Thursday, May 20, 2021

ಧ್ರುವನ ಆದರ್ಶ (Dhruvana Adarsha)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಉತ್ತಾನಪಾದ ರಾಜನಿಗೆ ಸುನೀತಿ ಮತ್ತು ಸುರುಚಿ ಹೆಂಡತಿಯರು. ಸುನೀತಿ ಸುಶೀಲೆ. ಸುರುಚಿ ಸುಂದರಿ. ರಾಜನಿಗೆ ಸುರುಚಿಯಲ್ಲೇ ಹೆಚ್ಚು ಆಸಕ್ತಿ. ಇಂದ್ರಿಯಗಳು ನಮ್ಮ ಹತ್ತಿರವೇ ಇರುವುದರಿಂದ, ಇಂದ್ರಿಯ ಸುಖ 'ಸುನೀತಿ' ಯನ್ನು ಮರೆಮಾಡಿ 'ಸುರುಚಿ' ಯನ್ನೇ ಬಯಸುವಂತೆ ಮಾಡುತ್ತದೆ. ರಾಜನಿಗೂ ಹೀಗೇ ಆಗಿತ್ತು. ಸುನೀತಿಯ ಮಗ ಧ್ರುವ. ಸುರುಚಿಯ ಮಗ ಉತ್ತಮ. ಒಮ್ಮೆ ಧ್ರುವಕುಮಾರನು ತನ್ನ ತಂದೆಯ ತೊಡೆಯ ಮೇಲೆ ತಮ್ಮ ಉತ್ತಮನನ್ನು ನೋಡಿ ತಾನೂ ಪ್ರೀತಿಯಿಂದ ಅಲ್ಲಿ ಕುಳಿತುಕೊಳ್ಳಲು ಇಚ್ಛಿಸಿದಾಗ, ಸುರುಚಿಯು ಅವನನ್ನು ತಡೆದು, ನೀನು ರಾಜನ ಮಗನಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲವಾದ್ದರಿಂದ ನಿನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ನಾನು ಬಿಡೆನು ಎಂದು ಅವಮಾನಿಸುತ್ತಾಳೆ. ಅಲ್ಲದೇ ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸು ಮಾಡಿ ನನ್ನ ಹೊಟ್ಟೆಯಲ್ಲಿ ಹುಟ್ಟುವಂತೆ ವರವನ್ನು ಕೇಳಿ ಬಾ ಎಂದು ಮೂದಲಿಸುತ್ತಾಳೆ. ರಾಜನೂ ಸಹ ಈ ಅನ್ಯಾಯವನ್ನು ಕಂಡೂ ಕಾಣದಂತೆ ಇದ್ದುಬಿಡುತ್ತಾನೆ. ಮಲತಾಯಿಯ ಈ ಮಾತುಗಳಿಂದ ಅತ್ಯಂತ ದುಃಖಿತನಾದ ಧ್ರುವನು ತಾಯಿಯಲ್ಲಿ ತನ್ನ ಸಂಕಟವನ್ನು ತೋಡಿಕೊಳ್ಳುತ್ತಾನೆ. ಸುನೀತಿ ಆರ್ಯಮಾತೆ. ಮಗನನ್ನು ಸಂತೈಸಿ, "ನಾರಾಯಣನೊಬ್ಬನೇ ಎಲ್ಲರಿಗೂ ಗತಿಯಾಗಿರುವವನು. ಜೀವನದ ಬೇರು ಅವನು. ಸುರುಚಿ ಹೇಳಿದ್ದು ನಿಜ. ಅವನನ್ನು ಮೊರೆಹೋಗುವುದು ನಿನಗೆ ಶ್ರೇಯಸ್ಕರ" ಎಂದು ಹರಸಿ ಕಳುಹಿಸಿದಳು. ಶ್ರೀರಂಗ ಮಹಾಗುರುಗಳ ಮಾತಿನಂತೆ-"ಹೂವಿಗೆ ನೀರೆರೆದರೆ ಗಿಡ ಬೆಳೆಯುವುದಿಲ್ಲ. ಗಿಡ ಬೆಳೆಯಬೇಕಾದರೆ ಗಿಡದ ಪಾತಿಯಲ್ಲಿರುವ ಬೇರಿಗೆ ನೀರು