Monday, May 11, 2026

ಅಷ್ಟಾಕ್ಷರೀ 104 ನ ಶಕ್ಯಃ ಚಕ್ಷುಷಾ ದ್ರಷ್ಟುಂ (Astakshara 104)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಬರಿಗಣ್ಣಿನಿಂದ ನೋಡಲಾಗದು

ಜೀವನದಲ್ಲಿ ಏನನ್ನು ನಂಬಬಹುದು, ಏನನ್ನು ನಂಬಬಾರದು? - ಎನ್ನುವುದೇ ದೊಡ್ಡ ಪ್ರಶ್ನೆಯಾಗಿಬಿಡುತ್ತದೆ. 

ಯಾರಾದರೂ ಬೇರೆಯವರ ಬಗ್ಗೆ ಏನನ್ನಾದರೂ ಕೆಟ್ಟದ್ದನ್ನು ಹೇಳಿದರೆ, ನಂಬಲು ಮನಸ್ಸು ಬರದಿದ್ದರೂ, “ಬೆಂಕಿಯಿಲ್ಲದೆ ಹೊಗೆ ಬಂದೀತೇ?” - ಎಂಬ ಒಂದೇ ಲೆಕ್ಕವನ್ನು ಹಿಡಿದುಕೊಂಡು, "ಯಾರಿಗೆ ಗೊತ್ತು? ಇದ್ದರೂ ಇರಬಹುದು" ಎಂದುಬಿಡುತ್ತದೆ, ಲೋಕ. 

ಹೀಗಾಗಿಯೇ ಅಲ್ಲವೇ, ಸೀತಾಮಾತೆಯ ವಿಷಯಕ್ಕೂ ಜನಗಳು ಸಲ್ಲದ ಮಾತುಗಳನ್ನಾಡಿದುದು? ಅಗ್ನಿಪರೀಕ್ಷೆಯೇ ನಡೆದು ಅದರಲ್ಲಿ ಅಗ್ನಿದೇವನೇ ಪ್ರತ್ಯಕ್ಷನಾಗಿ ಬಂದು, ಸೀತೆಯು ಪರಮಶುದ್ಧಳು ಎಂಬುದನ್ನು ಹೇಳಿದಮೇಲೂ ಅಪವಾದ ತಪ್ಪಿತೇ? ಸಂಶಯಪಡುವವರ ಮುಂದೆಲ್ಲಾ ಮತ್ತೆ ಮತ್ತೆ ಅಗ್ನಿಪರೀಕ್ಷೆಯಾಗುತ್ತಿರುವುದಾದರೂ ಶಕ್ಯವೇ?

ಅದಕ್ಕೇ, “ಕಂಡದ್ದನ್ನು ಮಾತ್ರವೇ ನಂಬತಕ್ಕದ್ದು, ಕೇಳಿದ್ದನ್ನೆಲ್ಲಾ ಅಲ್ಲ” - ಎನ್ನುವವರಿದ್ದಾರೆ. ಪ್ರತ್ಯಕ್ಷವೇ ಪ್ರಮಾಣ: ಸಾಕ್ಷಾತ್ತಾಗಿ ನೋಡಿದ್ದನ್ನಷ್ಟೇ ನಂಬಬಹುದು; ಕಣ್ಣಾರ ಕಂಡದ್ದನ್ನೊಪ್ಪಬಹುದು – ಎಂಬುದು ಅವರ ತರ್ಕ. 

ಅಲ್ಲೂ ಕಷ್ಟವಿದೆ. ಕಂಡದ್ದೆಲ್ಲಾ ಸತ್ಯವೇ? “ಕಂಡದ್ದೆಲ್ಲಾ ಸತ್ಯವಾಗಿರಬೇಕಾಗಿಲ್ಲ” - ಎಂದು ಹೇಳಲು ಬಂದಿರುವುದೇ ವಿಜ್ಞಾನ! ಭೂಮಿಯು ಗೋಳಾಕಾರವಾಗಿದೆ - ಎಂಬುದನ್ನು ಕಂಡ ಮೇಲೇ ನಂಬುವುದು ಎನ್ನಲಾದೀತೇ? ಭೂಮಿಯು ತಿರುಗುತ್ತಿದೆ - ಎಂಬುದನ್ನು ಮೊದಲು ತೋರಿಸಿಕೊಡಿ, ಅಲ್ಲಿಯ ತನಕ ಒಪ್ಪೆ - ಎಂದರೆ, “ಹೋಗು ಬೆಪ್ಪೇ!” ಎನ್ನುತ್ತಾರೆ! 

ಬದಲಾಗಿ, ಕಣ್ಣಿಗೆ ಕಂಡದ್ದು ಸುಳ್ಳಾಗುವುದೂ ಉಂಟು. ಸೂರ್ಯ-ಚಂದ್ರರೂ, ನಕ್ಷತ್ರಗಳೂ ಭೂಮಿಯ ಸುತ್ತ ತಿರುಗುವಂತೆ ತೋರುತ್ತದೆ. ಕಣ್ಣಾರ ಕಂಡಿದ್ದೇವೆ - ಎಂದುಕೊಂಡರೂ ಅದೇನು ತಥ್ಯವೇ? ಅಷ್ಟು ದೂರದ ವಿಷಯವೇಕೆ? ನೀರಿನಲ್ಲಿ ಕಡ್ಡಿಯನ್ನು ಅದ್ದಿದಾಗ ಕಡ್ಡಿಯು ಮುರಿದಿರುವಂತೆ ತೋರುತ್ತದೆ. ಬೆಂಕಿಯ ಕೊಳ್ಳಿಗೆ ಅಲಾತವೆನ್ನುತ್ತಾರೆ; ಅಲಾತವನ್ನು ವೇಗವಾಗಿ ಚಕ್ರಾಕಾರವಾಗಿ ತಿರುಗಿಸಿದರೆ, ಬೆಂಕಿಯೇ ವೃತ್ತಾಕಾರವಾಗಿರುವಂತೆ ತೋರುತ್ತದೆ! ಹಾಗೆಯೇ, ಮರಳುಗಾಡಿನಲ್ಲಿ ದೂರದಲ್ಲಿ ನೀರಿರುವಂತೆ ತೋರುತ್ತದೆ: ಮರೀಚಿಕೆಯಲ್ಲಿ ನೀರಿರುವುದುಂಟೇ? 

ಹೀಗಾಗಿ ಕಂಡದ್ದು ಸತ್ಯವಲ್ಲ, ಸತ್ಯವು ಕಾಣಲಾಗದ್ದು – ಎಂದೆನಿಸಿಬಿಡುವುದೂ ಉಂಟು! ಎಂದೇ, “ಪ್ರತ್ಯಕ್ಷವನ್ನೂ ಪ್ರಮಾಣಿಸಿ ನೋಡು” ಎಂಬ ಗಾದೆಯನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. ಹೋಗಲಿ,  ಇರುವುದನ್ನು ಇರುವಂತೆಯೇ ತೋರಿಸುವುದಲ್ಲವೇ, ಕನ್ನಡಿ? “ಚೆನ್ನಾಗಿ ದರ್ಶನ ಮಾಡಿಸುತ್ತದೆ” - ಎಂಬ ಕಾರಣಕ್ಕೇ ಅದನ್ನು ಆ-ದರ್ಶವೆನ್ನುವುದು, ಅಲ್ಲವೇ? ಆದರೆ ಅದಕ್ಕೂ, "ನೋಡಪ್ಪಾ, ನಾವು ಉಪವೀತವನ್ನು ಧರಿಸಿದ್ದರೆ ಕನ್ನಡಿಯು ಪ್ರಾಚೀನಾವೀತವೆಂಬಂತೆ ತೋರಿಸುತ್ತದೆ!” ಎಂದು ಅವರು ಆ ಬಗ್ಗೆ ತಮಾಷೆಯಾಗಿ ಎಚ್ಚರಿಸಿದ್ದಾರೆ! ಉಪವೀತವೆಂದರೆ ಜನಿವಾರವು ಎಡಭುಜದ ಮೇಲೆ ಬಂದಿರುವುದು; ಪ್ರಾಚೀನಾವೀತವೆಂದರೆ ಬಲಭುಜದ ಮೇಲೆ. ಮೊದಲನೆಯದು ದೇವಕಾರ್ಯಕ್ಕೆ; ಎರಡನೆಯದು ಪಿತೃಕಾರ್ಯಕ್ಕೆ! 

ಒಂದು ಮನೆಯನ್ನು ನೋಡಿದರೆ ಅದರ ಅಡಿಪಾಯ ನಮಗೆ ತೋರದು. ಒಂದು ಮರವನ್ನು ನೋಡಿದಾಗ ಅದರ ವ್ಯಕ್ತ-ಭಾಗವಾದ ಕಾಂಡ-ಕೊಂಬೆ-ಎಲೆ-ಹಣ್ಣುಗಳೆಲ್ಲ ಕಂಡರೂ, ಅವ್ಯಕ್ತವಾದ ಅದರ ಬೇರು ಮಾತ್ರ, ಗುಪ್ತವಾಗಿ ಆಳವಾಗಿ ವ್ಯಾಪಿಸಿದ್ದರೂ ಗೋಚರವಾಗದು! ಆದರೆ ಅವ್ಯಕ್ತವಾದ ಆ ಬೇರೇ ವ್ಯಕ್ತವಾದ ವೃಕ್ಷಕ್ಕೆ ಧಾರಕವಾದದ್ದು!

ಹಾಗೆಯೇ ನಮ್ಮ ಜೀವನದ ಬೇರೂ. ನಮ್ಮ ಕೈ-ಕಾಲುಗಳು ಕೊಂಬೆಗಳ ಹಾಗೆ; ಇವನ್ನುಳಿದ ಶರೀರಭಾಗವು ಕಾಂಡದಂತೆ. ಜೀವನದ ಬೇರು ಅವ್ಯಕ್ತ. ಇಲ್ಲೂ ಅಷ್ಟೆ: ಅವ್ಯಕ್ತವಾದದ್ದೇ ಹೆಚ್ಚು ಮುಖ್ಯ. ಶರೀರವನ್ನೇ ಅಧ್ಯಯನ ಮಾಡುವ ಆಯುರ್ವೇದವು ಸಹ ಈ ಸತ್ಯವನ್ನು ಚೆನ್ನಾಗಿ ಮನಗಂಡಿದೆ. ಎಂದೇ, ಸುಶ್ರುತ-ಸಂಹಿತೆಯು ಹೇಳುವ ಮಾತು: “(ಬರಿ)ಕಣ್ಣಿನಿಂದ ಕಾಣಲಾಗದು (ನ ಶಕ್ಯಃ ಚಕ್ಷುಷಾ ದ್ರಷ್ಟುಂ), ಸೂಕ್ಷ್ಮತಮನೆನಿಸುವ ಆ ವಿಭುವನ್ನು”, ಎಂದರೆ ಪರಮಾತ್ಮನನ್ನು - ಎಂದು.

ವಿಜ್ಞಾನವು ತೋರಿಸುವ ಬ್ಯಾಕ್ಟೀರಿಯಾಗಳ ವಿಷಯವೂ ಹಾಗೆಯೇ ಅಲ್ಲವೇ? ಬರಿಗಣ್ಣಿನಿಂದ ಒಂದು ದೊಡ್ಡ ಮಡುವಿನಲ್ಲೂ ಒಂದೇಒಂದನ್ನು ಸಹ ಕಾಣೆವು; ಆದರೆ ಬರೀ ಬೊಗಸೆನೀರಿನಲ್ಲಿ ಅವು ಲಕ್ಷಗಟ್ಟಲೆ ಇರುವುದು ಮೈಕ್ರೋಸ್ಕೋಪಿನ ಮೂಲಕ ಗೋಚರವಾಗುತ್ತದೆ! ಹೊರಗಣ್ಣಿಗೆ ಕಾಣದ ಮೈಯೊಳಗಣ ಮೂಳೆಗಳನ್ನು ಎಕ್ಸ್-ರೇ-ಗಳು ನಿಚ್ಚಳವಾಗಿಸುವ ಉದಾಹರಣೆಯನ್ನೂ ಸಹ ಶ್ರೀರಂಗಮಹಾಗುರುಗಳೇ ಇತ್ತಿರುವರು. ಕೇವಲಭೌತಿಕವಸ್ತುಗಳಲ್ಲೇ ಇಷ್ಟೆಲ್ಲ!

ಹಾಗಾದರೆ ಪರಮಾತ್ಮನಿರುವುದು ಯಾರಿಗಾದರೂ ಕಂಡೀತೇ? - ಎಂದು ಕೇಳಿದರೆ, ಅದೇ ಸುಶ್ರುತ-ಸಂಹಿತೆಯ ಉತ್ತರವಿಂತಿದೆ: ಜ್ಞಾನ-ಚಕ್ಷುಸ್ಸು, ತಪಶ್ಚಕ್ಷುಸ್ಸುಗಳನ್ನುಳ್ಳವರಿಗೆ ಅದು ಗೋಚರವಾಗುವುದು - ಎಂದು. ಚಕ್ಷುಸ್ಸೆಂದರೆ ಕಣ್ಣು. ಅರ್ಜುನನಿಗೆ ಕೃಷ್ಣನಾದರೂ ಹೇಳಿದ್ದೇನು? ದಿವ್ಯ -ಚಕ್ಷುಸ್ಸನ್ನು ನಿನಗೆ ಕೊಡುತ್ತೇನೆ, ಇಲ್ಲವೋ ನೋಡಲಾರೆ – ಎಂದು. ಇದು ತಪಸ್ಸಿನಿಂದ ಸಂಪಾದ್ಯ. ತಪಸ್ಸು ಒಳಗಣ್ಣನ್ನು ತೆರೆಸುತ್ತದೆ. 

