Thursday, April 22, 2021

ವ್ಯಕ್ತಿ ಪೂಜೆ ನಿಂದ್ಯವೋ? ವಂದ್ಯವೋ? (Vyakti Pooje Nindyavo? Vandyavo?)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಇಂದು ಲೋಕದಲ್ಲಿ ಅನೇಕ ವ್ಯಕ್ತಿಗಳನ್ನು ಪೂಜೆ ಮಾಡುವುದು ಕಂಡುಬರುತ್ತದೆ. ರಾಜಕೀಯ ಪ್ರಮುಖರನ್ನು ಅವರಿಂದಾಗಬೇಕಾದ ಅನುಕೂಲಗಳ ನಿರೀಕ್ಷೆಯಿಂದ ಪೂಜೆ ಮಾಡುತ್ತಾರೆ. ಸಿನೆಮಾ ತಾರೆಗಳನ್ನು ಇಷ್ಟಪಟ್ಟು ಅವರನ್ನೂ ಪೂಜೆ ಮಾಡುವವರನ್ನೂ ನೋಡುತ್ತೇವೆ. ಆಯಾ ಮತಗಳ ಪ್ರವರ್ತಕರನ್ನು-ಪ್ರಮುಖರನ್ನು, ಜಾತಿಗಳ ಪ್ರಮುಖರನ್ನು, ಸಿದ್ಧಾಂತಗಳ ನಿರೂಪಕರನ್ನು, ಆಧ್ಯಾತ್ಮಿಕ ಮಾರ್ಗದರ್ಶಕರನ್ನು- ಹೀಗೆ ಒಂದೇ ಎರಡೇ- ವ್ಯಕ್ತಿ ಪೂಜೆ ಎಲ್ಲೆಲ್ಲೂ ನಡೆದಿರುವುದನ್ನು ನೋಡುತ್ತೇವೆ. ನಾವು ಯಾರನ್ನು ಹೀರೋ ಎಂದುಕೊಳ್ಳುತ್ತೇವೋ ಅವರನ್ನೆಲ್ಲ ಪೂಜೆ ಮಾಡುವುದನ್ನು ನೋಡುತ್ತೇವೆ. ಹೀರೋ ವರ್ಶಿಪ್ ಎನ್ನುವ ಪದವೂ ಪ್ರಸಿದ್ಧವಾಗಿದೆ. ಹೀಗೆ ಪೂಜೆ ಮಾಡಿಸಿಕೊಳ್ಳುವುದು ದೊಡ್ಡಸ್ತಿಕೆಯ ಕುರುಹಾಗಿ ಇರುವುದನ್ನೂ ಕಾಣುತ್ತೇವೆ. ಎಷ್ಟೆಷ್ಟು ಹೆಚ್ಚು ಜನ ಪೂಜೆ ಮಾಡುತ್ತಾರೋ ಅಷ್ಟಷ್ಟು ಹಿರಿಮೆ ಆಯಾ ವ್ಯಕ್ತಿಗಳದ್ದು ಎಂಬಂತಾಗಿರುವುದನ್ನೂ ನೋಡುತ್ತೇವೆ.
ವ್ಯಕ್ತಿಪೂಜೆ-ಹೃದಯ ದೌರ್ಬಲ್ಯದ ಲಕ್ಷಣ:
ಇನ್ನೊಂದೆಡೆ ಈ ಬಗೆಯ ವ್ಯಕ್ತಿ ಪೂಜೆ ನಿಂದನೀಯ. ಹೃದಯ ದೌರ್ಬಲ್ಯದ ಲಕ್ಷಣ. ವಿಚಾರವಂತರಿಗೆ ಸಲ್ಲದಿರುವುದು ಎಂಬ ಮಾತೂ ಹೆಚ್ಚಾಗಿಯೇ ಕೇಳಿಬರುತ್ತಿದೆ. ನಮ್ಮಂತೆ ಇರುವ ವ್ಯಕ್ತಿಗಳನ್ನು ಪೂಜಿಸುವುದು ಎಷ್ಟು ವಿಚಿತ್ರ? ಇದರಲ್ಲಿ ವಿವೇಕವಂತೂ ಇರಲು ಸಾಧ್ಯವಿಲ್ಲ. ಭಾವುಕರಾಗಿ ಯಾರು ಯಾರನ್ನೋ ದೇವರನ್ನು ಪೂಜಿಸಿದಂತೆ ಪೂಜಿಸುವುದು ಬುದ್ಧಿಯ ದಿವಾಳಿತನವಲ್ಲದೆ ಮತ್ತೇನು? ವ್ಯಕ್ತಿ ಎಂದೂ ಪರಿಪೂರ್ಣನಲ್ಲ. ಆ ಪೂಜೆ ಅಪರಿಪೂರ್ಣತೆಯ ಪೂಜೆಯಾಗುತ್ತದೆ. ಅಲ್ಲದೆ, ವ್ಯಕ್ತಿಯನ್ನು ಪೂಜಿಸುವುದರಿಂದ ಅವನ ಅಹಂಕಾರ ಹೆಚ್ಚುತ್ತದೆ. ಪ್ರಜಾಪ್ರಭುತ್ವದಲ್ಲಂತೂ ಎಲ್ಲರೂ ಸಮಾನರು. ಯಾರೋ ಒಬ್ಬನನ್ನು ಶ್ರೇಷ್ಠ ಎಂದು ಪರಿಗಣಿಸಿ ಪೂಜಿಸುವುದೇ ಅಪರಾಧ. ಸನ್ಯಾಸಿಗಳನ್ನು, ಗುರುಗಳನ್ನು ಪಾದತೊಳೆದು ಪೂಜಿಸುವುದಂತೂ ಮತಿಹೀನತೆಯ ಪರಮಾವಧಿ. ಭಾವಾತಿರೇಕ. ಇವೊತ್ತಿನ ಆಧುನಿಕ ಜಗತ್ತಿನಲ್ಲಂತೂ ಇಂತಹ ಕಲ್ಪನೆಯೇ ಅಸಹ್ಯ. ಗುಲಾಮಗಿರಿಯ ಸಂಕೇತ. ಪರಿಪೂರ್ಣನಾದವನು ದೇವರು ಮಾತ್ರ. ಹಾಗೆಂದೇ ದೇವರನ್ನು, ಭಗವಂತನನ್ನು ಪೂಜಿಸಬೇಕೇ ಹೊರತು, ನಮ್ಮಂತೆ ನಡೆದಾಡುವ ವ್ಯಕ್ತಿಗಳನ್ನಲ್ಲ. ಹೌದು. ಇವೆಲ್ಲವೂ ಸರಿಯೆಂದೇ ಅನ್ನಿಸುತ್ತದೆ. ವ್ಯಕ್ತಿ ಪೂಜೆಯನ್ನು ಬುಡಸಹಿತ ಕಿತ್ತೊಗೆಯಬೇಕು ಎಂದೆನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.ಆದರೂ ಈ ವಿಷಯವನ್ನು ವಿಚಾರ ಪೂರ್ವಕವಾಗಿ ಚಿಂತಿಸಬೇಕಾಗಿದೆ.

ಪೂಜೆ ಎಂದರೇನು?
ಪೂಜ್ ಧಾತು ಗೌರವ ಎಂಬ ಅರ್ಥವನ್ನು ಹೊಂದಿದೆ. ಪೂಜೆ ಎಂದರೆ ಗೌರವಿಸುವುದು. ನಮಗೆ ಪರಿಚಿತರನ್ನು ನೋಡಿದಾಗ ಅವರಿಗೂ ನಮಗೂ ಇರುವ ಸಂಬಂಧದ ಮೇಲೆ ನಾವು ಅವರಿಗೆ ಕೊಡುವ ಗೌರವ ಅವಲಂಬಿತವಾಗಿದೆ. ನಮಗಿಂತ ಹಿರಿಯರಿಗೆ ಕೊಡುವ ಗೌರವ ಒಂದು ಬಗೆಯದಾದರೆ ನಮ್ಮ ಸಮಾನ ವಯಸ್ಕರಿಗೆ, ಸ್ನೇಹಿತರಿಗೆ ಕೊಡುವ ಗೌರವದ ರೀತಿ ಬೇರೆಯದಾಗಿರುತ್ತದೆ. ಹಾಗೆಯೇ ಭಗವಂತನಿಗೆ ಕೊಡುವ ಗೌರವ ಭಗವಂತನ ಪೂಜೆಯಾಗುತ್ತದೆ. ಗೌರವ ಕೊಡುವುದು ಕೃತಕವಾಗಿ ಅಭ್ಯಾಸ ಮಾಡಿ ಬರುವ ಕ್ರಿಯೆಯಲ್ಲ. ಸಹಜವಾಗಿ ನಾವು ಒಬ್ಬರನ್ನು ಕಂಡಾಗ ನಮ್ಮಲ್ಲಿ ಅಪ್ರಯತ್ನದಿಂದಾಗುವ ಕ್ರಿಯೆಯಾಗಿದೆ.

ದೇವರ ಪೂಜೆ ಎಂದರೇನು?
