ಸರೇಚಪೂರೈಃ…
ಪ್ರಾಣಾಯಾಮವೆನ್ನುವುದು ಯೋಗವಿದ್ಯೆಯಲ್ಲಿ ಮೂರನೆಯ ಅಂಗ. ಉಸಿರಾಡುವುದು ಹೇಗೆ? - ಎಂಬುದರ ವಿವರಣೆಯು ಇಲ್ಲಿ ಬರುತ್ತದೆ. ನಾವೆಲ್ಲರೂ ಉಸಿರಾಡುತ್ತಿರುವವರೇ. ಹುಟ್ಟಿದಾಗಿನಿಂದಲೂ ಉಸಿರಾಟವಿದ್ದೇ ಇದೆ. ಉಸಿರು ನಿಂತರೆ ಸಾವೇ ಸರಿ!
ಹೀಗಾಗಿ ಹುಟ್ಟಿನಿಂದಲೂ ಸಾಯುವವರೆವಿಗೂ ಎಲ್ಲರೂ ಉಸಿರಾಡುತ್ತಿರುವವರೇ. ಹಾಗಿರಲು "ಇದೇನು ಉಸಿರಾಡುವುದನ್ನೂ ಹೇಳಿಕೊಡಬೇಕೆ?" - ಎಂಬ ಪ್ರಶ್ನೆಯು ಬರಬಹುದು. ನಾವಂದುಕೊಂಡಿರುವ "ಸಹಜವಾದ ಉಸಿರಾಟ"ವು ಸರಿಯಲ್ಲವೆಂಬುದೇ ಯೋಗಶಾಸ್ತ್ರದ ಸಿದ್ಧಾಂತ.
ಎಂಟು ಮೆಟ್ಟಿಲುಗಳು
ಯೋಗಕ್ಕೆ ಎಂಟು ಮೆಟ್ಟಿಲುಗಳು. ಮೊದಲು ಯಮ-ನಿಯಮ - ಎಂದು ಎರಡು. ನಮ್ಮ ನಿತ್ಯಗಟ್ಟಲೆಯ ಜೀವನದಲ್ಲಿ ಇರಬೇಕಾದ ಸಾಧಾರಣವಾದ ಸುಸಂಸ್ಕೃತವಾದ ನಡೆಗಳನ್ನು ಯಮ-ನಿಯಮಗಳು ಹೇಳುತ್ತವೆ. ಸತ್ಯವನ್ನು ನುಡಿ, ಹಿಂಸೆ ಬೇಡ, ಕಳ್ಳತನ ಬಿಡು, ಶುಚಿಯಾಗಿರು, ಪ್ರಸನ್ನತೆಯನ್ನು ಕಾಪಾಡಿಕೋ – ಇವೇ ಮುಂತಾದುವುಗಳು ಯಮಗಳು ಹಾಗೂ ನಿಯಮಗಳು ಎನಿಸತಕ್ಕವು.
ಕುಳಿತುಕೊಳ್ಳಲು ಸಹ ನಮಗೆ ಬರುತ್ತಿಲ್ಲ! ಈಗೆಲ್ಲ ಟೇಬಲ್ಲು-ಕುರ್ಚಿಗಳ ಅಭ್ಯಾಸವೇ ಆಗಿಹೋಗಿ, ಈಗ ಕೆಲಕಾಲದ ಹಿಂದೆ ಕುಳಿತುಕೊಳ್ಳುತ್ತಿದ್ದಂತೆ ಕೂಡ ಕುಳಿತುಕೊಳ್ಳಲೇ ಬಹುಮಂದಿಗೆ ಆಗುತ್ತಿಲ್ಲ. ಈ ಟೇಬಲ್ಲು-ಕುರ್ಚಿಗಳು ಬಳಕೆಗೆ ಬರುವ ಮುನ್ನಿನ ಕಾಲದಲ್ಲಿ ಸಹ 'ಆಸನ'ಗಳು ಬೇಕಾಗಿದ್ದವು! ಇಂದಂತೂ ಇನ್ನೂ ಸರಿ!
ಆಸನಗಳಿಂದ ಲಾಭವೇನು? ಕುಳಿತುಕೊಂಡಿರುವುದರಲ್ಲಿ ಒಂದು ಸ್ಥಿರತೆಯನ್ನು ಅವು ತಂದುಕೊಡುತ್ತವೆ. ಯಮ-ನಿಯಮ-ಆಸನಗಳೆಂಬ ಮೂರು ಅಂಗಗಳಾದ ಮೇಲೆ ಮುಂದೆ ಬರುವ ಅಂಗವೇ ಪ್ರಾಣಾಯಾಮ. ಪ್ರಾಣಾಯಾಮವಾದ ಮೇಲೂ ಮೂರು ಅಂಗಗಳಿವೆ - ಪ್ರತ್ಯಾಹಾರ-ಧಾರಣಾ-ಧ್ಯಾನ - ಎಂಬುದಾಗಿ. ಈ ಮೂರೂ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿಕೊಡತಕ್ಕವು.
ಉತ್ತುಂಗವಾದ ಸಮಾಧಿ-ಸ್ಥಿತಿಯಲ್ಲಿ ಯೋಗವು ಕೊನೆಗೊಳ್ಳುವುದು. ಅದೇ ಎಂಟನೆಯ ಮೆಟ್ಟಿಲು.
