Saturday, May 9, 2026

ಮಡಿಯ ಮೂಲವನ್ನು ಅರಸೋಣ...(Madiya Mulavannu Arasona...)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


image.png



ಇದು ಮಡಿ ಇದನ್ನು ಮುಟ್ಟಬಾರದು. ಇವರು ಮಡಿ, ಇವರಿಂದ ದೂರವಿರಿ. ಈ ಬಟ್ಟೆ ಮಡಿ, ಈ ನೀರು ಮಡಿ. ಇದು ದೇವರ ಮನೆ. ಮಡಿ ಮಾಡಿಕೊಂಡು ಒಳಗೆ ಬನ್ನಿ. ರೇಷ್ಮೆ ಮುಗುಟ ಮಡಿ ಬೇರೆಯದು ಮೈಲಿಗೆ. ಈ ದೇವತಾ ಕಾರ್ಯ ಮಡಿಯಲ್ಲಿ ಮಾಡಬೇಕು. ಇದು ಪಿತೃಕಾರ್ಯ. ಇಲ್ಲಿ ಮೈಲಿಗೆ ಕೂಡದು. ಹೀಗೆ ಸಾಗುತ್ತದೆ ಮಡಿ ಮೈಲಿಗೆಗಳ ಜೋರು. ಏನಿದು ಮಡಿ? ಇದನ್ನು ಏಕೆ ಪಾಲಿಸಬೇಕು? ಬರಿಯ ಮೂಢನಂಬಿಕೆಯೆ?
ಹಿಂದಿನವರ ಆಚರಣೆಗಳು. ಅವರಿಗೆ ಇವತ್ತಿನ ವೈಜ್ಞಾನಿಕ ಚಿಂತನೆಯಿರಲಿಲ್ಲ. ಹಾಗಾಗಿ ಇಂತಹ ಮೂಢನಂಬಿಕೆಗಳನ್ನೆಲ್ಲಾ ಆಚರಿಸಿಕೊಂಡು ಬಂದಿದ್ದಾರೆ.  ಹಾಗೆಂದು, ನಾವು, ಪ್ರಗತಿಪರರು, ವಿಚಾರಪರರು ಇವುಗಳನ್ನು ಅಲಕ್ಷಿಸಬೇಕು. ಮಾತ್ರವಲ್ಲ ಈ ನಂಬಿಕೆಗಳನ್ನೆಲ್ಲ ಸಮಾಜದಿಂದ ಕಿತ್ತೆಸೆಯಬೇಕು. ಎಂದೆಲ್ಲ ನಮ್ಮ ದೇಶದ ಚಿಂತಕರನೇಕರು ಮೊಳಗಿದರೆ ಕೆಲವೊಮ್ಮೆ  ಹೌದೆನ್ನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನಾವು ಉಪಯೋಗಿಸುವ ಬಟ್ಟೆ, ಪಾತ್ರೆ, ಪರಿಸರ  ಮತ್ತು ನಮ್ಮ ಮೈ ಎಲ್ಲವೂ ಶುದ್ಧವಾಗಿಟ್ಟುಕೊಂಡರೆ ಅದೇ ಮಡಿ. ಅದಲ್ಲದೇ ಹೆಚ್ಚಿನ ಮಹತ್ವವೇನಿದೆ ಅಲ್ಲಿ? ಇನ್ನು ದೇವರ ಪೂಜೆ ಮಾಡುವಾಗ ಮಡಿಯ ಗಲಾಟೆ ಹೆಚ್ಚು. ದೇವರು ಶುದ್ಧಸ್ವರೂಪ. ‘ಅವಿಕಾರಾಯ ಶುದ್ಧಾಯ…..’

ಎಂದು ಕರೆಸಿಕೊಳ್ಳುವ ನಿತ್ಯಶುದ್ಧನಾದ ದೇವನಿಗೆಲ್ಲಿಯ ಮೈಲಿಗೆ? ಅವನ ಕೆಲಸ ಮಾಡಲು ಇಷ್ಟೊಂದು ಮಡಿಯ ಅಗತ್ಯವೇನು ಎನ್ನಿಸಬಹುದು.
