ನಾದಾನುಸಂಧಾನ ನಮೋಽಸ್ತು ತುಭ್ಯಂ…
ಆಹತ-ನಾದ
ಎರಡು ವಸ್ತುಗಳನ್ನು ಘಟ್ಟಿಸುವುದರಿಂದ ಸದ್ದಾಗುತ್ತದೆ. ಆಘಾತವೆಂದರೆ ಹೊಡೆತ, ಘಟ್ಟಿಸುವುದು. ಆಹತ ಎಂದರೆ ಹೊಡೆತಕ್ಕೆ ಒಳಪಟ್ಟಿರುವುದು. ಒಂದು ವಸ್ತುವಿಗೆ ಮತ್ತೊಂದರ ಏಟು ಬಿದ್ದಾಗ ಎದ್ದ ಸದ್ದು ಆಹತ-ನಾದ ಎಂದು ಕರೆಸಿಕೊಳ್ಳುತ್ತದೆ.
ಲೋಕದಲ್ಲಿ ಎಲ್ಲೆಲ್ಲೂ ಈ ಬಗೆಯ ಧ್ವನಿಗಳೇ. ಪ್ರಕೃತಿಯಲ್ಲೇ ದೊಡ್ಡದೊಡ್ಡ ಅಥವಾ ಸಣ್ಣಸಣ್ಣ ಧ್ವನಿಗಳು ಕೇಳಿಬರುವುವೇ: ಆಕಾಶದಲ್ಲಿ ಮೋಡಗಳ ಧ್ವನಿ, ಸಮುದ್ರದ ಬಳಿ ದಡಕ್ಕಪ್ಪಳಿಸುವ ಅಲೆಗಳ ಧ್ವನಿ, ನದೀಪ್ರವಾಹಧ್ವನಿ-ಜಲಪಾತಧ್ವನಿಗಳು, ಪಶು-ಪಕ್ಷಿ-ಕೀಟಗಳ ಧ್ವನಿಗಳು, ಮನುಷ್ಯರ ಮಾತಿನ ಧ್ವನಿ - ಇವೆಲ್ಲವೂ ಸೃಷ್ಟಿಯಲ್ಲಿ ತಾವಾಗಿ ಉಂಟಾಗತಕ್ಕ ಧ್ವನಿಗಳು. ಇವೆಲ್ಲವೂ ಆಹತವೇ.
ಇಷ್ಟೇ ಅಲ್ಲದೆ, ನಮ್ಮೊಳಗೇ ಏಳುತ್ತಿರುವ ಧ್ವನಿಗಳೂ ಉಂಟು. ಹೃದಯದ ಬಡಿತ, ನಾಡೀಮಿಡಿತಗಳು,ಇತ್ಯಾದಿ.
ಮಾನವ-ನಿರ್ಮಿತ-ಯಂತ್ರಗಳಲ್ಲಿ ಬಸ್ಸು-ಕಾರು-ಲಾರಿ-ವಿಮಾನಗಳ ಧ್ವನಿ, ಗಡಿಯಾರ, ಪಟಾಕಿ-ಬಾಂಬ್ ಮುಂತಾದುವುಗಳ ಧ್ವನಿ, ವಾದ್ಯಗಳ ಧ್ವನಿ – ಇತ್ಯಾದಿ. ಯಾವುದೇ ಧ್ವನಿ ಕೇಳಿತೆಂದರೂ ಅಲ್ಲಿ ಧ್ವನಿ-ತರಂಗಗಳು ಬಂದು ನಮ್ಮ ಕಿವಿದೆರೆಗೆ ಅಪ್ಪಳಿಸಿದುದರಿಂದಾದ ಕಂಪನಗಳಿಂದಾಗಿ ಜನಿತವಾದವೆಂದೇ ಅರ್ಥ.
