ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಈಗಂತೂ ಚುನಾವಣೆ-ಫಲಿತಾಂಶಗಳದ್ದೇ ಮಾತು. ತಮಗಿಷ್ಟವಾದ ಪಕ್ಷಕ್ಕೆ ಗೆಲವು, ಅನ್ಯಪಕ್ಷಗಳಿಗೆ ಸೋಲುಗಳನ್ನು ಬಯಸುವವರೇ ಬಹಳ. ಮತಗಳ ಎಣಿಕೆಯಾಗುವಾಗ ಅದೆಷ್ಟು ಮಂದಿಗೆ ಆಗಾಗ್ಗೆ ಹಿಗ್ಗುವ ಕುಗ್ಗುವ ಸನ್ನಿವೇಶಗಳು! ಏತಕ್ಕಿವೆಲ್ಲಾ? ಸ್ವ-ಪಕ್ಷವೇ ಉಳಿಯಬೇಕೆಂಬ ಆತಂಕ! ಅದೇ ವರ್ಧಿಸಬೇಕು, ವ್ಯಾಪಿಸಬೇಕೆಂಬ ಹಂಬಲ!
ಸಮಾಜವಾದ, ಸಾಮ್ಯವಾದ - ಮುಂತಾದ ಆಧುನಿಕವಾದಗಳ ಕಥೆಯೇನು? ಬಾಯಲ್ಲಷ್ಟೆ ಉದಾತ್ತ-ತತ್ತ್ವಗಳನ್ನು ಉದ್ಗರಿಸುತ್ತಾ, ದೌಷ್ಟ್ಯ-ದೌರ್ಜನ್ಯಗಳನ್ನು ಎಣೆಯಿಲ್ಲದ ಪರಿಗಳಲ್ಲಿ ಮೆರೆಸಿರುವುದನ್ನು ಜಾರ್ಜ್ ಆರ್ವೆಲ್ ತನ್ನ ಕಾದಂಬರಿಗಳಲ್ಲಿ ನಿರುಪಮವಾಗಿ ನಿರೂಪಿಸಿರುವನಲ್ಲವೇ? ಹಿಟ್ಲರ್-ಸ್ಟಾಲಿನ್- ಮುಸ್ಸೋಲಿನಿಗಳ ದುರಹಂಕಾರ-ದುಶ್ಚರಿತಗಳ ಇತಿಹಾಸವೇ ಭಯಾನಕ-ಬೀಭತ್ಸಗಳನ್ನು ಲೋಚನಗಳ ಮುಂದೆ ರಾಚುತ್ತದೆ. ಈಚಿನ ಸ್ತ್ರೀವಾದ-ವೋಕಿಸಂಗಳ ಪ್ರಚಾರ-ಪ್ರಸಾರಗಳ ಜಾಡೂ ತೀರ ಭಿನ್ನವೇನಲ್ಲ. ಎಲ್ಲೆಡೆ ತಮ್ಮ ಸಿದ್ಧಾಂತವಷ್ಟೆ ಉಳಿಯಬೇಕೆಂಬ, ಉಳಿದವನ್ನು ಹೇಗಾದರೂ ನಿಗ್ರಹಿಸಬೇಕೆಂಬ, ಆಗ್ರಹವೇ.
ಮತ-ಸಿದ್ದಾಂತಗಳ ಬಗೆಯೂ ಹಾಗೆಯೇ ಅಲ್ಲವೇ? ಭಾರತದಲ್ಲಿ ಅನ್ಯಮತಗಳು ಹರಿಸಿರುವ ರಕ್ತದ ಕೋಡಿ ಹಾಗೂ ಅನವಶ್ಯವಾದ ಸಾವು-ನೋವುಗಳನ್ನು ಕುರಿತು ಜಗತ್ತಿನ ಅಪ್ರತಿಮ ಇತಿಹಾಸಕಾರರೆಂದು ಪ್ರಸಿದ್ಧರಾದ ಆರ್ನಾಳ್ಡ್ ಟಾಯ್ನ್ಬೀ ತಮ್ಮ ಉದ್ಗ್ರಂಥದಲ್ಲಿ ದಾಖಲಿಸಿ ಮಮ್ಮಲಮರುಗಿದ್ದಾರೆ.
