Monday, April 5, 2021

ಆರ್ಯಸಂಸ್ಕೃತಿ ದರ್ಶನ - 37 (Arya Samskruti Darshana - 37)

ಸ್ತ್ರೀ-ಶಿಕ್ಷಣದ ಒಂದು ರೂಪ -ರಂಗವಲ್ಲೀ
ಲೇಖಕರು ; ವಿದ್ವಾನ್|| ಛಾಯಾಪತಿ



ಸಾಕ್ಷರತೆ ಇಂದಿನ ವಿದ್ಯಾವಂತಿಕೆಯ ಅಳತೆಗೋಲಾಗಿದೆ. ಅಂತೆಯೇ ನಿರಕ್ಷರರನ್ನು ಸಾಕ್ಷರರನ್ನಾಗಿ ಮಾಡಲು ವಿಶ್ವಾದ್ಯಂತ ಪ್ರಯತ್ನಗಳು ನಡೆಯುತ್ತಿರುವುದು  ಕಂಡುಬರುತ್ತಿದೆ. ವಯಸ್ಕರ ಶಿಕ್ಷಣ, ಕಡ್ಡಾಯ ಶಾಲಾಶಿಕ್ಷಣ, ಹೀಗೆ ಬಗೆಬಗೆಯ ರೂಪದಲ್ಲಿ ಆಕ್ಷರ ಜ್ಞಾನವನ್ನು ಹರಡಲು ನಮ್ಮ ದೇಶದಲ್ಲಿಯೂ ಪ್ರಯತ್ನ ನಡೆದಿರುವುದು ಎಲ್ಲರಿಗೂ ತಿಳಿದ ಅಂಶವಾಗಿದೆ. ಅಕ್ಷರಸ್ಥರಲ್ಲದವರನ್ನು ಅಜ್ಞಾನಿಗಳೆಂದೂ, ಅನಾಗರಿಕರೆಂದೂ ಭಾವಿಸುವುದು ಎಲ್ಲೆಲ್ಲಿಯೂ ಕಂಡುಬರುತ್ತದೆ.                                                                              

ಆದರೆ ವಾಸ್ತವಿಕ ದೃಷ್ಟಿಯಿಂದ ಪರಿಶೀಲಿಸಿದಾಗ  ಅಕ್ಷರಜ್ಞಾನವಿಲ್ಲದವರನ್ನು ಜೀವನವಿವೇಕರಹಿತರೆಂದು ಭಾವಿಸುವುದು ತಪ್ಪಾಗುತ್ತದೆ. ಗ್ರಾಮೀಣ ಜನರಬಾಳಿನಲ್ಲಿಯೂ ಒಂದು ಅಚ್ಚುಕಟ್ಟಿದೆ. ಅವರವರ ವೃತ್ತಿಯ ಬಗೆಗೆ ಗೌರವವಿದೆ. ಜೀವನ ವ್ಯವಹಾರಗಳಲ್ಲಿ ಬೆಳೆದ ವಿವೇಕಪೂರ್ಣವಾದ ಅನೇಕ ಕಟ್ಟುಪಾಡುಗಳಿವೆ. ಇತ್ತೀಚೆಗೆ ಪ್ರಕಟವಾಗುತ್ತಿರುವ ಜನಪದ ಸಾಹಿತ್ಯಗಳೂ, ತತ್ತ್ವದ ಹಾಡುಗಳೂ, ನೀತಿ ಪದ್ಯಗಳೂ, ಗಾದೆ ಮಾತುಗಳು, ಅಕ್ಷರಸ್ಥರಾಗದಿದ್ದ ಮಾತ್ರಕ್ಕೆ ಆ ಜನರೇನೂ ಜೀವನ ವಿವೇಕ ಶೂನ್ಯರಲ್ಲ ಎಂಬಂಶಕ್ಕೆ ಸಾಕಷ್ಟು ದಾಖಲೆಯಾಗಿ ನಿಲ್ಲಬಲ್ಲವು.

