Saturday, May 8, 2021

ಯೋಗತಾರಾವಳಿ -6 ಬಂಧವಿದ್ದರೆ ಬಂಧವಿಲ್ಲ! (Yogataravali-6 Bandhaviddare Bandhavilla!)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)


ಯೋಗತಾರಾವಳೀ (ಶ್ಲೋಕ 5) 

ಜಾಲಂಧರೋಡ್ಯಾಣನ... (ಮುಂದುವರೆದಿದೆ)


ಯೋಗ-ಭಾರತ

ಇಷ್ಟಲ್ಲದೆ, ನಮ್ಮ ದೇಶದ ಎಷ್ಟೋ ಸ್ಥಾನಗಳಿಗೆ ಸಹ ನಾಮಕರಣ ಮಾಡುವಾಗ ಯೋಗವಿದ್ಯೆಯ ಮರ್ಮಗಳನ್ನು ಋಷಿಗಳು ಅನುಸರಿಸಿದ್ದಾರೆಂದೂ ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಹೀಗಾಗಿಯೇ ಜಲಂಧರ್ ಎಂಬ ಪಂಜಾಬಿನ ಬಳಿಯ ಎಡೆಯು ಭಾರತದ ಕತ್ತಿನ ಭಾಗಕ್ಕೆ ಬರುತ್ತದೆಂದೂ, ಜಾಲಂಧರ-ಬಂಧದ ಸವಿನೆನಪನ್ನು ಇಲ್ಲಿ ಉಳಿಸಿದ್ದಾರೆಂದೂ ತಿಳಿಸಿದ್ದರು. ಹಾಗೆಯೇ ಒರಿಸ್ಸಾ ಅಥವಾ ಓಡಿಯಾ ಪ್ರದೇಶವು ಭಾರತದ ಉಡ್ಯಾಣಸ್ಥಾನಕ್ಕೆ ಬರುತ್ತದೆ; ಇದು ಓಡ್ಯಾಣಬಂಧದ ಸ್ಥಾನವೇ – ಎಂದೂ ಹೇಳಿದ್ದರು.


ಮತ್ತೂ ಒಂದು ಮರ್ಮವನ್ನೂ ತಿಳಿಸಿದ್ದರು. ಅದೆಂದರೆ, ಈ ಮೂರು ಬಂಧಗಳನ್ನು ಅಭ್ಯಾಸಮಾಡಿಕೊಂಡು ಉಂಟುಮಾಡಿಕೊಳ್ಳುವುದನ್ನು ಋಷಿಗಳು ವ್ಯವಸ್ಥೆಮಾಡಿಟ್ಟದ್ದು ಹೇಗೆ?- ಎಂಬ ಬಗ್ಗೆ.


ಅದು ಹೀಗೆ: ಉನ್ನತವಾದ ಯೋಗಸ್ಥಿತಿಯಲ್ಲಿ ಈ ಬಂಧಗಳು ತಾವಾಗಿಯೇ ಉಂಟಾಗತಕ್ಕವು; ಅದನ್ನು ಗಮನಿಸಿಕೊಂಡು, ಹೊರಗಿನಿಂದಲೂ ಇಂತಹ ಬಂಧಾಭ್ಯಾಸವನ್ನು ಮಾಡಿಕೊಂಡಿದ್ದರೆ ಯೋಗದ ಉನ್ನತ-ಸ್ಥಿತಿಯು ಉಂಟಾಗುವುದಕ್ಕೆ ತುಂಬ ಅನುಕೂಲಿಸುವುದು – ಎಂಬುದೇ ಈ ಮರ್ಮ. 


ಇದಕ್ಕೆ ಒಂದು ಸುಂದರವಾದ ನಿದರ್ಶನವನ್ನೂ ಕೊಟ್ಟಿದ್ದರು. ನಿದ್ದೆ ಬಂದಾಗ ಕಣ್ಣು ತಾನಾಗಿ ಮುಚ್ಚುತ್ತದೆಯಲ್ಲವೆ? ಎಂದೇ ನಿದ್ದೆಬರುವ ಹೊತ್ತಿಗೆ ನಾವು ಕಣ್ಣುಮುಚ್ಚಿಕೊಳ್ಳುವುದೂ. ಸುಮ್ಮನೆ ಕಣ್ಣುಮುಚ್ಚಿದಾಗಲೆಲ್ಲ ನಿದ್ದೆ ಬರದಾದರೂ, ನಿದ್ದೆಯು ಬರುವಂತಿರುವಾಗ ಕಣ್ಣು ಮುಚ್ಚಿಕೊಳ್ಳುವುದು ಅತ್ಯಂತ-ಸಹಕಾರಿ, ನಿದ್ದೆ ಬರುವ ಹೊತ್ತಿಗೆ ಬಾಧೆ ತರುವ ಬೆಳಕನ್ನೂ ಸದ್ದು-ಗದ್ದಲಗಳನ್ನೂ ನಿಲ್ಲಿಸಿಕೊಳ್ಳುತ್ತೇವೆ. 


