೆಗೆದುಕೊಳ್ಳದೆ ತಂದು ಕೊಡುತ್ತಿದ್ದಾರೆ, ಇಂದು ಅವರು ಬರಲಿಲ್ಲ ಎಂದು ಅಡುಗೆಯವರು ಹೇಳಿದರು. ನಂತರ ಮತ್ತೊಮ್ಮೆ ಅವರು ಬಂದಾಗ ಆಸ್ಥಾನಕ್ಕೆ ಕರೆಸಿದರು. ಆ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಧನದ ಅಗತ್ಯವಿತ್ತು.  ಆ ಸಂದರ್ಭಕ್ಕೆ ಸರಿಯಾಗಿ ಇವರು ಹೋಗಿ ನಿಮ್ಮ ತಾತನವರು ನನ್ನಲ್ಲಿ ಯಾವುದೋ ಒಂದು ದೊಡ್ಡ ನಿಧಿಯನ್ನು ಇಟ್ಟಿದ್ದಾರೆ; ನನ್ನ ಜೊತೆ ಬಂದರೆ ಅದನ್ನು ಕೊಡುತ್ತೇನೆ ಎಂದು ಹೇಳಿ ರಾಜನನ್ನು ಶ್ರೀರಂಗಕ್ಕೆ ಜೊತೆಯಲ್ಲಿ ಕರೆದೊಯ್ದು, ಶ್ರೀ ರಂಗನಾಥನನ್ನು ತೋರಿಸಿ ಇದೇ ಆ ನಿಧಿಯೆಂದು ಹೇಳಿ ಅದರ ಮರ್ಮದೊಡನೆ ಇತ್ತರು. ಅವರ ತಾತನ ಆಸ್ತಿಯನ್ನು ಅವರಿಗೇ ಕೊಟ್ಟರು; ಅವರ ಜ್ಞಾನಭಂಡಾರವನ್ನೂ ಅವರಿಗೇ ತುಂಬಿಕೊಟ್ಟರು. ಹೀಗೆ, ಇಲ್ಲಿ ಅಪೂರ್ವವಾದ ಜ್ಞಾನಭಂಡಾರವನ್ನು ಧಾರೆಯೆರೆದು ಕೊಡಲು ಈ ರೀತಿಯ ಉಪಾಯವನ್ನು ಮಾಡಿದಾಗ ರಾಜನ ಉದ್ಧಾರವೂ ಆಗಿ ರಾಜ್ಯಕ್ಕೂ ಕ್ಷೇಮವುಂಟಾಯಿತು.


ಸೂಚನೆ: 6/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, December 30, 2020

ಕರ್ಮದ ಮರ್ಮವರಿತು ಕರ್ಮ ಮಾಡಬೇಕು (Karmada Marmavaritu Karma Madabeku)