ಮಹರ್ಷಿಗಳ ದೃಷ್ಟಿಯಲ್ಲಿ ಪ್ರತಿ ಜೀವಿಯ ಜೀವನವೂ ಜೀವನದ ಪರಮಲಕ್ಷ್ಯದತ್ತ ಸಾಗುವಂತೆ ಅಳವಡಿಸಿ ನೆಲೆ ಮುಟ್ಟಿಸುವುದೇ, ದಡಗಂಡು ಪಾರಂಗತನನ್ನಾಗಿಸುವುದೇ, ವಿದ್ಯಾವಂತಿಕೆಯ ಲಕ್ಷಣವಾಗಿತ್ತೇ ಹೊರತು, ಕೇವಲ ಓದು ಬರಹದ ಅರಿವಲ್ಲ. "ಸಾ ವಿದ್ಯಾ ಯಾ ವಿಮುಕ್ತಯೇ"  ಜೀವನದ ಕಟ್ಟುಕಳಚಿ ಜೀವಿಯು ತನ್ನ ನೆಲೆಯರಿತು ಬಾಳಲು ಅನುಗುಣವಾದುದೇ ವಿದ್ಯೆ ಎಂಬುದು ಅವರ ತೀರ್ಮಾನ, ಅಂತೆಯೇ ಅವರ ವಿದ್ಯೆಯ ಫಲ  " ವಿದ್ಯಯಾಮೃತಮಶ್ನುತೇ"  ವಿದ್ಯೆಯಿಂದ ಮೃತ್ಯುವನ್ನು ದಾಟಿ  ಅಮೃತನಾಗುತ್ತಾನೆ"-ಎಂಬುದೇ ಆಗಿದೆ. ಅಂತೆಯೇ "ಮೃತ್ಯೋರ್ಮಾಮೃತಂ ಗಮಯ" ಮೃತ್ಯುವಿನಿಂದ ನನ್ನನ್ನು ಅಮೃತತ್ತ್ವವನ್ನು ಹೊಂದಿಸು ಎಂಬುದು ನಾಡ ಪ್ರತಿ ಜೀವಿಯ ಪ್ರಾರ್ಥನೆಯೂ ಆಗಿದೆ. ಜೀವನದ ಈ ಲಕ್ಶ್ಯಪೂರೈಕೆಗೆ ಸಾಧನವಾದುದೆಲ್ಲವೂ ಅವರ ದೃಷ್ಟಿಯಿಂದ ವಿದ್ಯಾಭ್ಯಾಸ- ಸಾಕ್ಷರತೆಯೇ ಅವರ ವಿದ್ಯಾಭ್ಯಾಸ ಯೋಜನೆಯ ಸಾರಸರಸ್ವವಲ್ಲ.          

