Friday, April 30, 2021

ಪರಮ ಲಕ್ಷ್ಯ ಸಾಧನೆಗಾಗಿ ಕಷ್ಟಗಳನ್ನು ದಾಟೋಣ (Parama Laksya Sadhanegagi Kastagalannu Dstona)

ಲೇಖಕರು: ವಾದಿರಾಜ. ಪ್ರಸನ್ನ 
(ಪ್ರತಿಕ್ರಿಯಿಸಿರಿ lekhana@ayvm.in)



ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕರೋನ ಮಹಾಮಾರಿಯ ಜೊತೆಯಲ್ಲಿ ಸಂಕಷ್ಟದ ಸರಮಾಲೆಗಳು ತಾಂಡವವಾಡುತ್ತಿವೆ, ಅಭದ್ರತೆಯ ಭಯವು ಎಲ್ಲರನ್ನೂ ಕಾಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಅನೇಕ ಗೊಂದಲಗಳಿವೆ. ನೂತನ ಮಾದರಿ ಆನ್ಲೈನ್ ವಿದ್ಯಾಭ್ಯಾಸ ನಡೆಯುತ್ತಿದ್ದರೂ, ವಾರ್ಷಿಕ ಪರೀಕ್ಷೆ ನಡೆಯುವುದೋ, ಇಲ್ಲವೋ ಎಂಬ ಭಯವಿದೆ. ಇನ್ನು ಕೆಲಸಕ್ಕೆ ಹೋಗುವವರ ಗತಿಯಂತೂ ಹೇಳತೀರದು. ಕಡಿಮೆಯಾದ ಸಂಬಳ, ಕೆಲಸವೇ ಹೋಗುವ ಭಯ,'ವರ್ಕ್ ಫ್ರಮ್ ಹೋಂ' ಅವಾಂತರಗಳು, ಇವುಗಳ ಮಧ್ಯದಲ್ಲಿ, 'ನೆಟ್ವರ್ಕ್ ಇಲ್ಲದೆ ನೆಟ್ಟಗೆ ಕೆಲಸಮಾಡಲಾಗುತ್ತಿಲ್ಲ' ಎಂಬ ಆತಂಕ.  ಇನ್ನು ವ್ಯಾಪಾರಸ್ಥರು ವ್ಯಾಪಾರವಿಲ್ಲದೆ, ಲಾಭವಿಲ್ಲದೆ, ಮುಚ್ಚಿದ ಅಂಗಡಿಗಳ ಸಂಖ್ಯೆಯು ಅಧಿಕವಾಗಿದೆ. ಅಂತೂ ಈ ವರ್ಷದಲ್ಲಿ ಉತ್ತಮ, ಮಧ್ಯಮ ಹಾಗೂ ಸಣ್ಣ ವ್ಯಾಪಾರಸ್ಥರು ನಷ್ಟದಲ್ಲಿಯೇ ವಹಿವಾಟು ನಡೆಸುತ್ತಿರುವುದಂತೂ ಸತ್ಯ. ಹೀಗೆ ಕರೋನ ರೋಗ ಮುಂದುವರೆದರೆ, ಇದೇ ವ್ಯಾಪಾರದಲ್ಲಿಯೇ ಮುಂದುವರೆಯಲು ಸಾಧ್ಯವೇ? ಎಂಬ ಭಯವು ಕಾಡಿದೆ. ಒಟ್ಟಾರೆ, ಆಬಾಲವೃದ್ಧರಲ್ಲಿ ಈ ರೋಗ ಅಸ್ಥಿರತೆ,ಭಯ,ಆತಂಕಗಳನ್ನು ಸೃಷ್ಟಿಸಿ ಜೀವನವನ್ನು ದುಸ್ತರವಾಗಿಸಿದೆ. ಚರಿತ್ರೆಯಲ್ಲಿ ಪ್ರತಿಯೊಂದು ದೊಡ್ಡಸಾಮ್ರಾಜ್ಯವೂ ಕೊನೆಗಾಣುತ್ತದೆ, ಅಂತೆಯೇ ಪ್ರತಿಯೊಂದು ವ್ಯಾಪಾರವೂ; ಪ್ರತಿಯೊಂದು ಕೆಲಸವೂ. ಆದರೆ ಒಂದು ಕೆಲಸ ಹೋದರೆ ಮತ್ತೊಂದು ಬರುತ್ತೆ, ಒಂದು ಸಾಮ್ರಾಜ್ಯ ಹೋದರೆ ಮತ್ತೊಂದು ಬರುತ್ತೆ. ವೃತ್ತಿ, ಮನೆ, ಸ್ಥಾನ ಪದವಿಗಳು ಬದಲಾಗುತ್ತವೆ ಅಷ್ಟೇ, ಆಡಳಿತ ಪಲ್ಲಟವಾದರೂ ಜನಜೀವನ ನಡೆಯುತ್ತೆ, ಕೆಲಸ ಬದಲಾದರೂ ನಾವು ಇರುತ್ತೇವೆ, ಅಂಗಡಿ ಬದಲಾದರೂ, ಯಜಮಾನ ಮುಂದುವರೆಯುತ್ತಾನೆ. ಅಂತೆಯೇ 'ಶರೀರ ಹೋದರೂ ಜೀವ ಮುಂದುವರೆಯುತ್ತಾನೆ' ಎಂಬುದು ಋಷಿಗಳ ದೀರ್ಘದೃಷ್ಟಿ.

