Saturday, April 3, 2021

ಕಾವ್ಯದ ಪ್ರಯೋಜನಗಳು (Kavyada Prayojanagalu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


'ಪ್ರಯೋಜನಮನುದ್ದಿಶ್ಯ ನ ಮಂದೋಽಪಿ ಪ್ರವರ್ತತೇ', 'ಪ್ರಯೋಜನವಿಲ್ಲದೇ ಮಂದನೂ ಕೂಡ ಯಾವ ಕೆಲಸವನ್ನೂಮಾಡಲಾರನಷ್ಟೆ', ಎಂಬ ಮಾತು ಸರ್ವವಿದಿತ. ಕವಿಗಳು ಕಾವ್ಯಗಳನ್ನು ಏಕೆ ಬರೆದರು? ಅವುಗಳಿಂದ ಸಮಾಜಕ್ಕೆಆಗಬೇಕಾದ ಪ್ರಯೋಜನಗಳೇನು? ಎಂಬ ಕೆಲವು ಅಂಶಗಳು ವಿಮರ್ಶೆಗೆ ವಿಷಯವಾಗಬಹುದು. ಕೆಲವರಅಭಿಪ್ರಾಯದಂತೆ "ಕಾವ್ಯಗಳು ಕೇವಲ ಮನೋರಂಜನೆಯ ಸಾಧನಗಳು; ಕವಿಗಳು ತಮ್ಮ ವಾಕ್ಕೌಶಲವನ್ನು ಪ್ರದರ್ಶಿಸಲುಕಾವ್ಯಗಳನ್ನು ಬರೆದರು; ಇದು ಹಣಗಳಿಕೆಗಾಗಿ ಒಂದು ಮಾರ್ಗ; ಜೀವನವೃತ್ತಿಯಷ್ಟೆ" ಎಂಬ ಅಭಿಪ್ರಾಯಗಳು ಸಮಾಜದಲ್ಲಿ ಕೇಳಿ ಬರುತ್ತವೆ. ಕಾವ್ಯಪ್ರಕಾಶವೆಂಬ ಅಲಂಕಾರ ಶಾಸ್ತ್ರಗ್ರಂಥದಲ್ಲಿ ಆ ಗ್ರಂಥದ ಕರ್ತೃವೂ ಸಾಹಿತ್ಯ ವಿಮರ್ಶಕನೂ ಆದ ಮಮ್ಮಟನಿಂದ ರಚಿತವಾದ

'ಕಾವ್ಯಂ ಯಶಸೇ ಅರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ |

ಸದ್ಯಃ ಪರನಿರ್ವೃತಯೇ ಕಾಂತಾಸಮ್ಮಿತತಯಾ ಉಪದೇಶಯುಜೇ ||

ಎಂಬ ಶ್ಲೋಕದಲ್ಲಿ ಕಾವ್ಯಶಾಸ್ತ್ರದ ಆರು ಮುಖ್ಯಪ್ರಯೋಜನಗಳು ಸಂಕಲಿತವಾಗಿವೆ. ಅದರ ಪ್ರಕಾರ ಕಾವ್ಯಶಾಸ್ತ್ರವನ್ನುಯಶಸ್ಸಿಗಾಗಿ, ಧನಸಂಪಾದನೆಗಾಗಿ, ಲೋಕವ್ಯವಹಾರವನ್ನು ತಿಳಿಯಲು, ಅಮಂಗಳದ ನಾಶಕ್ಕಾಗಿ, ದುಃಖಮಯವಾದ ಸಂಸಾರಚಕ್ರದಿಂದ ಮೋಕ್ಷವನ್ನು ಪಡೆಯಲು ಮತ್ತು ಕಾಂತಾಸಮ್ಮಿತೆಯಂತೆ ಸಮಾಜಕ್ಕೆ ಶಿಕ್ಷಣ ನೀಡಲು ಎಂದು ತಿಳಿದುಬರುತ್ತದೆ. ಕಾವ್ಯಗಳಲ್ಲಿ ಇವುಗಳು ಹೇಗೆ ಪ್ರಕಟವಾಗಿವೆಯೆಂಬುವುದನ್ನು ನೋಡೋಣ.

