Wednesday, April 21, 2021

ಶ್ರೀರಾಮನ ಗುಣಗಳು-1(Sriramana Gunagalu-1)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಜೀವನ ಶ್ರೀರಾಮನ ಜೀವನದಂತಿರಲಿ, ರಾವಣನ ಜೀವನದಂತಲ್ಲ


ಪ್ರತಿಯೊಬ್ಬ ವ್ಯಕ್ತಿಗೂ, ಅವನದ್ದೇ ಆದ ಒಂದು ಮೂಲಸ್ವಭಾವ ಮತ್ತು ಸ್ವರೂಪಗಳಿರುತ್ತವೆ. ಅವುಗಳಿಗೆಹಾನಿಯಾದಾಗ ಹಾನಿ ಮಾಡಿದ ಆ ವ್ಯಕ್ತಿಯನ್ನು 'ಕೆಡುಕ'ನೆಂದು ಹೇಳುತ್ತೇವೆ. ಹೀಗೆ ಆ ವ್ಯಕ್ತಿಯ ಮೂಲತನವನ್ನೇ-ಸ್ಥಿತಿಯನ್ನೇ ಅವನ 'ಧರ್ಮ' ಎಂದು ಕರೆಯುತ್ತೇವೆ. ಯಾವಾಗ ಮೂಲಸ್ವರೂಪಕ್ಕೆ ಕೆಡುಕುಂಟಾಗುತ್ತದೆಯೋ, ಆಗ ಮತ್ತೆ ಮೊದಲಿನ ರೂಪವನ್ನು ಪಡೆಯಬೇಕಾಗುತ್ತದೆ. ಮಗುವುಒಂದು ರೀತಿ ಮಂಕಾಗಿದ್ದರೆ ಏನೋ ಅನಾರೋಗ್ಯವಿರಬಹುದೆಂದು ಭಾವಿಸುತ್ತೇವೆ. ಅದಕ್ಕೆಔಷಧೋಪಚಾರ ಮಾಡುತ್ತೇವೆ. ಒಂದು ಕೋತಿ ಅದರ ಸಹಜವಾದ ಚೇಷ್ಟೆಯನ್ನು ಮಾಡದಿದ್ದರೆ ಅದುಕೋತಿಯಾಗಲಾರದು. ಅಲ್ಲೂ ಒಂದು ಚಿಕಿತ್ಸೆ ಬೇಕಾಗುತ್ತದೆ. ಹೀಗೆ ಪ್ರತಿಯೊಂದಕ್ಕೂ ಅದರ ಸಹಜಸ್ಥಿತಿಕೆಟ್ಟಾಗ ಅದನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದೆ. ತನ್ನ ಸಹಜಸ್ಥಿತಿಯನ್ನು ಪಡೆಯಲೋಸುಗವೇಅಲ್ಲಿ ಹುಡುಕಾಟ ಅಥವಾ ಹೋರಾಟ. ಇದಕ್ಕೆ ಒಂದು ಆದರ್ಶ ಅಥವಾ ಭದ್ರವಾದ ನೆಲೆ ಬೇಕಾಗುತ್ತದೆ.ಇಂತಹ ಆದರ್ಶದ ಮೂಲಸ್ರೋತಸ್ಸನ್ನೇ 'ಶ್ರೀರಾಮ' ಎಂದು ಅತ್ಯಂತ ಗೌರವದಿಂದ ಭಕ್ತಿಯಿಂದಭಾವಿಸುತ್ತೇವೆ. ಇಂತಹ ಆದರ್ಶವನ್ನು ಗಮನಿಸಿ ಒಬ್ಬ , ವ್ಯಕ್ತಿಯಲ್ಲಿ ಉಂಟಾದ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ಸಾಧ್ಯ.ಶ್ರೀರಾಮ ಒಬ್ಬ ಆದರ್ಶ ಮಾನವನಾಗಿ ನಮಗೆ ಕಂಡ. ಅವನ ಆಚಾರ-ವಿಚಾರ, ನಡೆ-ನುಡಿಪ್ರತಿಯೊಂದೂ ನಮಗೆ ಅನುಸರಣೀಯವೇ. ತನ್ನ ಚರಿತ್ರೆಯಲ್ಲಿ ಸ್ವಲ್ಪವೂ ಕಳಂಕ ಬಾರದ ರೀತಿಯಲ್ಲಿಅವನ ಜೀವನಕ್ರಮವಿದೆ. ಕೆಲವು ಕಡೆ ಅವನ ಜೀವನ ಕಳಂಕವೆಂದು ಅನ್ನಿಸಿದರೆ ಅದು ಅವನನ್ನುಅರ್ಥಮಾಡಿಕೊಳ್ಳುವುದರಲ್ಲಿ ನಮಗೆ ಇರುವ ಅಜ್ಞಾನ ವಷ್ಟೆ. ಈ ನೇರದಲ್ಲಿ ಶ್ರೀರಾಮನನ್ನುಧರ್ಮದ ವ್ಯಕ್ತವಾದ ಸ್ವರೂಪ 'ರಾಮೋ ವಿಗ್ರಹವಾನ್ ಧರ್ಮಃ' ಎಂಬುದಾಗಿ ಕೊಂಡಾಡಿದ್ದನ್ನುನೋಡುತ್ತೇವೆ. ಅಥವಾ ಶ್ರೀರಾಮನ ಸ್ವರೂಪದಲ್ಲಿ ಧರ್ಮವು ಅವತರಿಸಿದೆ ಎಂಬ ಅರ್ಥವೂ ಸರಿಯೇ.ಹಾಗಾದರೆ ಯಾವ ರೀತಿಯಲ್ಲಿ ನಮ್ಮ ಧರ್ಮಮಾರ್ಗಕ್ಕೆ ಅವನು ಆದರ್ಶ ಧರ್ಮಪುರುಷ ಎಂಬುದನ್ನು ಸ್ವಲ್ಪನೋಡೋಣ ?