ಮಹಾಭಾರತದಲ್ಲಿ ನಡೆದ ರೋಚಕ ಪ್ರಸಂಗವೊಂದನ್ನು ಗಮನಿಸೋಣ. ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಎಲ್ಲರಿಗೂ ತೀವ್ರವಾದ ಬಾಯಾರಿಕೆಯಾಗಿತ್ತು, ಅಲ್ಲಿಯೇ ಇದ್ದ ಮರವನ್ನೇರಿದ ನಕುಲನು ಅನತಿ ದೂರದಲ್ಲಿ ನೀರಿನ ಸರೋವರವನ್ನು ಕಂಡನು. ಧರ್ಮರಾಜ ಅವನಿಗೆ ಅಲ್ಲಿಂದ ನೀರನ್ನು ತರಲು ಕಳುಹಿಸಿದನು. ನಕುಲನು ಅಲ್ಲಿಗೆ ಹೋಗಿ ನೀರನ್ನು ಕುಡಿಯಬೇಕೆನ್ನುವಷ್ಟರಲ್ಲಿ "ಬೇಡಪ್ಪ ! ಸಾಹಸಕಾರ್ಯ ಮಾಡಬೇಡ ! ಇದು ನನ್ನ ಸ್ವಾಮ್ಯಕ್ಕೆ ಒಳಪಟ್ಟಿದೆ. ನೀರು ಬೇಕಾದರೆ, ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿಯಬಹುದು !" ಎಂದು ಅಶರೀರವಾಣಿಯಾಯಿತು. ಅದನ್ನು ನಿರ್ಲಕ್ಷಿಸಿ ನೀರು ಕುಡಿದ ನಕುಲನು ಗತಪ್ರಾಣನಾಗಿ ಕೆಳಗೆ ಬಿದ್ದನು. ಇತ್ತ, ಎಷ್ಟು ಹೊತ್ತಾದರೂ ನಕುಲನು ಬರಲಿಲ್ಲವಾಗಿ ಯುಧಿಷ್ಠಿರನು ಸಹದೇವನನ್ನು ಕಳುಹಿಸಿದನು. ಅವನಿಗೂ ಇದೇ ಅಶರೀರವಾಣಿ ಮರುಕಳಿಸಿತು. ಇವನಿಗೂ ಸಹ ತೀವ್ರ ಬಾಯಾರಿಕೆಯಿದ್ದುದರಿಂದ, ಅದನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದನು. ಆಮೇಲೆ ಅರ್ಜುನ, ಭೀಮರೂ ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮಂದಿರಂತೆಯೇ ಅಶರೀರವಾಣಿಯನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದರು. ಕಡೆಗೆ ಯುಧಿಷ್ಠಿರನು ಅಲ್ಲಿಗೆ ಬಂದು ನೋಡಲು ನಾಲ್ಕು ತಮ್ಮಂದಿರು ಸತ್ತು ಬಿದ್ದಿರುತ್ತಾರೆ. ಪರಮಾಶ್ಚರ್ಯ ! ಯಾರ ಮೇಲೂ ಗಾಯವಾಗಲಿ, ಆಯುಧದ ಗುರುತಾಗಲಿ ಇಲ್ಲ.  ಹಾಗಾದರೆ ನೀರಿನಲ್ಲಿ ವಿಷವಿದೆಯೇ ಎಂದರೆ ಮೀನುಗಳು ಹಾಗೂ ಬಕಗಳು(ನೀರಹಕ್ಕಿ) ಆರಾಮವಾಗಿವೆ. ನೀರಿನಲ್ಲಿ ಇಳಿದಾಗ ಇವನಿಗೂ ಹಾಗೆಯೇ ಅಶರೀರವಾಣಿ.