Sunday, August 23, 2026

(Vyaasa Vikshita 202) ರಾಜಸಭೆಯಲ್ಲಿ ಶಿಶುಪಾಲನ ಆಕ್ರೋಶ (Vyaasa Vikshita 202)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಕೃಷ್ಣನಿಗೆ ಅಗ್ರಪೂಜೆಯೆಂಬುದನ್ನು ಪ್ರತಿಭಟಿಸಿ ಶಿಶುಪಾಲನು ಭೀಷ್ಮ-ಯುಧಿಷ್ಠಿರರನ್ನು ಮೂದಲಿಸಿ ಹೇಳುತ್ತಿದ್ದಾನೆ:

“ಭೀಷ್ಮನೇ, ನಿನ್ನಂತಹ ಧರ್ಮಾತ್ಮನಾದವನೂ ಸಹ ಯಾರಿಗೋ ಪ್ರಿಯವಾದುದನ್ನು ಮಾಡಬೇಕೆಂಬ ಬಯಕೆಯಿಂದ ಅತಿಯಾದ ವರ್ತನೆಯನ್ನು ತೋರಿದರೆ, ಲೋಕದಲ್ಲಿ ಸಜ್ಜನರಿಂದ ಅವಮಾನಕ್ಕೆ ಪಾತ್ರನಾಗಬೇಕಾದೀತು.

ಈ ಕೃಷ್ಣನಾದರೂ ರಾಜನೇ ಅಲ್ಲ. ಹಾಗಿರಲು ಸಮಸ್ತ ರಾಜರುಗಳ ನಡುವೆ ನೀವುಗಳು ತೋರಿಸಿರುವ ಆದರಕ್ಕೆ ಅವನು ಅದೆಂತು ಪಾತ್ರನಾದಾನು? ಒಂದು ವೇಳೆ ಕೃಷ್ಣನನ್ನು ಸಾಕಷ್ಟು ವಯಸ್ಸಾದವನೆಂದು ನೀನು ಭಾವಿಸುವೆಯಾದರೆ, ಆತನ ತಂದೆಯೂ ವೃದ್ಧನೂ ಆದ ವಸುದೇವನೇ ಇಲ್ಲಿರಲಾಗಿ, ಆತನ ಮಗನು ಇದಕ್ಕೆ ಹೇಗೆ ತಾನೆ ಅರ್ಹನಾದಾನು?

ಒಂದು ವೇಳೆ ವಾಸುದೇವನು ನಿಮ್ಮಗಳಿಗೆ ಪ್ರಿಯವಾದುದನ್ನು ಮಾಡತಕ್ಕವನು, ಹಾಗೂ ನಿಮ್ಮನ್ನು ಅನುಸರಿಸತಕ್ಕವನು - ಎಂಬುದೇ ಲೆಕ್ಕವಾದರೆ, ದ್ರುಪದನಿಲ್ಲಿರುವಾಗ ಮಾಧವನಿಗೆಂತು ಪೂಜೆಯು ಸಂದೀತು?

ಅಯ್ಯಾ ಕುರುನಂದನ, ಒಂದು ವೇಳೆ ಕೃಷ್ಣನನ್ನು ನೀನು ಆಚಾರ್ಯನೆಂಬುದಾಗಿ ಭಾವಿಸುವೆಯಾದರೆ, ದ್ರೋಣರೇ ಇಲ್ಲಿರಲು ಅದೆಂತು ಕೃಷ್ಣನ ಅರ್ಚನೆಯನ್ನು ಮಾಡಿರುವೆ?

ಅಲ್ಲಯ್ಯಾ, ಒಂದು ವೇಳೆ ನೀನು ಕೃಷ್ಣನನ್ನು ಋತ್ವಿಕ್ಕು ಎಂದು ಭಾವಿಸುವುದಾದರೆ, ವೃದ್ಧರಾದ ದ್ವೈಪಾಯನರೇ ಇಲ್ಲಿರಲಾಗಿ ಕೃಷ್ಣನಿಗೆ ನೀನು ಅರ್ಚನೆಯನ್ನು ಮಾಡಿದ್ದಾದರೂ ಹೇಗೆ?

ಇನ್ನು ಭೀಷ್ಮರು: ಅವರು ಪುರುಷಶ್ರೇಷ್ಠರು. ಸ್ವಚ್ಛಂದ-ಮೃತ್ಯುಗಳು - ಎಂದರೆ ಬೇಕೆನಿಸಿದಾಗ ಪ್ರಾಣಬಿಡಲು ಸಮರ್ಥರಾಗಿರತಕ್ಕವರು. ಅವರಿರುವಾಗ ಕೃಷ್ಣನ ಅರ್ಚನೆಯೇ?

ಸರ್ವಶಾಸ್ತ್ರವಿಶಾರದನಾದ ವೀರ ಅಶ್ವತ್ಥಾಮನು ಇರುವಾಗ ಕೃಷ್ಣನಿಗೆ ಅರ್ಚನೆಯೆಂಬುದು ಸಂದಿತೆಂತು? ಅಲ್ಲದೆ, ರಾಜರಾಜನಾದ ದುರ್ಯೋಧನನಿಲ್ಲವೇ, ಪುರುಷಶ್ರೇಷ್ಠನಾಗಿ? ಅಥವಾ ಭರತವಂಶಕ್ಕೇ ಆಚಾರ್ಯರೆನಿಸುವ ಕೃಪಾಚಾರ್ಯರಿಲ್ಲವೇ? ಅವರಿರುವಾಗ ಕೃಷ್ಣಾರ್ಚನೆಯೇ? ಕಿಂಪುರುಷರ ಆಚಾರ್ಯನಾದ ದ್ರುಮ, ಇವರಲ್ಲದೆ ಸುಲಕ್ಷಣನಾದ ಭೀಷ್ಮಕ, ರುಕ್ಮಿ, ಏಕಲವ್ಯ, ಶಲ್ಯ - ಇವರೆಲ್ಲ ಇಲ್ಲವೇ?

ಅನೇಕ ರಾಜರನ್ನು ಯುದ್ಧದಲ್ಲಿ ಜಯಿಸಿರುವವನೂ, ಪರಶುರಾಮನ ಶಿಷ್ಯನೂ ಆಗಿರುವ ಕರ್ಣನೇ ಇಲ್ಲಿರುವಾಗ, ನೀನು ಕೃಷ್ಣನನ್ನು ಅರ್ಚಿಸುವುದೆಂತು? ಇತ್ತ ಋತ್ವಿಕ್ಕಲ್ಲ, ಅಥವಾ ಆಚಾರ್ಯನಲ್ಲ, ಅತ್ತ ರಾಜನಲ್ಲ. ಹೀಗಿರುವಾಗ ಅಂತಹ ಕೃಷ್ಣನಿಗೆ ಅರ್ಚನೆಯೆಂದರೆ ಅದಕ್ಕೆ ಕಾರಣವೇನು? - ನಿನಗಾವುದೋ ಪ್ರಿಯವಾದ ಕಾಮನೆಯು ಪೂರ್ತಿಗೊಳ್ಳಬೇಕಾಗಿದೆಯೆಂಬುದನ್ನು ಬಿಟ್ಟರೆ ಮತ್ತಿನ್ನೇನು?

ಅಥವಾ ನಿಮ್ಮ ಲೆಕ್ಕದಲ್ಲಿ ಈ ಮಧುಸೂದನನೇ ಅರ್ಚನೆಗೆ ಯೋಗ್ಯವೆಂಬುದಾದರೆ, ಇಲ್ಲಿಗೆ ಈ ರಾಜರನ್ನೆಲ್ಲ ಕರೆತಂದು ಅವಮಾನಪಡಿಸುವುದೇತಕ್ಕೆ? ಮಹಾತ್ಮನಾದ ಯುಧಿಷ್ಠರನಿಗೆ ನಾವೆಲ್ಲ ಕರವನ್ನು ಕೊಡುತ್ತಿರುವೆವೆಂದರೆ ಅದೇನೂ ಈತನ ವಿಷಯದಲ್ಲಿಯ ಭಯಕ್ಕಾಗಿಯಲ್ಲ, ಅಥವಾ ಯಾವುದೇ ಲೋಭಕ್ಕಲ್ಲ, ಮತ್ತಾವುದೇ ಆಶ್ವಾಸನೆಗಾಗಿಯೂ ಅಲ್ಲ. ನಾವಂದುಕೊಂಡದ್ದು ಈ ಯುಧಿಷ್ಠಿರನು ಧರ್ಮಿಷ್ಠನೆಂದು. ಸಮ್ರಾಟನಾಗಲು ಬಯಸಿರುವನೆಂದು. ನಾವೇನೋ ಈತನಿಗೆ ಕರವನ್ನು ಕೊಡುತ್ತಿದ್ದೇವೆ. ಆದರೆ ಈತನು ನಮ್ಮನ್ನು ಗಣನೆಗೇ ತೆಗೆದುಕೊಳ್ಳನೇ!

ಛತ್ರ-ಚಾಮರಾದಿಲಕ್ಷಣಗಳನ್ನೇ ಪಡೆದಿಲ್ಲದ ಈ ಕೃಷ್ಣನಿಗೆ ನೀನು ಪೂಜೆಯನ್ನು ಸಲ್ಲಿಸಿರುವೆಯೆಂದರೆ ರಾಜರುಗಳ ಸಭೆಯಲ್ಲಿ ಇದು ಅವಮಾನವಲ್ಲದೆ ಮತ್ತಿನ್ನೇನು? ಧರ್ಮಪುತ್ರನಾದ ಈ ಯುಧಿಷ್ಠಿರನಿಗೆ ಧರ್ಮಾತ್ಮನೆಂಬ ಯಶಸ್ಸೇನೋ ಸಂಪ್ರಾಪ್ತವಾಯಿತು. ಆದರೆ ಧರ್ಮಚ್ಯುತನಾದ ಅದಾವನಿಗೆ ಈ ರೀತಿಯಾಗಿ ಯಾರಾದರೂ ಪೂಜೆಯನ್ನು ಸಲ್ಲಿಸಿಯಾರು? ವೃಷ್ಣಿವಂಶದಲ್ಲಿ ಜನಿಸಿದ ಈ ದುರಾತ್ಮನು ಕೆಲಕಾಲದ ಹಿಂದೆ ಮಹಾತ್ಮನಾದ ಜರಾಸಂಧನನ್ನು ನ್ಯಾಯವಲ್ಲದ ಬಗೆಯಲ್ಲಿ ಕೊಲೆಗೈದಿರುವನು!

ಈಗ ಯುಧಿಷ್ಠಿರನಿಂದ ಧರ್ಮಾತ್ಮತೆಯೆಂಬುದು ದೂರ ಸರಿದಿದೆ; ಕೃಷ್ಣನಿಗೆ ಅರ್ಘ್ಯವೆಂಬುದನ್ನು ಸಲ್ಲಿಸಿರುವುದಾದ್ದರಿಂದ ತನ್ನ ಕೃಪಣತೆಯನ್ನೇ ಆತ ತೋರಿಸಿರುವುದಾಗಿದೆ.”

ಸೂಚನೆ :23/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 80 (Prasnottara Ratnamalike 80)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೮೦. ಯಾವ ಸಭೆಯನ್ನು ತ್ಯಾಗ ಮಾಡಬೇಕು?

ಉತ್ತರ- ವೃದ್ಧ ಸಚಿವರು ಇಲ್ಲದ ಸಭೆಯನ್ನು.


ಯಾವ ಸಭೆಯನ್ನು ತ್ಯಾಗ ಮಾಡಬೇಕು? ಎಂಬುದನ್ನು ತಿಳಿಯಬೇಕಾದರೆ ‘ಸಭೆ’ ಎಂದರೆ ಏನು? ಎಂಬುದನ್ನು ಮೊದಲು ತಿಳಿಯಬೇಕು. ಸಭಾ ಎಂದರೆ ‘ಸಹ ಭಾಂತಿ-ಶೋಭಂತೇ’ ಯಾರು ಇದ್ದರೆ ಅದು ಶೋಭಿಸುತ್ತದೆಯೋ ಅದು. ಭಾ ಎಂದರೆ ಬೆಳಕು, ಬೆಳಗುವುದು ಎಂದರ್ಥ. ಯಾವುದು ಶೋಭಿಸುತ್ತದೆಯೋ ಅದಕ್ಕೆ ‘ಸಭೆ’ ಎಂದು ಹೆಸರು. ಶೋಭಿಸಬೇಕಾದರೆ ಅಲ್ಲಿ ಅತ್ಯಂತ ಮುಖ್ಯವಾದದ್ದು ಯಾವುದು? ಎಂಬುದನ್ನು ಮಹಾಭಾರತದಲ್ಲಿ ವಿದುರ ಹೀಗೆ ಹೇಳುತ್ತಾನೆ - “ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ  ನ ತೇ  ವೃದ್ಧಾಃ ಯೇ ನ ವದಂತಿ ಧರ್ಮಮ್”  ಎಲ್ಲಿ ವೃದ್ಧರು ಇರುವುದಿಲ್ಲವೋ ಅದನ್ನು ಸಭೆ ಎಂದು ಹೇಳಲಾಗದು. ಯಾವ ವೃದ್ಧರು ಧರ್ಮವನ್ನು ಹೇಳುವುದಿಲ್ಲವೋ ಅವರನ್ನು ವೃದ್ಧರು ಎಂದೂ ಹೇಳಲು ಸಾಧ್ಯವಾಗದು.


ಅಂದರೆ ಧರ್ಮವನ್ನು ತಿಳಿಯದೆ ಕೇವಲ ವಯಸ್ಸು ಮಾತ್ರ ಹೆಚ್ಚಾದರೆ ಅವರನ್ನು ವೃದ್ಧರು ಎಂದು ಹೇಳಲು ಸಾಧ್ಯವಿಲ್ಲ ಎಂದರ್ಥ. ವೃದ್ಧರಾಗುತ್ತ ವೃದ್ಧರಾಗುತ್ತ ಅವರಲ್ಲಿ ಜ್ಞಾನವೂ ಹೆಚ್ಚಾಗಬೇಕಾಗುತ್ತದೆ. ಬಾಲ್ಯದಲ್ಲಿ ಚೆನ್ನಾಗಿ ಅಧ್ಯಯನ ಮಾಡಿ, ಯೌವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಅದರಿಂದ ಬರುವ ಆ ಅನುಭವಪಕ್ವತೆಯನ್ನೇ ನಿಜವಾದ ವೃದ್ಧತ್ವವೆಂದು ಕರೆಯಬೇಕು. ಒಬ್ಬ ವೃದ್ಧನಾದವನು ಕೇವಲ ವಯಸ್ಸಿನಿಂದ ಮಾತ್ರ ವೃದ್ಧನಾಗದೆ ಜ್ಞಾನದಿಂದಲೂ ವೃದ್ಧನಾಗಿರಬೇಕು ಎಂದರ್ಥ. ಇಂತಹ ವೃದ್ಧನಿರುವ ಜಾಗವನ್ನು ‘ಸಭೆ’ ಎಂಬುದಾಗಿ ಕರೆಯಲಾಗಿದೆ.


