Monday, May 10, 2021

ಶ್ರೀರಾಮನ ಗುಣಗಳು -4 ಶ್ರೀರಾಮನ ಕೃತಜ್ಞತೆ (Sriramana Gunagalu -4 Sriramana krrtajnate)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನ ಕೃತಜ್ಞತೆ


ಶ್ರೀರಾಮನ ಅನೇಕ ಗುಣಗಳಲ್ಲಿ ಕೃತಜ್ಞತೆಯೂ ಒಂದು. ಯಾರಾದರೂ ನಮಗೆ ಆಪತ್ತಿನಲ್ಲಿ ಅಥವಾ ನಮಗೆ ಸಹಾಯ ಸ್ವೀಕಾರದ ಅನಿವಾರ್ಯತೆ ಇರುವ ಸಂದರ್ಭದಲ್ಲಿ ಅಥವಾ ಯಾವುದೋ ರೀತಿಯಲ್ಲಿ ಉಪಕಾರವನ್ನು ಮಾಡಿರುತ್ತಾರೆ.ಉಪಕಾರವನ್ನು ಸ್ವೀಕರಿಸಿದ ನಾವು ಉಪಕಾರ ಮಾಡಿದವರ ಬಗ್ಗೆ ಇಟ್ಟುಕೊಳ್ಳಲೇಬೇಕಾದ ಒಂದು ಭಾವವೇ ಕೃತಜ್ಞತೆ. 'ಕೃತ-ಮಾಡಿದ್ದನ್ನು, ಜ್ಞ- ತಿಳಿಯುವುದು. ಆತ ನಮ್ಮ ಅವಶ್ಯಕತೆ ಇದ್ದ ಕಾಲದಲ್ಲಿ ಯಾವ ರೀತಿಯಾಗಿ ಉಪಕಾರವನ್ನು ಮಾಡಿದ್ದಾನೆ ಎಂಬ ಅರಿವನ್ನು ಪಡೆಯುವುದು ಮತ್ತು ಅದನ್ನು ಸದಾ ಮರೆಯದೆ ಇರುವುದು ಕೃತಜ್ಞತೆಯ ಲಕ್ಷಣ. ಇನ್ನೊಂದು ರೀತಿಯಲ್ಲಿ ಹೇಳುವುದು ಇಂದು ರೂಢಿಯಲ್ಲಿದೆ. 'ಅವನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು' ಎಂದು. ಯಾವಾಗ ಉಪಕಾರ ಮಾಡಿದ ಬಗ್ಗೆ ಪ್ರಜ್ಞೆ ಜಾಗೃತವಾಗಿರುತ್ತದೋ ಅಲ್ಲಿಯವರೆಗೆ ಆತನ ಬಗ್ಗೆ ಮಾನಸಿಕವಾದ ಸಂಬಂಧ ಇರುತ್ತದೆ. ಒಂದು ವೇಳೆ ಉಪಕಾರಕ್ಕೆ ಪ್ರತ್ಯುಪಕಾರ ಮಾಡಿಬಿಟ್ಟರೆ ಅದು ಮರೆತುಹೋಗುವ ಸಂಭವವೂ ಉಂಟು. ಹಾಗಾಗಿ ಪ್ರತ್ಯುಪಕಾರ ಮಾಡುವುದಕ್ಕಿಂತಲೂ ಶ್ರೇಷ್ಠವಾದುದು ಮಾಡಿದ ಉಪಕಾರವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು. ಜ್ಞಾನವೇ ಮುಂದಿನ ಎಲ್ಲಾ ಕ್ರಿಯೆಗೂ ಮೂಲವಾಗಿರುವುದರಿಂದ ಕ್ರಿಯೆಗಿಂತ ಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕೃತಜ್ಞತೆಗೆ ವಿರುದ್ಧವಾದುದು ಕೃತಘ್ನತೆ. ಮಾಡಿದ ಉಪಕಾರವನ್ನು ಅರಿಯದೆ, ಸ್ಮರಿಸದೆ ಅಪಕಾರವನ್ನು ಮಾಡುವುದು. ಮಾಡಿದ ಸಹಾಯವನ್ನು ಜ್ಞಾಪಕದಲ್ಲಿರಿಸಿಕೊಂಡು ಸಕಾಲದಲ್ಲಿ ಪ್ರತ್ಯುಪಕಾರ ಮಾಡುವುದು ಕೃತಜ್ಞತೆಯ ಲಕ್ಷಣವಾಗಿದೆ. ಈಅರ್ಥದಲ್ಲಿ  ಶ್ರೀರಾಮನ ಗುಣವಾದ 'ಕೃತಜ್ಞತೆ'ಯನ್ನು' ಸ್ವಲ್ಪ ತಿಳಿಯೋಣ.ಶ್ರೀರಾಮನ ಕೃತಜ್ಞತೆಯ ಸಮರ್ಪಣೆಯ ವಿಧಾನ ವಿಶಿಷ್ಟವಾದುದು. ಆಂಜನೇಯನು ಸೀತಾನ್ವೇಷಣೆಯ ಮಹತ್ಕಾರ್ಯವನ್ನು ಸಾಧಿಸಿ ಹಿಂದಿರುಗಿ ಬಂದು, "ಸೀತೆಯನ್ನು ನೋಡಿದೆ" ಎಂಬ ಸಂತೋಷದದ ಮಾತನ್ನು ಹೇಳುತ್ತಾನೆ.ಇದಕ್ಕಾಗಿ ಶ್ರೀರಾಮನು ತೋರಿಸಿದ ಕೃತಜ್ಞತೆ ಎಂದರೆಹನುಮಂತನನ್ನು ಆಲಿಂಗಿಸಿದುದು.  ಸ್ವಾಮಿಯ ಆಲಿಂಗನದಿಂದ ಆಂಜನೇಯನಿಗಾದ ಅನುಭವ ಅವನಿಗೆ ಮಾತ್ರ ವೇದ್ಯ.

