ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೊಂದು ವಿಶೇಷಸ್ಥಾನವುಂಟು. ನಿತ್ಯವೂ ಪ್ರಾತಃಕಾಲ-ಸಾಯಂಕಾಲಗಳಲ್ಲಿ ಭಗವಂತನ ಸನ್ನಿಧಿಯಲ್ಲಿ ದೀಪ ಬೆಳಗಿಸುವ ಪದ್ಧತಿ ಪ್ರತಿಮನೆಯಲ್ಲಿಯೂ ಉಂಟು. 'ಪದಾರ್ಥಗಳ ಬೆಲೆ ಏರುತ್ತಿರುವ ಇಂದಿನ ಸನ್ನಿವೇಶದಲ್ಲಿ ಎಣ್ಣೆಗಾಗಿ ಹಣವನ್ನು ವೆಚ್ಚಮಾಡುವುದೇಕೆ? ಇದರಂತೆಯೇ ಬಣ್ಣ-ಆಕಾರಗಳುಳ್ಳ ವಿದ್ಯುತ್ಬಲ್ಬುಗಳನ್ನು ಬಳಸಿ ಉಳಿತಾಯಮಾಡಬಹುದಲ್ಲವೇ? ಅಥವಾ ಮೇಣದ ಬತ್ತಿಯನ್ನೇಕೆ ಬಳಸಬಾರದು? ಎನ್ನುವವರೂ ಇಲ್ಲದಿಲ್ಲ. ದೀಪಬೆಳಗುವಿಕೆಯೇ ಸಭಾ-ಸಮಾರಂಭಗಳ ಉದ್ಘಾಟನೆಯ ಚಿಹ್ನೆ. ಸಭಾಂಗಣದಲ್ಲಿ ದೀಪಕ್ಕಿಂತಲೂ ನೂರುಪಟ್ಟು ಪ್ರಕಾಶಮಾನವಾದ ವಿದ್ಯುದ್ದೀಪಗಳಿರುವಾಗ ದೀಪದ ಅಗತ್ಯವೇನು? ಬುದ್ಧಿಜೀವಿಗಳೆನಿಸಿಕೊಳ್ಳುವವರ ಇಂತಹ ಪ್ರಶ್ನೆಗಳು ಸಮಂಜಸವೆನಿಸುವುದು ಸಹಜವೇ.
ಇವುಗಳಿಗೆ ಉತ್ತರವನ್ನು ಭಾರತೀಯಮಹರ್ಷಿಗಳ ಆಶಯದಲ್ಲಿಯೇ ಹುಡುಕಬೇಕಾಗಿದೆ. ಮಹರ್ಷಿಗಳ ಅಂತರಂಗವನ್ನು ಅರಿತಿದ್ದ ಶ್ರೀರಂಗಮಹಾಗುರುಗಳ ವಿವರಣೆಗಳು ಇಲ್ಲಿ ಉಲ್ಲೇಖಾರ್ಹವಾಗಿವೆ. ಮಹರ್ಷಿಗಳು ಧ್ಯಾನ-ಸಮಾಧಿಯಲ್ಲಿ ತಮ್ಮೊಳಗೆ ಸರ್ವಮೂಲವಾದ ಅದ್ಭುತಪ್ರಕಾಶವೊಂದನ್ನು ಕಂಡರು. ಅದು ಭೌತಿಕಪ್ರಪಂಚದಲ್ಲೆಲ್ಲೂ ಕಾಣಸಿಗದ ಮಹದಾನಂದ-ನೆಮ್ಮದಿಗಳನ್ನು ನೀಡುವುದಾಗಿತ್ತು. ಆನಂದಾನುಭವದ ಪರಾಕಾಷ್ಠೆಯನ್ನು ಮನುಕುಲವೆಲ್ಲವೂ ತಲುಪಲೆಂಬ ಹಿರಿದಾದ ಆಶಯದಿಂದ ಅತ್ತಕಡೆ ಮನಸೆಳೆಯುವಂತೆ ಆ ಜ್ಯೋತಿಯನ್ನೇ ಹೋಲುವ ದೀಪವನ್ನು ನಿತ್ಯವೂ ಬೆಳಗಿಸುವ ಸಂಪ್ರದಾಯವನ್ನು ನಿಯೋಜಿಸಿದರು.