ಇದರ ಸತ್ಯತೆಯನ್ನು ಸ್ವಾನುಭವದಿಂದಲೇ ಕಂಡುದಲ್ಲದೆ, ತಮ್ಮ ಹಲವು ಶಿಷ್ಯರಿಗೂ ಅನುಭವ-ವೇದ್ಯವನ್ನಾಗಿಸಿದ್ದರು, ಶ್ರೀರಂಗಮಹಾಗುರುಗಳು.

ಸೂಚನೆ: 26/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 187 ಅಪ್ಪನಿಗೆ ಉತ್ತರಕ್ರಿಯೆ - ಮಗನಿಗೆ ಪಟ್ಟಾಭಿಷೇಕ (Vyaasa Vikshita187)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಕೃಷ್ಣನ ಕೃಪೆಯಿಂದಾಗಿ ಸೆರೆಯಿಂದ ಬಿಡುಗಡೆಹೊಂದಿದ ಅರಸರು ತಮ್ಮ ಕೃತಜ್ಞತೆಯ  ನುಡಿಯನ್ನು ಹೀಗೆ ಮುಗಿಸಿದರು:

“ನಮ್ಮಿಷ್ಟು ಮಂದಿಗೆ ನೀ ದಯಪಾಲಿಸಿದ ಈ ಸ್ವಾತಂತ್ರ್ಯದಿಂದಾಗಿ, ದೀಪ್ತವಾದ ಯಶಸ್ಸು - ಎಂದರೆ ಬೆಳಗುವ ಕೀರ್ತಿಯು - ನಿನಗೆ ಲಬ್ಧವಾಯಿತು, ಓ ಯದುನಂದನನೇ! ಕೃತಜ್ಞರಾದ ನಮಗೆ ನಿನ್ನ ಅಪ್ಪಣೆಯಾಗಬಹುದು: ಅದೆಂತಹ ಕಷ್ಟವಾದ ಕಾರ್ಯವೇ ಆದರೂ ರಾಜರುಗಳಾದ ನಾವು ನೆರವೇರಿಸಿಕೊಡುವೆವು."

ಅವರು ಹೀಗೆ ಹೇಳಲಾಗಿ, ಮಹಾಮನಸ್ಕನಾದ ಕೃಷ್ಣನು, ಅವರಿಗೆ ಆಶ್ವಾಸನೆ ಕೊಡುತ್ತಾ ಹೀಗೆ ಹೇಳಿದನು:

"ರಾಜರೇ, ಯುಧಿಷ್ಠಿರನು ರಾಜಸೂಯ-ಯಜ್ಞವನ್ನು ಮಾಡಲು ಇಷ್ಟಪಟ್ಟಿದ್ದಾನೆ. ಆತನ ಪ್ರವೃತ್ತಿಯು ಧರ್ಮಮಯವಾದುದು. ಆತನು ಸಮ್ರಾಟ್ - ಎಂಬ ಪದವಿಯನ್ನು ಸಂಪಾದಿಸಿಕೊಳ್ಳಲು ಬಯಸಿದ್ದಾನೆ. ಇದನ್ನರಿತು ನೀವೆಲ್ಲರೂ ಆತನಿಗೆ ಸಾಹಾಯ್ಯವನ್ನು ಮಾಡಿರಿ".

ಆಗ ಆ ರಾಜರೆಲ್ಲರೂ ತುಂಬ ಸಂತೋಷಗೊಂಡರು. ಆತನ ಮಾತನ್ನೊಪ್ಪಿ, "ಹಾಗೆಯೇ ಆಗಲಿ" ಎಂದು ಒಪ್ಪಿಗೆ ಸೂಚಿಸಿದರು. ಅನೇಕ ರತ್ನಗಳನ್ನು ಕೃಷ್ಣನಿಗೆ ಸಲ್ಲಿಸಿದರು. ಅವರ ಮೇಲಿನ ಕರುಣೆಯಿಂದ, ಮತ್ತು ಅವರ ಒತ್ತಾಯಕ್ಕೆ ಮಣಿದು, ಕೃಷ್ಣನು ಅವನ್ನು ಸ್ವೀಕರಿಸಿದನು.

ಆ ಬಳಿಕ ಜರಾಸಂಧ-ಪುತ್ರನಾದ ಸಹದೇವನು, ತನ್ನ ಪುರೋಹಿತನನ್ನು ಮುಂದಿಟ್ಟುಕೊಂಡು, ಮಂತ್ರಿಗಳೊಂದಿಗೆ ನಗರದಾಚೆಗೆ ಹೊರಟನು. ವಾಸುದೇವನಲ್ಲಿಗೆ ಬಂದು ಅತ್ಯಂತ-ನಮ್ರತೆಯಿಂದ ನಮಸ್ಕರಿಸಿದನು. ಮತ್ತು ಹೇಳಿದನು: "ನರಶ್ರೇಷ್ಠನೇ, ನನ್ನ ತಂದೆ ಮಾಡಿದುದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಬೇಡ.  ನಾನು ನಿನಗೆ ಶರಣನಾಗಿದ್ದೇನೆ. ನನ್ನ ವಿಷಯದಲ್ಲಿ ಪ್ರಸನ್ನನಾಗು. ನನ್ನ ತಂದೆಯ ಸಂಸ್ಕಾರವನ್ನು ನಾನು ಮಾಡಲಿಚ್ಛಿಸುತ್ತೇನೆ. ಅದಕ್ಕಾಗಿ ನಿನ್ನಿಂದಲೂ ಭೀಮಾರ್ಜುನರಿಂದಲೂ ಅನುಮತಿಯನ್ನು ಯಾಚಿಸುತ್ತೇನೆ. ಮುಂದೆ ನಾನು ಯಥೇಚ್ಛವಾಗಿ ಹಾಗೂ ಸುಖವಾಗಿ ಓಡಾಡಿಕೊಂಡಿರಲು ನಿಮ್ಮಿಂದ ಅಭಯವನ್ನು ಯಾಚಿಸುತ್ತಿದ್ದೇನೆ."

ಸಹದೇವನ ಈ ಮಾತುಗಳಿಂದ ಕೃಷ್ಣನೂ ಭೀಮಾರ್ಜುನರೂ ಸಂತೋಷಗೊಂಡರು. ನಿನ್ನ ತಂದೆಗೆ ಸಂಸ್ಕಾರವನ್ನು ನೀ ಮಾಡಪ್ಪಾ - ಎಂದರು. ಆತನೂ ಅಂತೆಯೇ ಒಡನೆಯೇ ನಗರವನ್ನು ಪ್ರವೇಶಿಸಿದನು. ಮಂತ್ರಿಗಳೊಂದಿಗೆ ಸೇರಿ ಚಿತೆಯನ್ನೇರ್ಪಡಿಸಿದನು.

ಚಿತೆಗಾಗಿ ಚಂದನದ ಕಟ್ಟಿಗೆಗಳು, ದೇವದಾರು, ಕಾಲಾಗರು(ಎಂದರೆ ಕಪ್ಪುಬಣ್ಣದ ಅಗರು)ವೆಂಬ ಸುಗಂಧ, ಬಗೆಬಗೆಯ ತೈಲಗಳು, ತುಪ್ಪದ ಧಾರೆ, ಇವುಗಳನ್ನು ಬಳಸಲಾಯಿತು.

ಆಮೇಲೆ ಉರಿಯುತ್ತಿದ್ದ ಆ ಜರಾಸಂಧನ ಕಾಯದ ಸುತ್ತಲೂ ಅಕ್ಷತೆಯ ಕಾಳುಗಳು ಹಾಗೂ ಹೂಗಳ ಮಳೆಯನ್ನೇ ಕರೆಯಲಾಯಿತು.

ಬಳಿಕ, ಸಹದೇವನು ತನ್ನ ತಮ್ಮಂದಿರೊಂದಿಗೆ ಜಲಾಂಜಲಿಯನ್ನಿತ್ತನು. ಹೀಗೆ ತಂದೆಗೆ ಸ್ವರ್ಗ-ಗತಿಗಾಗಿ ಮಾಡಬೇಕಾದುದನ್ನು ಮಾಡಿ, ಮತ್ತೆ ಶ್ರೀಕೃಷ್ಣನೂ ಭೀಮಾರ್ಜುನರೂ ಇರುವೆಡೆಗೆ ಬಂದನು. ಹಾಗೂ ಕೈಜೋಡಿಸಿ ನಮ್ರತೆಯಿಂದ ಕೃಷ್ಣನಲ್ಲಿ ಹೀಗೆ ವಿಜ್ಞಾಪನೆ ಮಾಡಿಕೊಂಡನು:

"ಇದೋ ಭೂರಿಯಾದ ರತ್ನಗಳು ಇವು. ಇದೋ ಗೋವುಗಳು, ಆಡು-ಮೇಕೆಗಳು, ಮಹಿಷಗಳು, ಆನೆಗಳು ಹಾಗೂ ಕುದುರೆಗಳು, ಹಾಗೂ ಬಗೆಬಗೆಯ ವಸ್ತ್ರಗಳು. ಇವೆಲ್ಲವನ್ನೂ ಧರ್ಮರಾಜನಿಗೆ ಕೊಡೋಣವಾಗಲಿ. ಅಥವಾ ನಿನಗೆ ಬೇರೆ ಬಗೆಯು ತೋರಿದರೆ ಹಾಗೂ ಮಾಡಬಹುದು" ಎಂದನು.

ಹೆದರಿಕೆಯಿಂದ ತತ್ತ್ತರಿಸಿದ್ದ ಆತನಿಗೆ ಕೃಷ್ಣನು ಅಭಯವನ್ನಿತ್ತನು. ಆ ಮಹಾರ್ಹವಾದ, ಎಂದರೆ ಬಹುಬೆಲೆಬಾಳುವ, ರತ್ನಗಳನ್ನು ಸ್ವೀಕರಿಸಿದನು. ಹಾಗೂ ಅಲ್ಲಿಯೇ ಸಹದೇವನ ಪಟ್ಟಾಭಿಷೇಕವನ್ನೂ ನೆರವೇರಿಸಿದನು. ಭೀಮಾರ್ಜುನರು ಆತನನ್ನು ಸತ್ಕರಿಸಿದರು. ಸಂತೃಪ್ತನಾದ ಜಾರಾಸಂಧಿಯು, ಎಂದರೆ ಜರಾಸಂಧ-ಪುತ್ರನು, ತನ್ನ ತಂದೆಯ ನಗರವನ್ನು ಮಹಾತ್ಮರೊಂದಿಗೆ ಪ್ರವೇಶಿಸಿದನು.

ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 65 (Prasnottara Ratnamalike 65)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೬೫. ವಿಪತ್ತು ಯಾರನ್ನು ತಟ್ಟುವುದಿಲ್ಲ?

ಜಿತೇಂದ್ರಿಯನನ್ನು ಮತ್ತು ಜ್ಞಾನ ಮತ್ತು ವಯಸ್ಸಿನಿಂದ ಕೂಡಿದ ವೃದ್ಧರ ಮಾತನ್ನು ಕೇಳುವವನನ್ನು.


ವಿಪತ್ತು, ಆಪತ್ತು, ತೊಂದರೆ, ತಾಪತ್ರಯ, ವಿಘ್ನ ಇವುಗಳೆಲ್ಲವೂ ಪರ್ಯಾಯಪದಗಳು. ಇವು ಬರಲು ಏನು ಕಾರಣ? ಮತ್ತುಇವು ಬರದಿರಲು ಏನು ಕಾರಣ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.

ಒಬ್ಬ ಜಿತೇಂದ್ರಿಯನಾದವನು ಮತ್ತು ಯಾರಲ್ಲಿ ಜ್ಞಾನವಿದೆಯೋ ಮತ್ತು ವಯಸ್ಸಿನಿಂದಲೂ ಶ್ರೇಷ್ಠನಾಗಿದ್ದಾನೋ ಅಂತವರಿಗೆ ಗೌರವವನ್ನು ಕೊಡುವವನು ವಿಪತ್ತಿಗೆ ಒಳಗಾಗುವುದಿಲ್ಲ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಇವು ಆಪತ್ತನ್ನು ದೂರ ಮಾಡುತ್ತವೆ ಎಂಬುದಾಗಿ ಅರ್ಥ. ಅತ್ಯಂತ ಸುಲಭವಾದ ಉತ್ತರ. ಒಂದು ಮಾತು ಹೀಗಿದೆ -” ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದಾಗಿ. ಇದು ಇಂದ್ರಿಯ ಜಯವನ್ನು ಸಾರುವ ಗಾದೆಮಾತಾಗಿದೆ. ಊಟವನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಯಾವುದನ್ನು ಮಾಡಬೇಕು? ಎಂಬುದರ ಬಗ್ಗೆ ಇರುವ ಪರಿಜ್ಞಾನ. ಇದು ಊಟವನ್ನು ಉಚಿತವಾಗಿಯೂ ಉತ್ಕೃಷ್ಟವಾಗಿಯೂ ಮಾಡುವ ಬಗೆಗೆ ಇರುವ ಜ್ಞಾನ. ಅಂದರೆ ಆಯುರ್ವೇದ ಊಟದ ಬಗ್ಗೆ ಹೀಗೆ ಹೇಳುತ್ತದೆ - ‘ಹಸಿದಾಗ ಊಟ ಮಾಡು, ದಿನಕ್ಕೆ ಎರಡು ಹೊತ್ತು ಊಟ ಮಾಡು’ ಎಂದು. ಆದರೆ ನಾವಿಂದು ನಮ್ಮ ಇಂದ್ರಿಯ ಚಾಪಲ್ಯದಿಂದ ಅಕಾಲದಲ್ಲಿ ಅಮಿತವಾಗಿ ಊಟವನ್ನು ಮಾಡುತ್ತಿದ್ದೇವೆ. ಅಂದರೆ ನಮ್ಮ ಇಂದ್ರಿಯ ಚಾಪಲ್ಯ ಮಿತಿಮೀರಿದೆ ಎಂಬುದು ಇದರ ತಾತ್ಪರ್ಯ. ಇದರಿಂದಾಗಿ ನಮಗಿಂದು ರೋಗಬಾಹುಲ್ಯ ಉಂಟಾಗಿದೆ.