ಲೇಖಕರು: ಶ್ರೀಮತಿ ರತ್ನಾಸುರೇಶ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಲಯದ ನಿರ್ಮಾಣಕಾರ್ಯ ನಡೆಯುತ್ತಾ ಇತ್ತು. ಅಲ್ಲಿ ಮೂವರು ಕಲ್ಲು ಕೆತ್ತುತ್ತಿದ್ದರು. ಒಬ್ಬನು ಬಂದು ಮೊದಲನೆಯವನನ್ನು "ನೀನ್ಯಾಕೆ ಕಲ್ಲು ಕೆತ್ತುತ್ತಿದ್ದೀಯಾ? ಎಂದು ಕೇಳಿದನು. ಅದಕ್ಕೆ ಅವನು ಅಯ್ಯೋ ಬಡತನ ಬುದ್ದಿ, ಹೆಂಡತಿ ಮಕ್ಕಳನ್ನು ಸಾಕಬೇಕಲ್ಲಾ" ಎಂದನು. ಎರಡನೆಯವಳನ್ನೂ ಅದೇ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಅವಳು "ನನ್ನ ಗಂಡ ಒಬ್ಬನೇ ದುಡಿಯುತ್ತಾನೆ;ನೆ, ಸಾಕಾಗುವುದಿಲ್ಲ. ನಾನೂ ಸ್ವಲ್ಪ ಸಹಾಯಮಾಡಿದರೆ ಸಂಸಾರದ ವೆಚ್ಚ ಸರಿದೂಗಿಸಲು  ಸುಲಭವಾಗುತ್ತದೆ" ಎಂದಳು. ಮೂರನೆಯವಳು ಒಬ್ಬ ವೃದ್ಧೆ. ಬಹಳ ಶ್ರದ್ಧೆಯಿಂದ ಕಲ್ಲು ಕೆತ್ತುತ್ತಿದ್ದಳು. ಅವಳಿಗೂ ಮೇಲಿನ ಪ್ರಶ್ನೆಯನ್ನೇ ಕೇಳಲಾಗಿ, ಅವಳು ಹೇಳುತ್ತಾಳೆ "ಯಾರೋ ಪುಣ್ಯಾತ್ಮರು ದೇವಸ್ಥಾನ ಕಟ್ಟಿಸಿದ್ದಾರೆ. ನನ್ನ ಕೈಯಲ್ಲಿ ಭಗವಂತನ ಕೆಲಸ ಇನ್ನೇನೂ ಮಾಡುವುದಕ್ಕಾಗುವುದಿಲ್ಲ. ಅದಕ್ಕೇ ಈ ಚಿಕ್ಕ ಸೇವೆ ಮಾಡುತ್ತಿರುವುದು. ಎಲ್ಲಾ ಅವನಿಗಾಗಿ". ಪ್ರಶ್ನೆ ಕೇಳಿದವನು  ಒಂದು ನಿಮಿಷ ಮೂಕವಿಸ್ಮಿತನಾದ. ಅವಳು ಮಾಡುತ್ತಿರುವುದು ಹೊಟ್ಟೆಪಾಡಿಗಾಗಿಯೇ. ಆದರೆ ಅವಳ ಭಾವ ಉನ್ನತವಾದದ್ದು. ಭಗವಂತನನ್ನು ಭಾವಿಸಿದಷ್ಟೂ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. "ಭಾವಗ್ರಾಹೀ ಜನಾರ್ದನಃ" ಎನ್ನುತ್ತಾರೆ. ನಾವು  ಏನನ್ನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸಿಟ್ಟು ಭಗವಂತನಿಗೆ ಪ್ರೀತಿಯಾಗಲಿ ಎಂಬ ಭಾವದೊಡನೆ ಶ್ರದ್ಧೆಯಿಂದ ಮಾಡಿದಾಗ ಅದು ಭಗವನ್ಮಯವಾದ ಬಾಳಾಟವಾಗುತ್ತೆ ಎಂದು ಹಿರಿಯರು ನುಡಿಯುತ್ತಾರೆ. 

