Thursday, April 1, 2021

ಪಾತಿವ್ರತ್ಯದ ಮಹತ್ವ (Pativratyada Mahatva)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಕೌಶಿಕನೆಂಬ ಬ್ರಾಹ್ಮಣ ತಪಸ್ಸನ್ನಾಚರಿಸಿ ಕೆಲವು ಸಿದ್ಧಿಗಳನ್ನು ಪಡೆದಿರುತ್ತಾನೆ. ಒಮ್ಮೆ ಅವನ ಮೇಲೆ ಮಲ ವಿಸರ್ಜಿಸಿದ ಪಕ್ಷಿಯನ್ನು ಕೋಪದಿಂದ ದಿಟ್ಟಿಸಿ ನೋಡಿದಾಗ ಪಕ್ಷಿ ಸುಟ್ಟು ಹೋಗಲಾಗಿ ಅವನಿಗೆ ಎಂತಹ ಸಿದ್ಧಪುರುಷ ನಾನು ಎಂಬ ಹೆಮ್ಮೆ ಉಂಟಾಗುತ್ತದೆ. ನಂತರ ಅವನು ಪತಿವ್ರತೆಯೊಬ್ಬಳ ಮನೆಗೆ ಭಿಕ್ಷೆಗೆ ಹೋದಾಗ ಅದೇ ಸಮಯದಲ್ಲಿ ಅವಳ ಪತಿಯೂ ಹೊರಗಡೆಯಿಂದ ಮನೆಗೆ ಬರುತ್ತಾನೆ, ಅನಾರೋಗ್ಯದಿಂದ ಕಷ್ಟದಲ್ಲಿದ್ದ ಪತಿಯನ್ನು ಮೊದಲು ಉಪಚರಿಸಿ ನಂತರ ಭಿಕ್ಷೆ ತೆಗೆದುಕೊಂಡು ಬರುತ್ತಾಳೆ. ಬ್ರಾಹ್ಮಣನು ತಪಸ್ವಿಯಾದ ನನ್ನನ್ನು ಕಾಯಿಸಿ, ಪತಿಯ ಉಪಚಾರಕ್ಕೆ ಹೋಗುವುದೇ ಎಂದು ಕೋಪದಿಂದ ಆಕೆಯನ್ನು ದಿಟ್ಟಿಸಿ ನೋಡಿದಾಗ ನಾನು ನಿನ್ನ ಕಣ್ಣಿನ ಅಗ್ನಿಯಿಂದ ಸುಡಲ್ಪಡುವ ಪಕ್ಷಿಯಲ್ಲ ಎನ್ನುತ್ತಾಳೆ. ಆಗ ಬ್ರಾಹ್ಮಣನು ಆಶ್ಚರ್ಯದಿಂದ ಆ ಘಟನೆ ಹೇಗೆ ತಿಳಿಯಿತು ಎಂದಾಗ ತನ್ನ ತಪೋಬಲದಿಂದ ಎನ್ನುತ್ತಾಳೆ, ಪತಿವ್ರತಾಧರ್ಮವನ್ನು ಚೆನ್ನಾಗಿ ಪಾಲನೆ ಮಾಡಿದ್ದರ ಪರಿಣಾಮ ಅವಳು ಸಹಜವಾಗಿಯೇ ಯೋಗದೃಷ್ಟಿಯನ್ನು ಹೊಂದಿರುತ್ತಾಳೆ. ಬಾಲ್ಯದಲ್ಲಿ ತಂದೆ-ತಾಯಿಗಳ ಆಶ್ರಯದಲ್ಲಿ ಬೆಳೆದ ಹೆಣ್ಣಿಗೆ ವಿವಾಹದ ನಂತರ ಪತಿಯೇ ಆಶ್ರಯ, ಲತೆಯು ವೃಕ್ಷದ ಅವಲಂಬನೆಯನ್ನು ಪಡೆದು ಸ್ಥಿರವಾಗಿರುವಂತೆ ಪತ್ನಿಗೆ ಪತಿಯ ಆಶ್ರಯ ನಿಸರ್ಗಸಹಜ. ಅಂತಹ ಆಶ್ರಯದಾತನಾದ ಪತಿಯ ಸುಖ-ದುಃಖಗಳಲ್ಲಿ ಬೆಂಗಾವಲಾಗಿ ನಿಲ್ಲಬೇಕಾದುದು ಪತ್ನಿಯ ಧರ್ಮ ಎಂಬುದು ಭಾರತೀಯ ಸಂಸ್ಕೃತಿ. ವಿಶ್ವವನ್ನೆಲ್ಲಾ ಸಲಹುವ ಪರಮಾತ್ಮನನ್ನು ತನ್ನ ಪತಿಯಲ್ಲಿಯೇ ಕಂಡು, ಪತಿಯ ಮೂಲಕ ಪರಮಾತ್ಮನ ಸೇವೆ ಮಾಡುವುದೇ ಪತಿವ್ರತಾಧರ್ಮ ಎಂಬುದು ಮಹರ್ಷಿಗಳ ನೋಟ. ಇಂತಹ ಪತಿವ್ರತಾಧರ್ಮ ಪಾಲನೆಯು ಕಠೋರವಾದ ತಪಸ್ಸಿಗೆ ಸಮಾನ ಎಂಬ ಮಾತನ್ನು ಮಹಾಪತಿವ್ರತೆಯಾದ ಅನಸೂಯೆಯು ಪತಿಯನ್ನು ಅನುಸರಿಸಿ ವನವಾಸಕ್ಕೆ ಬಂದಂತಹ ಸೀತೆಯನ್ನುದ್ದೇಶಿಸಿ ಸಂತೋಷದಿಂದ ನುಡಿಯುತ್ತಾಳೆ. ಭಾರತ ಭೂಮಿಯನ್ನಲಂಕರಿಸಿದ ಪ್ರಾತಃಸ್ಮರಣೀಯರಾದ ಸೀತೆ ದ್ರೌಪದಿ ಅನಸೂಯ ಇತ್ಯಾದಿ ಅನೇಕ ಪತಿವ್ರತಾ ಶಿರೋಮಣಿಯರೇ ನಮಗೆ ಸರ್ವಕಾಲಕ್ಕೂ ಆದರ್ಶಪ್ರಾಯರು. ತನ್ನ ಪತಿಯಲ್ಲಿಯೇ ಶ್ರೀಪತಿಯನ್ನು ಭಾವಿಸಬೇಕಾಗಿರುವುದರಿಂದ ಸ್ತ್ರೀಯರಿಗೆ ಪತಿವ್ರತಾ ಎಂಬ ಹೆಸರು ಅನ್ವರ್ಥವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.

ಸೂಚನೆ: 31/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.