ಯಶಸ್ಸಿಗಾಗಿ ಕಾವ್ಯ

ಸಾಮಾನ್ಯವಾಗಿ ಕವಿತ್ವವು ಎಲ್ಲರಲ್ಲಿಯೂ ಕಾಣಬರುವ ಗುಣವಲ್ಲ. ಶ್ವಾಸಹೋದರೂ ತ್ರಾಸವಿಲ್ಲದೇ ಪ್ರಾಸ ಸೇರಿಸಿ, ಸಣ್ಣಪುಟ್ಟ ಚುಟುಕುಗಳನ್ನು ಹೇಳಿ ಸಭೆಯನ್ನು ರಂಜಿಸಿ ಸಭಾಸದರ ಹೃನ್ಮನಗಳನ್ನು ಸೆಳೆಯುವ, ಸಭಾಸದರ ಗೌರವಕ್ಕೆ,ಬಿರುದು-ಬಾವುಲಿಗಳಿಗೆ ಪಾತ್ರರಾಗುವ ಕವಿಗಳು ಅನೇಕರು. ಆದ್ದರಿಂದ ಕಾವ್ಯರಚನೆಯಲ್ಲಿ ಮೊದಲನೆಯ ಪ್ರಯೋಜನಕೀರ್ತಿ ಅಥವಾ ಯಶಸ್ಸು. ಹತ್ತು ಜನರ ಮುಂದೆ ಕಾವ್ಯವನ್ನು ಓದಿ ಅವರಿಂದ 'ಭಲೆ' ಎನಿಸಿಕೊಳ್ಳಬೇಕೆಂಬುದು ಸಹಜವಾಗಿಪಾಂಡಿತ್ಯವಿರುವ ಎಲ್ಲರಿಗೂ ಇರುವ ಇಚ್ಛೆಯಾಗಿರುತ್ತದೆ.ಇನ್ನು ಮಹಾಕವಿಗಳ ದೃಷ್ಟಿಯಿಂದ ನೋಡುವುದಾದರೆ, ಅವರೆಂದೂ ಕೀರ್ತಿಕಾಮನೆಯಿಂದ ಕಾವ್ಯಗಳನ್ನು ಬರೆದಂತೆಕಾಣುವುದಿಲ್ಲ. ಯಶಸ್ಸು ಕೀರ್ತಿಗಳು ಅವರನ್ನರಸಿ ಬಂದಿವೆಯೇ ಹೊರತು, ಅವುಗಳ ಹಿಂದೆ ಓಡಿದವರು ಅವರಲ್ಲ ಇವರು. ಭವದಬೇಗೆಯಲ್ಲಿ ಬಳಲುತ್ತಿರುವ ಜನಕ್ಕೆ ಭವಭಂಜಕವಾಗಿಯೂ, ಸಭಾರಂಜಕವಾಗಿಯೂ ಇರುವ ಅವರ ಕೃತಿಗಳು ಸಹಜವಾಗಿಸಹೃದಯರ ಹೃನ್ಮನಗಳನ್ನು ತಣಿಸುವ, ಮನೋರಂಜನೆಯನ್ನು ಉಂಟುಮಾಡುವ, ತಂಗುದಾಣಗಳಾಗಿರುತ್ತವೆಯೆಂದರೆ ತಪ್ಪಾಗಲಾರದು. ಅಂತಹವರ ಸಾಲಿನಲ್ಲಿ ವಾಲ್ಮೀಕಿ-ವ್ಯಾಸ-ಭಾಸ-ಕಾಳಿದಾಸ-ಭಾರವಿಗಳಾದಿಯಾಗಿ ಅನೇಕರುಪ್ರಾತಃಸ್ಮರಣೀಯರು.