ಇಂತಹ ಜ್ಞಾನವೃದ್ಧರು, ವಯೋವೃದ್ಧರೂ ಆದ ಸಚಿವರು - ಮಂತ್ರಿಗಳು ಯಾವ ಸಭೆಯಲ್ಲಿ ಇರುತ್ತಾರೋ ಆ ಸಭೆಯು ಅತ್ಯಂತ ಪೂಜ್ಯವಾದದ್ದು ಶ್ರೇಷ್ಠವಾದದ್ದು. ಒಂದು ವೇಳೆ ಇಂತಹ ಸಚಿವರು ಇಲ್ಲದಿದ್ದರೆ ಆ ಸಭೆಯನ್ನು ತ್ಯಾಗ ಮಾಡಬೇಮಾಡಬೇಕು ಎಂದು ಸಭೆಗೆ ವೃದ್ಧರ ಅವಶ್ಯತೆಯನ್ನು ಸಾರಲಾಗಿತ್ತಿದೆ. ಯಾವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಪ್ರಶ್ನೆಗೆ, ವೃದ್ಧಸಚಿವರು ಇಲ್ಲದಿರುವ ಸಭೆಯನ್ನು ತ್ಯಾಗ ಮಾಡಬೇಕು ಎಂಬುದು ಉತ್ತರವಾಗಿದೆ. ಸಚಿವನಾದವನು ಜ್ಞಾನಿಯಾಗಿರಬೇಕು. ಅವನು ರಾಜ್ಯದ ಎಲ್ಲ ರೀತಿಯ ಯೋಗಕ್ಷೇಮವನ್ನು ನೋಡಿಕೊಳ್ಳುವ ಅತ್ಯಂತ ಗುರುತರವಾದ ಜವಾಬ್ದಾರಿಯುತ ಸ್ಥಾನವನ್ನು ಪಡೆದಿರುತ್ತಾನೆ. ಅಂತಹ ಸಚಿವರನ್ನು ಪಡೆದಂತಹ ರಾಜನು ಧನ್ಯ. ಅಂತಹ ರಾಜ್ಯ ಸಮೃದ್ಧ. ರಾಜನಾದವನು ತನ್ನ ರಾಜ್ಯಕ್ಕಾಗಿ ರಾಜ್ಯದ ಆಗುಹೋಗುಗಳಿಗಾಗಿ ಚರ್ಚೆಯನ್ನು ಮಾಡಿ ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ಇಂತಹ ಒಬ್ಬ ಜ್ಞಾನವೃದ್ಧನಾದ ಮಂತ್ರಿ ಇರಬೇಕಾಗುತ್ತದೆ. ಏಕೆಂದರೆ ಅವನು ಎಲ್ಲವನ್ನೂ ತಿಳಿದಿರುತ್ತಾನೆ. ಅವನು ಧರ್ಮವನ್ನು ತಿಳಿದಿದ್ದಾನೆ ಎಂದರ್ಥ. ಧರ್ಮವನ್ನು ತಿಳಿದವರು ಮಾತ್ರ ಸಚಿವನಾಗಬಲ್ಲ.


ಧರ್ಮವನ್ನು ತಿಳಿಸುವ ವೇದ, ಶಾಸ್ತ್ರ, ಪುರಾಣ ಮೊದಲಾದ ವಿದ್ಯೆಗಳಲ್ಲಿ ಪರಿಣತರಾಗಿರಬೇಕು. ಆಗ ಮಾತ್ರ ಧರ್ಮವನ್ನು ತಿಳಿಯಲು ಸಾಧ್ಯ. ಇಂತಹ ಒಬ್ಬ ಸಚಿವನು ಸಭೆಯಲ್ಲಿದ್ದರೆ ಆ ಸಭೆ ಶೋಭಿಸುತ್ತದೆ, ಬೆಳಗುತ್ತದೆ. ಹಾಗಿಲ್ಲದಿದ್ದರೆ ಆ ಸಭೆ ಅಜ್ಞಾನದಿಂದ ಕೂಡಿರುತ್ತದೆ. ಅಂತಹ ಸಭೆಯು ತ್ಯಾಗ ಮಾಡಲು ಯೋಗ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತದೆ.


ಸೂಚನೆ :23/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  


ಗುರುಭಕ್ತಿಯ ಅವಶ್ಯಕತೆ ಆ ಮಹಿಮೆಯು ಅರಿವಾಗುತ್ತದೆ....! (Gurubhaktiya Aashyakate Aa Mahimeyu Arivaguttade....!)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

image.png
ಇಂದು ಭಕ್ತಿಯೆನ್ನುವುದು ನಮ್ಮ ಕೀಳರಿಮೆ, ದಾಸ್ಯದ ಮನೋಭಾವದಿಂದ ಬಂದಿರುವುದು, ಅದು ನಿರಾಶಾವಾದ ಮತ್ತು  ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆಯೆಂದು ಹೇಳುವ  ಪ್ರಸಿದ್ಧ ವ್ಯಕ್ತಿಗಳು ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಇಲ್ಲದಿಲ್ಲ.   ಜೀವನವನ್ನು ಸಕಾರಾತ್ಮಕ, ಜವಾಬ್ದಾರಿಯುತ ರೀತಿಯಲ್ಲಿ ನಡೆಸಲು ಭಕ್ತಿ, ಪ್ರಾರ್ಥನೆಗಳು ಗಮನಾರ್ಹವಾದ ಬೆಂಬಲವನ್ನು ಕೊಡುತ್ತವೆಯೆಂದು  ಆಧುನಿಕ ವೈದ್ಯಕೀಯ ಮತ್ತು ನರವೈದ್ಯಶಾಸ್ತ್ರವು ಅದರ ವ್ಯಾಪ್ತಿಯಮಿತಿಯ ಲ್ಲಿ ಬರುವ ಸಂಶೋಧನೆಗಳಿಂದ ಪುಷ್ಟಿಕರಿಸುತ್ತವೆ.
ಹಾಗಾದರೆ, ಭಕ್ತಿಯೆಂದರೇನು? ಭಕ್ತಿ ಎನ್ನುವ ಪದ ಭಜ್ — ಸೇವಾಯಾಮ್ ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಪರಮಮಾತ್ಮನ ಮೇಲಿನ ಪ್ರೀತಿ, ಸೇವೆ, ಸಮರ್ಪಣೆ ಎಂಬ ಅರ್ಥದಲ್ಲಿ ಪ್ರಸಿದ್ಧವಾಗಿದೆ. ಶಾಂಡಿಲ್ಯ ಭಕ್ತಿ ಸೂತ್ರವು "ಸಾ ಪರಾ ಅನುರಕ್ತಿರೀಶ್ವರೇ" ಈಶ್ವರನ ಮೇಲಿರುವ ಪರಮ, ಅವಿಚ್ಛಿನ್ನ ಮತ್ತು ಅನನ್ಯ ಪ್ರೀತಿಯೇ ಭಕ್ತಿ.ಎಂದು ಹೇಳುತ್ತದೆ. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು " ಭಕ್ತಿಯ ಮೂಲಕವೇ ನಾನು ಯಾರು, ನನ್ನ ನಿಜಸ್ವರೂಪವೇನು ಎಂಬುದನ್ನು ಯಥಾರ್ಥವಾಗಿ ತಿಳಿಯಲು ಸಾಧ್ಯವಾಗುತ್ತದೆ. ಹೀಗೆ ನನ್ನನ್ನು ತತ್ತ್ವತಃ ಅರಿತ ಬಳಿಕ, ಭಕ್ತನು ನನ್ನನ್ನು ಹೊಂದಿ ನನ್ನ ದಿವ್ಯಸಾನ್ನಿಧ್ಯವನ್ನು ಪಡೆಯುತ್ತಾನೆ." ಎಂದು ಘೋಷಿಸುತ್ತಾನೆ. ಆದಿ ಶಂಕರರೂ ಅದ್ವೈತ ವೇದಾಂತದಲ್ಲಿ ಭಕ್ತಿ ಮತ್ತು ಜ್ಞಾನವು ಪರಸ್ಪರ ವಿರೋಧತತ್ವಗಳಲ್ಲ ,  ಪೂರಕವಾದ ವಿಷಯಗಳು ; ಆತ್ಮಜ್ಞಾನದತ್ತ ಕೊಂಡೊಯ್ಯುವ ವಿಧಾನಗಳಲ್ಲಿ ಭಕ್ತಿಯೇ ಶ್ರೇಷ್ಟವೆಂಬುದಾಗಿ ಸ್ಪಷ್ಟಪಡಿಸುತ್ತಾರೆ. ಭಾಗವತಪುರಾಣವು, ಪರಮಾತ್ಮನ ದಿವ್ಯ ಲೀಲೆಗಳನ್ನು ಕೇಳದ ಕಿವಿಗಳು ಕೇವಲ ರಂಧ್ರಗಳಂತಿವೆ. ಭಗವಂತನ ಕೀರ್ತನೆಯನ್ನು ಹಾಡದ ನಾಲಿಗೆಯು ಕಪ್ಪೆಯ ನಾಲಿಗೆಯಂತೆ ವ್ಯರ್ಥವೆನ್ನುತ್ತದೆ.

 ಗುರುವೆಂಬ ಪ್ರತಿನಿಧಿಯು ತನ್ನೊಳಗೆ (ಪರಮಾತ್ಮನೆಂಬ)  ನಿಧಿಯನ್ನಿಟ್ಟುಕೊಂಡು ಭಗವದಾಶಯವನ್ನು ಜಾರಿಮಾಡುತ್ತಾನೆ. ಹನುಮಂತನು ಸೀತೆಗೆ ಶ್ರೀರಾಮಚಂದ್ರನ ಸಂದೇಶ ಮತ್ತು ಮುದ್ರಿಕೆಯನ್ನು ನೀಡಿ, ಸೀತಾದೇವಿಗೆ ಭರವಸೆಯನ್ನು ಕೊಟ್ಟು ದುಃಖದಿಂದ ಪಾರುಮಾಡಿದಂತೆ, ಪ್ರತಿಯೊಬ್ಬ ಗುರುವೂ ಭವಬಂಧನದಲ್ಲಿರುವ ಜೀವಾತ್ಮನನ್ನು ಪರಮಾತ್ಮನಿಗೆ ಸೇರಿಸುವ ಜವಾಬ್ದಾರಿಯನ್ನು ಹೊತ್ತುತ್ತಾನೆ-ಎಂಬ ದಾರ್ಶನಿಕ ಭಾವವನ್ನು ವೈಷ್ಣವಸಂತರು, ರಾಮಾಯಣದ ಸುಂದರಖಾಂಡದ ಹಿನ್ನೆಲಿಯಲ್ಲಿ ಅಭಿಪ್ರಾಯಪಡುತ್ತಾರೆ. . “ಸತ್ಯವನ್ನು ನೇರವಾಗಿ ಸಾಕ್ಷಾತ್ಕರಿಸಿಕೊಂಡು, ಇತರರಿಗೂ ಸತ್ಯದರ್ಶನ ಮಾಡಿಸಿಕೊಡುವ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ." ಎಂಬುದಾಗಿಯೂ , ಆಧ್ಯಾತ್ಮಿಕ ಮಾರ್ಗಕ್ಕೆ ಗುರುವಿನ ಅಗತ್ಯತೆ, ಶಿಷ್ಯನಿಗಿರಬೇಕಾದ ವಿನಯ,  ಶರಣಾಗತಿ, ವಿವೇಕಯುಕ್ತವಾದ ಪ್ರಶ್ನೆಗಳನ್ನು ಕೇಳುವ ಜಿಜ್ಞಾಸೆ ಮತ್ತು ಗುರುಸೇವಾಸಕ್ತಿಗಳನ್ನು   ಗೀತಾಚಾರ್ಯನು   ಒತ್ತಿಹೇಳುತ್ತಾನೆ. ಭಕ್ತಿಯನ್ನು ಪರಮಾತ್ಮನಲ್ಲೇ ಇಡಬಹುದಲ್ಲ, ಗುರುಭಕ್ತಿಯೇಕೆ? ನಾವು ಪರಮಾತ್ಮನನ್ನು ಕಾಣೆವು, ಎಷ್ಟೋ ಜನ್ಮಗಳಿಂದ ಮರೆತುಬಿಟ್ಟಿದೇವೆ. ಪರಮಾತ್ಮನಿಗೂ ನಮಗೂ ಸೇತುವೆ,ಸಂಬಂಧ ಬೆಳೆಸಲು ಗುರು ಅನುಗ್ರಹಿಸುತ್ತಾನೆ.  ಸಂಪುಟವು ಬೆಲೆಬಾಳುವ ವಜ್ರಾಭರಣವನ್ನು ತನ್ನ  ಒಳಗಿಟ್ಟುಕೊಂಡು ಕಾಪಾಡುವಂತೆ, ಗುರುವು  ಭಗವಂತನನ್ನು ಅಪಾದಮೌಳಿ ತನ್ನೊಳಗೆ ತುಂಬಿಕೊಂಡಿರುತ್ತಾನೆ. ಫ್ರಿಡ್ಜ್-ನಲ್ಲಿ ಪದಾರ್ಥಗಳು ಕೆಡದಂತಿಡುತ್ತಾರೆ. ಗುರು ಎನ್ನುವ ಫ್ರಿಡ್ಜ್ ಕೆಟ್ಟಿರುವ,  ದೈವವನ್ನು ಮರೆತೇಹೋಗಿರುವ ಶಿಷ್ಯರನ್ನು ತನ್ನ ಮಡಿಲಿನಲ್ಲಿ ಹಾಕಿಕೊಂಡು ಕೆಡದಂತೆ ಕಾಪಾಡುತ್ತಾನೆ. ಶಿಷ್ಯನು ಕೇವಲ ಗುರೂಪದೇಶದಂತೆ ನಡೆದುಕೊಳ್ಳುವುದಷ್ಟೇ ಕೆಲಸ. ಯೋಗ ಮಾರ್ಗ ಕತ್ತಿಯ ಅರಗಿನಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಈ ಅಪಾಯಗಳಿಂದಲೂ ಗುರುವು ರಕ್ಷಿಸುತ್ತಾನೆ. ಭಕ್ತರು ಗುರುವಿಗೂ, ಶ್ರೀಹರಿಗೂ ವ್ಯತ್ಯಾಸವನ್ನು ಕಾಣುವುದಿಲ್ಲವೆನ್ನುತ್ತಾರೆ. -ಆದ್ದರಿಂದ, ಗುರುವಲ್ಲಿಡುವ ಪ್ರೀತಿಯು ಪರಮಾತ್ಮನಲ್ಲಿಡುವ ಪ್ರೀತಿಗೆ ಸಮನಾಗುತ್ತೆ.  

