ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಬಯಸಿದುದೆಲ್ಲಾ ಬಂದೇಬಿಟ್ಟೀತು, ಜೋಕೆ!
ಎಷ್ಟೋ ಬಾರಿ ನಮಗೆ ಒಂದು ಪ್ರಶ್ನೆಯುಂಟಾಗುತ್ತದೆ - ಜೀವನದಲ್ಲಿ ತೃಪ್ತಿಯಿರಬೇಕೋ? ಇರಬಾರದೋ? - ಎಂದು.
ಏಕೆ? ತೃಪ್ತಿಯೂ ಒಳ್ಳೆಯದಲ್ಲ, ಅತೃಪ್ತಿಯೂ ಒಳ್ಳೆಯದಲ್ಲ! ಹೇಗೆ? ಅಲ್ಪತೃಪ್ತಿಯೇ ಇದ್ದುಬಿಟ್ಟರೆ ಮುಂದೆ ಮತ್ತಾವುದಕ್ಕೂ ಶ್ರಮಿಸಬೇಕೆನಿಸುವುದಿಲ್ಲ.
"ಹಾಸಿಗೆಯಿದ್ದಷ್ಟು ಕಾಲು ಚಾಚು" ಎಂಬ ಗಾದೆಯಿದೆ. ಹಾಗೆಂದರೇನು? ನಮ್ಮ ಮಿತಿಯನ್ನರಿತು ಬಾಳಬೇಕು; ಮಿತಿಮೀರಿದ ಅಭಿಲಾಷೆ ಬೇಡ - ಎಂದು.
ಒಂದು ಗಾದೆಯ ಮಾತನ್ನೇ ಅಷ್ಟೊಂದನುಸರಿಸುವುದೇ? - ಎಂದರೆ ಅದಕ್ಕೂ ಸಮರ್ಥಕವಾಗಿ ಮತ್ತೂ ಒಂದು ಗಾದೆಯೇ ಇದೆಯಲ್ಲವೇ: "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂದು!
ಆದರಿದೋ, ಪರಸ್ಪರ-ವಿರುದ್ಧವಾದ ಗಾದೆಗಳೂ ಇರುತ್ತವಲ್ಲವೇ? ಹಾಗಾದರೆ, ಮತ್ತೆ ನಮ್ಮ ವಿವೇಚನೆಗೆ ಕೆಲಸವಿದ್ದೇ ಇದೆಯೆಂದಾಯಿತು.
ಇನ್ನು ತೃಪ್ತಿಯ ಬದಲು ಅತೃಪ್ತಿಯೇ ಮನಸ್ಸಿನಲ್ಲಿ ಉಳಿದರಂತೂ ನೆಮ್ಮದಿಯೇ ಇರದಷ್ಟೆ. ಇವಿಷ್ಟರ ಮಥಿತಾರ್ಥವಿದು: ಅತೃಪ್ತಿಯಿರಬೇಕು: ಅದಿದ್ದರಲ್ಲವೇ ಮನುಷ್ಯನು ಮುಂದುಮುಂದಕ್ಕೆ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುವುದು? ಹಾಗೆಂದು ಅತೃಪ್ತಿಯೇ ಸದಾ ಇರುವುದಾದರೂ ಕಷ್ಟವೇ: ಏನೆಲ್ಲಾ ಸಾಧಿಸಿದರೂ ಹಂಬಲಗಳಿಗೊಂದು ನಿಲುಗಡೆಯೆಂಬುದೇ ಇಲ್ಲವಾಗಿ, ಸದಾ ಕೆರಳಿರುವಂತೆಯೇ ಆಗಿಬಿಡುವುದು. ಅಲ್ಲಿಗೆ ತೃಪ್ತಿ-ಅತೃಪ್ತಿಗಳಲ್ಲಿ ಏನೋ ಒಂದು ತೋಲನವಿರಬೇಕಾಗುತ್ತದೆ.
ಎಷ್ಟೋ ಬಾರಿ ನಾವು ಕೇಳುವ/ಕೇಳಿಕೊಳ್ಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವು ದೊರಕಿತೆಂದಾದರೂ, ಆ ಉತ್ತರದಲ್ಲೂ ಸ್ಪಷ್ಟತೆಯನ್ನು ಸಾಧಿಸಿಕೊಳ್ಳಬೇಕಾಗಿರುವುದು ಉಳಿದಿರುತ್ತದೆ. ಹೇಗೆ? "ನಾವು ಹೇಗೆ ಬದುಕಬೇಕು?" - ಎಂಬುದು ಪ್ರಶ್ನೆಯಾದರೆ, ಅದಕ್ಕೆ "ತಾನೂ ಇತರರೂ ಚೆನ್ನಾಗಿರುವಂತೆ ಬದುಕಬೇಕು" ಎಂಬುದೊಂದು ಒಳ್ಳೆಯ ಉತ್ತರ. ಆದರೆ ಜೊತೆಗೇ, "ಚೆನ್ನು ಎಂದರೇನು?” - ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರಕೊಡುವುದು ಸುಲಭವಲ್ಲ, ಅಲ್ಲವೇ?