ಹಿಂದೆಯೂ ನಮ್ಮಲ್ಲೂ ದ್ವೈತ-ಅದ್ವೈತ ಮುಂತಾದ ವಾದಗಳೋ, ಮತ್ತೂ ಹಿಂದೆ ವೈದಿಕ-ಅವೈದಿಕ-ನಿಲುವುಗಳಲ್ಲಿಯ ಪರಸ್ಪರ-ಪರಿಸ್ಪರ್ಧೆಗಳೋ ಇದ್ದವೇ; ತಮ್ಮ ಸಿದ್ಧಾಂತವೇ ಉಳಿಯಬೇಕೆಂಬ ಉತ್ಕಟೇಚ್ಛೆಯೂ ಪ್ರತಿಯೊಬ್ಬರಿಗೂ ಇದ್ದದ್ದೇ. ಆದರೂ, ಅತಿಮಾತ್ರ-ದ್ರೋಹಬುದ್ಧಿಗಳು ಅತ್ಯಪರೂಪವೆಂದೇ ಹೇಳಬೇಕು.
ಮನುಷ್ಯಕೃತ್ಯಗಳಿಗೆ ಮಾತ್ರ ಸೀಮಿತವಲ್ಲ, ಸ್ವ(ಮತ)-ವಿಸ್ತಾರ-ಪ್ರವೃತ್ತಿ. ತಾನು-ತನ್ನದುಗಳೇ ಉಳಿಯಬೇಕು-ಬೆಳೆಯಬೇಕು - ಎಂಬೀ ಸ್ವನಿಷ್ಠೆಯು ಸಮಸ್ತ-ಪ್ರಾಣಿಗಳಲ್ಲೂ ಉಂಟು!
ನಿಜವಾದ ಪ್ರೀತಿಯ ದರ್ಶನವಾಗಬೇಕೆ? ಹಾಗಿದ್ದರೆ ಪ್ರಾಣಿಗಳಿಗೆ ತಮ್ಮ ಮರಿಗಳ ಬಗೆಗಿರುವ ಕಾಳಜಿಯನ್ನೊಮ್ಮೆ ಕಾಣಿರಿ. ಪ್ರಾಣವನ್ನೇ ಪಣವಿಟ್ಟಾದರೂ ಕಂದಗಳನ್ನು ಕಾಪಾಡಿಕೊಳ್ಳುವ ಕಡು-ಶಪಥವಲ್ಲಿದೆ!
ಪ್ರಾಣಿಗಳಲ್ಲೇನು, ಗಿಡಮರಗಳಲ್ಲಿ ಸಹ ಇದುಂಟೇ ಸರಿ: ತಾನು ಬೆಳೆಯ/ಯುತ್ತಿರಬೇಕು – ಎಂಬ ದೃಢೇಚ್ಛೆ. ಬೀಜವೊಂದನ್ನು ನೆಟ್ಟರೆ ಫಲಬಿಡುವಾಗ ಹಣ್ಣಿನಲ್ಲಿ ಮತ್ತೆ ಬೀಜವು ತೋರುವುದಲ್ಲವೇ? ಮತ್ತೊಂದು ಸಸ್ಯವು ಅಂಕುರಿಸಲೆಂದು ತಾನೇ ಅದಿರುವುದು? ಅಲ್ಲೊಂದು ಸೂಕ್ಷ್ಮವೂ ಇದೆ. ಬೀಜವೊಂದನ್ನು ನೆಟ್ಟಾಗ ಬಿಡುವುದು ಒಂದೇ ಹಣ್ಣಲ್ಲ; ಒಂದು ಹಣ್ಣಿನಲ್ಲಿ ಒಂದೇ ಬೀಜವೆಂಬುದೂ ಸಾರ್ವತ್ರಿಕ ನಿಯಮವೇನಲ್ಲ: ಸೀತಾಫಲ-ಮಾದಳಗಳಿಗೆ ಬಹುಬೀಜ-ಬೀಜಪೂರಗಳೆಂದೇ ಹೆಸರುಂಟು. ಅವೆರಡರಲ್ಲಿ ಮಾತ್ರವೇ ಅನೇಕಬೀಜಗಳೆಂದೂ ಅಲ್ಲ. ಅಲ್ಲದೆ, ತರುಗಳ ಬೀಜ-ಪ್ರಸಾರದ ವೈಖರಿಗಳಾದರೂ ಒಂದೇ ಎರಡೇ?
