ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೭. ಎಲ್ಲಿ ವಾಸ ಮಾಡಬೇಕು?
ಸಜ್ಜನರ ಸನಿಹ ಅಥವಾ ಕಾಶಿಯಲ್ಲಿ.
ಈ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆನಾವು ಏಕೆ ಬದುಕಬೇಕು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಬದುಕು ಎಂಬುದು ಜನನ ಮತ್ತು ಮರಣದ ನಡುವಿನ ವ್ಯಾಪಾರ ಎಂಬುದಾಗಿ ನಾವು ತಿಳಿದಿದ್ದೇವೆ. ಆದರೆ ಈ ಅರಿವು ಬದಲಾಗಬೇಕಾಗಿದೆ. ಭಾರತೀಯರ ಜೀವನ ಎಂದರೆ ಕೇವಲ ಹುಟ್ಟು ಸಾವುಗಳ ನಡುವಿನ ವ್ಯಾಪಾರ ಅಲ್ಲ. ಜೀವಭಾವ ಎಲ್ಲಿಂದ ಆರಂಭವಾಗುತ್ತದೆಯೋ ಮತ್ತುಆ ಜೀವಭಾವ ಯಾವಾಗ ಮುಕ್ತಾಯವಾಗುತ್ತದೆಯೋ ಅವೆಡರ ನಡುವಿನ ವ್ಯಾಪಾರವನ್ನೇ ‘ಜೀವನ’ ಎಂಬುದಾಗಿ ಕರೆಯಬೇಕು ಎಂಬುದಾಗಿ ಶ್ರೀರಂಗ ಮಹಾಗುರುಗಳ ಆಶಯವಾಗಿತ್ತು. ಹಾಗಾದರೆ ಈ ಜೀವಭಾಗವೂ ಕಳೆಯುವುದು ಎಂದರೇನು? ಜೀವಭಾವವು ಕಳೆಯಲು ಯಾವ ಉಪಾಯವನ್ನು ಮಾಡಬೇಕು? ಎಂಬುದು ಇಲ್ಲಿನ ವಿಷಯವಾಗಿದೆ. ಜೀವಭಾವ ಕಳೆಯುವುದನ್ನೇ ‘ಮೋಕ್ಷ’ ಎಂಬುದಾಗಿ ಕರೆಯಲಾಗಿದೆ. ಸಂಸಾರ ಭಾವವು ಕಳೆಯಬೇಕು. ಸಂಸಾರದಿಂದ ಮುಕ್ತಿಯಾಗಿ ಮತ್ತೆ ಜನ್ಮ ಎಂಬ ಹೊಸತನವನ್ನು ಪಡೆದುಕೊಳ್ಳದೇ ಇರುವಂತಾಗಬೇಕು. ಇದನ್ನೇ ಮಾನವಜೀವನ ಎಂಬುದಾಗಿ ಕರೆದಿದ್ದಾರೆ. ಇಂತಹ ಉತ್ಕೃಷ್ಟವಾದ ಮಾನವಜನ್ಮ ಸಾರ್ಥಕವಾಗಬೇಕಾದರೆ ಅದಕ್ಕೆ ಇರುವ ಅತ್ಯಂತ ಶ್ರೇಷ್ಠವಾದ ಸಾಧನ ಎಂದರೆ ಸಜ್ಜನರ ಸಾನ್ನಿಧ್ಯ. ನಾವು ಎಷ್ಟೆಷ್ಟು ಸುಜನರ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೋ ಅಷ್ಟಷ್ಟು ನಮ್ಮ ಜೀವನ ಸುಲಭವಾಗುತ್ತದೆ. ಏಕೆಂದರೆ ಆ ಸಜ್ಜನರು ಜೀವನದ ಸಾರ್ಥಕ್ಯವನ್ನು ಪಡೆಯುವುದು ಹೇಗೆ? ಎಂಬುದನ್ನು ಅವರು ತಮ್ಮ ಜೀವನದುದ್ದಕ್ಕೂ ಸಾಧಿಸಿ ತೋರಿಸಿದವರು. ಹಾಗಾಗಿ ಅವರು ನಡೆದ ಹಾದಿಯಲ್ಲಿ ನಡೆದರೆ ನಮಗೆ ಗಮ್ಯವೂ ಅತ್ಯಂತ ಸುಲಭವಾಗಿ ಲಭಿಸುತ್ತದೆ ಎಂಬುದು ಇದರ ತಾತ್ಪರ್ಯ. ಹಾಗಾಗಿ ಸಜ್ಜನರ ಸಂಬಂಧ ಅತ್ಯಂತ ಅಗತ್ಯವಾದ್ದು. ಹಾಗಾದರೆ ಸಜ್ಜನರು ಯಾರು? ಯಾವ ನಿತ್ಯವಾದ ಸಚ್ಚಿದಾನಂದ ರೂಪವಾದ ಯಾವ ಪರಬ್ರಹ್ಮ ಇದೆಯೋ, ಅದನ್ನೇ ‘ಸತ್’ ಎಂದು ಕರೆದು ಆ ಸತ್ತಿನಲ್ಲೇ ಯಾವಾಗಲೂ ತಮ್ಮ ಮನಸ್ಸನ್ನು ಇಡುವವರು ಸಜ್ಜನರು. ಅವರ ನಡೆ ನುಡಿ ಯಾವಾಗಲೂ ಆ ಪರಬ್ರಹ್ಮದ ಕಡೆಗೆ ಇರುತ್ತದೆ. ಹಾಗಾಗಿ ಎಲ್ಲೂ ಅವರು ಚ್ಯುತರಾಗುವುದಿಲ್ಲ ಅಂತಹ ಜೀವನಕ್ರಮ ಅವರದ್ದಾಗಿರುತ್ತದೆ.
ಈ ಪ್ರಶ್ನೆಯ ಇನ್ನೊಂದು ಭಾಗ ಕಾಶಿಯಲ್ಲಿ ವಾಸ ಮಾಡಬೇಕು ಎಂಬುದಾಗಿ. ಈಗ ನಾವು ಯಾವ ಭಾರತದ ಭೂಗೋಳದಲ್ಲಿ ಕಾಶಿ ಎಂಬ ನಗರವನ್ನು ನೋಡುತ್ತೇವೋ ಅದರಲ್ಲಿ ವಾಸ ಮಾಡಬೇಕು ಎಂಬ ಅರ್ಥದಲ್ಲಿ ಈ ವಾಕ್ಯ ಬಂದಿದ್ದಲ್ಲ. ಸನಾತನ ಭಾರತದ ಮಹರ್ಷಿಗಳು ಯಾವ ಯಾವ ಭ್ರೂಮಧ್ಯದಲ್ಲಿ ಇರುವ ‘ಕಾಶೀ’ ಎಂಬ ಭಾಗವಿದೆಯೋ, ಅಲ್ಲಿ ಯಾವ ವಿಶ್ವನಾಥನನ್ನು ದರುಶನವನ್ನು ಮಾಡಿದರೋ, ಅಂತಹ ದರ್ಶನಕ್ಕೆ ಯೋಗ್ಯವಾದ ಕ್ಷೇತ್ರ ಯಾವುದೋ, ಅದೂ ಕೂಡ ಭಾರತದ ಉತ್ತರ ಭಾಗದಲ್ಲಿರುವ ಕಾಶಿ ಎಂಬುದಾಗಿ ಅವರು ಉದ್ಘೋಷಿಸಿದರು. “ಕಾಶ್ಯಾಂ ತು ಮರಣಾತ್ ಮುಕ್ತಿಃ” ಎಂಬುದಾಗಿ ಅಂದರೆ ಮುಕ್ತಿ ಪಡೆಯಬೇಕಾದರೆ ಕಾಶಿಯಲ್ಲಿ ಮರಣವನ್ನು ಹೊಂದಬೇಕು. ಅಂದರೆ ಜೀವನದಲ್ಲಿ ತನ್ನ ಪ್ರಾಣವನ್ನು ಅಲ್ಲಿ ಲಯಗೊಳಿಸಿಕೊಂಡರೆ ಆಗ ಜೀವಭಾವವು ನಷ್ಟವಾಗುತ್ತದೆ; ದೇವಭಾವವು ಪ್ರಾಪ್ತವಾಗುತ್ತದೆ. ಇದರಿಂದಲೇ ಅವನ ಜನ್ಮ ಸಾರ್ಥಕ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರವನ್ನು ನಾವು ಗಮನಿಸಬೇಕಾಗಿದೆ.
ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