Sunday, August 2, 2026

ಧರ್ಮ- ಶಾಸ್ತ್ರ (Dharma - Shastra)


   
ಲೇಖಕರು: ಎಂ. ಆರ್. ಭಾಷ್ಯಮ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-08-02 133835.png

ಸಾಮಾನ್ಯವಾಗಿ  ‘ಧರ್ಮ’ ವೆಂದರೆ ಹಿಂದೂಧರ್ಮ, ಮುಸಲ್ಮಾನಧರ್ಮ, ಕ್ರಿಸ್ತಧರ್ಮ ಎಂದು ಒಂದು ಮತಕ್ಕೆ ಅಥವಾ ಕೋಮಿಗೆ ಪರ್ಯಾಯಪದವಾಗಿ ಉಪಯೋಗಿಸುತ್ತಾರೆ. ಆದರೆ ಆರ್ಯ ಭಾರತಮಹರ್ಷಿಗಳು ಇದನ್ನು ಬೇರೆಯಾಗಿಯೇ ಅರ್ಥೈಸಿದ್ದರು.  ಉದಾಹರಣೆಗೆ ‘ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ,’  ‘ಜಗತಃ ಸ್ಥಿತಿಕಾರಣಂ ಧರ್ಮಃ’;  ವಿಶ್ವವೆಲ್ಲವೂ ಧರ್ಮದಲ್ಲಿ ನೆಲೆಗೊಂಡಿದೆ;  ಜಗತ್ತಿನ ಇರುವಿಕೆಗೆ  ಧರ್ಮವೇ ಕಾರಣ; ಅಂದರೆ ಧರ್ಮ ಒಂದು ಮತಕ್ಕೆ ಅಥವಾ ಕೋಮಿಗೆ ಸಂಭಂದಿಸಿದ್ದಲ್ಲ.  

ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ  ನೆಟ್ಟು ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ  ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆ,  ಬೀಜದಲ್ಲಿ ಅಡಗಿದೆ. ಆದರೆ ಬೀಜ ಮೊಳಕೆ ಒಡೆಯಬೇಕಾದರೆ ಅದರಮೇಲಿನ ‘ಮೇಲ್ಪದರ - ಕವಚ’ ಇರಬೇಕು. ಇಲ್ಲದಿದ್ದರೆ ಅದು ಮೊಳಕೆಯೊಡೆಯುವುದಿಲ್ಲ. ಉದಾಹರಣೆಗೆ ಭತ್ತದಮೇಲಿನ ಹೊಟ್ಟುಇಲ್ಲದಿದ್ದರೆ ಭತ್ತ ಮೊಳಕೆ ಒಡೆಯುವುದಲ್ಲ. ಈ ಮೇಲಿನ ಕವಚ (ಹೊಟ್ಟು) ಬೀಜದ ವಿಕಾಸವನ್ನು ಅಸ್ತಿತ್ವದಲ್ಲಿರಿಸಿ ಉಳಿಸುತ್ತದೆ. ಆದ್ದರಿಂದ ಈ  ಕವಚ ಮತ್ತು ಅದರ ಈ ಗುಣವನ್ನು  ‘ಧರ್ಮ’ ವೆಂದು ಕರೆಯುತ್ತಾರೆ. 

‘ಧರ್ಮ’ ವೆಂಬ ಪದದ ವ್ಯುತ್ಪತ್ತಿ   ‘ಧೃ’ ಎಂಬ ಧಾತುವಿನಿಂದ. ‘ಧೃ’ ಎಂದರೆ ‘ಧರಿಸುವುದು’  ಅಥವಾ ‘ಅಸ್ತಿತ್ವದಲ್ಲಿರಿಸುವುದು’. ಮೇಲಿನ ಬೀಜ- ಗಿಡದ ಉದಾಹರಣೆಯಲ್ಲಿ ಮೇಲಿನ ಕವಚ ಧರ್ಮ. ಜೊತೆಗೆ, ಇನ್ನೂವಿಕಾಸವಾಗದ ಬೀಜದ  ಸ್ಥಿತಿಗೆ ‘ಋತ’  ವೆಂದೂ, ವಿಕಸಿತ ಗಿಡದ ಸ್ಥಿತೆಗೆ ‘ಸತ್ಯ’ ವೆಂದೂ  ಕರೆಯುತ್ತಾರೆ. ಅಂದರೆ  ಯಾವುದು ಈ ‘ಋತ- ಸತ್ಯಚಕ್ರ’ಗಳ  ಸಂಯೋಜನೆಯನ್ನು ಮತ್ತು   ಆವರ್ತವನ್ನು ಧರಿಸಿ-ಉಳಿಸುತ್ತದೆಯೋ ಅದು ಧರ್ಮ.  ಈ ಸಂಯೋಜನೆಗೆ ವಿರುದ್ಧವಾಗಿ, ಆವರ್ತವನ್ನು ಕೆಡಿಸುವ ನಡೆಯುಂಟಾದರೆ ಅದು ಧರ್ಮಕ್ಕೆ ವಿರುದ್ಧ, ಅಧರ್ಮ. ಋತ-ಸತ್ಯಚಕ್ರವನ್ನು  ಕಾಪಾಡಿ ಉಳಿಸಿದರೆ, ಆಗ ಈ ವ್ಯವಸ್ಥೆ ಶುದ್ಧರೂಪದಲ್ಲಿ ಉಳಿದು, ನಿರಂತರವಾಗಿ ಮುಂದುವರೆಯುತ್ತದೆ. 

