Monday, May 3, 2021

ಆರ್ಯಸಂಸ್ಕೃತಿ ದರ್ಶನ-41 (Arya Samskruti Darshana-41)

ವೇದಸಂರಕ್ಷಣೆ
ಲೇಖಕರು: ಡಾ||ಶ್ರೀ ಎಸ್.ವಿ.ಚಾಮು



ಈ ಕಿರು ಲೇಖನವನ್ನು ಬರೆಯುತ್ತಿರುವ ಸಮಯದಲ್ಲಿ ಮೈಸೂರು ನಗರದಲ್ಲಿ ಒಂದು ವೇದ ಸಮ್ಮೇಳನವು ಜರುಗುತ್ತಿದೆ. ಅದರ ಉದ್ದೇಶ ಅಮೂಲ್ಯವೂ, ಬಹುಪುರಾತನವೂ ಆದ, ಆದರೆ ಕಾಲದ ಪ್ರಭಾವದಿಂದ ಖಿಲವಾಗುತ್ತಿರುವ ವೇದವಿದ್ಯೆಯನ್ನು ಹೇಗೆ ಸಂರಕ್ಷಿಸಿಕೊಳ್ಳುವುದು ಎಂಬುದನ್ನು ಕುರಿತು ವಿಚಾರ ಮಾಡುವುದಾಗಿದೆ. ಅದರ ಆರಂಭೋತ್ಸವದ ಸಮಯದಲ್ಲಿ ನಮ್ಮ ಮನಸ್ಸಿನಲ್ಲಿ ಆಡಿದ ಹಲವು ಯೋಚನೆಗಳನ್ನು ಇಲ್ಲಿ ನಮ್ಮ ವಾಚಕರೊಡನೆ ವಿನಿಮಯ ಮಾಡಿಕೊಳ್ಳಲುಇಚ್ಛಿಸುತ್ತೇವೆ. ವೇದ ವಾಙ್ಮಯವು ಅನೇಕ ಸಾವಿರ ವರ್ಷಗಳ ಹಿಂದೆ ಈ ಭಾರತ ಭೂಮಿಯಲ್ಲಿ ಜನ್ಮವೆತ್ತಿದ, ಇಲ್ಲಿ ಜೀವನವನ್ನೆಸಗಿದ ಜ್ಞಾನಪುರುಷರ ದರ್ಶನ, ವಿಚಾರ, ನೀತಿ, ಕರ್ಮ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆ ಕಾರಣದಿಂದಲೇ ಅದು ಇಲ್ಲಿನ ಸಮಸ್ತ ಜನರ ಸಾಂಸ್ಕೃತಿಕ ಆಸ್ತಿಯಾಗಿರುತ್ತದೆ. 

ಅದರಲ್ಲಿರುವ ದೃಷ್ಟಿ, ವಿಚಾರ ಇತ್ಯಾದಿಗಳು ಇತಿಹಾಸ, ಪುರಾಣ, ತಂತ್ರ, ಆಗಮ ಮುಂತಾದ ಮಾಧ್ಯಮಗಳ ಮೂಲಕ ನಮ್ಮ ಜನರ ಜೀವನವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಭಾವಗೊಳಿಸಿರುತ್ತದೆ. ಅದರ ಹೆಸರನ್ನೇ ಕೇಳದವರ ನೀತಿ ನಡತೆಗಳನ್ನೂ ಮತ್ತು ವಿಚಾರ, ಭಾವನೆ, ಭಾವನೆ, ಆಚರಣೆಗಳನ್ನೂ ರೂಪಿಸಿರುತ್ತದೆ. ಈ ದೃಷ್ಟಿಯಿಂದ ಅದು ನಮ್ಮ ಜನರೆಲ್ಲರ ರಾಷ್ಟ್ರೀಯ ಸಂಪತ್ತು. ಈ ವಾಙ್ಮಯವು ಅದರ ಉಚ್ಛ್ರಾಯಕಾಲದಲ್ಲಿ ಸಾಗರದಂತೆ ವಿಶಾಲವಾಗಿದ್ದಿತು. ಅನಂತವಾಗಿದ್ದಿತು. ಅದನ್ನು ಕಾಪಾಡಿಕೊಳ್ಳಬೇಕಾದರೆ ಉತ್ತಮ ದರ್ಜೆಯ ಬುದ್ಧಿಶಕ್ತಿ, ಸ್ಮರಣಶಕ್ತಿ, ಮತ್ತು ಶ್ರದ್ಧೆಯ ಜೊತೆಗೆ ಅದಕ್ಕೋಸ್ಕರ ಜೀವನವನ್ನು ಮುಡಿಪಾಗಿಟ್ಟು, ಅದಕ್ಕೋಸ್ಕರವೇ ಮತ್ತೆಲ್ಲವನ್ನೂ ತ್ಯಾಗ ಮಾಡುವ ಮನೋಭಾವವು ಆವಶ್ಯಕವಾಗಿರುತ್ತದೆ. ತಪಸ್ಸು, ಸತ್ಯ, ಬ್ರಹ್ಮಚರ್ಯ ಮುಂತಾದ ಸಂಯಮದ ದಾರಿಗಳಲ್ಲಿ ನಡೆದು ಕ್ರಾಂತದರ್ಶಿಗಳಾದ ಋಷಿಗಳು ಕಂಡ ಸತ್ಯಗಳನ್ನು ಸಾಧಿಸಿ ತಿಳಿಯಬೇಕಾದರೆ, ಅವರಂತೆಯೇ ಜೀವನ ಮಾಡುವ ಜನರ ತಂಡವು ಬೇಕಾಗುತ್ತದೆ, ಇಲ್ಲದಿದ್ದರೆ ಆ ವಿದ್ಯೆಯು ನಷ್ಟವೇ ಆಗಿ ಬಿಡುತ್ತದೆ. ಆ ರೀತಿ ಜ್ಞಾನತೃಪ್ತರಾಗಿ ಜೀವನ ಮಾಡಿದ ತಂಡಗಳು ದೇಶದಲ್ಲಿ ಇದ್ದುದರಿಂದಲೇ ಅದು 19 ನೇ ಶತಮಾನದ ಕೊನೆಯವರೆಗೆ ನಷ್ಟವಾಗದೆ ಮುಂದುವರಿದುಕೊಂಡು ಬಂದಿತು. 

