Monday, May 17, 2021

ಆರ್ಯಸಂಸ್ಕೃತಿ ದರ್ಶನ-43 (Arya Samskruti Darshana-43)

ಶಿವಲಿಂಗ

ಲೇಖಕರು : ವಿದ್ವಾನ್ ಛಾಯಾಪತಿಗಳು

ಲಿಂಗರೂಪದಲ್ಲಿ ಶಿವನ ಆರಾಧನೆ ಭಾರತದಲ್ಲಿ ದೇಶವ್ಯಾಪಿಯಾಗಿ ಬೆಳೆದಿದೆ. ಹಿಮಾಲಯದಲ್ಲಿರುವ ಕೇದಾರನಾಥನಿಂದ ಹಿಡಿದು ಸಮುದ್ರತೀರದ ರಾಮೇಶ್ವರದವರೆಗಿರುವ ಅಸಂಖ್ಯಾತ ಶಿವದೇವಾಲಯಗಳಲ್ಲಿ ಬಗೆ ಬಗೆಯ ಹೆಸರುಗಳಿಂದ ಪ್ರತಿಷ್ಠಿತವಾಗಿರುವ ಮೂಲವಿಗ್ರಹಗಳು ಶಿವಲಿಂಗಗಳೇ. ಶಿವನ ಬಗೆ ಬಗೆಯ ಮೂರ್ತಿಗಳಿದ್ದರೂ ಮೂರ್ತಿಗಳೆಲ್ಲಾ ಉತ್ಸವಮೂರ್ತಿಗಳು. ಇದಕ್ಕೆ ಒಂದೆರಡು ಅಪವಾದಗಳು ದೊರಕಬಹುದು ಅಷ್ಟೇ. ದೇವಾಲಯಗಳಲ್ಲಿ ಮಾತ್ರವೇ ಅಲ್ಲ, ಮನೆ-ಮನೆಗಳಲ್ಲಿಯೂ  ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ಸಂಪ್ರದಾಯವು ದೇಶಾದ್ಯಂತ ಬೆಳೆದಿದೆ. 

 "ಶಿವನೆಂದರೆ-ಲಿಂಗ, ಲಿಂಗವೆಂದರೆ ಶಿವ"-ಎಂಬ ಅಭೇದಭಾವನೆಯು ತುಂಬಿ ಬೆಳೆದಿದೆ. ಚರಲಿಂಗಗಳು, ಸ್ಥಿರಲಿಂಗಗಳು, ಪಾರ್ಥಿವ, ಅಪ್, ಜ್ಯೋತಿ,ವಾಯು, ಆಕಾಶಲಿಂಗಗಳು, ಶಿಲೆ, ಲೋಹ, ಮರ, ರತ್ನ, ಹವಳ ಮೊದಲಾದ ಬಗೆ ಬಗೆಯ ದ್ರವ್ಯಗಳಿಂದ ನಿರ್ಮಾಣಗೊಂಡ ಲಿಂಗಗಳು ಶಿವಭಾವದಿಂದ ಪೂಜೆಗೊಳ್ಳುತ್ತಿವೆ. ಲಿಂಗವನ್ನು ನೋಡಿದಾಗ ಪೂಜಾಪದ್ಧತಿಯ ಪರಿಚಯವುಳ್ಳ ಯಾವ ಭಾರತೀಯನ ಮನಸ್ಸಿನಲ್ಲಿಯೂ ಅದು ಶಿವನ ಮೂರ್ತಿ ಎಂಬ ಭಾವವನ್ನು ಬಿಟ್ಟು ಮತ್ತಾವ ಭಾವವೂ ಉಂಟಾಗುವುದಿಲ್ಲ. ನಿತ್ಯತಪಸ್ವಿಯೂ ಜ್ಞಾನಮೂರ್ತಿಯೂ, ಕಾಮಧ್ವಂಸಿಯೂ ಆದ ಶಿವಭಾವವೇ ಲಿಂಗವನ್ನು ನೋಡಿದಾಗಲೂ ಉಂಟಾಗುತ್ತದೆ. 

ಆದರೆ ಈ ಹಿನ್ನೆಲೆಯಿಲ್ಲದೇ ಶಿವಲಿಂಗವನ್ನು ನೋಡಿದಾಗ ಯಾವ ಆಲೋಚನೆಗಳು ಮೂಡುವವೆಂಬುದನ್ನು ಊಹಿಸುವುದೂ ಶಿವತನ್ಮಯತೆಯಿಂದ ಲಿಂಗವನ್ನು ನೋಡುವವನಿಗೆ ಅಸಾಧ್ಯ. ಈ ಭಾವದ ಹಿನ್ನೆಲೆಯಿಂದ ಅಪರಿಚಿತರಾದ ವಿದೇಶಿಯರಿಗೆ ಶಿವಲಿಂಗದಲ್ಲಿ ಕಂಡದ್ದೇನು? ಕಲ್ಲು, ಮರ, ಲೋಹಗಳು. ಅದರಲ್ಲಿ ಮೂಡಿರುವ ಆಕೃತಿ ಪುರುಷಲಿಂಗ ಮತ್ತು ಸ್ತ್ರೀಯೋನಿಗಳ ಸೇರುವೆ. ಅವನಿಗುಂಟಾದ ಭಾವವೇನು ?  ಜುಗುಪ್ಸೆ, ಹೇವರಿಕೆ. ಇದು ಪೂಜಾರ್ಹವೇ ? ಇಂತಹುದನ್ನು ಪೂಜಿಸತಕ್ಕವರನ್ನು    ಏನನ್ನಬೇಕು ? ಕಾಮ ವಾಸನೆಯ ಉಪಾಸಕರು ! ಅತಿಕಾಮುಕರು. ಭಕ್ತಿಯಿಂದ ಆರಾಧಿಸಬೇಕಾದ ದೇವನೆಡೆಯಲ್ಲಿಯೂ, ಕಾಮಪ್ರಚೋದಕವಾದ ಲಿಂಗ- ಯೋನಿಗಳ ಸೇರುವೆಯೇ ? ಕಾಮಧ್ವಂಸಿ ಎಂದು ಶಿವನನ್ನು ವರ್ಣಿಸುವುದೇನು?  ಪುರುಷ-ಸ್ತ್ರೀ ಚಿಹ್ನೆಗಳ ಸೇರುವೆಯ ರೂಪದ ಲಿಂಗರೂಪದಲ್ಲಿ ಅವನನ್ನಾರಾಧಿಸುವುದೇನು? ಏನಿದು ಒಗಟು ? 

ಇದು ಒಗಟು ನಿಜ. ಈ ಒಗಟನ್ನು ಬಿಡಿಸಲು ಸಂಶೋಧನೆಗಳು ಆರಂಭಗೊಂಡವು. ಶಿಲ್ಪಗಳನ್ನು ಹುಡುಕಿದರು. ಮೊಹೆಂಜೊದಾರೋವಿನಲ್ಲಿ ಕಂಡುಬಂದ ಅನ್ವೇಷಣೆಗಳಲ್ಲಿ ಮಾನವಾಕೃತಿಯ ಲಿಂಗದ ಕುರುಹುಗಳಿವೆ. ಕ್ರಿ.ಪೂ. ಎರಡನೆಯ ಶತಮಾನದ್ದೆಂದು ಗುರುತಿಸಲಾದ ಗುಡಿಮಾಯಲ್ಲಂ ಎಂಬಲ್ಲಿ ಪುರುಷಾಕೃತಿಯನ್ನೊಳಗೊಂಡ ಲಿಂಗವೊಂದು ದೊರಕಿದೆ. ದೇಶವ್ಯಾಪಿಯಾದ ದೇವಾಲಯಗಳಲ್ಲಿ ಲಿಂಗರೂಪವಾದ ಶಿಲ್ಪವಿದೆ. 

ಶಿಲ್ಪವಿರಬಹುದು. ಶಿವನಿಗೂ-ಲಿಂಗರೂಪಕ್ಕೂ ಇರುವ ಸಂಬಂಧವೇನು?  ಇದು ಮತ್ತೊಂದು ಒಗಟು. ಇದನ್ನೆಲ್ಲಿ ಬಿಡಿಸಬೇಕು?  ಉಪಲಬ್ಧವಿರುವ ವೇದಸಾಹಿತ್ಯಗಳು, ರುದ್ರನ ವರ್ಣನೆಯನ್ನು ಒಳಗೊಂಡ ಮಂತ್ರಗಳನ್ನು ಹುಡುಕಿದರು. ಅಲ್ಲೆಲ್ಲೂ ಲಿಂಗಪದವು ಕಾಣಲಿಲ್ಲ. ಇದು ವೇದ ಸಂಪ್ರದಾಯವಲ್ಲ. ಅಷ್ಟೇ ಅಲ್ಲ, ರುದ್ರನು ವೇದದ ದೇವತೆಯೇ ಹೊರತು ಶಿವನಲ್ಲ.  ಹಾಗಾದರೆ ಶಿವನು ಯಾರು ? ದ್ರಾವಿಡರ ದೇವತೆ. ಶಿವ-ರುದ್ರರ ಏಕ ಭಾವನೆ ಹೇಗೆ ಬೆಳೆದಿದೆ ? ಆರ್ಯ-ದ್ರಾವಿಡರ ಸಮಾಗಮದ ಫಲವದು. ಹೀಗೆ ಹೇಳಿದರೂ ಲಿಂಗಕ್ಕೂ-ಶಿವನಿಗೂ ಇರುವ ಸಂಬಂಧ ಬಿಡಿಸಿದಂತಾಗಲಿಲ್ಲ. ಲಿಂಗವು ದ್ರಾವಿಡರಿಗಿಂತಲೂ ಮೊದಲಿದ್ದ ಅಸಂಸ್ಕೃತ ಮೂಲನಿವಾಸಿಗಳ ಆರಾಧನಾವಸ್ತು. ಅಸಂಸ್ಕೃತರಾದ ಅವರು ನಿರ್ಲಜ್ಜ ಕಾಮೋಪಾಸಕರು.  ಅವರ ಆರಾಧನೆಗೊಳಗಾದದ್ದು ಲಿಂಗ. ಅದು ದ್ರಾವಿಡರ ಮೂಲಕ ಶಿವನೊಡನೆ, ನಂತರ ಆರ್ಯರ ಶಿವ-ರುದ್ರರ ಏಕತೆಯೊಡನೆಯೂ  ಸಮ್ಮೇಲನ ಪಡೆಯಿತು. ಇದು ಶಿವನಿಗೂ ಲಿಂಗಕ್ಕೂ ಇರುವ ಸಂಬಂಧವನ್ನು ಸಂಶೋಧಕರು ವಿವರಿಸಿರುವ ರೀತಿ.

ಆದ್ದರಿಂದ ಶಿವನನ್ನು ಲಿಂಗರೂಪದಲ್ಲಿ ಆರಾಧಿಸಹೊರಟಿದ್ದು ಇತ್ತೀಚಿನ ಕಾಲಗಳಲ್ಲಿ. ಆಗಮಗಳಲ್ಲಿ ಪುರಾಣಗಳಲ್ಲಿ ಶಿವನ ಲಿಂಗರೂಪದ ವಿವರವಿದೆ ನಿಜ. ಆದರೆ ಅದೆಲ್ಲಾ ಅರ್ವಾಚೀನವೆಂದು ನಿರ್ಣಯಿಸಿದರು.  

ಶಿಲ್ಪ, ವೇದಸಾಹಿತ್ಯ, ಆಗಮ, ಪುರಾಣಗಳು, ಪೂಜಾಸಂಪ್ರದಾಯಗಳು ಇವುಗಳ ಹಿನ್ನೆಲೆಯಲ್ಲಿ ಹರಿದಿರುವ ಭಾವವನ್ನು ನಿರ್ಲಕ್ಷಿಸಿ, ಸಿಕ್ಕುವ ಶಿಲೆ, ಲೋಹ, ಉಲ್ಲೇಖಗಳನ್ನೇ ಪರಮಾಧಾರವಾಗಿ ಭಾವಿಸಿ ತಮ್ಮ ಸಂಶೋಧನಾ ಸೌಧವನ್ನು ನಿರ್ಮಿಸಿದ ವಿದೇಶೀ ಸಂಶೋಧಕರ ಹಾದಿಯನ್ನೇ ಸ್ವದೇಶೀ ಸಂಶೋಧಕರೂ ಅನುಸರಿಸಿದರು.