ಭಾವಕ್ಕೆ ಸಂಬಂಧಪಟ್ಟ ಇನ್ನೊಂದು ಉತ್ಕೃಷ್ಟವಾದ ದೃಷ್ಟಾಂತ-ಗೋಪಿಯರು ಗೋಕುಲದಲ್ಲಿ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣನನ್ನು ಭಾವಿಸಿದ ಪರಿ. ಅವರ ಬೆಳಗಿನ ದಿನಚರಿ ಪ್ರಾರಂಭವಾಗುವುದೇ ಶ್ರೀ ಕೃಷ್ಣನ ಮಧುರ ಸ್ಮರಣೆಯಿಂದ. ಮನೆ ಗುಡಿಸಿ, ಸಾರಿಸಿ, ರಂಗವಲ್ಲಿ ಇಡುವಾಗ, ನೀರು ತರುವಾಗ, ಹಾಲು ಕರೆಯುವಾಗ, ಮೊಸರು ಕಡೆಯುವಾಗ ಅವರ ಮನಸ್ಸಿನ ಏಕಮಾತ್ರ ಧ್ಯೇಯಮೂರ್ತಿ ನೀಲಮೇಘಶ್ಯಾಮನಾದ ಶ್ರೀಕೃಷ್ಣ. ಸದಾ ಅವರ ಮನಸ್ಸು ಭಗವಂತನಲ್ಲಿಯೇ ರಮಿಸುತ್ತಿತ್ತು ಇದರಿಂದಾದ ಪ್ರಯೋಜನ - ಅಲಭ್ಯ ಲಭ್ಯನಾದ ಶ್ರೀಕೃಷ್ಣನ ದರ್ಶನ; ಆಲಿಂಗನ ಸೌಖ್ಯ. ಗೋಪಿಯರು ಏನನ್ನೂ ಬಯಸದೇ ಭಗವಂತನೊಬ್ಬನನ್ನೇ ಬಯಸಿ ಅವನನ್ನೇ ಪಡೆದರು. ಶ್ರೀರಂಗಮಹಾಗುರುಗಳ  ದಿವ್ಯವಾಣಿ ಇಂತಿದೆ--"ನಾವು ಮಾಡುವ ಪ್ರತಿಕರ್ಮವೂ ಬ್ರಹ್ಮಾರ್ಪಿತವಾಗಬೇಕು. ಅದಕ್ಕೆ ತಕ್ಕ ಯುಕ್ತಿಯೂ ಬೇಕು". ಇದನ್ನು ಜ್ಞಾಪಿಸಿಕೊಳ್ಳುತ್ತಾ ನಮ್ಮ ಕರ್ಮಗಳೆಲ್ಲ ಭಗವಂತನಿಗೆ ಪ್ರೀತಿಯನ್ನುಂಟುಮಾಡಿ ಅವನನ್ನೇ ಹೊಂದುವಂತಾಗಲಿ ಎಂದು ಪ್ರಾರ್ಥಿಸುತ್ತಾ "ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ"(ಎಲ್ಲ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದಬೇಕು) ಎಂಬ ಶ್ರೀಕೃಷ್ಣನ ದಿವ್ಯವಾಣಿಯನ್ನು ಸ್ಮರಿಸೋಣ.

ಸೂಚನೆ: 30/12/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Wednesday, November 25, 2020

ಶರಣಾಗತಿ (Sharanagati)

ಲೇಖಕಿ: ಯೋಗಶ್ರೀ. ಹೆಚ್.ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿನ ವಿಭೀಷಣ ಶರಣಾಗತಿಯ ಸಂದರ್ಭ. ರಾವಣನ ವರ್ತನೆಯಿಂದ ಬೇಸರಗೊಂಡ ವಿಭೀಷಣನು ರಾಮನಲ್ಲಿಗೆ ಶರಣಾರ್ಥಿಯಾಗಿ ಬಂದನು. ಅವನ ಆಗಮನವನ್ನು ಗಮನಿಸಿದ ಸುಗ್ರೀವನು ಇತರ ವಾನರರೊಂದಿಗೆ ರಾಮನ ಬಳಿಯಲ್ಲಿ ಬಂದು ಈ ರೀತಿಯಾಗಿ ಹೇಳುತ್ತಾನೆ "ಲಂಕಾಧಿಪನಾದ ರಾವಣನ ತಮ್ಮನಾದ ವಿಭೀಷಣನು ಆಶ್ರಯ ಕೇಳಿ ಬಂದಿದ್ದಾನೆ. ಶತ್ರುಪಕ್ಷದವನೂ, ಮಾಯಾವಿದ್ಯೆ ಬಲ್ಲವನೂ, ಕಷ್ಟಕಾಲದಲ್ಲಿ ತನ್ನ ಸ್ವಂತ ಅಣ್ಣನನ್ನು ತ್ಯಜಿಸಿ ಬಂದವನಾದ್ದರಿಂದ ನಂಬಿಕೆಗೆ ಅನರ್ಹ". ಈ ಮಾತುಗಳನ್ನು ಕೇಳಿದ ರಾಮನು ಹನುಮಂತ ಹಾಗೂ ಇತರ ವಾನರರ ಅಭಿಪ್ರಾಯಗಳನ್ನು ಕೇಳಿದನು. ಶತ್ರುಪಕ್ಷದವನಾದ ವಿಭೀಷಣನನ್ನು ನಂಬುವುದು ಅನುಚಿತ ಎನ್ನುವ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸುತ್ತಾರೆ. ಹನುಮಂತನು ಎಲ್ಲರ ವಾದವಿವಾದಗಳನ್ನು ಆಲಿಸಿದ ಬಳಿಕ ಈ ರೀತಿಯಾಗಿ ಹೇಳುತ್ತಾನೆ "ವಿಭೀಷಣನು ನಿಮ್ಮನ್ನು ರಾವಣನಿಗಿಂತ ಶ್ರೇಷ್ಠ, ಪರಾಕ್ರಮಿ ಹಾಗೂ ಅರ್ಹನೆಂದು ಅಭಯಾರ್ಥಿಯಾಗಿ ಬಂದಿದ್ದಾನೆ. ಅವನ ನಿರ್ಧಾರ ಸರಿಯಾಗಿದೆ". ಇದನ್ನು ಆಲಿಸಿದ ರಾಮನು    ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ  ದದಾಮ್ಯೇತತ್ ವ್ರತಂ ಮಮ ॥