ಮಾತನಾಡುವಾಗ ಹೇಗೆ ಮಾತನಾಡಬೇಕು? ಎಷ್ಟು ಮಾತನಾಡಬೇಕು? ಯಾವುದನ್ನು ಮಾತನಾಡಬೇಕು? ಯಾವ ಶಬ್ದವನ್ನು ಉಪಯೋಗಿಸಿ ಮಾತನಾಡಿದರೆ ಅದು ಎಷ್ಟು ಉಚಿತವಾಗುತ್ತದೆ? ಎಂಬಿತ್ಯಾದಿ ವಿಷಯವನ್ನು ಅರಿಯುವುದೇ ಮಾತಿನ ಬಗೆಗೆ ಇರುವ ಜಯ ಎಂಬುದಾಗಿ ಭಾವಿಸಬೇಕು. ಹಾಗೆ ಮಾತನಾಡುವವನಿಗೆ  ಜಗಳ ಅಸಾಧ್ಯ. ಹಾಗಾಗಿ ಇಲ್ಲಿ ಒಂದು ಕರ್ಮೇಂದ್ರಿಯದ, ಇನ್ನೊಂದು ಜ್ಞಾನೇಂದ್ರಿಯದ ಪರಿಮಿತಿಯನ್ನು ಮತ್ತು ಅದರ ಸಾಧಕತೆಯನ್ನು ವಿವರಿಸಲಾಗಿದೆ. ಹೀಗಿದ್ದಾಗ ಅವನಿಗೆ ರೋಗ ಬರುವುದೆಂತು? ಹೀಗಿದ್ದಾಗ ಅವನಿಗೆ ಜಗಳವಾಗುವುದೆಂತು? ಜಗಳಕ್ಕೂ ರೋಗಕ್ಕೂ ಅವಕಾಶವೇ ಇಲ್ಲವಾದಂತಾಗುತ್ತದೆ. ಇದು ಆಪತ್ತಿನ ನಿವಾರಣೆ ಅಲ್ಲವೇ?

ಇನ್ನೊಂದು ಅತಿ ಮುಖ್ಯವಾದ ವಿಷಯ - ಜ್ಞಾನವೃದ್ಧರಿಗೂ ಮತ್ತು ವಯೋವೃದ್ಧರಿಗೂ ಕೊಡುವಂತಹ ಗೌರವ ಮತ್ತು ಅವರು ಹೇಳುವುದನ್ನು ಕೇಳುವಂಥದ್ದು. ಇದೂ ಕೂಡ ನಮ್ಮ ಆರೋಗ್ಯಕ್ಕೆ ಅನುಕೂಲಕರ ಎಂಬುದಾಗಿ ತಿಳಿಯಬೇಕು. ಎಲ್ಲವನ್ನೂ ನಾವೇ ಮಾಡಿ ತಿಳಿಯಲು ಅಸಾಧ್ಯ. ಹಾಗಾಗಿ ಮಾಡಿ ತಿಳಿದವರಿಂದ ಒಂದಷ್ಟನ್ನು ತಿಳಿಯಬಹುದು. ಅಥವಾ ಓದಿ ಕಲಿತವರಿಂದ ನಾವು ತಿಳಿದರೆ ಅಷ್ಟು ಸಾಧನದ ಸಮಯ ನಮಗೆ ಉಳಿದಂತಾಗುತ್ತದೆ. ಮತ್ತು ಅವರಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಅಷ್ಟೇ ಅಲ್ಲ ಅದರಿಂದ ನಮಗೆ ಅತ್ಯುಪಯೋಗವೂ ಆದಂತಾಗುತ್ತದೆ. ಹಾಗಾಗಿ ಹಿರಿಯರ ಮಾತನ್ನು ಕೇಳುವುದು ಅತ್ಯಂತ ಸೌಜನ್ಯದ ಸಂಕೇತ ಎಂಬುದಾಗಿ ಎಲ್ಲ ಕಡೆ ಸಾರಲಾಗಿದೆ. ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲ ಈ ನಾಲ್ಕೂ ಕೂಡ ವೃದ್ಧರನ್ನು ಗೌರವಿಸುವುದರಿಂದ ಬರುತ್ತದೆ ಎಂಬುದಾಗಿ ಒಂದು ಸುಭಾಷಿತವೂ ಕೂಡ ಸಾರುತ್ತದೆ. ಈ ಬಗೆಯ ವ್ಯಕ್ತಿಗೆ ಯಾವ ಬಗೆಯ ತೊಂದರೆ, ತಾಪತ್ರಯ, ವಿಘ್ನಗಳೂ ಇರುವುದಿಲ್ಲ. 


ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ

Saturday, May 9, 2026

ಮಡಿಯ ಮೂಲವನ್ನು ಅರಸೋಣ...(Madiya Mulavannu Arasona...)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


image.png



ಇದು ಮಡಿ ಇದನ್ನು ಮುಟ್ಟಬಾರದು. ಇವರು ಮಡಿ, ಇವರಿಂದ ದೂರವಿರಿ. ಈ ಬಟ್ಟೆ ಮಡಿ, ಈ ನೀರು ಮಡಿ. ಇದು ದೇವರ ಮನೆ. ಮಡಿ ಮಾಡಿಕೊಂಡು ಒಳಗೆ ಬನ್ನಿ. ರೇಷ್ಮೆ ಮುಗುಟ ಮಡಿ ಬೇರೆಯದು ಮೈಲಿಗೆ. ಈ ದೇವತಾ ಕಾರ್ಯ ಮಡಿಯಲ್ಲಿ ಮಾಡಬೇಕು. ಇದು ಪಿತೃಕಾರ್ಯ. ಇಲ್ಲಿ ಮೈಲಿಗೆ ಕೂಡದು. ಹೀಗೆ ಸಾಗುತ್ತದೆ ಮಡಿ ಮೈಲಿಗೆಗಳ ಜೋರು. ಏನಿದು ಮಡಿ? ಇದನ್ನು ಏಕೆ ಪಾಲಿಸಬೇಕು? ಬರಿಯ ಮೂಢನಂಬಿಕೆಯೆ?
ಹಿಂದಿನವರ ಆಚರಣೆಗಳು. ಅವರಿಗೆ ಇವತ್ತಿನ ವೈಜ್ಞಾನಿಕ ಚಿಂತನೆಯಿರಲಿಲ್ಲ. ಹಾಗಾಗಿ ಇಂತಹ ಮೂಢನಂಬಿಕೆಗಳನ್ನೆಲ್ಲಾ ಆಚರಿಸಿಕೊಂಡು ಬಂದಿದ್ದಾರೆ.  ಹಾಗೆಂದು, ನಾವು, ಪ್ರಗತಿಪರರು, ವಿಚಾರಪರರು ಇವುಗಳನ್ನು ಅಲಕ್ಷಿಸಬೇಕು. ಮಾತ್ರವಲ್ಲ ಈ ನಂಬಿಕೆಗಳನ್ನೆಲ್ಲ ಸಮಾಜದಿಂದ ಕಿತ್ತೆಸೆಯಬೇಕು. ಎಂದೆಲ್ಲ ನಮ್ಮ ದೇಶದ ಚಿಂತಕರನೇಕರು ಮೊಳಗಿದರೆ ಕೆಲವೊಮ್ಮೆ  ಹೌದೆನ್ನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನಾವು ಉಪಯೋಗಿಸುವ ಬಟ್ಟೆ, ಪಾತ್ರೆ, ಪರಿಸರ  ಮತ್ತು ನಮ್ಮ ಮೈ ಎಲ್ಲವೂ ಶುದ್ಧವಾಗಿಟ್ಟುಕೊಂಡರೆ ಅದೇ ಮಡಿ. ಅದಲ್ಲದೇ ಹೆಚ್ಚಿನ ಮಹತ್ವವೇನಿದೆ ಅಲ್ಲಿ? ಇನ್ನು ದೇವರ ಪೂಜೆ ಮಾಡುವಾಗ ಮಡಿಯ ಗಲಾಟೆ ಹೆಚ್ಚು. ದೇವರು ಶುದ್ಧಸ್ವರೂಪ. ‘ಅವಿಕಾರಾಯ ಶುದ್ಧಾಯ…..’

ಎಂದು ಕರೆಸಿಕೊಳ್ಳುವ ನಿತ್ಯಶುದ್ಧನಾದ ದೇವನಿಗೆಲ್ಲಿಯ ಮೈಲಿಗೆ? ಅವನ ಕೆಲಸ ಮಾಡಲು ಇಷ್ಟೊಂದು ಮಡಿಯ ಅಗತ್ಯವೇನು ಎನ್ನಿಸಬಹುದು.
ಇಂದು ಮಡಿಯಬಗ್ಗೆ ಇರುವ ಅಭಿಪ್ರಾಯಗಳೇನೇ ಇರಲಿ. ವಾಸ್ತವಿಕತೆ ಏನು? ಮಡಿಯನ್ನು ತಂದ ಪ್ರಾಚೀನರ ಆಶಯವಾದರೂ ಏನಿತ್ತು? ಎಂಬುದನ್ನು ನಾವೀಗ ಆಲೋಚಿಸಬೇಕಾಗಿದೆ.
ಶ್ರೀರಂಗಮಹಾಗುರುಗಳ ಅಭಿಪ್ರಾಯದಂತೆ ನಮ್ಮೊಳಗೇ ಬೆಳಗುವ ಭಗವಂತನನ್ನು ಮುಟ್ಟುವಂತಾಗುವ, ಅವನಲ್ಲಿಯೇ ಮುಳುಗುವಂತಾಗುವ ನಮ್ಮ ಸಹಜ ಸ್ಥಿತಿಗೇ ಮಡಿ ಎನ್ನುವುದು. ಮಡಿ ಎನ್ನುವುದು ನಮ್ಮಲ್ಲಿನ ಒಂದು ಧರ್ಮವಿಶೇಷ. ಸಹಜ ಸ್ಥಿತಿ. ಅಂತಹ ಧರ್ಮವೇರ್ಪಟ್ಟಾಗ ಭಗವಂತನ ದರ್ಶನಭಾಗ್ಯ ದೊರಕುವುದು. ಅದರಿಂದ ಅನಂತವಾದ ನೆಮ್ಮದಿ, ಸುಖವುಂಟಾಗುವುದು. ಎಂದಮೇಲೆ ಮಡಿ ಎಂದರೆ ಬರಿಯ ಆಚರಣೆಯಷ್ಟೇ ಅಲ್ಲ. ನಮ್ಮ ಸಹಜವಾದ ಸ್ಥಿತಿಯೇ ಅದಾಗಿದೆ ಎಂಬುದು ಒಳಮಡಿಯನ್ನು ಅನುಭವಿಸಿ ಆನಂದಿಸಿದ ಜ್ಞಾನಿಗಳ ಮಾತು. ಅಂತಹ ಮಡಿ ಎನ್ನುವ ಸ್ಥಿತಿಯಿಂದ ನಮ್ಮನ್ನು ದೂರ ತಳ್ಳುವ ಎಲ್ಲವೂ ಮೈಲಿಗೆಯೇ ಆಗುತ್ತದೆ.