ಇದೇನು? ನಾವೂ ಕಣ್ಮುಚ್ಚಿಕೊಂಡು ಲಿಂಗರೂಪವನ್ನು ಶಿವನೆಂದು ಆರಾಧಿಸುತ್ತಿದ್ದೇವಲ್ಲ ? ಹೊರರೂಪವನ್ನು ಕಂಡಾದರೂ ನಮಗೇಕೆ ಹೇವರಿಕೆಯುಂಟಾಗಲಿಲ್ಲ ? ಸದ್ಯ, ಈಗಲಾದರೂ 

ವಿದೇಶೀ ಮಿತ್ರರು ನಮ್ಮನ್ನೆಚ್ಚರಿಸಿದರಲ್ಲಾ ? ಎಂದು ಅವರೊಟ್ಟಿಗೆ ತಮ್ಮ ಧ್ವನಿ ಸೇರಿಸಿ ತಮ್ಮ ಕಹಳೆಯೂದಿದರು. ಈಗಲಾದರೂ ಎಚ್ಚರಗೊಳ್ಳಿರಿ, ಇದು ಕಾಮುಕತೆಯ ಆರಾಧನೆ, ಲಿಂಗ-ಭಗಗಳನ್ನು ಪೂಜಿಸುವುದೆಂದರೇನು ? ಅನಾಗರೀಕರಿಂದ ಮೌಢ್ಯದ ಮೂಲಕ ಬೆಳೆದ ಸಂಪ್ರದಾಯವನ್ನು ಮುರಿಯಿರಿ ಎಂದರು. ಲಿಂಗಗಳು ಮಾತ್ರವೇ ಏಕೆ?  ದೇವಾಲಯಗಳಲ್ಲಿ ಕಾಣುವ ಇತರ ಮೂರ್ತಿಗಳಲ್ಲಿಯೂ ಆಲಿಂಗನ ಮೂರ್ತಿಗಳು ಕಾಮುಕತೆಯ ಸಂಕೇತವಾಗಿ ಅವರಿಗೆ ಕಂಡವು. ದೇವಾಲಯವೋ?  ಕಾಮಾಲಯವೋ? ಎಂಬ ಭಾವವನ್ನು ವ್ಯಕ್ತಪಡಿಸಿದವರೂ ಉಂಟು.

ಭಕ್ತಿಯಿಂದ ತನ್ಮಯತೆಯಿಂದ ಶಿವನನ್ನು ಲಿಂಗರೂಪದಲ್ಲಿ ಕಾಮವಾಸನೆಯ ಸೋಂಕೇ ಇಲ್ಲದೆ ಪವಿತ್ರಭಾವದಿಂದ ಆರಾಧಿಸುತ್ತಿದ್ದವರ ಮನಸ್ಸನ್ನೂ ಈ ವಾದಗಳು ಕಲಕುತ್ತಿವೆ. ಶಿವನಿಗೂ-ಲಿಂಗಕ್ಕೂ ಏನು ಸಂಬಂಧ? ಲಿಂಗಕ್ಕೆ ಈ ಆಕೃತಿಯಾದರೂ ಏತಕ್ಕೆ? ಇದರ ಪೂಜೆಯು ಶಿವನ ಪೂಜೆ ಹೇಗಾಗುತ್ತದೆ? ಎಂಬ ಪ್ರಶ್ನೆಗಳಿಗೆ ನ್ಯಾಯವಾದ ಉತ್ತರ ಅವರಿಗೆ ದೊರೆತ ಹೊರತು  ಅವರ ಭಕ್ತಿಯ ಬೇರು ದೃಢಗೊಳ್ಳದು. ವಿಚಾರದತ್ತ ಒಲವುಳ್ಳ ಇಂದಿನ ಯುಗದಲ್ಲಿ ವೈಚಾರಿಕವೂ, ನ್ಯಾಯವೂ, ಸತ್ಯಸಮ್ಮತವೂ ಆದ ಉತ್ತರವು ನಿಜವನ್ನು ಬೆಳೆಸಲು ಸಹಾಯಕವಾದೀತೇ ಹೊರತು ಕೇವಲ ಸಂಪ್ರದಾಯ, ಪ್ರಾಚೀನತೆಗಳ ಮೇಲೆ ಬೆಳೆದ ನಂಬಿಕೆಗಳಷ್ಟೇ ನಿಜವುಳಿಸಲಾರವು.

ಈ ಹಿನ್ನೆಲೆಯ ಮೇಲೆ ಶಿವನಿಗೂ ಲಿಂಗರೂಪಕ್ಕೂ ಇರುವ ಸಂಬಂಧವೇನು?  ಅದು ಅವೈದಿಕವೇ?  ಸತ್ಯಸಮ್ಮತವೇ? ಜೀವನದ ಮೇಲ್ಮೆಗೆ ಇಂದೂ ಕಾರಣವಾಗುವ ಯಾವ ಅಂಶಗಳಾದರೂ ಅದರಲ್ಲಿವೆಯೇ? ಎಂಬಂಶಗಳತ್ತ ವಸ್ತುನಿಷ್ಠವಾಗಿ ಪರಿಶೀಲಿಸಬೇಕಾಗಿದೆ.

ಲಿಂಗರೂಪದಲ್ಲಿ ಶಿವನ ಆರಾಧನೆಯನ್ನು ಬೆಳೆಸಿದವರ ಸಾಹಿತ್ಯ, ಸಂಪ್ರದಾಯ ಇಂದು ಏನು ಉಳಿದಿದೆ-ಎಂಬುದೂ ಇಲ್ಲಿ ಪರಿಶೀಲನಾರ್ಹವಾಗಿದೆ. ಭಾವನೆಗೆ ವಶರಾಗಿ ಸತ್ಯವನ್ನು ನಿರ್ಲಕ್ಷಿಸುವುದು ಬೇಡ. ಸತ್ಯಕ್ಕೆ ಹೊಂದಿಕೊಂಡಂತೆಯೇ ನಮ್ಮ ಮನಸ್ಸನ್ನು ಅಳವಡಿಸಿಕೊಂಡಾಗ ಯಾವ ಭಾವನೆ ಬೆಳೆಯುತ್ತದೆ ನೋಡೋಣ. 

