Saturday, April 10, 2021

ಯೋಗತಾರಾವಳಿ-2-ಲಯಮಾರ್ಗಗಳು(Yogataravali-2-Layamargagalu)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in) 



ಯೋಗತಾರಾವಳಿ - ಶ್ಲೋಕ 2


ಸದಾಶಿವೋಕ್ತಾನಿ…


ದಾಟಿದವ ದಾಟಿಸಿಯಾನು

ಒಂದು ಗುರಿಯನ್ನು ತಲುಪಲು ಹಲವು ಮಾರ್ಗಗಳಿರಬಹುದು. ಎಲ್ಲವೂ ಸಮವಲ್ಲ. ಕೆಲವು ಮಾರ್ಗಗಳು ಸುಗಮ, ಕೆಲವು ದುರ್ಗಮ. ಹಾಗಾದರೆ ಮಾರ್ಗಗಳೆಷ್ಟು? ನನಗೆ ಯಾವುದು ಸೂಕ್ತ? ಎಂದು ಮುಂತಾಗಿ ಪ್ರಶ್ನೆಗಳುಂಟಾಗಬಹುದು. ಇವಕ್ಕೆ ಉತ್ತರಹೇಳಬಲ್ಲವನೇ ಗುರು - ಆತನು ನಿಜವಾದ ಗುರುವೇ ಆಗಿದ್ದಲ್ಲಿ; ಸ್ವತಃ ಅನುಭವಿಯಾಗಿದ್ದಲ್ಲಿ. "ತಾನೇ ದಾಟಿಲ್ಲದವನು, ದಾಟಲಾರದವನು ಇತರರನ್ನು ಹೇಗೆ ದಾಟಿಸಬಲ್ಲ?" - ಎಂಬ ಪ್ರಶ್ನೆಯನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಶಿಷ್ಯರ ಗಮನಕ್ಕೆ ತರುತ್ತಿದ್ದರು. ತಾನೂ ದಾಟಿ ಇತರರನ್ನೂ ದಾಟಿಸುವುದು ಬಹಳ ಹಿರಿದಾದುದು ಎನ್ನುತ್ತಿದ್ದರು. "ಯೋಗದ ಮಹಾಮಾರ್ಗಗಳನ್ನೂ ಉಪಮಾರ್ಗಗಳನ್ನು ಅವರು ಬಹಳ ಚೆನ್ನಾಗಿ ಅರಿತಿದ್ದವರು"ಎಂದು ಅವರ ಶಿಷ್ಯರೇ ಆದ ಪೂಜ್ಯ ಶ್ರೀರಂಗಪ್ರಿಯಸ್ವಾಮಿಗಳು ಹಲವು ಬಾರಿ ನುಡಿದದ್ದುಂಟು.


ಶ್ರೀಕೃಷ್ಣನನ್ನು ಯೋಗೇಶ್ವರನೆಂದೂ, ಶಿವನನ್ನು ಯೋಗೀಶ್ವರನೆಂದೂ ಕರೆಯುವುದಿದೆ. ಶಯನವಾದ ಮೇಲೆ, ಬ್ರಾಹ್ಮ-ಮುಹೂರ್ತದಲ್ಲಿ ಏಳುತ್ತಲೇ ಪ್ರತಿದಿನವೂ ಕೃಷ್ಣನು ಆತ್ಮ-ಧ್ಯಾನದಲ್ಲಿ ಕೆಲಕಾಲವಿರುತ್ತಿದ್ದನು. ಆತನು ಉಪದೇಶಿಸಿದ ಗೀತೆಯು ಕರ್ಮಯೋಗ-ಭಕ್ತಿಯೋಗ- ಜ್ಞಾನಯೋಗಗಳನ್ನು ಬೋಧಿಸುತ್ತದೆ. ಇಡೀ ಗೀತೆಯೇ ಒಂದು ಯೋಗಶಾಸ್ತ್ರ. ಅದರ ಒಂದೊಂದಧ್ಯಾಯವೂ ಒಂದು ಯೋಗವೇ. ಹಾಗೆಂದೇ ಪ್ರತಿಯೊಂದಧ್ಯಾಯದ ಕೊನೆಯಲ್ಲೂ

ಹೇಳಲಾಗುತ್ತದೆ: "ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ<..> ಯೋಗೋ ನಾಮ<..> ಅಧ್ಯಾಯಃ"


ಎಷ್ಟು ಯೋಗಗಳು?