(ಒಮ್ಮೆ ನನ್ನಲ್ಲಿ ಶರಣಾಗಿ, ನಾನು ನಿನ್ನವನು ಎಂದು ಯಾಚಿಸುವ ಎಲ್ಲರಿಗೂ ಅಭಯವನ್ನು ಕೊಡುತ್ತೇನೆ; ಇದು ನನ್ನ ವ್ರತ) ಎಂದು ಹೇಳಿ  ವಿಭೀಷಣನಿಗೆ ಅಭಯವನ್ನು ನೀಡಿದನು.

ಮನುಷ್ಯರು ಭಗವಂತನಲ್ಲಿ ಮಹತ್ತಾದ ವಿಶ್ವಾಸವನ್ನು ಇಟ್ಟು ತಮ್ಮದೆಲ್ಲವನ್ನೂ ಪರಿಪೂರ್ಣವಾಗಿ ಅವನ ಪಾದಾರವಿಂದಗಳಲ್ಲಿ ಸಮರ್ಪಿಸಿ ಶರಣುಹೋದಾಗ ಅವನು ಅಭಯವನ್ನಿತ್ತು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಾನೆ. ಜ್ಞಾನಯೋಗ, ಭಕ್ತಿಯೋಗಗಳಂತೆ ಶರಣಾಗತಿಯೂ(ಭರನ್ಯಾಸ) ಮೋಕ್ಷೋಪಾಯಗಳಲ್ಲಿ ಒಂದು. ಭರನ್ಯಾಸವೆಂದರೆ ನಮ್ಮ ಭಾರವನ್ನೆಲ್ಲಾ ಭಗವಂತನಲ್ಲಿ ನ್ಯಾಸ(ಸಮರ್ಪಣೆ) ಮಾಡಿ ಅವನನ್ನು ಆಶ್ರಯಿಸುವುದು.

ರಾವಣನುನು ಸ್ವಂತ ಅಣ್ಣನಾದರೂ ಮಹಾ ಅಧರ್ಮಿಯಾದ್ದರಿಂದ ಆತನನ್ನೂ, ರಾಜ್ಯವನ್ನೂ ಬಿಟ್ಟು ಶತ್ರುಪಕ್ಷದವನಾದರೂ ಧರ್ಮಿಷ್ಠನಾದ ಶ್ರೀರಾಮನಲ್ಲಿ ಪರಿಪೂರ್ಣವಾದ ವಿಶ್ವಾಸವನ್ನಿಟ್ಟು ಅವನ ಪದತಲಗಳಲ್ಲಿ ವಿಭೀಷಣನು ಅಭಯವನ್ನು ಅರಸಿ ಬಂದನು. ಭಗವಂತನಾದ ಶ್ರೀರಾಮನು ಆತನನ್ನು ಉದ್ಧರಿಸಿದನು. ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ಭಗವಂತನ ಪಾದಾವಲಂಬನವೇ ಭಕ್ತಿಯ ಮೂಲ. ಭಗವಂತನ ಪಾದವು ಸುವರ್ಲೋಕದಿಂದ ಭೂಲೋಕದವರೆಗೂ ವ್ಯಾಪಿಸಿದೆ. ಅಂತಹ ಪವಿತ್ರಪಾದವನ್ನು ನಂಬಿ ಶರಣಾದರೆ ನಮ್ಮ ಜೀವನವು ಸಾರ್ಥಕ ಹಾಗು ಪರಿಪೂರ್ಣ.