ನಾವೀಗ ಶುದ್ಧಿ ಎನ್ನುತ್ತಿರುವುದು ಕೇವಲ ದ್ರವ್ಯಗಳ,ದೇಹದ ಹೊರಭಾಗದ ಶುದ್ದಿಯನ್ನು ಮಾತ್ರ. ಅಲ್ಲಿ ಋಷಿಗಳನೋಟದ ಸಮಗ್ರವಾದ ಶುದ್ಧಿಯಿಲ್ಲ. ಒಳ ಶುದ್ಧಿಯ ಅರಿವು ನಮಗಿಲ್ಲವಾಗಿದೆ. ಹೊರಗೆ, ಒಳಗೆ ಯಾವ ಬಗೆಯಲ್ಲಿ ಜೀವನವನ್ನಿಟ್ಟುಕೊಂಡರೆ ಒಳ ಹೊರ ಶುದ್ಧಿಯನ್ನು ಸಾಧಿಸಬಹುದು ಎಂಬುದಕ್ಕೆ ಅಂತಹ ಒಳ ಹೊರ ಜೀವನವನ್ನು ಕಂಡ ಮಹರ್ಷಿಗಳ ಮಾತೇ ಪ್ರಮಾಣ. ಮಾವಿನ ಹಣ್ಣಿನ ಹೊರಗೆ ಹುಳು ಇದ್ದರೆ ಸುಲಭವಾಗಿ ತೆಗೆದು, ತೊಳೆದು ಸೇವಿಸಬಹುದು. ಆದರೆ ಒಳಗೇ ಇದ್ದರೆ ಅದು ಸೇವಿಸುವುದಕ್ಕೆ ಯೋಗ್ಯವಾಗದು. ಅಂತಹ ಸರ್ವಾತ್ಮನಾ ಶುದ್ಧಿ, ನಾವೀಗ ಅಂದುಕೊಂಡಿರುವ ಮಡಿಯನ್ನು ಇಮ್ಮಡಿ, ನೂರ್ಮಡಿಯನ್ನಾಗಿಸುವುದು. ಅಂತಹ ಶುದ್ಧಿ ನಮ್ಮೊಳಗೆ ಬೆಳಗುವ ಭಗವಂತನನ್ನು ನೋಡಲು ಬೇಕಾದ ಮಡಿಯ ಸ್ಥಿತಿಯನ್ನು ನಮಗೆ ದೊರಕಿಸಿಕೊಡುತ್ತದೆ.
ವಿಷಯದ ಸ್ವರೂಪದ ಅರಿವಿದ್ದಾಗ ಆ ಸ್ವರೂಪವನ್ನು ಕಾಪಾಡಿಕೊಳ್ಳಲು ನಾವು ಮಾಡುವ ಆಚರಣೆಗಳೆಲ್ಲವೂ ಸಹಜವಾಗಿರುತ್ತವೆ. ಒಂದು ಕತ್ತಿಯ ಸ್ವರೂಪದ ಅರಿವಿದ್ದಾಗ, ಅದು ನಮ್ಮ ಕೈ ಕತ್ತರಿಸಬಾರದು ಎಂದು ಅದಕ್ಕೊಂದು ಮರದ ಹಿಡಿ ಮಾಡಿಕೊಳ್ಳುತ್ತೇವೆ. ಅದರ ಹರಿತವಾದ ಭಾಗವನ್ನು ಕತ್ತರಿಸಲು ಉಪಯೋಗಿಸುತ್ತೇವೆ. ಕತ್ತಿಯ ಸ್ವರೂಪಜ್ಞಾನವಿಲ್ಲದವರಿಗೆ ಅದರ  ಆಕಾರ ವಿಚಿತ್ರವಾಗಿ ಕಾಣಬಹುದು. ಹಣ್ಣು ತರಕಾರಿಗಳು ಕೆಡದಂತೆ ಇಡಲು Refrigerator ಬಳಸುತ್ತೇವೆ. ಹಣ್ಣು ತರಕಾರಿಗಳನ್ನು ಒಂದು ಪೆಟ್ಟಿಗೆಯಲ್ಲಿಡುವ ಔಚಿತ್ಯವಾದರೂ ಏನು? ಎಂದು Refrigerator ನ ಸ್ವರೂಪದ ಅರಿವಿಲ್ಲದವರು ಅಂದುಕೊಳ್ಳುವುದೂ ಸ್ವಾಭಾವಿಕವೇ.

ಅಂತೆಯೇ ನಮ್ಮ ಸನಾತನಾರ್ಯ ಮಹರ್ಷಿಗಳು ಅಂತಹ ಮಡಿಯಿಂದ ಭಗವಂತನಲ್ಲಿ ಮುಳುಗಿ ರಮಿಸಿದವರು. ಆ ಆನಂದ ಜೀವಲೋಕವೆಲ್ಲವೂ ಅನುಭವಿಸುವಂತಾಗಲಿ ಎಂಬುದು ಅವರ ಅಪಾರ ಕರುಣೆ. ತಮ್ಮ ಅಂತರಂಗದ ಆ ಮಡಿಗೆ ಜೀವಲೋಕವನ್ನು ಸೆಳೆಯಲು ಹೊರಗೂ ಅದಕ್ಕೆ ಅನುಕೂಲಕರವಾದ ವಸ್ತುಗಳು, ಸನ್ನಿವೇಶಗಳು ಯಾವುವು? ಪ್ರತಿಕೂಲವಾದದ್ದು ಯಾವುವು? ಎಂದೆಲ್ಲ  ತಮ್ಮ ತಪಸ್ಯೆಯಿಂದ, ವೈಜ್ಞಾನಿಕ ಸಂಶೋಧನೆಯಿಂದ ಅರಿತು ಆಚಾರಗಳೆಲ್ಲವನ್ನೂ ಹೊರತಂದಿದ್ದಾರೆ. ಹೊರಗೆ ಮಡಿಯ ಆಚರಣೆ ಒಂದು ಭಾಗವಾದರೆ ಒಳಗೆ ನಮ್ಮನ್ನು ನಾವು ಶುದ್ಧಿಗೊಳಿಸಲು, ಭಗವಂತನ ಸ್ಮರಣೆಯಿಂದ ಸ್ನಾನ, ಪುರುಷಸೂಕ್ತ ಹೇಳುತ್ತಾ ಅದರ ಅರ್ಥವನ್ನೂ ಭಾವಿಸುತ್ತಾ ಸ್ನಾನ. ಪೂಜೆಯ ಅಭಿಷೇಕದಲ್ಲಿ ಹೊರಮೂರ್ತಿಗೆ ಅಭಿಷೇಕ ಮಾಡುವಾಗ ಒಳ ಬೆಳಗುವ ಅವನ ಮೂರ್ತಿಯನ್ನು ನೆನೆದು ಅಭಿಷೇಕ, ತೀರ್ಥದಲ್ಲಿ ಅವನ  ಸಾನ್ನಿಧ್ಯವನ್ನು ಭಾವಿಸಿ ಒಳಗೆ ಸೇವಿಸುವುದು, ಸೃಷ್ಟಿಯೆಲ್ಲ ನಿನ್ನದೇ, ನೀನು ಕೊಟ್ಟ ಪದಾರ್ಥಗಳನ್ನೇ ನಿನಗೆ ನಿವೇದನೆ ಮಾಡಿ ಪ್ರಸಾದರೂಪವಾಗಿ ಸೇವಿಸುವ ಭಾವ ಇತ್ಯಾದಿ ಎಲ್ಲವೂ ನಮ್ಮ ಅಂತರಂಗವನ್ನು ಮಡಿ ಮಾಡುವ ವಿಧಾನಗಳಾಗಿವೆ. ಆದರೆ ಈ ಎಲ್ಲಾ ಆಚರಣೆಗಳೂ ನಮಗೆ ಒಳಮಡಿಯ ಧರ್ಮವನ್ನು ತಂದುಕೊಡುವುದಕ್ಕಾಗಿ ಎಂಬ ಅತಿ ಮುಖ್ಯವಾದ ಅಂಶವನ್ನು ಮನಸ್ಸಿನಿಂದ ಜಾರಿಸಿಕೊಂಡು ಬಿಟ್ಟೆವಾದರೆ ಎಲ್ಲವೂ ಬರಿಯ ಚೇಷ್ಟೆಯಲ್ಲಿ ನಿಲ್ಲುತ್ತದೆ.

ಮೈಸೂರಿಗೆ ಹೋಗುವ ಬಸ್ಸನ್ನು ಮೈಸೂರು ಎಂದು ಕರೆದಂತೆ ಮಡಿಯ ಸ್ಥಿತಿಯನ್ನು ದೊರಕಿಸಿಕೊಡುವ ಆಚರಣೆಗಳನ್ನೂ ಮಡಿ ಎಂದೇ ಕರೆಯುವುದೂ ಸಹಜವಾಗಿದೆ. ಮಡಿ ಮಾಡಿಕೊಳ್ಳಿ ಎಂದರೆ ಅಂತಹ ಮನೋಧರ್ಮವನ್ನುಂಟುಮಾಡುವ ಆಚರಣೆಗಳನ್ನಿಟ್ಟುಕೊಳ್ಳಿ ಎಂದೇ ವಿನಾ ಕೇವಲ ರೇಷ್ಮೆ ಮುಗುಟ ಉಟ್ಟುಕೊಳ್ಳುವುದು ಮಾತ್ರವಲ್ಲ ಎಂಬುದನ್ನು ನಾವು ನೆನಪಿಡಬೇಕು. ಅಂತಹ ಮಡಿಯ ಸ್ವರೂಪದ ಅರಿವಿಲ್ಲವಾದುದರಿಂದಲೇ ಮಡಿಯ ಆಚರಣೆಗಳ ಬಗ್ಗೆ ಕುತ್ಸಿತವಾದ ಮೇಲಿನ ಮಾತುಗಳೆಲ್ಲ ಬಂದಿವೆ.

ಭಗವಂತನನ್ನು ಮುಟ್ಟದ ಮುಗುಟವಾಗಲೀ, ರುದ್ರಾಕ್ಷಿಯಾಗಲೀ. ಜಲವಾಗಲೀ ಯಾವುದೂ ಮಡಿಯಲ್ಲ. ನಮ್ಮೊಳಗೆ ಬೆಳಗುತ್ತಿರುವ ಅವನ ದಿವ್ಯ ತೇಜಸ್ಸನ್ನು ನೋಡಿ ಅನುಭವಿಸಲು, ಆನಂದಿಸಲು ಅನುಗುಣವಾದ ನಮ್ಮ ಸ್ವರೂಪವೇ ಮಡಿ. ತದ್ವಿರುದ್ಧವಾದುದೆಲ್ಲವೂ ಮೈಲಿಗೆಯೇ ಆಗುತ್ತದೆ. ಅವನವನ ಅಂತಃಪ್ರಕಾಶದಲ್ಲಿ ಮುಳುಗಿರುವುದೇ ಮಡಿ. ಆ ಮನೋಧರ್ಮವಿಲ್ಲದಿದ್ದಾಗ ಎಲ್ಲವೂ ಕೊಳೆಯೇ ಆಗುತ್ತದೆ.
ಬೃಂದಾವನದಲ್ಲಿ ಗೋಪಿಕೆಯರೆಲ್ಲ ಮೈ ಕೈ ಸಗಣಿ ಮಾಡಿಕೊಂಡಿದ್ದರೂ ಕೃಷ್ಣನನ್ನು ಮುಟ್ಟುವ ಮನಸ್ಸಿನಿಂದಾಗಿ ಪೂರ್ಣವಾಗಿ ಮಡಿಯಾಗಿದ್ದರು.
ಪೂಜ್ಯರಾದ ಶಂಕರಭಗವತ್ಪಾದರ ಮಾತಿನಂತೆ-
ರಥ್ಯಾಕರ್ಪಟ ವಿರಚಿತ ಕಂಥಃ ಪುಣ್ಯಾsಪುಣ್ಯ ವಿವರ್ಜಿತ ಪಂಥಃ
ಯೋಗೀ ಯೋಗನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ||

ಎಂಬಂತೆ ಭಗವಂತನಲ್ಲೇ ಯೋಗವನ್ನು ಹೊಂದಿದ ಯೋಗಿವರೇಣ್ಯರು ಪುಣ್ಯ ಪಾಪಗಳನ್ನು ಮೀರಿನಿಂತವರು. ಹೊರಗಿನಿಂದ ಅವರ ಮೈಕೈ ಎಲ್ಲವೂ ಕೊಳೆಯಾಗಿ, ಬಾಲರಂತೆ ಉನ್ಮತ್ತರಂತೆ ಕಂಡರೂ ಅವರು ಅಂತಃಪ್ರಪಂಚದ ದಿವ್ಯತೇಜೋಧಾರೆಯಲ್ಲಿ ಆನಂದಿಸುತ್ತಿದ್ದಾರೆಂಬುದು ಯೋಗಿಹೃದಯವೇದ್ಯವಾದ ವಿಷಯ. ಹೊರಗಿನ ದೃಷ್ಟಿಯಿಂದಷ್ಟೇ ನೋಡಿದರೆ ಅವರು ಕೊಳಕಾಗಿ, ಮೈಲಿಗೆಯಾಗಿ,ಬಾಲಕರಂತೆ, ಹುಚ್ಚರಂತೆ  ಕಂಡರೂ ನಿಜವಾಗಿ ಮಡಿಯಲ್ಲಿರುವವರು ಅವರೇ ಎಂಬುದನ್ನು ನಾವು ಗಮನಿಸಬೇಕಾಗಿದೆ. ಅಂತಹ ಒಳಗಿನ ಮಡಿ ನಮಗೆ ಉಂಟಾದರೆ ಆಗ ಹೊರಗಿನ ಆಚರಣೆಗಳ ಅಗತ್ಯವಿಲ್ಲ.
ಹಾಗೆಂದು ಈಗ ನಾವು ಆಚರಿಸುತ್ತಿರುವುದನ್ನೆಲ್ಲ ಬಿಟ್ಟುಬಿಡಬೇಕೆಂದಲ್ಲ. ಅವೆಲ್ಲವೂ ಋಷಿಗಳು ವಿಜ್ಞಾನಯುತವಾಗಿ ತಂದ ಆಚರಣೆಗಳೇ. ಭಗವಂತನನ್ನು ಮುಟ್ಟಿಕೊಂಡು ಹೊರಬಂದವುಗಳೇ ಆಗಿದ್ದವು. ಅವುಗಳ ಹಿಂಬದಿಯ ನಿಜವಾದ ಮನೋಧರ್ಮ ಈಗ ಮರೆಯಾಗಿದೆ. ಆ ಮನೋಧರ್ಮವನ್ನು ಬೆಳೆಸಿಕೊಳ್ಳುತ್ತಾ ಆಚರಿಸಿದರೆ ಮುಂದೆ ಎಂದಾದರೊಮ್ಮೆ ನಿಜವಾದ “ಮಡಿ” ಅನುಭವಕ್ಕೆ ಬಂದೀತು. ಜ್ಞಾನಿಗಳ ಅಂತರಂಗದಲ್ಲಿ ಅನುಭವಕ್ಕೆ ಬರುವಂತಹ ಆ ಮಡಿ, ನಮ್ಮ ನಿರಂತರ ಸಾಧನೆಯಿಂದ, ಅಭ್ಯಾಸದಿಂದ ಮೆಲ್ಲಮೆಲ್ಲನೆ ನಮ್ಮಲ್ಲೂ ಬರಬೇಕಾಗಿದೆ.

ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಿದಾಕ್ಷಣ ಅದು ಸೇರಬೇಕಾದೆಡೆಗೆ ಸೇರಿಬಿಡುವುದಿಲ್ಲ. ಅದು ಅಂಚೆವ್ಯವಸ್ಥೆಯ ಮಜಲುಗಳನ್ನೆಲ್ಲ ಹಾದು ಕೈಸೇರಬೇಕಾದರೆ ಸಮಯ ತೆಗೆದುಕೊಳ್ಳುತ್ತದೆ. ಕಾಗದ ಹಾಕಿದ್ದೇನೆ ಎಂಬ ಶಬ್ದ ಹೇಳಿದರೂ ಅದು ತಲುಪಿದಮೇಲೇ ಆ ವಿಷಯ ಪೂರ್ಣವಾಗುವುದು. ಹಾಗೆಯೇ ನಮ್ಮ ಹೊರ ಆಚರಣೆಗಳಲ್ಲಿ ಮಡಿ ಮಾಡಿಕೊಳ್ಳುತ್ತಿದ್ದೇವೆ ಎಂದಾಕ್ಷಣ ಅದರ ಅನುಭವ ನಮಗಾಯಿತು ಎನ್ನುವಂತಿಲ್ಲ. ಈ ಆಚರಣೆಗಳು ನಮ್ಮ ನಮ್ಮ ಶರೀರ, ಮನೋಬುದ್ಧಿಗಳ ಸಂಬಂಧ ಎಷ್ಟು ಇಟ್ಟುಕೊಂಡಿವೆ ಎಂಬ ವಿಷಯ ಮುಖ್ಯವಾಗುತ್ತದೆ. ಈ ನಿಜವಾದ ಮಡಿಯ ಅರಿವನ್ನು ರೂಢಿಸಿಕೊಳ್ಳುತ್ತಾಬಂದರೆ ಮುಂದೆ ನಮ್ಮ ಪ್ರಕೃತಿಗೇ ಅಂತಹ ಯೋಗ್ಯತೆ ಬಂದಾಗ “ಮಡಿ” ಯನ್ನು ನಾವೂ ಅನುಭವಿಸಬಹುದಾಗಿದೆ. ಅಲ್ಲಿಯವರೆಗೂ ಇಂತಹ ಒಳಮಡಿಯ ಸ್ಥಿತಿಯನ್ನು ತಂದುಕೊಡುವುದಕ್ಕಾಗಿ ಬಂದಿರುವ ಲೋಕದ ವ್ಯವಹಾರವನ್ನು ರಕ್ಷಿಸಿಕೊಂಡುಬರುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂಬುದನ್ನು ನೆನಪಿಡಬೇಕು.

ನಿತ್ಯಶುದ್ಧನಾದ ಭಗವಂತನಿಗೆ ಎಂದಿಗೂ ಮೈಲಿಗೆಯಿಲ್ಲ ಎನ್ನುವ ಮಾತು ಸತ್ಯವೇ. ಆದರೆ ಪ್ರಕೃತಿಯೊಡನೆ ಬದುಕುತ್ತಿರುವ ನಮಗೆ ಮೈಲಿಗೆ ಬರುವುದು ಸ್ವಾಭಾವಿಕವೇ. ಒಂದು ಮೇಜನ್ನು ಒಂದು ದಿನ ಒರೆಸದಿದ್ದರೂ ಅದರಮೇಲೆ ಧೂಳು ನಿಲ್ಲುವುದು ನಿಸರ್ಗಸಹಜ. ಒಂದು ದಿನ ಸ್ನಾನಮಾಡದಿದ್ದರೂ ನಮ್ಮ ಶರೀರದಲ್ಲಿ ಬೆವರಿನ ವಾಸನೆಬರುತ್ತದೆ. ಅಂತೆಯೇ ನಮ್ಮನ್ನು ಆ ನಿತ್ಯಶುದ್ಧನ ಆರಾಧನೆಗೆ ಅಣಿಮಾಡಿಕೊಳ್ಳುವ ಭಾಗ ಇದ್ದೇಇದೆ. ಪಾಂಚಭೌತಿಕವಾದ ಎಲ್ಲವೂ ಶುದ್ಧಿಯನ್ನು ಬಯಸುತ್ತದೆ. ಭೂತಸ್ಥಾನವನ್ನು ಮೀರಿ ದೇವಸ್ಥಾನಕ್ಕೆ ಹತ್ತಿದೆವಾದರೆ ಅದೇ ಮಡಿ. ದೇವಭೂಮಿಯಲ್ಲಿ ಭೂತಸ್ಥಾನದ ನಿಯಮಗಳು ಅನ್ವಯವಾಗುವುದಿಲ್ಲ. ಆಗ ನಮಗೆ ಇಲ್ಲಿನಂತೆ ಮಡಿ ಮಾಡಿಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಭೂತಸ್ಥಾನದಲ್ಲಿ ನಾವು ಶುದ್ಧಿಯನ್ನು ಕಾಪಾಡಿಕೊಂಡೆವಾದರೆ ದೇವಸ್ಥಾನಕ್ಕೆ ಹತ್ತಲು ಯೋಗ್ಯರಾಗುತ್ತೇವೆ. ಇಲ್ಲಿ ಒದಗುವ ಮೈಲಿಗೆಯನ್ನು ನೀಗಿಕೊಂಡು ಮಡಿಯ ಸ್ಥಿತಿಯನ್ನು ಉಳಿಸಿಕೊಳ್ಳುವ ಉಪಾಯವೇ ಮಡಿಯ ಆಚರಣೆಯ ಹಿಂದಿರುವ ಆಶಯ.

ಸೂಚನೆ : 09/5/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ - 105 ಬಹು ಸ್ಯಾಂ ಪ್ರಜಾಯೇಯೇತಿ (Astakshara - 105)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


ಈಗಂತೂ ಚುನಾವಣೆ-ಫಲಿತಾಂಶಗಳದ್ದೇ ಮಾತು. ತಮಗಿಷ್ಟವಾದ ಪಕ್ಷಕ್ಕೆ ಗೆಲವು, ಅನ್ಯಪಕ್ಷಗಳಿಗೆ ಸೋಲುಗಳನ್ನು ಬಯಸುವವರೇ ಬಹಳ. ಮತಗಳ ಎಣಿಕೆಯಾಗುವಾಗ ಅದೆಷ್ಟು ಮಂದಿಗೆ ಆಗಾಗ್ಗೆ ಹಿಗ್ಗುವ ಕುಗ್ಗುವ ಸನ್ನಿವೇಶಗಳು! ಏತಕ್ಕಿವೆಲ್ಲಾ? ಸ್ವ-ಪಕ್ಷವೇ ಉಳಿಯಬೇಕೆಂಬ ಆತಂಕ! ಅದೇ ವರ್ಧಿಸಬೇಕು, ವ್ಯಾಪಿಸಬೇಕೆಂಬ ಹಂಬಲ!

ಸಮಾಜವಾದ, ಸಾಮ್ಯವಾದ - ಮುಂತಾದ ಆಧುನಿಕವಾದಗಳ ಕಥೆಯೇನು? ಬಾಯಲ್ಲಷ್ಟೆ ಉದಾತ್ತ-ತತ್ತ್ವಗಳನ್ನು ಉದ್ಗರಿಸುತ್ತಾ, ದೌಷ್ಟ್ಯ-ದೌರ್ಜನ್ಯಗಳನ್ನು ಎಣೆಯಿಲ್ಲದ ಪರಿಗಳಲ್ಲಿ ಮೆರೆಸಿರುವುದನ್ನು ಜಾರ್ಜ್ ಆರ್ವೆಲ್ ತನ್ನ ಕಾದಂಬರಿಗಳಲ್ಲಿ ನಿರುಪಮವಾಗಿ ನಿರೂಪಿಸಿರುವನಲ್ಲವೇ? ಹಿಟ್ಲರ್-ಸ್ಟಾಲಿನ್- ಮುಸ್ಸೋಲಿನಿಗಳ ದುರಹಂಕಾರ-ದುಶ್ಚರಿತಗಳ ಇತಿಹಾಸವೇ ಭಯಾನಕ-ಬೀಭತ್ಸಗಳನ್ನು ಲೋಚನಗಳ ಮುಂದೆ ರಾಚುತ್ತದೆ. ಈಚಿನ ಸ್ತ್ರೀವಾದ-ವೋಕಿಸಂಗಳ ಪ್ರಚಾರ-ಪ್ರಸಾರಗಳ ಜಾಡೂ ತೀರ ಭಿನ್ನವೇನಲ್ಲ. ಎಲ್ಲೆಡೆ ತಮ್ಮ ಸಿದ್ಧಾಂತವಷ್ಟೆ ಉಳಿಯಬೇಕೆಂಬ, ಉಳಿದವನ್ನು ಹೇಗಾದರೂ ನಿಗ್ರಹಿಸಬೇಕೆಂಬ, ಆಗ್ರಹವೇ.

ಮತ-ಸಿದ್ದಾಂತಗಳ ಬಗೆಯೂ ಹಾಗೆಯೇ ಅಲ್ಲವೇ? ಭಾರತದಲ್ಲಿ ಅನ್ಯಮತಗಳು ಹರಿಸಿರುವ ರಕ್ತದ ಕೋಡಿ ಹಾಗೂ ಅನವಶ್ಯವಾದ ಸಾವು-ನೋವುಗಳನ್ನು ಕುರಿತು ಜಗತ್ತಿನ ಅಪ್ರತಿಮ ಇತಿಹಾಸಕಾರರೆಂದು ಪ್ರಸಿದ್ಧರಾದ ಆರ್ನಾಳ್ಡ್ ಟಾಯ್ನ್ಬೀ ತಮ್ಮ ಉದ್ಗ್ರಂಥದಲ್ಲಿ ದಾಖಲಿಸಿ ಮಮ್ಮಲಮರುಗಿದ್ದಾರೆ.

ಹಿಂದೆಯೂ ನಮ್ಮಲ್ಲೂ ದ್ವೈತ-ಅದ್ವೈತ ಮುಂತಾದ ವಾದಗಳೋ, ಮತ್ತೂ ಹಿಂದೆ ವೈದಿಕ-ಅವೈದಿಕ-ನಿಲುವುಗಳಲ್ಲಿಯ ಪರಸ್ಪರ-ಪರಿಸ್ಪರ್ಧೆಗಳೋ ಇದ್ದವೇ; ತಮ್ಮ ಸಿದ್ಧಾಂತವೇ ಉಳಿಯಬೇಕೆಂಬ ಉತ್ಕಟೇಚ್ಛೆಯೂ ಪ್ರತಿಯೊಬ್ಬರಿಗೂ ಇದ್ದದ್ದೇ. ಆದರೂ, ಅತಿಮಾತ್ರ-ದ್ರೋಹಬುದ್ಧಿಗಳು ಅತ್ಯಪರೂಪವೆಂದೇ ಹೇಳಬೇಕು.

ಮನುಷ್ಯಕೃತ್ಯಗಳಿಗೆ ಮಾತ್ರ ಸೀಮಿತವಲ್ಲ, ಸ್ವ(ಮತ)-ವಿಸ್ತಾರ-ಪ್ರವೃತ್ತಿ. ತಾನು-ತನ್ನದುಗಳೇ ಉಳಿಯಬೇಕು-ಬೆಳೆಯಬೇಕು - ಎಂಬೀ ಸ್ವನಿಷ್ಠೆಯು ಸಮಸ್ತ-ಪ್ರಾಣಿಗಳಲ್ಲೂ ಉಂಟು!

ನಿಜವಾದ ಪ್ರೀತಿಯ ದರ್ಶನವಾಗಬೇಕೆ? ಹಾಗಿದ್ದರೆ ಪ್ರಾಣಿಗಳಿಗೆ ತಮ್ಮ ಮರಿಗಳ ಬಗೆಗಿರುವ ಕಾಳಜಿಯನ್ನೊಮ್ಮೆ ಕಾಣಿರಿ. ಪ್ರಾಣವನ್ನೇ ಪಣವಿಟ್ಟಾದರೂ ಕಂದಗಳನ್ನು ಕಾಪಾಡಿಕೊಳ್ಳುವ ಕಡು-ಶಪಥವಲ್ಲಿದೆ!  