ಇಂದು ಮಡಿಯಬಗ್ಗೆ ಇರುವ ಅಭಿಪ್ರಾಯಗಳೇನೇ ಇರಲಿ. ವಾಸ್ತವಿಕತೆ ಏನು? ಮಡಿಯನ್ನು ತಂದ ಪ್ರಾಚೀನರ ಆಶಯವಾದರೂ ಏನಿತ್ತು? ಎಂಬುದನ್ನು ನಾವೀಗ ಆಲೋಚಿಸಬೇಕಾಗಿದೆ.
ಶ್ರೀರಂಗಮಹಾಗುರುಗಳ ಅಭಿಪ್ರಾಯದಂತೆ ನಮ್ಮೊಳಗೇ ಬೆಳಗುವ ಭಗವಂತನನ್ನು ಮುಟ್ಟುವಂತಾಗುವ, ಅವನಲ್ಲಿಯೇ ಮುಳುಗುವಂತಾಗುವ ನಮ್ಮ ಸಹಜ ಸ್ಥಿತಿಗೇ ಮಡಿ ಎನ್ನುವುದು. ಮಡಿ ಎನ್ನುವುದು ನಮ್ಮಲ್ಲಿನ ಒಂದು ಧರ್ಮವಿಶೇಷ. ಸಹಜ ಸ್ಥಿತಿ. ಅಂತಹ ಧರ್ಮವೇರ್ಪಟ್ಟಾಗ ಭಗವಂತನ ದರ್ಶನಭಾಗ್ಯ ದೊರಕುವುದು. ಅದರಿಂದ ಅನಂತವಾದ ನೆಮ್ಮದಿ, ಸುಖವುಂಟಾಗುವುದು. ಎಂದಮೇಲೆ ಮಡಿ ಎಂದರೆ ಬರಿಯ ಆಚರಣೆಯಷ್ಟೇ ಅಲ್ಲ. ನಮ್ಮ ಸಹಜವಾದ ಸ್ಥಿತಿಯೇ ಅದಾಗಿದೆ ಎಂಬುದು ಒಳಮಡಿಯನ್ನು ಅನುಭವಿಸಿ ಆನಂದಿಸಿದ ಜ್ಞಾನಿಗಳ ಮಾತು. ಅಂತಹ ಮಡಿ ಎನ್ನುವ ಸ್ಥಿತಿಯಿಂದ ನಮ್ಮನ್ನು ದೂರ ತಳ್ಳುವ ಎಲ್ಲವೂ ಮೈಲಿಗೆಯೇ ಆಗುತ್ತದೆ.

ನಾವೀಗ ಶುದ್ಧಿ ಎನ್ನುತ್ತಿರುವುದು ಕೇವಲ ದ್ರವ್ಯಗಳ,ದೇಹದ ಹೊರಭಾಗದ ಶುದ್ದಿಯನ್ನು ಮಾತ್ರ. ಅಲ್ಲಿ ಋಷಿಗಳನೋಟದ ಸಮಗ್ರವಾದ ಶುದ್ಧಿಯಿಲ್ಲ. ಒಳ ಶುದ್ಧಿಯ ಅರಿವು ನಮಗಿಲ್ಲವಾಗಿದೆ. ಹೊರಗೆ, ಒಳಗೆ ಯಾವ ಬಗೆಯಲ್ಲಿ ಜೀವನವನ್ನಿಟ್ಟುಕೊಂಡರೆ ಒಳ ಹೊರ ಶುದ್ಧಿಯನ್ನು ಸಾಧಿಸಬಹುದು ಎಂಬುದಕ್ಕೆ ಅಂತಹ ಒಳ ಹೊರ ಜೀವನವನ್ನು ಕಂಡ ಮಹರ್ಷಿಗಳ ಮಾತೇ ಪ್ರಮಾಣ. ಮಾವಿನ ಹಣ್ಣಿನ ಹೊರಗೆ ಹುಳು ಇದ್ದರೆ ಸುಲಭವಾಗಿ ತೆಗೆದು, ತೊಳೆದು ಸೇವಿಸಬಹುದು. ಆದರೆ ಒಳಗೇ ಇದ್ದರೆ ಅದು ಸೇವಿಸುವುದಕ್ಕೆ ಯೋಗ್ಯವಾಗದು. ಅಂತಹ ಸರ್ವಾತ್ಮನಾ ಶುದ್ಧಿ, ನಾವೀಗ ಅಂದುಕೊಂಡಿರುವ ಮಡಿಯನ್ನು ಇಮ್ಮಡಿ, ನೂರ್ಮಡಿಯನ್ನಾಗಿಸುವುದು. ಅಂತಹ ಶುದ್ಧಿ ನಮ್ಮೊಳಗೆ ಬೆಳಗುವ ಭಗವಂತನನ್ನು ನೋಡಲು ಬೇಕಾದ ಮಡಿಯ ಸ್ಥಿತಿಯನ್ನು ನಮಗೆ ದೊರಕಿಸಿಕೊಡುತ್ತದೆ.