ಹಾಗಾದರೆ ಒಂದು ಬೀಜದಿಂದ ಮತ್ತೆಷ್ಟು ಬೀಜಗಳು ಹುಟ್ಟಿಕೊಂಡವೆಂದಾಯಿತು? ಒಂದು ಮಾವಿನ ಬೀಜವನ್ನು ನೆಟ್ಟು ಪೋಷಿಸಿದಲ್ಲಿ ವರ್ಷವರ್ಷವೂ ಅದೆಷ್ಟು ಹಣ್ಣುಗಳು! ಅವಲ್ಲೊಂದೊಂದರಲ್ಲೂ ಮಾವಿನ ಬೀಜವಿದ್ದು ಅವೊಂದೊಂದರಿಂದಲೂ ಎಷ್ಟೆಷ್ಟು ಹಣ್ಣು/ಬೀಜಗಳಾದಾವು!
ಆನಂತ್ಯ-ಪ್ರವೃತ್ತಿಗೆ (infinity) ಇದಕ್ಕಿಂತಲೂ ಬೇರೊಂದುದಾಹರಣೆಯೆಂಬುದು ಬೇಕೇ?
ಅಲ್ಲಿಗೆ, ತನ್ನತನವು ತನ್ನೊಂದಿಗೆ ಮುಗಿಯಬಾರದೆಂಬ ಪ್ರವೃತ್ತಿಯು ಜೀವವಿರುವೆಡೆಯಲ್ಲೆಲ್ಲಾ ಇರುವುದೇ ಸುಲಕ್ಷಣವೆಂಬಂತಾಯಿತು. ವಾಸ್ತವವಾಗಿ, ಸೃಷ್ಟ್ಯಾರಂಭದಲ್ಲೇ ಈ ಪ್ರವೃತ್ತಿಯಿದೆ - ಎನ್ನುತ್ತದೆ, ಛಾಂದೋಗ್ಯೋಪನಿಷತ್ತು. ಸೃಷ್ಟಿಯ ಆರಂಭದಲ್ಲಿ ಇದ್ದದ್ದು ಒಂದೇ : ಪರಬ್ರಹ್ಮ. ಅದೇ ಸಂಕಲ್ಪಿಸಿತು, “ಬಹು ಸ್ಯಾಂ ಪ್ರಜಾಯೇಯೇತಿ” ಎಂದು: ನಾನು ಬಹುವಾಗಬೇಕು, (ಅದಕ್ಕಾಗಿ) ಪ್ರಜನಿಸಬೇಕು - ಎಂಬುದಾಗಿ.
ಜನಿಸುವುದೆಂದರೆ ಬೀಜವು ಕ್ಷೇತ್ರದಲ್ಲಿ ಬಿದ್ದು ಹುಟ್ಟಿಕೊಳ್ಳುವುದು; ಸ್ತ್ರೀ-ಪುರುಷ-ಸಂಯೋಗದಿಂದ ಜನ್ಮತಾಳುವುದು. ಪ್ರಜೋತ್ಪತ್ತಿ ಅಥವಾ ಪ್ರಜೆಗಳನ್ನು ಪಡೆಯುವುದೇ ಪ್ರಜನಿಸುವುದು: ಪ್ರಜೆ ಮತ್ತು ಪ್ರಜೆಯ ಪ್ರಜೆ - ಅರ್ಥಾತ್ ಸಂತಾನಗಳು ಮತ್ತವುಗಳ ಸಂತಾನಗಳು – ಹೀಗೆ ಬೆಳೆಯು(ತ್ತ ಹೋಗು)ವುದೇ ಅದು. ತಾನವೆಂದರೆ ವಿಸ್ತಾರ; ತನ್ನತನದ ತಾನವೇ ಇ(ಹದ)ಲ್ಲಿ ತೋರುವ ಅಮರತೆ: ತಾನು ಸತ್ತರೂ ತನ್ನತನ ಸತ್ತಂತಾಗಲಿಲ್ಲವಲ್ಲ!