ಲಿಂಗ-ರೂಪವಾದ ಆಕೃತಿಯ ಸಮಸ್ಯೆಯೇ ಇಲ್ಲಿ ಬಿಡಿಸಬೇಕಾದ ಮೊದಲನೆಯ ಒಗಟು. ಇದನ್ನು ಮೊದಲು ಗಮನಿಸಿ ನಂತರ ಉಳಿದವುಗಳತ್ತ ಗಮನ ಹರಿಸೋಣ.  

ಲಿಂಗ- ಎಂಬುದು ಹೊರ ಆಕೃತಿಯಿಂದ ನೋಡಿದಾಗ ಕಲ್ಲು, ಮರ, ಲೋಹ, ರತ್ನಗಳಾಗಿ ಕಾಣುತ್ತದೆಂಬ ಅಂಶ ಅದನ್ನು ತಂದವರಿಗೂ ಗೊತ್ತು. ಆದ್ದರಿಂದಲೇ ಲಿಂಗಗಳನ್ನು ಶೈಲಜ, ದಾರುಜ, ಲೋಹಜ, ರತ್ನಜ-ಮೊದಲಾಗಿ ದ್ರವ್ಯಗಳ ಮೇಲೆ ಹೆಸರಿಸುವ ಸನ್ನಿವೇಶವೂ ಕಂಡುಬರುತ್ತದೆ. ಮಾಣಿಕ್ಯಲಿಂಗ, ಮರಕತಲಿಂಗ, ಪ್ರವಾಳಲಿಂಗ ಮೊದಲಾದವುಗಳು ಲಿಂಗವು ಯಾವ ದ್ರವ್ಯದಿಂದ ನಿರ್ಮಾಣಗೊಂಡದ್ದು ಎಂಬ ಅಂಶವನ್ನೇ ಸಾರಿಹೇಳುತ್ತದೆ. 

ಇದರ ಜೊತೆಗೆ ಲಿಂಗವು- ಪುರುಷ- ಸ್ತ್ರೀ ಚಿಹ್ನಗಳ ಸೇರುವೆಯ ರೂಪದ್ದು ಎಂಬಂಶವನ್ನೂ ಅವರು ಮರೆಮಾಚಿಲ್ಲ. ಲಿಂಗದ ಆಧಾರವಾಗಿರುವ ಪೀಠವನ್ನು ಯೋನಿಪೀಠವೆಂದೂ, ಶಕ್ತಿಪೀಠವೆಂದೂ 

ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಂಡಾಕಾರವಾದ ಪೀಠವು ಉಮಾರೂಪವಾದುದು.  ವರ್ತುಲಾಕಾರವಾದ ಸ್ತಂಭಾಕೃತಿಯು ಶಿವರೂಪ. 

 "ಉಮಾಯೈ ಭಗರೂಪಿಣ್ಯೈ  ಲಿಂಗರೂಪಧರಾಯ ಚ ಶಂಕರಾಯ ನಮಸ್ತುಭ್ಯಂ ....... (ಕಾಮಿಕಾಗಮ) 

ಭಗ ಮತ್ತು ಲಿಂಗಗಳ ಸೇರುವೆ ಇಲ್ಲಿದೆ ಎಂಬುದನ್ನು ಬಹು ಸ್ಪಷ್ಟರೂಪದಲ್ಲಿಯೇ ಇಲ್ಲಿ ಹೇಳಿದೆ. ಹಾಗಾದರೆ ಅವುಗಳ ಸೇರುವೆ ಅವರಲ್ಲಿ ಲಜ್ಜೆಯನ್ನೇಕೆ ತರಲಿಲ್ಲ?  ಅದರ ಬದಲು ಯಾವ ಭಾವವನ್ನು ಮೂಡಿಸಿತು?  ಲಿಂಗ- ಯೋನಿಗಳ ಸೇರುವೆಯಲ್ಲಿ ಕಾಮವನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದಾಗ ಅವನ ಮನಸ್ಸಿನಲ್ಲಿ ವಿಕಾರವು ತೋರಬಹುದು. ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅದು 

ಲಜ್ಜಾಭಾವಕ್ಕಿಂತಲೂ ಇರುವ ಸತ್ಯದ ಪರಿಚಯವನ್ನು ಮಾಡಿಕೊಡುವುದಿಲ್ಲವೆ?  ಇಡೀ ಸೃಷ್ಟಿಯು ಬೆಳೆಯುತ್ತಿರುವುದೇ ಲಿಂಗ-ಯೋನಿಗಳ ಸಂಬಂಧದಿಂದ. ಸ್ತ್ರೀ ಪುರುಷ ಸಂಬಂಧದಿಂದ.  ಸೃಷ್ಟಿ ಬೆಳೆಯಲಾರಂಭಿಸಿದಂದಿನಿಂದಲೂ ಲಿಂಗಯೋನಿಗಳ ಮೂಲಕವೇ ಇಡೀ ಜಗತ್ತು ವಿಸ್ತಾರಗೊಳ್ಳುತ್ತಿದೆ. ಇಲ್ಲಿ ಲಿಂಗವು ಸೃಷ್ಟಿಗೆ ಕಾರಣವಾದ ಬೀಜವಾಗಿಯೂ, ಯೋನಿಯು ಅದನ್ನು ವಿಸ್ತಾರಗೊಳಿಸುವ ಕ್ಷೇತ್ರವಾಗಿಯೂ ಇರುವ ಅಂಶವೂ ನಿಜವಲ್ಲವೆ?  ಆದ್ದರಿಂದಲೇ ಈ ಪುರುಷಲಿಂಗ ಮತ್ತು ಸ್ತ್ರೀಯೋನಿಗಳ ಸೇರುವೆಯಲ್ಲಿ ಅವರು ಕಂಡುದು ಸಂಕುಚಿತವಾದ ಕಾಮವಾಸನೆಯನ್ನಲ್ಲ. ವಿಸ್ತಾರವಾದ ಜಗತ್ಸೃಷ್ಟಿಯನ್ನು. ಈ ಸೇರುವೆಯಿಂದಲೇ ಜಗತ್ತು ಬೆಳೆಯುತ್ತಿದೆ ಎಂಬ ವಸ್ತುನಿಷ್ಠವಾದ ಸತ್ಯವನ್ನು. ಆದ್ದರಿಂದಲೇ ಪುರುಷ ಚಿಹ್ನವಾದ ಲಿಂಗವು ತನ್ನ ತೇಜಸ್ಸಿನಿಂದ ಎಲ್ಲವನ್ನೂ ತುಂಬಿಕೊಂಡು ಬೆಳೆಯುವ ಶಿವನನ್ನೂ, ಸ್ತ್ರೀಲಿಂಗವಾದ ಯೋನಿಯು ಎಲ್ಲವನ್ನೂ ಧರಿಸಿ ಬೆಳೆಸುವ ಶಿವೆಯನ್ನೂ, ಶಕ್ತಿಯನ್ನೂ  ಜ್ಞಾಪಿಸುತ್ತಾ ಅವರ ಮನಸ್ಸು ಶಿವಲಿಂಗದಲ್ಲಿ ಕಂಡುದು ವಿಶ್ವ ಸೃಷ್ಟಿ ಕಾರಣರಾದ ಶಿವ-ಶಕ್ತಿಯರ ಸೇರುವೆಯನ್ನು. ಶಿವಶಕ್ತಿಗಳ ಸೇರುವೆಯಾದ ಲಿಂಗದಲ್ಲಿ ಅವರು ಗುರುತಿಸಿದುದು ಅರ್ಧನಾರೀಶ್ವರನನ್ನು. 

