ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
.
ಜನರೆಲ್ಲರನ್ನೂ ಈ ಪರಿಯಲ್ಲಿ ತೃಪ್ತಿಗೊಳಿಸಿದನು, ಧರ್ಮರಾಜ. ಅವರ ಅಪೇಕ್ಷೆಗಳೆಲ್ಲವೂ ಪೂರೈಕೆಗೊಂಡವು. ಅಲ್ಲಿ ನೆರೆದಿದ್ದ ಜನರು ಬಹ್ವನ್ನ-ಬಹುಭಕ್ಷ್ಯಗಳನ್ನು ಸೇವಿಸಿದರು. ಆ ವಿಸ್ತಾರವಾದ ಯಜ್ಞದಿಂದಾಗಿ ದೇವತೆಗಳಿಗೂ ತೃಪ್ತಿಯಾಯಿತು. ಇಡಾ, ಆಜ್ಯಹೋಮ, ಆಹುತಿಗಳೆಂದು ಕರೆಸಿಕೊಳ್ಳುವ ಹೋಮಗಳಿಂದ ನೆರವೇರಿತು, ಆ ಯಜ್ಞ. ಮಂತ್ರಶಿಕ್ಷೆಯಲ್ಲಿ ವಿಶಾರದರಾದ ಮಹರ್ಷಿಗಳು ಮಾಡಿದ ಯಜ್ಞವು ದೇವತೆಗಳಿಗೆ ತೃಪ್ತಿಕರವಾಯಿತು.
ದೇವತೆಗಳಂತೆಯೇ ವಿಪ್ರರೂ ತೃಪ್ತಿಗೊಂಡರು. ಸರ್ವವರ್ಣಗಳವರೂ ಆ ಯಜ್ಞವನ್ನು ಕಂಡು ಸಂತೋಷದಿಂದ ಪಾಲ್ಗೊಂಡು ತೃಪ್ತಿಪಟ್ಟರು.
ಯಜ್ಞವು ಹೀಗೆ ಸಂಪನ್ನವಾಗುತ್ತಿದ್ದಂತೆ ಅಭಿಷೇಚನೀಯ-ದಿನವು ಬಂದಿತು. ಅಭಿಷೇಚನೀಯವೆಂಬುದು ರಾಜಸೂಯದ ಒಂದು ಅಂಗ. ಅದರಲ್ಲಿ ಪೂರ್ಜಾರ್ಹರಿಗೆ ಪೂಜೆಯು ಸಲ್ಲುವುದು; ರಾಜಸೂಯದ ಯಜಮಾನನಿಗೆ ಅಭಿಷೇಕವು ನೆರವೇರುವುದು.
ಸತ್ಕಾರಕ್ಕೆ ಅರ್ಹರಾದ ಮಹರ್ಷಿಗಳು ಯಜ್ಞಭವನದ ಅಂತರ್ವೇದಿಯೆಂಬ ಸ್ಥಾನಕ್ಕೆ ಆಗಮಿಸಿದರು. ಅಲ್ಲಿ ನೆರೆದಿದ್ದ ರಾಜರ್ಷಿಗಳ ಜೊತೆಯಲ್ಲಿ ಆಸೀನರಾಗಿದ್ದ ನಾರದರೇ ಮೊದಲಾದ ಮಹರ್ಷಿಗಳೂ ಶೋಭಿಸಿದರು.
ಬ್ರಹ್ಮಭವನದಲ್ಲಿ ಬಂದು ಸೇರಿದ್ದ ದೇವತೆಗಳು ಹಾಗೂ ದೇವರ್ಷಿಗಳ ಹಾಗಿದ್ದ ವಿಪ್ರವರರು ನಾನಾಕರ್ಮೋಪಾಸಕರಾಗಿದ್ದು ಜಲ್ಪವನ್ನು ಮಾಡಿದರು. ಜಲ್ಪವೆಂದರೆ ವಾದ-ವಿವಾದಗಳು. ’ಇದು ಹೀಗೆ’ ಎಂದು ಕೆಲವರೆಂದರೆ, ’ಇದು ಹೀಗಲ್ಲ’ ಎನ್ನುವವರು ಕೆಲವರು. "ಇದು ಹೀಗೆಯೇ, ಮತ್ತೆಂತೂ ಅಲ್ಲ" ಎಂಬುದಾಗಿ ಮತ್ತೆ ಕೆಲವರ ವಾದ. ಹೀಗೆ ವಿತಂಡಾವಾದವನ್ನು ಮಾಡುವವರೂ ಕೆಲವರಿದ್ದರು. ದುರ್ಬಲಪಕ್ಷವನ್ನು ಪುಷ್ಟೀಕರಿಸುವವರು ಕೆಲವರು; ಸಬಲಪಕ್ಷವನ್ನು ದುರ್ಬಲವನ್ನಾಗಿಸುವವರು ಮತ್ತೆ ಕೆಲವರು; ಮತ್ತೆ ಕೆಲ ಮೇಧಾವಿಗಳು ಮತ್ತೊಬ್ಬರು ಹೇಳಿದ ಪ್ರಮೇಯವನ್ನು ಖಂಡತುಂಡವಾಗಿಸಿದರು. ಅದು ಹೇಗಿತ್ತೆಂದರೆ ಆಕಾಶದಲ್ಲಿರುವ ಆಮಿಷವನ್ನು ಗಿಡುಗಗಳು ಕಿತ್ತಾಡುವ ಹಾಗೆ. ಅವರಲ್ಲಿ ಕೆಲವರು ಧರ್ಮಾರ್ಥಕುಶಲರು. ಕೆಲವರು ಮಹಾವ್ರತಪರಿಪಾಲಕರು. ಕೆಲವರು ಶ್ರೇಷ್ಠವಿದ್ವಾಂಸರು: ಎಲ್ಲ ಭಾಷ್ಯಗಳನ್ನೂ ಬಲ್ಲವರು; ಅವುಗಳಲ್ಲಿಯ ತತ್ತ್ವಗಳನ್ನು ಪರಸ್ಪರ ಹೇಳಿಕೊಳ್ಳುತ್ತಾ ಸಂತೋಷಪಡುತ್ತಿದ್ದರು, ಅವರು. ವೇದ-ಸಂಪನ್ನರಾದ ದೇವರ್ಷಿ-ಬ್ರಹ್ಮರ್ಷಿ-ಮಹರ್ಷಿಗಳಿಂದ ತುಂಬಿದ ಆ ವೇದಿಯು, ಎಂದರೆ ಯಜ್ಞವೇದಿಕೆಯು, ಹೇಗಿತ್ತೆಂದರೆ ವಿಶಾಲವಾದ ಆಕಾಶವು ನಕ್ಷತ್ರಗಳಿಂದ ಕಿಕ್ಕಿರಿದಿದ್ದು ಕಂಗೊಳಿಸುವಂತೆ.