ವಿಷಯದ ಸ್ವರೂಪದ ಅರಿವಿದ್ದಾಗ ಆ ಸ್ವರೂಪವನ್ನು ಕಾಪಾಡಿಕೊಳ್ಳಲು ನಾವು ಮಾಡುವ ಆಚರಣೆಗಳೆಲ್ಲವೂ ಸಹಜವಾಗಿರುತ್ತವೆ. ಒಂದು ಕತ್ತಿಯ ಸ್ವರೂಪದ ಅರಿವಿದ್ದಾಗ, ಅದು ನಮ್ಮ ಕೈ ಕತ್ತರಿಸಬಾರದು ಎಂದು ಅದಕ್ಕೊಂದು ಮರದ ಹಿಡಿ ಮಾಡಿಕೊಳ್ಳುತ್ತೇವೆ. ಅದರ ಹರಿತವಾದ ಭಾಗವನ್ನು ಕತ್ತರಿಸಲು ಉಪಯೋಗಿಸುತ್ತೇವೆ. ಕತ್ತಿಯ ಸ್ವರೂಪಜ್ಞಾನವಿಲ್ಲದವರಿಗೆ ಅದರ  ಆಕಾರ ವಿಚಿತ್ರವಾಗಿ ಕಾಣಬಹುದು. ಹಣ್ಣು ತರಕಾರಿಗಳು ಕೆಡದಂತೆ ಇಡಲು Refrigerator ಬಳಸುತ್ತೇವೆ. ಹಣ್ಣು ತರಕಾರಿಗಳನ್ನು ಒಂದು ಪೆಟ್ಟಿಗೆಯಲ್ಲಿಡುವ ಔಚಿತ್ಯವಾದರೂ ಏನು? ಎಂದು Refrigerator ನ ಸ್ವರೂಪದ ಅರಿವಿಲ್ಲದವರು ಅಂದುಕೊಳ್ಳುವುದೂ ಸ್ವಾಭಾವಿಕವೇ.