ಸೂಚನೆ: 25/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, November 18, 2020

ಸತ್ಯಕ್ಕೆ ಚ್ಯುತಿ ತಾರದ ಸುಳ್ಳು (Satyakke Chyuti Tarada Sullu)

  ಲೇಖಕಿ : ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಧರ್ಮರಕ್ಷಣೆಗಾಗಿ ಹೋರಾಡುತ್ತಿದ್ದ ಶಿವಾಜಿ ಮಹಾರಾಜನನ್ನೂ ಆತನ ಮಗ ಸಂಭಾಜಿಯನ್ನೂ ಔರಂಗಜೇಬನು ಕಪಟದಿಂದ ಬಂಧಿಸಿದನು. ಬಂಧನದಿಂದ ವೇಷ ಬದಲಾಯಿಸಿಕೊಂಡು ತಪ್ಪಿಸಿಕೊಂಡ ಅವರೀರ್ವರೂ ದೆಹಲಿಯಲ್ಲಿದ್ದ ಪುರುಷೋತ್ತಮನೆಂಬ ಬ್ರಾಹ್ಮಣನ ಮನೆಗೆ ಬಂದರು. ಆತನು ಸತ್ಯವನ್ನೇ ಹೇಳುವ ವ್ರತತೊಟ್ಟವನೆಂದು ಸುಪ್ರಸಿದ್ಧನಾಗಿದ್ದ. ಶಿವಾಜಿಯು ತನ್ನ ಮಗನನ್ನು ಸ್ವಲ್ಪ ಕಾಲ ಹೇಗಾದರೂ ಕಾಪಾಡಬೇಕೆಂದು ಪ್ರಾರ್ಥಿಸಿ ಅವನಲ್ಲಿ ಬಿಟ್ಟು ಹೊರಟುಬಂದ. ಈ ಸುದ್ದಿ ತಿಳಿದ ಬಾದಶಾಹನ ಆಳುಗಳು ಬ್ರಾಹ್ಮಣನನ್ನು, ಮನೆಯಲ್ಲಿನ ಹೊಸಬ ಯಾರೆಂದು ಪ್ರಶ್ನಿಸಿದಾಗ, ಅತನು ಅತಿಥಿಯು ತನ್ನ ಸಂಬಂಧಿಯೆಂದ. ಪುರುಷೋತ್ತಮನ ಸತ್ಯನಿಷ್ಠೆಯಲ್ಲಿ ನಂಬಿಕೆಯಿದ್ದರೂ ಸೈನಿಕರು "ನೀನು ಸತ್ಯವನ್ನೇ ಹೇಳುತ್ತಿರುವುದಾದರೆ ಅವನೊಡನೆ ಸಹಪಂಕ್ತಿಭೋಜನ ಮಾಡಿತೋರಿಸು" ಎಂದರು. (ಬ್ರಾಹ್ಮಣರು ಕ್ಷತ್ರಿಯರೊಡನೆ ಸಹಪಂಕ್ತಿಯಲ್ಲಿ ಕುಳಿತು ಭೋಜನಮಾಡುವ ಅಭ್ಯಾಸ ಆಗಿನಕಾಲದ ಆಚಾರವಂತ ಬ್ರಾಹ್ಮಣರಲ್ಲಿರಲಿಲ್ಲ.) ಪುರುಷೋತ್ತಮನೂ ಸಂಭಾಜಿಯನ್ನು ರಕ್ಷಿಸಲೋಸುಗ ತನ್ನ ನಿಯಮವನ್ನು ಬಿಟ್ಟು ಸಹಪಂಕ್ತಿಭೋಜನ ಮಾಡಿ ಸೈನಿಕರನ್ನು ನಂಬಿಸಿದನು. ಕೆಲವು  ದಿನಗಳ ನಂತರ ಶಿವಾಜಿಯ ಆದೇಶದಂತೆ ಸಂಭಾಜಿಯನ್ನು ಕಳುಹಿಸಿಕೊಟ್ಟು ಶಿವಾಜಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ.