 

ರಾವಣನ ಸಂಹಾರಕ್ಕಾಗಿ ಸುಗ್ರೀವನ ಜೊತೆ ಶ್ರೀರಾಮನು ಒಪ್ಪಂದವನ್ನು ಮಾಡಿಕೊಂಡಿರುತ್ತಾನೆ. ಅದಕ್ಕೆ ಶ್ರೀರಾಮನು ಸುಗ್ರೀವನ ಸಹೋದರ, ವಾಲಿಯನ್ನು ಸಂಹಾರ ಮಾಡಿ ಸುಗ್ರೀವನ ಪತ್ನಿಯನ್ನು ಮತ್ತು ಕಂಟಕರಹಿತ ರಾಜ್ಯವನ್ನು ಸುಗ್ರೀವನಿಗೆ ಕೊಡಿಸುತ್ತಾನೆ. ಇದು ಶ್ರೀರಾಮನ ಕೃತಜ್ಞತೆಯ ಇನ್ನೊಂದು ಉದಾಹರಣೆ.ರಾವಣನ ಸಂಹಾರದ ಅನಂತರ ಅವನ ತಮ್ಮ ವಿಷ್ಣುಭಕ್ತನಾದ ವಿಭೀಷಣನನ್ನು ಲಂಕೆಗೆ ಅಧಿಪತಿಯನ್ನಾಗಿಮಾಡಿದ ಶ್ರೀರಾಮ. ಯುದ್ಧವು ಮುಗಿದ ಮೇಲೆ ಸುಗ್ರೀವ ಮತ್ತು ವಿಭೀಷಣ ಸಹಿತನಾಗಿ ನಂದಿ ಗ್ರಾಮದಲ್ಲಿದ್ದ ಭರತನಿದ್ದಲ್ಲಿಗೆ ರಾಮನು ಬರುತ್ತಾನೆ. ಆಗ ಶ್ರೀರಾಮನು ಭರತನಿಗೆ ಸುಗ್ರೀವನನ್ನು ಪರಿಚಯಿಸುತ್ತಾ, ಸುಗ್ರೀವನು ನಮ್ಮ ಐದನೆಯ ಸಹೋದರ; 'ಕೊನೆಯವರೆಗೂ ನಮ್ಮ ಜೊತೆ ಇದ್ದು ನಮಗೆ ಉಪಕರಿಸಿದ್ದಾನೆ, ಅಪಕಾರ ಮಾಡದೆ ಉಪಕಾರವನ್ನು ಮಾಡುವುದರ ಮೂಲಕ ನಮ್ಮ ಮಿತ್ರನಾಗಿದ್ದಾನೆ ಈ ಸುಗ್ರೀವ' ಎಂದು ಹೇಳುತ್ತಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾನೆ . ಇಂತಹ ಅನೇಕ ಸುರಸ ಘಟ್ಟಗಳು ಶ್ರೀರಾಮನ ಚರಿತೆಯಲ್ಲಿ ಕಾಣಸಿಗುತ್ತವೆ.

ಸೂಚನೆ : 9/5/2021 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.