ಹಾಕಬೇಕು. ಹಾಗೆಯೇ ಹೃದಯದ ಪಾತಿಯಲ್ಲಿರುವ ಮೂಲ ರೂಪನಾದ ಭಗವಂತನಿಗೆ ಚಿತ್ತಧಾರೆಯನ್ನೆರೆದರೆ ಇಡೀ ದೇಹವೃಕ್ಷಕ್ಕೆ ಅದು ತಲುಪುತ್ತದೆ". ೫ ವರ್ಷ ವಯಸ್ಸಿನ ಧ್ರುವಕುಮಾರನು ತಪಸ್ಸು ಮಾಡುವ ನಿಶ್ಚಯದಿಂದ ಕಾಡಿಗೆ ಹೊರಟೇಬಿಟ್ಟ. ದಾರಿಯಲ್ಲಿ ನಾರದರು ಸಿಕ್ಕಿ ಧ್ರುವನ ಸಂಕಲ್ಪವನ್ನು ಪರೀಕ್ಷಿಸುವ ಸಲುವಾಗಿ ತಪಸ್ಸಿನ ಕ್ಲೇಶಗಳನ್ನೆಲ್ಲ ವಿವರಿಸುತ್ತಾರೆ. ಈ ಅವಮಾನಗಳನ್ನೆಲ್ಲ ಇಷ್ಟು ಗಂಭೀರವಾಗಿ ಪರಿಗಣಿಸದೇ ಅರಮನೆಗೆ ಹಿಂತಿರುಗುವಂತೆ ಹೇಳುತ್ತಾರೆ. ಅದರಿಂದ ಸ್ವಲ್ಪವೂ ವಿಚಲಿತನಾಗದ ಧ್ರುವನು ನಾರಾಯಣನನ್ನು ಕುರಿತು ತಪಸ್ಸು ಮಾಡುವ ವಿಧಾನವನ್ನು ತನಗೆ ಉಪದೇಶಿಸಬೇಕೆಂದು ನಾರದರನ್ನು ಪ್ರಾರ್ಥಿಸುತ್ತಾನೆ. ಹುಡುಗನ ಧೃತಿಯನ್ನು ಗಮನಿಸಿ ಸಂತೋಷಗೊಂಡ ನಾರದರು ತಪಸ್ಸಿನ ಅತ್ಯಂತ ಕಠಿಣವಾದ ನಿಯಮಗಳನ್ನು ಹೇಳಿ 'ಓಂ ನಮೋ ಭಗವತೇವಾಸುದೇವಾಯ' ಎಂಬ ಮಂತ್ರವನ್ನು ಉಪದೇಶಿಸುತ್ತಾರೆ. ದಿನದಿಂದ ದಿನಕ್ಕೆ, ತಿಂಗಳಿನಿಂದ ತಿಂಗಳಿಗೆ ತಪಸ್ಸಿನ ತೀವ್ರತೆಯನ್ನು ಹೆಚ್ಚಿಸಿ ಕಡೆಗೂ ಆರು ತಿಂಗಳಲ್ಲಿ ನಾರಾಯಣನನ್ನು ಒಲಿಸಿಕೊಳ್ಳುವುದರಲ್ಲಿ ಧ್ರುವನು ಯಶಸ್ವಿಯಾಗುತ್ತಾನೆ. ನಾರಾಯಣನು ಧ್ರುವನ ತಪಸ್ಸಿಗೆ ಮೆಚ್ಚಿ ಯಾರೂ ಪಡೆಯದ ಅತ್ಯುನ್ನತ ನಕ್ಷತ್ರ ಸ್ಥಾನವನ್ನೇ ಧ್ರುವನಿಗೆ ಕರುಣಿಸುತ್ತಾನೆ.ಪ್ರಾಯಃ ಧ್ರುವನಿಗೆ ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಸುರುಚಿ ಅವಕಾಶ ಕೊಟ್ಟಿದ್ದರೆ ಅಷ್ಟೇ ಕ್ಷಣಿಕವಾದ ಲಾಭವಾಗುತ್ತಿತ್ತು. ಅವನಿಗಾದ ಅವಮಾನ, ಸಂಕಟ, ಅಸಹಾಯಕತೆ ಅವನನ್ನು ಜೀವನದ ಮಹಾಧ್ಯೇಯದ ಕಡೆಗೆ ದಿಟ್ಟಹೆಜ್ಜೆಗಳನ್ನು ಇಡುವಂತೆ ಮಾಡಿತು. ಮಿತಾಹಾರ, ಜಲಾಹಾರ, ಕೇವಲ ವಾಯುಸೇವನೆ ಕಡೆಯಲ್ಲಿ ನಿರಾಹಾರ, ಒಂಟಿಕಾಲಿನ ತಪಸ್ಸುಹೀಗೆ ಒಂದೊಂದೂ ಅಕಲ್ಪನೀಯ! ಎಂತಹ ದುಸ್ತರವಾದ ತಪಸ್ಸಿನ ನಿಯಮಗಳನ್ನು ಧೀರನಾಗಿ ಪಾಲಿಸಿದ! ಕಡೆಯಲ್ಲಿನಾರಾಯಣನ ಪರಮಾನುಗ್ರಹ!