ಸ್ತ್ರೀಯರನ್ನು ಕೀಳಾಗಿ ಕಂಡು ಸ್ತ್ರೀವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಿಲ್ಲವೆಂಬ ಗುರುತರ ಆಪಾದನೆ ಭಾರತೀಯ ಮಹರ್ಷಿಗಳ ವಿದ್ಯಾ ಯೋಜನೆಯ ಮೇಲಿದೆ. .ಮೇಲಿನ ಹಿನ್ನೆಲೆಯಿಟ್ಟುಕೊಂಡು, ಬಾಳಲಕ್ಶ್ಯ ತಲುಪಲು, "ಗೃಹಿಣೀ ಗೃಹಮುಚ್ಯತೇ"-ಎಂಬುದಾಗಿ  ಮನೆಯೊಡತಿಯ ಸ್ಥಾನವನ್ನು ಅವಳಿಗೆ ನೀಡಿದ್ದಾರೆ. ಜೊತೆಗೆ ಬೆಳಗಿನಿಂದ ಸಂಜೆಯವರೆಗೆ ಅವಳು ನಡೆಸುವ ಗೃಹಕರ್ಮಗಳೆಲ್ಲದರಲ್ಲಿಯೂ ಬಾಳಲಕ್ಷ್ಯದ ನೆನಪನ್ನು ಹೆಜ್ಜೆ ಹೆಜ್ಜೆಗೂ ನೀಡುವ ಮಹಾಯೋಜನೆ ಇರವುದು ಕಂಡುಬರುತ್ತದೆ. ಮನೆಯಲ್ಲಿ ಜ್ಞಾನದೀಪದ ಪ್ರತಿನಿಧಿಯಾಗಿ   ದೀಪವನ್ನು ಬೆಳಗುವ ಮಹಾಲಕ್ಷ್ಮೀ ಆಕೆ.  ಆತ್ಮಭಾವಕ್ಕೊಪ್ಪುವ  ಶುಚಿಯನ್ನು ಕಾಪಾಡುವಾಕೆ. ಷಡ್ರಸಗಳ ಯೋಜನೆಯಿಂದ, ವಿವಿಧ ಪ್ರಕೃತಿಗನುಗುಣವಾಗಿ  ಪಾಕವನ್ನೇರ್ಪಡಿಸುವುದೂ ಆಕೆಯ ಕಲೆ. ಬಾಳನ್ನು ತಂಪಾಗಿಡುವ ಮಧುರಗಾನಗಳಿಂದ, ಗೃಹಶೋಭಾಕರಗಳಾದ ರಂಗವಲ್ಲಿಯಿಂದ ಗೃಹವನ್ನು ಅಲಂಕರಿಸುವ ಕಲಾವತಿ ಅವಳು, ಅವಳ ಮಂಗಳಾಭರಣಗಳು, ವಸ್ತ್ರ, ಲಲಾಟತಿಲಕಗಳು, ಈ ಎಲ್ಲದರಲ್ಲಿಯೂ ಅಂತಸ್ಸತ್ಯಗಳ ರಹಸ್ಯ ಸೂತ್ರವನ್ನು ಯೋಜಿಸಿ, ಲಕ್ಷ್ಮೀಸ್ವರೂಪಿಣಿಯಾಗಿ ಕಂಡು ಗೌರವಿಸಿದವರು ಭಾರತೀಯ ಮಹರ್ಷಿಗಳು.            

ಗೃಹಕರ್ಮವಿನಿಯುಕ್ತಳಾದ ಗೃಹಿಣಿಯ ಒಂದೊಂದು ಕರ್ಮದಲ್ಲಿಯೂ ವಿದ್ಯಾಜೀವನದ ಪರಮಲಕ್ಷ್ಯವನ್ನು ಮುಟ್ಟಲು ಬೇಕಾದ ವಿಧಾನವನ್ನು ಜ್ಞಾನಿಗಳು ಅಳವಡಿಸಿರುವುದು ಕಂಡುಬರುತ್ತದೆ. ಪ್ರಕೃತ ಗೃಹಾಲಂಕಾರವಾಗುವ ರಂಗವಲ್ಲಿ ಕಲೆ ಹೇಗೆ ಆ ಯೋಜನೆಯನ್ನೊಳಗೊಂಡಿದೆ ಎಂಬಂಶವನ್ನು ವಿವೇಚಿಸುವುದು ಈ ಸಂಕ್ಷಿಪ್ತ ಬರಹದ ಉದ್ದೇಶವಾಗಿದೆ.

