Saturday, April 10, 2021

ಕಾಲಪುರುಷನಿಗೆ ಯುಗಾದಿಯ ನಮನ (Kalapurusanige Yugadiya Namana)

ಲೇಖಕರು: ಮೋಹನ ರಾಘವನ್.
(ಪ್ರತಿಕ್ರಿಯಿಸಿರಿ lekhana@ayvm.in)


 

ಪ್ಲವ ಸಂವತ್ಸರದ ಶುಭಾರಂಭದ ಯುಗಾದಿ ಹಬ್ಬವು ಬರುತ್ತಿದೆ. ಪ್ರಕೃತಿಮಾತೆಯು ವಸಂತದ ಉತ್ಸವಕ್ಕಾಗಿ ಮುಡಿಹಾಸುತ್ತಿರುವಂಥಹ ಕಾಲ. ಲೋಕವೆಲ್ಲಾ ಹಸನಾದ ಚಿಗುರುಗಳಿಂದಲೂ ಪುಷ್ಪಗಳಿಂದಲೂ ತುಂಬಿ ತುಳುಕುತ್ತಿರುವ ಘಟ್ಟವಿದು. ಕಳೆದ ವರ್ಷದ ಕಷ್ಟ-ಕಾರ್ಪಣ್ಯಗಳನ್ನು  ಮರೆತು ಹೊಸ ವರ್ಷದ ಬೃಹತ್ಕಾರ್ಯಗಳಿಗೆ ನಡುವು ಬಿಗಿದು ಸಂಕಲ್ಪವನ್ನು ಕೈಗೊಳ್ಳುವ ಕಾಲವಿದು. ಜೀವನದ ಕಷ್ಟ-ಸುಖಗಳನ್ನು  ಒಂದೇ ಸಮನಾಗಿ ಸ್ವೀಕರಿಸುತ್ತಾ ಬೇವು-ಬೆಲ್ಲಗಳನ್ನು ಸ್ವೀಕರಿಸುವ ದಿವಸವಿದು. 


ಕಾಲಚಕ್ರವು ತಿರುಗುತ್ತಿರಲು, ಹಬ್ಬಗಳು ಕಬ್ಬಿನ  ಗಿಣ್ಣುಗಳಂತೆ ಅಮೃತಸ್ರಾವ ಮಾಡುವ ನಿರ್ದಿಷ್ಟ ಪರ್ವಕಾಲಗಳು ಎಂಬುದು ಸಂಸ್ಕೃತಿಯ ಅಂತರಾರ್ಥವನ್ನು ತಿಳಿದ ಮಹರ್ಷಿಗಳ ಅನುಭವ. ಕಾಲಕಾಲಕ್ಕೆ ಪರ್ವ-ಹಬ್ಬ ವೆಂಬೀ ಮಧುರಮಯವಾದ ರಸವನ್ನು ಜಿನುಗಿಸುವ ಕಾಲಪುರುಷನನ್ನು ಕೃತಜ್ಞತೆಯಿಂದ ಭಾವಿಸಿ ಪೂಜಿಸುವ ಹಬ್ಬ ಯುಗಾದಿ. ಜಗತ್ಸಂಹಾರಕ ಮಹಾಕಾಲ ರುದ್ರನೆಂಬುದು ಪ್ರಸಿದ್ಧ. ಆದರೆ ಇಲ್ಲಿ ಕಾಲಪುರುಷನೆಂದರೆ ಲಯದನಂತರ ಸೃಷ್ಟಿಯನ್ನು  ಕೈಗೊಳ್ಳುವ ಬ್ರಹ್ಮ- ಪ್ರಜಾಪತಿ. ಕಾಲಪುರುಷನು ನಮಗೆ ಕಾಣಿಸಿಕೊಳ್ಳುವುದು ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಪಕ್ಷ, ಅಯನ, ಮಾಸ, ಸಂವತ್ಸರವೇ ಮುಂತಾದ ಅವಯವಗಳ ರೂಪದಲ್ಲಿ. ಈ ಅಂಗ-ಸಮೇತನಾದ ಕಾಲಪುರುಷನ ಅರಿವು, ಸ್ಮರಣೆಗಳನ್ನು ನಮಗೆ ಮಾಡಿಸಿಕೊಡಲು ಪಂಚಾಂಗ ಪಠನ-ಶ್ರವಣಗಳನ್ನು ಇಂದು ಕೈಗೊಳ್ಳುತ್ತೇವೆ. ಕಾಲವು ಈ ವರ್ಷದಲ್ಲಿ ಒದಗಿಸಲಿರುವ ಸೌಲಭ್ಯಗಳನ್ನು ಗಮನಿಸಿ ಗಾಳಿ ಬಂದಾಗ ತೂರಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವ ಸಮಯವಿದು. 


