Tuesday, August 11, 2026

(Vyaasa Vikshita 199)ಯಜ್ಞದ ವಿವಿಧ-ಕರ್ತವ್ಯಗಳ ವಿನಿಯೋಗಗಳು (Vyaasa Vikshita 199)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png


ಯಜ್ಞಕ್ಕಾಗಿ ಆಗಮಿಸಿದ  ಆ ರಾಜರುಗಳೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡವರಾಗಿ ಧರ್ಮರಾಜನನ್ನು ಬಂದು ಕಂಡರು. ಎಂತಹ ರಾಜನವನು? ಭೂರಿ-ದಕ್ಷಿಣೆಗಳನ್ನು ಕೊಡುವ ರಾಜ. ಭೂರಿಯೆಂದರೆ ಹೆಚ್ಚು. ಸದಸ್ಯರನೇಕರಿಂದ ಸುತ್ತುವರಿಯಲ್ಪಟ್ಟಿರುವನು. ಸದಸ್ಯರೆಂದರೆ ಸದಸ್ಸಿಗೆ ಸೇರುವವರು. ಸದಸ್ಸೆಂದರೆ ಸಭೆ. ಆತನ ಸದಸ್ಸು ರಾಜರುಗಳಿಂದಲೂ, ವಿಪ್ರರಿಂದಲೂ, ಮಹರ್ಷಿಗಳಿಂದಲೂ ಕಿಕ್ಕಿರಿದಿತ್ತು. ದೇವತೆಗಳಿಂದ ತುಂಬಿರುವ ನಾಕಲೋಕದ ಹಾಗೆ ಪ್ರಕಾಶಿಸುತ್ತಿತ್ತು. ನಾಕವೆಂದರೆ ಸ್ವರ್ಗ.

ಹೀಗೆ ಅನೇಕ ಅತಿಥಿಗಳು ಆಗಮಿಸುತ್ತಿರಲಾಗಿ, ಯುಧಿಷ್ಠಿರನು ಭೀಷ್ಮಪಿತಾಮಹರನ್ನೂ ಗುರುಗಳಾದ ದ್ರೋಣಾಚಾರ್ಯರನ್ನೂ ಎದುರುಗೊಂಡನು, ಅವರಿಗೆ ಆದರದಿಂದ ಅಭಿವಾದಿಸಿದನು. ಬಳಿಕ ಭೀಷ್ಮ, ದ್ರೋಣ, ಕೃಪ, ದ್ರೌಣಿ ಎಂದರೆ ದ್ರೋಣಪುತ್ರನಾದ ಅಶ್ವತ್ಥಾಮ, ದುರ್ಯೋಧನ ಹಾಗೂ ವಿವಿಂಶತಿ - ಇವರುಗಳಿಗೆ ಹೀಗೆ ಹೇಳಿದನು :

"ನನ್ನ ಈ ವಿಪುಲವಾದ ಧನವೇನುಂಟೋ ಅದನ್ನು ನೀವು ನಿಮ್ಮ ಇಚ್ಛೆಗೆ ಅನುಸಾರವಾಗಿ ಸತ್ಕರ್ಮದಲ್ಲಿ ತೊಡಗಿಸಬಹುದು" ಎಂದು.

ಅವರಿಗೆಲ್ಲ ಹೀಗೆ ಹೇಳಿದ ಯುಧಿಷ್ಠಿರನು ದೀಕ್ಷಿತನಾಗಿದ್ದು ಅವರುಗಳನ್ನು ಅವರವರ ಯೋಗಾನುಸಾರ ಬೇರೆ ಬೇರೆ ಅಧಿಕಾರಗಳಲ್ಲಿ ನಿಯೋಜಿಸಿದನು. ಹೀಗೆ: ಭಕ್ಷ್ಯ-ಭೋಜ್ಯಗಳ ಅಧಿಕಾರದಲ್ಲಿ ದುಃಶಾಸನನನ್ನು ತೊಡಗಿಸಿದನು. ವಿಪ್ರರ ಸ್ವಾಗತ-ಸತ್ಕಾರಗಳನ್ನು ಅಶ್ವತ್ಥಾಮನಿಗೆ ಒಪ್ಪಿಸಿದನು.

ನಾನಾ ರಾಜರುಗಳ ಸತ್ಕಾರದ ಕಾರ್‍ಯವನ್ನು ಸಂಜಯನಿಗೆ ವಹಿಸಿದನು. ಯಾವ ಕಾರ್ಯವು ನೆರವೇರಿದೆ, ಯಾವುದಿಲ್ಲ? - ಎಂಬುದನ್ನು ಅನ್ವವೇಕ್ಷಿಸಲು - ಎಂದರೆ ಪರಿಶೀಲಿಸುತ್ತಿರಲು - ಮಹಾಮತಿಗಳಾದ ಭೀಷ್ಮ-ದ್ರೋಣರನ್ನು ಒಪ್ಪಿಸಿದನು. ಒಳ್ಳೆಯ ಬಣ್ಣದ ಚಿನ್ನ ಹಾಗೂ ರತ್ನಗಳು - ಇವನ್ನು ನೋಡಿಕೊಳ್ಳಲು ಹಾಗೂ ದಕ್ಷಿಣೆಗಳನ್ನು ದಾನಮಾಡುವುದು - ಇವಕ್ಕೆ ಕೃಪಾಚಾರ್ಯರನ್ನು ನಿಯೋಜಿಸಿದನು. ಹೀಗೆಯೇ ಬೇರೆಬೇರೆ ಪುರುಷಶ್ರೇಷ್ಠರನ್ನು ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಸಿದನು.