-'ಇದು ನನ್ನ ಕೊಳ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿ . ನಾನು ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿ ನಿನ್ನ ತಮ್ಮಂದಿರು ನಾಲ್ವರು ಸತ್ತಿದ್ದಾರೆ. ನೀನೂ ಹಾಗೆಯೇ ನಿರ್ಲಕ್ಷಿಸಿದರೆ ಐದನೇ ಸಾವೇ ನಿನ್ನದಾಗುವುದು' ಆಗ ಯುಧಿಷ್ಠಿರನು ವಿನಮ್ರನಾಗಿ ಕೈಮುಗಿದು ನೀನು ಯಾರು? ನಿನ್ನ ಅಪೇಕ್ಷೆಯಂತೆ ನಿನ್ನ ಪ್ರಶ್ನೆಗೆ ಉತ್ತರಿಸುವೆ.  ನಂತರ ನಿನ್ನ ಅಪ್ಪಣೆಯನ್ನು ಪಡೆದೇ ನೀರನ್ನು ಕುಡಿಯುವೆ ಎಂದಾಗ - ನಾನು ಯಕ್ಷ. ಎಂದು ತನ್ನ ಪರಿಚಯವನ್ನು ಹೇಳಿ ಹಲವು ಬಹಳ ಅಮೂಲ್ಯವಾದ ಪ್ರಶ್ನೆಗಳನ್ನು ಕೇಳುವನು. ಧರ್ಮಾತ್ಮನಾದ ಯುಧಿಷ್ಠಿರನು ಸಾವಧಾನ ಚಿತ್ತನಾಗಿ ಎಲ್ಲಾ ಪ್ರಶ್ನೆಗಳಿಗೂ ಸಮಂಜಸವಾದ ಉತ್ತರವನ್ನು ಕೊಡುವನು. ಯಕ್ಷನು ಸಂತೋಷಗೊಂಡು ಧರ್ಮಜನು ಬೇಡಿದಂತೆ ಅವನ ತಮ್ಮಂದಿರನ್ನೆಲ್ಲಾ ಪುನಃ ಜೀವಿತಗೊಳಿಸುವನು. ಇದು ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆ ಎಂದೇ ಪ್ರಸಿದ್ಧವಾಗಿರುವ ಕಥಾನಕ. ಮೇಲಿನ ಕತೆಯು ಇಂದಿಗೂ ನಮಗೆ ಹಲವು ನೀತಿಗಳನ್ನು ತಿಳಿಸುತ್ತದೆ. ನಾಲ್ವರು ಪಾಂಡವರು ಕೊಳದ ಯಜಮಾನನ ಮಾತನ್ನು ಅಲಕ್ಷಿಸಿದ್ದು ಆತುರದ ನಿರ್ಧಾರ. ಎಷ್ಟೇ ಬಾಯಾರಿಕೆಯಾದರೂ ಅಲ್ಲಿ ಇಂದ್ರಿಯ ಸಂಯಮವಿರಬೇಕಾಗಿತ್ತು. ಯಕ್ಷನ ಎಚ್ಚರಿಕೆಯ ನಂತರವೂ ತಮ್ಮ ಬಗೆಗಿನ ಅತಿಯಾದ ಅಭಿಮಾನ ಅವರ ಜೀವಕ್ಕೇ ಹಾನಿಮಾಡಿತು. ಯುಧಿಷ್ಠಿರನು ತನಗೆಷ್ಟು ಬಾಯಾರಿಕೆಯಾದರೂ ಸಮಯಪ್ರಜ್ಞೆಯಿಂದ, ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದ ಯಕ್ಷನ ನೆಪದಲ್ಲಿ ಲೋಕವನ್ನೇ ಕಾಡುತ್ತಿದ್ದ ಪ್ರಶ್ನೆಗಳಿಗೂ ಉತ್ತರಿಸಿ ಜೀವನದ ಮಾರ್ಗದರ್ಶಕನಾದ. ತಾನು ಗೆದ್ದು ಗತಪ್ರಾಣರಾಗಿದ್ದ ತನ್ನ ಪ್ರಾಣಪ್ರಿಯರಾದ ತಮ್ಮಂದಿರನ್ನೂ ಉಳಿಸಿಕೊಂಡ ! ಹಾಗೆಯೇ ಕರೋನದಿಂದ ಕಂಗಾಲಾದ ಮನಃಸ್ಥಿತಿಯಿಂದ ಹೊರಬಂದು ನೆಮ್ಮದಿಯ ಬದುಕನ್ನು ನಡೆಸಲು ಧರ್ಮಜನ ಈ ನಡೆ ನಮಗೆ ಮಾರ್ಗದರ್ಶಿಯಾಗಬಲ್ಲದು.