 ಗುರುಭಕ್ತಿಸಾರುವದರಲ್ಲಿ ಮಹಾಭಾರತದ ಧೌಮ್ಯ ಮಹರ್ಷಿ ಮತ್ತು ಆರುಣಿಯ ಕಥಾ ಪ್ರಸಂಗ ಉಲ್ಲೇಖಾರ್ಹ.  ಆರುಣಿಯು ತನ್ನ ಗುರುಗಳ ಮೇಲೆ ಭಕ್ತಿ, ವಿಧೇಯತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವುಳ್ಳವನು. ಒಮ್ಮೆ ಧೌಮ್ಯಮಹರ್ಷಿಗಳ  ಹೊಲದ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು.  ಧೌಮ್ಯರು  ಆರುಣಿಯನ್ನು ಕರೆದು ಅದನ್ನು ಸರಿಪಡಿಸಲು ಆದೇಶಿಸಿದರು.  ಆರುಣಿಯು ತಕ್ಷಣ ಗದ್ದೆಗೆ ಧಾವಿಸಿ ಕಲ್ಲು, ಮಣ್ಣು, ಮರದ ಕೊಂಬೆಗಳನ್ನು ಹಾಕಿ ಕಟ್ಟೆಯನ್ನು ಮುಚ್ಚಲು ಬಹಳ ಪ್ರಯತ್ನಿಸಿದ. ನೀರಿನ ಪ್ರವಾಹವು ತೀವ್ರವಾಗಿದ್ದರಿಂದ,  ಎಲ್ಲವೂ ಕೊಚ್ಚಿಹೋಗುತ್ತಿತ್ತು ಮತ್ತು ಅವನು ಮತ್ತೆ ಮತ್ತೆ ಪ್ರಯತ್ನಿಸಿದರೂ ಕಟ್ಟೆಯನ್ನು ಮುಚ್ಚಲಾಗಲಿಲ್ಲ. ಬೇರೆ ದಾರಿ ಕಾಣದೇ , ಗುರ್ವಾಜ್ಞೆಯನ್ನು ನೆನೆಸಿಕೊಂಡು, ತನ್ನ ದೇಹವನ್ನೇ  ಒಡೆದ ಕಟ್ಟೆಗೆ ಅಡ್ಡವಾಗಿಟ್ಟುಕೊಂಡು ಮಲಗಿದನು. ಹಾಗಾಗಿ,  ನೀರು ಹೊರಹೋಗಲಾರದೆ ಹೊಲದಲ್ಲಿಯೇ ಉಳಿಯಿತು.  ಆರುಣಿಯು ಚಳಿ, ಹಸಿವು ಮತ್ತು ಆಯಾಸವನ್ನೂ ಗಮನಿಸದೆ  ಮಲಗಿದ್ದನು. ಬಹಳ ಹೊತ್ತಾದರೂ  ಆರುಣಿಯ ಹಿಂದಿರುಗಲಿಲ್ಲವಾದ್ದರಿಂದ ಧೌಮ್ಯರಿಗೆ ಕಳವಳವಾಗಿ , ಉಳಿದ ಶಿಷ್ಯರೊಡನೆ ಹೊಲದ ಕಡೆಗೆ ಹೊರಟರು.  ಆರುಣಿಗಾಗಿ ಕೂಗಿದರು. ಹೊಲದಿಂದ  ಆರುಣಿಯು ಗುರುದೇವರನ್ನು ಕರೆದು, ಕಟ್ಟೆಯನ್ನು ಸರಿಪಡಿಸಲಾಗದೇ ತನ್ನ ದೇಹವನ್ನು ನೀರಿಗೆ ಅಡ್ಡವಾಗಿಟ್ಟುಕೊಂಡು ಮಲಗಿದ್ದೇನೆಂದು ತಿಳಿಸಿದ. ಅದನ್ನು ನೋಡಿದ ಧೌಮ್ಯ ಮಹರ್ಷಿಗಳು ಗುರುಭಕ್ತಿ, ಗುರುಸೇವಾ ತತ್ಪರನಾದ  ಆರುಣಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿ ಆನಂದಭಾಷ್ಪ ಸುರಿಸಿದರು. ಗುರುಗಳ ಆಶೀರ್ವಾದದಿಂದ ಮುಂದೆ ಅರುಣಿಯು ಮಹಾಜ್ಞಾನಿಯಾಗಿ, ಉದ್ದಾಲಕ ಅರುಣಿಯೆಂದು ಖ್ಯಾತ ಋಷಿಯಾದನು. ಈ ಕಥಾಸಾರದ ಇಂಗಿತವನ್ನು ಅರ್ಥಮಾಡಿಕೊಳ್ಳುತ್ತಾ, “ಬೆಂಕಿಕಡ್ಡಿಯು ಮದ್ದನ್ನಿಟ್ಟುಕೊಂಡಿರುವುದರಿಂದ ಅದಕ್ಕೆ ಮಹಿಮೆ. ಬರೀ  ಕಡ್ಡಿಗಳಿಗಲ್ಲ. ಗುರು ಎನ್ನುವುದು ವ್ಯಕ್ತಿಗಲ್ಲ, ಶಕ್ತಿಗೆ. ಆ ಮಹಿಮೆ ವ್ಯಕ್ತವಾಗಲು ಸೇರುವೆ ಬೇಕು. ಗುರು-ಶಿಷ್ಯ-ಭಗವಂತ ಇವುಗಳ ಯೋಗ ನಡೆದರೆ ಆ ಮಹಿಮೆಯು ಅರಿವಾಗುತ್ತದೆ.” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ನೆನೆಯೋಣ.  

ಸೂಚನೆ : 22/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, August 18, 2026

ಅಷ್ಟಾಕ್ಷರೀ 112 ದೇವತಾತ್ಮಾ ಹಿಮಾಲಯಃ (Astakshara 112)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


 ತಪೋ-ಜ್ಞಾನಗಳ ತಾಣ: ತುಂಗ-ಶೃಂಗದ ತುಹಿನ-ಗಿರಿ 

ಸಮುದ್ರಸ್ತರದಿಂದ ಅಳೆದರೆ, ಜಗತ್ತಿನಲ್ಲೆಲ್ಲಾ ಅತ್ಯಂತ ಉಚ್ಚವೆನಿಸುವ ಪರ್ವತವೇ ಹಿಮಾಲಯ. ಇದು ತುಂಗತಮ-ಗಿರಿಶ್ರೇಣಿಯಾಗಿರುವುದು ಮಾತ್ರವಲ್ಲ, ಈಗಲೂ ವರ್ಧಿಸುತ್ತಿರುವ ವರಪರ್ವತ! ಈಗೊಂದೈದಾರು ವರ್ಷಗಳ ಹಿಂದೆ ಅಳೆದಾಗ ಇದರ ಎತ್ತರ ೮೮೪೮ ಮೀಟರುಗಳು; ಹಾಗೆಂದರೆ ೨೦೦೦೦ ಅಡಿಗಳಿಗಿಂತಲೂ ಹೆಚ್ಚು! ಅಂಬರ-ಚುಂಬಕವೀ ಹಿಮಾಚಲ!

ಭಾರತದ ಔನ್ನತ್ಯವನ್ನೂ ಭಾರತೀಯ-ಸಂಸ್ಕೃತಿಯ ಉತ್ತುಂಗತೆಯನ್ನೂ ಸೂಚಿಸಲು ಪ್ರಾಯಶಃ ಇದೊಂದೇ ಸಾಕೇನೋ! ಭಾರತವು ಸಹಜವಾಗಿಯೇ ವಿಶ್ವ-ಗುರುವೆಂಬುದನ್ನು ಇದುವೇ ಮೌನವಾಗಿ ಹೇಳುತ್ತಿರುವಂತಿದೆ: ಕೀಳರಿಮೆಯಿಂದ ತಲೆತಗ್ಗಿಸದೆ, ಹಿಮಗಿರಿಯ ತುಂಗ-ಶೃಂಗದತ್ತ ಧೃತಿಯಿಂದ ಒಮ್ಮೆ ನೋಟಬೀರುವಂತಹವರಿಗೆ, ನಿಜವಾದ ಊರ್ಧ್ವ-ದೃಷ್ಟಿಯುಳ್ಳವರಿಗೆ, ತೋರಿಬರುವ ನಿತ್ಯ-ಸತ್ಯವಿದು!

ಅಲ್ಲಿಂದ ಹರಿದು ಬರುವ ಗಂಗೆಯಾದರೂ ಸಣ್ಣನದಿಯೇನಲ್ಲ. ಗಂಗೆ-ಹಿಮಾದ್ರಿಗಳು ಬಹು ಪ್ರಾಚೀನವೂ ಹೌದು: ಐದು ಕೋಟಿ ವರ್ಷಗಳಿಂದಲಾದರೂ ಹಿಮಾಲಯವು ಅಸ್ತಿತ್ವದಲ್ಲಿದೆ; ಗಂಗೆಯೂ ಏನಿಲ್ಲವೆಂದರೂ ಎರಡು ಕೋಟಿ ವರ್ಷಗಳಿಂದ ಹರಿಯುತ್ತಿದೆಯೆನ್ನುತ್ತಾರೆ, ವಿಜ್ಞಾನಿಗಳು.

ಎತ್ತರ ಮಾತ್ರವಲ್ಲ, ವ್ಯಾಪ್ತಿಯೂ ಕಡಿಮೆಯೇನಲ್ಲ. ಹಿಮವಂತನ ಹರಹು: ೨೫೦೦ ಕಿಲೋ ಮೀಟರ್! ಆಶ್ಚರ್ಯವೇನು?: ಗಂಗೆಯ ಹರಿವು ಸಹ ಅಂತೆಯೇ!

ಹಿಮವತ್ಪರ್ವತದಿಂದ ಹರಿಯುವ ಗಂಗೆಯು ನೀರು ಹೌದೇ: ಆದರದು ಕೇವಲ-ಜಲವಲ್ಲ, ಪವಿತ್ರವಾದ ನದಿಯೆಂಬುದನ್ನು ಸಹಸ್ರಾರು ವರ್ಷಗಳಿಂದಲೂ ನಮ್ಮ ಪರಂಪರೆ ಕಂಡುಕೊಂಡಿದೆ. ಅತ್ಯಪೂರ್ವವಾದ ಔಷಧೀಯ-ಗುಣಗಳನ್ನು ಆಧುನಿಕ-ವಿಜ್ಞಾನಿಗಳು ಅದರಲ್ಲಿ ಕಂಡುಕೊಂಡಿರುವುದೂ ಉಂಟು.

ಅಷ್ಟೇ ಅಲ್ಲ. ಇಲ್ಲಿ ಹರಿಯುವುದು ಜ್ಞಾನಗಂಗೆಯೇ ಸರಿ: ಗಂಗಾತಟದಲ್ಲಿಯ ಕಾಶಿಯು ಜ್ಞಾನ-ನಗರಿಯೆಂದೇ ಪ್ರಸಿದ್ಧ – ವೇದಕಾಲದಿಂದಲೂ! ವೇದವೆಂಬ ಪದದ ಅರ್ಥವಾದರೂ ಜ್ಞಾನವೆಂದೇ ತಾನೆ? ಜ್ಞಾನ-ದಾತನನ್ನೇ ಗುರುವೆನ್ನುವುದಾದರೆ, ಭಾರತವನ್ನು  ವಿಶ್ವಗುರುವೆನ್ನಲು ಅಳುಕೇ ಅಂಜಿಕೆಯೇ?

ಈ ತುಹಿನಗಿರಿ-ತುಂಗತರಂಗೆಗಳ ಗರಿಮೆ-ಹಿರಿಮೆಗಳನ್ನು ಕೃಷ್ಣನೂ ಕೊಂಡಾಡಿರುವನೇ: "ಸ್ಥಾವರಗಳಲ್ಲಿ ನಾನು ಹಿಮಾಲಯ, ಸ್ರೋತಸ್ಸುಗಳಲ್ಲಿ ಜಾಹ್ನವಿ” (ಗೀತೆ). ಯಾವುದು ಸ್ಥಾಯಿಯಾಗಿರುವುದೋ ಅದುವೇ ಸ್ಥಾವರ. ಹೀಗಾಗಿ ಚಿರಕಾಲ ಉಳಿಯುವ ಪರ್ವತವೇ ಅದು. ಹಿಮವಂತನೆಂತೋ ಭಾರತೀಯ-ಸಂಸ್ಕೃತಿಯೂ ಅಂತೆಯೇ: ಚಿರಸ್ಥಾಯಿಯೇ.

ಎಂದೇ ಈ ಸಂಸ್ಕೃತಿಯ ಸಹಜ-ಭವ್ಯತೆಯನ್ನು ಬಿಂಬಿಸಹೊರಟ ಕಾಳಿದಾಸನು ತನ್ನ ಕುಮಾರಸಂಭವ-ಕಾವ್ಯವನ್ನು ಆರಂಭಿಸಿರುವುದು ವರಗಿರಿಯ ವರ್ಣನೆಯಿಂದಲೇ. ಏಕೆ? ಈ ತುಷಾರಾದ್ರಿಯ ತುಂಗತ್ವವು ಬರೀ ಭೌತಿಕವಾದುದಲ್ಲ. ಎಂದೇ, ಅಲ್ಲಿಯ ಪ್ರಥಮಶ್ಲೋಕದಲ್ಲೇ, ಅದನ್ನು ದೇವತಾತ್ಮಾ ಎಂದಿರುವುದು.

ಪರ್ವತವೆಂದರೆ ಶಿಲಾರಾಶಿ ಎಂದುಕೊಂಡು, ಇದೊಂದು ಜಡವಸ್ತುವಷ್ಟೆ - ಎಂದು ಮೂಗುಮುರಿದೀರಿ – ಎಂದೆಚ್ಚರಿಸಲೆಂದೇ ಮೊದಲೇ “ದೇವತಾತ್ಮಾ” ಎಂದು ಕವಿಯು ವಿಶೇಷಿಸಿರುವುದು! ಚೈತನ್ಯ-ಶಕ್ತಿಯಲ್ಲಿ ಸಸ್ಯಗಳಿಗಿಂತ ಪ್ರಾಣಿಗಳೂ, ಪ್ರಾಣಿಗಳಿಗಿಂತ ಮನುಷ್ಯರೂ, ಮನುಷ್ಯರಿಗಿಂತ ದೇವತೆಗಳೂ ಮಿಗಿಲಲ್ಲವೇ? ಹೀಗಾಗಿ, ಹಿಮಾಲಯವೆಂದರೆ ಚೇತನತಮವೆನಿಸುವ ದೇವತಾತ್ಮನೇ! ಜೊತೆಗೇ, ನಾನಾ-ದೇವತೆಗಳ ಬೀಡೂ ಆಗಿರುವ ದೇವಭೂಮಿಯೇ ಹಿಮಾಲಯ.

ಸ್ಥಾವರವಾದುದೆಂದರೆ ಸ್ಥಿರವಾದುದು. ಸ್ಥಿರವಾದುದರಲ್ಲಿ ಸ್ಥೈರ್ಯವಿರುತ್ತದೆ. ಧೈರ್ಯ-ಸ್ಥೈರ್ಯಗಳಲ್ಲಿ ಭಾವದ ನಂಟುಂಟು. ಎಂದೇ ರಾಮಾಯಣದಲ್ಲಿ "ಧೈರ್ಯದಲ್ಲಿ ಹಿಮವಂತನಂತೆ!" ಎಂದು ರಾಮನನ್ನು ಚಿತ್ರಿಸಿರುವುದು. ಕಂಗೆಡಿಸುವ ಪ್ರಸಂಗಗಳಲ್ಲೂ ನಿರ್ವಿಕಾರನಾಗಿರುವವನೇ ಧೀರ – ಎಂದಿದ್ದಾನೆ, ಕಾಳಿದಾಸನೇ.

ಹಿಮವತ್-ಪರ್ವತದ ಈಚಿನ ಭಾಗವನ್ನೇ ಭಾರತದ ಸೀಮೆಯೆಂದು ಭಾವಿಸುವವರುಂಟು – ಪುರಾಣಗಳ ಮಾತನ್ನೋ ಕೌಟಲ್ಯನ ಮಾತನ್ನೋ ತಪ್ಪಾಗಿ ಅರ್ಥೈಸಿಕೊಂಡು. ಭಾರತದ ವ್ಯಾಪ್ತಿಯು ಹಿಮಾಲಯದಾಚೆಗೂ ಇತ್ತು – ಎಂಬುದನ್ನು ಗುರೂಜಿ ಗೋಳ್ವಲ್ಕರರು ಎಚ್ಚರಿಸಿರುವುದು ಅತ್ಯಂತ-ಯುಕ್ತವೇ ಆಗಿದೆ: ಉದಾಹರಣೆಗೆ ಇಂದು ಚೀನದೇಶದೊಳಗೆ ಸೇರಿಹೋಗಿರುವ ಮಾನಸ-ಸರೋವರಕ್ಕೆ ಹೆಸರು ಬಂದಿರುವುದು ಭಾರತದಿಂದಲೇ ಅಲ್ಲವೇ? ಋಷಿಗಳಿತ್ತ ಹೆಸರಲ್ಲವೇ ಅದು?