ನಾವು ಚೆನ್ನಾಗಿ ಬದುಕಬೇಕೆಂದರೆ, ಏನನ್ನಾದರೂ ದೊಡ್ಡದನ್ನು ಸಾಧಿಸಬೇಕು ಎನ್ನುವುದುಂಟು. ದೊಡ್ಡದಕ್ಕಾಗಿ ತಪಸ್ಸು ಬೇಕು ಎನ್ನುವರಲ್ಲವೇ? "ಯಾವಯಾವುದು ದುರ್ಲಭವೋ, ಯಾವಯಾವುದು ದುಷ್ಕರವೋ, ಅದನ್ನೆಲ್ಲಾ ತಪಸ್ಸಿನಿಂದ ಸಾಧಿಸಬಹುದು: ತಪಸ್ಸಿಗೆ ಎಟುಕದುದುಂಟೇ?” – ಎಂದಿದ್ದಾನೆ, ಮನು.
ಉಕ್ತಿಮಾತ್ರವಲ್ಲ; ಹಾಗೆ ತಪಸ್ಸು ಮಾಡಿ, ಇತರರಿಗೆ ಸಾಧ್ಯವಾಗದುದನ್ನು ಸಾಧಿಸಿದ ಅನೇಕರ ಕಥೆಗಳು ನಮ್ಮ ಇತಿಹಾಸ-ಪುರಾಣಗಳಲ್ಲುಂಟಷ್ಟೆ?
ಹೀಗಾಗಿ, ಬೇಕಾದುದನ್ನೆಲ್ಲ ತಪಸ್ಸಿನಿಂದ ಸಾಧಿಸಿಕೊಳ್ಳಬಹುದೆಂದುಕೊಂಡರೂ, ಎಲ್ಲವೂ ಸ್ಪಷ್ಟವಾಯಿತೆಂದಲ್ಲ. ಏಕೆ? ತಪಸ್ಸು ಮಾಡಿಯೂ ಕಂಗೆಟ್ಟವರಿಲ್ಲವೇ?
ಮತ್ತೆ ಪ್ರಶ್ನೆ: ತಪಸ್ಸನ್ನು ಮಾಡಿದವರಿಗೆಲ್ಲಾ ವರವೀಯುವವನು ಭಗವಂತನೇ ಅಲ್ಲವೇ? ಆದರೂ ಹಾಳಾದವರುಂಟೇ?
ಉಂಟೇ ಉಂಟು. ಹತ್ತು ತಲೆಯ ರಾವಣನೂ ಸತ್ತುಹೋದನಲ್ಲವೇ? ಭಸ್ಮಾಸುರನು ತಾನೇ ಭಸ್ಮವಾಗಿಬಿಡಲಿಲ್ಲವೇ? ಹಿರಣ್ಯಕಶಿಪುವಿಗೆ ಎಂತಹ ಕ್ರೌರ್ಯದ ಮರಣ ಸಂದಿತಲ್ಲವೇ? ಇವರೆಲ್ಲರೂ ತಪಸ್ಸು ಮಾಡಿದ್ದವರೇ; ಘೋರವಾದ ತಪಸ್ಸನ್ನೇ ಆಚರಿಸಿದ್ದವರೇ!
ತಪಸ್ಸಿಗಿಂತಲೂ ಉತ್ತಮವಾದ ಸಾಧನವಿಲ್ಲವೆಂದರೂ ಹೀಗೇಕೆ ಈ ತಪಸ್ವಿಗಳಿಗೆಲ್ಲಾ ಘೋರಪತನವಾಯಿತು? ತಪೋಲಬ್ಧವಾದ ಅನುಪಮ-ಬಲವಿದ್ದೂ ಒಬ್ಬೊಬ್ಬನೂ ಲೋಕ-ಕಂಟಕನೂ ಆತ್ಮ-ಘಾತಕನೂ ಆಗಿಬಿಟ್ಟನಲ್ಲಾ? ಹಾಗಿದ್ದರೆ ಇವರೆಲ್ಲಾ ಎಡವಿದ್ದೆಲ್ಲಿ?
ಇದರ ಉತ್ತರವನ್ನು ಭಾವನೋಪನಿಷತ್ತಿನ ಒಂದು ಸುಂದರವಾದ ಕಿರುನುಡಿಯಲ್ಲಿ ಕಂಡುಕೊಳ್ಳಬಹುದು: “ಸಂಕಲ್ಪಾಃ ಕಲ್ಪತರವಃ” (ನಮ್ಮ ಸಂಕಲ್ಪಗಳೇ ಕಲ್ಪವೃಕ್ಷಗಳು!) – ಎಂಬ ಮಾತದು.