ಪ್ರಾಣಿಗಳಲ್ಲೇನು, ಗಿಡಮರಗಳಲ್ಲಿ ಸಹ ಇದುಂಟೇ ಸರಿ: ತಾನು ಬೆಳೆಯ/ಯುತ್ತಿರಬೇಕು – ಎಂಬ ದೃಢೇಚ್ಛೆ. ಬೀಜವೊಂದನ್ನು ನೆಟ್ಟರೆ ಫಲಬಿಡುವಾಗ ಹಣ್ಣಿನಲ್ಲಿ ಮತ್ತೆ ಬೀಜವು ತೋರುವುದಲ್ಲವೇ? ಮತ್ತೊಂದು ಸಸ್ಯವು ಅಂಕುರಿಸಲೆಂದು ತಾನೇ ಅದಿರುವುದು? ಅಲ್ಲೊಂದು ಸೂಕ್ಷ್ಮವೂ ಇದೆ. ಬೀಜವೊಂದನ್ನು ನೆಟ್ಟಾಗ ಬಿಡುವುದು ಒಂದೇ ಹಣ್ಣಲ್ಲ; ಒಂದು ಹಣ್ಣಿನಲ್ಲಿ ಒಂದೇ ಬೀಜವೆಂಬುದೂ ಸಾರ್ವತ್ರಿಕ ನಿಯಮವೇನಲ್ಲ: ಸೀತಾಫಲ-ಮಾದಳಗಳಿಗೆ ಬಹುಬೀಜ-ಬೀಜಪೂರಗಳೆಂದೇ ಹೆಸರುಂಟು. ಅವೆರಡರಲ್ಲಿ ಮಾತ್ರವೇ ಅನೇಕಬೀಜಗಳೆಂದೂ ಅಲ್ಲ. ಅಲ್ಲದೆ, ತರುಗಳ ಬೀಜ-ಪ್ರಸಾರದ ವೈಖರಿಗಳಾದರೂ ಒಂದೇ ಎರಡೇ?  

ಹಾಗಾದರೆ ಒಂದು ಬೀಜದಿಂದ ಮತ್ತೆಷ್ಟು ಬೀಜಗಳು ಹುಟ್ಟಿಕೊಂಡವೆಂದಾಯಿತು? ಒಂದು ಮಾವಿನ ಬೀಜವನ್ನು ನೆಟ್ಟು ಪೋಷಿಸಿದಲ್ಲಿ ವರ್ಷವರ್ಷವೂ ಅದೆಷ್ಟು ಹಣ್ಣುಗಳು! ಅವಲ್ಲೊಂದೊಂದರಲ್ಲೂ ಮಾವಿನ ಬೀಜವಿದ್ದು ಅವೊಂದೊಂದರಿಂದಲೂ ಎಷ್ಟೆಷ್ಟು ಹಣ್ಣು/ಬೀಜಗಳಾದಾವು!

ಆನಂತ್ಯ-ಪ್ರವೃತ್ತಿಗೆ (infinity) ಇದಕ್ಕಿಂತಲೂ ಬೇರೊಂದುದಾಹರಣೆಯೆಂಬುದು ಬೇಕೇ?

ಅಲ್ಲಿಗೆ, ತನ್ನತನವು ತನ್ನೊಂದಿಗೆ ಮುಗಿಯಬಾರದೆಂಬ ಪ್ರವೃತ್ತಿಯು ಜೀವವಿರುವೆಡೆಯಲ್ಲೆಲ್ಲಾ ಇರುವುದೇ ಸುಲಕ್ಷಣವೆಂಬಂತಾಯಿತು. ವಾಸ್ತವವಾಗಿ, ಸೃಷ್ಟ್ಯಾರಂಭದಲ್ಲೇ ಈ ಪ್ರವೃತ್ತಿಯಿದೆ - ಎನ್ನುತ್ತದೆ, ಛಾಂದೋಗ್ಯೋಪನಿಷತ್ತು. ಸೃಷ್ಟಿಯ ಆರಂಭದಲ್ಲಿ ಇದ್ದದ್ದು ಒಂದೇ : ಪರಬ್ರಹ್ಮ. ಅದೇ ಸಂಕಲ್ಪಿಸಿತು, “ಬಹು ಸ್ಯಾಂ ಪ್ರಜಾಯೇಯೇತಿ” ಎಂದು: ನಾನು ಬಹುವಾಗಬೇಕು, (ಅದಕ್ಕಾಗಿ) ಪ್ರಜನಿಸಬೇಕು - ಎಂಬುದಾಗಿ.

ಜನಿಸುವುದೆಂದರೆ ಬೀಜವು ಕ್ಷೇತ್ರದಲ್ಲಿ ಬಿದ್ದು ಹುಟ್ಟಿಕೊಳ್ಳುವುದು; ಸ್ತ್ರೀ-ಪುರುಷ-ಸಂಯೋಗದಿಂದ ಜನ್ಮತಾಳುವುದು. ಪ್ರಜೋತ್ಪತ್ತಿ ಅಥವಾ ಪ್ರಜೆಗಳನ್ನು ಪಡೆಯುವುದೇ ಪ್ರಜನಿಸುವುದು: ಪ್ರಜೆ ಮತ್ತು ಪ್ರಜೆಯ ಪ್ರಜೆ - ಅರ್ಥಾತ್ ಸಂತಾನಗಳು ಮತ್ತವುಗಳ ಸಂತಾನಗಳು – ಹೀಗೆ ಬೆಳೆಯು(ತ್ತ ಹೋಗು)ವುದೇ ಅದು. ತಾನವೆಂದರೆ ವಿಸ್ತಾರ; ತನ್ನತನದ ತಾನವೇ ಇ(ಹದ)ಲ್ಲಿ ತೋರುವ ಅಮರತೆ: ತಾನು ಸತ್ತರೂ ತನ್ನತನ ಸತ್ತಂತಾಗಲಿಲ್ಲವಲ್ಲ!

ಸೃಷ್ಟಿಯ ಮೂಲದಲ್ಲಿರುವುದು ಬ್ರಹ್ಮ. ಬ್ರಹ್ಮವೆಂಬ ಪದಕ್ಕೇ ವೃದ್ಧಿಹೊಂದತಕ್ಕದ್ದು ಎಂಬ ಅರ್ಥವಿದೆ. ತಾನು ಬಹುವಾಗಿ ಬೆಳೆಯಬೇಕೆಂದು ಬಯಸಿಯೇ ಬ್ರಹ್ಮಬೀಜವು ವಿಶ್ವವೃಕ್ಷ-ರೂಪವನ್ನು ತಾಳುವುದು - ಎಂದೂ, ಅದಕ್ಕಾಗಿ  ಆಗುವ ಸ್ವಯಂಭೂ-ಶತರೂಪೆಯರ ಯೋಗವೆಂಬುದು ಪುರುಷ-ಪ್ರಕೃತಿಯರ, ಪರ್ಯಾಯವಾಗಿ ಶುಕ್ಲ-ಶೋಣಿತಗಳ, ಯೋಗದ ಮೂಲರೂಪವೇ – ಎಂದೂ, ಶ್ರೀರಂಗಮಹಾಗುರುಗಳು ನಿರೂಪಿಸಿರುವರು.
ಹೀಗಾಗಿ, ತಾನಳಿಯಬಾರದು, ಉಳಿಯಬೇಕು, ಅನವರತವಾಗಿ ಬೆಳೆಯುತ್ತಿರಲೂ ಬೇಕು - ಎಂಬ ಹೆಬ್ಬಯಕೆ ಎಲ್ಲೆಡೆ ಹುದುಗಿರುವುದೇ. 

ಆದರೆ ಅಲ್ಲೂ ಧರ್ಮಾಧರ್ಮ-ಕ್ರಮಗಳೆಂಬುದುಂಟು.

ಅಸುರರು ಅಮರತ್ವವನ್ನು ಅಪೇಕ್ಷಿಸಿದುದು ಭೌತಿಕವಾಗಿಯೇ: ಸಶರೀರರಾಗಿಯೇ ಇರಬೇಕೆಂಬುದನ್ನು. ಎಂದೇ, ಈ ಅದಮ್ಯ-ಅಹಮ್ಮಿಗಾಗಿ ಅಧರ್ಮ-ಮಾರ್ಗಕ್ಕೇ ಅವರು ಅಂಟಿಕೊಳ್ಳುವಂತಾಯಿತು.

ಆದರೆ ಧರ್ಮಮಯವಾದ ಪ್ರವೃತ್ತಿಮಾರ್ಗವನ್ನು ಹಿಡಿದು, ನಿಜವಾದ ಮತ್ತು ಮಿಗಿಲಾದ ಅಭೌತಿಕ-ಅಮರತೆಯನ್ನು ಅರಸಿ ಸಾಧಿಸಿದವರು ಮಹಾಪುರುಷರು; ಅಂತಹರನೇಕರ ಸುಚರಿತಗಳು ಇತಿಹಾಸ-ಪುರಾಣಗಳಲ್ಲಿವೆ.

 ಬೆಳೆಯಬೇಕೆಂಬ ಬಯಕೆಯು ಸೃಷ್ಟಿ-ಸಹಜವಾದದ್ದೇ; ಅದನ್ನು ತಪ್ಪೆನ್ನುವರಾರು? ಆದರೆ ಬೆಳೆಯುವ ಬಗೆಯು ಧರ್ಮಮಯವಾಗಿರತಕ್ಕದ್ದು.

ಸಾರವಾಗಿ, ಸೃಷ್ಟಿಯ ಮೂಲಾಶಯವನ್ನು ಗ್ರಹಿಸಬೇಕು, ಸ್ಥೂಲಾಕೃತಿಯನ್ನಲ್ಲ.

ಸೂಚನೆ: 09/5//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.

Sunday, May 3, 2026

ಪ್ರಶ್ನೋತ್ತರ ರತ್ನಮಾಲಿಕೆ 64 (Prasnottara Ratnamalike 64)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೬೪. ವಿದ್ವಾಂಸರನ್ನು ಆಕರ್ಷಿಸುವುದು ಯಾವುದು?

ಒಳ್ಳೆಯ ಕವಿತೆ ಮತ್ತು ವಿದ್ಯೆಯೆಂಬ ಸ್ತ್ರೀ.


ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ವಿದ್ವಾಂಸ ಎಂದರೆ ಯಾರು? ಒಳ್ಳೆಯ ಕವಿತೆ. ವಿದ್ಯೆ ಎಂದರೇನು? ಎಂದು. ವಿದ್ವಾಂಸ ಎಂದರೆ ತಿಳಿದವನು, ಓದಿದವನು, ಪದವಿಯನ್ನು ಗಳಿಸಿದವನು ಇತ್ಯಾದಿಯಾಗಿ ಹೇಳುವುದುಂಟು. ಆದರೆ ಯಾವನು ವಿದ್ಯೆಯನ್ನು ಉಳ್ಳವನೋ ಅವನು ‘ವಿದ್ವಾನ್’ ಎಂಬುದಾಗಿ ಕರೆಯುತ್ತಾರೆ. ವಿದ್ಯೆ ಎಂದರೆ ಯಾವುದು? ಇಂದು ನಾವು ಯಾವ ಶಿಕ್ಷಣ ಅಥವಾ ಎಜುಕೇಶನ್ ಎಂಬುದಾಗಿ ಹೇಳುತ್ತೇವೋ ಅದನ್ನು ವಿದ್ಯೆ ಎಂಬುದಾಗಿ ಕರೆದು, ಅದನ್ನು ಉಳ್ಳವನು ವಿದ್ವಾನ್ ಎಂದು ಕರೆಯುವ ಅಭ್ಯಾಸ ಬಂದಿದೆ. ಆದರೆ ಯಾವುದು ಮುಕ್ತಿಗೆ ಸಾಧನವೋ ಅದನ್ನೇ ವಿದ್ಯೆ ಎಂಬುದಾಗಿ ಕರೆಯಬೇಕು. “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬುದಾಗಿ ಉಪನಿಷತ್ತು ವಿದ್ಯೆಯ ವಿವರಣೆಯನ್ನು ಹೀಗೆ ಕೊಡುತ್ತದೆ. ಅಂದರೆ ವೇದಾದಿ ವಿದ್ಯೆಗಳನ್ನು ವಿದ್ಯೆ ಎಂದು ಕರೆದು, ಇವುಗಳನ್ನು ಮುಕ್ತಿಗೆ ಸಾಧನ ಎಂದು ಕರೆಯಲಾಗುತ್ತದೆ. 

ಹಾಗಾಗಿ ಇಂತಹ ವಿದ್ಯೆ ಉಳ್ಳವನನ್ನು ವಿದ್ವಾನ್ ಎಂದು ಕರೆಯುವುದು ಸಾಧು. ಇಂತಹ ವಿದ್ವಾಂಸನಿಗೆ ಅತ್ಯಂತ ಪ್ರೀತಿಕರವಾದದ್ದು, ಆಕರ್ಷಕವಾಗಿದ್ದು ಯಾವುದು? ಎಂಬುದಕ್ಕೆ ಉತ್ತರವಾಗಿ, ಒಳ್ಳೆಯ ಕವಿತೆ ಅಥವಾ ವಿದ್ಯೆ ಎಂಬ ಸ್ತ್ರೀ ಎಂಬುದಾಗಿ ನೀಡಲಾಗಿದೆ. ವಿದ್ವಾಂಸನೇ ವಿದ್ಯೆಯ ಕಾರಣದಿಂದ ಆದವನು. ಆದ್ದರಿಂದ ಅವನು ವಿದ್ಯೆಯನ್ನು ತಾನೇ ಪ್ರೀತಿಸುತ್ತಾನೆ! ಅವನಿಗೆ ವಿದ್ಯೆ ತಾನೇ ಅತ್ಯಂತ ಆಕರ್ಷಕ ವಾಗುತ್ತದೆ! ಒಳ್ಳೆಯ ಕವಿತೆ ಅವನಿಗೆ ಹೇಗೆ ಆಕರ್ಷಿತವಾಗುವುದು ಎಂಬುದನ್ನು ತಿಳಿಯಬೇಕಾಗಿದೆ. ಒಳ್ಳೆಯ ಕವಿತೆ ಎಂದರೆ ತೋಚಿದ್ದನ್ನು, ಗೀಚಿದ್ದನ್ನು ಕವಿತೆ ಎಂದು ಕರೆಯಬಹುದೇ? ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ‘ನಾನೃಷಿಃ ಕುರುತೇ ಕಾವ್ಯಂ’  ಜ್ಞಾನಿಯಲ್ಲದವನು ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಅಂದರೆ ಮಹಾಕವಿಯಾದವನು ಮಾತ್ರ ಒಳ್ಳೆಯ ಕಾವ್ಯವನ್ನು ಬರೆಯಬಲ್ಲ. ಅಂತಹ ಕಾವ್ಯ ವಿದ್ವಾಂಸನಿಗಲ್ಲದೆ ಇನ್ನಾರಿಗೆ ಇಷ್ಟವಾದೀತು?! 

