Wednesday, May 5, 2021

ಸುಳ್ಳನ್ನು ಹೇಳಬಹುದೇ ? (Sullannu Helabahude?)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್
ಪ್ರತಿಕ್ರಿಯಿಸಿರಿ lekhana@ayvm.in

 ಕೌಶಿಕನೆಂಬ ಒಬ್ಬ ಮುನಿ ಕಾಡಿನಲ್ಲಿ ವಾಸವಾಗಿದ್ದ. ಆತ ಶಾಸ್ತ್ರಗಳನ್ನು ಹೆಚ್ಚಾಗಿ ಓದಿದವನಲ್ಲ. ಯಾವಾಗಲೂ ಸತ್ಯವನ್ನೇ ಹೇಳಬೇಕು ಎಂಬ ವ್ರತವನ್ನು ಹಿಡಿದಿದ್ದ. ಒಂದು ದಿನ ಕೆಲವು ಪ್ರಯಾಣಿಕರು ಕಳ್ಳರ ಭಯದಿಂದಾಗಿ ಕೌಶಿಕಮುನಿಯಿದ್ದ ವನದೊಳಗೆ ಪ್ರವೇಶಿಸಿ ಒಂದೆಡೆಯಲ್ಲಿ ಅಡಗಿಕೊಂಡರು. ಅವರನ್ನು ಹಿಂಬಾಲಿಸಿ ಬಂದ ಕಳ್ಳರು ಕೌಶಿಕನನ್ನು ಇತ್ತ ಕಡೆ ಬಂದ ಪ್ರಯಾಣಿಕರು ಎತ್ತ ಹೋದರೆಂದು ಕೇಳಿದರು. ಸತ್ಯವಾದಿಯಾದ ಕೌಶಿಕ, ಪ್ರಯಾಣಿಕರು ಬಚ್ಚಿಟ್ಟುಕೊಂಡಿದ್ದ ಎಡೆಯನ್ನು ಕಳ್ಳರಿಗೆ ತೋರಿಸಿಕೊಟ್ಟ. ಕಳ್ಳರು ದಾರಿಹೋಕರನ್ನು ಕೊಂದು, ಅವರಲ್ಲಿದ್ದ ಐಶ್ವರ್ಯವನ್ನು ದೋಚಿಕೊಂಡು ಹೊರಟುಹೋದರು. ಧರ್ಮಸೂಕ್ಷ್ಮವನ್ನರಿಯದ ಕೌಶಿಕನ ಮಾತುಗಳು ಅಧರ್ಮವೇ ಆಯಿತು. ದೇಹಾವಸಾನವಾದಮೇಲೆ ಆತ ನರಕದಲ್ಲಿ ಬೀಳಬೇಕಾಯಿತು. ಶ್ರೀ ಕೃಷ್ಣನೇ ಅರ್ಜುನನಿಗೆ ಹೇಳುವ ಉಪಾಖ್ಯಾನವಿದು. ನಮ್ಮ ಋಷಿಗಳು ಸತ್ಯವನ್ನೇ ಹೇಳಬೇಕೆಂಬ ಧರ್ಮವನ್ನು ಹೇಳಿರುವಂತೆ, ಆಪದ್ಧರ್ಮವನ್ನೂ ಹೇಳಿರುವುದುಂಟು. ಆಪತ್ಕಾಲದಲ್ಲಿ ಮಾತ್ರ ಪಾಲಿಸಬೇಕಾದ ಧರ್ಮ, ಆಪದ್ಧರ್ಮ. ಪಾದಚಾರಿಯು ಫುಟ್ ಪಾತ್
ನಲ್ಲೇ  ಹೋಗುವುದು ಧರ್ಮ. ಆದರೆ ಎದುರುಬದಿಯಿಂದ ಲಾರಿಯೊಂದು ನಿಯಂತ್ರಣ ಮೀರಿ ಫುಟ್ ಪಾತನ್ನೇ ಪ್ರವೇಶಿಸಿಬಿಟ್ಟರೆ ಪ್ರಾಣರಕ್ಷಣೆಗಾಗಿ ಪಾದಚಾರಿಯು ವಾಹನಸಂಚಾರಕ್ಕೆ ನಿಗದಿತವಾದ ರಸ್ತೆಯಲ್ಲೇ ಅನಿವಾರ್ಯವಾಗಿ ನಡೆಯಬೇಕಾಗುವುದು ಆಪದ್ಧರ್ಮ. ಹಾಗೆಯೇ ಆಪದ್ಧರ್ಮವಾಗಿ ಸುಳ್ಳನ್ನು ಹೇಳಬೇಕಾಗಿ ಬರಬಹುದು. ಸುಳ್ಳು ಹೇಳುವುದರಿಂದ ಸತ್ಪರಿಣಾಮವುಂಟಾಗುವುದಾದರೆ ಆಗ ಸುಳ್ಳನ್ನೇ ಹೇಳಬಹುದೆನ್ನುತ್ತದೆ ಮಹಾಭಾರತ. ಉದಾಹರಣೆಗೆ ಸತ್ಯವನ್ನು ಹೇಳುವುದರಿಂದ ಪ್ರಾಣಕ್ಕೇ ಅಪಾಯವುಂಟಾಗುವುದಾದರೆ, ನಮ್ಮ ಎಲ್ಲ ಸಂಪತ್ತೂ ಅಪಹಾರವಾಗುವುದಾದರೆ, ಸುಳ್ಳು ಹೇಳಬಹುದು, ಎನ್ನುತ್ತದೆ.