ನಾವು ಜೀವನದ ಸಂಕಷ್ಟಗಳಿಗಾಗಿ ಮರುಗುತ್ತೇವೆ. ಏನೋ ನಮಗೆ ಭಾರೀ ಅನಾಹುತವಾಯಿತು ಎಂದುಕೊಳ್ಳುತ್ತೇವೆ, ಕುಸಿಯುತ್ತೇವೆ. ಇವತ್ತಿನ ಕರೋನಾ ಸಂಕಟ ಇದಕ್ಕೊಂದು ಉದಾಹರಣೆ. ಆದರೆ ಧ್ರುವನಂತೆ ಆ ಕಷ್ಟವನ್ನು ಮೆಟ್ಟಿ ನಿಂತು ಜೀವನದ ಮಹಾಧ್ಯೇಯದ ಸಾಧನೆಗಾಗಿ ಯತ್ನಶೀಲರಾದರೆ ಅದರ ಫಲ ನಿಶ್ಚಿತವಾಗಿಯೂ ಅದ್ಭುತವಾಗಿರುತ್ತದೆ. ನಾವು ಧ್ಯೇಯ ಸಾಧನೆಯನ್ನು ನಿಶ್ಚಿತವಾಗಿ ಮಾಡುತ್ತೇವೆ ಎಂಬ ಬಲವಾದ ಸಂಕಲ್ಪವೇ ನಮ್ಮ ದಾರಿಯನ್ನು ಸುಗಮಗೊಳಿಸುತ್ತದೆ.ಶ್ರೀರಂಗ ಮಹಾಗುರುಗಳ ಈ ಮಾತು ಸ್ಮರಣೀಯ-"ಸಂಕಲ್ಪವು ಸುದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ, ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ. ದಾರ ಸುತ್ತಿ ಬುಗುರಿಯನ್ನು ಆಡಿಸಿ ಬಿಟ್ಟರೆ ದಾರದಸಂಬಂಧ ತಪ್ಪಿದರೂ ಬುಗುರಿ ಆಡುತ್ತಲೇ ಇರುತ್ತೆ. ಸಂಕಲ್ಪ ಹರಿದುದಕ್ಕೆ ಅಷ್ಟು ದೂರ ಕೆಲಸವುಂಟು. ಆದ್ದರಿಂದ ದೃಢ ಸಂಕಲ್ಪವಿರಲಿ" ನಮ್ಮ ಇಂದಿನ ವಿಷಮ ಪರಿಸ್ಥಿತಿಯನ್ನು ಮತ್ತು ಮುಂದೆ ಜೀವನದಲ್ಲಿ ಬರುವ ಕಷ್ಟಗಳೆಲ್ಲವನ್ನೂ ದಾಟುವಸಂಕಲ್ಪ ಶಕ್ತಿಯನ್ನು ಭಗವಂತ ನಮಗೆ ಕರುಣಿಸಲಿ. ನಮಗೆ, ನಮ್ಮ ಮಕ್ಕಳಿಗೆಲ್ಲ ಧ್ರುವಕುಮಾರನ ಕಥೆ ಪ್ರೇರಣಾದಾಯಿಯಾಗಲಿ.

ಸೂಚನೆ: 20/05/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.