ಇಲ್ಲಿ ಪುರುಷೋತ್ತಮನ ಸತ್ಯನಿಷ್ಠೆಗೆ ಭಂಗವಾದಂತೆ ತೋರುತ್ತದೆ. ಆದರೆ ಇಂತಹ ಸನ್ನಿವೇಶಗಳನ್ನಳೆಯಲು ಶ್ರೀರಂಗಮಹಾಗುರುಗಳು ಕೊಟ್ಟ ಸೂತ್ರವನ್ನವಲಂಬಿಸಬಹುದಾಗಿದೆ – ದೊಡ್ಡಧರ್ಮದ ರಕ್ಷಣೆಗಾಗಿ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ.  ಉದಾಹರಣೆಗೆ, ಕಾಲನ್ನು ಸೂಜಿಯಿಂದ ಚುಚ್ಚುವುದು ಪಾಪಕಾರ್ಯವಾದರೂ ಕಾಲಲ್ಲಿ ಮುಳ್ಳು ಚುಚ್ಚಿಕೊಂಡಾಗ ಅದನ್ನು ತೆಗೆಯಲು ಸೂಜಿಯಿಂದ ಚುಚ್ಚುತ್ತೇವೆ.  ಮುಳ್ಳನ್ನು ತೆಗೆಯಲೇಬೇಕೆಂಬುದು ದೊಡ್ಡಧರ್ಮವಾದ್ದರಿಂದ ಅದಕ್ಕಾಗಿ 'ಚುಚ್ಚಬಾರದು' ಎಂಬ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ.

ಸತ್ಯವನ್ನಾಡಬೇಕೆಂಬ ಸಾಮಾನ್ಯ ಧರ್ಮಕ್ಕಿಂತಲೂ ಧರ್ಮಕಂಟಕನಿಂದ ಧರ್ಮಿಷ್ಠರನ್ನು ಕಾಪಾಡಬೇಕೆನ್ನುವುದು ಹಿರಿದಾದ ಧರ್ಮ. ಅದಕ್ಕಾಗಿ ನುಡಿದ ಸುಳ್ಳಿನಿಂದ ಸತ್ಯನಿಷ್ಠೆಗೆ ಚ್ಯುತಿಯಿಲ್ಲ. ಅತ್ಯಂತ ಭೂತಹಿತವಾವುದೋ ಅದೇ ಸತ್ಯವೆಂಬ ಶಾಸ್ತ್ರವಚನಕ್ಕೂ ಇದು ಹೊಂದಿಕೆಯಾಗುತ್ತದೆ.  

'ಸತ್ಯ' ಎಂದರೆ 'ಸತ್'–ಸದಾ ಇರುವುದು, ವಿಕಾರವಾಗದೇ ಇರುವುದು. ಪರಬ್ರಹ್ಮವೊಂದೇ ಎಂದಿಗೂ ವಿಕಾರವಾಗದ ಸತ್ಯ. ವ್ಯವಹಾರದಲ್ಲೂ, ಇರುವ ವಿಷಯವನ್ನು ವಿಕಾರಗೊಳಿಸದೆ, ಇರುವಂತೆಯೇ ಹೇಳುವುದನ್ನು ಸತ್ಯವೆನ್ನುತ್ತೇವೆ. ವ್ಯಾವಹಾರಿಕಸತ್ಯವು ಮೂಲಸತ್ಯದ ಛಾಯೆಯೇ ಆಗಿರುವುದರಿಂದ ಅದನ್ನು ಪಾಲಿಸುವುದು ಸತ್ಯದ ಮೂಲರೂಪವನ್ನು ನೆನಪಿಸಿ, ಅಲ್ಲಿಗೆ ಕರೆದೊಯ್ಯಲು ಸಹಾಯಕವಾಗುತ್ತದೆ. ಆದರೂ ಮೇಲೆ ಹೇಳಿದ ಧರ್ಮಸೂಕ್ಷ್ಮವನ್ನೂ ಅರಿತು ಸತ್ಯನಿಷ್ಠೆಯನ್ನು ವಿವೇಕದಿಂದ  ಪಾಲಿಸಬೇಕಾದ ಕರ್ತವ್ಯವನ್ನೂ  ಮರೆಯಬಾರದು.