ಮಹರ್ಷಿಗಳು ಯೋಗಮಾರ್ಗದಲ್ಲಿ ಹಿಂದೆ ಹಿಂದಕ್ಕೆ ಸಾಗಿ ಜೀವನದ ಮೂಲನೆಲೆಯಾದ ಭಗವಂತನನ್ನು ಕಂಡಾಗ ಅವರಲ್ಲಾದ ಸಹಜವಾದ ಪ್ರತಿಕ್ರಿಯೆಯೇ ನಿಜಕ್ಕೂ ಭಗವಂತನ ಪೂಜೆ. ಅದನ್ನು ಅವರು ಜೀವಲೋಕದ ಮೇಲಿನ ಕರುಣೆಯಿಂದ, ಎಲ್ಲರೂ ತಮ್ಮೊಳಗಿನ ಭಗವಂತನನ್ನು ಕಂಡು ಆನಂದಿಸುವಂತಾಗಲಿ ಎಂಬುದಕ್ಕಾಗಿ ಲೋಕದಲ್ಲಿ ತಂದಿದ್ದಾರೆ. ಆದರೆ ಭಗವಂತನನ್ನು ಪೂಜಿಸಿದಂತೆ ವ್ಯಕ್ತಿಗಳನ್ನೇಕೆ ಪೂಜಿಸಬೇಕು? ದೀಪವನ್ನು ತೆಗೆದುಕೊಂಡು ಬನ್ನಿ ಎಂದರೆ ಹಣತೆಯೊಂದಿಗೇ ತರಬೇಕಾಗುತ್ತದೆ. ಹಣತೆ ಇಲ್ಲದೆ ಬರಿಯ ದೀಪವನ್ನು ತರಲಾಗದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ಎಳನೀರನ್ನು ತೆಗೆದುಕೊಂಡು ಬಾ ಎಂದರೆ ಹೊರಗಿನ ಮಟ್ಟೆ ಸಹಿತವಾಗಿಯೇ ತರಬೇಕು ಮಟ್ಟೆ ಇಲ್ಲದೆಯೇ ಎಳನೀರು ತರಲಾಗದು. ಹಾಗೆಯೇ ಭಗವಂತನೂ ವ್ಯಕ್ತಿಗಳ ಮೂಲಕ ನಮ್ಮ ಉದ್ಧಾರಕ್ಕಾಗಿ ವ್ಯಕ್ತನಾಗುವುದುಂಟು. ಆಗ ಅಂತಹ ವ್ಯಕ್ತಿಗಳು ದೀಪವನ್ನು ಹೊತ್ತ ಹಣತೆಯಂತೆ, ಎಳನೀರನ್ನು ಹೊತ್ತ ಮಟ್ಟೆಯಂತೆ, ವಿಶ್ವ ಚೈತನ್ಯನಾದ, ಆನಂದ ಸಾಗರನಾದ ಭಗವಂತನನ್ನು ಹೊತ್ತು ಪುಣ್ಯಶ್ಲೋಕರಾಗುತ್ತಾರೆ. ಅಂತಹ ವ್ಯಕ್ತಿಗಳ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಮ್ಮೊಳಗೆ ಭಗವಂತನನ್ನು ತುಂಬಿಕೊಂಡಂತಹ ವ್ಯಕ್ತಿಗಳಲ್ಲಿ ಭಗವಂತನೇ ವ್ಯಕ್ತವಾಗುತ್ತಾನೆಯೇ ಹೊರತು ಅವರ ಮೈ ಕೈಗಳ ಉಬ್ಬುತಗ್ಗುಗಳಲ್ಲ.  ವ್ಯಕ್ತಿ ಪೂಜೆ ಬೇಕೇ, ಬೇಡವೇ ಎಂದು ನಿರ್ಧರಿಸಬೇಕಾದರೆ ಅವರು ಯಾವ ಭಾವವನ್ನು ವ್ಯಕ್ತಗೊಳಿಸುತ್ತಿದ್ದಾರೆ ಎಂಬುದನ್ನು ನೋಡಿ ನಿಶ್ಚಯಿಸಬೇಕಾಗುತ್ತದೆ. ಯಾರ ಶರೀರದ ಒಂದೊಂದು ರೋಮ ಕೂಪಗಳೂ ಭಗವನ್ಮಯವಾಗಿದೆಯೋ ಅಂತಹ ವ್ಯಕ್ತಿಗಳು ನಿಜಕ್ಕೂ ಪೂಜೆಗೆ ಅರ್ಹರು. ಅಂತಹವರ ಪೂಜೆಯಿಂದ ನಮ್ಮ ಮೈ ಮನಸ್ಸುಗಳಲ್ಲಿ ಭಗವದ್ಧರ್ಮ ಹರಿದು ನಮ್ಮ ನೆಲೆಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿಪೂಜೆ ಅಪೇಕ್ಷಣೀಯವೇ. ರಾಮನಾಗಲೀ, ಕೃಷ್ಣನಾಗಲೀ ಅವರವರ ಕಾಲದಲ್ಲಿ ವ್ಯಕ್ತಿಗಳಾಗಿಯೇ ಬಂದವರು. ಆದರೆ ನಾವಿಂದು ಅವರ ಚಿತ್ರಪಟಕ್ಕೋ, ಶಿಲಾಮೂರ್ತಿಗೋ ಪೂಜೆ ಮಾಡುವುದನ್ನು ನೋಡುತ್ತೇವೆ. ಅದನ್ನು ವ್ಯಕ್ತಿಪೂಜೆಯೆಂದು ನಿಂದಿಸುವುದಿಲ್ಲ.

