Saturday, May 22, 2021

ಯೋಗತಾರಾವಳಿ -7 ಓಡ್ಯಾಣ-ಜಾಲಂಧರ (Yogataravali-7 Oḍyana - Jalandhara)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)

ಯೋಗತಾರಾವಳೀ (ಶ್ಲೋಕ 6) 

ಓಡ್ಯಾಣ-ಜಾಲಂಧರ...

ಬಂಧಗಳು ಮೂರು - ಓಡ್ಯಾಣ, ಜಾಲಂಧರ, ಹಾಗೂ ಮೂಲ - ಎಂಬುದಾಗಿ. ಉದರ, ಕಂಠ, ಹಾಗೂ ಪಾಯು - ಈ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಉಂಟಾಗತಕ್ಕವು. (ಪಾಯು ಎಂದರೆ ಗುದ, ಅರ್ಥಾತ್ ಮಲವಿಸರ್ಜನಾಂಗ)

ಮುಖ್ಯ-ನಾಡಿ 

ಈ ಮೂರು ಬಂಧಗಳು ಏರ್ಪಟ್ಟಾಗ ಆಗುವ ಪರಿಣಾಮವೇನು? – ಎಂಬುದನ್ನು ಶ್ಲೋಕದ ಮುಂದಿನ ಮೂರು ಪಾದಗಳು ಹೇಳುತ್ತವೆ.  ಆಗ ಕುಂಡಲಿನೀ-ಶಕ್ತಿಯು ಜಾಗರಗೊಳ್ಳುತ್ತದೆ. ಕುಂಡಲಿನಿಯೆಂಬುದು ಮೂಲಾಧಾರಸ್ಥಾನದಲ್ಲಿಯ ಶಕ್ತಿ. ಮೂಲಾಧಾರವೆಂಬುದು ಒಂದು ಚಕ್ರ. ಚಕ್ರಗಳೆಂದರೆ ಮುಖ್ಯ ನಾಡಿಗಳು ಸೇರುವ ಜಾಗ. ನಾಡಿಗಳು ಪ್ರಾಣ-ವಾಹಿನಿಗಳು. ಅಂತಹ ನಾಡಿಗಳಾದರೂ ಹಲವು. ಮುಖ್ಯ ನಾಡಿಗಳು ನೂರು ಅಥವಾ ನೂರೊಂದು; ಅವಲ್ಲೂ ಮತ್ತೂ ಮುಖ್ಯವಾದುವೆಂದರೆ ಮೂರು: ಇಡಾ, ಪಿಂಗಳಾ ಹಾಗೂ ಸುಷುಮ್ನಾ ಎಂಬುದಾಗಿ. ಇಡಾ-ಪಿಂಗಳಾಗಳು ಎಡ-ಬಲದ ನಾಡಿಗಳು. ಸುಷುಮ್ನೆಯು ಮಧ್ಯನಾಡಿ. ಇದುವೇ ಅತ್ಯಂತ-ಮುಖ್ಯವಾದ ನಾಡಿ. ಚಕ್ರಗಳೆಲ್ಲವೂ ಈ ಸುಷುಮ್ನೆಯಲ್ಲಿಯೇ ಇವೆ.

ಚಕ್ರಗಳು ಆರುಂಟು. ಅವೆಲ್ಲವೂ ಬೆನ್ನುಹುರಿಯಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿ ಇವೆ.  ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ, ಹಾಗೂ ಆಜ್ಞಾ – ಎಂಬಿವು ಆರು ಚಕ್ರಗಳ ಹೆಸರುಗಳು. ಇವುಗಳ ಸ್ಥಾನಗಳು ಕ್ರಮವಾಗಿ ಬೆನ್ನುಹುರಿಯ ಬುಡ, ಲಿಂಗಸ್ಥಾನ, ನಾಭಿ, ಹೃದಯ, ಕಂಠ ಹಾಗೂ ಭ್ರೂಮಧ್ಯ (ಭ್ರೂ-ಮಧ್ಯವೆಂದರೆ ಹುಬ್ಬುಗಳ ನಡುವಿನ ಎಡೆ).

