ಲೇಖಕರು: ಡಾ. ರಾಮಮೂರ್ತಿ ಟಿ.ವಿ.
(ಪ್ರತಿಕ್ರಿಯಿಸಿರಿ lekhana@ayvm.in)
ಇಂದು ಭಕ್ತಿಯೆನ್ನುವುದು ನಮ್ಮ ಕೀಳರಿಮೆ, ದಾಸ್ಯದ ಮನೋಭಾವದಿಂದ ಬಂದಿರುವುದು, ಅದು ನಿರಾಶಾವಾದ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆಯೆಂದು ಹೇಳುವ ಪ್ರಸಿದ್ಧ ವ್ಯಕ್ತಿಗಳು ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಇಲ್ಲದಿಲ್ಲ. ಜೀವನವನ್ನು ಸಕಾರಾತ್ಮಕ, ಜವಾಬ್ದಾರಿಯುತ ರೀತಿಯಲ್ಲಿ ನಡೆಸಲು ಭಕ್ತಿ, ಪ್ರಾರ್ಥನೆಗಳು ಗಮನಾರ್ಹವಾದ ಬೆಂಬಲವನ್ನು ಕೊಡುತ್ತವೆಯೆಂದು ಆಧುನಿಕ ವೈದ್ಯಕೀಯ ಮತ್ತು ನರವೈದ್ಯಶಾಸ್ತ್ರವು ಅದರ ವ್ಯಾಪ್ತಿಯಮಿತಿಯ ಲ್ಲಿ ಬರುವ ಸಂಶೋಧನೆಗಳಿಂದ ಪುಷ್ಟಿಕರಿಸುತ್ತವೆ.ಹಾಗಾದರೆ, ಭಕ್ತಿಯೆಂದರೇನು? ಭಕ್ತಿ ಎನ್ನುವ ಪದ ಭಜ್ — ಸೇವಾಯಾಮ್ ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಪರಮಮಾತ್ಮನ ಮೇಲಿನ ಪ್ರೀತಿ, ಸೇವೆ, ಸಮರ್ಪಣೆ ಎಂಬ ಅರ್ಥದಲ್ಲಿ ಪ್ರಸಿದ್ಧವಾಗಿದೆ. ಶಾಂಡಿಲ್ಯ ಭಕ್ತಿ ಸೂತ್ರವು "ಸಾ ಪರಾ ಅನುರಕ್ತಿರೀಶ್ವರೇ" ಈಶ್ವರನ ಮೇಲಿರುವ ಪರಮ, ಅವಿಚ್ಛಿನ್ನ ಮತ್ತು ಅನನ್ಯ ಪ್ರೀತಿಯೇ ಭಕ್ತಿ.ಎಂದು ಹೇಳುತ್ತದೆ. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು " ಭಕ್ತಿಯ ಮೂಲಕವೇ ನಾನು ಯಾರು, ನನ್ನ ನಿಜಸ್ವರೂಪವೇನು ಎಂಬುದನ್ನು ಯಥಾರ್ಥವಾಗಿ ತಿಳಿಯಲು ಸಾಧ್ಯವಾಗುತ್ತದೆ. ಹೀಗೆ ನನ್ನನ್ನು ತತ್ತ್ವತಃ ಅರಿತ ಬಳಿಕ, ಭಕ್ತನು ನನ್ನನ್ನು ಹೊಂದಿ ನನ್ನ ದಿವ್ಯಸಾನ್ನಿಧ್ಯವನ್ನು ಪಡೆಯುತ್ತಾನೆ." ಎಂದು ಘೋಷಿಸುತ್ತಾನೆ. ಆದಿ ಶಂಕರರೂ ಅದ್ವೈತ ವೇದಾಂತದಲ್ಲಿ ಭಕ್ತಿ ಮತ್ತು ಜ್ಞಾನವು ಪರಸ್ಪರ ವಿರೋಧತತ್ವಗಳಲ್ಲ , ಪೂರಕವಾದ ವಿಷಯಗಳು ; ಆತ್ಮಜ್ಞಾನದತ್ತ ಕೊಂಡೊಯ್ಯುವ ವಿಧಾನಗಳಲ್ಲಿ ಭಕ್ತಿಯೇ ಶ್ರೇಷ್ಟವೆಂಬುದಾಗಿ ಸ್ಪಷ್ಟಪಡಿಸುತ್ತಾರೆ. ಭಾಗವತಪುರಾಣವು, ಪರಮಾತ್ಮನ ದಿವ್ಯ ಲೀಲೆಗಳನ್ನು ಕೇಳದ ಕಿವಿಗಳು ಕೇವಲ ರಂಧ್ರಗಳಂತಿವೆ. ಭಗವಂತನ ಕೀರ್ತನೆಯನ್ನು ಹಾಡದ ನಾಲಿಗೆಯು ಕಪ್ಪೆಯ ನಾಲಿಗೆಯಂತೆ ವ್ಯರ್ಥವೆನ್ನುತ್ತದೆ.