ನೋಡುವುದು ಕಣ್ಣಿನಧರ್ಮ. ಆ ನೋಟ ಕೆಟ್ಟರೆ ಕಣ್ಣು ತನ್ನ ‘ಧರ್ಮ’ದಲ್ಲಿ ಉಳಿದಿರುವುದಿಲ್ಲ. ಕೆಡಿಸುವುದು ಯಾವುದೇ ಆಗಿದ್ದರೂ ಅದು ‘ಅಧರ್ಮ’. ಇದನ್ನು ಮಾನವನ ಜೀವನಕ್ಕೆ ಅನ್ವಯಿಸಬಹುದು. ಭಾರತೀಯರ ಜೀವನದ ಉದ್ದೇಶ ಇಹಲೋಕದ ಸಮೃದ್ಧಿ, ಪರಲೋಕದ ಪ್ರಾಪ್ತಿ. ಹೇಗೆ ಜೀವನವನ್ನು ಅಳವಡಿಸಿ ನಡೆಸಿದರೆ ಇವೆರೆಡೂ ದೊರೆಯೆತ್ತದೆಯೋ ಅದೇ ಸರಿಯಾದ ಜೀವನ, ಧಾರ್ಮಿಕ ಜೀವನ. ಅದೇ ಅವರ ಧರ್ಮ. ಶ್ರೀರಂಗಮಹಾಗುರುಗಳು ಮಾನವನ  ಜೀವನಕ್ಕೆ ಅನ್ವಯಿಸುವಂತೆ  ಉಲ್ಲೇಖಿಸುತ್ತಿದ್ದವಾಕ್ಯ  ‘ ಯತೋ ಅಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ - ಯಾವುದು ಇಹಲೋಕದ  ಶ್ರೇಯಸ್ಸಿಗೆ ಮತ್ತು ಪರಲೋಕದ ಸಿದ್ಧಿಗೆ ಕಾರಣವಾಗುತ್ತದೋ ಅದೇ ಧರ್ಮ’

ಇನ್ನು ಶಾಸ್ತ್ರ. ಶಾಸ್ತ್ರ ವೆಂದರೆ ಪ್ರಕೃತಿಯ ಶಾಸನ, ಅಂದರೆ ಮಾಡು - ಬೇಡಗಳು. ಯಾವದನ್ನು ಮಾಡಿದರೆ (ಅಥವಾ ಮಾಡದಿದ್ದರೆ) ಧರ್ಮ ಉಳಿಯುತ್ತದೆಯೋ, ಅದೇ ಶಾಸ್ತ್ರ. ‘ಕಣ್ಣಿನ ತಂಪಿಗೆ ಹರಳೆಣ್ಣೆಯನ್ನು ಹಾಕು,’ ಒಂದು ವಿಧಿ, ಮಾಡಿದರೆ ಧರ್ಮ. ಬದಲು ಮೆಣಸಿನ ಪುಡಿ ನಿಷಿಧ್ಧ, ಬಳಸಿದರೆ ಕಣ್ಣಿನ ‘ಧರ್ಮ’  ಹಾಳು. ಇದೊಂದು ಸರಳ  ಉದಾಹರಣೆ. ಆದರೆ ಮಾನವನ ಜೀವನದಲ್ಲಿ  ಇಹಲೋಕದ  ಶ್ರೇಯಸ್ಸು  ಮತ್ತು ಪರಲೋಕದ ಸಿದ್ಧಿ ಎರಡೂ ದೊರೆಯುವಂತೆ ಮಾಡುವ ಜೀವನದ ನಡೆವಳಿಕೆಯ ಅರಿವು ಬಹಳ ಕಷ್ಟ. ಆದ್ದರಿಂದ  ಋಷಿ-ಮುನಿಗಳು ತಮ್ಮ ತಪಸ್ಸಿನಿಂದ ಅದನ್ನು ಅರಿತು ಸಾಮಾನ್ಯ ಜನತೆಯ ಉಪಯೋಗಕ್ಕೆ ‘ಧರ್ಮಶಾಸ್ತ್ರ’ ಗ್ರಂಥಗಳನ್ನು ರಚಿಸಿದರು. ಈ ಗ್ರಂಥಗಳು ಮಾಡು-ಬೇಡಗಳ ಪಟ್ಟಿ - ನಕಾಶೆಗಳು. ಪಾಲಿಸಿದರೆ ಇಹಲೋಕದ ಸೌಖ್ಯ, ಪರಲೋಕದ ಪ್ರಾಪ್ತಿ. ಇಲ್ಲದಿದ್ದರೆ ಎರಡೂ ಇಲ್ಲ.

ಸೂಚನೆ : 01/07/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.