ಬೇವು-ಬೆಲ್ಲದ ಅಂತರಾರ್ಥ 

ಹಗಲಿರುಳು, ಕೃಷ್ಣ-ಶುಕ್ಲ ಪಕ್ಷಗಳು, ಉತ್ತರ-ದಕ್ಷಿಣ ಅಯನಗಳು ಒಂದಾದಮೇಲೊಂದು ಪರ್ಯಾಯವಾಗಿ ಬಂದರೆ ಆಗ ಕಾಲಚಕ್ರದ ವೃತ್ತಗಳು ಪೂರ್ಣವಾಗುತ್ತವೆ. ಈ ದ್ವಂದ್ವಗಳ ಸಂಧಿಕಾಲವು ಪೂಜೆ-ಧ್ಯಾನ-ತಪಗಳಿಗೆ ಪವಿತ್ರವಾದ ಕಾಲಗಳೆಂದು ಮಹರ್ಷಿಗಳ ಅನುಭವವು ತಿಳಿಸುತ್ತದೆ. ಹಗಲಿರುಳುಗಳ ಸಂಧಿ ಪ್ರಾತಸ್ಸಾಯಂ ಸಂಧ್ಯೆಗಳು. ಪೂಜೆ ಆಹ್ನಿಕಗಳನ್ನು ಮಾಡುವ ಪವಿತ್ರಸಮಯ. ಈ ಸಮಯಗಳಲ್ಲಿ ಪ್ರಾಣಶಕ್ತಿಯು ಇಡಾ-ಪಿಂಗಳಾ ನಡುವೆ ಪರ್ಯಾಯವಾಗುವ ಸಮಯವಾಗಿದ್ದು, ಮಧ್ಯದಲ್ಲಿನ ಸುಷುಮ್ನಾ ನಾಡಿಯಲ್ಲಿ ಪ್ರವೇಶಿಸುತ್ತವೆ. ಆದ ಕಾರಣ ಇವು ಯೋಗಸಾಧನೆಗೆ ಪ್ರಶಸ್ತ ಕಾಲವಾಗುವುದು. ಪಕ್ಷಗಳ ಸಂಧಿ ಅಮಾವಾಸ್ಯೆ ಹುಣ್ಣಿಮೆಗಳು, ದರ್ಶ ಮತ್ತು ಪೂರ್ಣಮಾಸವೆಂಬ ಎರಡು ಯಜ್ಞಗಳಾಚರಿಸುವ ಕಾಲವೆಂದು ವೇದಗಳು ತಿಳಿಸುತ್ತವೆ. ಸಂಕ್ರಮಣವು ಮಾಸಗಳ ಸಂಧಿ. ದಕ್ಷಿಣಾಯಣ ಮತ್ತು ಉತ್ತರಾಯಣ ಪುಣ್ಯಕಾಲಗಳು ಅಯನಗಳ ಸಂಧಿ. ಯುಗಾದಿ ಪರ್ವವು ವರ್ಷಗಳ ಸಂಧಿ. ಶೀತೋಷ್ಣಕಾಲಗಳ ಸಂಧಿಯೂ ಹೌದು. ಯುಗಾದಿ ಪರ್ವವು ಒಂದು ಅದ್ಭುತವಾದ ಪ್ರಾಕೃತಿಕ ಯೋಗವನ್ನು ಸಾರುತ್ತಿದೆ. ಆಧ್ಯಾತ್ಮಿಕವಾಗಿ ನೋಡಿದರೆ, ಪುರುಷ ಪ್ರಕೃತಿಗಳ ಯೋಗದಿಂದ ಸಮಾಧಿ ಸಾಮ್ರಾಜ್ಯದ ಸಿದ್ಧಿ ಪಡೆವ ಕಾಲವಿದು. ಪೂಜೆ ವ್ರತಾದಿಗಳಿಂದ ಸಂಪತ್ತು- ಸಮೃದ್ಧಿಗಳನ್ನು ಹೊಂದಿಸಿಕೊಳ್ಳುವ ಕಾಲವೂ ಆಗಿದೆ. ಅಂತೆಯೇ ಒಳಮುಖವಾಗಿ ಸಾಗಿ ಅಂತರ್ದರ್ಶನವನ್ನು ಮಾಡಿಕೊಳ್ಳುವ ಕಾಲವೂ ಆಗಿದೆ.  ಹಳೆಯ ವರ್ಷ ಮುಗಿದು ಹೊಸ ವರ್ಷದಾರಂಭ. ಈ ಸಂಧಿಕಾಲದಲ್ಲಿ ಬೇವು -ಬೆಲ್ಲದ ಸ್ವೀಕಾರ ತುಂಬಾ ಪ್ರಸಕ್ತವಾಗಿದೆ. ಹೇಗೆ ಹಗಲಿರುಳು, ಉಷ್ಣ -ಶೀತಗಳು, ಸಮವಾಗಿವೆಯೋ  ಅಂತೆಯೇ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವ ಸಂಕಲ್ಪ ಇಲ್ಲಿದೆ. ಇಂತಹ ಪ್ರವೃತ್ತಿಯು ಸಿದ್ಧಪುರುಷನ ಲಕ್ಷಣವಾಗಿದೆ. ಬೇವಿನ ಚಿಗುರೆಲೆಯ ಹೂವು , ಬೆಲ್ಲ , ಮೆಣಸು , ಉಪ್ಪು , ಜೀರಿಗೆ, ಇಂಗು , ಓಮಕ್ಕಿಗಳನ್ನು ಸೇರಿಸಿ ಕುಟ್ಟಿ  ಒಗ್ಗೂಡಿಸಿ ಸ್ವೀಕರಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಇಲ್ಲಿ ಅನೇಕ ರಸಗಳೂ ಸೇರಿರುತ್ತವೆ. ಇದು ತ್ರಿಗುಣಗಳ ಸಾಮ್ಯವನ್ನು ಮಾಡಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ. ತ್ರಿಗುಣ ಸಾಮ್ಯವು ಆಯುರಾರೋಗ್ಯವನ್ನೂ ಆಧ್ಯಾತ್ಮಿಕ ಒಳಿತನ್ನೂ ಸಾಧಿಸಿಕೊಡುತ್ತದೆ. ವಿಶೇಷವಾಗಿ ಬೇವು ಸೃಷ್ಟಿಕರ್ತನಾದ ಪ್ರಜಾಪತಿಯನ್ನು ಓಲೈಸುವ ದ್ರವ್ಯವೆಂದು ಯೋಗಿವರೇಣ್ಯರ ಮಾತು.  


ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಾಚ ।

ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್  ।।

(ನೂರುವರ್ಷಗಳ ಆಯುಷ್ಯ, ಸದೃಢ ಅರೋಗ್ಯ , ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ ) ಎಂದು ಹೇಳಿ ಸೇವಿಸಬೇಕು. 


ಕೃತ ಯುಗಾದಿಯ ಧರ್ಮ

ನಾಲಕ್ಕು ಯುಗಗಳು ಸೇರಿದರೆ  ಒಂದು ಚತುರ್ಯುಗ. ಕೃತಯುಗದಿಂದ ಈ ಚತುರ್ಯುಗವು ಪ್ರಾರಂಭವಾಗುತ್ತದೆ. ಬ್ರಹ್ಮನ ಕೃತ್ಯವಾಗಿರುವ ಈ ಸೃಷ್ಟಿಯೂ ಕೃತಯುಗದಿಂದ ಪ್ರಾರಂಭವಾಗಿದ್ದರಿಂದ, ಪ್ರತಿಯೊಂದು ಸಂವತ್ಸರವನ್ನೂ ಆ ಸ್ಮರಣೆಯಲ್ಲಿ 'ಯುಗಾದಿ' - ಯುಗದ ಆದಿ ಎಂದು ಕರೆಯುತ್ತೇವೆ. ಬ್ರಹ್ಮನಿಂದ ಆಗತಾನೇ ಸೃಷ್ಟಿಸಲ್ಪಟ್ಟ ಹಚ್ಚ-ಹೊಸನಾದ ಆ ಕೃತಯುಗದ ಸ್ಮರಣೆಯಲ್ಲಿ ಶ್ರೀರಂಗ ಮಹಾಗುರುಗಳು ಈ ಹಬ್ಬವನ್ನು 'ಕೃತ ಯುಗಾದಿ' ಎಂದೂ ಕೊಂಡಾಡುತ್ತಿದ್ದರು. 


ಕೃತಯುಗದ ಲಕ್ಷಣಗಳನ್ನು ವಿವರಿಸುತ್ತಾ ಮಹಾಭಾರತವು ಹೀಗೆ ಹೇಳುತ್ತದೆ. ಅದು ಯುಗದ ಆದಿ, ಕೃತ ಯುಗಾದಿ ಅಥವಾ ಸತ್ಯ ಯುಗಾದಿ. ಆಗತಾನೇ ಬ್ರಹ್ಮನಿಂದ ಕೃತವಾಗಿತ್ತು ಈ ಜಗತ್ತು. ಆದ್ದರಿಂದ ಅದು ಕೃತಯುಗ. ಸತ್ಯಪರತೆಯ ಪರಾಕಾಷ್ಠೆಯದು, ಆದ್ದರಿಂದ ಸತ್ಯಯುಗವೆಂದು ಹೆಸರೂ ಉಂಟು. ಜನರು ನಿರ್ಲಿಪ್ತವಾಗಿ ಧ್ಯಾನ, ತಪದಲ್ಲಿ ನಿರತರಾಗಿದ್ದರು, ಅದರಿಂದಲೇ ಯೋಗದ ತುತ್ತತುದಿಯಾದ ಬ್ರಹ್ಮಾನುಭವವನ್ನು ಪಡೆಯುತ್ತಿದ್ದರು. ವ್ರತ, ಹೋಮ ಯಜ್ಞಗಳ ಅವಶ್ಯಕತೆಯೇ ಇರಲಿಲ್ಲ. ಕಾಮ-ಕ್ರೋಧಾದಿ ಅವಗುಣಗಳು ಅಲ್ಲಿಲ್ಲವಾಗಿದ್ದವು. ಜೀವನಕ್ಕೆ ಬೇಕಾದ ಅಲ್ಪಸ್ವಲ್ಪ ದ್ರವ್ಯಗಳನ್ನು ಪಡೆದು ತೃಪ್ತರಾಗಿದ್ದರು. ತ್ರೇತಾಯುಗ ಪ್ರಾರಂಭಿಸುತ್ತಿದ್ದಂತೆಯೇ ಸದಾಕಾಲ ಕೇವಲ ತಪದಲ್ಲೇ ಇರುವುದು ಅಸಾಧ್ಯವಾಯಿತು. ರಜೋಗುಣ ಜನರನ್ನು ಹೆಚ್ಚು ಕಾರ್ಯಪ್ರವೃತ್ತರನ್ನಾಗಿ ಮಾಡಿಸಿತು. ಆದರೆ ಧ್ಯೇಯ ಮಾತ್ರ ಬದಲಾಗಲಿಲ್ಲ. ಯಜ್ಞ ಯಾಗಾದಿ ಅನುಷ್ಠಾನಗಳನ್ನು  ಯೋಜಿಸಲಾಯಿತು. ಇದರಿಂದ ಕರ್ಮೇಂದ್ರಿಯಗಳಿಗೆ ಕೆಲಸವೂ ಆಯಿತು, ಕರ್ಮದಿಂದ ಯೋಗಸಿದ್ಧಿಯೂ ಇತ್ತು. ದ್ವಾಪರಯುಗದಲ್ಲಿ ಕಾಮಕ್ರೋಧಗಳಿಂದ ಕೂಡಿದವರಾಗಿ ಧರ್ಮಮಾರ್ಗದಿಂದ ವಿಚಲಿತರಾಗ ತೊಡಗಿದರು. ವ್ಯಾಧಿಗಳು ಹೆಚ್ಚುತ್ತಿತ್ತು. ವೇದಗಳ ಅಧ್ಯಯನ ಅಸಾಧ್ಯವಾಗಿ ಅಂಶವನ್ನು ಮಾತ್ರ ಗ್ರಹಿಸಬಲ್ಲರಾಗಿದ್ದರು. ದ್ವಾಪರದಲ್ಲಿ ಪೂಜೆ-ಅರ್ಚನೆಗಳು ಹೆಚ್ಚು ಫಲಕಾರಿಯೆಂದು ಕೆಲವು ಪುರಾಣಗಳು ಹೇಳುತ್ತವೆ. ಕಲಿಯುಗದಲ್ಲಿ ಸ್ಥಿತಿ ಶೋಚನೀಯ. ಸತ್ಯ-ಧರ್ಮಗಳನ್ನು ನಿರ್ಲಕ್ಷಿಸಿ ವರ್ತಿಸುತ್ತಾರೆ ಜನರು. ತಾಮಸ ಪ್ರವೃತ್ತಿಗಳು ತಾಂಡವವಾಡುತ್ತವೆ. ಕೃತಯುಗದಿಂದ ಜಾರಿ ಇಂದು ಕಲಿಕಾಲಕ್ಕೆ ಹೆಜ್ಜೆಯನ್ನಿಟ್ಟಿರುವ ನಮಗೆ ಯುಗಾದಿ ಹಬ್ಬವು ಕೃತಯುಗಾದಿಯ ನಿರ್ಮಲ-ಕೋಮಲ ಭಾವಗಳನ್ನೂ ಶುದ್ಧ-ಪ್ರಕೃತಿಯನ್ನೂ ಯೋಗ-ಭೋಗಗಳ ಸಮತೋಲನದ ಜೀವನಾದರ್ಶವನ್ನು  ಜ್ಞಾಪಿಸುತ್ತದೆ       