ಅಂತೆಯೇ ನಮ್ಮ ಸನಾತನಾರ್ಯ ಮಹರ್ಷಿಗಳು ಅಂತಹ ಮಡಿಯಿಂದ ಭಗವಂತನಲ್ಲಿ ಮುಳುಗಿ ರಮಿಸಿದವರು. ಆ ಆನಂದ ಜೀವಲೋಕವೆಲ್ಲವೂ ಅನುಭವಿಸುವಂತಾಗಲಿ ಎಂಬುದು ಅವರ ಅಪಾರ ಕರುಣೆ. ತಮ್ಮ ಅಂತರಂಗದ ಆ ಮಡಿಗೆ ಜೀವಲೋಕವನ್ನು ಸೆಳೆಯಲು ಹೊರಗೂ ಅದಕ್ಕೆ ಅನುಕೂಲಕರವಾದ ವಸ್ತುಗಳು, ಸನ್ನಿವೇಶಗಳು ಯಾವುವು? ಪ್ರತಿಕೂಲವಾದದ್ದು ಯಾವುವು? ಎಂದೆಲ್ಲ  ತಮ್ಮ ತಪಸ್ಯೆಯಿಂದ, ವೈಜ್ಞಾನಿಕ ಸಂಶೋಧನೆಯಿಂದ ಅರಿತು ಆಚಾರಗಳೆಲ್ಲವನ್ನೂ ಹೊರತಂದಿದ್ದಾರೆ. ಹೊರಗೆ ಮಡಿಯ ಆಚರಣೆ ಒಂದು ಭಾಗವಾದರೆ ಒಳಗೆ ನಮ್ಮನ್ನು ನಾವು ಶುದ್ಧಿಗೊಳಿಸಲು, ಭಗವಂತನ ಸ್ಮರಣೆಯಿಂದ ಸ್ನಾನ, ಪುರುಷಸೂಕ್ತ ಹೇಳುತ್ತಾ ಅದರ ಅರ್ಥವನ್ನೂ ಭಾವಿಸುತ್ತಾ ಸ್ನಾನ. ಪೂಜೆಯ ಅಭಿಷೇಕದಲ್ಲಿ ಹೊರಮೂರ್ತಿಗೆ ಅಭಿಷೇಕ ಮಾಡುವಾಗ ಒಳ ಬೆಳಗುವ ಅವನ ಮೂರ್ತಿಯನ್ನು ನೆನೆದು ಅಭಿಷೇಕ, ತೀರ್ಥದಲ್ಲಿ ಅವನ  ಸಾನ್ನಿಧ್ಯವನ್ನು ಭಾವಿಸಿ ಒಳಗೆ ಸೇವಿಸುವುದು, ಸೃಷ್ಟಿಯೆಲ್ಲ ನಿನ್ನದೇ, ನೀನು ಕೊಟ್ಟ ಪದಾರ್ಥಗಳನ್ನೇ ನಿನಗೆ ನಿವೇದನೆ ಮಾಡಿ ಪ್ರಸಾದರೂಪವಾಗಿ ಸೇವಿಸುವ ಭಾವ ಇತ್ಯಾದಿ ಎಲ್ಲವೂ ನಮ್ಮ ಅಂತರಂಗವನ್ನು ಮಡಿ ಮಾಡುವ ವಿಧಾನಗಳಾಗಿವೆ. ಆದರೆ ಈ ಎಲ್ಲಾ ಆಚರಣೆಗಳೂ ನಮಗೆ ಒಳಮಡಿಯ ಧರ್ಮವನ್ನು ತಂದುಕೊಡುವುದಕ್ಕಾಗಿ ಎಂಬ ಅತಿ ಮುಖ್ಯವಾದ ಅಂಶವನ್ನು ಮನಸ್ಸಿನಿಂದ ಜಾರಿಸಿಕೊಂಡು ಬಿಟ್ಟೆವಾದರೆ ಎಲ್ಲವೂ ಬರಿಯ ಚೇಷ್ಟೆಯಲ್ಲಿ ನಿಲ್ಲುತ್ತದೆ.

ಮೈಸೂರಿಗೆ ಹೋಗುವ ಬಸ್ಸನ್ನು ಮೈಸೂರು ಎಂದು ಕರೆದಂತೆ ಮಡಿಯ ಸ್ಥಿತಿಯನ್ನು ದೊರಕಿಸಿಕೊಡುವ ಆಚರಣೆಗಳನ್ನೂ ಮಡಿ ಎಂದೇ ಕರೆಯುವುದೂ ಸಹಜವಾಗಿದೆ. ಮಡಿ ಮಾಡಿಕೊಳ್ಳಿ ಎಂದರೆ ಅಂತಹ ಮನೋಧರ್ಮವನ್ನುಂಟುಮಾಡುವ ಆಚರಣೆಗಳನ್ನಿಟ್ಟುಕೊಳ್ಳಿ ಎಂದೇ ವಿನಾ ಕೇವಲ ರೇಷ್ಮೆ ಮುಗುಟ ಉಟ್ಟುಕೊಳ್ಳುವುದು ಮಾತ್ರವಲ್ಲ ಎಂಬುದನ್ನು ನಾವು ನೆನಪಿಡಬೇಕು. ಅಂತಹ ಮಡಿಯ ಸ್ವರೂಪದ ಅರಿವಿಲ್ಲವಾದುದರಿಂದಲೇ ಮಡಿಯ ಆಚರಣೆಗಳ ಬಗ್ಗೆ ಕುತ್ಸಿತವಾದ ಮೇಲಿನ ಮಾತುಗಳೆಲ್ಲ ಬಂದಿವೆ.