ಗುರುವೆಂಬ ಪ್ರತಿನಿಧಿಯು ತನ್ನೊಳಗೆ (ಪರಮಾತ್ಮನೆಂಬ) ನಿಧಿಯನ್ನಿಟ್ಟುಕೊಂಡು ಭಗವದಾಶಯವನ್ನು ಜಾರಿಮಾಡುತ್ತಾನೆ. ಹನುಮಂತನು ಸೀತೆಗೆ ಶ್ರೀರಾಮಚಂದ್ರನ ಸಂದೇಶ ಮತ್ತು ಮುದ್ರಿಕೆಯನ್ನು ನೀಡಿ, ಸೀತಾದೇವಿಗೆ ಭರವಸೆಯನ್ನು ಕೊಟ್ಟು ದುಃಖದಿಂದ ಪಾರುಮಾಡಿದಂತೆ, ಪ್ರತಿಯೊಬ್ಬ ಗುರುವೂ ಭವಬಂಧನದಲ್ಲಿರುವ ಜೀವಾತ್ಮನನ್ನು ಪರಮಾತ್ಮನಿಗೆ ಸೇರಿಸುವ ಜವಾಬ್ದಾರಿಯನ್ನು ಹೊತ್ತುತ್ತಾನೆ-ಎಂಬ ದಾರ್ಶನಿಕ ಭಾವವನ್ನು ವೈಷ್ಣವಸಂತರು, ರಾಮಾಯಣದ ಸುಂದರಖಾಂಡದ ಹಿನ್ನೆಲಿಯಲ್ಲಿ ಅಭಿಪ್ರಾಯಪಡುತ್ತಾರೆ. . “ಸತ್ಯವನ್ನು ನೇರವಾಗಿ ಸಾಕ್ಷಾತ್ಕರಿಸಿಕೊಂಡು, ಇತರರಿಗೂ ಸತ್ಯದರ್ಶನ ಮಾಡಿಸಿಕೊಡುವ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ." ಎಂಬುದಾಗಿಯೂ , ಆಧ್ಯಾತ್ಮಿಕ ಮಾರ್ಗಕ್ಕೆ ಗುರುವಿನ ಅಗತ್ಯತೆ, ಶಿಷ್ಯನಿಗಿರಬೇಕಾದ ವಿನಯ, ಶರಣಾಗತಿ, ವಿವೇಕಯುಕ್ತವಾದ ಪ್ರಶ್ನೆಗಳನ್ನು ಕೇಳುವ ಜಿಜ್ಞಾಸೆ ಮತ್ತು ಗುರುಸೇವಾಸಕ್ತಿಗಳನ್ನು ಗೀತಾಚಾರ್ಯನು ಒತ್ತಿಹೇಳುತ್ತಾನೆ. ಭಕ್ತಿಯನ್ನು ಪರಮಾತ್ಮನಲ್ಲೇ ಇಡಬಹುದಲ್ಲ, ಗುರುಭಕ್ತಿಯೇಕೆ? ನಾವು ಪರಮಾತ್ಮನನ್ನು ಕಾಣೆವು, ಎಷ್ಟೋ ಜನ್ಮಗಳಿಂದ ಮರೆತುಬಿಟ್ಟಿದೇವೆ. ಪರಮಾತ್ಮನಿಗೂ ನಮಗೂ ಸೇತುವೆ,ಸಂಬಂಧ ಬೆಳೆಸಲು ಗುರು ಅನುಗ್ರಹಿಸುತ್ತಾನೆ. ಸಂಪುಟವು ಬೆಲೆಬಾಳುವ ವಜ್ರಾಭರಣವನ್ನು ತನ್ನ ಒಳಗಿಟ್ಟುಕೊಂಡು ಕಾಪಾಡುವಂತೆ, ಗುರುವು ಭಗವಂತನನ್ನು ಅಪಾದಮೌಳಿ ತನ್ನೊಳಗೆ ತುಂಬಿಕೊಂಡಿರುತ್ತಾನೆ. ಫ್ರಿಡ್ಜ್-ನಲ್ಲಿ ಪದಾರ್ಥಗಳು ಕೆಡದಂತಿಡುತ್ತಾರೆ. ಗುರು ಎನ್ನುವ ಫ್ರಿಡ್ಜ್ ಕೆಟ್ಟಿರುವ, ದೈವವನ್ನು ಮರೆತೇಹೋಗಿರುವ ಶಿಷ್ಯರನ್ನು ತನ್ನ ಮಡಿಲಿನಲ್ಲಿ ಹಾಕಿಕೊಂಡು ಕೆಡದಂತೆ ಕಾಪಾಡುತ್ತಾನೆ. ಶಿಷ್ಯನು ಕೇವಲ ಗುರೂಪದೇಶದಂತೆ ನಡೆದುಕೊಳ್ಳುವುದಷ್ಟೇ ಕೆಲಸ. ಯೋಗ ಮಾರ್ಗ ಕತ್ತಿಯ ಅರಗಿನಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಈ ಅಪಾಯಗಳಿಂದಲೂ ಗುರುವು ರಕ್ಷಿಸುತ್ತಾನೆ. ಭಕ್ತರು ಗುರುವಿಗೂ, ಶ್ರೀಹರಿಗೂ ವ್ಯತ್ಯಾಸವನ್ನು ಕಾಣುವುದಿಲ್ಲವೆನ್ನುತ್ತಾರೆ. -ಆದ್ದರಿಂದ, ಗುರುವಲ್ಲಿಡುವ ಪ್ರೀತಿಯು ಪರಮಾತ್ಮನಲ್ಲಿಡುವ ಪ್ರೀತಿಗೆ ಸಮನಾಗುತ್ತೆ.
ಗುರುಭಕ್ತಿಸಾರುವದರಲ್ಲಿ ಮಹಾಭಾರತದ ಧೌಮ್ಯ ಮಹರ್ಷಿ ಮತ್ತು ಆರುಣಿಯ ಕಥಾ ಪ್ರಸಂಗ ಉಲ್ಲೇಖಾರ್ಹ. ಆರುಣಿಯು ತನ್ನ ಗುರುಗಳ ಮೇಲೆ ಭಕ್ತಿ, ವಿಧೇಯತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವುಳ್ಳವನು. ಒಮ್ಮೆ ಧೌಮ್ಯಮಹರ್ಷಿಗಳ ಹೊಲದ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಧೌಮ್ಯರು ಆರುಣಿಯನ್ನು ಕರೆದು ಅದನ್ನು ಸರಿಪಡಿಸಲು ಆದೇಶಿಸಿದರು. ಆರುಣಿಯು ತಕ್ಷಣ ಗದ್ದೆಗೆ ಧಾವಿಸಿ ಕಲ್ಲು, ಮಣ್ಣು, ಮರದ ಕೊಂಬೆಗಳನ್ನು ಹಾಕಿ ಕಟ್ಟೆಯನ್ನು ಮುಚ್ಚಲು ಬಹಳ ಪ್ರಯತ್ನಿಸಿದ. ನೀರಿನ ಪ್ರವಾಹವು ತೀವ್ರವಾಗಿದ್ದರಿಂದ, ಎಲ್ಲವೂ ಕೊಚ್ಚಿಹೋಗುತ್ತಿತ್ತು ಮತ್ತು ಅವನು ಮತ್ತೆ ಮತ್ತೆ ಪ್ರಯತ್ನಿಸಿದರೂ ಕಟ್ಟೆಯನ್ನು ಮುಚ್ಚಲಾಗಲಿಲ್ಲ. ಬೇರೆ ದಾರಿ ಕಾಣದೇ , ಗುರ್ವಾಜ್ಞೆಯನ್ನು