Sunday, May 17, 2026

ವ್ಯಾಸ ವೀಕ್ಷಿತ 188 ಯುಧಿಷ್ಠಿರನ ಹರ್ಷ; ಕೃಷ್ಣನ ನಿರ್ಗಮನ(Vyaasa Vikshita188)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಅಂತೂ ಜರಾಸಂಧ-ವಧೆಯಾಯಿತು, ಆತನ ಉತ್ತರಕ್ರಿಯೆಯೂ ಆಯಿತು. ಆತನ ಪುತ್ರನ ಪಟ್ಟಾಭಿಷೇಕವೂ ಆಯಿತು. ಸೆರೆಯಾಗಿದ್ದ ರಾಜರುಗಳ ಬಿಡುಗಡೆಯೂ ಆಯಿತು.

ಇತ್ತ, ಕೃಷ್ಣನೂ ಅರಸರು ಅರ್ಪಿಸಿದ ಮಹೈಶ್ವರ್ಯವನ್ನು ಹೊಂದಿದವನಾಗಿ, ಅವರಿತ್ತ ಭೂರಿ-ರತ್ನಗಳನ್ನು ತೆಗೆದುಕೊಂಡು, ಭೀಮಾರ್ಜುನರೊಂದಿಗೆ ಅಲ್ಲಿಂದ ಇಂದ್ರಪ್ರಸ್ಥಕ್ಕೆ ಬಂದವನೇ, ಧರ್ಮರಾಜನಲ್ಲಿಗೆ ಬಂದು ಸಂತೋಷದಿಂದ ನುಡಿದನು:

"ಯುಧಿಷ್ಠಿರಾ, ಭೀಮನು ಜರಾಸಂಧನನ್ನು ಸಂಹರಿಸಿದನು. ಇದು ನಮ್ಮ ಸೌಭಾಗ್ಯ. ಸೆರೆಯಾಗಿದ್ದ ರಾಜರುಗಳನ್ನೆಲ್ಲಾ ಬಿಡಿಸಿದ್ದಾಗಿದೆ. ಭೀಮಾರ್ಜುನರು ಕುಶಲಿಗಳಾಗಿಯೇ ಹಿಂದಿರುಗಿದ್ದಾರೆ. ಅವರಿಗೆ ಯಾವ ಕ್ಷತಿಯೂ, ಎಂದರೆ ಯಾವ ಧಕ್ಕೆ-ದುಃಖಗಳೂ, ಉಂಟಾಗಿಲ್ಲ" ಎಂದು.

ಈ ಮಾತಿಗೆ ಸಂತುಷ್ಟನಾದ ಯುಧಿಷ್ಠಿರನು  ಕೃಷ್ಣನನ್ನು ಯಥೋಚಿತವಾಗಿ ಸತ್ಕರಿಸಿದನು. ಹಾಗೂ ಪ್ರಹರ್ಷದಿಂದ ಭೀಮಾರ್ಜುನರನ್ನು ಆಲಿಂಗಿಸಿಕೊಂಡನು. ಜರಾಸಂಧ-ನಾಶ, ಹಾಗೂ ತನ್ನ ಭ್ರಾತೃಗಳು ಸಾಧಿಸಿದ ವಿಜಯ - ಇವುಗಳಿಂದಾಗಿ ಯುಧಿಷ್ಠಿರನಿಗೆ ಅಮಿತ ಸಂತೋಷವಾಯಿತು.  

ಕೃಷ್ಣನನ್ನು ಕುರಿತು ಹೀಗೆ ಹೇಳಿದನು: "ನರಶ್ರೇಷ್ಠನೇ, ಪ್ರತಾಪಶಾಲಿಯೂ ಮದೋನ್ಮತ್ತನೂ ಆದ ಜರಾಸಂಧನನ್ನು ಭೀಮನು ಬೀಳಿಸಲಾದುದು ನೀನು ಜೊತೆಗಿದ್ದೆಯಾದ್ದರಿಂದಲೇ. ಈಗ ಇದೋ ಶ್ರೇಷ್ಠ-ಯಜ್ಞವಾದ ರಾಜಸೂಯವನ್ನು ನಾನು ನಿಶ್ಚಿಂತನಾಗಿ ನೆರವೇರಿಸಬಲ್ಲೆ. ನಿನ್ನ ಬುದ್ಧಿ-ಬಲದಿಂದಾಗಿಯೇ ನನಗೆ ಯಾಗವನ್ನು ಮಾಡಲು ಅರ್ಹತೆಯೆಂಬುದು ಬಂದಿರುವುದು. ಜರಾಸಂಧನೊಡನೆ ಮಾಡಿದ ಈ ಯುದ್ಧದಿಂದಾಗಿ, ಭೂಮಿಯ ಮೇಲೆಲ್ಲ ನಿನ್ನ ಕೀರ್ತಿಯು ವ್ಯಾಪಿಸಿರುವುದು. ಜರಾಸಂಧ-ವಧದಿಂದಾಗಿ ವಿಪುಲವಾದ ಸಂಪತ್ತನ್ನೂ ಗಳಿಸಿದಂತಾಯಿತು."

ಹೀಗೆ ಹೇಳಿದ ಯುಧಿಷ್ಠಿರನು ಪ್ರಭುವಾದ ಶ್ರೀಕೃಷ್ಣನಿಗೆ ಶ್ರೇಷ್ಠವಾದ ರಥವೊಂದನ್ನಿತ್ತನು. ಅದರೊಳಗೆ ಅರ್ಜುನನೊಂದಿಗೆ ಕುಳಿತ ಜನಾರ್ದನನೂ ಯುಧಿಷ್ಠಿರನ ವಿಷಯದಲ್ಲಿ ಬಹುಸಂತುಷ್ಟನೇ ಆದನು.

