Wednesday, April 21, 2021

ಅವತಾರಪುರುಷ ಶ್ರೀರಾಮ (Avatarapurusha Sri Rama)


ಶ್ರೀಮತಿ ಶ್ರೀವಿದ್ಯಾ .ಸಿ. ಭಟ್
(ಪ್ರತಿಕ್ರಿಯಿಸಿರಿ lekhana@ayvm.in)




ಒಬ್ಬ ಈಜು ಬಾರದಿರುವ ಮನುಷ್ಯ ಪ್ರವಾಹದಲ್ಲಿ ಸಿಲುಕಿದಾಗ ಈಜಿನಲ್ಲಿ ಪರಿಣಿತನಾದವನು ಬಂದು ಅವನೂ ಪ್ರವಾಹದಲ್ಲಿ ಇಳಿದು, ಪ್ರವಾಹಕ್ಕೆ ಸಿಲುಕಿರುವವನ ಕೈಯನ್ನು ಹಿಡಿದು, ತಾನು ಪ್ರವಾಹಕ್ಕೆ ಸಿಲುಕದೆ, ಪ್ರವಾಹದಲ್ಲಿ ಸಿಲುಕಿದವನನ್ನು ಪಾರು ಮಾಡುತ್ತಾನೆ. ಪಾರು ಮಾಡಿದವನ ಪೂರ್ಣ ಕಾರ್ಯವನ್ನು ನೋಡದಿದ್ದರೆ ಇವನೂ ಒಬ್ಬ ಪ್ರವಾಹದಲ್ಲಿ ನಮ್ಮಂತೆಯೇ ಸಿಲುಕಿರುವವನು ಎಂದಷ್ಟೇ ಪ್ರವಾಹದಲ್ಲಿರುವ ಮನುಷ್ಯರು ಭಾವಿಸಬಹುದು. ಹಾಗೆಯೇ ಲೌಕಿಕಜೀವನವನ್ನು ಮಾಡುತ್ತಿರುವ ಮನುಷ್ಯರ ಮಧ್ಯದಲ್ಲಿ  ಒಬ್ಬ ಅವತಾರಪುರುಷನು ಭೂಮಿಯಲ್ಲಿ ಅವತಾರ ಮಾಡಿದರೂ ಸಾಮಾನ್ಯ ಜನರಿಗೆ ಮಾತ್ರ ಮನುಷ್ಯನಂತೆಯೇ ಕಾಣುತ್ತಾನೆ. ಅಂತಹ ಅವತಾರಪುರುಷನ ಗುಣ, ನಡವಳಿಕೆಗಳನ್ನು ಗುರುತಿಸಲು ಸಾಮಾನ್ಯದೃಷ್ಟಿ ಸಾಲದು, ವಿಶೇಷವಾದ ತಪಸ್ಸಿನಿಂದ ಪಡೆದ ದೃಷ್ಟಿಯು ಬೇಕಾಗುತ್ತದೆ. ಅವತಾರ ಪುರುಷರು ಲೌಕಿಕವಾದ ಜೀವನವನ್ನೇ ಮಾಡುತ್ತಿದ್ದರೂ, ಅವರ ಜೀವನದ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತದೆ. ಈ ಪ್ರವಾಹದಿಂದ ಪಾರು ಮಾಡುವವನ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಟ್ಟು, ಅವತಾರಪುರುಷರಿಗೂ- ಸಾಮಾನ್ಯಮನುಷ್ಯರಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಮಹರ್ಷಿಗಳಾದ ವಾಲ್ಮೀಕಿಗಳು ಮೊದಲು ಬೇಡರಾಗಿದ್ದಾಗ ಶ್ರೀರಾಮನ ಆದರ್ಶವ್ಯಕ್ತಿತ್ವವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಬಹುಕಾಲ ತಪಸ್ಸನ್ನು ಆಚರಿಸಿ, ತಮ್ಮ ಜ್ಞಾನದೃಷ್ಟಿಯಿಂದ ಶ್ರೀರಾಮನ ಆದರ್ಶಗುಣಗಳನ್ನು ಗುರುತಿಸಿ, ಅವುಗಳನ್ನು ಹಾಗೆಯೇ ತಮ್ಮ ಮಹಾಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. 

 ಶ್ರೀರಾಮನಲ್ಲಿ ಜಿತೇಂದ್ರಿಯತ್ವವಿತ್ತು; ಸ್ಥಿತಪ್ರಜ್ಞತ್ವವಿತ್ತು; ತಪಸ್ಸಿನಿಂದ ಮಾತ್ರ ಅರಿತುಕೊಳ್ಳಬಹುದಾದ ಶ್ರೀರಾಮನ ನಡೆಯು, ಅವನ ಜೀವನದ ಒಂದೊಂದು ಹೆಜ್ಜೆಯೂ ಧರ್ಮಮಯವಾಗಿತ್ತು ಎಂಬುದನ್ನು ಅರಿತು 'ರಾಮೋ ವಿಗ್ರಹವಾನ್ ಧರ್ಮಃ' (ಮೂರ್ತಿಮತ್ತಾದ ಧರ್ಮವೇ ಶ್ರೀರಾಮನು)ಎಂದು ತಮ್ಮ ಕಾವ್ಯದಲ್ಲಿ ಕೊಂಡಾಡಿದ್ದಾರೆ, ವಾಲ್ಮೀಕಿಗಳು. ಶ್ರೀರಾಮನು ಆದರ್ಶಪುತ್ರ, ಆದರ್ಶ ಪತಿ, ಆದರ್ಶ ರಾಜ ಹಾಗೂ ಆದರ್ಶ ಮಿತ್ರನಾಗಿದ್ದಾನೆ.  ವಾಲ್ಮೀಕಿಗಳು ತಮ್ಮ ತಪೋದೃಷ್ಟಿಯಿಂದ ಕಂಡ ಶ್ರೀರಾಮನಲ್ಲಿದ್ದ ಧರ್ಮದ ನಡೆಯಿಂದ ಕೂಡಿದ ಸೂಕ್ಷ್ಮವಿಷಯಗಳನ್ನು ಗುರುತಿಸುವ ಮನಸ್ಸನ್ನು ಶ್ರೀರಾಮನೇ ಅನುಗ್ರಹಿಸಬೇಕೆಂದು ಪುಣ್ಯತಮವಾದ ಈ ಶ್ರೀರಾಮನವಮೀ ಶುಭಸಂದರ್ಭದಲ್ಲಿ ಶ್ರೀರಾಮನಲ್ಲೇ ಪ್ರಾರ್ಥಿಸೋಣ. 

ಸೂಚನೆ: 21/04/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.