ಭಗವಂತನನ್ನು ಮುಟ್ಟದ ಮುಗುಟವಾಗಲೀ, ರುದ್ರಾಕ್ಷಿಯಾಗಲೀ. ಜಲವಾಗಲೀ ಯಾವುದೂ ಮಡಿಯಲ್ಲ. ನಮ್ಮೊಳಗೆ ಬೆಳಗುತ್ತಿರುವ ಅವನ ದಿವ್ಯ ತೇಜಸ್ಸನ್ನು ನೋಡಿ ಅನುಭವಿಸಲು, ಆನಂದಿಸಲು ಅನುಗುಣವಾದ ನಮ್ಮ ಸ್ವರೂಪವೇ ಮಡಿ. ತದ್ವಿರುದ್ಧವಾದುದೆಲ್ಲವೂ ಮೈಲಿಗೆಯೇ ಆಗುತ್ತದೆ. ಅವನವನ ಅಂತಃಪ್ರಕಾಶದಲ್ಲಿ ಮುಳುಗಿರುವುದೇ ಮಡಿ. ಆ ಮನೋಧರ್ಮವಿಲ್ಲದಿದ್ದಾಗ ಎಲ್ಲವೂ ಕೊಳೆಯೇ ಆಗುತ್ತದೆ.
ಬೃಂದಾವನದಲ್ಲಿ ಗೋಪಿಕೆಯರೆಲ್ಲ ಮೈ ಕೈ ಸಗಣಿ ಮಾಡಿಕೊಂಡಿದ್ದರೂ ಕೃಷ್ಣನನ್ನು ಮುಟ್ಟುವ ಮನಸ್ಸಿನಿಂದಾಗಿ ಪೂರ್ಣವಾಗಿ ಮಡಿಯಾಗಿದ್ದರು.
ಪೂಜ್ಯರಾದ ಶಂಕರಭಗವತ್ಪಾದರ ಮಾತಿನಂತೆ-
ರಥ್ಯಾಕರ್ಪಟ ವಿರಚಿತ ಕಂಥಃ ಪುಣ್ಯಾsಪುಣ್ಯ ವಿವರ್ಜಿತ ಪಂಥಃ
ಯೋಗೀ ಯೋಗನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ||

ಎಂಬಂತೆ ಭಗವಂತನಲ್ಲೇ ಯೋಗವನ್ನು ಹೊಂದಿದ ಯೋಗಿವರೇಣ್ಯರು ಪುಣ್ಯ ಪಾಪಗಳನ್ನು ಮೀರಿನಿಂತವರು. ಹೊರಗಿನಿಂದ ಅವರ ಮೈಕೈ ಎಲ್ಲವೂ ಕೊಳೆಯಾಗಿ, ಬಾಲರಂತೆ ಉನ್ಮತ್ತರಂತೆ ಕಂಡರೂ ಅವರು ಅಂತಃಪ್ರಪಂಚದ ದಿವ್ಯತೇಜೋಧಾರೆಯಲ್ಲಿ ಆನಂದಿಸುತ್ತಿದ್ದಾರೆಂಬುದು ಯೋಗಿಹೃದಯವೇದ್ಯವಾದ ವಿಷಯ. ಹೊರಗಿನ ದೃಷ್ಟಿಯಿಂದಷ್ಟೇ ನೋಡಿದರೆ ಅವರು ಕೊಳಕಾಗಿ, ಮೈಲಿಗೆಯಾಗಿ,ಬಾಲಕರಂತೆ, ಹುಚ್ಚರಂತೆ  ಕಂಡರೂ ನಿಜವಾಗಿ ಮಡಿಯಲ್ಲಿರುವವರು ಅವರೇ ಎಂಬುದನ್ನು ನಾವು ಗಮನಿಸಬೇಕಾಗಿದೆ. ಅಂತಹ ಒಳಗಿನ ಮಡಿ ನಮಗೆ ಉಂಟಾದರೆ ಆಗ ಹೊರಗಿನ ಆಚರಣೆಗಳ ಅಗತ್ಯವಿಲ್ಲ.