ರಂಗವಲ್ಲಿಯ ವಿನ್ಯಾಸ ಗೃಹಿಣಿಯ ದಿನಚರಿಯ ಅಂಗವಾಗಿದೆ. ಬಾಗಿಲಿನಲ್ಲಿ ರಂಗವಲ್ಲಿಯಿಡದಿದ್ದರೆ ಅಶುಭವೆಂಬ ಭಾವನೆ ಬಹು ವ್ಯಾಪಕವಾಗಿ ಬೆಳೆದಿದೆ. ರಂಗವಲ್ಲಿ ಕೇವಲ ಗೃಹಾಲಂಕಾರದಲ್ಲಿ ಮಾತ್ರವೇ ಅಲ್ಲ, ದೇವತಾರಾಧನೆಯಲ್ಲಿ, ವಿವಾಹ, ಉಪನಯನಾದಿ ಸಂಸ್ಕಾರಗಳಲ್ಲಿ, ವ್ರತೋಪವಾಸಾದಿಗಳಲ್ಲಿ, ಹೀಗೆ ಧಾರ್ಮಿಕ ಜೀವನದ ಪ್ರತಿಹಂತದಲ್ಲಿಯೂ ಗಣ್ಯ ಪಾತ್ರ ವಹಿಸುತ್ತದೆ. ಷಟ್ಕೋಣ, ಅಷ್ಟದಳಪದ್ಮ, ಶಂಖ, ಚಕ್ರ, ತ್ರಿಶೂಲಾದಿ ಆಯುಧ ವಿನ್ಯಾಸ, ಷೋಡಶದಳ ಪದ್ಮ, ಬಗೆ ಬಗೆಯ ಬಳ್ಳಿಗಳ ವಿನ್ಯಾಸ, ಸ್ವಸ್ತಿಕ, ಸರ್ವತೋಭದ್ರಾ ಮಂಡಲಗಳು, ಹೀಗೆ ಬಗೆಬಗೆಯ ವಿನ್ಯಾಸಗಳು ರಂಗವಲ್ಲಿಯಲ್ಲಿ ಬಳಕೆಗೆ ಬಂದಿವೆ. ಜೊತೆಗೆ ಬೇರೆಬೇರೆಯಾದ ವಿನ್ಯಾಸಗಳೂ ಉಂಟು. ಒಟ್ಟಿನಲ್ಲಿ ರಂಗವಲ್ಲಿಯ ಪಾತ್ರವಿಲ್ಲದ ವೈದಿಕರ್ಮ ಗಳೇ ಇಲ್ಲವೆಂದರೆ ತಪ್ಪೇನೂ ಆಗದು.

ಈ ಎಲ್ಲ ವಿನ್ಯಾಸಗಳೂ ಆಯಾ ಸಂದರ್ಭಕ್ಕೆ ತಕ್ಕಂತೆ ವಿಶಿಷ್ಟಾರ್ಥಗಳನ್ನೊಳಗೊಂಡಿದ್ದರೂ ಪ್ರತಿದಿನದ ಗೃಹಾಲಂಕಾರ ವಿನ್ಯಾಸವಾದ ಷಟ್ಕೋಣ ವಿನ್ಯಾಸ ಜೀವನದ ರಹಸ್ಯವನ್ನು ಬಿಂಬಿಸುತ್ತದೆಂಬುದನ್ನು ಗಮನಿಸಬಹುದು. ಸಮಬಾಹು ತ್ರಿಕೋಣಗಳೆರಡು, ಪರಸ್ಪರ ಬಾಹುಗಳನ್ನು ಸಮಾರ್ಧದಲ್ಲಿ ಸಂಧಿಸಿದಾಗ ಷಟ್ಕೋಣ ವಿನ್ಯಾಸವು ಏರ್ಪಡುತ್ತದೆ. ಷಟ್ಕೋಣದ   ಮಧ್ಯೆ ಒಂದು ಬಿಂದುವಿರುತ್ತದೆ. ಇದರ ಮೇಲೆ ಪದ್ಮಗಳನ್ನೂ ವಿಸ್ತರಿಸುವುದುಂಟು ಇದು ಸಾಮಾನ್ಯ ಗೃಹಾಲಂಕಾರ.