ಅನಾಹತ-ನಾದ
ಲೋಕದಲ್ಲಿ ಒಂದು ವಸ್ತುವಿಗೂ ಮತ್ತೊಂದಕ್ಕೂ ಯಾವುದೇ ಘರ್ಷಣೆಯಿಲ್ಲದೆ, ಯಾವ ಹನನ(ಎಂದರೆ ಹೊಡೆತ)ವೂ ಇಲ್ಲದೆ, ಸ್ವತಃ ಹುಟ್ಟಿಕೊಳ್ಳುವ ಧ್ವನಿ-ವಿಶೇಷವೂ ಒಂದುಂಟು. ಅದನ್ನು ಯೋಗಶಾಸ್ತ್ರವು ಗಮನಿಸಿದೆ. ಅದು ಯೋಗಾಭ್ಯಾಸದಲ್ಲಿ ಮುಂದುವರಿದವರಿಗೆ ಕೇಳಿಸುವ ಧ್ವನಿ. ಆಹತವಲ್ಲದ ಈ ಧ್ವನಿಯೇ ಅನಾಹತ.
ಅನಾಹತ-ನಾದದಲ್ಲಿ ನಾನಾಪ್ರಕಾರಗಳಿವೆ. ಪ್ರಾಕೃತಿಕ-ಧ್ವನಿಗಳು: ಸಮುದ್ರ, ಮೇಘ ಮುಂತಾದವುಗಳಿಂದ ಬರತಕ್ಕವು; ಮನುಷ್ಯ-ನಿರ್ಮಿತವಾದ ಘಂಟೆ, ವೇಣು, ವೀಣೆ ಮುಂತಾದ ನಾದಗಳು: ಇವನ್ನೇ ಹೋಲುವ ನಾದಗಳು ತಾವಾಗಿಯೇ ಕೇಳಿಬರುತ್ತವೆಂದು ಯೋಗಶಾಸ್ತ್ರಗಳು ನಿರೂಪಿಸುತ್ತವೆ. ಇವುಗಳಲ್ಲಿ ಕೆಲವು ನಾದಗಳು ಯೋಗದ ಆರಂಭಾವಸ್ಥೆಯಲ್ಲಿ ಗೋಚರ; ಕೆಲವು ಮಧ್ಯಾವಸ್ಥೆಯಲ್ಲಿ, ಕೆಲವು ಅಂತಾವಸ್ಥೆಯಲ್ಲಿ - ಎಂಬ ಲೆಕ್ಕಾಚಾರಗಳಿವೆ.
ಇವಲ್ಲಿ ಕೆಲವು ನಾದಗಳ ದೇವತಾಸಂಬಂಧ-ಅಧ್ಯಾತ್ಮಸಂಬಂಧಗಳನ್ನು ಸಹ ಅಲ್ಲಲ್ಲಿ ಕಾಣುತ್ತೇವೆ: ಬ್ರಹ್ಮನು ಸಾಮಗಾನ-ರತನು; ಸರಸ್ವತೀ-ಪಾರ್ವತಿಯರು ವೀಣಾ-ಪ್ರಿಯರು; ಕೃಷ್ಣನು ವೇಣು-ವಾದಕ; ಶಿವನು ತನ್ನ ನೃತ್ತ-ಸಮಯದಲ್ಲಿ ಡಮರುವನ್ನು ನುಡಿಸುವನು. "ವೀಣೆಯನ್ನು ನುಡಿಸುವುದರ ತತ್ತ್ವವನ್ನು ಬಲ್ಲವನು ಮೋಕ್ಷ-ಮಾರ್ಗವನ್ನೇ ಸೇರುತ್ತಾನೆ" - ಎಂದು ಹೇಳುವ ಶಾಸ್ತ್ರ-ವಾಕ್ಯಗಳೇ ಉಂಟು! ಒಳಗೆ ಕೇಳಿಬರುವ ಈ ಅನಾಹತ-ನಾದಗಳ ಆಧಾರವನ್ನಿಟ್ಟುಕೊಂಡೇ ಭಾರತೀಯರು ತಮ್ಮ ವಾದ್ಯಗಳನ್ನು ರೂಪಿಸಿರುವುದರ ಮರ್ಮವನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು.