ಕಾವ್ಯರಚನೆಯಿಂದ ಜೀವಿಕೆಗಾಗಿ ಧನಲಾಭ

ಜೀವನಕ್ಕಾಗಿ ಮಾನವನು ಅನುಸರಿಸುವ ಅನೇಕ ಜೀವನವೃತ್ತಿಗಳಲ್ಲಿ ಕಾವ್ಯರಚನೆಯೂ ಒಂದು. ಐಶಾರಾಮಿಯಾದಭೋಗಮಯಜೀವನಕ್ಕಲ್ಲದಿದ್ದರೂ, ಧರ್ಮಮಯವಾದ ಜೀವನಕ್ಕೆ ಧನವು ಅತ್ಯಗತ್ಯ. ಸರಸ್ವತಿಯನ್ನು ಆರಾಧಿಸುವ ಕವಿಗಳುತಮ್ಮ ಜೀವನಕ್ಕೆ ಕಾವ್ಯಪ್ರಿಯರಾದ, ಧನವಂತರಾದ, ಮಹಾರಾಜರ ಆಸ್ಥಾನಗಳಲ್ಲಿ ಗೌರವವನ್ನು ಪಡೆದು,ಆಸ್ಥಾನಕವಿಗಳಾಗಿ ಬಾಳಿ ಬದುಕಿ, ಸಾಹಿತ್ಯಲೋಕಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಅನೇಕಬಾರಿ ಮಹಾರಾಜರುಗಳನ್ನುಹೊಗಳಿ 'ಜೋಡಿಶಾಲುಗಳನ್ನೂ', ಸುವರ್ಣನಾಣ್ಯಗಳನ್ನೂ, ಸುವರ್ಣಕಂಕಣಗಳನ್ನೂ, ಆಭರಣಗಳನ್ನೂ, ಜಮೀನುಗಳನ್ನೂ,ಬಳುವಳಿಯನ್ನಾಗಿ ಪಡೆಯುತ್ತಿದ್ದರೆಂಬುದು ಸರ್ವವಿದಿತವಾದ ವಿಷಯ.ಕವಿಗಳ ಜೀವನವೂ ಕೂಡ ಸಾಮಾನ್ಯರ ಜೀವನದಂತೆ ಅನೇಕ ವೇಳೆ ಸವಾಲುಗಳಿಂದ ಕೂಡಿರುತ್ತಿತ್ತೆಂಬುದನ್ನುಮರೆಯಬಾರದು. ಅಂತಹ ಸಂದರ್ಭಗಳಲ್ಲಿಯೂ ಕೂಡ ಎದೆಗುಂದದೇ, ತಮ್ಮ ಸೃಜನಾತ್ಮಕವಾದ ಬುದ್ಧಿಶಕ್ತಿಯಿಂದಸವಾಲುಗಳನ್ನು ಎದುರಿಸಿ ಯಶಸ್ಸನ್ನು ಪಡೆಯುತ್ತಿದ್ದರೆಂಬುದಕ್ಕೆ ಒಂದೆರಡು ನಿದರ್ಶನಗಳನ್ನು ನೋಡಬಹುದು.ಮಹಾರಾಜ ಭೋಜ, ಸ್ವತಃ ಕವಿ ಮತ್ತು ಕವಿತಾಪ್ರಿಯ. ಒಮ್ಮೆ ತನ್ನ ಸಭೆಗೆ ಬಂದ ರಾಜಶೇಖರ ಮತ್ತು ಕವಿಶೇಖರರಿಗೆ'ಇನ್ನುಮುಂದೆ ನೀವು ನನ್ನನ್ನು ನಿಂದಿಸಬೇಕು, ಪ್ರಶಂಸಿಸಬಾರದು' ಎಂಬ ಕಟ್ಟಾಜ್ಞೆಯನ್ನು ಮಾಡುತ್ತಾನೆ. ಇದನ್ನು ಕೇಳಿದಸಭಾಸದರೆಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ಮಹಾರಾಜನನ್ನು ನಿಂದಿಸುವುದೆಂದರೆ ಅದು ಸಾಮಾನ್ಯ ವಿಷಯವೇ ? 'ತಲೆದಂಡ'ವಲ್ಲದೆ ಮತ್ತೇನು ? ಎಂದು ಚಿಂತಾಕ್ರಾಂತರಾಗಿರಲು, ಕವಿ ರಾಜಶೇಖರನು ಎದ್ದು ನಿಂತು, ತತ್ಕ್ಷಣವೇಶ್ಲೋಕವೊಂದನ್ನು ರಚಿಸಿ ಹೇಳುತ್ತಾನೆ –

ಸರ್ವಜ್ಞ ಇತಿ ಲೋಕೋಽಯಂ ಭವಂತಂ ಭಾಷತೇ ವೃಥಾ |

ಪದಮೇಕಂ ನ ಜಾನೀಷೇ ವಕ್ತುಂ ನಾಸ್ತೀತಿ ಯಾಚಕೇ ||

"ಈ ಜನರು ನಿನ್ನನ್ನು ವ್ಯರ್ಥವಾಗಿ 'ಸರ್ವಜ್ಞ'ನೆಂದು ಕರೆಯುತ್ತಾರೆ. ಆದರೆ, ನೀನೆಲ್ಲಿಯ ಸರ್ವಜ್ಞ? ಏಕೆಂದರೆ, ಯಾಚಕನುನಿನ್ನ ಬಾಗಿಲಿಗೆ ಬಂದಾಗ 'ಇಲ್ಲ' ಎಂಬ ಒಂದು ಪದವನ್ನೂ ಆಡಲು ಬರುವುದಿಲ್ಲವಲ್ಲ ? ನೀನೆಂಥಾ ಸರ್ವಜ್ಞ ?"ಇದನ್ನು ಕೇಳಿದ ಕವಿಶೇಖರನು ತಾನೂ ಒಂದು ಪದ್ಯವನ್ನು ರಚಿಸಿ ಹೇಳುತ್ತಾನೆ –