ಹಿಮಕ್ಕೆ ಆಲಯವೆನಿಸುವ ಹಿಮಾಲಯವು ತಂಪಿನ ತಾಣವೇ.  ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು "ಹಿಮಾಲಯವೆಲ್ಲಾ ನನ್ನ ತಪೋಭೂಮಿಯಪ್ಪಾ!" ಎಂದು ಆದರಾತಿಶಯದಿಂದಲೂ ಪ್ರೀತ್ಯತಿಶಯದಿಂದಲೂ ಉದ್ಗರಿಸಿರುವುದುಂಟು: ತಪಸ್ಸಾಧನೆಗೆಂದೇ ಸೃಷ್ಟವಾದ ಭೂಮಿಯದು! ಗೌರಿಯೂ ಶಂಕರನೂ ಅನೇಕ-ಮಹಾಮುನಿಗಳೂ ಅಲ್ಲಲ್ಲವೇ ತಪಸ್ಸನ್ನಾಚರಿಸಿದುದು? ಮನಸ್ಸು ಸಹಜವಾಗಿಯೇ ಶಾಂತವಾಗಿ ಒಳಮುಖವಾಗಬಲ್ಲ ಎಡೆಯೇ ಅದು. ಅಲ್ಲದೆ, ಅಲ್ಲಿಯ ಶೀತಲತೆಯೂ ಶುಭ್ರತೆಯೂ ತಾಪವನ್ನೂ ತಮಸ್ಸನ್ನೂ ಕಳೆಯುವುದರ ಸೂಚಕಗಳೇ ಸರಿ.

ಆಧುನಿಕ ವಿಜ್ಞಾನ-ನಾಗರಿಕತೆಗಳು ನಾನಾವಿಧವಾದ ಸೌಕರ್ಯಗಳನ್ನು ಒದಗಿಸಿಕೊಡುತ್ತಿರಬಹುದು. ಆದರೆ ಒಳಗೂ ಹೊರಗೂ ತಾಪ-ಕ್ಷೋಭೆಗಳೇ ತುಂಬಿರುವ ಇಂದು, ನೆಮ್ಮದಿಯ ಜೀವನಕ್ಕೆ ಉಪಕಾರಿಯಾದುದೆಂದರೆ ಒಳ ಅರಿವು-ತಂಪುಗಳೇ ಸರಿ.

ಎತ್ತರ-ಬಿತ್ತರಗಳಲ್ಲಿ ಅಸಾಧಾರಣವೆಂದೇ, ಹಿಮಾಲಯವೆಂದರೆ ಭೂಮಿಗೇ ಅಳತೆಗೋಲಿನಂತೆ – ಎಂದು ಕಾಳಿದಾಸನೆಂದಿರುವುದು. ಅದರ ಅರ್ಥವು ಭೌತಿಕಕ್ಕೆ ಸೀಮಿತವಲ್ಲ: ಚಿರ-ಪುರಾತನವಾದರೂ ನಿತ್ಯ-ನೂತನವಾದ ಭಾರತೀಯ-ಸಂಸ್ಕೃತಿಯೇ ಭೂಮಿಯ ಮೇಲಿನೆಲ್ಲ ಸಂಸ್ಕೃತಿಗಳಿಗೆ ಅಳತೆಗೋಲು - ಎಂಬುದನ್ನು ಸೂಚ್ಯವಾಗಿ ಹೇಳಿದ್ದಾನೆ, ವರಕವಿ!

ನೀಲ-ಸಿಂಧು-ಜಲ-ಧೌತ-ಚರಣ-ತಲಳೂ ಹಿಮಾಲಯ-ಕಿರೀಟಿನಿಯೂ ಆದ ಭಾರತಾಂಬೆಗೆ ಜಯವೆನ್ನಿ! ವಂದೇ ಮಾತರಂ!

ಸೂಚನೆ: 15/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 112 ಯಾರಿಗೆ ಅಗ್ರಪೂಜೆ? ಭೀಷ್ಮರ ಸಲಹೆ (Astakshara 112)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


ಯಾರಿಗೆ ಅಗ್ರಪೂಜೆ? ಭೀಷ್ಮರ ಸಲಹೆ

ರಾಜಸೂಯವು ಮುಗಿದಿದೆ. ಸಾಧಾರಣವಾಗಿಯಷ್ಟೆ ತೋರುವ ಕೃಷ್ಣನ ವಿಷಯದಲ್ಲಿ ನಾರದರು ಅಚ್ಚರಿಪಡುತ್ತಿದ್ದಾರೆ:

ಇಂದ್ರಾದಿದೇವತೆಗಳೂ ಸಹ ಯಾವನ ಬಾಹುಬಲವನ್ನು ಉಪಾಸಿಸುತ್ತಾರೋ ಅಂತಹ ಶತ್ರು-ಮರ್ದಕನಾದ ಹರಿಯು ಮನುಷ್ಯನೊಬ್ಬನಂತೆ ಇಲ್ಲಿ ಕುಳಿತಿದ್ದಾನೆ. ಏನಿದಾಶ್ಚರ್ಯ! ಸ್ವಯಂಭುವಾದ ಈ ಮಹದ್ಭೂತವೆನಿಸುವ ವಿಷ್ಣುವು ಈ ಪರಿಯಲ್ಲಿ ಬಲ-ಸಮೃದ್ಧವಾದ ಕ್ಷತ್ರಿಯ-ಸಮೂಹವನ್ನು ತಾನೇ ನಿಗ್ರಹಿಸುವವನಿರುವನಲ್ಲ!”

ಸ್ವತಃ ಧರ್ಮಜ್ಞರಲ್ಲಿ ಶ್ರೇಷ್ಠರಾದ ನಾರದರು ಹರಿಧ್ಯಾನವನ್ನು ಮಾಡುತ್ತಾ ಈ ಪರಿಯಾಗಿ ಚಿಂತಿಸುತ್ತಿದ್ದರು, ಧರ್ಮರಾಜನ ಈ ಮಹಾಯಜ್ಞದ ಸಂದರ್ಭದಲ್ಲಿ.

ಅಷ್ಟರಲ್ಲಿ ಭೀಷ್ಮರು ಧರ್ಮರಾಜನಾದ ಯುಧಿಷ್ಠಿರನಿಗೆ ಈ ರೀತಿಯಾಗಿ ಹೇಳಿದರು - "ರಾಜನೇ, ಇಲ್ಲಿ ನೆರೆದಿರುವ ರಾಜರುಗಳಿಗೆ ಯಥೋಚಿತವಾದ ಅರ್ಹಣವನ್ನು, ಎಂದರೆ ಸತ್ಕಾರವನ್ನು, ಮಾಡಪ್ಪಾ - ಎಂದು.

ಆರು ಮಂದಿಯನ್ನು ಅರ್ಘ್ಯಾರ್ಹರೆನ್ನುತ್ತಾರೆ. ಅರ್ಘ್ಯಾರ್ಹರೆಂದರೆ ಅರ್ಘ್ಯಕ್ಕೆ ಯೋಗ್ಯರು. ಅವರು ಯಾರೆಂದರೆ: ಆಚಾರ್ಯ, ಋತ್ವಿಕ್, ಸಂಬಂಧಿ, ಸ್ನಾತಕ, ಪ್ರಿಯಮಿತ್ರ ಹಾಗೂ ರಾಜ. ಇವರುಗಳು ಒಂದು ವರ್ಷ ಕಳೆದ ನಂತರ ಬಂದವರಾದಲ್ಲಿ, ಇವರಿಗೆ ಅರ್ಘ್ಯವನ್ನು ತರತಕ್ಕದ್ದು - ಎಂಬುದಾಗಿ ಹಿರಿಯರ ಮಾತಿದೆ.

“ಇದೋ ಇಲ್ಲಿರುವ ಅರಸರೂ ದೀರ್ಘಸಮಯದ ಬಳಿಕವೇ ಇಲ್ಲಿಗೆ ಬಂದಿರುವರು. ರಾಜನೇ, ಇಲ್ಲಿರುವ ಒಬ್ಬೊಬ್ಬರಿಗೂ ಅರ್ಘ್ಯವನ್ನು ನೀಡುವುದಾಗಲಿ. ಮತ್ತು ಅವರಲ್ಲಿ ವರಿಷ್ಠರಾದವರಿಗೆ ಎಂದರೆ ಅತ್ಯಂತ ಶ್ರೇಷ್ಠರಾದವರಿಗೆ ಹಾಗೂ ಸಮರ್ಥರೆನಿಸಿಕೊಳ್ಳುವವರಿಗೆ ಮೊದಲು ಅರ್ಘ್ಯವನ್ನು ನೀಡೋಣವಾಗಲಿ" ಎಂದರು.

ಭೀಷ್ಮರು ಹಾಗೆ ಹೇಳಲು, ಯುಧಿಷ್ಠಿರನು ಅವರನ್ನೇ ಕೇಳಿದನು: "ಇಲ್ಲಿ ನೆರೆದಿರುವ ಅರಸರಲ್ಲಿ ಯಾರಿಗೆ ಪ್ರಥಮವಾದ ಅರ್ಘ್ಯವನ್ನು ಸಲ್ಲಿಸಬಹುದು? - ಎಂಬುದನ್ನು ತಾವೇ ಹೇಳಬೇಕು".

ಮಹಾಪರಾಕ್ರಮಿಯೂ ಶಂತನುಪುತ್ರನೂ ಆದ ಭೀಷ್ಮರು, "ಈ ಭೂಮಂಡಲದಲ್ಲಿ ಪೂಜೆಗೆ ಅತ್ಯಂತ ಯೋಗ್ಯನಾದವನೆಂದರೆ ಶ್ರೀಕೃಷ್ಣನೇ ಸರಿ" ಎಂಬುದಾಗಿ ತೀರ್ಮಾನಿಸಿದರು.

ತೇಜಸ್ಸು, ಬಲ, ಪರಾಕ್ರಮ - ಈ ವಿಷಯಗಳಲ್ಲಿ ಇಲ್ಲಿ ನೆರೆದಿರುವವರೆಲ್ಲರ ನಡುವೆ ಈತನೇ ಬೆಳಗುವನು - ಜ್ಯೋತಿಸ್ಸುಗಳ ನಡುವೆ, ಎಂದರೆ ಗ್ರಹ-ನಕ್ಷತ್ರಗಳ ನಡುವೆ, ಹೇಗೆ ಸೂರ್ಯನು ಪ್ರಕಾಶಿಸುವನೋ ಹಾಗೆ. ಅಂಧಕಾರವಿರುವೆಡೆ ಸೂರ್ಯನು ಬಂದರೆ ಹೇಗೋ ಹಾಗೆ, ಗಾಳಿಯೇ ಆಡದೆಡೆ ವಾಯುವು ಬಂದರೆ ಹೇಗೋ ಹಾಗೆಯೇ, ಶ್ರೀಕೃಷ್ಣನ ಆಗಮನದಿಂದ ಸಭೆಗೆ ಬೆಳಕಾಗಿದೆ, ಜೊತೆಗೇ ಆಹ್ಲಾದವಾಗಿದೆ" ಎಂದರು.

ಹೀಗೆ ಭೀಷ್ಮರು ಅನುಜ್ಞೆಯನ್ನೀಯುತ್ತಲೇ, ಪ್ರತಾಪಶಾಲಿಯಾದ ಸಹದೇವನು, ಶ್ರೀಕೃಷ್ಣನಿಗೆಂದು ಉತ್ತಮವಾದ ಅರ್ಘ್ಯವನ್ನು ತಂದನು; ಮತ್ತು ಕೃಷ್ಣನಾದರೂ ಸಹ ಶಾಸ್ತ್ರಪ್ರೋಕ್ತವಾದ ಕರ್ಮಗಳಿಗನುಸಾರವಾಗಿ ಆ ಪೂಜೆಯನ್ನು ಸ್ವೀಕರಿಸಿದನು.

ಆದರೆ ಶಿಶುಪಾಲನಿಗೆ ಮಾತ್ರ, ವಾಸುದೇವನಿಗೆ ಸಂದ ಆ ಪೂಜೆಯು ಸಹನೆಯಾಗಲಿಲ್ಲ. ಆತನಂತೂ ಭೀಷ್ಮನನ್ನೂ ಧರ್ಮರಾಜನನ್ನೂ ಸಭೆಯಲ್ಲೇ ನಿಂದಿಸಿದನು. ಚೇದಿರಾಜನಾದ ಆತನು ವಾಸುದೇವನ ವಿಷಯದಲ್ಲಿ ತನ್ನ ಆಕ್ಷೇಪಗಳನ್ನು ಎತ್ತಿದನು. ಹೀಗೆ:

“ಮಹಾತ್ಮರಾದ ಭೂಪತಿಗಳು ಇಲ್ಲಿರುವಾಗ, ತಾನೇನೋ ರಾಜನೆಂಬಂತೆ ಇರುವ, ವೃಷ್ಣಿವಂಶದ ಈ ಕೃಷ್ಣನು, ರಾಜೋಚಿತವಾದ ಸತ್ಕಾರಗಳಿಗೆ ಅರ್ಹನಾಗಲಾರನು. ಮಹಾತ್ಮರಾದ ಪಾಂಡವರಿಗೆ ಈ ನಡೆಯು ಯುಕ್ತವಾಗದು. ಅಯ್ಯಾ ಪಾಂಡುಕುಮಾರನೇ, ಅದೇನೋ ಕಾಮನೆಯಿಂದ ನೀನು ಪುಂಡರೀಕಾಕ್ಷನಾದ ಕೃಷ್ಣನನ್ನು ಪೂಜಿಸುತ್ತಿರುವೆ.

ಪಾಂಡುಕುಮಾರರೇ, ನೀವಿನ್ನೂ ಬಾಲಕರು. ಧರ್ಮವು ಸೂಕ್ಷ್ಮವಾದುದು, ನೀವದನ್ನು ಅರಿತಿಲ್ಲ. ಮುದುಕನಾದ ಈ ಭೀಷ್ಮನಿಗೆ ಸ್ಮೃತಿ ಜಾರಿದೆ. ಅವನ ನೋಟವೂ ಅಲ್ಪವಾಗಿದೆ.


ಸೂಚನೆ :  16/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 79 (Prasnottara Ratnamalike 79)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೯. ಯಾರು ಶತ್ರು?

ಉತ್ತರ- ಕಾಮ.

ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗೆಳೆಂಬ ಆಂತರಿಕ ಅರಿಷಡ್ವರ್ಗಗಳಲ್ಲಿ ಮೊದಲನೆಯದೇ ಕಾಮ. ಕಾಮವು ಉಳಿದ ಅಂತಃಶತ್ರುಗಳಿಗೆ ಮೂಲ ಎಂದರ್ಥ. ಕ್ರೋಧ, ಲೋಭ ಮೊದಲಾದವುಗಳು ಉತ್ಪತ್ತಿಯಾಗಬೇಕಾದರೆ ಅದಕ್ಕೆ ಕಾಮವೇ ನಿದಾನ - ಆದಿಕಾರಣ. ಕಾಮದ ಮುಂದಿನ ವಿಕಾರಗಳೇ ಉಳಿದ ಅಂತಃಶತ್ರುಗಳು. ಹಾಗಾಗಿ ಕಾಮವನ್ನು ಮೊದಲನೆಯದಾಗಿ ಹೇಳಲಾಗಿದೆ. ಕಾಮವು ಎರಡು ವಿಧ. ಧರ್ಮ, ಅರ್ಥ.ಕಾಮ, ಮೋಕ್ಷ ಎಂಬ ಪುರುಷಾರ್ಥಗಳಲ್ಲಿ ಬರುವ ಕಾಮ ಒಂದಾದರೆ, ಅರಿಷಡ್ವವರ್ಗಗಳಲ್ಲಿ ಮೊದಲನೆಯದಾಗಿ ಬರುವುದು ಮತ್ತೊಂದು. ಇವೆರಡರಲ್ಲಿ ಪುರುಷಾರ್ಥಕ್ಕೆ ಕಾರಣವಾದ ಕಾಮ ಅತ್ಯಂತ ಅಗತ್ಯ ಎಂಬುದಾಗಿ ಗೀತೆಯಲ್ಲಿ ಶ್ರೀಕೃಷ್ಣನು ಅಪ್ಪಣೆ ಕೊಡಿಸುತ್ತಾನೆ. “ಧರ್ಮಾವಿರುದ್ಧೋ ಭೂತೇಷು ಕಾಮಃ ಅಸ್ಮಿ ಭರತರ್ಷಭ!” ಎಂಬುದಾಗಿ. ಅಂದರೆ ಧರ್ಮದ ಚೌಕಟ್ಟಿನಲ್ಲಿ ಬರುವ ಈ ಕಾಮವು ಅತ್ಯಂತ ಶ್ರೇಯಸ್ಕರವಾದದ್ದು ಎಂದರ್ಥ. ಕಾಮ ಎಂದರೆ ಬಯಕೆ. ಇಂತಹ ಬಯಕೆಯು ಒಳ್ಳೆಯದು. ಏಕೆಂದರೆ ಇದು ಧರ್ಮದ ಹಿನ್ನೆಲೆಯಿಂದ ಬಂದದ್ದು. ಅದರ ಪರಿಣಾಮವೂ ಒಳ್ಳೇಯದೇ ಆಗಿರುತ್ತದೆ. ಯಾವುದು ಪರಿಣಾಮದಲ್ಲಿ ಒಳ್ಳೆಯದೋ ಅದು ಗ್ರಾಹ್ಯವಾದುದು ಎಂದರ್ಥವಷ್ಟೇ!. ಇಂತಹ ಬಯಕೆಗೆ ಬೆಲೆ ಬರಲು ಇರುವ ಅತ್ಯಂತ ಮುಖ್ಯವಾದ ಕಾರಣವೆಂದರೆ ಜ್ಞಾನ. ನಿಜವಾದ ಅರಿವಿನಿಂದ ಬರುವ ಬಯಕೆಗೆ ಬೆಲೆ ಉಂಟು. ಈ ಬಯಕೆಯನ್ನೇ ಧರ್ಮಕ್ಕೆ ಅವಿರುದ್ಧವಾದ, ಮೋಕ್ಷಕ್ಕೆ ಕಾರಣೀಭೂತವಾದ ಕಾಮ ಎಂಬುದಾಗಿ ಕರೆಯಲಾಗಿದೆ. ಆದರೆ ಇಲ್ಲಿ ಕೇಳಿದ ಪ್ರಶ್ನೆ ಈ ಕಾಮದ ವಿಷಯಕವಾಗಿ ಕೇಳಿದ್ದಲ್ಲ. ಶತ್ರು ರೂಪವಾದ ಕಾಮದ ಬಗ್ಗೆ. ಶತ್ರು ಎಂಬುದಾಗಿ ಪರಿಗಣಿತವಾದ ಕಾಮ. ಬಾಹ್ಯ ಮತ್ತು ಆಂತರ ಎಂಬುದಾಗಿ ಎರಡು ವಿಧವಾದ ಶತ್ರುವನ್ನು ಹೇಳಲಾಗುತ್ತದೆ. ಬಾಹ್ಯ ಶತ್ರುಗಳಿಗೂ ಕಾರಣವಾದದ್ದು ಈ ಅಂತಃಶತ್ರುವಾದ ಕಾಮವೇ ಆಗಿದೆ. ‘ಕಾಮಃ ಏಷಃ ಕ್ರೋಧಃ ಏಷಃ ರಜೋಗುಣಸಮುದ್ಭವಃ’ ಎಂಬುದಾಗಿ ಗೀತೆಯಲ್ಲಿ ಹೇಳುವಂತೆ ಈ ಕಾಮವು ರಜೋಗುಣದಿಂದ ಹುಟ್ಟುತ್ತದೆ. ಆದ್ದರಿಂದ ಇದನ್ನು ಕೆಡುಕು ಎನ್ನಲಾಗಿದೆ. ಮೂಲಭೂತವಾಗಿ ಸತ್ತ್ವಗುಣದಿಂದ ಉತ್ಪನ್ನವಾದ ಯಾವ ಜ್ಞಾನ ಉಂಟೋ, ಅದರ ವಿಸ್ತಾರವಾದ ಬಯಕೆ ಯಾವುದುಂಟೋ, ಅದು ಅತ್ಯಂತ ಪೂಜ್ಯ. ರಜೋಗುಣದಿಂದ ಉತ್ಪನ್ನವಾದ ಅಂದರೆ ಅಜ್ಞಾನದಿಂದ ಬರುವ ಯಾವ ಬಯಕೆ ಉಂಟೋ ಅದು ತ್ಯಾಜ್ಯ ಎಂಬುದಾಗಿ ಕರೆಯಬಹುದು. ಹಾಗಾಗಿ ಇಂತಹ ಬಯಕೆಯು ಅಂತಃಶತ್ರುವಾಗಿ ಪರಿಗಣಿತವಾಗುತ್ತದೆ. ಅದು ಹೇಗೆ ಶತ್ರುವಾಗುತ್ತದೆ? ಎಂಬುದು ಇಲ್ಲಿ ವಿಚಾರಣೀಯ.


ನಮಗೆ ಯಾವುದಾದರೂ ಒಂದು ವಸ್ತು ಅಥವಾ ವಿಷಯವು ಬೇಕೇ ಬೇಕು ಎಂದು ಅನಿಸಿದಾಗ ಅದನ್ನು ನಾವು ನಮ್ಮದಾಗಿಸಿಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ ನಮ್ಮ ಪ್ರಯತ್ನವೂ ಕೂಡ ಸಾಗುತ್ತದೆ. ಯಾವಾಗ ಆ ಬಯಸಿದ ವಸ್ತು ಅಥವಾ ವಿಷಯವು ಸಿಗುವುದಿಲ್ಲವೋ, ಆಗ ಆ ವಸ್ತುವಿನ ಸ್ವಾಮಿಯಲ್ಲಿ ದ್ವೇಷರೂಪವಾಗಿ ಬದಲಾಗುತ್ತದೆ. ಅಲ್ಲಿಂದ ಆ ವಿಷಯದ ಹಿಂದಿರುವ ವ್ಯಕ್ತಿ ಅಥವಾ ಇನ್ನಾವುದೋ ಶಕ್ತಿಯ ಬಗ್ಗೆ ನಮಗೆ ಇಲ್ಲಸಲ್ಲದ ದ್ವೇಷಭಾವ ಆರಂಭವಾಗುತ್ತದೆ. ಅಂದರೆ ಮೊದಲು ಹುಟ್ಟಿದ ಕಾಮವೇ ತದನಂತರದಲ್ಲಿ ಶತ್ರುವಾಗಿ ಬದಲಾದದ್ದು ಹೀಗೆ. ಅದನ್ನೇ ಇಲ್ಲಿ ಕಾಮವು ಶತ್ರು ಎಂಬುದಾಗಿ ಹೇಳಲಾಗಿದೆ. 


ಸೂಚನೆ :  16/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, August 11, 2026

ದಾನಿಯ ಆದರ್ಶ ಮನೋಧರ್ಮ (Daniya Adarsha Manodharma)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-08-11 080825.png

ವೈದಿಕಕಾಲದ ಕಥೆ.  ಜಾನಶ್ರುತಿ ಎಂಬ ರಾಜನು ಮಹಾದಾನಿಯಾಗಿದ್ದನು. ತನ್ನ ರಾಜ್ಯದಲ್ಲಿ ಎಲ್ಲರಿಗೂ ಆಹಾರವನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದ ಕಾರಣ , ತಾನು ತನ್ನಂತಹ ಮಹಾದಾನಿ ಯಾರೂ ಇಲ್ಲವೆಂದು ನಂಬಿದ್ದನು. ಹಾಗೂ ಇದರಂದ ಬಂದ ಕೀರ್ತಿಯಷ್ಟೇ ಜೀವನದ ಧ್ಯೇಯವೆಂದು ದೃಢವಾಗಿ ನಂಬಿದ್ದನು.  ಅವನು ಪಕ್ಷಿಗಳ ಮತ್ತು ಪ್ರಾಣಿಗಳ ಭಾಷೆಯನ್ನೂ ಅರಿತಿದ್ದನು.    ಒಂದು ಸಂಜೆ ಅವನು ಪ್ರಕೃತಿಯ ಸೊಗಸಾದ ದೃಶ್ಯವನ್ನು ತನ್ನ ಅರಮನೆಯ ಮೇಲುಮನೆಯಿಂದ ಆಸ್ವಾದಿಸುತ್ತಿದ್ದನು. ಆಗ ಎರಡು ಹಾರುತ್ತಿರುವ ಹಂಸಗಳು ಪರಸ್ಪರ ಮಾತನಾಡುತ್ತಿರುವದನ್ನು ಕಂಡನು. ಅವುಗಳಲ್ಲಿ ಒಂದು ಹಂಸವು ಹೇಳಿತು, “ನೀನು ರಾಜ ಜಾನಶ್ರುತಿಯ ಕೀರ್ತಿಯ ಬೆಳಕಿನ ತೀವ್ರತೆಯನ್ನು ದಾಟುವಾಗ ಜಾಗರೂಕನಾಗಿರು , ಇಲ್ಲವಾದರೆ ಅದರ ಕೀರ್ತಿಯ ಬೆಳಕಿನಿಂದ  ನೀನು ಸುಟ್ಟುಹೋಗುತ್ತೀಯೆ. ಇಂದು ಅವನಂತ ಮಹಾನುಭಾವನು ಯಾರೂ ಇಲ್ಲ, ಅವನು ದಾನಿಗಳಲ್ಲಿ ಶ್ರೇಷ್ಠ.”  ಇದಕ್ಕೆ ಉತ್ತರವಾಗಿ ಮತ್ತೊಂದು ಹಂಸವು ಹೇಳಿತು, “ಓ ಮಿತ್ರ, ರಾಜ ಜಾನಶ್ರುತಿ, ರೈಕ್ವ ಎಂಬ ಆತ್ಮಜ್ಞಾನಿ ಹಾಗೂ ರಥಚಲಿಸುವವನಿಗಿಂತ ದೊಡ್ಡವನಾ? ರಾಜನಿಗೆ ಕೇವಲ ಹೆಸರು ಮತ್ತು ಕೀರ್ತಿ ಮಾತ್ರ  ಜೀವನದ ಪರಮಧ್ಯೇಯ ಹಾಗೂ ಅದಕ್ಕಾಗಿ ತೀವ್ರವಾಗಿ ಹಂಬಲಿಸುತ್ತಾನೆ.  ಮೊದಲ ಹಂಸವು ಆಶ್ಚರ್ಯದಿಂದ ಕೇಳಿತು, “ಈ ರೈಕ್ವ ಯಾರು? ಅವನು ಕೇವಲ ರಥಚಲಿಸುವವ ಆತ್ಮಜ್ಞಾನಿಯಾದರೂ ಹೇಗೆ ಜಾನಶ್ರುತಿಗೆ  ಹೋಲಿಸಿದರೆ ದೊಡ್ಡವನಾಗಿದ್ದಾನೆ?” ಹೀಗೆ ಹೇಳುತ್ತಾ ಆ ಹಂಸಗಳು ಹಾರಿಹೋದವು.   

ಈ ಸಂಭಾಷಣೆಯನ್ನು ಕೇಳಿದ ರಾಜನು ರೈಕ್ವನನ್ನು ಕಂಡು ನಿಜವಾದ ಶಾಂತಿಯನ್ನು ಅನುಭವಿಸಲು ಸಂಕಲ್ಪಿಸಿ,  ತನ್ನ ಸೇವಕನಿಂದ ರೈಕ್ವನನ್ನು ಹುಡಿಕಿಸಿ, ಆತನಿರುವ ಎಡೆಯನ್ನು ತಿಳಿದುಕೊಂಡನು.    ಜಾನಶ್ರುತಿ  ದೊಡ್ಡ ಸಿದ್ಧತೆಯನ್ನು ಮಾಡಿಕೊಂಡು ರೈಕ್ವನ ಬಳಿ ಬಂದು ಆರು ನೂರು ಹಸುಗಳು, ಚಿನ್ನದ ಸರ, ಮತ್ತು ಹೇಸರುಗತ್ತೆ ಎಳೆಯುವ ಗಾಡಿಯನ್ನು ರೈಕ್ವನ ಪಾದಗಳಿಗೆ ಅರ್ಪಿಸಿ,ಆಧ್ಯಾತ್ಮಿಕ ಜ್ಞಾನವನ್ನು ದಯಪಾಲಿಸೆಂದು ಪ್ರಾರ್ಥಿಸಿದನು. ರೈಕ್ವಾ ನಕ್ಕು ಹೇಳಿದನು, “ ಇವೆಲ್ಲವನ್ನೂ ಹಿಂತೆಗೆದುಕೊಳ್ಳಿ! ಆತ್ಮಜ್ಞಾನವು ಮಾರಾಟಕ್ಕಿಲ್ಲ !” ಜಾನಶ್ರುತಿ ಹಿಂತಿರುಗಿ, ಮತ್ತೊಂದು ಸಮಯದಲ್ಲಿ ಸಾವಿರ ಹಸುಗಳು, ಚಿನ್ನದ ಸರ, ಹೇಸರುಗತ್ತೆ ಎಳೆಯುವ ಗಾಡಿ ಮತ್ತು ಅವನ ಸ್ವಂತ ಪುತ್ರಿಯನ್ನು ರೈಕ್ವನಿಗೆ ಪತ್ನಿಯಾಗಿ ನೀಡಲು ಬಂದನು. ಅವನು ಇವುಗಳನ್ನು ಅರ್ಪಿಸಿ, ಆತ್ಮಜ್ಞಾನದ ಗಹನವಾದ ಸತ್ಯಗಳನ್ನು ದಯಪಾಲಿಸಲು ಮತ್ತೇ ಪ್ರಾರ್ಥಿಸಿದನು. ರೈಕ್ವಾ ಈ ದಾನಗಳಿಗೆ ಹಾತೊರೆಯಲಿಲ್ಲ. ಆದರೆ ಜಾನಶ್ರುತಿಯ ಛಲ, ಪ್ರಾಮಾಣಿಕತೆ ಹಾಗೂ ಗುರುವಿನಲ್ಲಿದ್ದ  ಅಚಲವಾದ ಶ್ರದ್ಧೆಯನ್ನು ನೋಡಿ ಈತ ಶಿಷ್ಯನಾಗಲು ಅರ್ಹನೆಂದು  ರೈಕ್ವನು ಆತ್ಮಜ್ಞಾನವನ್ನು ಸಂವರ್ಗವಿದ್ಯೆಯ ಮೂಲಕ ಉಪದೇಶಮಾಡಲು ಉದ್ಯುಕ್ತನಾದನು. ಗೀತಾಚಾರ್ಯನ ವಾಣಿಯಂತೆ (೪.೩೪)ಜ್ಞಾನವನ್ನು, ಗುರುಗಳ ಸೇವೆಯಿಂದ, ಆತ್ಮಸಮರ್ಪಣೆಯ ಭಾವದಿಂದ ಪಡೆಯಬೇಕು.

ಆರ್ಷಸಾಹಿತ್ಯದಲ್ಲಿ ಸಂಪತ್ತನ್ನು ಮತ್ತು ಕೀರ್ತಿಗಳಿಸುವುದು ಅನಾದರ್ಶವೆಂದು ಪರಿಗಣಿಸುವುದಿಲ್ಲ.  ಇವೆರಡನ್ನು ಅರ್ಥ ಹಾಗೂ ಕಾಮವೆಂದು ಪರಿಗಣಿಸುತ್ತಾ,. ಧರ್ಮ ಮತ್ತು ಮೋಕ್ಷಕ್ಕೆ ಪೋಷಕವಾಗಿ ಹಾಗೂ ವಿರೋಧವಿಲ್ಲದ ರೀತಿಯಲ್ಲಿ ಇವೆರಡನ್ನೂ ಗಳಿಸಬೇಕೆಂಬುದೇ ಋಷಿಮುನಿಗಳ ಆಶಯ ಹಾಗಿಲ್ಲದಿದ್ದಾಗ ತ್ಯಾಜ್ಯ   "ಮರಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು . ಜೀವವಿದೆಯೇ ಮೊದಲು ನೋಡು. ಅದಿದ್ದರೆ ಉಡಿಗೆ-ತೊಡಿಗೆಗಳು." ಎಂಬ ಶ್ರೀರಂಗ ಮಹಾಗುರುಗಳ ವಾಣೀ ಇಲ್ಲಿ ಮನನೀಯ.


