Thursday, April 1, 2021

ನಮ್ಮೊಳಗಿನ ನಾದ (Nammolagina Nada)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದೆ ಒಂದು ಕಾಲದಲ್ಲಿ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಕೇಳುತ್ತಿದ್ದ ರೇಡಿಯೋವನ್ನು, ಒಬ್ಬ ಹುಡುಗನು ಮನೆಯ ಅಟ್ಟದ ಒಂದು ಮೂಲೆಯಿಂದ  ಎತ್ತಿಕೊಂಡು ಬಂದನು. ಅದು ತುಂಬಾ ಧೂಳಾಗಿದ್ದುದರಿಂದ, ಅದನ್ನು ಬಟ್ಟೆಯಿಂದ ಒರೆಸಿ ಶುಚಿಗೊಳಿಸಿದನು. ಥಂಡಿ ಹಿಡಿದಿದ್ದ  ರೇಡಿಯೋವನ್ನು ಬಿಸಿಲಿಗೆ ಸ್ವಲ್ಪ ಹೊತ್ತು ಇಟ್ಟನು. ರೇಡಿಯೋವಿನ ಬ್ಯಾಟೆರಿಯನ್ನು  ಬದಲಿಸಿದನು. ಸ್ವಲ್ಪ ಸಮಯದ ನಂತರ ಬಾನುಲಿಪ್ರಸಾರ ಆರಂಭವಾಯಿತು. ಅದರ ಮುಂದೆ ಇದ್ದ ಚಕ್ರಾಕೃತಿಯನ್ನು(knob) ತಿರುಗಿಸಿದಂತೆ, ಪ್ರದರ್ಶಕದ ಮೇಲಿದ್ದ ಒಂದು ಮುಳ್ಳು ಚಲಿಸಲಾರಂಭಿಸಿತು. ಪ್ರದರ್ಶಕದ ಮೇಲಿದ್ದ ತರಂಗಾಂತರದ ಸಂಖ್ಯೆಗಳನ್ನು ಗುರುತಿಸಿಕೊಂಡನು. ಒಂದು ತುದಿಯಿಂದ ಮುಳ್ಳನ್ನು ಬಲಕ್ಕೆ ಸರಿಸುತ್ತಾ ಬಂದಾಗ, ಯಾವುದೋ ಒಂದು ತರಂಗಾಂತರಕ್ಕೆ ಮುಳ್ಳು ಬಂದು ನಿಂತಾಗ, ಆ ತರಂಗಾಂತರದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಕೇಳಿಸತೊಡಗಿತು. ಸ್ವಲ್ಪ ಹೊತ್ತು ಆಲಿಸಿ, ನಂತರ ಮುಂದೆ ಸಾಗಿದಾಗ ಇನ್ನೊಂದು ಕಾರ್ಯಕ್ರಮ ಕೇಳಿಸತೊಡಗಿತು. ಹಾಗೆಯೇ ಹಲವಾರು ಜಾಗಗಳಲ್ಲಿ ಕಾರ್ಯಕ್ರಮಗಳನ್ನು ಕೇಳಿ ಸಂತೋಷದಿಂದ ಆಸ್ವಾದಿಸಿದನು.

ಹಿಂದೆ ಒಂದು ಕಾಲದಲ್ಲಿ, ಮಹರ್ಷಿಗಳ ಪರಂಪರೆಯಲ್ಲಿ ಇಂದ್ರಿಯಗಳನ್ನು ನಿಗ್ರಹಗೊಳಿಸಿ ಅಂತರ್ಮಾರ್ಗದಲ್ಲಿ ಸಾಗುವ ಪ್ರವೃತ್ತಿಯಿತ್ತು. ಹಾಗೆ ಸಾಗಿದಾಗ, ರೇಡಿಯೋವಿನ ಮುಳ್ಳು ಒಂದೊಂದು ಜಾಗ ತಲುಪಿದಾಗ, ಒಂದೊಂದು ಕಾರ್ಯಕ್ರಮ ನಮಗೆ ಕೇಳಿಸಿದಂತೆ, ಅಂತರಂಗದ ಒಂದೊಂದು ಸ್ಥಿತಿಗಳಲ್ಲೂ ನಾದಗಳನ್ನು ಮಹರ್ಷಿಗಳು ಕೇಳಿದರು. ಇಂತಹ ಅಂತ:ಶ್ರವಣದ ನಾದವನ್ನು ನಮ್ಮವರೆಗೂ ತಂದು, ನಮ್ಮನ್ನು ಆ ಸ್ಥಿತಿಗೆ ಒಯ್ಯಲು, ನಾನಾ ವಾದ್ಯಗಳನ್ನೊಳಗೊಂಡ ಭಾರತೀಯ ಸಂಗೀತವನ್ನು ತಂದರು. ಇನ್ನೂ ಕೆಲವು  ಸ್ಥಿತಿಗಳಲ್ಲಿ ಹಾಗೆಯೇ ಹಲವಾರು ವಾಕ್ಯಗಳು ತಾನಾಗಿಯೇ  ಶ್ರುತವಾದವು. ಅವುಗಳನ್ನು ಶ್ರುತಿಯೆಂದು (ವೇದಗಳೆಂದು) ಕರೆದರು. ಹಾಗೆಯೇ ಮುಂದೆ ಸಾಗಿದಾಗ ಒಂದು ಅನಾಹತ( ಪದಾರ್ಥಗಳ ಘರ್ಷಣೆ ಇಲ್ಲದೆ ಕೇಳಿಬರುವ)ವಾದ ನಾದದ ಶ್ರವಣವನ್ನು ಮಾಡಿದರು. ಅದನ್ನು ಪ್ರಣವವೆಂದು ಕರೆದರು.