ಭಗವಂತನೂ ತತ್ತ್ವಮಯವಾಗಿಯೇ ಕಾಣಿಸಿಕೊಳ್ಳಬೇಕು:
ಭಗವಂತನು ನಮ್ಮ ಮುಂದೆ ಕಾಣಿಸಿಕೊಳ್ಳಬೇಕಾದರೆ ಇಪ್ಪತ್ನಾಲ್ಕು ತತ್ತ್ವಗಳ ಜೊತೆಯಲ್ಲಿಯೇ ಕಾಣಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವನು ಅವ್ಯಕ್ತನಾಗಿಯೇ ಇದ್ದು ಬಿಡಬೇಕಾಗುತ್ತದೆ. ಅವನು ಹಾಗೆ ಕಾಣಿಸಿಕೊಂಡಾಗ ನಮಗೆ, ಇವನು ನಮ್ಮಂತೆಯೇ ಇದ್ದಾನಲ್ಲ ಎಂದೆನಿಸಿಬಿಡುತ್ತದೆ. ಆದರೆ ಅವನು ತನ್ನ ಸಂಕಲ್ಪದಿಂದ ನಮ್ಮ ಉದ್ಧಾರಕ್ಕಾಗಿ ನಮ್ಮಂತೆ ಕಾಣಿಸಿಕೊಂಡು, ನಮ್ಮನ್ನು ತನ್ನ ಧಾಮಕ್ಕೆ ಸೆಳೆದೊಯ್ಯಲು ಬಂದಿದ್ದಾನೆ ಎಂಬುದರ ಅರಿವಾಗುವವರೆಗೂ ನಾವು ಭ್ರಮೆಯಲ್ಲಿಯೇ ಇರುತ್ತೇವೆ. ಹಾಗೆಯೇ ತಮ್ಮ ತಪಸ್ಯೆಯಿಂದ ಭಗವಂತನನ್ನು ಕಂಡು ಅವನ ದರ್ಶನದ ಆನಂದವನ್ನು ಮೈ ಮನಸ್ಸುಗಳಲ್ಲೆಲ್ಲಾ ತುಂಬಿಕೊಂಡು ನಮಗೂ ಅದನ್ನು ಹರಿಸುವ ಶಕ್ತಿಯುಳ್ಳ ಜ್ಞಾನಿಗಳನ್ನು ಪೂಜಿಸಿದಾಗಲೂ ನಮಗೆ ಲೌಕಿಕವಾದ  ವ್ಯಕ್ತಿಪೂಜೆ ಎನ್ನಿಸಬಾರದು..


 ಶ್ರೀ ಕೃಷ್ಣನು ಗೀತೆಯಲ್ಲಿ ಅಪ್ಪಣೆ ಕೊಡಿಸಿದಂತೆ - 
ಅವಜಾನಂತಿ ಮಾಂ ಮೂಢಾಃ ಮಾನುಷೀ ತನುಮಾಶ್ರಿತಂ, ಪರಂಭಾವಮಜಾನಂತಃ ಮಮಭೂತ ಮಹೇಶ್ವರಂ||. ಮನುಷ್ಯನ ಶರೀರವನ್ನು ಹೊತ್ತು ಬಂದಿದ್ದ ಕಾರಣದಿಂದ ಕೃಷ್ಣನನ್ನೂ ಇತರರಂತೆಯೇ ಮನುಷ್ಯನೆಂದು ಅವನ ಕಾಲದಲ್ಲೂ ಭಾವಿಸಿದವರುಂಟು. ಆದರೆ ಆ ಮಾನುಷ ಭಾವದ ಹಿಂದಿನ ಪರಭಾವ, ಪರಾತ್ಪರ ಭಾವ ಆಗಲೂ ಜ್ಞಾನಿಗಳಿಗೆ ಮಾತ್ರ ಅನುಭವವಾಗಿದ್ದುದನ್ನು ಕಾಣುತ್ತೇವೆ. ವ್ಯಕ್ತಿಯು ಪರಭಾವವನ್ನು ವ್ಯಕ್ತಗೊಳಿಸುತ್ತಿದ್ದರೆ ನಮ್ಮ ಜೀವನದ ಉದ್ಧಾರಕ್ಕೆ, ಆ ಪರಭಾವಕ್ಕೆ ನಾವೂ ಏರುವುದಕ್ಕಾಗಿ ಅಂತಹ ವ್ಯಕ್ತಿಯ ಪೂಜೆ ಅವಶ್ಯವಾಗಿ ಮಾಡಬೇಕು. ಹಾಗಿಲ್ಲದೆ ನಮ್ಮಂತೆ ಇಂದ್ರಿಯಗ್ರಾಮಗಳಲ್ಲೇ ಸಂಚರಿಸುವ ವ್ಯಕ್ತಿಗಳನ್ನು ಪೂಜೆಮಾಡುವುದರಿಂದ ಯಾವ ಪ್ರಯೋಜನವೂ ಇರದು. ಜೀವನದ ನೆಲೆ ಮುಟ್ಟದವನನ್ನು ಪೂಜೆ ಮಾಡಿದರೆ ಅವನಂತೆ ನಾವೂ ಬರಿಯ ಇಂದ್ರಿಯ ಕ್ಷೇತ್ರದಲ್ಲೇ ಓಡಾಡುತ್ತಿರಬೇಕಾಗುತ್ತದೆ. ಮೇಲೆ ಹೇಳಿದಂತೆ ಅದು ಮತಿಹೀನತೆ, ಹೃದಯ ದೌರ್ಬಲ್ಯದ ಸಂಕೇತವಾಗುತ್ತದೆ. ಮಾತ್ರವಲ್ಲದೆ ದುರ್ಗುಣಯುಕ್ತರಾದ ವ್ಯಕ್ತಿಗಳ ಪೂಜೆಯಿಂದ ನಮ್ಮಲ್ಲೂ ದುರ್ಗುಣಗಳ ದುರಾಕ್ರಮಣ ನಡೆಯುವ ಅಪಾಯವಿರುತ್ತದೆ. ಅಂತಹ ವ್ಯಕ್ತಿಪೂಜೆ ನಿಜಕ್ಕೂ ನಿಂದನೀಯ.ಹಾಗೆಂದೇ ವ್ಯಕ್ತಿಪೂಜೆ ಬೇಕೇ ಬೇಡವೇ ಎಂಬುದಕ್ಕೆ ಉತ್ತರ ಬೇಕು ಬೇಡ ಎರಡೂ ಆಗುತ್ತದೆ.

ಪ್ರಾಣಪ್ರತಿಷ್ಠೆ:
ದೇವಾಲಯದ ಶಿಲಾಮೂರ್ತಿಯನ್ನಾದರೋ ಜ್ಞಾನಿಗಳೇ ತಮ್ಮ ಪ್ರಾಣಪ್ರತಿಷ್ಠೆಯಿಂದ ಅದನ್ನು ಪೂಜಾಯೋಗ್ಯವನ್ನಾಗಿ ಮಾಡಿರುತ್ತಾರೆ. ಮಹಾಜ್ಞಾನಿಯಾದವನು ಪರಿಪೂರ್ಣ ಸ್ಥಿತಿಯಲ್ಲಿದ್ದುಕೊಂಡು ತನ್ನ ಪ್ರಾಣವನ್ನದರಲ್ಲಿಡಬೇಕು. ಆಗಲೇ ಪ್ರಾಣಪ್ರತಿಷ್ಠೆಯಾಗಿದೆ ಎನ್ನುವುದಕ್ಕೆ ವಿಷಯ. ಅವನ ಆತ್ಮಶಕ್ತಿಯನ್ನು ಅಲ್ಲಿಡದಿದ್ದರೆ, ಅದು ಬರಿಯ ಕಲ್ಲು. ಎಂದಮೇಲೆ ಅಂತಹ ಚೈತನ್ಯಶಕ್ತಿಯು ಪೂರ್ತಿಪೂರ್ತಿಯಾಗಿ, ಜೀವಂತವಾಗಿ ಕೆಲಸ ಮಾಡುತ್ತಿರುವ ಜ್ಞಾನಿಗಳನ್ನು ಪೂಜಿಸಲು, ನಮಗೆ ನಮ್ಮಂತೆಯೆ ಇರುವವರನ್ನು ಪೂಜಿಸುವುದು ಹೇಗೆ ಎನ್ನಿಸಿಬಿಡುತ್ತದೆ. ಅವರು ಗತಿಸಿ ಹೋಗಿ ಎಷ್ಟೋ ಕಾಲವಾಗಿ ನಂತರ ಶಿಲೆಯಾದ ಮೇಲೆಯೇ ನಮಗೆ ಇದು ದೇವರು ಎಂಬ ನಂಬಿಕೆ ಬರುವುದು.ಇದು ನಮ್ಮಲ್ಲಿರುವ ದೋಷವೆಂದೇ ತಿಳಿಯಬೇಕು.