ಕೇವಲ  ಭೌತಿಕ ಸಂಪತ್ತನ್ನು  ಉಪಯೋಗಿಸಿ ಜನಸಹಾಯ ಮಾಡಿದರೆ  ಜ್ಞಾನವು ಸಿಗುವುದಿಲ್ಲ. ಇದನ್ನೇ ಆಚಾರ್ಯ ಶಂಕರರ  "ಕುರುತೇ ಗಂಗಾಸಾಗರಗಮನಂ,ವ್ರತ-ಪರಿಪಾಲನಮಥವಾ ದಾನಮ್ । ಜ್ಞಾನವಿಹೀನಃ ಸರ್ವಮತೇನ, ಭಜತಿ ನ ಮುಕ್ತಿಂ ಜನ್ಮಶತೇನ ॥  “ ಸ್ತೋತ್ರ ಸ್ಮರಣೀಯ. ನಾನು ಕೇವಲ  " ದೇವರ ಕೈಯಲ್ಲಿರುವ ಸಾಧನ" ಎಂಬ ಮನೋಧರ್ಮವು ಹರಿದಾಗ  ದಾನ ಧರ್ಮಗಳು ಅರ್ಥಪೂರ್ಣವಾಗುತ್ತದೆ.   ಜಾನಶ್ರುತಿರಾಜನ ಮೊದಲಿನ ಮನಸ್ಥಿತಿ ದಾನಧರ್ಮಗಳಿಂದ ಬರುವ ಕೀರ್ತಿಯೇ ಜೀವನದ ಧ್ಯೇಯವೆನ್ನುವುದು ತಪ್ಪಾಗಿತ್ತು. ಆದರೆ ಪ್ರಾಮಾಣಿಕನಾಗಿ,ರೈಕ್ವರೆಂಬ ಗುರುಗಳ ಉಪದೇಶಕ್ಕೆ ಮನಸಾರಿ ಒಪ್ಪಿ ನಡೆದುಕೊಂಡಿದ್ದು ರಾಜನ ಪರಿವರ್ತನೆಗೆ ಕಾರಣವಾಯಿತು. ದೇವನೊಬ್ಬನಿಗೇ ಶರಣಾಗಿ ಅವನ ಪ್ರಸಾದರೂಪವಾದ ಪುರುಷಾರ್ಥಗಳನ್ನು ಸ್ವೀಕರಿಸಿ ಅವನೊಡನೆ ಬಾಳುವ ಸದ್ಬುದ್ಧಿಯು ವೃದ್ಧಿಸಲಿ ಎಂದು ಆಶಿಸೋಣ.


ಸೂಚನೆ : 08/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


(Vyaasa Vikshita 200)ರಾಜಸೂಯಯಾಗವು ಸಂಪನ್ನವಾಯಿತು (Vyaasa Vikshita 200)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

.


image.png



ಜನರೆಲ್ಲರನ್ನೂ ಈ ಪರಿಯಲ್ಲಿ ತೃಪ್ತಿಗೊಳಿಸಿದನು, ಧರ್ಮರಾಜ. ಅವರ ಅಪೇಕ್ಷೆಗಳೆಲ್ಲವೂ ಪೂರೈಕೆಗೊಂಡವು. ಅಲ್ಲಿ ನೆರೆದಿದ್ದ ಜನರು ಬಹ್ವನ್ನ-ಬಹುಭಕ್ಷ್ಯಗಳನ್ನು ಸೇವಿಸಿದರು. ಆ ವಿಸ್ತಾರವಾದ ಯಜ್ಞದಿಂದಾಗಿ ದೇವತೆಗಳಿಗೂ ತೃಪ್ತಿಯಾಯಿತು. ಇಡಾ, ಆಜ್ಯಹೋಮ, ಆಹುತಿಗಳೆಂದು ಕರೆಸಿಕೊಳ್ಳುವ ಹೋಮಗಳಿಂದ ನೆರವೇರಿತು, ಆ ಯಜ್ಞ. ಮಂತ್ರಶಿಕ್ಷೆಯಲ್ಲಿ ವಿಶಾರದರಾದ ಮಹರ್ಷಿಗಳು ಮಾಡಿದ ಯಜ್ಞವು ದೇವತೆಗಳಿಗೆ ತೃಪ್ತಿಕರವಾಯಿತು.

ದೇವತೆಗಳಂತೆಯೇ ವಿಪ್ರರೂ ತೃಪ್ತಿಗೊಂಡರು. ಸರ್ವವರ್ಣಗಳವರೂ ಆ ಯಜ್ಞವನ್ನು ಕಂಡು ಸಂತೋಷದಿಂದ ಪಾಲ್ಗೊಂಡು ತೃಪ್ತಿಪಟ್ಟರು.

ಯಜ್ಞವು ಹೀಗೆ ಸಂಪನ್ನವಾಗುತ್ತಿದ್ದಂತೆ ಅಭಿಷೇಚನೀಯ-ದಿನವು ಬಂದಿತು. ಅಭಿಷೇಚನೀಯವೆಂಬುದು ರಾಜಸೂಯದ ಒಂದು ಅಂಗ. ಅದರಲ್ಲಿ ಪೂರ್ಜಾರ್ಹರಿಗೆ ಪೂಜೆಯು ಸಲ್ಲುವುದು; ರಾಜಸೂಯದ ಯಜಮಾನನಿಗೆ ಅಭಿಷೇಕವು ನೆರವೇರುವುದು.

ಸತ್ಕಾರಕ್ಕೆ ಅರ್ಹರಾದ ಮಹರ್ಷಿಗಳು ಯಜ್ಞಭವನದ ಅಂತರ್ವೇದಿಯೆಂಬ ಸ್ಥಾನಕ್ಕೆ ಆಗಮಿಸಿದರು. ಅಲ್ಲಿ ನೆರೆದಿದ್ದ ರಾಜರ್ಷಿಗಳ ಜೊತೆಯಲ್ಲಿ ಆಸೀನರಾಗಿದ್ದ ನಾರದರೇ ಮೊದಲಾದ ಮಹರ್ಷಿಗಳೂ ಶೋಭಿಸಿದರು.

ಬ್ರಹ್ಮಭವನದಲ್ಲಿ ಬಂದು ಸೇರಿದ್ದ ದೇವತೆಗಳು ಹಾಗೂ ದೇವರ್ಷಿಗಳ ಹಾಗಿದ್ದ ವಿಪ್ರವರರು ನಾನಾಕರ್ಮೋಪಾಸಕರಾಗಿದ್ದು ಜಲ್ಪವನ್ನು ಮಾಡಿದರು. ಜಲ್ಪವೆಂದರೆ ವಾದ-ವಿವಾದಗಳು. ’ಇದು ಹೀಗೆ’ ಎಂದು ಕೆಲವರೆಂದರೆ, ’ಇದು ಹೀಗಲ್ಲ’ ಎನ್ನುವವರು ಕೆಲವರು. "ಇದು ಹೀಗೆಯೇ, ಮತ್ತೆಂತೂ ಅಲ್ಲ" ಎಂಬುದಾಗಿ ಮತ್ತೆ ಕೆಲವರ ವಾದ. ಹೀಗೆ ವಿತಂಡಾವಾದವನ್ನು ಮಾಡುವವರೂ ಕೆಲವರಿದ್ದರು. ದುರ್ಬಲಪಕ್ಷವನ್ನು ಪುಷ್ಟೀಕರಿಸುವವರು ಕೆಲವರು; ಸಬಲಪಕ್ಷವನ್ನು ದುರ್ಬಲವನ್ನಾಗಿಸುವವರು ಮತ್ತೆ ಕೆಲವರು; ಮತ್ತೆ ಕೆಲ ಮೇಧಾವಿಗಳು ಮತ್ತೊಬ್ಬರು ಹೇಳಿದ ಪ್ರಮೇಯವನ್ನು ಖಂಡತುಂಡವಾಗಿಸಿದರು. ಅದು ಹೇಗಿತ್ತೆಂದರೆ ಆಕಾಶದಲ್ಲಿರುವ ಆಮಿಷವನ್ನು ಗಿಡುಗಗಳು ಕಿತ್ತಾಡುವ ಹಾಗೆ. ಅವರಲ್ಲಿ ಕೆಲವರು ಧರ್ಮಾರ್ಥಕುಶಲರು. ಕೆಲವರು ಮಹಾವ್ರತಪರಿಪಾಲಕರು. ಕೆಲವರು ಶ್ರೇಷ್ಠವಿದ್ವಾಂಸರು: ಎಲ್ಲ ಭಾಷ್ಯಗಳನ್ನೂ ಬಲ್ಲವರು; ಅವುಗಳಲ್ಲಿಯ ತತ್ತ್ವಗಳನ್ನು ಪರಸ್ಪರ ಹೇಳಿಕೊಳ್ಳುತ್ತಾ ಸಂತೋಷಪಡುತ್ತಿದ್ದರು, ಅವರು. ವೇದ-ಸಂಪನ್ನರಾದ ದೇವರ್ಷಿ-ಬ್ರಹ್ಮರ್ಷಿ-ಮಹರ್ಷಿಗಳಿಂದ ತುಂಬಿದ ಆ ವೇದಿಯು, ಎಂದರೆ ಯಜ್ಞವೇದಿಕೆಯು, ಹೇಗಿತ್ತೆಂದರೆ ವಿಶಾಲವಾದ ಆಕಾಶವು ನಕ್ಷತ್ರಗಳಿಂದ ಕಿಕ್ಕಿರಿದಿದ್ದು ಕಂಗೊಳಿಸುವಂತೆ.

ಆ ಸಭೆಯಲ್ಲಿ ವ್ರತಹೀನನಾದ ದ್ವಿಜನೊಬ್ಬನೂ ಇರಲಿಲ್ಲ. ಲಕ್ಷ್ಮೀಸಂಪನ್ನನಾದ ಧೀಮಂತ ಯುಧಿಷ್ಠಿರನ ಯಜ್ಞ-ವಿಧಾನದ ಲಕ್ಷ್ಮಿಯನ್ನು, ಎಂದರೆ ಸೊಬಗನ್ನು, ಕಾಣುತ್ತಾ ನಾರದಮುನಿಗಳು ಸಂತೋಷಗೊಂಡರು.

ಆದರೆ ಇದರ ಜೊತೆಗೇ ಚಿಂತೆಯಾಯಿತು ನಾರದ-ಮುನಿಗಳಿಗೆ, ಅಲ್ಲಿದ್ದ ಎಲ್ಲ ಕ್ಷತ್ರಿಯರ ಸಂಗಮವನ್ನು ಕಂಡು. ಏಕೆ? ಅವರಿಗೆ ಹಳೆಯ ವಿಷಯವೊಂದರ ಸ್ಮರಣೆಯಾಯಿತು. ಬ್ರಹ್ಮಲೋಕದಲ್ಲೊಂದು ಚರ್ಚೆಯಾಗಿತ್ತಲ್ಲವೇ? ಭಗವಂತನು ತನ್ನ ಅಂಶಗಳಾದ ದೇವತೆಗಳೊಂದಿಗೆ ಅವತರಿಸಿಬರುವುದೆಂಬುದರ ಬಗ್ಗೆ? ಆ ಚಿಂತೆ.

ಇಲ್ಲಿ ನೆರೆದಿದ್ದ ರಾಜರುಗಳ ಸಮೂಹ ವನ್ನು ಕಂಡರಿತು ನಾರದರು ಮನಸ್ಸಿನಲ್ಲಿ ಪುಂಡರೀಕಾಕ್ಷನಾದ ಹರಿಯನ್ನು ನೆನೆಸಿಕೊಂಡರು. ಅವರ ಮನಸ್ಸಿನಲ್ಲಿ ಆ ಭಾವವು ಉದಯಿಸಿತು: “ಆಹಾ, ದೇವಶತ್ರುಗಳಾದ ಅಸುರರ ವಿನಾಶಕನಾದ ಭಗವಾನ್ ನಾರಾಯಣನು ತನ್ನ ಪ್ರತಿಜ್ಞೆಯನ್ನು ಪೂರೈಸುವವನಾಗಿಯೇ ಕ್ಷತ್ರಿಯಕುಲದಲ್ಲಿ ಈಗ ಜನಿಸಿದ್ದಾನೆ. ಹಿಂದೆ ಆತನೇ ದೇವತೆಗಳಿಗೆ ತನ್ನ ಆದೇಶವನ್ನಿತ್ತಿದ್ದನು: ಪರಸ್ಪರ ಸಂಹಾರ-ಕಾರ್ಯವನ್ನು ಮಾಡಿ ಮತ್ತೆ ದೇವಲೋಕಕ್ಕೆ ಹಿಂದಿರುಗಿ - ಎಂಬುದಾಗಿ. ಅಂಧಕವಂಶ-ವೃಷ್ಣಿವಂಶಗಳಲ್ಲಿ ಈತನೇ ಮಹಾಕಾಂತಿಯಿಂದ ಕಂಗೊಳಿಸುತ್ತಿರುವವನು - ನಕ್ಷತ್ರಗಳ ನಡುವೆ ಉಡುರಾಜನು, ಎಂದರೆ ಚಂದ್ರನು, ಹೇಗೆ ಶೋಭಿಸುವನೋ ಹಾಗೆ.

ಸೂಚನೆ : 9///2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

(Vyaasa Vikshita 199)ಯಜ್ಞದ ವಿವಿಧ-ಕರ್ತವ್ಯಗಳ ವಿನಿಯೋಗಗಳು (Vyaasa Vikshita 199)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png


ಯಜ್ಞಕ್ಕಾಗಿ ಆಗಮಿಸಿದ  ಆ ರಾಜರುಗಳೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡವರಾಗಿ ಧರ್ಮರಾಜನನ್ನು ಬಂದು ಕಂಡರು. ಎಂತಹ ರಾಜನವನು? ಭೂರಿ-ದಕ್ಷಿಣೆಗಳನ್ನು ಕೊಡುವ ರಾಜ. ಭೂರಿಯೆಂದರೆ ಹೆಚ್ಚು. ಸದಸ್ಯರನೇಕರಿಂದ ಸುತ್ತುವರಿಯಲ್ಪಟ್ಟಿರುವನು. ಸದಸ್ಯರೆಂದರೆ ಸದಸ್ಸಿಗೆ ಸೇರುವವರು. ಸದಸ್ಸೆಂದರೆ ಸಭೆ. ಆತನ ಸದಸ್ಸು ರಾಜರುಗಳಿಂದಲೂ, ವಿಪ್ರರಿಂದಲೂ, ಮಹರ್ಷಿಗಳಿಂದಲೂ ಕಿಕ್ಕಿರಿದಿತ್ತು. ದೇವತೆಗಳಿಂದ ತುಂಬಿರುವ ನಾಕಲೋಕದ ಹಾಗೆ ಪ್ರಕಾಶಿಸುತ್ತಿತ್ತು. ನಾಕವೆಂದರೆ ಸ್ವರ್ಗ.