ಈ ಷಟ್ಕೋಣ  ವಿನ್ಯಾಸವು ತನ್ನ ಜೀವನ ಮತ್ತು ಅದರ ಲಕ್ಷ್ಯವನ್ನೂ ಪ್ರತೀಕಿಸುತ್ತದೆ. ತನ್ನ ಜೀವನದ ಪ್ರತಿಬಿಂಬವೇ ಆಗಿದೆ -ಎಂಬಂಶ ಇಂದು ಮರೆಯಾಗಿದೆ.   ಜ್ಞಾನಿಗಳು ಒಳಮಾರ್ಗದಲ್ಲಿ ಸಂಚರಿಸುವಾಗ ಅವರ ಎರಡು ಹುಬ್ಬುಗಳ ನಡುವೆ ಕೊಂಚ ಮೇಲ್ಬಾಗದಲ್ಲಿ ಪ್ರಣವರೂಪವಾಗಿ ಗೋಚರವಾಗುವ ಬಿಂದುವೊಂದುಂಟು. ಸೃಷ್ಟಿ ಸಂಕಲ್ಪವನ್ನೊಳಗೊಂಡ ಆ ಬಿಂದುರೂಪವಾದ ಭಗವಚ್ಛಕ್ತಿಯೂ ತನ್ನನ್ನೇ ವಿಸ್ತರಿಸಿಕೊಳ್ಳಬಯಸಿದಾಗ ಎರಡಾಗುತ್ತದೆ. ಅದೇ ಎರಡು ಬಿಂದು ರೂಪವಾದ ವಿಸರ್ಗ. ಬಿಂದು ಶಿವನ ರೂಪವಾದರೆ, ವಿಸರ್ಗವು ಶಕ್ತಿಯ ರೂಪ, ಈ ಪುರುಷ ಪ್ರಕೃತಿಗಳು ಸೃಷ್ಟಿಗೆ ಅನುಗುಣವಾಗಿಯೂ ಸೇರಬಹುದು. ಅಂತೆಯೇ ವಿಲೀನಕ್ಕನುಗುಣವಾಗಿಯೂ ಸೇರಬಹುದು, ಶಿವ-ಶಕ್ತಿಯರ ಲಕ್ಷ್ಯಗಾಮಿಯಾದ ನಡೆಯನ್ನು ಮೇಲ್ಕೋಣವುಳ್ಳ ತ್ರಿಕೋಣವೂ, ಅಂತೆಯೇ ಸೃಷ್ಟಿಗೆ ಅನುಗುಣವಾದ ನಡೆಯನ್ನು ಅಧಃಕೋಣತ್ರಿಕೋಣವೂ ಸೂಚಿಸುತ್ತದೆ. ಅಂತೆಯೇ ಈ ಎರಡಕ್ಕೂ ಕಾರಣವಾದುದು ಬಿಂದುವೆಂಬುದನ್ನು ಕೇಂದ್ರದಲ್ಲಿರುವ ಬಿಂದುವು ಸೂಚಿಸುತ್ತದೆ.

ಜ್ಞಾನಿಗಳ ನೋಟಕ್ಕೆ ಸಿಲುಕಿದರೆ ಶಿವ-ಶಿವೆಯರ ವಿಕಾಸ ರೂಪವಾದ ಸೃಷ್ಟಿಯನ್ನು ಸೂಚಿಸುವುದರ ಜೊತೆಗೆ, ಇದರಲ್ಲೇ ಸಿಲುಕಿ ಬೀಳದೇ, ಪುರುಷ-ಪ್ರಕೃತಿಗಳ ಸೇರುವೆ ಜೀವನದ ಲಕ್ಷ್ಯ ಸಾಧನೆಗೆ ಅನುಗುಣವಾಗಿರಬೇಕು-ಎಂಬಂಶವನ್ನೂ ಈ ವಿನ್ಯಾಸ ಸ್ಫುಟಪಡಿಸುತ್ತದೆ.  ಎಂದರೆ ಪರವನ್ನು ಮರೆಯದ ಇಹದ ಬಾಳಾಟದತ್ತ ಸೂಚನೆ ನೀಡುತ್ತದೆ. ಅಂತೆಯೇ ಜೀವನದ ಶಿವ-ಶಕ್ತಿ ಚತ್ರರೂಪವಾದ ಶ್ರೀಚಕ್ರಾತ್ಮಕವಾಗಿರುವುದು ಜ್ಞಾನಿಗಳ ಅಂತರ್ದೃಷ್ಟಿ ಗೋಚರವಾದ ಸತ್ಯ.  ಆ ಶ್ರೀ ಚಕ್ರದ ಸಂಕ್ಷಿಪ್ತ ರೂಪವೇ ಈ  ಷಟ್ಕೋಣ  ವಿನ್ಯಾಸ.