ನಮ್ಮ ಉಸಿರಾಟಕ್ಕೂ ಮನಸ್ಸಿಗೂ ಒಂದು ಮುಖ್ಯವಾದ ಸಂಬಂಧವಿದೆಯೆಂಬುದನ್ನು ಯೋಗವಿದ್ಯೆಯು ಸಹಸ್ರಾರು ವರ್ಷಗಳ ಹಿಂದೆಯೇ ಗುರುತಿಸಿತು. ಇಡೀ ಪ್ರಪಂಚದಲ್ಲೇ ಹಾಗೆ ಗುರುತಿಸಿರುವ ಮತ್ತಾವುದೇ ಸಂಸ್ಕೃತಿ-ನಾಗರಿಕತೆಗಳಿಲ್ಲ. ವಿದೇಶೀಯರ ಮತಗಳಲ್ಲಿ ಈ ಅರಿವಿನ ಸುಳಿವು ಸಹ ಇದ್ದಂತೆ ತೋರುವುದಿಲ್ಲ.
ಉಸಿರಾಟದಲ್ಲಿ ಎರಡು ಹೆಜ್ಜೆಗಳು. ಉಸಿರು ತೆಗೆದುಕೊಳ್ಳುವುದು: ಉಚ್ಛ್ವಾಸ. ಉಸಿರು ಬಿಡುವುದು: ನಿಃಶ್ವಾಸ. ಇವುಗಳಿಗೇ ಹೆಸರು ಪೂರಕ ಹಾಗೂ ರೇಚಕ. (ಇವನ್ನು ಪೂರ ಮತ್ತು ರೇಚ ಎಂದಷ್ಟೇ ಕರೆಯುವುದೂ ಉಂಟು). ಇದಲ್ಲದೆ ಉಸಿರನ್ನು ಬಿಗಿದಿಡುವ ಹೆಜ್ಜೆಯೂ ಉಂಟು. ಅದು ಕುಂಭಕ (ಅಥವಾ ಕುಂಭ). ಪೂರಕವಾದ ಮೇಲೆ ಉಸಿರನ್ನು ಹಿಡಿದಿಟ್ಟಿದ್ದರೆ ಅದು ಅಂತಃಕುಂಭಕ. ರೇಚಕವಾದ ಮೇಲೆ ಮಾಡಿದರೆ ಅದು ಬಾಹ್ಯಕುಂಭಕ.
ಪ್ರಾಣಾಯಾಮ – ಏಕೆ?
ರೇಚಕ-ಪೂರಕ-ಕುಂಭಕಗಳನ್ನು ಯಾವ ಅನುಪಾತದಲ್ಲಿ ಮಾಡಬೇಕೆಂಬ ಲೆಕ್ಕಾಚಾರವಿದೆ. ಅದನ್ನು ಗುರುಮುಖೇನ ತಿಳಿಯತಕ್ಕದ್ದು. ಪುಸ್ತಕ ಓದಿ ತಿಳಿಯತಕ್ಕದ್ದಲ್ಲ. ಇದರ ಅಭ್ಯಾಸವನ್ನು ನಿಯಮ-ಬದ್ಧವಾಗಿ ಮಾಡಬೇಕು. ಹಾಗೆ ಮಾಡುವುದರಿಂದ ಆಗುವ ಲಾಭವೆಂದರೆ ಎಲ್ಲ ನಾಡಿಗಳ ಶೋಧನೆ.
ನಾಡಿಯೆಂದರೇನು? ಪ್ರಾಣವು ಸಂಚರಿಸುವ ಮಾರ್ಗಕ್ಕೆ ನಾಡಿಯೆಂದು ಹೆಸರು. ನಾಡಿಗಳೆಷ್ಟು? - ಎಂಬ ಪ್ರಶ್ನೆಗೆ ಒಂದೇ ಉತ್ತರವಿಲ್ಲ: ೩೫೦೦೦೦೦ ಎಂದು ಒಂದು ಉತ್ತರ; ೭೨೦೦೦ ಎಂದು ಮತ್ತೊಂದು; ೧೦೧ ಎಂದೂ, ೧೬ ಎಂದೂ, ೧೪ ಎಂದೂ, ೧೦ ಎಂದೂ, ೩ ಎಂದೂ, ೧ ಎಂಬುದಾಗಿಯೂ - ಉತ್ತರಗಳಿವೆ. ನಮಗೆ ಎಷ್ಟರ ಮಟ್ಟಿನ ಸೂಕ್ಷ್ಮತೆಯು ಬೇಕು - ಎಂಬುದನ್ನು ಇದು ಅವಲಂಬಿಸುತ್ತದೆ.
ಅಂತೂ ನಾಡಿಗಳು ಶುದ್ಧವಾಗುವಂತೆ ಮಾಡಬೇಕು. ಇದಕ್ಕೆ ನಾಡೀ-ಶೋಧನವೆಂಬ ಹೆಸರಿದೆ.
ನಾಡೀ-ಶುದ್ಧಿಯಾದ ಬಳಿಕ "ಅನಾಹತ-ಧ್ವನಿ"ಯು ಒಳಗೇ ಮೊಳಗುವುದು. ಅದಾದರೂ ನಾನಾ-ಪ್ರಕಾರವಾದದ್ದು. ಆ ಬಗ್ಗೆ ಮುಂದೆ ತಿಳಿಯೋಣ.
ಸರೇಚ-ಪೂರೈರನಿಲಸ್ಯ ಕುಂಭೈಃ
ಸರ್ವಾಸು ನಾಡೀಷು ವಿಶೋಧಿತಾಸು |
ಅನಾಹತಾಖ್ಯೋ ಬಹುಭಿಃ ಪ್ರಕಾರೈಃ
ಅಂತಃ ಪ್ರವರ್ತೇತ ಸದಾ ನಿನಾದಃ ||೩||
ಸೂಚನೆ : 17/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.