ಇಂದು ನಮ್ಮ ದೇಹಯಂತ್ರವೂ ಕೂಡ, ಹಾಳಾಗಿರುವ ರೇಡಿಯೋದಂತೆಯೇ ಆಗಿದೆ. ಹುಡುಗನು ರೇಡಿಯೋವನ್ನು ಕೇಳಲು ಸಿದ್ಧಪಡಿಸಿದಂತೆ, ನಮ್ಮ ದೇಹವನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಬೇಕಾದ ಬಗೆ-ಬಗೆಯ ಅಷ್ಟೂ ಸಂಸ್ಕಾರಗಳನ್ನು ನಮ್ಮ ಮಹರ್ಷಿಗಳು ನಮ್ಮ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯಗಳಲ್ಲಿ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ವಾದ್ಯಗಳ ಆಕಾರ, ಹಾಗೂ ಅವುಗಳನ್ನು ನಿರ್ಮಿಸುವ ದ್ರವ್ಯದಿಂದ ಮೊದಲುಗೊಂಡು, ಅದು ಹೊರಹೊಮ್ಮಿಸುವ ನಾದ ಹಾಗೂ ಆ ನಾದದ ಪರಿಣಾಮಗಳು ಅಂತರಂಗದ ನಾದದೆಡೆಗೆ ಕೊಂಡೊಯ್ಯುವಂತೆ ಶ್ರಮಿಸಿದ್ದಾರೆ. ಅಂತರಂಗದಲ್ಲಿ ತಾನೇ ತಾನಾಗಿ ಕೇಳುವ ಶ್ರುತಿಯು, ಜ್ಞಾನಿಗಳ ಬಾಯಿಂದ ಶ್ರುತವಾಗುತ್ತಿರುವಂತೆಯೇ , ಕಂಠಸ್ಥ  ಮಾಡುವ (ಪುಸ್ತಕವಿಲ್ಲದೆ) ಪದ್ಧತಿಯನ್ನು ರೂಢಿಸಿದ್ದರು. ಪ್ರಣವವನ್ನು ನಮ್ಮೆಲ್ಲರಿಗೂ ಮೂಲವೆಂದು ಮನಗಂಡು ಹಾಗೂ ನಾವು ತಲುಪಬೇಕಾದ ಗಮ್ಯಸ್ಥಾನವೆಂದು ಗುರುತಿಸಿ, ನಮ್ಮ ಎಲ್ಲಾ ಆಚಾರ-ವಿಚಾರ ಸಂಪ್ರದಾಯಗಳು ಓಂಕಾರದಿಂದಲೇ ಆರಂಭಗೊಂಡು ಮತ್ತು ಅದರಲ್ಲಿಯೇ ಪರಿಸಮಾಪ್ತಿ ಹೊಂದುವ ಪದ್ಧತಿಯನ್ನು ಹಾಕಿಕೊಟ್ಟರು.

"ಪ್ರಣವವು ಇಂದ್ರಿಯ ಸಂಯಮ ಮಾಡಿ ಹೋದಾಗ ಕೇಳಿಬರುವ ಧ್ವನಿ, ಜ್ಞಾನಿಗಳು ತಮ್ಮದೇ ಆದ ಸ್ಥಿತಿಯಲ್ಲಿ, ದಹರಕುಹರದಲ್ಲಿ(ಅಂತರಂಗದಲ್ಲಿ), ಒಳಗಿವಿಯಲ್ಲಿ, ಕೇಳುವ ಸದ್ದು." ಎಂದು ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದರು. ಈ ಅಂತರ್ನಾದಗಳನ್ನು ಬಾಹ್ಯ ಪ್ರಪಂಚಕ್ಕೆ ತರಲು ಶ್ರಮಪಟ್ಟ ನಮ್ಮ ಮಹರ್ಷಿಗಳ ಪರಿಶ್ರಮವನ್ನು ಮರೆಯದಿರೋಣ.

ಸೂಚನೆ: 1/4/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.