ಸರ್ವದಾ ಸರ್ವದೋಽಸೀತಿ ಲೋಕೋಽಯಂ ಭಾಷತೇ ವೃಥಾ |

ನಾರಯೋ ಲೇಭಿರೇ ಪೃಷ್ಠಂ ನ ವಕ್ಷಃ ಪರಯೋಷಿತಃ ||


"ಈ ಲೋಕವು ನಿನ್ನನ್ನು 'ಯಾವಾಗಲೂ ಎಲ್ಲವನ್ನೂ ಕೊಡುವವನು' ಎಂದು ಕೊಂಡಾಡುತ್ತದೆ. ಯಾರಿಗೆ ಏನು ಕೊಟ್ಟಿದ್ದೀಯೇನೀನು ? ನಿನ್ನ ಶತ್ರುಗಳಿಗೆ ನೀನು 'ಬೆನ್ನು ಕೊಡಲಿಲ್ಲ' ಮತ್ತು ಪರಸ್ತ್ರೀಯರಿಗೆ 'ನಿನ್ನ ಹೃದಯವನ್ನು/ಆಲಿಂಗನವನ್ನುಕೊಡಲಿಲ್ಲ.'"(ಈ ಶ್ಲೋಕಗಳಲ್ಲಿ ಬಳಸಿರುವ 'ನಿಂದಾಸ್ತುತಿ' ಎಂಬ ಅಲಂಕಾರವು ಅಲಂಕಾರಶಾಸ್ತ್ರದಲ್ಲಿ ಪ್ರಸಿದ್ಧ. ಮೇಲ್ನೋಟಕ್ಕೆ ನೋಡಿದರೆಮಹಾರಾಜನನ್ನು ನಿಂದಿಸಿದಂತೆಯೇ ಆದರೂ, ಒಳಹೊಕ್ಕು ಆ ಶ್ಲೋಕಗಳ ಅರ್ಥವನ್ನು ಗಮನಿಸಿದಾಗ ಕವಿಗಳ ಶ್ಲೋಕರಚನೆಯ ಕೌಶಲವು ಪ್ರಕಾಶಕ್ಕೆ ಬರುತ್ತದೆ. ಇದನ್ನು ಕೇಳಿ ಸಂತೋಷಗೊಂಡ ಭೋಜರಾಜ ಆ ಇಬ್ಬರು ಕವಿಗಳಶ್ಲೋಕಗಳಿಗೆ ಅಕ್ಷರಲಕ್ಷ ನಾಣ್ಯಗಳನ್ನು ಕೊಟ್ಟು ಸನ್ಮಾನಿಸಿದನೆಂದೇ ವದಂತಿ.)ಕಾವ್ಯರಸವು ರಸಿಕರ, ಸಹೃದಯರ ತನುಮನಗಳನ್ನು ಸಂತೃಪ್ತಿಗೊಳಿಸುವುದರಲ್ಲಿ, ಮುದಗೊಳಿಸುವುದರಲ್ಲಿ ಸಂದೇಹವಿಲ್ಲ.ಬಲ್ಲವನೇ ಬಲ್ಲ ಕಾವ್ಯರಸವ. ಕಾವ್ಯರಸದಿಂದುಂಟಾಗುವ ಆನಂದಕ್ಕೆ ಸರಿಸಾಟಿಯುಂಟೇ ? ಕಾವ್ಯರಸದ ಮಹಿಮೆಯನ್ನುಎತ್ತಿ ಹಿಡಿಯುವ -–

ಕಾನ್ ಪೃಚ್ಛಾಮಃ ಸುರಾಃ ಸ್ವರ್ಗೇ ನಿವಸಾಮೋ ವಯಂ ಭುವಿ |

ಕಿಂ ವಾ ಕಾವ್ಯರಸಃ ಸ್ವಾದುಃ ಕಿಂ ವಾ ಸ್ವಾದೀಯಸೀ ಸುಧಾ ||


" ನಾವು ಭುವಿಯಲ್ಲಿ ವಾಸಿಸುತ್ತೇವೆ. ದೇವತೆಗಳು ಸ್ವರ್ಗದಲ್ಲಿ ವಾಸಿಸುತ್ತಾರೆ. ನಮಗೆ ಕಾವ್ಯರಸಾನುಭವವಿದೆ. ಆದರೆಸುಧೆಯನ್ನು ಸವಿದಿಲ್ಲ. ದೇವತೆಗಳು ಸುಧೆಯನ್ನು ಸವಿದಿದ್ದಾರೆ ಆದರೆ ಕಾವ್ಯರಸವನ್ನು ಆಸ್ವಾದಿಸಿಲ್ಲ. ಕಾವ್ಯರಸವು ಹೆಚ್ಚುಸ್ವಾದವೋ ? ಸುಧೆಯು ಹೆಚ್ಚು ಸ್ವಾದಿಷ್ಟವೋ ಯಾರನ್ನು ಕೇಳೋಣ" ಎಂಬ ಈ ಶ್ಲೋಕವು ಸ್ಮರಣೀಯ.
ಸೂಚನೆ : 3/04/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.