ಏಳನೆಯದಾದ ಸಹಸ್ರಾರವು ಶಿರಃಸ್ಥಾನದಲ್ಲಿರುವಂತಹುದು. ಜಾಗರಿತವಾದ ಕುಂಡಲಿನೀ-ಶಕ್ತಿಯು ಆರು ಚಕ್ರಗಳ ಮೂಲಕ ಹಾದು ಸಹಸ್ರಾರವನ್ನು ಸೇರಿದಾಗ ಆತ್ಮಯೋಗವುಂಟಾಗುವುದು. ಯೋಗ-ಸಾಧನೆಯೆಲ್ಲದರ ಲಕ್ಷ್ಯವೂ ಇದೇ. ಇಲ್ಲಿ ನೆನಪಿಡಬೇಕಾದುದೆಂದರೆ ಈ ಚಕ್ರಗಳಾವುವೂ ಭೌತಿಕವಲ್ಲ - ಎಂಬುದು. ಈ ಸಂದರ್ಭದಲ್ಲಿ ಹೇಳುವುದಾದರೆ, ಮಸ್ತಿಷ್ಕಕ್ಕೂ ಬೆನ್ನುಹುರಿಗೂ ನಮ್ಮ ನರ-ನಾಡಿಗಳಿಗೂ ಅರಿವಿಗೂ ಇರುವ ಮೌಲಿಕವಾದ ಸಂಬಂಧವನ್ನು ನಮ್ಮ ಋಷಿಗಳು ಬಹಳ ಪೂರ್ವಕಾಲದಲ್ಲಿಯೇ ಕಂಡುಕೊಂಡಿದ್ದರು. ಮನಸ್ಸಿನ ಸ್ಥಿತಿಗಳಿಗೂ ಮಸ್ತಿಷ್ಕಕ್ಕೂ ಇರುವ ಸಂಬಂಧದ ಬಗ್ಗೆ ಪಾಶ್ಚಾತ್ತ್ಯ ವಿಜ್ಞಾನಿಗಳಿಗೆ ಅರಿವುಂಟಾಗಿರುವುದು ಸಹ ಬಹಳ ಈಚೆಗೆ – ಎನ್ನುವುದನ್ನೂ ಇಲ್ಲಿ ನಾವು ಗಮನಿಸಬೇಕಾಗಿದೆ.

ಯಾವ ಹಾವಿದು?

 ಕುಂಡಲಿನೀ ಎಂಬುದು ಸರ್ಪಾಕೃತಿಯ ಶಕ್ತಿ. ಸರ್ಪವು ಸುತ್ತುಹಾಕಿಕೊಂಡು ಕುಂಡಲಾಕಾರವಾಗಿ ಮಲಗಿರುವಂತೆ ಮಲಗಿರುವ ಶಕ್ತಿಯಿದಾದ್ದರಿಂದ ಇದಕ್ಕೆ ಕುಂಡಲಿನೀ (ಅಥವಾ ಕುಂಡಲೀ) ಎಂಬ ಅಭಿಧಾನವಿದೆ. (ಅಭಿಧಾನವೆಂದರೆ ಹೆಸರು). ಉರಗವೆಂದರೆ ಸರ್ಪ. ಇದು ಶಕ್ತಿ-ಸ್ವರೂಪವಾದುದರಿಂದ ಸ್ತ್ರೀರೂಪವನ್ನು ಹೊಂದಿರುತ್ತದೆ. ಆ ಕಾರಣದಿಂದಾಗಿ "ಉರಗಾಂಗನೆ"ಯೆಂದಿಲ್ಲಿ ಕರೆಯಲಾಗಿದೆ (ಅಂಗನೆ ಎಂದರೆ ನಾರಿ). 

