Monday, May 25, 2026

ಪಾಂಡವರ ದಿಗ್ವಿಜಯ-ಸಂಕಲ್ಪ:ವ್ಯಾಸಾಶೀರ್ವಾದ

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಕೃಷ್ಣ-ಭೀಮಾರ್ಜುನರು ಜರಾಸಂಧವಧಾನಂತರ ಹಿಂತಿರುಗಿಬಂದರಷ್ಟೆ. ಅತ್ತ ಕೃಷ್ಣನೂ ಹೊರಟಮೇಲೆ ಪಾಂಡವರಲ್ಲೇ ಮಾತುಕತೆಗಳಾದವು.

ಶ್ರೇಷ್ಠವಾದ ಧನುಸ್ಸನ್ನೂ ಅಕ್ಷಯವಾದ ಬತ್ತಳಿಕೆಗಳನ್ನೂ ದಿವ್ಯವೆನಿಸುವ ರಥ-ಧ್ವಜಗಳನ್ನೂ ಅದ್ಭುತವಾದ ಸಭೆಯನ್ನೂ ಪಡೆದವನಾಗಿದ್ದ ಅರ್ಜುನನು ಯುಧಿಷ್ಠಿರನನ್ನು ಕುರಿತು ಹೀಗೆ ಹೇಳಿದನು: "ರಾಜನೇ ಬಹಳ ವಿಶೇಷವಾದ ಧನುಸ್ಸು, ಅಸ್ತ್ರ, ಬಾಣ, ಪರಾಕ್ರಮ, ಕೃಷ್ಣನಂತಹ ಜೊತೆಗಾರ, ರಾಜ್ಯ ಹಾಗೂ ಇಂದ್ರಪ್ರಸ್ಥಭೂಮಿ, ಯಶಸ್ಸು ಹಾಗೂ ಸೈನ್ಯ - ಹೀಗೆ ನನಗೆ ಏನೇನು ಬಹಳವಾಗಿ ಅಪೇಕ್ಷೆಯಾಗಿತ್ತೋ ಹಾಗೂ ಪಡೆಯಲು ಸುಲಭವಲ್ಲವೋ ಅದೆಲ್ಲವೂ ಈಗ ದೊರೆತಿದೆ.

ನಮ್ಮ ಈಗಿನ ಕರ್ತವ್ಯವೆಂದರೆ ಕೋಶದ ಪರಿವರ್ಧನೆಯೆಂಬುದೇ ನನ್ನ ಅಭಿಪ್ರಾಯ. ಆದ್ದರಿಂದ ರಾಜರೆಲ್ಲರೂ ಕರವನ್ನೊಪ್ಪಿಸುವಂತೆ ಮಾಡಿಬಿಡುವೆ. ಅದಕ್ಕಾಗಿ ನಾನು ಮೊದಲು ಕುಬೇರ-ಪಾಲಿತವಾದ ದಿಕ್ಕಿಗೆ (ಎಂದರೆ ಉತ್ತರಕ್ಕೆ) ಹೊರಡಲಿರುವೆ. ಅದಕ್ಕಾಗಿ ಅಭಿಪೂಜಿತವಾದ ತಿಥಿ-ಮುಹೂರ್ತಗಳಲ್ಲಿ ಹಾಗೂ ಅಭಿಪೂಜಿತವಾದ ನಕ್ಷತ್ರದಲ್ಲಿ ಹೊರಡುವೆ.”

ಇದನ್ನು ಕೇಳಿ ಧರ್ಮರಾಜನು ಸಂತುಷ್ಟನಾದನು. ತಮ್ಮಂದಿರು, ಮಂತ್ರಿಗಳು – ಇವರೊಂದಿಗೆ, ವ್ಯಾಸರನ್ನೂ ಧೌಮ್ಯರನ್ನೂ ಕಾಣಲು ಹೊರಟನು. ಆಗ ಮಹಾ-ಬುದ್ಧಿಶಾಲಿಗಳಾದ ವ್ಯಾಸರು ಅರ್ಜುನನನ್ನು ಕುರಿತು ಹೀಗೆ ಹೇಳಿದರು:

"ಭೇಷ್, ಅರ್ಜುನ, ಭೇಷ್. ನಿನಗೆ ಇಂತಹ ಬುದ್ಧಿ ಬಂದುದೇ ಶ್ಲಾಘ್ಯ. ಏಕೆಂದರೆ ಅಖಂಡ-ಭೂಮಂಡಲವನ್ನೇ ನೀನು ಜಯಿಸಲು ಸಂಕಲ್ಪಿಸಿರುವೆ. ಪಾಂಡು ಮಹಾರಾಜನೇ ಧನ್ಯ. ಏಕೆಂದರೆ ಆತನ ಪುತ್ರನಾದ ನೀನು ಇಂತಹವನಾಗಿರುವೆ! ಯುಧಿಷ್ಠಿರನು ಎಲ್ಲವನ್ನೂ ಹೊಂದತಕ್ಕವನೇ ಸರಿ! ನಿನ್ನ ವೀರ್ಯದಿಂದಾಗಿ ಆ ಧರ್ಮಾತ್ಮನು ಸಾರ್ವಭೌಮ-ಪದವಿಯನ್ನು ಹೊಂದಲಿರುವನು. ನಿನ್ನ ಬಾಹುಬಲವನ್ನು ಆಶ್ರಯಿಸಿ ಆತನು ರಾಜಸೂಯವನ್ನು ನೆರವೇರಿಸುವನು. ಶ್ರೀಕೃಷ್ಣನ ಸು-ನಯ ಅಥವಾ ಒಳ್ಳೆಯ ನೀತಿ, ಭೀಮ-ಅರ್ಜುನರ ಬಲ, ಹಾಗೂ ಯಮಳರಿಬ್ಬರ (ನಕುಲ-ಸಹದೇವರ) ವೀರ್ಯ - ಇವುಗಳಿಂದಾಗಿ ಧರ್ಮರಾಜನು ಎಲ್ಲವನ್ನೂ ಹೊಂದುವನು.