ಆ ಬಳಿಕ ತನ್ನ ಸಹೋದರರೊಂದಿಗೆ ಯುಧಿಷ್ಠಿರನು ಹೊರಟು, ಎಲ್ಲ ರಾಜರನ್ನೂ ಯಥೋಚಿತವಾಗಿ ಸತ್ಕರಿಸಿ, ಅವರೆಲ್ಲರನ್ನೂ ಬೀಳ್ಕೊಟ್ಟನು. ಬಹುಸಂತೋಷಗೊಂಡ ಆ ರಾಜರುಗಳೂ, ಯುಧಿಷ್ಠಿರನ ಅಪ್ಪಣೆಯನ್ನು ಪಡೆದು, ತಮ್ಮ ತಮ್ಮ ವಾಹನಗಳಲ್ಲಿ ಕುಳಿತು ತಮ್ಮ ತಮ್ಮ ದೇಶಗಳಿಗೆ ಹೊರಟುಬಂದರು.

ನರಶ್ರೇಷ್ಠನೂ ಮಹಾಬುದ್ದಿಶಾಲಿಯೂ ಆದ ಕೃಷ್ಣನು ಹೀಗೆ ಜರಾಸಂಧ-ವಧೆಯನ್ನು ಸಾಧಿಸಿದನಷ್ಟೆ. ಕಾರ್ಯವು ಸಿದ್ಧಿಸಿರಲು, ಇನ್ನೀಗ ಹೊರಟುನಿಂತನು. ಯುಧಿಷ್ಠಿರನನ್ನೇ ಮುಂದಿಟ್ಟುಕೊಂಡು ಆ ಪಾಂಡವರೆಲ್ಲರೂ ಅಕ್ಲಿಷ್ಟ-ಕಾರಿಯಾದ ಕೃಷ್ಣನಿಗೆ ಪ್ರದಕ್ಷಿಣೆ ಮಾಡಿದರು. ಯಾವುದೇ ಕಾರ್ಯವನ್ನು ಅನಾಯಾಸವಾಗಿ, ಎಂದರೆ ಕ್ಲೇಶವಿಲ್ಲದೆ ಮಾಡುವಂತಹವನಿಗೆ ಅಕ್ಲಿಷ್ಟ-ಕಾರಿಯೆನ್ನುವರು.

ಯುಧಿಷ್ಠಿರ ಹಾಗೂ ದ್ರೌಪದಿ ಇವರುಗಳ ಆಜ್ಞೆಯನ್ನು ಕೃಷ್ಣನು ಪಡೆದನು. ಹಾಗೆಯೇ ಸುಭದ್ರೆ, ಭೀಮಸೇನ, ಅರ್ಜುನ, ಯಮಳರಾದ (ಎಂದರೆ ಅವಳಿ-ಜವಳಿಗಳಾದ) ನಕುಲ-ಸಹದೇವರು, ಹಾಗೂ ಧೌಮ್ಯ - ಇವರೆಲ್ಲರ ಅನುಮತಿಯನ್ನು ಪಡೆದು, ಸ್ವ-ನಗರಿಗೆ ಹೊರಟನು.

ಅದಕ್ಕಾಗಿ ಆತನು ಬಳಸಿದ ರಥವು ಆಗಷ್ಟೆ ಯುಧಿಷ್ಠಿರನು ಆತನಿಗೆ ಕೊಟ್ಟುದಾಗಿತ್ತು. ಅದು ಮನೋವೇಗದಲ್ಲಿ ಸಂಚರಿಸುವ ರಥ! ತನ್ನ ದಿವ್ಯನಾದದಿಂದ ದಿಕ್ಕುಗಳಲ್ಲೆಲ್ಲ ಪ್ರತಿಧ್ವನಿಯನ್ನು ಉಂಟುಮಾಡುವಂತಹುದು!

ದೇವಕೀಪುತ್ರನಾದ ಕೃಷ್ಣನು ಹೊರಟುಬರಲು, ದೊಡ್ಡ ಜಯವನ್ನು ಸಾಧಿಸಿದಂತಾಗಿದ್ದ ಯುಧಿಷ್ಠಿರನು, ಅಲ್ಲಿ ನೆರೆದಿದ್ದ ರಾಜರಿಗೆಲ್ಲ ಅಭಯವನ್ನಿತ್ತನು.

ಆ ಕಾರ್ಯದಿಂದಾಗಿ ಆತನ ಕೀರ್ತಿಯು ಮತ್ತೂ ಹೆಚ್ಚಿತು. ಪಾಂಡವರು ದ್ರೌಪದಿಗೂ ಪರಮ-ಸಂತೋಷವನ್ನೇ ತಂದುಕೊಟ್ಟಂತಾಯಿತು. ಹಾಗೂ ಆ ಕಾಲಕ್ಕೆ ಹೇಗೆ ಯುಕ್ತವೋ, ಎಂದರೆ ಧರ್ಮ-ಕಾಮ-ಅರ್ಥಗಳ ಸಂಪಾದನೆಗೆ ಯಾವುದು ಯೋಗ್ಯವೋ, ಅಂತಹ ಪ್ರಜಾಪಾಲನ-ಕಾರ್ಯವನ್ನು ರಾಜಾ ಯುಧಿಷ್ಠಿರನು ಧರ್ಮಾನುಸಾರವಾಗಿ ನೆರವೇರಿಸಿದನು.

ಸೂಚನೆ : 17/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.