ಅಧರ್ಮಪಕ್ಷಪಾತಿಯಾಗಿದ್ದ ದ್ರೋಣಾಚಾರ್ಯರನ್ನು ಕೊಲ್ಲಿಸಲು ಅಶ್ವತ್ಥಾಮನು ಹತನಾದನೆಂಬ ಭ್ರಮೆಯನ್ನುಂಟುಮಾಡುವ ವಾಕ್ಯವನ್ನು ಧರ್ಮಿಷ್ಠನಾದ ಧರ್ಮರಾಜನಿಂದಲೇ ಶ್ರೀ ಕೃಷ್ಣನು ಹೇಳಿಸಿದುದು ಪ್ರಸಿದ್ಧ ಕತೆ.

ಶ್ರೀ ಕೃಷ್ಣನೇ ಸುಳ್ಳು ಹೇಳಿಸಿದ ಮೇಲೆ ನಾವೂ ಸುಳ್ಳು ಹೇಳಬಹುದೆಂದು ಭಾವಿಸಬಾರದು. ಕೃಷ್ಣ, ಧರ್ಮಸೂಕ್ಷ್ಮವನ್ನು ತಿಳಿದವನು. ಸುಳ್ಳು ಹೇಳುವುದು ಮಹಾಪಾಪವೆಂದು ಅರಿತವನೇ. ಆದರೆ ಅಧರ್ಮದ ಹುಟ್ಟಡಗಿಸಬೇಕೆಂದು ದೃಢಸಂಕಲ್ಪವುಳ್ಳವನಾದ್ದರಿಂದಲೇ ಸೂಕ್ತಸಮಯಗಳಲ್ಲಿ ಸಾಮಾನ್ಯರಿಗೆ ಅಧರ್ಮದಂತೆ ತೋರುವ ಕೆಲಸಗಳನ್ನು ಮಾಡಿದ್ದಾನೆ; ಮಾಡಿಸಿದ್ದಾನೆ. ಕೆಲವೊಮ್ಮೆ ದೊಡ್ಡ ಧರ್ಮವನ್ನು ರಕ್ಷಿಸಲು ಸಣ್ಣ ಧರ್ಮವನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ.  ಅವನಂತಹ ಸೂಕ್ಷ್ಮಮತಿಯುಳ್ಳವರಷ್ಟೇ ಅವನ ನಡೆಯನ್ನು ಅನುಸರಿಸಲು ಯೋಗ್ಯರು.
"ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಎಂಬ ಗಾದೆಯ ಆಶಯವನ್ನು ವಿವರಿಸುತ್ತಾ ಶ್ರೀರಂಗಮಹಾಗುರುಗಳು "ಸುಳ್ಳನ್ನು ಹೇಳಿಯೇ ಮದುವೆ ಮಾಡಬೇಕಂದಲ್ಲ ಇದರ ಅರ್ಥ!  ಕೆಲವರು ಕುಟಿಲೋಪಾಯಗಳಿಂದ ಇತರರ ಮನೆಯಲ್ಲಿ ನಡೆಯುವ ಮಂಗಳಕಾರ್ಯಗಳನ್ನು ನಿಲ್ಲಿಸಿಬಿಡುತ್ತಾರೆ. ಹಾಗೊಮ್ಮೆ ಶುಭ ಪರಿಣಾಮವನ್ನುಂಟು ಮಾಡುವ ಮದುವೆಯೊಂದು ನಿಂತುಹೋಗುವ ಪ್ರಸಂಗ ಬಂದರೆ, ಸುಳ್ಳನ್ನಾದರೂ ಹೇಳಿ ಮಂಗಳಕಾರ್ಯ ನೆರವೇರುವಂತೆ ಮಾಡಬೇಕು ಎಂಬುದಷ್ಟೇ ಈ ಗಾದೆಯ ಹಿನ್ನೆಲೆ;  ಭೂತ(ಜೀವ)ಹಿತವೂ ಯಥಾರ್ಥವೂ ಆದುದೇ ಸತ್ಯ" ಎಂದಿದ್ದರು.

ಯಾವಾಗಲೂ ಸತ್ಯವನ್ನೇ ನುಡಿಯಬೇಕು ಎಂಬಂತಹ ಧರ್ಮದ ನಿಯಮಗಳನ್ನು ಪಾಲಿಸುವುದು ಸರಿಯೇ. ಆದರೆ ಅದರಿಂದ ಜೀವಹಿತವಾಗುವುದೇ? ಎಂಬ ವಿಮರ್ಶೆ ನಮ್ಮಲ್ಲಿ ಇರಬೇಕು. 

ಸೂಚನೆ: 25/02/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.