ಆದ್ದರಿಂದ, ಅರ್ಜುನನೇ, ದೇವತೆಗಳು ಕಾಪಾಡಿರುವ ಉತ್ತರ ದಿಕ್ಕಿಗೆ ನೀನು ಹೊರಡು, ಫಾಲ್ಗುನ! ನೀನು ದೇವತೆಗಳನ್ನೂ ಜಯಿಸಿ ಬಲಪ್ರಯೋಗದಿಂದ ರತ್ನಗಳನ್ನು ತರಲು ಸಮರ್ಥನೇ ಸರಿ.

ಬಲವನ್ನು ಮೆಚ್ಚುವ ಭೀಮಸೇನನು ಪೂರ್ವದಿಕ್ಕಿಗೆ ಹೋಗಲಿ: ಮಹಾರಥನಾದ ಸಹದೇವನು ಯಮನ ದಿಕ್ಕಿಗೆ, ಎಂದರೆ ದಕ್ಷಿಣಕ್ಕೆ ಹೋಗಲಿ. ವರುಣರಕ್ಷಿತವಾದ ಪಶ್ಚಿಮಕ್ಕೆ ನಕುಲನು ಹೋಗಲಿ. ನನ್ನ ಬುದ್ಧಿ ಹೀಗೆ ನಿಶ್ಚಯಿಸಿದೆ. ಭರತವಂಶದ ಶ್ರೇಷ್ಠರಾದ ಪಾಂಡವರೇ, ಇದನ್ನು ಕಾರ್ಯಗತಗೊಳಿಸಿರಿ."

ವ್ಯಾಸರ ಈ ಮಾತುಗಳನ್ನು ಕೇಳಿ ಪಾಂಡವರು ಸಂತೋಷಗೊಂಡರು. ಹಾಗೆಯೇ ಆಗಲಿ - ಎಂದು ಅವರಿಗೆ ಹೇಳಿದರು.

ಅರ್ಜುನನು ಮೊದಲಾಡಿದ ಮಾತಿಗೆ ಯುಧಿಷ್ಠಿರನು ಪ್ರತಿಭಾಷಣವನ್ನು ಮಾಡಿದನು. ಆತನ ಮಾತು ಸ್ನಿಗ್ಧವೂ ಗಂಭೀರವೂ ಆಗಿತ್ತು. "ಅರ್ಜುನನೇ, ಸ್ವಸ್ತಿವಾಚನ ಮಾಡತಕ್ಕ ಬ್ರಾಹ್ಮಣರಲ್ಲಿಗೆ ಮೊದಲು ಹೋಗು. ನಿನ್ನ ಜೈತ್ರ-ಯಾತ್ರೆಯೆಂಬುದು ನಮ್ಮ ಬಗ್ಗೆ ದ್ವೇಷವಿರತಕ್ಕವರಿಗೆ ಶೋಕವನ್ನೂ, ನಮ್ಮ ಮಿತ್ರರಿಗೆ ಸಂತೋಷವನ್ನೂ ಉಂಟುಮಾಡಲಿ. ಪಾರ್ಥನೇ, ನಿನಗೆ ವಿಜಯವೆಂಬುದು ಸಿದ್ಧವೇ ಸರಿ. ನಿನಗೆ ಅಭೀಷ್ಟವಾದದ್ದನ್ನು ಪಡೆದೇ ಪಡೆಯುತ್ತೀಯೇ."

ಈ ಮಾತುಗಳನ್ನು ಕೇಳಿದ ಬಳಿಕ, ದೊಡ್ಡ ಸೈನ್ಯದೊಂದಿಗೆ ಅರ್ಜುನನು ಹೊರಟನು. ಆತನ ರಥವು ಅದ್ಭುತವಾದ ಕರ್ಮವನ್ನು ಮಾಡುವುದಾಗಿತ್ತು. ಎಷ್ಟಾದರೂ ಅದು ಅಗ್ನಿದತ್ತವಾದುದಲ್ಲವೇ?

ಅವನು ಮಾತ್ರವಲ್ಲದೆ, ಧರ್ಮರಾಜನಿಂದ ಸಂಮಾನಿತರಾದ ಭೀಮನೂ, ನಕುಲ-ಸಹದೇವರೂ ಸೈನ್ಯಸಮೇತರಾಗಿ ಹೊರಟುಬಂದರು.  

ಸೂಚನೆ : 24/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