ಸೂಚನೆ: 18/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Wednesday, November 4, 2020

ಅವಧೂತ ಗೀತಯ ಪಾಠ (Avadhuta Geetaya Paṭha)

ಲೇಖಕರು: ಶ್ರೀಮತಿ ರತ್ನಾಸುರೇಶ

(ಪ್ರತಿಕ್ರಿಯಿಸಿರಿ lekhana@ayvm.in)




ಗುರು-ಕತ್ತಲೆಯನ್ನು ಹೋಗಲಾಡಿಸಿ ಒಳಬೆಳಕನ್ನು ತೋರಿಸುವ ತತ್ತ್ವ. ಇದು ಮನುಷ್ಯರೂಪದಲ್ಲಿರಬಹುದು; ಬೇರೆ ರೂಪದಲ್ಲೂ ಇರಬಹುದು. ಶ್ರೀಮದ್ಭಾಗವತದಲ್ಲಿ ಅವಧೂತ-

ಯದು-ಇವರ ಸಂವಾದದಲ್ಲಿ ಅವಧೂತನು ಭೂಮಿ, ಪರ್ವತ, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ, ಆನೆ, ಜೇನುತೆಗೆಯುವವನು, ಜಿಂಕೆ, ಮೀನು, ಪಿಂಗಳ- ವೇಶ್ಯೆ, ಕುರರ ಪಕ್ಷಿ, ಮಗು, ಕುಮಾರಿ, ಬಿಲ್ಲುಗಾರ, ಸರ್ಪ, ಜೇಡರಹುಳು – ಹೀಗೆ ತನಗೆ ೨೪ ಗುರುಗಳಿದ್ದಾರೆ ಎಂದು ಹೇಳುತ್ತಾನೆ. ಯಾರಿಂದ ಯಾವ ಶಿಕ್ಷಣ ಪಡೆದೆ ಎಂಬುದನ್ನು ವಿಸ್ತಾರವಾಗಿ ವಿವರಿಸುತ್ತಾನೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಭೂಮಿ: ಭೂದೇವಿಯ ಮೇಲೆ ಯಾರು ಎಷ್ಟಾದರೂ ತುಳಿದಾಡಲಿ ಗಲೀಜುಮಾಡಲಿ, ಅದು ದೈವದ ಕಟ್ಟಳೆಯೆಂದು ತಿಳಿದು ಕ್ಷಮಾನಿಧಿಯಾದ ಭೂದೇವಿಯು ಕಂಪಿಸದೇ ಇರುತ್ತಾಳೆ. ಹಾಗೆಯೇ ದೈವದ ಆಣತಿಗೆ ಒಳಪಟ್ಟು ಅಸಂಖ್ಯಾತ ಪ್ರಾಣಿಗಳು ತನ್ನನ್ನು ಆಕ್ರಮಿಸಿದರೂ ತಾನು ಸತ್ಯದಿಂದ ವಿಚಲಿತನಾಗಬಾರದೆಂಬ ಪಾಠವನ್ನು ಕಲಿತೆ.