ಹೀಗೆ ಅನೇಕ ಅತಿಥಿಗಳು ಆಗಮಿಸುತ್ತಿರಲಾಗಿ, ಯುಧಿಷ್ಠಿರನು ಭೀಷ್ಮಪಿತಾಮಹರನ್ನೂ ಗುರುಗಳಾದ ದ್ರೋಣಾಚಾರ್ಯರನ್ನೂ ಎದುರುಗೊಂಡನು, ಅವರಿಗೆ ಆದರದಿಂದ ಅಭಿವಾದಿಸಿದನು. ಬಳಿಕ ಭೀಷ್ಮ, ದ್ರೋಣ, ಕೃಪ, ದ್ರೌಣಿ ಎಂದರೆ ದ್ರೋಣಪುತ್ರನಾದ ಅಶ್ವತ್ಥಾಮ, ದುರ್ಯೋಧನ ಹಾಗೂ ವಿವಿಂಶತಿ - ಇವರುಗಳಿಗೆ ಹೀಗೆ ಹೇಳಿದನು :

"ನನ್ನ ಈ ವಿಪುಲವಾದ ಧನವೇನುಂಟೋ ಅದನ್ನು ನೀವು ನಿಮ್ಮ ಇಚ್ಛೆಗೆ ಅನುಸಾರವಾಗಿ ಸತ್ಕರ್ಮದಲ್ಲಿ ತೊಡಗಿಸಬಹುದು" ಎಂದು.

ಅವರಿಗೆಲ್ಲ ಹೀಗೆ ಹೇಳಿದ ಯುಧಿಷ್ಠಿರನು ದೀಕ್ಷಿತನಾಗಿದ್ದು ಅವರುಗಳನ್ನು ಅವರವರ ಯೋಗಾನುಸಾರ ಬೇರೆ ಬೇರೆ ಅಧಿಕಾರಗಳಲ್ಲಿ ನಿಯೋಜಿಸಿದನು. ಹೀಗೆ: ಭಕ್ಷ್ಯ-ಭೋಜ್ಯಗಳ ಅಧಿಕಾರದಲ್ಲಿ ದುಃಶಾಸನನನ್ನು ತೊಡಗಿಸಿದನು. ವಿಪ್ರರ ಸ್ವಾಗತ-ಸತ್ಕಾರಗಳನ್ನು ಅಶ್ವತ್ಥಾಮನಿಗೆ ಒಪ್ಪಿಸಿದನು.

ನಾನಾ ರಾಜರುಗಳ ಸತ್ಕಾರದ ಕಾರ್‍ಯವನ್ನು ಸಂಜಯನಿಗೆ ವಹಿಸಿದನು. ಯಾವ ಕಾರ್ಯವು ನೆರವೇರಿದೆ, ಯಾವುದಿಲ್ಲ? - ಎಂಬುದನ್ನು ಅನ್ವವೇಕ್ಷಿಸಲು - ಎಂದರೆ ಪರಿಶೀಲಿಸುತ್ತಿರಲು - ಮಹಾಮತಿಗಳಾದ ಭೀಷ್ಮ-ದ್ರೋಣರನ್ನು ಒಪ್ಪಿಸಿದನು. ಒಳ್ಳೆಯ ಬಣ್ಣದ ಚಿನ್ನ ಹಾಗೂ ರತ್ನಗಳು - ಇವನ್ನು ನೋಡಿಕೊಳ್ಳಲು ಹಾಗೂ ದಕ್ಷಿಣೆಗಳನ್ನು ದಾನಮಾಡುವುದು - ಇವಕ್ಕೆ ಕೃಪಾಚಾರ್ಯರನ್ನು ನಿಯೋಜಿಸಿದನು. ಹೀಗೆಯೇ ಬೇರೆಬೇರೆ ಪುರುಷಶ್ರೇಷ್ಠರನ್ನು ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಸಿದನು.

ನಕುಲನು ಕರೆತಂದ ಬಾಹ್ಲಿಕ, ಧೃತರಾಷ್ಟ್ರ, ಸೋಮದತ್ತ, ಹಾಗೂ ಜಯದ್ರಥ - ಇವರುಗಳು ಪ್ರಭುಗಳಂತೆ ಅಲ್ಲಿ ರಮಿಸಿದರು.

ಧನ-ವ್ಯಯವನ್ನು ನೋಡಿಕೊಳ್ಳುವ ಕೆಲಸವು ಸರ್ವಧರ್ಮಜ್ಞನಾದ ವಿದುರನ ಪಾಲಿಗೆ ಬಂದಿತು. ಎಲ್ಲರ ಕಾಣಿಕೆಗಳನ್ನು ನೋಡಿಕೊಳ್ಳುವ ಕೆಲಸವು ದುರ್ಯೋಧನನಿಗಾಯಿತು. ಶ್ರೀಕೃಷ್ಣನು ಉತ್ತಮವಾದ ಫಲವನ್ನು ಪಡೆಯಲಿಚ್ಛಿಸುವವನಾಗಿ ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೆಲಸವನ್ನು ತಾನೇ ಕೈಗೊಂಡನು!

ಆ ಸಭೆಯನ್ನೂ ಯುಧಿಷ್ಠಿರನನ್ನೂ ನೋಡುವ ಬಯಕೆಯಿಂದ ಬಂದ ರಾಜರುಗಳಲ್ಲಿ ಯಾವನೊಬ್ಬನೂ ಸಾವಿರಕ್ಕೆ ಕಡಿಮೆಯ ಹೊನ್ನನ್ನು (ಎಂದರೆ ಸುವರ್ಣಮುದ್ರೆಯನ್ನು) ತಂದಿರಲಿಲ್ಲ. ಬಹುರತ್ನಗಳಿಂದ ಪ್ರತಿಯೊಬ್ಬರೂ ಆ ಧರ್ಮರಾಜನಿಗೆ ಧನವೃದ್ಧಿಯನ್ನುಂಟುಮಾಡಿದರು. ಆ ರಾಜರುಗಳಲ್ಲಿ ಒಂದು ಸ್ಪರ್ಧೆಯಿದ್ದಿತು - ನಾನು ಕೊಡುವ ರತ್ನದಾನವನ್ನು ಬಳಸಿಯೇ ಯುಧಿಷ್ಠಿರನು ಯಾಗವನ್ನು ಪೂರೈಸುವಂತಾಗಲಿ - ಎಂಬುದಾಗಿ.

ಅಲ್ಲಿಗೆ ಬಂದಿದ್ದವರ ಗೃಹಗಳು ಹೇಗಿದ್ದವು! ಅವುಗಳ ಮಹಡಿಗಳ ತುದಿಗಳು ದೇವತೆಗಳ ವಿಮಾನಗಳನ್ನು ಸ್ಪರ್ಶಿಸುತ್ತವೆಯೋ? - ಎಂಬಂತಿದ್ದವು! ಜಲಾಶಯಗಳಿಂದ ಕೂಡಿದವೂ, ರತ್ನಸಮೃದ್ಧಿಯುಳ್ಳವುಗಳೂ ತುಳುಕುವ ಸಂಪತ್ತಿನಿಂದ ಕಂಗೊಳಿಸತಕ್ಕವೂ ಆದ ಅಂತಹ ಭವನಗಳಿಂದಾಗಿ ಯುಧಿಷ್ಠಿರನ ಸಭೆಯು ಕಂಗೊಳಿಸಿತು.

ಸಮೃದ್ಧಿಯ ವಿಷಯದಲ್ಲಿ ಮಹಾದೇವನೊಂದಿಗೇ ಯುಧಿಷ್ಠಿರನು ಸ್ಪರ್ಧಿಸುತ್ತಿದ್ದನು! ಷಡಗ್ನಿಯಾದ ಯಜ್ಞವನ್ನು ಸದಕ್ಷಿಣವಾಗಿ ಧರ್ಮರಾಜನು ಆರಂಭಿಸಿದನು. ಷಡಗ್ನಿಗಳೆಂದರೆ ಆರು ಬಗೆಯ ಅಗ್ನಿಗಳು. ಅವು ಯಾವುವೆಂದರೆ ಆರಂಭಣೀಯ, ಕ್ಷತ್ರ, ಧೃತಿ, ವ್ಯುಷ್ಟಿ, ದ್ವಿರಾತ್ರ, ಹಾಗೂ ದಶಪೇಯ - ಎಂಬಿವು. ಸದಕ್ಷಿಣವೆಂದರೆ ಸತ್ಪಾತ್ರರಿಗೆ ದಕ್ಷಿಣೆಗಳನ್ನು ಕೊಟ್ಟಿರುವುದು.

ಸೂಚನೆ : 26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 77 (Prasnottara Ratnamalike 77)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png

ಪ್ರಶ್ನೆ - ೭೭. ಮನುಷ್ಯನು ಯಾವುದನ್ನು ಸಂಪಾದಿಸಬೇಕು?

ಉತ್ತರ- ವಿದ್ಯಾ, ಧನ, ಬಲ, ಕೀರ್ತಿ ಮತ್ತು ಪುಣ್ಯ.

ಮನುಷ್ಯನು ಅತ್ಯಂತ ಮುಖ್ಯವಾಗಿ ಬಯಸಬೇಕಾದದ್ದು ಅಥವಾ ಸಂಪಾದಿಸಬೇಕಾದದ್ದು ವಿದ್ಯೆ, ಧನ, ಬಲ, ಕೀರ್ತಿ ಮತ್ತು ಪುಣ್ಯ. ಇವುಗಳನ್ನು ಸಂಪಾದಿಸಿದ್ದರಿಂದ ಆಗುವ ಲಾಭ ಅತ್ಯಂತ ಹಿರಿದಾದದ್ದು. ತನ್ನ ಜೀವನವನ್ನು ಸುಂದರವಾಗಿಸಲು ಮತ್ತು ಸಾರ್ಥಕವಾಗಿಸಲು ಇವು ಅತ್ಯಂತ ಮುಖ್ಯ. ಮನುಷ್ಯನ ಜೀವನದ ಮುಖ್ಯ ಉದ್ದೇಶವೇ ಪುರುಷಾರ್ಥಗಳನ್ನು ಸಾಧಿಸುವುದು ಎಂಬುದನ್ನು ಅರಿತಾಗ ಅದಕ್ಕೆ ಬೇಕಾದ ವಿದ್ಯೆ ಎಂದರೆ ಯಾವುದು? ಎಂಬುದು ಅರ್ಥವಾಗುತ್ತದೆ. ಇದಕ್ಕಾಗಿ ವಿದ್ಯೆ ಅತ್ಯಂತ ಮುಖ್ಯವಾಗಿ ಬೇಕು. ಶ್ರೀರಂಗ ಮಹಾಗುರುಗಳು ಹೇಳುವಂತೆ “ವಿದ್ಯೆ ಎಂದರೆ ‘ವಿದ- ಜ್ಞಾನೇ, ಯಾ-ಪ್ರಾಪಣೇ’ ಎಂಬಂತೆ ಯಾವುದು ಜ್ಞಾನವನ್ನು ಅಂದರೆ ಭಗವಂತನನ್ನು ಪ್ರಾಪ್ತಿಮಾಡಿಸುತ್ತದೆಯೋ ಅದನ್ನು ವಿದ್ಯೆ ಎಂಬುದಾಗಿ ಕರೆಯಬೇಕು” ಎಂದು. ಇಂದಿನ ವಿದ್ಯೆಯೆಂಬುದು ಕೇವಲ ನಮ್ಮ ಭೌತಿಕ ಜೀವನವನ್ನು ನಡೆಸಲು ಮಾತ್ರ ಸಾಧನವಾಗಿದೆ. ಆದರೆ ನಮ್ಮ ಭಾರತೀಯ ಪರಂಪರೆಯು ಯಾವುದನ್ನು ವಿದ್ಯೆ ಎಂಬುದಾಗಿ ಕರೆದಿದೆಯೋ ಅದು ಕೇವಲ ಭೌತಿಕ ಜೀವನಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ದೈವಿಕ ಮತ್ತು ಆಧ್ಯಾತ್ಮಿಕ ಜೀವನಕ್ಕೂ ಅನುಕೂಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಮಾನವ ಈ ವಿದ್ಯೆಯನ್ನು ಸಂಪಾದಿಸುವುದು ಅತ್ಯಂತ ಮುಖ್ಯ. ವಿದ್ಯೆಯ ಬಲದಿಂದ ಬರುವ ಧನದಿಂದ ಧರ್ಮವು ಮತ್ತು ಪುಣ್ಯವೂ ಸಂಪಾದನೆಯಾಗುತ್ತದೆ. ಅಂತಹ ಧನವನ್ನು ಸಂಪಾದನೆ ಮಾಡುವುದು ಅತ್ಯಂತ ಅವಶ್ಯಕ. ಅದು ನಾಲ್ಕು ಪುರುಷಾರ್ಥಗಳಲ್ಲಿ ಒಂದು ಎಂಬುದಾಗಿ ಹೇಳಲಾಗಿದೆ. ಅಂತಹ ಅರ್ಥ ಸಂಪಾದನೆಯು ಜೀವನವನ್ನು ಸುಂದರವಾಗಿಸಲು ಅತ್ಯಂತ ಮುಖ್ಯವಾದದು. ಮಹಾಭಾರತದ “ಅರ್ಥಾಃ ಬಹಿಶ್ಚರಾಃ ಪ್ರಾಣಾಃ” ಎಂಬ ಮಾತು ಧನದ ಸಂಪಾದನೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ಬದುಕಬೇಕಾದರೆ ಹೇಗೆ ಶರೀರದ ಒಳಗಿನ ಪ್ರಾಣ ಎಷ್ಟು ಮುಖ್ಯವೋ, ಅಂತಯೇ ಬಹಿರಂಗದ ಪ್ರಾಣ ರೂಪವಾದ ಧನವೂ ಅಷ್ಟೇ ಮುಖ್ಯ ಎಂದು ಧನದ ಮಹತ್ವ ಅರಿವಾಗುತ್ತದೆ. ಹಾಗಾಗಿ ಧನ ಸಂಪಾದನೆಯು ಧರ್ಮದ ಚೌಕಟ್ಟಿನಲ್ಲಿ ಇರಬೇಕು.

 ಒಬ್ಬ ಬಲಿಷ್ಠನಾದರೆ ಮಾತ್ರ ಈ ಪ್ರಪಂಚದಲ್ಲಿ ಜೀವಿಸಲು ಸಾಧ್ಯ. ಈ ಪ್ರಪಂಚದ ಸಹಜ ನಡೆಯೇ ಹಾಗೆ, ಬಲಿಷ್ಠವಾದುದು ಬದುಕುತ್ತದೆ; ದುರ್ಬಲವಾದುದು ಅಳಿಯುತ್ತದೆ. ಹಾಗಾಗಿ ನಾವು ಬದುಕಬೇಕಾದರೆ ಬಲವನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ಹೀಗೆ ವಿದ್ಯೆ, ಧನ ಮತ್ತು ಬಲ ಇವುಗಳಿಂದ ಬರುವ ಯಾವ ಕೀರ್ತಿ ಅಥವಾ ಪುಣ್ಯ ಇದೆಯೋ ಅದಕ್ಕೂ ಅಷ್ಟೇ ಬೆಲೆ ಉಂಟು. ಅದು ಹೆಚ್ಚು ಕಾಲ ಉಳಿಯುತ್ತದೆ. ನಾವು ಅಳಿದರೂ, ಕೀರ್ತಿಯು ನಮ್ಮನ್ನು ಉಳಿಸುತ್ತದೆ. ಅಂತಹ ಕೀರ್ತಿಯನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ನಾವು ಮಡಿದ ಮೇಲೂ ನಮ್ಮನ್ನು ಸುಂದರವಾಗಿಸುವುದು ಎಂದರೆ ಅದೇ ಪುಣ್ಯ ಅಥವಾ ಧರ್ಮ. ನಾವು ಬದುಕಿದಾಗ ಯಾವ ಒಳ್ಳೆಯ ಕಾರ್ಯವನ್ನು ಮಾಡುತ್ತೇವೋ, ಅದರಿಂದ ನಮಗೆ ಪುಣ್ಯ ಸಂಪಾದನೆ ಆಗುತ್ತದೆ. ಆ ಪುಣ್ಯ ಸಂಪಾದನೆಯ ಕಾರಣದಿಂದಲೇ ನಾವು ಪಡೆದ ಜನುಮದಲ್ಲೇ ನಮ್ಮ ಜೀವನದ ಸಾರ್ಥಕವನ್ನು ಕಾಣಬಹುದು ಅಥವಾ ಮತ್ತೂ ಉತ್ಕೃಷ್ಟ ಜನ್ಮವನ್ನು ಪಡೆದು ನಮ್ಮ ಪುರುಷಾರ್ಥವನ್ನು ಪೂರ್ಣಮಾಡಿಕೊಳ್ಳಲು ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬರೂ ಬಯಸಬೇಕಾದದ್ದು ಇಂತಹ ಪುಣ್ಯವನ್ನೇ. ಇಲ್ಲಿ ಹೇಳಿದ ಎಲ್ಲವೂ ಧರ್ಮಮಯ ಜೀವನಕ್ಕೆ ಅನುಕೂಲವಾದ ಸಾಮಗ್ರಿಗಳು. ಆದ್ದರಿಂದ ಇವುಗಳನ್ನು ಮಾನವನಾದವನು ಸಂಪಾದನೆ ಮಾಡಲೇಬೇಕು.