ಇವಲ್ಲದೆ ಮಂತ್ರಯೋಗ-ಲಯಯೋಗ-ಹಠಯೋಗ-ರಾಜಯೋಗಗಳೆಂಬ ಪ್ರಕಾರಗಳೂ ಉಂಟು. ಯೋಗಗ್ರಂಥಗಳಲ್ಲಿ ಇವುಗಳ ನಿರೂಪಣೆಯಿದೆ. ಅಲಿಖಿತವಾಗಿದ್ದುಕೊಂಡು ಯೋಗಪರಂಪರೆಯಲ್ಲಿ ಬಂದಿರುವ ಅನೇಕಾನೇಕ ಸೂಕ್ಷ್ಮಕ್ರಮಭೇದಗಳೂ ಉಂಟು. ಯೋಗವೆಂದರೆ ಸೇರುವಿಕೆ. ಈ ಸೇರುವಿಕೆಗೆ ಮಾತ್ರವಲ್ಲದೆ, ಸೇರಲು ಬೇಕಾಗುವ ಮಾರ್ಗಕ್ಕೂ ಯೋಗವೆಂದೇ ಹೆಸರಿದೆ. ಹೀಗಾಗಿ ಯೋಗವು ಒಂದೇ ಆದರೂ ಯೋಗಮಾರ್ಗಗಳು ಹಲವಾರು. ಕಷ್ಟವಾದರೂ ಬೇಗನೆ ಗುರಿತಲುಪಿಸುವ ಮಾರ್ಗ ಕೆಲವರಿಗೆ ಬೇಕು. ನಿಧಾನವಾಗಿಯಾದರೂ ತೀವ್ರ-ಕ್ಲೇಶಗಳಿಗೊಳಪಡಿಸದ ಹಾದಿ ಕೆಲವರಿಗಿಷ್ಟ. ಹೀಗಾಗಿ ರುಚಿಭೇದಗಳಿಂದಾಗಿ ಮಾರ್ಗಭೇದಗಳು. ಕೆಲವರು ದುರ್ಬಲರು. ಅಂತಹವರಿಗೆ ಕಠಿನವಾದ ಮಾರ್ಗ ಆಗದು, ಮೈಗೂಡದು. ಮತ್ತೆ ಕೆಲವರಿಗೆ ಆರೋಗ್ಯವು ದೃಢವಾದ ಕಾರಣ ಉಗ್ರಸಾಧನೆಗಳನ್ನೂ ಮಾಡಬಲ್ಲರು. 


ಹೀಗಾಗಿ ಪ್ರಕೃತಿಯು ಬೇರೆ ಬೇರೆಯಾದ್ದರಿಂದ ಬೇರೆ ಬೇರೆ ಮಾರ್ಗಗಳು. ಒಟ್ಟಿನಲ್ಲಿ ರುಚಿಭೇದ- ಸಾಮರ್ಥ್ಯಭೇದಗಳಿಂದಾಗಿ ನಾನಾಮಾರ್ಗಗಳು ಅವಶ್ಯವೇ. ಹಾಗಾದರೆ ಎಷ್ಟು ಮಾರ್ಗಗಳು? - ಎಂಬ ಪ್ರಶ್ನೆಗೆ ಯೋಗವಿದ್ಯೆಯ ಆದ್ಯಪ್ರವರ್ತಕನೇ ಉತ್ತರಕೊಡಬಲ್ಲ. ಸದಾಶಿವನೇ ಆ ವಿದ್ಯೆಯ ಆದ್ಯಪ್ರವರ್ತಕ. 