ಇಂದು ಅದು ಅನೇಕ ಕಾರಣಗಳಿಂದ ಅಸಡ್ಡೆ ಮತ್ತು ದ್ವೇಷಕ್ಕೆ ವಿಷಯವಾಗಿರುತ್ತದೆ. (1) ಜೀವನದ ಒತ್ತಾಯಗಳು (2) ತಾತ್ಕಾಲಿಕ ಹಾಗೂ ಪರಿಮಿತವಾದರೂ ಜೀವಿಕೆಗೆ ದಾರಿ ಮಾಡಿ ಕೊಡುವ ಆಧುನಿಕ ವಿದ್ಯಾಭ್ಯಾಸ (3) ಪಾಶ್ಚಾತ್ಯ ಸಭ್ಯತೆಯ ಆಕರ್ಷಣೀಯತೆ (4) ಆಧುನಿಕ ವಿಚಾರಗಳು (5) ಜೀವನದ ವಿಷಯದಲ್ಲಿ ಆದರ್ಶ ದೃಷ್ಟಿಯಿಲ್ಲದಿರುವುದು (6) ವೇದ ವಾಙ್ಮಯದ ವಿಷಯದಲ್ಲಿ ಸುಪ್ರಚಾರದ ಸೋಗಿನಲ್ಲಿ ಅಪಪ್ರಚಾರ ಮತ್ತು ಅಜ್ಞಾನ ಹಾಗೂ (7) ಇಂದು ಲೋಕದಲ್ಲಿ ಬೀಸುತ್ತಿರುವ ನಾಸ್ತಿಕತೆಯ ಗಾಳಿ, ಇವುಗಳು ಅದರ ಬಗ್ಗೆ ದ್ವೇಷ ಭಾವನೆಗಳು ಉಂಟಾಗಲು ಕಾರಣವೆಂದು ತೋರುತ್ತದೆ. ಆದರೂ ಸಹ ಈ ವಾಙ್ಮಯವು ಮನುಷ್ಯರಿಗೆ ಶಾಂತಿ, ತೃಪ್ತಿ ಮತ್ತು ಪ್ರಬೋಧಗಳ ದಾರಿಯನ್ನು ತೋರಿಸಿ ಜೀವನವನ್ನು ಚೆನ್ನಾಗಿ ಮಾಡುವ ಸಾಮರ್ಥ್ಯವನ್ನು ಇರಿಸಿಕೊಂಡಿರುತ್ತದೆ. ಆಧುನಿಕ ನಾಗರಿಕತೆಯು ಉಂಟು ಮಾಡಿರುವ ಪಾಪದ ವಾತಾವರಣದಿಂದ ತಪ್ಪಿಸಿ, ವ್ಯಕ್ತಿಗೆ ಮತ್ತು ಸಮಾಜಕ್ಕೆ ಸುಭದ್ರವಾದ ಸಾಂಸ್ಕೃತಿಕ ಅವಲಂಬನೆಯನ್ನು ಕೊಡುವ ಸತ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಕೆಲಸವಾಗಬೇಕಾದರೆ ಸುಮ್ಮನೆ ಅದನ್ನು ಕಂಠ ಪಾಠ ಮಾಡಿದರೆ ಸಾಲದು. ಅದರಲ್ಲಿರುವ ಉತ್ತಮವಾದ ಜೀವನ ದರ್ಶನದ ವಿಷಯದಲ್ಲಿ ಜನರಿಗೆ ತಿಳುವಳಿಕೆಯುಂಟಾಗುವಂತೆ ಆಗಬೇಕು. ಆಧುನಿಕರ ಮನಸ್ಸನ್ನು ಒಲಿಸಲು ಅದರಲ್ಲಿ Science, Technology ಎಲ್ಲವೂ  ಇದೆ ಎಂದು ಅದರ ವಿಷಯದಲ್ಲಿ ಮಿಥ್ಯಾ ಪ್ರಶಂಸೆ ಮಾಡದೆ, ಅದರಲ್ಲಿರುವ ಅಧ್ಯಾತ್ಮ ದೃಷ್ಟಿಯನ್ನು ಜನರಿಗೆ ತಿಳಿಯಕೊಡಬೇಕು. ಏಕೆಂದರೆ ಅದೇ ಅದರ ಜೀವಾಳ. 

ಆಗ ನಿಜವಾಗಿಯೂ ಅದರ ಸಂರಕ್ಷಣೆ ಆಗುತ್ತದೆಂದು ನಾವು ತಿಳಿಯುತ್ತೇವೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:11 ಸಂಚಿಕೆ: 06ಜೂನ್ 1989 ತಿಂಗಳಲ್ಲಿ  ಪ್ರಕಟವಾಗಿದೆ.