ಜ್ಞಾನಿಗಳ ಪೂಜೆ ಹೃದಯ ದೌರ್ಬಲ್ಯವಲ್ಲ:
ಅಂತಹ ಜ್ಞಾನಿಗಳ ಪಾದ ತೊಳೆದು ಪೂಜೆಮಾಡುವುದು ಭಾವಾತಿರೇಕವಲ್ಲ ಅದು ಭಾವಗಾಂಭೀರ್ಯ. ನಿಜಕ್ಕೂ ನದಿ, ಜಲಾಶಯಗಳನ್ನು ತೀರ್ಥವಾಗಿ ಮಾಡುವವರೂ ಸಹ ಜ್ಞಾನಿಗಳೇ. ಅವರ ಆತ್ಮ ಸಂಕ್ರಮಣದಿಂದಲೇ ಆ ನೀರು ತೀರ್ಥವಾಗಿ ಪರಿಣಮಿಸುತ್ತದೆ. ಅಂಥಹವರ ಪುಣ್ಯ ಪಾದಗಳ ತೀರ್ಥ ಸೇವನೆ ನಮ್ಮನ್ನು ಭವ ಸಾಗರದಿಂದ ದಾಟಿಸುತ್ತದೆ. ಎಂದಮೇಲೆ ಅದು ಹೃದಯ ದೌರ್ಬಲ್ಯವಲ್ಲ. ಹೃದಯವಂತಿಗೆ. ಅದು ಅಪರಿಪೂರ್ಣತೆಯ ಪೂಜೆಯಲ್ಲ, ಬದಲಿಗೆ ಪರಿಪೂರ್ಣತೆಯೆಡೆಗೆ ಸಾಗಲು ನಾವಿಡುವ ಹೆಜ್ಜೆ. ಅಂತಹವರ ಪೂಜೆಯಿಂದ ಅವರ ಅಹಂಕಾರ ಹೆಚ್ಚುವುದಿಲ್ಲ, ನಮ್ಮ ಅಹಂಕಾರ ಕಡಿಮೆಯಾಗಿ ಮೈ ಮನಸ್ಸುಗಳು ಹಗುರವಾಗುತ್ತವೆ. ಅದು ಬುದ್ಧಿಯ ದಿವಾಳಿತನವಲ್ಲ. ವ್ಯವಸಾಯಾತ್ಮಕವಾದ ಬುದ್ಧಿವೈಭವ. ಶ್ರೀಮದ್ಭಾಗವತದಲ್ಲಿ ಅಪ್ಪಣೆ ಕೊಡಿಸುವಂತೆ-" ನಹ್ಯಮ್ಮಯಾನಿ ತೀರ್ಥಾನಿ ನ ದೇವಾ ಮೃಚ್ಚಿಲಾಮಯಾಃ | ತೇ ಪುನನ್ತ್ಯುರುಕಾಲೇನ ದರ್ಶನಾದೇವ ಸಾಧವಃ || (ನೀರಿನಿಂದ ತುಂಬಿದ ಜಲಾಶಯಗಳು ಪ್ರಭಾವಶಾಲಿಗಳಾದ ದೇವರಲ್ಲ. ಮಣ್ಣು ಅಥವಾ ಕಲ್ಲುಗಳಿಂದಾಗಿ ದೇವರೆಂದು ಪೂಜಿಸಲ್ಪಡುವ ದೇವತಾ ವಿಗ್ರಹಗಳು ದೇವರಲ್ಲ. ಅವು ಬಹಳ ಕಾಲಾನಂತರ ನಮ್ಮನ್ನು ಪಾವನಗೊಳಿಸುತ್ತವೆ. ಜ್ಞಾನಿಗಳಾದರೋ ದರ್ಶನಮಾತ್ರದಿಂದಲೇ ಪಾವನಗೊಳಿಸುತ್ತಾರೆ).

ಬ್ರಹ್ಮಜ್ಞಾನಿಯು ದರ್ಶನದಿಂದ ಕತ್ತಲೆಯನ್ನು ನಾಶಮಾಡಬಲ್ಲನು:
ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರ ಭಗವತ್ಪಾದರ ಮಾತನ್ನು ಜ್ಞಾಪಿಸಿಕೊಳ್ಳುವುದಾದರೆ- " ಸಾವಿರಾರು ಅಗ್ನಿಗಳು, ಚಂದ್ರರು, ಸೂರ್ಯರು ಯಾವ ಕತ್ತಲೆಯನ್ನು ನಾಶಪಡಿಸಲಾರರೋ ಅಂತಹ ಕತ್ತಲೆಯನ್ನು ಬ್ರಹ್ಮಜ್ಞಾನಿಯು ತನ್ನ ಪ್ರಸನ್ನವಾದ ನೋಟಮಾತ್ರದಿಂದ ನಾಶಪಡಿಸಬಲ್ಲನು" ಎಂದಿದ್ದಾರೆ. ಅಂತಹವರೇ ನಿಜಕ್ಕೂ ದೇವರ ಪೂಜೆಗೆ ವಿಷಯವಾಗಿದ್ದಾರೆ.