ಎಲ್ಲ ಸೇರುವಿಕೆಯೂ ಯೋಗವಾಗಬಹುದಾದರೂ, ಎಲ್ಲವನ್ನೂ ಯೋಗವೆಂದು ಕರೆಯುವುದಿಲ್ಲ. ಭಗವಂತನೊಂದಿಗೆ ಸೇರುವುದನ್ನೇ ಯೋಗವೆನ್ನುವುದು. ಒಂದೂಕಾಲು ಲಕ್ಷ ಮಾರ್ಗಗಳುಂಟು, ಭಗವಂತನನ್ನು ತಲುಪಲು. ಹಾಗೆಂಬುದಾಗಿ ಸದಾಶಿವನೇ ಹೇಳಿರುವನು. ಅವೆಲ್ಲವೂ ಲಯಮಾರ್ಗಗಳು. 


ಲಯಮಾರ್ಗ-ದರ್ಶಕ


ಲಯವೆಂದರೆ ಲೀನವಾಗುವಿಕೆ. ಯೋಗಮಾರ್ಗವು ಕ್ರಮಕ್ರಮವಾಗಿ ಉನ್ನತೋನ್ನತವಾದ

ತತ್ತ್ವಗಳಲ್ಲಿ ಲೀನವಾಗುವುದನ್ನು ಹೇಳುತ್ತದೆ. "ಸೃಷ್ಟಿ-ಸ್ಥಿತಿ-ಲಯ" – ಎನ್ನುವಾಗಲೂ, ಎಲ್ಲವೂ ಕರಗಿಹೋಗಿ ಮೂಲದಲ್ಲಿ ಸೇರಿಕೊಂಡುಬಿಡುವುದನ್ನು "ಲಯ"ವು ಹೇಳುತ್ತದೆ. ಲಯಕ್ಕೆ ಅಧಿದೇವತೆ ಸದಾಶಿವನೇ. ಹೀಗಾಗಿ ಆತನೇ ಲಯಮಾರ್ಗಗಳೆಲ್ಲವನ್ನು ತೋರಿಸಿರುವನು. 


ಹಲವು ಮಾರ್ಗಗಳಿದ್ದರೂ ಮಾರ್ಗವೊಂದನ್ನು "ಇದು ಉತ್ತಮ"ವೆಂದು ಯಾರಾದರೂ ಉತ್ತಮರು ಹೇಳಿದರೆ ನಮಗೆ ಅದು ಸ್ವೀಕಾರ್‍ಯವಾಗುತ್ತದೆ. ಲಯಮಾರ್ಗಗಳಲ್ಲಿ ಉತ್ತಮವಾದುದು ನಾದಾನುಸಂಧಾನವೆಂದು ಶಂಕರಭಗವತ್ಪಾದರು ಹೇಳುತ್ತಾರೆ. ಅತ್ಯಂತ-ಮಾನ್ಯವಾದುದು "ಮಾನ್ಯತಮ". ಶಂಕರರಿಗೇ ಮಾನ್ಯತಮವೆನಿಸಿರುವುದು ನಮಗೆ ಅತ್ಯಂತ ಉಪಾದೇಯವಾದುದೇ. (ಉಪಾದೇಯವೆಂದರೆ ಸ್ವೀಕಾರಕ್ಕೆ ಯೋಗ್ಯ).


ಸದಾಶಿವೋಕ್ತಾನಿ ಸಪಾದ-ಲಕ್ಷ-

      -ಲಯಾವಧಾನಾನಿ ವಸಂತಿ ಲೋಕೇ |

ನಾದಾನುಸಂಧಾನ-ಸಮಾಧಿಮ್ ಏಕಂ

      ಮನ್ಯಾಮಹೇ ಮಾನ್ಯತಮಂ ಲಯಾನಾಮ್ ||೨||


ಒಂದೂಕಾಲು ಲಕ್ಷವೆಂದರೆ "ಸರಿಯಾಗಿ ೧೨೫ ಸಾವಿರ"ವೆಂದೇ ಅಲ್ಲ. ಸಾವಿರಾರು/ಲಕ್ಷಾಂತರ - ಎಂಬಂತೆ ಈ ಪದ-ಪ್ರಯೋಗ. ನಾದಾನುಸಂಧಾನದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದೇ ನಾದಾನುಸಂಧಾನ-ಸಮಾಧಿ. ಇದುವೇ ಲಯಗಳಲ್ಲಿ ಅತ್ಯಂತ ಮನನೀಯ, ಮಾನನೀಯ.


ಸೂಚನೆ : 10/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.