Saturday, May 29, 2021

ಷೋಡಶೋಪಚಾರ- 2 (Shodashopachara - 2)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



"ಯಾವ ಹೃದಯದಲ್ಲಿ ಭಗವಂತ ವಾಸಮಾಡುತ್ತಾನೋ ಆ ರಸಯುಕ್ತ ಹೃದಯದ ರಸದಿಂದ ನಮ್ಮಜೀವನ ಬೆಳೆಯಬೇಕು. ಆತ್ಮರಸದಿಂದ ಇಂದ್ರಿಯಗಳು ಬೆಳೆಯಬೇಕು. ಹೂವಿಗೆ ನೀರೆರೆದರೆ ಗಿಡಬೆಳೆಯೋಲ್ಲ. ಗಿಡ ಬೆಳೆಯಬೇಕಾದರೆ ಪಾತಿಗೆ ನೀರು ಹಾಕಬೇಕು. ಹಾಗೆಯೇ ಹೃದಯದ ಪಾತಿಯಲ್ಲಿರುವಭಗವಂತನಿಗೆ ನೀರೆರೆದರೆ ಎಲ್ಲಾ ಶಾಖೆಗಳಿಗೂ ತಲಪುತ್ತದೆ." ಎಂಬ ಶ್ರೀರಂಗಮಹಾಗುರುವಿನ ಈಮಾತು ನಾನು ಮುಂದೆ ಹೇಳಲಿರುವ ವಿಷಯಕ್ಕೆ ಪೀಠವಿದ್ದಂತೆ.ಷೋಡಶೋಪಚಾರ ಎಂಬ ವಿಷಯವನ್ನು ಯಾವ ಉದ್ದೇಶಕ್ಕೆ ತಿಳಿದುಕೊಳ್ಳಬೇಕು? ಇದಕ್ಕಿರುವಅರ್ಥವೇನು? ಇವುಗಳನ್ನು ನಾವು ಯಾವ ಫಲದ ಅಪೇಕ್ಷೆಯಿಂದ ಮಾಡಬೇಕು? ಎಂಬಿತ್ಯಾದಿವಿಚಾರಗಳನ್ನು ಒಂದೊಂದಾಗಿ ನೋಡೋಣ.ನಮ್ಮೆಲ್ಲರ ಮೂಲ ಭಗವಂತ. ನಾವೆಲ್ಲರೂ ಆ ಮೂಲಕ್ಕೇ ಸೇರಬೇಕಾದವರು. ಯಾವುದೋಕಾರಣಕ್ಕಾಗಿ ಅಲ್ಲಿಂದ ಬೇರೆಯಾಗಿ ಮೂಲವನ್ನು ಮರೆತಿದ್ದೇವೆ. ಆದರೂ ನೆನಪಿಸಿಕೊಂಡು ಮತ್ತೆಭಗವಂತನ ನೆಲೆಯಲ್ಲೇ ಲೀನವಾಗಬೇಕಾಗಿದೆ. ಆದರೆ ಇದಕ್ಕೆ ಇಂದು ಮೂರ್ತಸ್ವರೂಪದ ಅವಲಂಬನಬೇಕಾಗಿದೆ. ಭಗವಂತನನ್ನು ನಿರ್ಗುಣ, ನಿರಾಕಾರ ಎಂದೆಲ್ಲಾ ಹೇಳುತ್ತೇವೆ. ಅವನುಗುಣಾತೀತನಾಗಿದ್ದರೂ ಗುಣಗಳ ಸಹಾಯದಿಂದಲೇ ಕೆಳಗೆ ಇಳಿದು, ಜೀವಿಗಳನ್ನುಗುಣಾತೀತರನ್ನಾಗಿಸಲು ಅವನು ಅನೇಕ ರೂಪವನ್ನು ತಾಳಿ ಬಂದಿರುತ್ತಾನೆ. ಇವುಗಳನ್ನೇ ಮೂರ್ತಿಎಂದು ಕರೆಯುತ್ತೇವೆ. ಅವ್ಯಕ್ತವಾದ ಭಗವಂತನನ್ನು ಆರಾಧಿಸಲು ವ್ಯಕ್ತರೂಪದ ಮೂರ್ತಿಯನ್ನುಪೂಜಿಸುವ ವಿಧಾನವನ್ನೇ ಉಪಚಾರ, ಆರಾಧನೆ ಎನ್ನುತ್ತೇವೆ.ಭಗವಂತನು ಈ ಭೂಮಿಗೆ ಬರಲು ಅನೇಕ ರೂಪಗಳನ್ನು ತಾಳುತ್ತಾನೆ. ಅದು ದೇವತಾರೂಪವಾಗಿರಬಹುದು, ಮಾನವರೂಪದಲ್ಲಿರಬಹುದು ಅಥವಾ ಇನ್ನಾವುದೋ ಆಕಾರದಲ್ಲಿರಬಹುದು.


ಭಗವಂತನು ಈ ಪ್ರಪಂಚದಲ್ಲಿ ಅಣುರೇಣುತೃಣಕಾಷ್ಠಗಳಲ್ಲಿಯೂನೆಲೆಸಿರುತ್ತಾನೆ. ಅಂತಹ ಅವ್ಯಕ್ತವಾದ ವಿಷಯವನ್ನು ನಾವು ಯಾವ ರೂಪದಲ್ಲಿ ಆರಾಧಿಸಿದರೂ ಅದುಭಗವಂತನನ್ನೇ ತಲಪುತ್ತದೆ. ಆದರೆ ಭಗವಂತನ ವಿಶೇಷ ಸಾನ್ನಿಧ್ಯವಿರುವ ಪದಾರ್ಥ ಎಂದು ನಮ್ಮಪರಂಪರೆ ಯಾವುದನ್ನು ಗುರುತಿಸಿದೆಯೋ ಅವುಗಳನ್ನು ಪೂಜಿಸಬೇಕು. ಅವೆಲ್ಲವೂ ಅಲ್ಲಿಗೆತಲುಪಿಸುವ ಯಾನಗಳು. ಇವುಗಳಿಂದ ಕೊನೆಯಲ್ಲಿ ನಾವು ಅವನ ನೆಲೆಯನ್ನು ಸೇರುವಂತಾಗುತ್ತದೆ."ಬಾಹ್ಯೇ ತ್ವಾಂ ಸಮ್ಯಗರ್ಚಯೇ" ಎಂಬಂತೆ ಭಗವಂತನನ್ನು ಭಕ್ತರು ಅವರವರ ಭಾವಕ್ಕೆಅನುಗುಣವಾಗಿ ಪೂಜಿಸುತ್ತಾರೆ. ವಿಪ್ರರು ಅಗ್ನಿಯಲ್ಲಿ, ಯೋಗಿಗಳು ಹೃದಯದಲ್ಲಿ, ಪಾಮರರುಪ್ರತಿಮೆಯಲ್ಲಿ, ಜ್ಞಾನಿಗಳು ಎಲ್ಲೆಡೆ ಭಗವಂತನನ್ನು ಉಪಚರಿಸುತ್ತಾರೆ. ಅದರಲ್ಲೂ ಈ ಉಪಚಾರವಿಧಾನವು ಪಾಮರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ.ಅವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳೋಣ.

ಸೂಚನೆ : 29/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.