ಹಾಗೆಂದು ಈಗ ನಾವು ಆಚರಿಸುತ್ತಿರುವುದನ್ನೆಲ್ಲ ಬಿಟ್ಟುಬಿಡಬೇಕೆಂದಲ್ಲ. ಅವೆಲ್ಲವೂ ಋಷಿಗಳು ವಿಜ್ಞಾನಯುತವಾಗಿ ತಂದ ಆಚರಣೆಗಳೇ. ಭಗವಂತನನ್ನು ಮುಟ್ಟಿಕೊಂಡು ಹೊರಬಂದವುಗಳೇ ಆಗಿದ್ದವು. ಅವುಗಳ ಹಿಂಬದಿಯ ನಿಜವಾದ ಮನೋಧರ್ಮ ಈಗ ಮರೆಯಾಗಿದೆ. ಆ ಮನೋಧರ್ಮವನ್ನು ಬೆಳೆಸಿಕೊಳ್ಳುತ್ತಾ ಆಚರಿಸಿದರೆ ಮುಂದೆ ಎಂದಾದರೊಮ್ಮೆ ನಿಜವಾದ “ಮಡಿ” ಅನುಭವಕ್ಕೆ ಬಂದೀತು. ಜ್ಞಾನಿಗಳ ಅಂತರಂಗದಲ್ಲಿ ಅನುಭವಕ್ಕೆ ಬರುವಂತಹ ಆ ಮಡಿ, ನಮ್ಮ ನಿರಂತರ ಸಾಧನೆಯಿಂದ, ಅಭ್ಯಾಸದಿಂದ ಮೆಲ್ಲಮೆಲ್ಲನೆ ನಮ್ಮಲ್ಲೂ ಬರಬೇಕಾಗಿದೆ.

ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಿದಾಕ್ಷಣ ಅದು ಸೇರಬೇಕಾದೆಡೆಗೆ ಸೇರಿಬಿಡುವುದಿಲ್ಲ. ಅದು ಅಂಚೆವ್ಯವಸ್ಥೆಯ ಮಜಲುಗಳನ್ನೆಲ್ಲ ಹಾದು ಕೈಸೇರಬೇಕಾದರೆ ಸಮಯ ತೆಗೆದುಕೊಳ್ಳುತ್ತದೆ. ಕಾಗದ ಹಾಕಿದ್ದೇನೆ ಎಂಬ ಶಬ್ದ ಹೇಳಿದರೂ ಅದು ತಲುಪಿದಮೇಲೇ ಆ ವಿಷಯ ಪೂರ್ಣವಾಗುವುದು. ಹಾಗೆಯೇ ನಮ್ಮ ಹೊರ ಆಚರಣೆಗಳಲ್ಲಿ ಮಡಿ ಮಾಡಿಕೊಳ್ಳುತ್ತಿದ್ದೇವೆ ಎಂದಾಕ್ಷಣ ಅದರ ಅನುಭವ ನಮಗಾಯಿತು ಎನ್ನುವಂತಿಲ್ಲ. ಈ ಆಚರಣೆಗಳು ನಮ್ಮ ನಮ್ಮ ಶರೀರ, ಮನೋಬುದ್ಧಿಗಳ ಸಂಬಂಧ ಎಷ್ಟು ಇಟ್ಟುಕೊಂಡಿವೆ ಎಂಬ ವಿಷಯ ಮುಖ್ಯವಾಗುತ್ತದೆ. ಈ ನಿಜವಾದ ಮಡಿಯ ಅರಿವನ್ನು ರೂಢಿಸಿಕೊಳ್ಳುತ್ತಾಬಂದರೆ ಮುಂದೆ ನಮ್ಮ ಪ್ರಕೃತಿಗೇ ಅಂತಹ ಯೋಗ್ಯತೆ ಬಂದಾಗ “ಮಡಿ” ಯನ್ನು ನಾವೂ ಅನುಭವಿಸಬಹುದಾಗಿದೆ. ಅಲ್ಲಿಯವರೆಗೂ ಇಂತಹ ಒಳಮಡಿಯ ಸ್ಥಿತಿಯನ್ನು ತಂದುಕೊಡುವುದಕ್ಕಾಗಿ ಬಂದಿರುವ ಲೋಕದ ವ್ಯವಹಾರವನ್ನು ರಕ್ಷಿಸಿಕೊಂಡುಬರುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂಬುದನ್ನು ನೆನಪಿಡಬೇಕು.