ಮಾನವನ ಜೀವನ ಪಶುವಿಗೆ ಸಮಾನವಾದದ್ದಲ್ಲ. ಇದಕ್ಕೊಂದು ವಿಶೇಷತೆ ಇದೆ. ಅದಕ್ಕೆ ಅವನಿಗೆ ಮಾನವ ಎಂದು ಕರೆಯಲಾಗುತ್ತದೆ.. "ಮಾ-ನವ"- ಹೊಸ ತನವನ್ನು ಪಡೆಯದ ವ್ಯಕ್ತಿತ್ವವೇ ಮಾನವ.  ಮರುಹುಟ್ಟುಎಂಬುದು ಜೀವಿಯ ಹೊಸತನ. ಯಾವಾಗ ಮತ್ತೆ ಹುಟ್ಟದಂತೆ ಅವನು ತನ್ನ ಬದುಕನ್ನು ನಡೆಸುತ್ತಾನೋಅಂತಹವನನ್ನು 'ಮಾನವ' ಎಂದು ಕರೆಯಬೇಕು" ಎಂಬ ಆಶಯದಿಂದ ಮನುಷ್ಯನ ವಿಶೇಷತೆಯನ್ನುಮಾರ್ಮಿಕವಾಗಿ ಮತ್ತು ಅರ್ಥಪೂರ್ಣವಾಗಿ ಶ್ರೀರಂಗಗುರುಗಳು ಹೇಳುತ್ತಿದ್ದರು. ಜನನ-ಮರಣವೆಂಬಸಂಸಾರಚಕ್ರದಲ್ಲಿ ಸಿಲುಕದೇ ಮೋಕ್ಷವನ್ನು ಪಡೆಯಬೇಕಾದುದು ಮಾನವನ ಆದ್ಯ ಕರ್ತವ್ಯವಾಗಿದೆ.ಇದಕ್ಕೆ  ಅನುಗುಣವಾಗಿ ಮಾನವ ತನ್ನ ಜೀವನವನ್ನು ನಡೆಸಬೇಕಾಗಿದೆ. ಹೇಗೆ ಸಾಗಿದರೆ ಜೀವನಮಾನ್ಯ, ಹೇಗೆ ನಡೆದರೆ ಜೀವನ ಶೂನ್ಯ ಎಂಬುದಕ್ಕೆ ಒಂದು ಮಾನದಂಡ ಬೇಕು. ಅದಕ್ಕಾಗಿ ಹಿರಿಯರುಹೇಳುವ ಮಾತೊಂದಿದೆ. "ರಾಮಾದಿವತ್ ವರ್ತಿತವ್ಯಂ ನ ರಾವಣಾದಿವತ್" – ರಾಮನಂತೆ ನಮ್ಮಜೀವನ ಇರಬೇಕೇ ಹೊರತು ರಾವಣಾದಿಗಳಂತಲ್ಲ. ಇಂತಹ ಧರ್ಮಮಯ-ಜೀವನಕ್ಕೆ ನಮಗೆಶ್ರೀರಾಮನಂತಹ ಧರ್ಮಪುರುಷರ ಅನುಸರಣೆ ಅತ್ಯವಶ್ಯ.

ಸೂಚನೆ : 18/4/2021 ರಂದು ಈ ಲೇಖನ  ಹೊಸದಿಗಂತ   ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.