ನಕುಲನು ಕರೆತಂದ ಬಾಹ್ಲಿಕ, ಧೃತರಾಷ್ಟ್ರ, ಸೋಮದತ್ತ, ಹಾಗೂ ಜಯದ್ರಥ - ಇವರುಗಳು ಪ್ರಭುಗಳಂತೆ ಅಲ್ಲಿ ರಮಿಸಿದರು.

ಧನ-ವ್ಯಯವನ್ನು ನೋಡಿಕೊಳ್ಳುವ ಕೆಲಸವು ಸರ್ವಧರ್ಮಜ್ಞನಾದ ವಿದುರನ ಪಾಲಿಗೆ ಬಂದಿತು. ಎಲ್ಲರ ಕಾಣಿಕೆಗಳನ್ನು ನೋಡಿಕೊಳ್ಳುವ ಕೆಲಸವು ದುರ್ಯೋಧನನಿಗಾಯಿತು. ಶ್ರೀಕೃಷ್ಣನು ಉತ್ತಮವಾದ ಫಲವನ್ನು ಪಡೆಯಲಿಚ್ಛಿಸುವವನಾಗಿ ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೆಲಸವನ್ನು ತಾನೇ ಕೈಗೊಂಡನು!

ಆ ಸಭೆಯನ್ನೂ ಯುಧಿಷ್ಠಿರನನ್ನೂ ನೋಡುವ ಬಯಕೆಯಿಂದ ಬಂದ ರಾಜರುಗಳಲ್ಲಿ ಯಾವನೊಬ್ಬನೂ ಸಾವಿರಕ್ಕೆ ಕಡಿಮೆಯ ಹೊನ್ನನ್ನು (ಎಂದರೆ ಸುವರ್ಣಮುದ್ರೆಯನ್ನು) ತಂದಿರಲಿಲ್ಲ. ಬಹುರತ್ನಗಳಿಂದ ಪ್ರತಿಯೊಬ್ಬರೂ ಆ ಧರ್ಮರಾಜನಿಗೆ ಧನವೃದ್ಧಿಯನ್ನುಂಟುಮಾಡಿದರು. ಆ ರಾಜರುಗಳಲ್ಲಿ ಒಂದು ಸ್ಪರ್ಧೆಯಿದ್ದಿತು - ನಾನು ಕೊಡುವ ರತ್ನದಾನವನ್ನು ಬಳಸಿಯೇ ಯುಧಿಷ್ಠಿರನು ಯಾಗವನ್ನು ಪೂರೈಸುವಂತಾಗಲಿ - ಎಂಬುದಾಗಿ.

ಅಲ್ಲಿಗೆ ಬಂದಿದ್ದವರ ಗೃಹಗಳು ಹೇಗಿದ್ದವು! ಅವುಗಳ ಮಹಡಿಗಳ ತುದಿಗಳು ದೇವತೆಗಳ ವಿಮಾನಗಳನ್ನು ಸ್ಪರ್ಶಿಸುತ್ತವೆಯೋ? - ಎಂಬಂತಿದ್ದವು! ಜಲಾಶಯಗಳಿಂದ ಕೂಡಿದವೂ, ರತ್ನಸಮೃದ್ಧಿಯುಳ್ಳವುಗಳೂ ತುಳುಕುವ ಸಂಪತ್ತಿನಿಂದ ಕಂಗೊಳಿಸತಕ್ಕವೂ ಆದ ಅಂತಹ ಭವನಗಳಿಂದಾಗಿ ಯುಧಿಷ್ಠಿರನ ಸಭೆಯು ಕಂಗೊಳಿಸಿತು.

ಸಮೃದ್ಧಿಯ ವಿಷಯದಲ್ಲಿ ಮಹಾದೇವನೊಂದಿಗೇ ಯುಧಿಷ್ಠಿರನು ಸ್ಪರ್ಧಿಸುತ್ತಿದ್ದನು! ಷಡಗ್ನಿಯಾದ ಯಜ್ಞವನ್ನು ಸದಕ್ಷಿಣವಾಗಿ ಧರ್ಮರಾಜನು ಆರಂಭಿಸಿದನು. ಷಡಗ್ನಿಗಳೆಂದರೆ ಆರು ಬಗೆಯ ಅಗ್ನಿಗಳು. ಅವು ಯಾವುವೆಂದರೆ ಆರಂಭಣೀಯ, ಕ್ಷತ್ರ, ಧೃತಿ, ವ್ಯುಷ್ಟಿ, ದ್ವಿರಾತ್ರ, ಹಾಗೂ ದಶಪೇಯ - ಎಂಬಿವು. ಸದಕ್ಷಿಣವೆಂದರೆ ಸತ್ಪಾತ್ರರಿಗೆ ದಕ್ಷಿಣೆಗಳನ್ನು ಕೊಟ್ಟಿರುವುದು.

ಸೂಚನೆ : 26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.