ಸುಖದಂತೆಯೇ ಕಷ್ಟಗಳೂ ಭಗವಂತನ ಪ್ರಸಾದವೇ ಎಂಬಂತೆ ತೆಗೆದುಕೊಳ್ಳಬೇಕು. ಕಷ್ಟಗಳು ಬಂದಾಗ ನಾವು ಗಟ್ಟಿಯಾಗುತ್ತೇವೆ. ಭಗವಂತನ ಸ್ಮರಣೆ ಮಾಡುತ್ತೇವೆ. ಜೀವನವನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಕಲಿಯುತ್ತೇವೆ. ಕಷ್ಟಗಳು ಸಹಜವಾಗಿ ಬರುವಂತಹವು ಕೆಲವಾದರೆ, ನಾವಾಗಿಯೇ ಕಲ್ಪಿಸಿಕೊಳ್ಳುವಂತಹವೂ ಇವೆ. ದೇಶದಲ್ಲಿ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವವರು ಕೆಲವರಾದರೆ, ರೋಗಭಯದಿಂದ ನರಳುವವರು ಎಷ್ಟೋ ಮಂದಿ ಇದ್ದಾರೆ. ಭಯಗ್ರಸ್ತರಿಗೆ ಔಷಧಕ್ಕಿಂತ ಹೆಚ್ಚಾಗಿ ಧೈರ್ಯದಿಂದ  ಕಷ್ಟಗಳನ್ನು ಎದುರಿಸುವ ಮನಃಪ್ರವೃತ್ತಿಯನ್ನು ಉಂಟು ಮಾಡುವುದೇ ಮುಖ್ಯ. ಅರ್ಜುನನು ಮಹಾವೀರನಾಗಿದ್ದರೂ, ಬಂಧುಮಿತ್ರರನ್ನು ಕೊಲ್ಲುವಂತಹ ಕಷ್ಟ ಬಂದಿತಲ್ಲ ಎಂದು ದುಃಖಿಸುತ್ತಾನೆ. ಅವನ ಗಾಂಡೀವ ಧನುಸ್ಸೇ ಕೈಯಿಂದ ಜಾರಿಬಿಡುತ್ತದೆ. ಧರ್ಮವನ್ನು ರಕ್ಷಿಸಲು ಯುದ್ಧ ಅಗತ್ಯವೆಂಬ ತಿಳಿವಳಿಕೆಯನ್ನು ಶ್ರೀಕೃಷ್ಣನು ಕೊಟ್ಟಾಗಲಷ್ಟೆ ಅರ್ಜುನನು ಭಯಮುಕ್ತನಾಗುತ್ತಾನೆ. ಅವನು ಯುದ್ಧದಲ್ಲಿ ಹೋರಾಡಿ, ಕೊನೆಗೆ ಪಾಂಡವರು ಜಯಶೀಲರಾಗುತ್ತಾರೆ. ಶ್ರೀಕೃಷ್ಣನು ಅರ್ಜುನನಿಗೆ ಕಷ್ಟದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಶಿವಾಜಿಗೆ ಸಮರ್ಥ ರಾಮದಾಸರು, ಚಂದ್ರಗುಪ್ತನಿಗೆ ಚಾಣಕ್ಯ, ಹಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಹೀಗೆ ಪಟ್ಟಿ ಬೆಳೆಯುತ್ತದೆ. ಅಂತಹವರ ಕಥೆಗಳನ್ನು ಮತ್ತೊಮ್ಮೆ ಅವಲೋಕಿಸಿದರೆ, ಇಂದು ನಮ್ಮನ್ನು ಆವರಿಸಿರುವ ಭೀತಿಯಿಂದ ಹೊರಬಂದು ಕಾರ್ಯ  ಪ್ರವೃತ್ತರಾಗಬಹುದು. ಈ ಸಾಧು ಸಂತರು ಯಾರೂ ಕಷ್ಟದಿಂದ ತಪ್ಪಿಸಿಕೊಂಡು ಕಾಡಿಗೆ ಹೋಗುವಂತೆ ಬೋಧಿಸಿಲ್ಲ. ಧೈರ್ಯವಾಗಿ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗುವ ಮಾರ್ಗವನ್ನೇ ಬೋಧಿಸಿದ್ದಾರೆ. ಭಾರತೀಯ ಮಹರ್ಷಿಗಳು ಜೀವನಕ್ಕೊಂದು