ಆ ಸಭೆಯಲ್ಲಿ ವ್ರತಹೀನನಾದ ದ್ವಿಜನೊಬ್ಬನೂ ಇರಲಿಲ್ಲ. ಲಕ್ಷ್ಮೀಸಂಪನ್ನನಾದ ಧೀಮಂತ ಯುಧಿಷ್ಠಿರನ ಯಜ್ಞ-ವಿಧಾನದ ಲಕ್ಷ್ಮಿಯನ್ನು, ಎಂದರೆ ಸೊಬಗನ್ನು, ಕಾಣುತ್ತಾ ನಾರದಮುನಿಗಳು ಸಂತೋಷಗೊಂಡರು.
ಆದರೆ ಇದರ ಜೊತೆಗೇ ಚಿಂತೆಯಾಯಿತು ನಾರದ-ಮುನಿಗಳಿಗೆ, ಅಲ್ಲಿದ್ದ ಎಲ್ಲ ಕ್ಷತ್ರಿಯರ ಸಂಗಮವನ್ನು ಕಂಡು. ಏಕೆ? ಅವರಿಗೆ ಹಳೆಯ ವಿಷಯವೊಂದರ ಸ್ಮರಣೆಯಾಯಿತು. ಬ್ರಹ್ಮಲೋಕದಲ್ಲೊಂದು ಚರ್ಚೆಯಾಗಿತ್ತಲ್ಲವೇ? ಭಗವಂತನು ತನ್ನ ಅಂಶಗಳಾದ ದೇವತೆಗಳೊಂದಿಗೆ ಅವತರಿಸಿಬರುವುದೆಂಬುದರ ಬಗ್ಗೆ? ಆ ಚಿಂತೆ.
ಇಲ್ಲಿ ನೆರೆದಿದ್ದ ರಾಜರುಗಳ ಸಮೂಹ ವನ್ನು ಕಂಡರಿತು ನಾರದರು ಮನಸ್ಸಿನಲ್ಲಿ ಪುಂಡರೀಕಾಕ್ಷನಾದ ಹರಿಯನ್ನು ನೆನೆಸಿಕೊಂಡರು. ಅವರ ಮನಸ್ಸಿನಲ್ಲಿ ಆ ಭಾವವು ಉದಯಿಸಿತು: “ಆಹಾ, ದೇವಶತ್ರುಗಳಾದ ಅಸುರರ ವಿನಾಶಕನಾದ ಭಗವಾನ್ ನಾರಾಯಣನು ತನ್ನ ಪ್ರತಿಜ್ಞೆಯನ್ನು ಪೂರೈಸುವವನಾಗಿಯೇ ಕ್ಷತ್ರಿಯಕುಲದಲ್ಲಿ ಈಗ ಜನಿಸಿದ್ದಾನೆ. ಹಿಂದೆ ಆತನೇ ದೇವತೆಗಳಿಗೆ ತನ್ನ ಆದೇಶವನ್ನಿತ್ತಿದ್ದನು: ಪರಸ್ಪರ ಸಂಹಾರ-ಕಾರ್ಯವನ್ನು ಮಾಡಿ ಮತ್ತೆ ದೇವಲೋಕಕ್ಕೆ ಹಿಂದಿರುಗಿ - ಎಂಬುದಾಗಿ. ಅಂಧಕವಂಶ-ವೃಷ್ಣಿವಂಶಗಳಲ್ಲಿ ಈತನೇ ಮಹಾಕಾಂತಿಯಿಂದ ಕಂಗೊಳಿಸುತ್ತಿರುವವನು - ನಕ್ಷತ್ರಗಳ ನಡುವೆ ಉಡುರಾಜನು, ಎಂದರೆ ಚಂದ್ರನು, ಹೇಗೆ ಶೋಭಿಸುವನೋ ಹಾಗೆ.
ಸೂಚನೆ : 9///2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.