ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೫. ವಿಪತ್ತು ಯಾರನ್ನು ತಟ್ಟುವುದಿಲ್ಲ?
ಜಿತೇಂದ್ರಿಯನನ್ನು ಮತ್ತು ಜ್ಞಾನ ಮತ್ತು ವಯಸ್ಸಿನಿಂದ ಕೂಡಿದ ವೃದ್ಧರ ಮಾತನ್ನು ಕೇಳುವವನನ್ನು.
ವಿಪತ್ತು, ಆಪತ್ತು, ತೊಂದರೆ, ತಾಪತ್ರಯ, ವಿಘ್ನ ಇವುಗಳೆಲ್ಲವೂ ಪರ್ಯಾಯಪದಗಳು. ಇವು ಬರಲು ಏನು ಕಾರಣ? ಮತ್ತುಇವು ಬರದಿರಲು ಏನು ಕಾರಣ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.
ಒಬ್ಬ ಜಿತೇಂದ್ರಿಯನಾದವನು ಮತ್ತು ಯಾರಲ್ಲಿ ಜ್ಞಾನವಿದೆಯೋ ಮತ್ತು ವಯಸ್ಸಿನಿಂದಲೂ ಶ್ರೇಷ್ಠನಾಗಿದ್ದಾನೋ ಅಂತವರಿಗೆ ಗೌರವವನ್ನು ಕೊಡುವವನು ವಿಪತ್ತಿಗೆ ಒಳಗಾಗುವುದಿಲ್ಲ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಇವು ಆಪತ್ತನ್ನು ದೂರ ಮಾಡುತ್ತವೆ ಎಂಬುದಾಗಿ ಅರ್ಥ. ಅತ್ಯಂತ ಸುಲಭವಾದ ಉತ್ತರ. ಒಂದು ಮಾತು ಹೀಗಿದೆ -” ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದಾಗಿ. ಇದು ಇಂದ್ರಿಯ ಜಯವನ್ನು ಸಾರುವ ಗಾದೆಮಾತಾಗಿದೆ. ಊಟವನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಯಾವುದನ್ನು ಮಾಡಬೇಕು? ಎಂಬುದರ ಬಗ್ಗೆ ಇರುವ ಪರಿಜ್ಞಾನ. ಇದು ಊಟವನ್ನು ಉಚಿತವಾಗಿಯೂ ಉತ್ಕೃಷ್ಟವಾಗಿಯೂ ಮಾಡುವ ಬಗೆಗೆ ಇರುವ ಜ್ಞಾನ. ಅಂದರೆ ಆಯುರ್ವೇದ ಊಟದ ಬಗ್ಗೆ ಹೀಗೆ ಹೇಳುತ್ತದೆ - ‘ಹಸಿದಾಗ ಊಟ ಮಾಡು, ದಿನಕ್ಕೆ ಎರಡು ಹೊತ್ತು ಊಟ ಮಾಡು’ ಎಂದು. ಆದರೆ ನಾವಿಂದು ನಮ್ಮ ಇಂದ್ರಿಯ ಚಾಪಲ್ಯದಿಂದ ಅಕಾಲದಲ್ಲಿ ಅಮಿತವಾಗಿ ಊಟವನ್ನು ಮಾಡುತ್ತಿದ್ದೇವೆ. ಅಂದರೆ ನಮ್ಮ ಇಂದ್ರಿಯ ಚಾಪಲ್ಯ ಮಿತಿಮೀರಿದೆ ಎಂಬುದು ಇದರ ತಾತ್ಪರ್ಯ. ಇದರಿಂದಾಗಿ ನಮಗಿಂದು ರೋಗಬಾಹುಲ್ಯ ಉಂಟಾಗಿದೆ.