"ಸಾ ಭಗಾಖ್ಯಾ ಜಗದ್ಧಾತ್ರೀ ಲಿಂಗಮೂರ್ತೇಸ್ತ್ರಿವೇದಿಕಾ ಲಿಂಗಮೂರ್ತಿಃ ಶಿವೋಜ್ಯೋತಿಃ ತಮಸಶ್ಚೋಪರಿಸ್ಥಿತಃ ಲಿಂಗವೇದಿಸಮಾಯೋಗಾದರ್ಧನಾರೀಶ್ವರೋsಭವತ್" 


ಜಗದ್ಧಾತ್ರಿಯಾದ ಉಮೆಯೇ ಲಿಂಗಮೂರ್ತಿಯಾದ ಶಿವನ ವೇದಿಕೆ. ತಮಸ್ಸನ್ನು ದಾಟಿರುವ ಜ್ಯೋತಿಯೇ ಲಿಂಗಮೂರ್ತಿಯಾದ ಶಿವನು. ಲಿಂಗ ಮತ್ತು ವೇದಿಗಳ ಸೇರುವೆಯಿಂದ ಅವನು ಅರ್ಧನಾರೀಶ್ವರನಾದ. ಇದೇ ಶಿವನಿಗೂ ಲಿಂಗಕ್ಕೂ ಇರುವ ಸಂಬಂಧ. ಇದು ವಸ್ತುನಿಷ್ಠವೂ ಸತ್ಯನಿಷ್ಠವೂ ಆದ ಸಂಬಂಧ. ಕಲ್ಪಿತವಲ್ಲ. ಲಿಂಗದಲ್ಲಿ ಕಾಮವಾಸನೆಯನ್ನು ನೋಡುವುದಿರಲಿ, ಪ್ರತ್ಯಕ್ಷ ಲಿಂಗಯೋನಿಗಳನ್ನು ಧರಿಸಿದ ಸ್ತ್ರೀ ಪುರುಷರನ್ನೇ ಅವರು ಶಿವ-ಶಿವೆ ಯರ ವಿಸ್ತೃತ ರೂಪ ಎಂದು ಕಂಡರು. ಅವರ ಸೃಷ್ಟಿಶಕ್ತಿಯನ್ನು ಪಡೆದವರು ಎಂದು ಅರಿತರು. ಆದ್ದರಿಂದ ಇಡೀ ಜಗತ್ತಿನಲ್ಲಿ ಸೃಷ್ಟಿ ಕಾರಣವಾದ ಲಿಂಗಶಕ್ತಿಯನ್ನೂ, ಅದರ ವಿಸ್ತಾರಕ್ಕೆ ಕಾರಣವಾದ ಯೋನಿಯನ್ನು ಪಡೆದ ಎಲ್ಲರೂ ಶಿವ-ಶಿವೆಯರ ಅನುಗ್ರಹದಿಂದಲೇ ಸೃಷ್ಟಿಶಕ್ತಿಯನ್ನು ಪಡೆದವರು.

 ಪುಲ್ಲಿಂಗಂ ಸರ್ವಮೀಶಾನಾಂ ಸ್ತ್ರೀಲಿಂಗಂ ವಿದ್ಧಿ ಚಾಪ್ಯುಮಾಮ್ 

ದ್ಯಾಭ್ಯಾಂ ತನುಭ್ಯಾಂ ವ್ಯಾಪ್ತಂ ಹಿ ಚರಾಚರಮಿದಂ ಜಗತ್

ಪುಲ್ಲಿಂಗವೆಲ್ಲವೂ ಈಶನ ಶಕ್ತಿ; ಸ್ತ್ರೀಲಿಂಗ ಉಮಾಶಕ್ತಿ. ಆ ಎರಡು ಶಕ್ತಿಗಳಿಂದಲೇ ವಿಶ್ವವೆಲ್ಲವೂ ತುಂಬಿದೆ. ಆ ಎರಡಿಲ್ಲದ ವಿಶ್ವವೆಲ್ಲಿದೆ?  ಲಿಂಗ- ಭಗಗಳಿಲ್ಲದ ವಿಶ್ವವನ್ನು ಊಹಿಸಲಾದರೂ ಸಾಧ್ಯವೇ?  ಲಿಂಗ-ಭಗಗಳು ಸೃಷ್ಟಿಯನ್ನು ಬೆಳೆಸುವ ಮಾಧ್ಯಮಗಳು. ಆದರೆ ಸೃಷ್ಟಿಯ ಮೂಲಶಕ್ತಿಗಳು ಶಿವಶಕ್ತಿಗಳು.