ಹೀಗೆ ಒಂದು ಉತ್ಕೃಷ್ಟ ಲಕ್ಷ್ಯಕ್ಕಾಗಿ ಬಾಹ್ಯಸಿದ್ಧತೆಗಳು. ಇದು ಋಷಿಗಳು ತಂದ ವ್ಯವಸ್ಥೆ.


ಬಂಧನ ಬೇಡವೇ?


ಮತ್ತೊಂದು ವಿಷಯ. "ನಮಗೆ ಬೇಕಾಗಿರುವುದು ಸ್ವಾತಂತ್ರ್ಯ, ಈ ಬಗೆಯ ಬಂಧನಗಳಲ್ಲ!"- ಎಂದು ಅಜ್ಞಾನದಿಂದಲೋ ಕೇವಲ ವಾಕ್‍ಚಮತ್ಕಾರವಾಗಿಯೋ ಮಾತನಾಡುವವರಿರಬಹುದು. ಅಂತಹವರಿಗೂ ಉತ್ತರವಿತ್ತಿದ್ದರು: "ನೀವು ಮೃದಂಗವನ್ನು ನೋಡಿದ್ದೀರೇನಪ್ಪ? ಅದರಲ್ಲೆಷ್ಟು ಕಟ್ಟುಗಳಿರುತ್ತವೆ! ಅಷ್ಟೊಂದು ಕಟ್ಟುಗಳಿಂದಾಗಿಯೇ ಅಲ್ಲವೇ ಅದರಿಂದ ಮಧುರವಾದ ನಾದವು ಬರಲಾಗುವುದು? ಹಾಗೆಯೇ ಈ ಮೂರು ಬಂಧಗಳಿಂದಾಗಿಯೇ ಒಳಗಡೆ ಯೋಗ-ಸಂಬಂಧಿಯಾದ ನಾದಗಳು ಹೊಮ್ಮಲು ಸೌಕರ್ಯವುಂಟು" ಎಂದಿದ್ದರು.


ಪರಿಚಯ ಎನ್ನುವುದಕ್ಕೆ ಯೋಗಶಾಸ್ತ್ರದಲ್ಲಿ ವಿಶೇಷವಾದ ಅರ್ಥವೊಂದಿದೆ. ಅಭ್ಯಾಸವು ಚೆನ್ನಾಗಿ ಬೇರೂರಿದಾಗ, 'ಪರಿಚಯ'ವೆಂಬುದುಂಟಾಗುತ್ತದೆ. ಆದ್ದರಿಂದ ಈ ಮೂರೂ ಬಂಧಗಳ ಹೀಗಿರುವ 'ಪರಿಚಯ'ವಾಗಬೇಕಾದದ್ದು ಮುಖ್ಯ.


"ಈ [ಮೂರೂ] ಬಂಧಗಳ ಪರಿಚಯವಾದಲ್ಲಿ ಬಂಧವಿನ್ನಿಲ್ಲ" – ಎಂಬ ಇಲ್ಲಿನ ಹೇಳಿಕೆಯು

ಒಗಟಿನ ಮಾತಾದರೂ, ಇದರ ಆಶಯವಿದು: ಒಂದೊಂದೇ ಬಂಧವುಂಟಾದರೂ ಲಾಭವೇ; ಆದರೆ ಈ ಮೂರೂ ಚೆನ್ನಾಗಿ ಉಂಟಾಗುವಂತಾದಲ್ಲಿ, ಜೀವಕ್ಕೆ ಒಂದು ಅತ್ಯುತ್ತಮಸ್ಥಿತಿಯೇ ಉಂಟಾಗುವುದು.


ಬಂಧ ಬಂತು: ಬಂಧ ಹೋಯ್ತು!