ಈ ವಿನ್ಯಾಸವನ್ನು ಗೃಹಾಂಗಣದಲ್ಲಿಡುವಾಗ ತನ್ನ ಜೀವನದ ರಹಸ್ಯ ಇಂತಹುದು. ಇದರ ಗುಟ್ಟಿಂತು.  ಈ ಧ್ಯೇಯಬದ್ಧವಾಗಿ ಯೋಗ-ಭೋಗಗಳಿಂದ ಸಮೃದ್ಧ ಬಾಳಾಟವನ್ನು ಸೂಚಿಸುವ ಸಂಕೇತವೂ ಇದಾಗಿದೆ. ಅಂತೆಯೇ ಇದು ಕಣ್ಣಿಗೆ ಸೊಗಸುವ ವಿಷಯ ಮಾತ್ರವಲ್ಲದೆ,  ಅಲಂಕಾರ ಜೀವನಕ್ಕೆ ಇಷ್ಟು ಸಾಕು ಎಂಬಂಶವನ್ನು ಸಾರುವ ವಿಧಾನದಿಂದಲೂ ಅಲಂಕಾರವಾಗಿದೆ. ತನ್ನನ್ನು ತನ್ನ ಬಾಳನ್ನೂ ಬಾಳಲಕ್ಷ್ಯವನ್ನೂ ನೆನಪಿಗೆ ತಂದುಕೊಟ್ಟು ಆ ಲಕ್ಷ್ಯದತ್ತ ಸೆಳೆಯುವ ವಿನ್ಯಾಸವುಳ್ಳ ರಂಗವಲ್ಲಿಯ ಕಲೆ ನೆಲೆ ಮುಟ್ಟಲನುಗುಣವಾದ ಮನೋಧರ್ಮವನ್ನುಂಟುಮಾಡುವ ಕಲೆಯಾಗಿದೆ ಎಂಬುದು ಗಮನಾರ್ಹ. ಈ ವಿನ್ಯಾಸದ ಮೂಲಕ ಬಾಳಮರ್ಮವನ್ನು ಗೃಹಿಣಿಗೆ ತೋರಿಸಿಕೊಟ್ಟ ಯೋಜನೆ ಜ್ಞಾನಿಗಳದು. ಅಂತಹ ಮಹರ್ಷಿಗಳಿಗೆ ನಮಿಸಿ, ಜ್ಞಾನಿಗಳ ಪರಮಾಂತರಂಗವಾದ ಕಲಾಂತರಂಗವನ್ನು ನನ್ನ ಮನಸ್ಸಿಗೆ ತಂದುಕೊಟ್ಟ, ಈ ಬರಹದ ಸ್ಫೂರ್ತಿಕೇಂದ್ರವಾದ, ಶ್ರೀರಂಗಮಹಾಗುರುವಿಗೆ ಈ ಬರಹವನ್ನರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:03 ಸಂಚಿಕೆ: 09 ಜುಲೈ 1981 ತಿಂಗಳಲ್ಲಿ  ಪ್ರಕಟವಾಗಿದೆ.