ಶಿವ-ಶಕ್ತಿಗಳು ಸೃಷ್ಟಿಗೆ ಕಾರಣರಾಗಿ ಸೇರುವಂತೆಯೇ ಮತ್ತೊಂದು ರೀತಿಯಲ್ಲಿಯೂ ಸೇರಬಹುದು. ಶಿವಲಿಂಗದಲ್ಲಿ ಲಿಂಗವು ಊರ್ದ್ವಮುಖವಾಗಿರುವುದನ್ನು ನಾವು ಗಮನಿಸಬಹುದು. ಇಲ್ಲಿರುವುದು ಊರ್ಧ್ವಲಿಂಗ. ಸೃಷ್ಟಿಯಿಂದ ತನ್ನ ಶಕ್ತಿಯನ್ನು ಮೂಲ ನೆಲೆಯತ್ತ ಹರಿಸುವ ಶಿವನ ರೂಪವಿದು. ವಿಸ್ತಾರಗೊಂಡ ಬೀಜವು ಮತ್ತೆ ಹಣ್ಣಿನೊಳಗೆ ಬೀಜ ರೂಪದಲ್ಲಿ ತನ್ನ ಶಕ್ತಿಯೆಲ್ಲವನ್ನೂ ಸಂಗ್ರಹಿಸಿಕೊಳ್ಳುವಂತೆ ತನ್ನ ಮೂಲನೆಲೆಯಲ್ಲಿ ಜ್ಯೋತಿಯಲ್ಲಿ ಒಂದಾಗುವ ಎಲ್ಲವನ್ನೂ ಲಯಗೊಳಿಸುವ ಮಹಾದೇವನೇ ಊರ್ಧ್ವಲಿಂಗ. ಆದ್ದರಿಂದ ಲಯದ ಅಧಿದೇವನಾದ ಶಿವನಿಗೆ ಆ ರೂಪ. ಎಲ್ಲವನ್ನೂ ಮೂಲಶಕ್ತಿಯಲ್ಲಿ ಲಯಗೊಳಿಸಿದಾಗ ಅವನು ಜ್ಞಾನಮೂರ್ತಿ. ಊರ್ಧ್ವಲಿಂಗವು ಆ ಜ್ಞಾನದ ಸ್ಥಿತಿಯತ್ತ ಕೈದೋರುವುದರಿಂದ ಶಿವನೊಡನೆ ತನ್ಮಯವಾಗಿ ಭಾವಿಸುವುದು ಸತ್ಯಕ್ಕೆ ಹೊಂದಿಕೊಂಡ ಭಾವನೆಯೇ ಹೊರತು ಅದರ ವಿಪರ್ಯಾಸವಲ್ಲ. ಆದ್ದರಿಂದಲೇ ಲಿಂಗ ಪದದ ವಿವರಣೆ ಹೀಗಿದೆ.

 ಲಯಂ ಗಚ್ಛಂತಿ ಭೂತಾನಿ ಸಂಹಾರೇ ನಿಯತಂ ಯತಃ ಸೃಷ್ಟಿಕಾಲೇ ಪುನಸೃಷ್ಟಿಂ ತಸ್ಮಾಲ್ಲಿಂಗಮುದಾಹೃತಂ 

ಅಧೋಲಿಂಗರಾಗಿ ಸೃಷ್ಟಿಯ ವಿಸ್ತಾರದಲ್ಲಿ ಸಿಲುಕಿ ಮೈಮರೆತಿರುವ ಜೀವಲೋಕಕ್ಕೆ ನಿಮ್ಮ ಶಕ್ತಿಯನ್ನು  ಊರ್ಧ್ವಮುಖವಾಗಿ ಸೆಳೆದರೆ ಅಲ್ಲಿ ನಿಮ್ಮ ಜೀವನದ ಮೂಲಜ್ಯೋತಿಯನ್ನು ನೋಡಬಹುದು-ಎಂಬ ಸಂದೇಶವನ್ನು  ಊರ್ಧ್ವಲಿಂಗವು ನೀಡುತ್ತದೆ. ಆದ್ದರಿಂದ ಅದು ಕೇವಲ ಹೊರಗೆ ಕಾಣುವ ಲಿಂಗ-ಯೋನಿಗಳಷ್ಟೇ ಅಲ್ಲ, ಶಿವಶಕ್ತಿಗಳ ಸಮಾಯೋಗ. ಅಂತೆಯೇ ಲಿಂಗಗಳಲ್ಲಿ ಆತ್ಮಲಿಂಗ, ಪ್ರಾಣಲಿಂಗ, ಜ್ಯೋತಿರ್ಲಿಂಗ, ಪರಮಾತ್ಮಲಿಂಗ ಎಂಬ ಅಂತರ್ದರ್ಶನಗೋಚರವಾದ ರೂಪಗಳೂ ಉಂಟು. ಶಿವಲಿಂಗಗಳಲ್ಲಿ ಮುಖಗಳನ್ನು ಕೆತ್ತಿ "ಮುಖಲಿಂಗ" ವೆಂದು ಆರ್ಚಿಸುವ ಎಡೆಯೂ ಇದೆ. ಆ ಮುಖಲಿಂಗವು ಮೋಕ್ಷಪ್ರದವೆಂಬ ಮಾತೂ ಇದೆ. ಅದಕ್ಕೆ ಕಾರಣ ಲಿಂಗ ರೂಪದಲ್ಲಿ  ಊರ್ಧ್ವ ರೇತಸ್ಕತೆಯನ್ನೂ ಜ್ಞಾನಮುಖವಾದ ಸಂಚಾರವನ್ನೂ ಜ್ಞಾಪಿಸುವುದರ ಜೊತೆಗೆ ಅಲ್ಲಿ ಅಂತರ್ಲಕ್ಷ್ಯ ಗೋಚರವಾದ ಸದ್ಯೋಜಾತಾದಿ ಶಿವನ ಮುಖಗಳನ್ನೂ ಬಿಂಬಿಸಿದರೆ-ಆ ಜ್ಞಾನದ ಹಾದಿಯಲ್ಲಿ ತೀವ್ರವಾಗಿ ಸಂಚರಿಸಲು ಸಹಾಯವಾಗುವುದು. ಶಿವಲಿಂಗದ ಜೊತೆಗೆ ಹೆಡೆ ಮೇಲೆತ್ತಿದ ಸರ್ಪವೂ ಇರುವುದು ಜ್ಞಾನಿಗಳಲ್ಲಿ  ಊರ್ದ್ವಮುಖವಾದ ಕುಂಡಲಿನಿಗೆ ಸೂಚಕವಾದುದೇ ಆಗಿದೆ.