ಈ ಸರ್ಪಾಂಗನಾ-ರೂಪವಾದ ಶಕ್ತಿಯು ಮೂಲಾಧಾರ-ಸ್ಥಾನದಲ್ಲಿ ಸ್ವ-ಪುಚ್ಛವನ್ನೇ (ಎಂದರೆ ತನ್ನ ಬಾಲವನ್ನೇ) ತನ್ನ ಬಾಯಲ್ಲಿರಿಸಿಕೊಂಡು ಮಲಗಿರುವುದು. ಅದು ನಿದ್ರಿತವಾಗಿರುವವರೆಗೂ ಭವ-ಬಂಧವು ತಪ್ಪಿದ್ದಲ್ಲ. ಅದು ಉನ್ನಿದ್ರವಾಗಬೇಕು (ಉನ್ನಿದ್ರ ಎಂದರೆ ಎಚ್ಚರ), ಅರ್ಥಾತ್ ನಿದ್ರೆಯಿಂದ ಹೊರಬಂದಿರಬೇಕು.

 ಹೀಗೆ ಆ ಸರ್ಪಿಣಿಯು ಉನ್ನಿದ್ರಿತವಾದಾಗ ಆಗುವುದೇನು? - ಎಂಬುದನ್ನು ಶ್ಲೋಕದ ಉತ್ತರಾರ್ಧದಲ್ಲಿ ಹೇಳಲಾಗಿದೆ. ಹಾಗಾದಾಗ ಅದು ಪ್ರಾಣವಾಯುವಿನ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸು ಅಂತರ್ಮುಖವಾಗುತ್ತಿರುವಂತೆ ಪ್ರಾಣವೂ ಪ್ರತ್ಯಙ್ಮುಖವಾಗುತ್ತದೆ. (ಪ್ರತ್ಯಕ್ ಎಂದರೆ ಒಳಕ್ಕೆ). ಅರ್ಥಾತ್ ಪ್ರಾಣವೂ ಒಳಮುಖವಾಗುತ್ತದೆ.

ತಾನು ಒಳಮುಖವಾಗುತ್ತಿದ್ದಂತೆಯೇ ಪ್ರಾಣವು ಸುಷುಮ್ನಾ-ನಾಡಿಯನ್ನು ಪ್ರವೇಶಿಸುತ್ತದೆ. ಅದು ಹಾಗೆ ಆಗುತ್ತಲೇ ಗಮ-ಆಗಮಗಳನ್ನು ತೊರೆಯುತ್ತದೆ. ಗಮವೆಂದರೆ ಹೋಗುವಿಕೆ್, ಆಗಮವೆಂದರೆ ಬರುವಿಕೆ. ಪ್ರಾಣದ ಗಮಾಗಮಗಳು ಎಂದರೆ ನಿಃಶ್ವಾಸ-ಉಚ್ಛ್ವಾಸಗಳು. (ಆಗಮ-ನಿರ್ಗಮಗಳನ್ನು ತೊರೆಯುತ್ತಿದ್ದಂತೆಯೇ ಪ್ರಾಣದ ನಡೆಯು ಸೂಕ್ಷ್ಮವಾಗುವುದು; ಅದನ್ನು ಇಲ್ಲಿ ಹೇಳಿದೆ).

 ಹೀಗೆ ಬಂಧ-ತ್ರಯ, ಕುಂಡಲಿನೀ-ಪ್ರಬೋಧ, ಪ್ರಾಣದ ಸುಷುಮ್ನಾ-ಪ್ರವೇಶ ಹಾಗೂ ಗಮಾಗಮ-ಪರಿತ್ಯಾಗ – ಕ್ರಮಕ್ರಮವಾಗಿ ಆಗುವ ಇವಿಷ್ಟು ವಿಷಯಗಳನ್ನು ಈ ಶ್ಲೋಕದಲ್ಲಿ ಹೇಳಿದೆ:


ಓಡ್ಯಾಣ-ಜಾಲಂಧರ-ಮೂಲಬಂಧೈಃ

    ಉನ್ನಿದ್ರಿತಾಯಾಮ್ ಉರಗಾಂಽಗನಾಯಾಮ್ |

ಪ್ರತ್ಯಙ್ಮುಖತ್ವಾತ್ ಪ್ರವಿಶನ್ ಸುಷುಮ್ನಾಂ

    ಗಮಾಗಮೌ ಮುಂಚತಿ ಗಂಧವಾಹಃ || ೬||

ಸೂಚನೆ : 22/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.