ಸೂಚನೆ :  9/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, August 2, 2026

ಅಷ್ಟಾಕ್ಷರೀ 111 ಸಂಕಲ್ಪಾಃ ಕಲ್ಪತರವಃ (Astakshara 111)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



 ಬಯಸಿದುದೆಲ್ಲಾ ಬಂದೇಬಿಟ್ಟೀತು, ಜೋಕೆ!

ಎಷ್ಟೋ ಬಾರಿ ನಮಗೆ ಒಂದು ಪ್ರಶ್ನೆಯುಂಟಾಗುತ್ತದೆ - ಜೀವನದಲ್ಲಿ ತೃಪ್ತಿಯಿರಬೇಕೋ? ಇರಬಾರದೋ? - ಎಂದು.

ಏಕೆ? ತೃಪ್ತಿಯೂ ಒಳ್ಳೆಯದಲ್ಲ, ಅತೃಪ್ತಿಯೂ ಒಳ್ಳೆಯದಲ್ಲ! ಹೇಗೆ? ಅಲ್ಪತೃಪ್ತಿಯೇ ಇದ್ದುಬಿಟ್ಟರೆ ಮುಂದೆ ಮತ್ತಾವುದಕ್ಕೂ ಶ್ರಮಿಸಬೇಕೆನಿಸುವುದಿಲ್ಲ.

"ಹಾಸಿಗೆಯಿದ್ದಷ್ಟು ಕಾಲು ಚಾಚು" ಎಂಬ ಗಾದೆಯಿದೆ. ಹಾಗೆಂದರೇನು? ನಮ್ಮ ಮಿತಿಯನ್ನರಿತು ಬಾಳಬೇಕು; ಮಿತಿಮೀರಿದ ಅಭಿಲಾಷೆ ಬೇಡ - ಎಂದು.

ಒಂದು ಗಾದೆಯ ಮಾತನ್ನೇ ಅಷ್ಟೊಂದನುಸರಿಸುವುದೇ? - ಎಂದರೆ ಅದಕ್ಕೂ ಸಮರ್ಥಕವಾಗಿ ಮತ್ತೂ ಒಂದು ಗಾದೆಯೇ ಇದೆಯಲ್ಲವೇ: "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂದು!

ಆದರಿದೋ, ಪರಸ್ಪರ-ವಿರುದ್ಧವಾದ ಗಾದೆಗಳೂ ಇರುತ್ತವಲ್ಲವೇ? ಹಾಗಾದರೆ, ಮತ್ತೆ ನಮ್ಮ ವಿವೇಚನೆಗೆ ಕೆಲಸವಿದ್ದೇ ಇದೆಯೆಂದಾಯಿತು.

ಇನ್ನು ತೃಪ್ತಿಯ ಬದಲು ಅತೃಪ್ತಿಯೇ ಮನಸ್ಸಿನಲ್ಲಿ ಉಳಿದರಂತೂ ನೆಮ್ಮದಿಯೇ ಇರದಷ್ಟೆ. ಇವಿಷ್ಟರ ಮಥಿತಾರ್ಥವಿದು: ಅತೃಪ್ತಿಯಿರಬೇಕು: ಅದಿದ್ದರಲ್ಲವೇ ಮನುಷ್ಯನು ಮುಂದುಮುಂದಕ್ಕೆ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುವುದು? ಹಾಗೆಂದು ಅತೃಪ್ತಿಯೇ ಸದಾ ಇರುವುದಾದರೂ ಕಷ್ಟವೇ: ಏನೆಲ್ಲಾ ಸಾಧಿಸಿದರೂ ಹಂಬಲಗಳಿಗೊಂದು ನಿಲುಗಡೆಯೆಂಬುದೇ ಇಲ್ಲವಾಗಿ, ಸದಾ ಕೆರಳಿರುವಂತೆಯೇ ಆಗಿಬಿಡುವುದು. ಅಲ್ಲಿಗೆ ತೃಪ್ತಿ-ಅತೃಪ್ತಿಗಳಲ್ಲಿ ಏನೋ ಒಂದು ತೋಲನವಿರಬೇಕಾಗುತ್ತದೆ. 

ಎಷ್ಟೋ ಬಾರಿ ನಾವು ಕೇಳುವ/ಕೇಳಿಕೊಳ್ಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವು ದೊರಕಿತೆಂದಾದರೂ, ಆ ಉತ್ತರದಲ್ಲೂ ಸ್ಪಷ್ಟತೆಯನ್ನು ಸಾಧಿಸಿಕೊಳ್ಳಬೇಕಾಗಿರುವುದು ಉಳಿದಿರುತ್ತದೆ. ಹೇಗೆ? "ನಾವು ಹೇಗೆ ಬದುಕಬೇಕು?" - ಎಂಬುದು ಪ್ರಶ್ನೆಯಾದರೆ, ಅದಕ್ಕೆ "ತಾನೂ ಇತರರೂ ಚೆನ್ನಾಗಿರುವಂತೆ ಬದುಕಬೇಕು" ಎಂಬುದೊಂದು ಒಳ್ಳೆಯ ಉತ್ತರ. ಆದರೆ ಜೊತೆಗೇ, "ಚೆನ್ನು ಎಂದರೇನು?” - ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರಕೊಡುವುದು ಸುಲಭವಲ್ಲ, ಅಲ್ಲವೇ?

ನಾವು ಚೆನ್ನಾಗಿ ಬದುಕಬೇಕೆಂದರೆ, ಏನನ್ನಾದರೂ ದೊಡ್ಡದನ್ನು ಸಾಧಿಸಬೇಕು ಎನ್ನುವುದುಂಟು.  ದೊಡ್ಡದಕ್ಕಾಗಿ ತಪಸ್ಸು ಬೇಕು ಎನ್ನುವರಲ್ಲವೇ? "ಯಾವಯಾವುದು ದುರ್ಲಭವೋ, ಯಾವಯಾವುದು ದುಷ್ಕರವೋ, ಅದನ್ನೆಲ್ಲಾ ತಪಸ್ಸಿನಿಂದ ಸಾಧಿಸಬಹುದು: ತಪಸ್ಸಿಗೆ ಎಟುಕದುದುಂಟೇ?” – ಎಂದಿದ್ದಾನೆ, ಮನು.

ಉಕ್ತಿಮಾತ್ರವಲ್ಲ; ಹಾಗೆ ತಪಸ್ಸು ಮಾಡಿ, ಇತರರಿಗೆ ಸಾಧ್ಯವಾಗದುದನ್ನು ಸಾಧಿಸಿದ ಅನೇಕರ ಕಥೆಗಳು ನಮ್ಮ ಇತಿಹಾಸ-ಪುರಾಣಗಳಲ್ಲುಂಟಷ್ಟೆ?

ಹೀಗಾಗಿ, ಬೇಕಾದುದನ್ನೆಲ್ಲ ತಪಸ್ಸಿನಿಂದ ಸಾಧಿಸಿಕೊಳ್ಳಬಹುದೆಂದುಕೊಂಡರೂ, ಎಲ್ಲವೂ ಸ್ಪಷ್ಟವಾಯಿತೆಂದಲ್ಲ. ಏಕೆ? ತಪಸ್ಸು ಮಾಡಿಯೂ ಕಂಗೆಟ್ಟವರಿಲ್ಲವೇ?

ಮತ್ತೆ ಪ್ರಶ್ನೆ: ತಪಸ್ಸನ್ನು ಮಾಡಿದವರಿಗೆಲ್ಲಾ ವರವೀಯುವವನು ಭಗವಂತನೇ ಅಲ್ಲವೇ? ಆದರೂ ಹಾಳಾದವರುಂಟೇ?  

ಉಂಟೇ ಉಂಟು. ಹತ್ತು ತಲೆಯ ರಾವಣನೂ ಸತ್ತುಹೋದನಲ್ಲವೇ? ಭಸ್ಮಾಸುರನು ತಾನೇ ಭಸ್ಮವಾಗಿಬಿಡಲಿಲ್ಲವೇ? ಹಿರಣ್ಯಕಶಿಪುವಿಗೆ ಎಂತಹ ಕ್ರೌರ್ಯದ ಮರಣ ಸಂದಿತಲ್ಲವೇ? ಇವರೆಲ್ಲರೂ ತಪಸ್ಸು ಮಾಡಿದ್ದವರೇ; ಘೋರವಾದ ತಪಸ್ಸನ್ನೇ ಆಚರಿಸಿದ್ದವರೇ!

ತಪಸ್ಸಿಗಿಂತಲೂ ಉತ್ತಮವಾದ ಸಾಧನವಿಲ್ಲವೆಂದರೂ ಹೀಗೇಕೆ ಈ ತಪಸ್ವಿಗಳಿಗೆಲ್ಲಾ ಘೋರಪತನವಾಯಿತು? ತಪೋಲಬ್ಧವಾದ ಅನುಪಮ-ಬಲವಿದ್ದೂ ಒಬ್ಬೊಬ್ಬನೂ ಲೋಕ-ಕಂಟಕನೂ ಆತ್ಮ-ಘಾತಕನೂ ಆಗಿಬಿಟ್ಟನಲ್ಲಾ? ಹಾಗಿದ್ದರೆ ಇವರೆಲ್ಲಾ ಎಡವಿದ್ದೆಲ್ಲಿ?

ಇದರ ಉತ್ತರವನ್ನು ಭಾವನೋಪನಿಷತ್ತಿನ ಒಂದು ಸುಂದರವಾದ ಕಿರುನುಡಿಯಲ್ಲಿ ಕಂಡುಕೊಳ್ಳಬಹುದು: “ಸಂಕಲ್ಪಾಃ ಕಲ್ಪತರವಃ” (ನಮ್ಮ ಸಂಕಲ್ಪಗಳೇ ಕಲ್ಪವೃಕ್ಷಗಳು!) – ಎಂಬ ಮಾತದು.

ಶ್ರೀರಂಗಮಹಾಗುರುಗಳ ಒಂದು ಮಾತು ಈ ಸಂದರ್ಭದಲ್ಲಿ ಮನನೀಯವಾಗಿದೆ: "ಭಗವಂತನು ಎಲ್ಲರಿಗೂ ಒಂದೇ ಆಶೀರ್ವಾದವನ್ನು ಮಾಡಿದ್ದಾನೆ: ಹೇಗೆ ಮನಸ್ಸಿದ್ದರೆ ಹಾಗೆ ಬಾಳು - ಎಂಬುದಾಗಿ. ಮನಸ್ಸು ಒಂದು ಕಲ್ಪವೃಕ್ಷ: ಏನನ್ನು ಸಂಕಲ್ಪಿಸುತ್ತೇವೆಯೋ  ಅದಕ್ಕನುಗುಣವಾದ ಫಲವನ್ನು ಪಡೆಯುತ್ತೇವೆ"!

ರಾವಣಾದಿಗಳು ಉಗ್ರವಾದ ತಪಸ್ಸನ್ನೇನೋ ಮಾಡಿದರು. ಆದರೆ ತಮ್ಮತಮ್ಮ ಸಂಕಲ್ಪದಂತೆ ಕ್ಷುದ್ರ-ಫಲಗಳನ್ನೇ ಕೇಳಿಕೊಂಡರು - ಅವೇ ನಮಗೆ ಅದ್ಭುತವೆನಿಸುವುದಾದರೂ! 

ಬ್ರಹ್ಮನ ಕೆಲಸವೊಂದೇ: ಎಲ್ಲರಿಗೂ ಅವರವರ ಸಂಕಲ್ಪಕ್ಕೆ “ತಥಾಸ್ತು” ಎನ್ನುವುದು. ಎಂದೇ, ಕೇಳಿಕೊಳ್ಳುವಾಗಲೇ ಸರಿಯಾದ ವರವನ್ನೇ ಹೇಳಿಕೊಳ್ಳಬೇಕು! ಕಾರ್ಯಾರಂಭದಲ್ಲೇ ಸಂಕಲ್ಪವು ಯುಕ್ತವಾಗಿರಬೇಕು! ಇಲ್ಲವೋ, ಸ್ವ(ಕೀಯ)ನಾಶವು ಸಿದ್ಧ!

ಚಿಂತಿಸಿದ್ದನ್ನೆಲ್ಲಾ ಕೊಡುವ ಚಿಂತಾಮಣಿ/ಕಾಮಧೇನು/ಕಲ್ಪವೃಕ್ಷಗಳು ದೇವಲೋಕದಲ್ಲಿವೆಯೆನ್ನುತ್ತಾರೆ. ಅದು ಸುಳ್ಳಲ್ಲ; ಆದರೆ ನಮ್ಮೊಳಗೇ ಇರುವ  ಕಲ್ಪವೃಕ್ಷವೊಂದನ್ನು ನಾವು ಗಮನಿಸುತ್ತಿಲ್ಲ: ನಮ್ಮ ಸಂಕಲ್ಪವೇ ಅದು!

ಸತ್ಸಂಕಲ್ಪಬೀಜಗಳಿಗೆ ಸಂತತ-ಸಾಧನೆಯೆಂಬ ಸಲಿಲ-ಸೇಕವಿದ್ದಲ್ಲಿ ಸ್ವಹಿತ-ಪರಹಿತಗಳೆಂಬ ಸತ್ಫಲಗಳು ಸೊಂಪಾಗಿ ಸಂಪಾದಿತವಾಗುವುವೆಂಬುದರಲ್ಲಿ ಸಂಶಯವೇನು? 

ಯಾವುವು ಸತ್ಸಂಕಲ್ಪಗಳು? ಎರಡೇ: ದೇಶಹಿತ-ಸಾಧನವೆಂಬುದೊಂದು; ಆತ್ಮಜ್ಞಾನ-ಸಾಧನವೆಂಬುದೊಂದು. ಉಳಿದೆಲ್ಲ ಬಯಕೆಗಳೂ ಇವಕ್ಕೆ ಅಂಗಭೂತವಾಗಿರುವುದೇ ತೆರನಾದುದು. 

ದೇಶಸೇವೆ-ಈಶಸೇವೆಗಳಿಗಾಗಿ ಜೀವತೇಯುವವರಿಗಿಂತಲೂ ಧನ್ಯರುಂಟೆ? ಚೆನ್ನಿನ ಜೀವನವೆಂಬುದೊಂದಿದ್ದರೆ ಅವರದೇ! ಇವೆರಡೂ ಸಂಪೂರ್ಣವಾಗಿ ಸಾಧಿತವಾಗುವ ತನಕ ಅತೃಪ್ತಿಯೇ; ಎಷ್ಟೆಷ್ಟು ಸಾಧಿತವಾದರಷ್ಟಷ್ಟು  ತೃಪ್ತಿಯೇ!

ಸೂಚನೆ: 1/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.