ಶಿವಲಿಂಗವು ಶಿವ-ಶಕ್ತಿಗಳ ಸೇರುವೆಯ ಪ್ರತೀಕವಷ್ಟೇ ಅಲ್ಲ. ಯೋಗ ಮಾರ್ಗದಲ್ಲಿ ಒಳಹಾದಿಯಲ್ಲಿ ಸಂಚರಿಸುವಾಗ ಅಂತರ್ಲಕ್ಷ್ಯಕ್ಕೆ ಲಿಂಗಾಕೃತಿಯೂ  ಗೋಚರವಾಗುವುದುಂಟೆಂಬುದು ಅನುಭವ ಗೋಚರವಾದ ಸತ್ಯ. ಯೋಗ ಭೂಮಿ  ಗೋಚರವಾದ ಅಂತಸ್ಸತ್ಯವನ್ನು ಹೊರಗೂ ಕನ್ನಡಿಸಿ ಜೀವಿಗಳನ್ನು ಒಳಸೌಖ್ಯ-ಶಾಂತಿಗಳಿಂದ ತುಂಬಲು ತಂದ ಯೋಜನೆಯೇ ಶಿವಲಿಂಗದ ರೂಪ. "ಅಜ-ವಿಷ್ಣು-ಹರೈರ್ಯುತಂ"- ಶಿವಲಿಂಗವು ಸೃಷ್ಟಿ-ಸ್ಥಿತಿ-ಲಯಾಧೀಶರಾದ ಬ್ರಹ್ಮವಿಷ್ಣು ಶಿವಾತ್ಮಕವಾದುದು. ಶಿವ-ರುದ್ರ-ಲಿಂಗಗಳು ಆರ್ಯರ ಕಲ್ಪನೆಯೂ ಅಲ್ಲ, ದ್ರಾವಿಡರ ಕಲ್ಪನೆಯೂ ಅಲ್ಲ. ಇನ್ನು ಮೂಲನಿವಾಸಿಗಳ ಕೊಡುಗೆಯಂತೂ  ಅಲ್ಲವೇ ಅಲ್ಲ. ನಿಸರ್ಗದ ಒಳಬದಿಯ ಸತ್ಯವನ್ನು  ಅನ್ವೇಷಿಸುತ್ತಾ  ಜ್ಞಾನಭೂಮಿಯಲ್ಲಿ ಯೋಗಪಥದಿಂದ ಸಂಚರಿಸುತ್ತಾ ತಾವು ಕಂಡ ಸತ್ಯಗಳನ್ನು ಹೊರ ಹೊಮ್ಮಿಸಿದ ಜ್ಞಾನಿಗಳ ಕೊಡುಗೆ. 

ಲಿಂಗಪದಕ್ಕೆ ವೇದಮೂಲವನ್ನು ಹುಡುಕುವ ಸಂಶೋಧಕರು ಆರ್ಯ ದ್ರಾವಿಡ ಎಂಬ ಪದಗಳೇ ವೇದಗಳಲ್ಲಿ ಅವರ ಅರ್ಥದಲ್ಲಿಲ್ಲವೆಂಬುದರ ಬಗೆಗೆ ಏಕೆ ಕುರುಡಾಗಿದ್ದಾರೆಯೋ ತಿಳಿಯದು. ಅಥವಾ ಅದೊಂದು ಒಡಕನ್ನು ಬಿತ್ತುವ ಜಾಣಕುರುಡೊ?  ಶಿವ-ಲಿಂಗದ ಒಗಟನ್ನಾಗಲೀ, ಶಿವ-ರುದ್ರರ ರಹಸ್ಯವನ್ನಾಗಲೀ, ಆ ರಹಸ್ಯವನ್ನೊಳಗೊಂಡ ಮಾತುಗಳನ್ನಾಗಲೀ, ಹೊರ ಬುದ್ಧಿಯಿಂದ ಮಾತ್ರ ಬಗೆಹರಿಸಹೊರಟರೆ ಆ ಒಗಟು ಬಿಚ್ಚದು. ಅದನ್ನು ಯಾರು ಹೇಗೆ ತಂದರೋ ಆ ರಹಸ್ಯವರಿತು, ಆ ಸಾಧನೆ-ಅನ್ವೇಷಣೆಗಳಿಂದ ಅತ್ತ ಹುಡುಕುವ ಯತ್ನ ಬೆಳೆದಾಗ ತಾನೇ ದೇಶದಲ್ಲಿ ಮತ್ತೆ ಅಂತಸ್ಸತ್ಯಗಳು ದೃಢಮೂಲವಾಗಿ ಬೆಳೆದಾವು!

ಜ್ಞಾನ ಭೂಮಿಕೆಯಿಂದ ಹೊಮ್ಮಿದ ವೇದಕ್ಕೆಷ್ಟು ಬೆಲೆಯೋ, ಅಲ್ಲಿಂದಲೇ ಚಿಮ್ಮಿದ ಆಗಮಕ್ಕೂ ಅಷ್ಟೇ ಬೆಲೆ. ಆದ್ದರಿಂದ, ಆಗಮಗಳಲ್ಲಿ ಶಿವನ ಸತ್ಯವನ್ನು ಸಾರಿದ ಮಾತ್ರಕ್ಕೆ ಅದಕ್ಕೆ ಬೆಲೆ ಏನೂ ಕಡಿಮೆಯಿಲ್ಲ. ಮೇಲಾಗಿ ಜ್ಞಾನಿಗಳು ವೇದವೆಂದುದು ಮೂಲತಃ ವಿಶ್ವಮೂಲವಾದ ಆ ಜ್ಯೋತಿಯನ್ನೇ. ಆ ಸತ್ಯಪ್ರಪಂಚಕ್ಕೆ ಪ್ರವೇಶಿಸಿದಾಗ ಅಲ್ಲಿಂದ ಹೊಮ್ಮಿದ  ವಾಙ್ಮಯಗಳೇ ವೇದಗಳು. ಆ ಸತ್ಯವನ್ನು ಪ್ರಕಾಶಪಡಿಸುವುದರಿಂದಲೇ ಅವಕ್ಕೆ ಬೆಲೆ. 