ನೆನೆಸಿಕೊಂಡು, ತನ್ನ ದೇಹವನ್ನೇ ಒಡೆದ ಕಟ್ಟೆಗೆ ಅಡ್ಡವಾಗಿಟ್ಟುಕೊಂಡು ಮಲಗಿದನು. ಹಾಗಾಗಿ, ನೀರು ಹೊರಹೋಗಲಾರದೆ ಹೊಲದಲ್ಲಿಯೇ ಉಳಿಯಿತು. ಆರುಣಿಯು ಚಳಿ, ಹಸಿವು ಮತ್ತು ಆಯಾಸವನ್ನೂ ಗಮನಿಸದೆ ಮಲಗಿದ್ದನು. ಬಹಳ ಹೊತ್ತಾದರೂ ಆರುಣಿಯ ಹಿಂದಿರುಗಲಿಲ್ಲವಾದ್ದರಿಂದ ಧೌಮ್ಯರಿಗೆ ಕಳವಳವಾಗಿ , ಉಳಿದ ಶಿಷ್ಯರೊಡನೆ ಹೊಲದ ಕಡೆಗೆ ಹೊರಟರು. ಆರುಣಿಗಾಗಿ ಕೂಗಿದರು. ಹೊಲದಿಂದ ಆರುಣಿಯು ಗುರುದೇವರನ್ನು ಕರೆದು, ಕಟ್ಟೆಯನ್ನು ಸರಿಪಡಿಸಲಾಗದೇ ತನ್ನ ದೇಹವನ್ನು ನೀರಿಗೆ ಅಡ್ಡವಾಗಿಟ್ಟುಕೊಂಡು ಮಲಗಿದ್ದೇನೆಂದು ತಿಳಿಸಿದ. ಅದನ್ನು ನೋಡಿದ ಧೌಮ್ಯ ಮಹರ್ಷಿಗಳು ಗುರುಭಕ್ತಿ, ಗುರುಸೇವಾ ತತ್ಪರನಾದ ಆರುಣಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿ ಆನಂದಭಾಷ್ಪ ಸುರಿಸಿದರು. ಗುರುಗಳ ಆಶೀರ್ವಾದದಿಂದ ಮುಂದೆ ಅರುಣಿಯು ಮಹಾಜ್ಞಾನಿಯಾಗಿ, ಉದ್ದಾಲಕ ಅರುಣಿಯೆಂದು ಖ್ಯಾತ ಋಷಿಯಾದನು. ಈ ಕಥಾಸಾರದ ಇಂಗಿತವನ್ನು ಅರ್ಥಮಾಡಿಕೊಳ್ಳುತ್ತಾ, “ಬೆಂಕಿಕಡ್ಡಿಯು ಮದ್ದನ್ನಿಟ್ಟುಕೊಂಡಿರುವುದರಿಂದ ಅದಕ್ಕೆ ಮಹಿಮೆ. ಬರೀ ಕಡ್ಡಿಗಳಿಗಲ್ಲ. ಗುರು ಎನ್ನುವುದು ವ್ಯಕ್ತಿಗಲ್ಲ, ಶಕ್ತಿಗೆ. ಆ ಮಹಿಮೆ ವ್ಯಕ್ತವಾಗಲು ಸೇರುವೆ ಬೇಕು. ಗುರು-ಶಿಷ್ಯ-ಭಗವಂತ ಇವುಗಳ ಯೋಗ ನಡೆದರೆ ಆ ಮಹಿಮೆಯು ಅರಿವಾಗುತ್ತದೆ.” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ನೆನೆಯೋಣ.ಸೂಚನೆ : 22/08/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.