ಸರ್ವಮೂಲಜ್ಯೋತಿಯ ಸ್ಮರಣೆಯೇ ಸರ್ವಕರ್ಮಗಳ ಮೂಲವಾಗಲೆಂದೇ ಸಭಾ- ಸಮಾರಂಭಗಳ ಪ್ರಾರಂಭದಲ್ಲಿ ದೀಪಬೆಳಗುವಿಕೆ. ಮಹರ್ಷಿಗಳ ಸಂಶೋಧನಾತ್ಮಕ ಬುದ್ಧಿಯು ಮೂಲಜ್ಯೋತಿಯ ವರ್ಣ-ಆಕಾರಗಳನ್ನೇ ಹೊರತರುವ ಬತ್ತಿ-ಎಣ್ಣೆಗಳ ಸಂಯೋಗವನ್ನು ಪತ್ತೆ ಮಾಡಿತು. ತಾವರೆದಂಟಿನ ಬತ್ತಿ(ಮೃಣಾಳಸೂತ್ರ)-ಅಂದೇ ಕಾಯಿಸಿದ ಹಸುವಿನ ತುಪ್ಪಗಳ ಯೋಗದಿಂದ ಬೆಳಗುವ ನಿರ್ದಿಷ್ಟಪ್ರಮಾಣದ ದೀಪಶಿಖೆಯು ಬಹುಮಟ್ಟಿಗೆ ಒಳಬೆಳಕನ್ನು ಹೋಲುವುದೆಂಬುವುದನ್ನರಿತರು. ಅದರಿಂದ ಹೊರಬರುವ ಹೊಗೆಯೂ ಮನಸ್ಸಿನ ಒಳಸೆಳೆಯುವಿಕೆಗೆ ಪೋಷಕವಾಗುತ್ತದೆ. ಇತರ ಬತ್ತಿ-ಎಣ್ಣೆಗಳಿಂದಾಗುವ ಬೆಳಕೂ ಸ್ವಲ್ಪಮಟ್ಟಿನ ಹೋಲಿಕೆಯಿಂದಾಗಿ ಮೂಲಜ್ಯೋತಿಯ ಪ್ರತಿನಿಧಿಯಾಗುತ್ತದೆ.
ಸಣ್ಣ ಹಣತೆಯೇ ದೀಪವನ್ನು ಹೊರತರಬಲ್ಲದಾದರೂ ದೀಪಸ್ತಂಭದ ಬಳಕೆಯು ಹೆಚ್ಚು ಔಚಿತ್ಯಪೂರ್ಣವಾಗಿದೆ. ಸ್ತಂಭವು ನಮ್ಮೊಳಗಿನ ಮೇರುದಂಡವನ್ನು(ಬೆನ್ನುಹುರಿಯನ್ನು) ಸೂಚಿಸುತ್ತಿದ್ದರೆ ತುದಿಯಲ್ಲಿ ಬೆಳಗುವ ದೀಪಶಿಖೆಯು ಮೇರುದಂಡದ ತುಟ್ಟತುದಿಯಲ್ಲಿ ಸಹಸ್ರಾರಚಕ್ರದಲ್ಲಿ ಪ್ರಜ್ವಲಿಸುವ ಜ್ಯೋತಿಯನ್ನು ಪ್ರತಿನಿಧಿಸುತ್ತದೆ. ಆತ್ಮಮಾರ್ಗದ ವಿವಿಧಾಂಶಗಳನ್ನು ಸೂಚಿಸುವ ವಿವಿಧ ಆಕಾರಗಳ ದೀಪಸ್ತಂಭಗಳನ್ನೂ ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ದೀಪಸ್ತಂಭ-ಅದರಲ್ಲಿನ ದೀಪಗಳು ನಾವು ಸಾಗಬೇಕಾಗಿರುವ ಒಳ ಆತ್ಮಮಾರ್ಗದ, ತನ್ಮೂಲಕ ತಲುಪಬಹುದಾದ ಪರಮಾನಂದವೀಯುವ ಪರಂಜ್ಯೋತಿಯ ನಕ್ಷೆಗಳಾಗಿವೆ.
ಈಗ ದೀಪಬೆಳಗಿಸುವುದು ಬಹುಪಾಲು ಯಾಂತ್ರಿಕವಾಗಿಯೇ ಆಚರಿಸಲ್ಪಡುತ್ತಿದೆ. ಆದರೆ ಸತ್ಯಾರ್ಥವನ್ನು ಮನಗಂಡು ಅತ್ತ ಮನಹರಿಸಿ ದೀಪವನ್ನು ಬೆಳಗಿಸಿದಾಗ ಮೂಲದತ್ತ ಸಾಗಿ ಧನ್ಯರಾಗುತ್ತೇವೆ.
ಸೂಚನೆ: 18/05/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.