ಯಮನ ಪಾಶವು ದಾರುಣವಾದದ್ದು. ಕಾಲಪಾಶಕ್ಕೆ ಸಿಕ್ಕವರೆಲ್ಲರೂ ಸಾಯುವವರೇ. ಆದರೆ ಉನ್ನತ ಯೋಗಾವಸ್ಥೆಯನ್ನು ಹೊಂದಿದವರು ಅಮೃತತ್ವವನ್ನು ಹೊಂದುತ್ತಾರೆ - ಅರ್ಥಾತ್ ಭವಬಂಧಕ್ಕೆ ಅವರು ಮತ್ತೆ ಸಿಲುಕರು; ಅರ್ಥಾತ್ ಯಮನ ಪಾಶಕ್ಕೆ ಇನ್ನು ಸಿಗರು. ಮರುಹುಟ್ಟನ್ನೇ ತಪ್ಪಿಸಿಕೊಂಡವರು ಮತ್ತೆ ಯಮನ ವಶರಾದಾರೇ? ಹೀಗೆ, ಈ ಶರೀರಬಂಧ-ಪ್ರಾಣಬಂಧಗಳನ್ನು ಉಂಟುಮಾಡಿಕೊಂಡು, ಕಾಲಬಂಧ-ಭವಬಂಧಗಳಿಂದಲೇ ಬಿಡಿಸಿಕೊಳ್ಳಬಹುದು!


ಈ ಶ್ಲೋಕದಲ್ಲಿ ಕಾವ್ಯಗುಣವೂ ಇದೆ: ಸುಂದರವಾದ ವಿರೋಧಾಭಾಸಾಲಂಕಾರವಿದೆ. ಕೇವಲ ತೋರಿಕೆಯ ವಿರೋಧವಿದ್ದರೆ ಆದನ್ನು ವಿರೋಧಾಭಾಸವೆನ್ನುತ್ತಾರೆ. "ಬಂಧವು ಚೆನ್ನಾಗಿ ಆದರೆ, ಬಂಧವೇ ಇನ್ನಿಲ್ಲ!" ಎನ್ನುವುದು ಆ ಬಗೆಯ ಮಾತು. ಇಲ್ಲಿ ವಾಸ್ತವವಾದ ವಿರೋಧವೇನೂ ಇಲ್ಲ. ಕೇವಲ ಶಾಬ್ದಿಕವಾದ ವಿರೋಧವಷ್ಟೇ ಇರುವುದು.


ಇಷ್ಟಲ್ಲದೆ ಮತ್ತೊಂದು ಸ್ವಾರಸ್ಯವನ್ನೂ ಇಲ್ಲಿ ಗಮನಿಸಬಹುದು. ಈ ಬಂಧತ್ರಯಾಭ್ಯಾಸವನ್ನು ಚೆನ್ನಾಗಿ ಮಾಡಿಕೊಂಡವರಿಗೆ ಐಹಿಕವಾದ ಕೆಲವು ಲಾಭಗಳೂ ಆಗುವುವೇ: ಆಯುಸ್ಸು ವೃದ್ಧಿಯಾಗುವುದು; ಮುಪ್ಪು ಮುಂದೂಡುವುದು; ಯೌವನವು ಉಕ್ಕುವುದು. ಈ ಕಾರಣಗಳಿಂದಲೂ ಅವರನ್ನು "ಕಾಲಪಾಶದಿಂದ ದೂರವಾದವರು" ಎನ್ನಬಹುದು – ಗೌಣಾರ್ಥದಲ್ಲಿ. 


ಹೀಗೆ ಈ ಬಂಧಗಳು ಬಿಡುಗಡೆಗೆ ಹೇಗೆ ಕಾರಣವಾಗುವುವು - ಎಂಬುದನ್ನು ಇಲ್ಲಿ ಸೊಗಸಾಗಿ ನಿರೂಪಿಸಿದೆ.


ಜಾಲಂಧರೋಡ್ಯಾಣನ-ಮೂಲ-ಬಂಧಾನ್

      ಜಲ್ಪಂತಿ ಕಂಠೋದರ-ಪಾಯು-ಮೂಲಾನ್ |

ಬಂಧ-ತ್ರಯೇಽಸ್ಮಿನ್ ಪರಿಚೀಯಮಾನೇ

      ಬಂಧಃ ಕುತೋ ದಾರುಣ-ಕಾಲ-ಪಾಶಾತ್? ||೫||


ಸೂಚನೆ : 8/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.