ಸಹಜವಾದ, ಹಿರಿದಾದ ಗುರಿಯೊಂದನ್ನು ಕಂಡುಕೊಂಡರು. ಅದು ನಮ್ಮೊಳಗೇ ಬೆಳಗುವ ಜೀವಮೂಲವಾದ ಪರಂಜ್ಯೋತಿಯನ್ನು ಅನುಭವಿಸುವ ಗುರಿ. ಅಲ್ಲಿನ ನೆಮ್ಮದಿ, ಸುಖ ಇನ್ನೆಲ್ಲಿಯೂ ಇಲ್ಲದಿರುವುದು ಅವರ ಅನುಭವವಾಗಿತ್ತು. ಆ ನೆಮ್ಮದಿಯನ್ನು ಪಡೆಯುವ ಸಾಧನೆಗೆ ಅವರು ಜೀವನವನ್ನು ಮುಡುಪಿಟ್ಟರು. ಆ ಮಹಾ ಸಾಧನೆಯ ದಾರಿಯಲ್ಲಿ ಬರುವ ಕಷ್ಟ ಸುಖಗಳನ್ನೆಲ್ಲಾ ಗೌಣವಾಗಿ ಕಂಡರು. ಹಾಗೆಯೇ ಜೀವಲೋಕವೂ ಆ ಆತ್ಯಂತಿಕ ಸುಖವನ್ನು ಹೊಂದುವಂತಾಗಲೆಂದು ಇಲ್ಲಿ ಜೀವನಪದ್ಧತಿಯನ್ನು ರೂಪಿಸಿಕೊಟ್ಟರು. ಈ ಹಿರಿದಾದ ಜೀವನಲಕ್ಷ್ಯವನ್ನು ನಾವು ಇಟ್ಟುಕೊಂಡಾಗ ಅದರ ಹಾದಿಯಲ್ಲಿ ಬರುವ ಕಷ್ಟಗಳೆಲ್ಲವನ್ನು ಸಮಾಹಿತ ಮನಸ್ಸಿನಿಂದ ದಾಟಬಹುದಾಗಿದೆ.

ಮಹಾಮಾರಿಯು ಬಂದಾಗ, ತಮ್ಮ ಆಪ್ತೇಷ್ಟರಲ್ಲಿ ಯಾರಾದರೂ ಮರಣ ಹೊಂದಿದರೆ , ಜೀವನವೇ ನೀರಸವೆಂದು ಕೆಲವರು ಭಾವಿಸುವುದುಂಟು. ಆದರೆ ಜೀವನ ನೀರಸವೆನಿಸಲು ಮೂಲ ಕಾರಣವೇನೆಂದು ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಸ್ಮರಣೀಯ. "ಜೀವನಕ್ಕೆ ಮೂಲರೂಪನಾಗಿ, ಬೇರಾಗಿ, ಜೀವನವನ್ನು ಧರಿಸಿರುವವನು ಭಗವಂತನಪ್ಪಾ. ಅವನನ್ನು ಮರೆಯಬೇಡಿ. ಬೇರನ್ನು ಕಾಪಾಡಿಕೊಳ್ಳಿ. ಬೇರು ಹುಳು ಕಡಿದು, ಮರವು ಬೇರಿನ ಸಂಬಂಧದಿಂದ ಬೇರ್ಪಟ್ಟರೆ ಒಣಮರವಾಗುತ್ತೆ. ನೀರಸ ಜೀವನವಾಗುತ್ತೆ. ಆದ್ದರಿಂದ ಅದನ್ನು ಕೆಡಿಸಿಕೊಳ್ಳಬೇಡಿ. ರಸರೂಪಿಯಾದ ಅವನ ಸಂಬಂಧವಿಲ್ಲದಿದ್ದಾಗ ಜೀವನ ನೀರಸವಾಗುತ್ತೆ" ಈ ಲೋಕ, ಕರೋನ ಮಾದರಿಯ ಹಲವಾರು ರೋಗ-ರುಜಿನಗಳನ್ನು ಕಂಡಿದೆ. ಕಷ್ಟಗಳು ಬಂದಾಗ ಎದೆಗುಂದದೆ ಧೈರ್ಯವಾಗಿ ಬಂದದ್ದನ್ನು ಎದುರಿಸುತ್ತಾ ನಮ್ಮ ಋಷಿಗಳಂತೆ ಉದಾತ್ತವಾದ ಜೀವನಲಕ್ಷ್ಯದ ಕಡೆಗೆ ಹೆಜ್ಜೆಹಾಕುವಂತಹ ಮನಸ್ಸನ್ನು ಭಗವಂತನು ನಮಗೆಲ್ಲಾ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 29/04/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.