ನಾದ-ವಂದನ!
ಈ ನಾದವನ್ನು ಅನುಸಂಧಾನಮಾಡಬೇಕು: ಮತ್ತೆ ಮತ್ತೆ ಕೇಳಿ ಕೇಳಿ ಆಸ್ವಾದಿಸಬೇಕು, ಮನಸ್ಸು ಅದರಲ್ಲಿಯೇ ಲಗ್ನವಾಗಬೇಕು. ಈ ಅನುಸಂಧಾನವು ಬಹಳ ಶ್ರೇಷ್ಠವಾದುದು. ಎಂದೇ ಅದನ್ನೇ – ನಾದಾನುಸಂಧಾನವನ್ನೇ - ಸಂಬೋಧಿಸಿ, ಅದಕ್ಕೆ ಒಂದು ನಮಸ್ಕಾರವನ್ನು ಸಹ ಇಲ್ಲಿ ಹೇಳಲಾಗಿದೆ!
"ಮಹಾಪುರುಷರಿಗೋ ದೇವತೆಗಳಿಗೋ ನಮಸ್ಕಾರ ಮಾಡುವುದುಂಟು; ಆದರೆ ನಾದಕ್ಕೇ ನಮಸ್ಕಾರ ಹೇಳುವುದು ಎಲ್ಲಾದರೂ ಉಂಟೇ?" - ಎಂಬ ಪ್ರಶ್ನೆ ಬರಬಹುದು. ಹೌದು, ಬೇರೆ ದೇಶಗಳಲ್ಲಿ, ಅಲ್ಲಿಯ ಸಂಸ್ಕೃತಿಗಳಲ್ಲಿ, ಈ ಬಗೆಯ ವರ್ತನೆಗಳಿಲ್ಲ. ಆದರೆ ಭಾರತೀಯರು ತಮ್ಮ ತಪಸ್ಸಾಧನೆಯಲ್ಲಿ ಆಳವಾಗಿ ಮುಳುಗಿ ಶೋಧನೆ ಮಾಡಿದಂತೆ ಬೇರೆ ಯಾರೂ ಮಾಡಿರುವುದೂ ಕಂಡುಬಂದಿಲ್ಲವಷ್ಟೆ. ವಿಚಿತ್ರವೆಂದು ಕಂಡರೂ ವಾಸ್ತವವಾಗಿ ಉದಾತ್ತವಾದ ವರ್ತನೆಯೇ ಇದು. ಎಂದೇ ಅದಕ್ಕೆ ಕಾರಣವನ್ನೂ ಶ್ಲೋಕದಲ್ಲೇ ಹೇಳಿದೆ.
ನಾದಾನುಸಂಧಾನದ ಅನುಗ್ರಹವೊಂದಿದ್ದರೆ ಸಾಕು: ಪ್ರಾಣ-ವಾಯುವಿನೊಂದಿಗೆ ಮನಸ್ಸು ಸಹ ವಿಷ್ಣುಪದದಲ್ಲಿ ಲೀನವಾಗುವುದು! - ಎಂದು. ಹೀಗಾಗಿ ಈ ಅಂತರ್ನಾದ-ಶ್ರವಣವು ಯೋಗದ ಒಂದು ಉನ್ನತಾವಸ್ಥೆ, ದೊಡ್ಡ ಆನಂದದ ಅವಸ್ಥೆ. ಎಂದೇ ಇದಕ್ಕೂ ವಂದನೆ್:
ನಾದಾನುಸಂಧಾನ ನಮೋಽಸ್ತು ತುಭ್ಯಂ
ತ್ವಾಂ ಸಾಧನಂ ತತ್ತ್ವ-ಪದಸ್ಯ ಜಾನೇ |
ಭವತ್-ಪ್ರಸಾದಾತ್ ಪವನೇನ ಸಾಕಂ
ವಿಲೀಯತೇ ವಿಷ್ಣುಪದೇ ಮನೋ ಮೇ ||೪||
ಸೂಚನೆ : 24/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.