ಬಿಲ್ಲುಗಾರ:-ಲಕ್ಷ್ಯಕ್ಕೆ ಗುರಿ ಇಟ್ಟ ಬಿಲ್ಲುಗಾರನಿಗೆ ಹೇಗೆ ಪಕ್ಕದಲ್ಲಿ ಯಾವುದೇ ಮೆರವಣಿಗೆಯು ಹೋದರೂ, ಅದಾವುದರ ಪರಿವೆಯೂ ಇಲ್ಲದೇ ಕೇವಲ ಲಕ್ಷ್ಯದತ್ತ ಗುರಿ ಇರುತ್ತದೋ ಹಾಗೆಯೇ ನಮ್ಮ ಮನಸ್ಸಿಗೆ ಭಗವಂತನೊಬ್ಬನೇ ಲಕ್ಷ್ಯವಾಗಿರಬೇಕೆಂಬುದನ್ನು ಕಲಿತೆ.

ಕಣಜದ ಹುಳು: ಕಣಜದ ಹುಳುವೊಂದು ತನ್ನ ಆಹಾರಕ್ಕಾಗಿ ಬೇರೊಂದು ಹುಳುವನ್ನು ತಂದು ತನ್ನ ಗೂಡಿನಲ್ಲಿ ತಂದಿಟ್ಟಾಗ ಕೀಟವು ಕಣಜವನ್ನೇ ಭಯದಿಂದ ಧ್ಯಾನಿಸುತ್ತಾ ಕಣಜದ ತಾದಾತ್ಮ್ಯವನ್ನೇ ಪಡೆಯುವುದು. ಹಾಗೆಯೇ ಭಗವಂತನನ್ನೇ ನಿರಂತರ ಧ್ಯಾನಿಸುತ್ತಿದ್ದರೆ ಅಂತಹವರು ಭಗವಂತನ ಸಾರೂಪ್ಯ ಪಡೆಯುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಕಲಿತೆ.


ನಮ್ಮ ಲಕ್ಷ್ಯಸಾಧನೆಗೆ ಅನುಕೂಲವಾಗುವ ಅಂಶಗಳು ಏನಾದರೂ ನಿಸರ್ಗದಲ್ಲೇ ಇವೆಯೇ ಎಂಬ ಅನ್ವೇಷಕ ಬುದ್ಧಿಯಿಂದ ಆ ಅವಧೂತನು ನಿಸರ್ಗದ ವಸ್ತು, ಪ್ರಾಣಿಗಳಲ್ಲೆಲ್ಲಾ ಗುರುವೆಂದು ಭಾವಿಸಿದುದು ಮನೋಜ್ಞವಾಗಿದೆ. ನಮ್ಮನ್ನು ನಾವು ಜೀವನದ ಪರಮಲಕ್ಷ್ಯವಾದ ಸತ್ಯ ಸಾಕ್ಷಾತ್ಕಾರಕ್ಕಾಗಿ ಸಿದ್ಧಗೊಳಿಸಿಕೊಳ್ಳುವಾಗ ನಮ್ಮ ಮನಸ್ಸನ್ನು ಹೀಗೆ ತೆರೆದಿಟ್ಟು ಆ ಅವಧೂತನಂತೆ ಪ್ರೇರಣೆ ಪಡೆಯಬೇಕೆಂಬುದು ಇಲ್ಲಿಯ ಪಾಠ. ಮನುಷ್ಯನ ಬಂಧಮೋಕ್ಷಗಳಿಗೆ ಮನಸ್ಸೇ ಕಾರಣ. ಅದು ಅತ್ಯಂತ ಬಲವಾದ ಇಂದ್ರಿಯ. ಅದನ್ನು ಕಟ್ಟಿಹಾಕುವುದು ದುಷ್ಕರ.

"ಮದಿಸಿದ ಆನೆಯನ್ನಾದರೂ ಕಟ್ಟಿಹಾಕಬಹುದು ,ಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟ. ಪಳಗಿದ ಆನೆಯ ಸಹಾಯವಿದ್ದರೆ ಮದಿಸಿದ ಆನೆಯನ್ನೂ ಪಳಗಿಸಿಬಿಡಬಹುದಲ್ಲವೇ. ಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ" ಎಂಬುದು ಶ್ರೀರಂಗಮಹಾಗುರುಗಳ ಮಾತು.

ಸೂಚನೆ: 04/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.