ಹಾಗಾಗಿ ಅಂತಹ ಕಾವ್ಯವನ್ನು ತಿಳಿಯಲು ವಿದ್ವಾಂಸನು ಮಾತ್ರ ಇಷ್ಟಪಡುತ್ತಾನೆ. ಆದರೆ ಕವಿಯಿಂದ ಬರೆಯಲ್ಪಟ್ಟಿದ್ದಲ್ಲವೂ ಕಾವ್ಯವೇ. ಅಂದರೆ ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ಯಾರು ಮಹಾಕವಿಯಾಗಿ, ಆತ್ಮಜ್ಞಾನಿಯಾಗಿ ಈ ಸೃಷ್ಟಿಯ ಮರ್ಮವನ್ನು ಅರಿತು, ಅದನ್ನು ತನ್ನ ತಪೋಬಲದಿಂದ, ಜ್ಞಾನಬಲದಿಂದ, ಮೇಧಾಬಲದಿಂದ, ಶಬ್ದರೂಪವಾಗಿ ಹಾಗೆ ಹೊರತಂದರೆ ಅದನ್ನೇ ಕಾವ್ಯ ಎಂಬುದಾಗಿ ಕರೆಯಬೇಕು. .

ಆ ಕಾವ್ಯವು ಈ ಸೃಷ್ಟಿಯ ಮರ್ಮದ ಪುಸ್ತಕವಾಗಿರುತ್ತದೆ. ಅಂತಹ ಕಾವ್ಯವು ವಿದ್ವಾಂಸನಿಗಲ್ಲದೆ ಎಲ್ಲರೂ ಇಷ್ಟಪಡುವ ಸಾಹಿತ್ಯವಾಗುವುದು. ಕವಿಗಳು ಯಾರು? ಎಂದು ಕವಿಗಳನ್ನು ಎಣಿಸುವಾಗ ವಾಲ್ಮೀಕಿ, ವ್ಯಾಸ, ಕಾಳಿದಾಸ ಇಂತಹ ಮೂರು ನಾಲ್ಕು ಕವಿಗಳನ್ನು ಮಾತ್ರ ಈ ಗುಂಪಿನಲ್ಲಿ ಹೆಸರಿಸಬಹುದು ಎಂದು ಒಬ್ಬ ಪ್ರಸಿದ್ಧಕವಿಯ ಮಾತು. ಅವರು ಬರೆದ ರಾಮಾಯಣ ಮಹಾಭಾರತ ಇತ್ಯಾದಿ ಸಾಹಿತ್ಯಗಳು ಕಾವ್ಯ ಎಂಬುದಾಗಿ ಕರೆಯಲ್ಪಡುತ್ತವೆ. ಆದ್ದರಿಂದ ಇಂತಹ ಕಾವ್ಯಗಳು ಎಂದೆಂದೂ ಎಲ್ಲಾ ವಿದ್ವಾಂಸನಿಗೂ ಅತ್ಯಂತ ಆಕರ್ಷಕ. ಇಂತಹ ಕವಿತೆಯನ್ನು ವಿದ್ವಾಂಸನು ಇಷ್ಟಪಡುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ

ವ್ಯಾಸ ವೀಕ್ಷಿತ 186 ಅಚ್ಚರಿಯ ತೇರಿಗೆ ಮೆರುಗಿತ್ತ ಗರುಡ (Vyaasa Vikshita186)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


image.png



ಯಾವ ರಾಜರೂ ಆ ರಥವನ್ನು, ಎಂದರೆ ಆ ರಥದಲ್ಲಿ ಆಸೀನರಾಗಿರುವವರನ್ನು, ಜಯಿಸುವುದು ಸಾಧ್ಯವೇ ಇರಲಿಲ್ಲ. ಹೀಗಿರುವಂತಹುದಾಗಿ ಆ ರಥವು ಕಂಗೊಳಿಸಿತು. ಎಂತಹ ರಥವದು! ಹಿಂದೆ ಆ ರಥದಲ್ಲಿ ಕುಳಿತೇ ಇಂದ್ರನೂ ವಿಷ್ಣುವೂ ಸಂಗ್ರಾಮದಲ್ಲಿ ತಾರಕಾಸುರನನ್ನು ಸಂಹಾರ ಮಾಡಿದುದು.

ಅದೇ ರಥದ ಮೇಲೆ ಕುಳಿತೇ ಕೃಷ್ಣನೀಗ ಹೊರಟಿರುವುದು. ಕಾದ ಸುವರ್ಣದ ಕಾಂತಿ ಆ ರಥಕ್ಕಿತ್ತು. ಕಿಂಕಿಣಿಗಳ ಜಾಲವನ್ನೇ (ಬಲೆಯನ್ನೇ) ಅದು ಹೊಂದಿತ್ತು. ಮೋಡಗಳ ಗುಡುಗಿನ ನಾದವನ್ನೂ ಹೊಂದಿತ್ತು. ಶತ್ರುಘಾತಕವಾಗಿದ್ದ ಅದು ಜಯವನ್ನು ತಂದುಕೊಡುವಂತಹುದೂ ಆಗಿತ್ತು. ತೊಂಭತ್ತೊಂಭತ್ತು ದಾನವರನ್ನು ಇಂದ್ರನು ಸಂಹರಿಸಿದುದು ಆ ರಥದಲ್ಲಿ ಕುಳಿತು ಹೋಗಿದ್ದಾಗಲೇ. ಅಂತಹ ಅದ್ಭುತ-ರಥವನ್ನು ಹೊಂದಿದ್ದರಿಂದಾಗಿ ಆ ಮೂವರು ಪುರುಷ-ಶ್ರೇಷ್ಠರೂ ಪರಮ-ಹರ್ಷಗೊಂಡರು.

ಮಹಾಬಾಹುವಾದ ಕೃಷ್ಣನು ಈ ಸಹೋದರರಿಬ್ಬರೊಡಗೂಡಿ ರಥದಲ್ಲಿ ಬರುತ್ತಿರುವುದನ್ನು ಕಂಡು ಮಗಧದೇಶದ ಪ್ರಜೆಗಳೆಲ್ಲರೂ ವಿಸ್ಮಿತರಾದರು. ದಿವ್ಯವಾದ ಹಯಗಳನ್ನು, ಎಂದರೆ ಕುದುರೆಗಳನ್ನು, ಹೊಂದಿದ್ದ ಆ ರಥವು ವಾಯುವೇಗವುಳ್ಳದ್ದು. ಅಂತಹ ರಥವು ಈಗ ಕೃಷ್ಣನಿಂದ ಅಧಿಷ್ಠಿತವಾಗಿದ್ದು ಅಧಿಕವಾಗಿ ಕಂಗೊಳಿಸಿತು.

ಆ ಶ್ರೇಷ್ಠವಾದ ರಥದ ಮೇಲಿನ ಧ್ವಜವು ದೇವವಿಹಿತವಾಗಿದ್ದು, ಅದು ಒಂದು ಯೋಜನದಷ್ಟು ದೂರಕ್ಕೂ, ಎಂದರೆ ಸುಮಾರು ಎಂಟು ಮೈಲಿ ದೂರಕ್ಕೂ, ಕಾಣಿಸುವುದಾಗಿದ್ದರೂ, ಅದನ್ನು ರಥಕ್ಕೆ ಎಲ್ಲಿ ಸಿಕ್ಕಿಸಿರುವರೆಂಬುದೇ ಗೋಚರವಾಗುತ್ತಿರಲಿಲ್ಲ! ಅದು ಇಂದ್ರಾಯುಧದಂತೆ, ಎಂದರೆ ಕಾಮನಬಿಲ್ಲಿನ ಹಾಗೆ, ಶೋಭಿಸುತ್ತಿತ್ತು.

ಆ ಸಮಯದಲ್ಲಿ ಕೃಷ್ಣನು ಗರುತ್ಮಂತನನ್ನು, ಎಂದರೆ ಗರುಡನನ್ನು, ಸ್ಮರಿಸಿದನು. ಅದೇ ಕ್ಷಣಕ್ಕೇ ಆತನೂ ಅಲ್ಲಿಗೆ ಆಗಮಿಸಿದನು. ಮೇಲೆದ್ದ ಒಂದು ಚೈತ್ಯವೃಕ್ಷದ ಹಾಗೆ ಗರುಡನು ತೋರಿದನು. ಬಾಯ್ದೆರೆದು ಮಹಾನಾದವನ್ನು ಮಾಡುತ್ತಿದ್ದ, ಹಾಗೂ ಧ್ವಜವನ್ನು ಆಶ್ರಯಿಸಿದ್ದ, ಭೂತಗಳೊಂದಿಗೆ, ಸರ್ಪಭಕ್ಷಕನೆನಿಸಿದ ಗರುಡನು ಆ ಶ್ರೇಷ್ಠರಥದ ಮೇಲೆ ಕುಳಿತುಕೊಂಡನು. ಆಗ ಹೇಗೆ ಕಂಡಿತು ಆ ಧ್ವಜ? ಭೂತಗಳಿಗೆ, ಎಂದರೆ ಯಾವುದೇ ಪ್ರಾಣಿಗಳಿಗೆ, ದಿಟ್ಟಿಸಿನೋಡಲಾಗದ ಹಾಗೆ ಅಧಿಕವಾದ ತೇಜಸ್ಸಿನಿಂದಾಗಿ ಕೂಡಿದ್ದಾಗಿ  ಕಂಡಿತು. ಮಧ್ಯಾಹ್ನದ ಹೊತ್ತಿನಲ್ಲಿ ತನ್ನ ಸಹಸ್ರ-ಕಿರಣಗಳಿಂದಲೂ ಕೂಡಿದ ಆದಿತ್ಯನು ಕಣ್ಣು ಕೋರೈಸುವಂತಿರುವನಲ್ಲವೇ? ಹಾಗೆ.

ಆ ಶ್ರೇಷ್ಠಧ್ವಜದ ಮತ್ತೊಂದು ಆಶ್ಚರ್ಯವೆಂದರೆ ಅದು ಮರಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳಿಂದ ಘಾಸಿಕೊಳ್ಳುತ್ತಿರಲಿಲ್ಲ. ಆ ದಿವ್ಯವಾದ ಧ್ವಜವು ಮನುಷ್ಯರಿಗೆ ಗೋಚರವಾಗಿರುತ್ತಿತ್ತು.

ಮಳೆಯ ಹಾಗೆ ಶಬ್ದ ಮಾಡುತ್ತಿದ್ದ ಆ ದಿವ್ಯ-ರಥದಲ್ಲಿ ಆಸೀನನಾಗಿ ಭೀಮಾರ್ಜುನರೊಡನೆ ಕೃಷ್ಣನು ಆ ಊರಿನಿಂದ ನಿರ್ಗಮಿಸಿದನು. ಇಂದ್ರನಿಂದ ವಸುವಿಗೂ ಆತನಿಂದ ಬೃಹದ್ರಥನಿಗೂ ಅಲ್ಲಿಂದ ಕ್ರಮ-ಪ್ರಾಪ್ತವಾಗಿ ಜರಾಸಂಧನಿಗೂ ಬಂದ ರಥವದು.

ಗಿರಿವ್ರಜದಿಂದ ಹೊರಹೊರಟು ಈಗ ಸಮತಟ್ಟಾದ ಎಡೆಗೆ ಕೃಷ್ಣನು ಬಂದು ಸೇರಿದನು. ಬಂಧನದಿಂದ ಬಿಡುಗಡೆಯನ್ನು ಹೊಂದಿದ ರಾಜರುಗಳು ಕೃಷ್ಣನನ್ನು ಅರ್ಚಿಸಿ ಹೀಗೆ ಸ್ತುತಿಸಿದರು:

"ಮಹಾಬಾಹುವಾದ ಕೃಷ್ಣನೇ, ದೇವಕಿಗೆ ಆನಂದ ತಂದವನೇ, ಭೀಮಾರ್ಜುನ ಬಲದೊಂದಿಗೆ ಕೂಡಿರುವ ನೀನು ಧರ್ಮರಕ್ಷಣೆಯನ್ನು ಮಾಡುವೆಯೆಂಬುದರಲ್ಲಿ ಆಶ್ಚರ್ಯವೇ ಇಲ್ಲ. ದುಃಖವೆಂಬ ಕೆಸರಿನ ರಾಶಿಯೇ ಆಗಿದ್ದುದು ಜರಾಸಂಧವೆಂಬ ಮಡು. ಅದರೊಳಗೆ ಸಿಲುಕಿದ್ದೆವು ನಾವು ರಾಜರುಗಳು. ಅಂತಹ ನಮ್ಮಗಳ ಉದ್ಧಾರವನ್ನು ನೀನು ಈಗ ಎಸಗಿರುವೆ. ಬೆಟ್ಟವೆಂಬ ಭಯಂಕರವಾದ ಕೋಟೆಯೊಳಗೆ ಸಿಲುಕಿ ನಲುಗಿಹೋಗಿದ್ದ ನಮಗೆ, ಅದೃಷ್ಟವಶಾತ್ ಮೋಕ್ಷವನ್ನು ದಯಪಾಲಿಸಿರುವೆ, ಓ ವಿಷ್ಣುವೇ!