ಸೃಷ್ಟಿಯ ಮೂಲದಲ್ಲಿರುವುದು ಬ್ರಹ್ಮ. ಬ್ರಹ್ಮವೆಂಬ ಪದಕ್ಕೇ ವೃದ್ಧಿಹೊಂದತಕ್ಕದ್ದು ಎಂಬ ಅರ್ಥವಿದೆ. ತಾನು ಬಹುವಾಗಿ ಬೆಳೆಯಬೇಕೆಂದು ಬಯಸಿಯೇ ಬ್ರಹ್ಮಬೀಜವು ವಿಶ್ವವೃಕ್ಷ-ರೂಪವನ್ನು ತಾಳುವುದು - ಎಂದೂ, ಅದಕ್ಕಾಗಿ ಆಗುವ ಸ್ವಯಂಭೂ-ಶತರೂಪೆಯರ ಯೋಗವೆಂಬುದು ಪುರುಷ-ಪ್ರಕೃತಿಯರ, ಪರ್ಯಾಯವಾಗಿ ಶುಕ್ಲ-ಶೋಣಿತಗಳ, ಯೋಗದ ಮೂಲರೂಪವೇ – ಎಂದೂ, ಶ್ರೀರಂಗಮಹಾಗುರುಗಳು ನಿರೂಪಿಸಿರುವರು.
ಹೀಗಾಗಿ, ತಾನಳಿಯಬಾರದು, ಉಳಿಯಬೇಕು, ಅನವರತವಾಗಿ ಬೆಳೆಯುತ್ತಿರಲೂ ಬೇಕು - ಎಂಬ ಹೆಬ್ಬಯಕೆ ಎಲ್ಲೆಡೆ ಹುದುಗಿರುವುದೇ.ಆದರೆ ಅಲ್ಲೂ ಧರ್ಮಾಧರ್ಮ-ಕ್ರಮಗಳೆಂಬುದುಂಟು.
ಅಸುರರು ಅಮರತ್ವವನ್ನು ಅಪೇಕ್ಷಿಸಿದುದು ಭೌತಿಕವಾಗಿಯೇ: ಸಶರೀರರಾಗಿಯೇ ಇರಬೇಕೆಂಬುದನ್ನು. ಎಂದೇ, ಈ ಅದಮ್ಯ-ಅಹಮ್ಮಿಗಾಗಿ ಅಧರ್ಮ-ಮಾರ್ಗಕ್ಕೇ ಅವರು ಅಂಟಿಕೊಳ್ಳುವಂತಾಯಿತು.
ಆದರೆ ಧರ್ಮಮಯವಾದ ಪ್ರವೃತ್ತಿಮಾರ್ಗವನ್ನು ಹಿಡಿದು, ನಿಜವಾದ ಮತ್ತು ಮಿಗಿಲಾದ ಅಭೌತಿಕ-ಅಮರತೆಯನ್ನು ಅರಸಿ ಸಾಧಿಸಿದವರು ಮಹಾಪುರುಷರು; ಅಂತಹರನೇಕರ ಸುಚರಿತಗಳು ಇತಿಹಾಸ-ಪುರಾಣಗಳಲ್ಲಿವೆ.
ಬೆಳೆಯಬೇಕೆಂಬ ಬಯಕೆಯು ಸೃಷ್ಟಿ-ಸಹಜವಾದದ್ದೇ; ಅದನ್ನು ತಪ್ಪೆನ್ನುವರಾರು? ಆದರೆ ಬೆಳೆಯುವ ಬಗೆಯು ಧರ್ಮಮಯವಾಗಿರತಕ್ಕದ್ದು.
ಸಾರವಾಗಿ, ಸೃಷ್ಟಿಯ ಮೂಲಾಶಯವನ್ನು ಗ್ರಹಿಸಬೇಕು, ಸ್ಥೂಲಾಕೃತಿಯನ್ನಲ್ಲ.
ಸೂಚನೆ: 09/5//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.