ಶ್ರೀರಂಗಮಹಾಗುರುಗಳ ಒಂದು ಮಾತು ಈ ಸಂದರ್ಭದಲ್ಲಿ ಮನನೀಯವಾಗಿದೆ: "ಭಗವಂತನು ಎಲ್ಲರಿಗೂ ಒಂದೇ ಆಶೀರ್ವಾದವನ್ನು ಮಾಡಿದ್ದಾನೆ: ಹೇಗೆ ಮನಸ್ಸಿದ್ದರೆ ಹಾಗೆ ಬಾಳು - ಎಂಬುದಾಗಿ. ಮನಸ್ಸು ಒಂದು ಕಲ್ಪವೃಕ್ಷ: ಏನನ್ನು ಸಂಕಲ್ಪಿಸುತ್ತೇವೆಯೋ ಅದಕ್ಕನುಗುಣವಾದ ಫಲವನ್ನು ಪಡೆಯುತ್ತೇವೆ"!
ರಾವಣಾದಿಗಳು ಉಗ್ರವಾದ ತಪಸ್ಸನ್ನೇನೋ ಮಾಡಿದರು. ಆದರೆ ತಮ್ಮತಮ್ಮ ಸಂಕಲ್ಪದಂತೆ ಕ್ಷುದ್ರ-ಫಲಗಳನ್ನೇ ಕೇಳಿಕೊಂಡರು - ಅವೇ ನಮಗೆ ಅದ್ಭುತವೆನಿಸುವುದಾದರೂ!
ಬ್ರಹ್ಮನ ಕೆಲಸವೊಂದೇ: ಎಲ್ಲರಿಗೂ ಅವರವರ ಸಂಕಲ್ಪಕ್ಕೆ “ತಥಾಸ್ತು” ಎನ್ನುವುದು. ಎಂದೇ, ಕೇಳಿಕೊಳ್ಳುವಾಗಲೇ ಸರಿಯಾದ ವರವನ್ನೇ ಹೇಳಿಕೊಳ್ಳಬೇಕು! ಕಾರ್ಯಾರಂಭದಲ್ಲೇ ಸಂಕಲ್ಪವು ಯುಕ್ತವಾಗಿರಬೇಕು! ಇಲ್ಲವೋ, ಸ್ವ(ಕೀಯ)ನಾಶವು ಸಿದ್ಧ!
ಚಿಂತಿಸಿದ್ದನ್ನೆಲ್ಲಾ ಕೊಡುವ ಚಿಂತಾಮಣಿ/ಕಾಮಧೇನು/ಕಲ್ಪವೃಕ್ಷಗಳು ದೇವಲೋಕದಲ್ಲಿವೆಯೆನ್ನುತ್ತಾರೆ. ಅದು ಸುಳ್ಳಲ್ಲ; ಆದರೆ ನಮ್ಮೊಳಗೇ ಇರುವ ಕಲ್ಪವೃಕ್ಷವೊಂದನ್ನು ನಾವು ಗಮನಿಸುತ್ತಿಲ್ಲ: ನಮ್ಮ ಸಂಕಲ್ಪವೇ ಅದು!
ಸತ್ಸಂಕಲ್ಪಬೀಜಗಳಿಗೆ ಸಂತತ-ಸಾಧನೆಯೆಂಬ ಸಲಿಲ-ಸೇಕವಿದ್ದಲ್ಲಿ ಸ್ವಹಿತ-ಪರಹಿತಗಳೆಂಬ ಸತ್ಫಲಗಳು ಸೊಂಪಾಗಿ ಸಂಪಾದಿತವಾಗುವುವೆಂಬುದರಲ್ಲಿ ಸಂಶಯವೇನು?
ಯಾವುವು ಸತ್ಸಂಕಲ್ಪಗಳು? ಎರಡೇ: ದೇಶಹಿತ-ಸಾಧನವೆಂಬುದೊಂದು; ಆತ್ಮಜ್ಞಾನ-ಸಾಧನವೆಂಬುದೊಂದು. ಉಳಿದೆಲ್ಲ ಬಯಕೆಗಳೂ ಇವಕ್ಕೆ ಅಂಗಭೂತವಾಗಿರುವುದೇ ತೆರನಾದುದು.
ದೇಶಸೇವೆ-ಈಶಸೇವೆಗಳಿಗಾಗಿ ಜೀವತೇಯುವವರಿಗಿಂತಲೂ ಧನ್ಯರುಂಟೆ? ಚೆನ್ನಿನ ಜೀವನವೆಂಬುದೊಂದಿದ್ದರೆ ಅವರದೇ! ಇವೆರಡೂ ಸಂಪೂರ್ಣವಾಗಿ ಸಾಧಿತವಾಗುವ ತನಕ ಅತೃಪ್ತಿಯೇ; ಎಷ್ಟೆಷ್ಟು ಸಾಧಿತವಾದರಷ್ಟಷ್ಟು ತೃಪ್ತಿಯೇ!
ಸೂಚನೆ: 1/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.