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಭಗವದಾನಂದಕ್ಕೆ ಪಾತ್ರರಾಗಲು ಮಾರ್ಗ ಯಾವುದು ? (Bhagavadanandakke Patraragalu Marga Yavudu?)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)


Screenshot 2026-05-03 165237.png

ಶಿಶುಪಾಲವಧೆ ಎಂಬ ಮಹಾಕಾವ್ಯದಲ್ಲಿ ಬರುವಂತಹ ಪ್ರಸಂಗ, ಪರಮಾತ್ಮನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಶ್ರೀಕೃಷ್ಣನ ರೂಪದಲ್ಲಿ ಭುವಿಯಲ್ಲಿ ಅವತರಿಸಿ ದ್ವಾರಕೆಯಲ್ಲಿರುತ್ತಾನೆ. ದೇವತೆಗಳ ಆಶಯದಂತೆ ಒಮ್ಮೆ ದೇವರ್ಷಿ ನಾರದರು , ಶಿಶುಪಾಲ ಎಂಬ ದುಷ್ಟನ ವಧೆ ಸನ್ನಿಹಿತವಾಗಿದೆ ಎಂದು ವಿಜ್ಞಾಪಿಸಿಕೊಳ್ಳಲು ಶ್ರೀಕೃಷ್ಣನ ಬಳಿಗೆ ಬರುತ್ತಾರೆ. ನಾರದರ ಆಗಮನದಿಂದ ಶ್ರೀಕೃಷ್ಣ ಪರಮಾತ್ಮನಿಗೆ ಅತ್ಯಂತ ಸಂತೋಷ ಉಂಟಾಗುತ್ತದೆ, ನಾರದರು ಅರಮನೆಗೆ ಬಂದು ಭೂ ಸ್ಪರ್ಶ ಮಾಡುವುದರೊಳಗಾಗಿ ಕೃಷ್ಣನು ತನ್ನ ಸಿಂಹಾಸನದಿಂದ ಕೆಳಗಿಳಿದು ಅವರಿಗೆ ಸ್ವಾಗತವನ್ನು ನೀಡುತ್ತಾನೆ. ನಾರದರಿಗೆ ಅರ್ಘ್ಯ, ಪಾದ್ಯ ಮೋದಲಾದವುಗಳನ್ನು ನೀಡಿ ಆದರಪೂರ್ವಕವಾಗಿ ಸತ್ಕರಿಸುತ್ತಾನೆ. ತಮ್ಮಂತಹ ಮಹಾತ್ಮರ ದರ್ಶನವು ಜೀವಿಗಳಿಗೆ ಭೂತ, ಭವಿಷ್ಯತ್ ಮತ್ತು ವರ್ತಮಾನವೆಂಬ ಮೂರು ಕಾಲಗಳ  ಪಾಪವನ್ನು ಪರಿಹರಿಸಿ ಮಂಗಳವನ್ನುಂಟುಮಾಡುತ್ತದೆ ಎಂಬುದಾಗಿ ನಾರದರನ್ನು ಕುರಿತು ಹೇಳುತ್ತಾನೆ. ನಾರದರ ಆಗಮನದಿಂದ ಶ್ರೀಕೃಷ್ಣನಿಗೆ ಉಂಟಾದ ಆನಂದವನ್ನು ಕವಿಗಳು ಹೀಗೆ ವರ್ಣಿಸುತ್ತಾರೆ, 'ಪ್ರಳಯ ಕಾಲದಲ್ಲಿ ಸಮಸ್ತ ಜಗತ್ತನ್ನು ತನ್ನಲ್ಲಿ ಅಡಗಿಸಿಟ್ಟುಕೊಳ್ಳುವ ಪರಮಾತ್ಮನಿಗೆ ನಾರದರ ಆಗಮನದಿಂದ ಉಂಟಾದ ಆನಂದವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲಾಗಲಿಲ್ಲ ಅದು ತುಂಬಿ ಹರಿದು ಪ್ರಕಟವಾಯಿತು' ಎಂಬುದಾಗಿ. ಭಗವಂತನು ತನ್ನ ಭಕ್ತರ ವಿಷಯದಲ್ಲಿ ಯಾವ ರೀತಿ ಆನಂದವನ್ನು ಹೊಂದಿರುತ್ತಾನೆ, ಅದನ್ನು ಯಾವ ರೀತಿ ಪ್ರಕಟಪಡಿಸುತ್ತಾನೆ ಎಂಬುದನ್ನು ಇಲ್ಲಿ ಕಾಣಬಹುದು.

ನಾರದರು ಭಕ್ತ ಶ್ರೇಷ್ಠರಲ್ಲಿ ಅಗ್ರಗಣ್ಯರು, ಸದಾ ಶ್ರೀಮನ್ನಾರಾಯಣನನ್ನು ಮನಸ್ಸಿನಲ್ಲಿ ತುಂಬಿಕೊಂಡು ಅವನ ಸ್ಮರಣೆ ಮಾಡುತ್ತಾ ಮೂರು ಲೋಕದಲ್ಲಿಯೂ ಸಂಚಾರ ಮಾಡುವವರು. ತಾವು ಭಕ್ತಿ ಮಾರ್ಗದಲ್ಲಿ ನಡೆಯುವುದು ಮಾತ್ರವಲ್ಲದೇ ಲೋಕವೆಲ್ಲವನ್ನು ಆ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಣೆ ನೀಡಿದವರು. ಪ್ರಹ್ಲಾದ, ಧ್ರುವ ಮುಂತಾದ ಭಾಗವತೋತ್ತಮರಿಗೆ ಭಕ್ತಿಮಾರ್ಗವನ್ನು ಉಪದೇಶಿಸಿ ಅವರ ಉದ್ಧಾರಕ್ಕೆ ಕಾರಣ ರಾದವರು, ದುಷ್ಟವ್ಯಾಧನಾದಂತಹ ರತ್ನಾಕರನನ್ನು ವಾಲ್ಮೀಕಿ ಮಹರ್ಷಿಗಳನ್ನಾಗಿ ಪರಿವರ್ತಿಸಿ ಪರಮಪಾವನಕರವಾದ ಶ್ರೀಮದ್ ರಾಮಾಯಣವನ್ನು ರಚಿಸಲು ಪ್ರೇರಣೆಯನ್ನು ನೀಡಿದವರು. ಹೀಗೆ ಸದಾ ಕಾಲ ತಮ್ಮನ್ನು ಭಗವತ್ ಕಾರ್ಯದಲ್ಲಿ, ಭಗವತ್ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂತಹ ನಾರದರ ವಿಷಯದಲ್ಲಿ ಭಗವಂತನು ಸಂತೋಷಗೊಳ್ಳುವುದು ಸಹಜವೇ ಆಗಿದೆ.

ನಾರದ ಮಹರ್ಷಿಗಳು ದೇವತೆ, ರಾಕ್ಷಸ ಮನುಷ್ಯ ಎಂಬ ಭೇದವಿಲ್ಲದೆ ಎಲ್ಲರನ್ನೂ ಭಗವಂತನಿಗೆ ಅಭಿಮುಖವಾದ ದೈವೀಮಾರ್ಗದಲ್ಲಿ ನಡೆಯುವಂತೆ ಪ್ರಚೋದನೆಯನ್ನು ನೀಡಿದವರು. ಏಕೆಂದರೆ ಪರಮ ಕರುಣಾಮಯರಾದ ಅವರು ನೋಡುತ್ತಿದ್ದದು ಹೊರರೂಪವನ್ನಲ್ಲ, ಶರೀರದ ಒಳಗಿರುವ ಆತ್ಮವನ್ನು ಹಾಗೂ ಅದರ ಉದ್ಧಾರವನ್ನು.

ಏಕೆಂದರೆ ಈ ಶರೀರ ಅನ್ನುವುದು ಯಾವುದೋ ಒಂದು ಪೂರ್ವಜನ್ಮಕೃತ ಪುಣ್ಯ-ಪಾಪಕ್ಕೆ ಅನುಗುಣವಾಗಿ ಬಂದಿರುವಂತಹದು. ರಾಕ್ಷಸರಾಗಿ ಹುಟ್ಟಿದವರ ಪೂರ್ವವೃತ್ತಾಂತವನ್ನು ನಾವು ಇತಿಹಾಸ ಪುರಾಣಗಳಲ್ಲಿ ಕೇಳಿದ್ದೇವೆ. ನಮ್ಮ ಪುಣ್ಯ ಪಾಪಗಳನ್ನು ಕಡೆದುಕೊಂಡು ಭಗವಂತನ ಸಾನಿಧ್ಯವನ್ನು ಹೊಂದುವುದಕ್ಕೆ ಅವನ ಸ್ಮರಣೆಯ ಜೊತೆ ಜೊತೆಗೆ ಅವನಿಗೆ ಅಭಿಮುಖವಾಗಿ ನಡೆಯುವುದೊಂದೆಯೊಂದೇ ದಿವ್ಯವಾದ ಔಷಧ. ಅಂತಹ ಔಷಧವು ಪ್ರತಿಯೊಂದು ಜೀವಿಗೂ ಬೇಕು. ನಾರದರು ಹಾಗೂ ಅವರಂತೆಯೇ ಕರುಣಾಮಯರಾದ ಅನೇಕ ಮಹರ್ಷಿಗಳು ಪ್ರತಿಯೊಂದು ಜೀವದ ಉದ್ಧಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು  ಭಗವಂತನಿಗೆ ಅಭಿಮುಖವಾಗಿ ನಡೆಯುವಂತಹ ಭಾರತೀಯ ಸಂಸ್ಕೃತಿಯನ್ನು ರೂಪಿಸಿಕೊಟ್ಟಿದ್ದಾರೆ. ನಮ್ಮ ನಡೆ, ನುಡಿ ವ್ಯವಹಾರದಲ್ಲಿ ಆ ರೀತಿಯ ಜೀವನ ಶೈಲಿಯನ್ನು ರೂಪಿಸಿ ಕೊಳ್ಳುವಂತೆ ದಾರಿಯನ್ನು ಮಾಡಿಕೊಟ್ಟಿದ್ದಾರೆ. ಏಕೆಂದರೆ ಭಗವಂತನಿಗೆ ಅಭಿಮುಖವಾಗಿ ನಮ್ಮ ಮನಸ್ಸನ್ನು ಕರೆದುಕೊಂಡು ಹೋಗುತ್ತಾ ಇದ್ದಾಗ ಮನಸ್ಸಿನಲ್ಲಿ ಪಾಪರೂಪದಲ್ಲಿ ಅಡಕವಾಗಿರುವ ಕಲ್ಮಶವೆಲ್ಲವೂ ನಾಶವಾಗುತ್ತದೆ ಹಾಗೂ ಮನೋಬುದ್ಧಿಗಳಲ್ಲಿ ತುಂಬಿರುವ ಅಂಧಕಾರ ತೊಲಗಿ ಜ್ಞಾನ ರೂಪದಲ್ಲಿರುವ ಭಗವಂತನ ದರ್ಶನ ಸನ್ನಿಹಿತವಾಗುತ್ತದೆ. ತಾವೂ ಭಗವನ್ಮಾರ್ಗದಲ್ಲಿ ನಡೆದು ತಮ್ಮ ಸುತ್ತಲಿರುವವರನ್ನು ಆ ಮಾರ್ಗದಲ್ಲಿ ನಡೆಯುವಂತೆ ಯಾರು ಪ್ರೇರೇಪಿಸುತ್ತಾರೋ ಅವರು ಮಾಡುವುದೇ ನಿಜವಾದ ಭಗವತ್ಕಾರ್ಯ ಹಾಗೂ ಭಗವಂತನಿಗೆ ಅತ್ಯಂತ ಸಂತೋಷವನ್ನುಂಟು ಮಾಡುವ ಸೇವೆ. ಅಂತಹ ಕಾರ್ಯವನ್ನು ಮಾಡುವವರ ವಿಷಯದಲ್ಲಿ ತಾನೇ ಭಗವಂತ ಅತ್ಯಂತ ಸಂತುಷ್ಟನಾಗುತ್ತಾನೆ! ಏಕೆಂದರೆ ಅಂತಹ ಮಾರ್ಗದಲ್ಲಿ ನಡೆದಾಗ ಮಾತ್ರ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣ ಇವೆರಡೂ ಸಾಧ್ಯ. "ಹುಟ್ಟಿದ ಮೇಲೆ ಹೇಗೆ ಹೇಗೆಯೋ ಬಾಳುವ ಬದಲು ದೈವೀ ಮಾರ್ಗ ಹಿಡಿಯಿರೀಪ್ಪ!" ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ನಮ್ಮ ಮನಸ್ಸು ಬುದ್ಧಿ ,ಆತ್ಮ ಎಲ್ಲವನ್ನು ಶುದ್ಧಗೊಳಿಸುವ ದೈವೀ ಮಾರ್ಗವನ್ನು ಹಿಡಿದು  ಮಹರ್ಷಿಗಳ ಆಶಯದಂತೆ ಸುಕೃತವಾದ ಜೀವನವನ್ನು ನಡೆಸೋಣ. ಭಗವದಾನಂದಕ್ಕೆ ಪಾತ್ರರಾಗೋಣ.

ಸೂಚನೆ : 2/04/2029 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.