ಕೃಷ್ಣ-ಶಿಶುಪಾಲರು:
ಶಿಶುಪಾಲನೂ ಕೃಷ್ಣನನ್ನು ತನ್ನಂತೆಯೇ ಎಂದು ಭಾವಿಸಿದ. ಏಕೆಂದರೆ ಅವನದೂ ಮಾನುಷೀ ತನು, ಇವನದೂ ಮಾನುಷೀ ತನು. ಅಷ್ಟರವರೆಗೆ ಸಮಾನತೆ ಇದೆ. ಆದರೆ ಅವನು ಪಶುಪಾಲ, ಇವನು ಶಿಶುಪಾಲ ಎಂಬ ಅರಿವು ಶಿಶುಪಾಲನಿಗಾಗಲಿಲ್ಲ. ಮಾನುಷ ಭಾವದಿಂದ ಏನೇನನ್ನು ಮಾಡಿದರೆ ಅಪರಾಧ ಎಂದು ಜನಜನಿತವಾಗಿದೆಯೋ ಅದನ್ನೆಲ್ಲ ಆ ತನುವನ್ನು ಧರಿಸಿ ಬಂದ ಕೃಷ್ಣನೂ ಮಾಡಿದ್ದರಿಂದ ಕೃಷ್ಣನನ್ನೂ ಅಪರಾಧಿ ಎಂದನು. ಆದರೆ ಆ ಮಾನುಷೀ ತನುವು ಹೊತ್ತ ಪರ ಭಾವದ ಅರಿವು ಅವನಿಗೆ ಇರಲಿಲ್ಲ. ಹೇಗೆ ಭೂಮಿಯಲ್ಲಿನ ಉಬ್ಬುತಗ್ಗುಗಳು ಆಕಾಶಮಾರ್ಗದಲ್ಲಿ ಅನ್ವಯಿಸುವುದಿಲ್ಲವೋ ಹಾಗೆಯೇ ಪರಭಾವದ ನಡೆಗಳು ಮಾನುಷ ಭಾವದಲ್ಲಿ ಅನ್ವಯಿಸುವುದಿಲ್ಲ. ವಿಮಾನವು ಆಕಾಶದಲ್ಲಿ ಹಾರುವಾಗ ಯಾವ ಅಡೆ ತಡೆಗಳೂ ಅದಕ್ಕಿರುವುದಿಲ್ಲ. ಅಂತೆಯೇ ಭೂಪ್ರದೇಶಕ್ಕೆ ಬರುವಾಗ ಅಲ್ಲಿನ ಪರ್ವತಪ್ರದೇಶ, ಸಮತಟ್ಟಾದ ಜಾಗ ಇತ್ಯಾದಿಗಳಿಗನುಗುಣವಾಗಿ ಮೇಲೆ ಕೆಳಗೆ ಎಲ್ಲ ಮಾಡಬೇಕಾಗುತ್ತದೆ. ಹಾಗೆಯೇ ಕೃಷ್ಣನ ಪರಭಾವಕ್ಕನುಗುಣವಾದ ನಡೆಯೆಲ್ಲವನ್ನೂ ಮಾನುಷ ಭಾವದಿಂದ ನೋಡಲಾಗದು. ಜೀವಿಗಳ ಉದ್ಧಾರಕ್ಕಾಗಿಯೇ ಅವನ ಜೀವಿತದ ಸಮಸ್ತ ವ್ಯಾಪಾರವೂ ಇದ್ದಿತೆಂಬುದು ಇಲ್ಲಿ ಗಮನಾರ್ಹ. ಆ ಅರಿವಿದ್ದ ಜ್ಞಾನಿಯಾದ ಭೀಷ್ಮನು ಅವನಿಗೇ ಅಗ್ರ ಪೂಜೆಯಾಗಬೇಕು ಎಂದನು. ಅದು ಪರಮಾತ್ಮನ ಪೂಜೆಯೇ ಹೊರತು ಶಿಶುಪಾಲನೆಂದುಕೊಂಡ ಸಾಮಾನ್ಯ ವ್ಯಕ್ತಿಯ ಪೂಜೆಯಲ್ಲ.

ಅಂತಹವರನ್ನು ತಿಳಿಯುವುದು ಹೇಗೆ?