ನಿತ್ಯಶುದ್ಧನಾದ ಭಗವಂತನಿಗೆ ಎಂದಿಗೂ ಮೈಲಿಗೆಯಿಲ್ಲ ಎನ್ನುವ ಮಾತು ಸತ್ಯವೇ. ಆದರೆ ಪ್ರಕೃತಿಯೊಡನೆ ಬದುಕುತ್ತಿರುವ ನಮಗೆ ಮೈಲಿಗೆ ಬರುವುದು ಸ್ವಾಭಾವಿಕವೇ. ಒಂದು ಮೇಜನ್ನು ಒಂದು ದಿನ ಒರೆಸದಿದ್ದರೂ ಅದರಮೇಲೆ ಧೂಳು ನಿಲ್ಲುವುದು ನಿಸರ್ಗಸಹಜ. ಒಂದು ದಿನ ಸ್ನಾನಮಾಡದಿದ್ದರೂ ನಮ್ಮ ಶರೀರದಲ್ಲಿ ಬೆವರಿನ ವಾಸನೆಬರುತ್ತದೆ. ಅಂತೆಯೇ ನಮ್ಮನ್ನು ಆ ನಿತ್ಯಶುದ್ಧನ ಆರಾಧನೆಗೆ ಅಣಿಮಾಡಿಕೊಳ್ಳುವ ಭಾಗ ಇದ್ದೇಇದೆ. ಪಾಂಚಭೌತಿಕವಾದ ಎಲ್ಲವೂ ಶುದ್ಧಿಯನ್ನು ಬಯಸುತ್ತದೆ. ಭೂತಸ್ಥಾನವನ್ನು ಮೀರಿ ದೇವಸ್ಥಾನಕ್ಕೆ ಹತ್ತಿದೆವಾದರೆ ಅದೇ ಮಡಿ. ದೇವಭೂಮಿಯಲ್ಲಿ ಭೂತಸ್ಥಾನದ ನಿಯಮಗಳು ಅನ್ವಯವಾಗುವುದಿಲ್ಲ. ಆಗ ನಮಗೆ ಇಲ್ಲಿನಂತೆ ಮಡಿ ಮಾಡಿಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಭೂತಸ್ಥಾನದಲ್ಲಿ ನಾವು ಶುದ್ಧಿಯನ್ನು ಕಾಪಾಡಿಕೊಂಡೆವಾದರೆ ದೇವಸ್ಥಾನಕ್ಕೆ ಹತ್ತಲು ಯೋಗ್ಯರಾಗುತ್ತೇವೆ. ಇಲ್ಲಿ ಒದಗುವ ಮೈಲಿಗೆಯನ್ನು ನೀಗಿಕೊಂಡು ಮಡಿಯ ಸ್ಥಿತಿಯನ್ನು ಉಳಿಸಿಕೊಳ್ಳುವ ಉಪಾಯವೇ ಮಡಿಯ ಆಚರಣೆಯ ಹಿಂದಿರುವ ಆಶಯ.

ಸೂಚನೆ : 09/5/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.