ಪ್ರಜಾನಂದನ-ರಘುನಂದನ
ಶ್ರೀರಾಮನ ಗುಣವಿಶೇಷಗಳಲ್ಲಿ ಪ್ರಜೆಗಳನ್ನು ಪಾಲಿಸುವ ರೀತಿಯೂ ಒಂದು ವಿಶಿಷ್ಟಗುಣವಾಗಿ ಪರಿಗಣಿಸಲ್ಪಟ್ಟಿದೆ. ಅದಕ್ಕೆ ಅವನಿಗೆ ವಾಲ್ಮೀಕಿಗಳು 'ಪ್ರಜಾನಾಂ ಚ ಹಿತೇ ರತಃ" ಎಂಬ ಬಿರುದನ್ನು ಕೊಡುತ್ತಾರೆ. 'ಪ್ರಜೆಗಳ ಹಿತವೇ ರಾಜನ ಹಿತ'. 'ಪ್ರಜೆಗಳು ತನ್ನ ಮಕ್ಕಳಂತೆ' ಎಂಬ ಭಾವ ರಾಜನಿಗೆ ಇರಬೇಕು. ಯಾವುದೇ ಒಬ್ಬ ಪ್ರಜೆ ನೊಂದುಕೊಂಡರೂ ಅದು ರಾಜ್ಯಕ್ಕೆ ಅಹಿತ ಎಂದು ಭಾವಿಸುವಷ್ಟು ಭಾವಪುಷ್ಟಿ ಇರುವ ಕಾಲ ಶ್ರೀರಾಮನ ರಾಜ್ಯಭಾರದ ಕಾಲ. ಅದಕ್ಕೇ ಅಂದಿನ ರಾಜ್ಯವ್ಯವಸ್ಥೆ 'ರಾಮರಾಜ್ಯ' ಎಂದೇ ಪ್ರಸಿದ್ಧವಾಗಿದೆ. ರಾಮನು ರಾಜ್ಯವನ್ನು ಆಳುವ ಕಾಲದಲ್ಲಿ ಪ್ರತಿಯೊಬ್ಬರೂ ಹೇಗೆ ನೆಮ್ಮದಿಯಿಂದ ಜೀವಿಸುತ್ತಿದ್ದರು ಎಂಬುದಕ್ಕೆ 'ಪ್ರಾಣಾಪಾನೌ ಸಮಾವಾಸ್ತಾಂ ರಾಮೇ ರಾಜ್ಯಂ ಪ್ರಶಾಸತಿ' ಎಂಬ ಮಾತೇ ಸಾಕು. ಪ್ರಾಣ ಮತ್ತು ಅಪಾನ ಈ ಎರಡೂ ಸಮವಾಗಿರುವುದು ಎಂದರೆ ಆನಂದದ ಸ್ಥಿತಿ. ತಮ್ಮ ಮೈಮನಗಳಲ್ಲಿ ಶ್ರೀರಾಮನ ಆಂತರಂಗದ ಸ್ವರೂಪವನ್ನು ಅರಿಯುವ ಸ್ಥಿತಿ. ಅಂತಹ ಸುಭಿಕ್ಷೆಯ ಕಾಲ ಅದಾಗಿತ್ತು. ಶ್ರೀರಾಮನಿಗೆ ಒಬ್ಬ ಸಾಮಾನ್ಯಪ್ರಜೆಯ ಮಾತೂ ಎಷ್ಟು ಪುರಸ್ಕರಣೀಯವಾಗಿತ್ತು ಎಂಬುದಕ್ಕೆ ಸೀತೆಯ ವಿಚಾರದಲ್ಲಿ ಕೇಳಿಬರುವ ಅಪವಾದದ ಮಾತಿಗೆ ರಾಮ ಪ್ರತಿಕ್ರಿಯಿಸಿದ ರೀತಿಯೇ ಸಾಕು. ರಾಮನು ರಾಜ್ಯವಾಳುತ್ತಿರುವಾಗ ಪ್ರಜೆಗಳ ಅಭಿಪ್ರಾಯವನ್ನು ತಿಳಿದು ಬರಲು ತನ್ನ ಚಾರರನ್ನು ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸುತ್ತಾನೆ. ಸೀತೆಯ ವಿಚಾರವಾಗಿ ಒಂದು ಸಲ್ಲದ ಮಾತನ್ನು ಒಬ್ಬ ಸಾಮಾನ್ಯ ಪ್ರಜೆ ಆಡುವ ಮಾತನ್ನು ಭದ್ರನೆಂಬ ಗೂಢಚಾರನು ಆಲಿಸುತ್ತಾನೆ- "ಎಲ್ಲವೂ ಸರಿ, ಆದರೆ ರಾಕ್ಷಸನ ವಶಳಾದ ಸೀತೆಯನ್ನು ರಾಮನು ಪರಿಗ್ರಹಿಸುವುದು ಎಷ್ಟು ಉಚಿತ?" ಎಂದು. ಇದೇ ವಿಷಯವನ್ನು ಭದ್ರನು ವಿನಮ್ರವಾಗಿ ರಾಜನಾದ ರಾಮನಿಗೆ ಅರುಹುತ್ತಾನೆ. ಆಗ ಶ್ರೀರಾಮನು ಆಡಿದ ಮಾತುಗಳು ಪ್ರಜೆಗಳ ವಿಷಯದಲ್ಲಿ ಅವನು ಎಷ್ಟು ಗೌರವವನ್ನು ಇಟ್ಟಿದ್ದ! ಎಂಬುದನ್ನು ತೋರಿಸುತ್ತದೆ- ರಾಮನು ಹೇಳುವ ಈ ಮಾತು "ಆರಾಧನಾಯ ಲೋಕಸ್ಯ ಮುಂಚತೋ ನಾಸ್ತಿ ಮೇ ವ್ಯಥಾ" (ಜನರ ಸಂತೋಷಕ್ಕಾಗಿ ನಾನು ಶುದ್ಧಳಾದ ಸೀತೆಯನ್ನೂ ತ್ಯಜಿಸಲು ಸಿದ್ಧನಿದ್ದೇನೆ ").