ಈಗ ಅಂತಹವರನ್ನು ನಾವು ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಬರುವುದು ಸ್ವಾಭಾವಿಕ. ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಸಂಕಲ್ಪ ಮಾಡಿದಾಗ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲ ಹುಡುಕಿಕೊಂಡು ಹೋಗುವುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಡಾಕ್ಟರಾಗಬೇಕು ಎಂದು ಸಂಕಲ್ಪ ಮಾಡಿದರೆ ತತ್ಸಂಬಂಧವಾದ ಎಲ್ಲ ವಿಷಯಗಳನ್ನೂ ಆಸ್ಥೆಯಿಂದ ಏಕ ನಿಷ್ಠೆಯಿಂದ ಹುಡುಕಿ, ಅಂತಹ ವಿದ್ಯಾಭ್ಯಾಸಗಳೆಲ್ಲವನ್ನೂ ಮಾಡಿ ನಮ್ಮ ಆಸೆಯನ್ನು ಈಡೇರಿಸಿಕೊಳ್ಳುವುದಿಲ್ಲವೇ? ಹಾಗೆಯೇ ನಮ್ಮ ಜೀವನದ ಪರಮ ನೆಲೆಯನ್ನು ಹೊಂದಬೇಕೆಂಬ ಮಹದಾಸೆ ನಮಗಿದ್ದರೆ, ಅದಕ್ಕೆ ಸಂಬಂಧಿಸಿದ ಮಾರ್ಗದರ್ಶಕರನ್ನೂ ಹುಡುಕಿಕೊಂಡು ಹೋಗುತ್ತೇವೆ. ನಮ್ಮ ಆಸೆ ಎಷ್ಟು ಬಲವತ್ತರವಾಗಿದೆಯೋ ಅಷ್ಟು ಬೇಗ ನಮಗೆ ಅಂತಹ ವ್ಯಕ್ತಿಗಳು ಸಿಗುತ್ತಾರೆ. ಒಳ್ಳೆಯ ವೈದ್ಯರು ಸಿಗದೇ ರೋಗಿ ಮೋಸ ಹೋದಂತೆ ಇಲ್ಲಿಯೂ ಆಗುವ ಸಂಭವವಿದ್ದೇ ಇದೆ. ಆದರೂ ಆರೋಗ್ಯದ ಅಪೇಕ್ಷೆ ನಮ್ಮನ್ನು ಒಳ್ಳೆಯ ವೈದ್ಯರನ್ನು ಹುಡುಕುವವರೆಗೂ ಬಿಡುವುದಿಲ್ಲವಲ್ಲವೇ? ಹಾಗೆಯೇ ಇಲ್ಲೂ ನಮ್ಮ ನೆಲೆಗಾಣುವ, ಅಪೇಕ್ಷೆ ಎಷ್ಟು ಬಲಿಷ್ಟವೋ ಅದರ ಮೇಲೆ ನಮಗೆ ಅಂತಹ ಜ್ಞಾನಿಗಳು ದೊರೆಯುವುದೂ ನಿಂತಿದೆ. ಅನೇಕ ಬಾರಿ ಅಂತಹ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದರೂ ನಮ್ಮ ಅರಿವಿಗೆ ಬರದಿರುವುದೂ ಉಂಟು. ಅರ್ಜುನನೂ ಸಹ ಕೃಷ್ಣನ ಜೊತೆಜೊತೆಯಲ್ಲಿಯೇ ಇದ್ದರೂ ಅವನನ್ನು ಕೇವಲ ತನ್ನ ಆತ್ಮೀಯ ಗೆಳೆಯನೆಂದು, ಪ್ರೀತಿಯ ಸಂಬಂಧಿಯೆಂದಷ್ಟೇ ತಿಳಿದಿದ್ದ. ಆದರೆ ಕೃಷ್ಣನ ಕೃಪೆಯಿಂದ ಯಾವಾಗ ಅವನ ನಿಜಸ್ವರೂಪದ ಅರಿವಾಯಿತೋ ಆಗ "ನಷ್ಟೋ ಮೋಹಃ ಸ್ಮೃತಿರ್ಲಬ್ದಾ ತ್ವತ್ಪ್ರಸಾದಾನ್ಮಯಾಚ್ಯುತ" ಎಂದು ಕೃತಜ್ಞತೆಯಿಂದ ಕೈ ಜೋಡಿಸುತ್ತಾನೆ. ಹೀಗೆಯೇ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಭಗವಂತನ, ಜ್ಞಾನಿಗಳ ಹಿಂಬದಿಯ ಶಕ್ತಿಯ ಅರಿವಾಗುವುದೂ ಸಹ ಅವರ ಕೃಪೆಯಿಂದ, ನಮ್ಮ ಸುಕೃತದಿಂದ ಆಗಬೇಕಾದ ವಿಷಯವಾಗಿದೆ.
ಭಗವಂತನನ್ನೇ ವ್ಯಕ್ತಪಡಿಸುವ ಅಂತಹ ವ್ಯಕ್ತಿಗಳು ನಮಗೆ ಒದಗಿಬರಲಿ ಎಂದು ಪ್ರಾರ್ಥಿಸೋಣ. 

ಸೂಚನೆ: 22/04/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.