ಕೃತದಿಂದ ಪ್ರಾರಂಭಿಸಿ ಮಾನವನ ಪತನ, ಅಧರ್ಮ ಹೆಚ್ಚುವಿಕೆ ಆಗುತ್ತಿದ್ದರೂ, ಕಾಲ-ಕಾಲಕ್ಕೆ ರಾಮ-ಕೃಷ್ಣಾದಿ ಮಹಾಪುರುಷರು, ಅವತಾರಪುರುಷರು ಆವಿರ್ಭವಿಸಿ ಧರ್ಮವನ್ನು ಎತ್ತಿಹಿಡಿಯುತ್ತಾರೆ. ಇದೂ ಸೃಷ್ಟಿಯ ನಿಯಮ ಹೌದು. ತಪದಲ್ಲಿ ರುಚಿಗೆಟ್ಟರೆ ಯಜ್ಞವನ್ನು ಯೋಜಿಸಿದರು. ಜನರ ರುಚಿ ಬದಲಾದಂತೆ ಹೊಸಪರಿಸ್ಥಿತಿಯಲ್ಲೂ ಹಳೆಯ ಗುರಿಸಾಧಿಸುವ ಯುಕ್ತಿಗಳನ್ನು ವಿದ್ಯೆ-ಕಲೆಗಳ ರೂಪದಲ್ಲಿ ತಂದರು ಋಷಿ-ಮುನಿಗಳು. ಜ್ಞಾನ, ಕರ್ಮ, ಭಕ್ತಿ, ಇತಿಹಾಸ, ಪುರಾಣ, ಕಾವ್ಯ, ನೃತ್ಯ, ಸಂಗೀತ, ಯೋಗ, ತಂತ್ರ, ಮಂತ್ರ, ಜಪ ಮುಂತಾದ ಅಸಂಖ್ಯಾತ ವಿದ್ಯೆಗಳು ಈ ಭಾರತಭೂಮಿಯಲ್ಲಿ ರೂಪಿತವಾದವು. ಧರ್ಮ, ಮೋಕ್ಷಗಳಿಗೆ ಅಡ್ಡಿ ಆಗದಂತೆ ಅರ್ಥಕಾಮಗಳನ್ನು ಅನುಭವಿಸುವ ಸಮಾಜ ಮತ್ತು ರಾಜ್ಯ ವ್ಯವಸ್ಥೆಯನ್ನು ಜ್ಞಾನ-ವಿಜ್ಞಾನಗಳ ಮೂಲಕ ತಂದುಕೊಟ್ಟರು. ಆದ್ದರಿಂದ ಸತ್ಯವ್ರತ ಜನರು ಕೆಲವರೇ ಉಳಿದರೂ ಕೂಡ ಸತ್ಯಬೀಜ ಅವರಹತ್ತಿರ ಇರುವುದರಿಂದ, ಕೃತವನ್ನು ಪುನಃ ತರಲು ಸಾಧ್ಯವಾಗುತ್ತದೆ. ಕಲಿಕೆಡಿಸಿತೆಂದು ವ್ಯಥೆಪಡಬೇಕಾಗಿಲ್ಲ.