ಇದರ ಜೊತೆಗೆ ಹೊರ ಹೊಮ್ಮಿರುವ ವೇದರಾಶಿಯೂ ನಮಗೆ ಸಮಗ್ರವಾಗಿ ಉಪಲಬ್ಧವಾಗಿಲ್ಲ. ನಮಗೆ ದೊರೆತಿರುವಷ್ಟು ವೇದಸಾಹಿತ್ಯವು ಪ್ರಕಾಶಕ್ಕೆ ಬಂದ ವೇದವಾಙ್ಮಯದ ಒಂದು ಭಾಗ ಮಾತ್ರ. ಆ ಭಾಗದಲ್ಲಿ ಒಂದು ಪದ ಕಾಣದ ಮಾತ್ರಕ್ಕೆ ಆ ವಿಷಯವೇ ಆ ಕಾಲದಲ್ಲಿಲ್ಲವೆನ್ನುವುದು ಜಾಣ್ಮೆಯ ಮಾತೇನೂ ಅಲ್ಲ. ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುವಿನ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. "ಹೃದಯ ಎಪ್ಪತ್ತೆರಡು ಸಲ ಬಡಿಯುತ್ತದೆ"- ಎಂಬ ಉಲ್ಲೇಖವು ವೇದ ಸಾಹಿತ್ಯದಲ್ಲಿ ನಿಮಗೆ ದೊರಕದಿರಬಹುದು. ಹಾಗಾದರೆ ವೇದಕಾಲದಲ್ಲಿ ಹೃದಯದ ಬಡಿತವೇ ಇರಲಿಲ್ಲ. ಬಡಿತವನ್ನು ಪುಸ್ತಕದಲ್ಲಿ ಬರೆದ ಮೇಲೆ ಬಡಿತಕ್ಕೆ ಶುರುವಾಯಿತು ಎನ್ನುವುದು ನ್ಯಾಯವೆ?"  ಆದ್ದರಿಂದ ಒಂದು ವಿಷಯವು ವೇದದಲ್ಲಿ ಉಲ್ಲೇಖಿತವಾಗಿದೆಯೇ ಇಲ್ಲವೇ ಎನ್ನುವುದಕ್ಕಿಂತಲೂ ಅದು ಸತ್ಯವೇ ಅಲ್ಲವೇ? -ಎಂಬುದನ್ನು ಪರಿಶೀಲಿಸಿ, ನಿಸರ್ಗಸಿದ್ಧವೂ, ಸಹಜಸಿದ್ಧವೂ ಆದ ಸತ್ಯವಾದರೆ ಅದನ್ನು ಒಪ್ಪಿ ಕೊಳ್ಳುವುದು, ಉತ್ತಮ.

ಆ ದೃಷ್ಟಿಯಿಂದ ಮಹರ್ಷಿಗಳ, ಜ್ಞಾನಿಗಳ ಜ್ಞಾನಭೂಮಿಕೆಯಲ್ಲಿ ಗೋಚರಿಸಿದ ಸತ್ಯಗಳೆಲ್ಲವೂ ನಿಜವಾದ ಅರ್ಥದಲ್ಲಿ ಮೂಲಭೂತವಾದ ಅರ್ಥದಲ್ಲಿ ವೇದಸಮ್ಮತವೇ. ಅಂತೆಯೇ ಈ ಲಿಂಗಪೂಜೆಯೂ ಈ ಅರ್ಥದಲ್ಲಿ ವೈದಿಕವೇ.

ಶಿವ-ಶಕ್ತಿಗಳ ಜ್ಞಾನಾಭಿಮುಖ ಸಮಾಯೋಗವನ್ನು ಸೂಚಿಸುವ ಶಿವಲಿಂಗವು ಶಿವನಿಗಿಂತ ಅಭಿನ್ನ.  ಶಿವಭಾವದತ್ತ ಜೀವಿಗಳನ್ನು ಚಿಮ್ಮಿಸುವ ಮಹಾನಕ್ಷೆ.  ಮನಸ್ಸಿನ ಕೆಳಮಟ್ಟದಲ್ಲಿ ಉಂಟಾಗುವ ಕಾಮವಿಕಾರದಿಂದ ಮನಸ್ಸನ್ನು ಮೇಲೆತ್ತಿ, ವಿಕಾರರಹಿತವಾದ ಸ್ಥಿತಿಗೆ ನಮ್ಮನ್ನು ಪ್ರಚೋದಿಸುವ ಮಹಾಶಕ್ತಿ.  ಪ್ರಕೃತಿಯ ವಿಕಾರಗಳೆಲ್ಲವನ್ನೂ ಕಳೆದು ಶಿವನಲ್ಲಿ ತನ್ಮಯಗೊಳಿಸಿ ಪರಮಾನಂದ ನಿಧಿಯತ್ತ ಸೆಳೆಯುವ ಅಂತಸ್ಸತ್ಯ, ಎಂಬ ಸತ್ಯವನ್ನು ಅನುಭವದ ಆಧಾರದ ಮೇಲೆ ನನ್ನ ಬುದ್ಧಿಭೂಮಿಕೆಯಲ್ಲಿ ಬಿಡಿಸಿ ಈ ಬರಹಕ್ಕೆ ಸ್ಫೂರ್ತಿಯಾದ ಶ್ರೀರಂಗಮಹಾಗುರುವಿಗೂ, ಅವನ ಒಳಮೂಲಜ್ಯೋತಿಯಾದ ಸಹಸ್ರಾರ ವಿಹಾರಿಯಾದ ಪರಮಶಿವನಿಗೂ ಶಿವರಾತ್ರಿಯ ಮಂಗಲಸ್ಮರಣೆಯೊಡನೆ ಈ ಬರಹವನ್ನರ್ಪಿಸುತ್ತೇನೆ. 

ಶ್ರೀ ಸದ್ಗುರವೇ ನಮಃ 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: 5 ಸಂಚಿಕೆ: 4, ಆಗಸ್ಟ್ 1983 ತಿಂಗಳಲ್ಲಿ  ಪ್ರಕಟವಾಗಿದೆ.