ಮಾತನಾಡುವಾಗ ಹೇಗೆ ಮಾತನಾಡಬೇಕು? ಎಷ್ಟು ಮಾತನಾಡಬೇಕು? ಯಾವುದನ್ನು ಮಾತನಾಡಬೇಕು? ಯಾವ ಶಬ್ದವನ್ನು ಉಪಯೋಗಿಸಿ ಮಾತನಾಡಿದರೆ ಅದು ಎಷ್ಟು ಉಚಿತವಾಗುತ್ತದೆ? ಎಂಬಿತ್ಯಾದಿ ವಿಷಯವನ್ನು ಅರಿಯುವುದೇ ಮಾತಿನ ಬಗೆಗೆ ಇರುವ ಜಯ ಎಂಬುದಾಗಿ ಭಾವಿಸಬೇಕು. ಹಾಗೆ ಮಾತನಾಡುವವನಿಗೆ ಜಗಳ ಅಸಾಧ್ಯ. ಹಾಗಾಗಿ ಇಲ್ಲಿ ಒಂದು ಕರ್ಮೇಂದ್ರಿಯದ, ಇನ್ನೊಂದು ಜ್ಞಾನೇಂದ್ರಿಯದ ಪರಿಮಿತಿಯನ್ನು ಮತ್ತು ಅದರ ಸಾಧಕತೆಯನ್ನು ವಿವರಿಸಲಾಗಿದೆ. ಹೀಗಿದ್ದಾಗ ಅವನಿಗೆ ರೋಗ ಬರುವುದೆಂತು? ಹೀಗಿದ್ದಾಗ ಅವನಿಗೆ ಜಗಳವಾಗುವುದೆಂತು? ಜಗಳಕ್ಕೂ ರೋಗಕ್ಕೂ ಅವಕಾಶವೇ ಇಲ್ಲವಾದಂತಾಗುತ್ತದೆ. ಇದು ಆಪತ್ತಿನ ನಿವಾರಣೆ ಅಲ್ಲವೇ?
ಇನ್ನೊಂದು ಅತಿ ಮುಖ್ಯವಾದ ವಿಷಯ - ಜ್ಞಾನವೃದ್ಧರಿಗೂ ಮತ್ತು ವಯೋವೃದ್ಧರಿಗೂ ಕೊಡುವಂತಹ ಗೌರವ ಮತ್ತು ಅವರು ಹೇಳುವುದನ್ನು ಕೇಳುವಂಥದ್ದು. ಇದೂ ಕೂಡ ನಮ್ಮ ಆರೋಗ್ಯಕ್ಕೆ ಅನುಕೂಲಕರ ಎಂಬುದಾಗಿ ತಿಳಿಯಬೇಕು. ಎಲ್ಲವನ್ನೂ ನಾವೇ ಮಾಡಿ ತಿಳಿಯಲು ಅಸಾಧ್ಯ. ಹಾಗಾಗಿ ಮಾಡಿ ತಿಳಿದವರಿಂದ ಒಂದಷ್ಟನ್ನು ತಿಳಿಯಬಹುದು. ಅಥವಾ ಓದಿ ಕಲಿತವರಿಂದ ನಾವು ತಿಳಿದರೆ ಅಷ್ಟು ಸಾಧನದ ಸಮಯ ನಮಗೆ ಉಳಿದಂತಾಗುತ್ತದೆ. ಮತ್ತು ಅವರಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಅಷ್ಟೇ ಅಲ್ಲ ಅದರಿಂದ ನಮಗೆ ಅತ್ಯುಪಯೋಗವೂ ಆದಂತಾಗುತ್ತದೆ. ಹಾಗಾಗಿ ಹಿರಿಯರ ಮಾತನ್ನು ಕೇಳುವುದು ಅತ್ಯಂತ ಸೌಜನ್ಯದ ಸಂಕೇತ ಎಂಬುದಾಗಿ ಎಲ್ಲ ಕಡೆ ಸಾರಲಾಗಿದೆ. ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲ ಈ ನಾಲ್ಕೂ ಕೂಡ ವೃದ್ಧರನ್ನು ಗೌರವಿಸುವುದರಿಂದ ಬರುತ್ತದೆ ಎಂಬುದಾಗಿ ಒಂದು ಸುಭಾಷಿತವೂ ಕೂಡ ಸಾರುತ್ತದೆ. ಈ ಬಗೆಯ ವ್ಯಕ್ತಿಗೆ ಯಾವ ಬಗೆಯ ತೊಂದರೆ, ತಾಪತ್ರಯ, ವಿಘ್ನಗಳೂ ಇರುವುದಿಲ್ಲ.
ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