ಯುಗಾದಿಗೆ ಒಂದು ಸಂಕಲ್ಪ    

ಇಂದಿನ ಪರಿಸ್ಥಿತಿಯಲ್ಲಿ ಆ ಕೃತಯುಗವು ಮತ್ತೆ ಬರುವಂತೆ  ಮಾಡುವುದು  ಹೇಗೆ ಎಂದರೆ, ಒಂದೇ ಉತ್ತರ 'ಸತ್ಯವ್ರತರು ಸತ್ಯನಿಷ್ಠರ ಸಂಖ್ಯೆ ಬೆಳೆಯ ಬೇಕು'. ಋಷಿಗಳ  ಅಂತರ್ದರ್ಶನ ನಾಡಿನಲ್ಲಿ ಬೆಳೆಯಬೇಕು. ಸಿದ್ಧಿಗೆ ಸಾಮಗ್ರಿಯಾದ ಶಮ, ದಮ, ತಪಗಳು ಕೂಡಿಬರಬೇಕು. ಭಾರತೀಯ ವಿದ್ಯೆಕಲೆಗಳು  ನಿಜವಾದ ಅರ್ಥದಲ್ಲಿ ವಿಜೃಂಭಿಸಬೇಕು. ಸತ್ಯಬೀಜದ ಬೆಳೆಯನ್ನು ಬೆಳೆಸಿ ಉಳಿಸುವುದಕ್ಕೆ ವ್ಯಕ್ತಿ-ಸಮಾಜ-ರಾಷ್ಟ್ರಗಳು ಬದ್ಧಕಂಕಣರಾಗಬೇಕು. ಬೆಳೆಯುತ್ತಿರುವ ಧರ್ಮದ ಅಂಕುರಗಳಿಗೆ ನೀರೆರೆದು ಬೇಲಿಕಟ್ಟಿ ಕಾಯುವ ಧರ್ಮರಕ್ಷಕರೂ ಬೇಕು.  ಇದಷ್ಟೂ ಸತ್ಯವಾಗಬೇಕಾದರೆ ಮೊದಲನೆಯ ಹೆಜ್ಜೆಯಾಗಿ ಭಾರತೀಯವಾದ ಒಂದು ಶಿಕ್ಷಣ ಪದ್ಧತಿಯ ನಿರ್ಮಾಣವಾಗಬೇಕು. ಶಾಲಾ ಕಾಲೇಜಿಗೆ ಹೋದರೂ ಮನದಲ್ಲಿ ಋಷ್ಯಾಶ್ರಮದ ಕಾಲ ದೇಶವನ್ನು ಮುಟ್ಟಬೇಕು.  ಎ-ಬಿ-ಸಿ ಯ ಅಬ್ಬರವಿದ್ದರೂ ಭಾರತೀಯ ಕಲೆಯ ಬಳ್ಳಿಯು ಹಬ್ಬಬೇಕು.  ಅಂತಹ ಕೃತ ಯುಗಾದಿಯನ್ನು ಪುನಃ ಸಾಧಿಸುವ ಸಂಕಲ್ಪವನ್ನೂ, ಆ ನಿಟ್ಟಿನಲ್ಲಿ ಪರಿಶ್ರಮವನ್ನೂ ಅವಶ್ಯವಾಗಿ ಮಾಡತಕ್ಕದ್ದು. ಇದೇ  ಯುಗಾದಿಯ ಶ್ರೇಷ್ಠ ಸಂಕಲ್ಪ.


ಕೃತಯುಗಾದಿಯ ಬೀಜಾವಾಪನ ಮಾಡುವುದೇ ಜೀವನದ ಗುರಿಯಾಗಿ ಹೊಂದಿದ ಶ್ರೀರಂಗಮಹಾಗುರುಗಳ ಒಂದು ಪದ್ಯದೊಂದಿಗೆ ಯುಗಾದಿಯ ಶುಭಾಶಯ-ಸಂಕಲ್ಪಗಳನ್ನು ಹಂಚಿಕೊಳ್ಳುತ್ತಿದ್ದೇವೆ.

ಕಲೆಯ ಪೆಣ್ಣಿಗೆ ರಂಗದೆಡೆಯಿದು 

ಸಲೆ ನಲಿವುದಕೆ, ಸಿರಿಗೆ ವಸಿಸಲು

ನೆಲೆಯ ಮನೆಯಿದು ವೇದ ಧರ್ಮದ ಮೊಳಕೆಗಳು ಬೆಳೆದು । 

ಫಲಿಸುವುದಕಿದು ಮೇಣ್ ಶಮದಮದ-

-ಮಲ ಶಾಂತಿಗೆ ಬೀಡೆನಿಸಿ ಮೆರೆದ

ಲಲಿತ ಭಾರತ ಮರಳಿ ಬೆಳಗಲಿ ಸಗ್ಗಕೆಣೆಯಾಗಿ ।।

ಸೂಚನೆ : 10/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.