Thursday, May 6, 2021

ಸಂಸ್ಕೃತಿಗೆ ಅಂಟಿರುವ ಬದನಿಕೆಗಳನ್ನು ಬೇರ್ಪಡಿಸೋಣ (Sanskrrtige Antiruva Badanikegalannu Berpadisona)
ಒಬ್ಬ ಕೃಷಿಕನ ತೋಟದಲ್ಲಿ ಸೊಗಸಾಗಿ ಬೆಳೆದ ಒಂದು ಮಾವಿನ ಮರವಿತ್ತು. ಅದರ ಮೇಲೊಂದು ಕಪ್ಪುಕಾಗೆ ಕುಳಿತಿತ್ತು. ಹಾಗೆಯೇ ಮಲವಿಸರ್ಜನೆ ಮಾಡಿತು. ಕಾಗೆಯ ಶರೀರವನ್ನು ಸೇರಿದ್ದ ಬೇವಿನ ಬೀಜವೊಂದು ಅದರ ಮಲದ್ವಾರದಿಂದ ಹೊರಬಿದ್ದು ಮರದ ಮೇಲೆ ಬಿತ್ತು. ಕಾಲಕಾಲಕ್ಕೆ ಬಿದ್ದ ಮಳೆಯಿಂದ ಬೇವು ಚಿಗುರೊಡೆಯಿತು; ಮಾವಿನ ಮರದ ಬುಡಕ್ಕೆ ಬೀಳುತ್ತಿದ್ದ ನೀರನ್ನೂ ಸೆಳೆದುಕೊಂಡು ನೋಡನೋಡುತ್ತಿದ್ದಂತೆಯೇ ಒಂದು ಕಾಲಕ್ಕೆ ದೊಡ್ಡ ಮರವೇ ಆಗಿಹೋಯಿತು. ಮಾವು ಸೊರಗಿತು; ಬೇವಿನ ಹಣ್ಣು ಬಿಡಲಾರಂಭಿಸಿತು. ಈ ತೋಟದಲ್ಲಿದ್ದುದು ಮಾವಿನ ಮರವೆಂದೇ ಪ್ರಸಿದ್ಧಿ ಇದ್ದುದರಿಂದ ಬೇವಿನ ಹಣ್ಣನ್ನೇ ಮಾವಿನ ಹಣ್ಣೆಂದು ಆ ಕೃಷಿಕನ ಮಕ್ಕಳು ಭಾವಿಸಿದರು. ಹೀಗೆ ಯಾವುದೋ ಗಿಡವನ್ನು ಆಶ್ರಯಿಸಿ, ತನಗೆ ಆಶ್ರಯವಿತ್ತ ಆ ಗಿಡವನ್ನೇ ಮರೆಸಿ ಮೆರೆಯುವ ಗಿಡಕ್ಕೆ ಬದನಿಕೆ(parasite) ಎನ್ನುತ್ತಾರೆ.

ಶ್ರೀರಂಗಮಹಾಗುರುಗಳು ಒಮ್ಮೆ ಬದನಿಕೆಯ ದೃಷ್ಟಾಂತದೊಂದಿಗೆ ಇಂದಿನ ಕಾಲಘಟ್ಟದಲ್ಲಿ ಜನ ಮೋಸಹೋಗುವ ಬಗೆಯನ್ನು ವಿವರಿಸಿದ್ದರು. ಆಮೂಲಾಗ್ರವಾದ ತಿಳಿವಳಿಕೆಯುಳ್ಳ ಜನ ಮರದ ಮೂಲವನ್ನು ಸರಿಯಾಗಿ ನೋಡಿದ್ದರೆ ತಾವು "ಮಾವು" ಎಂದುಕೊಂಡು ತಿನ್ನುತ್ತಿರುವುದು ಬೇವು; ಇದು ಬದನಿಕೆಯ ಫಲವೆಂದೇ ಅರಿಯಬಹುದಾಗಿತ್ತು. ನಮ್ಮ ಜೀವನವೃಕ್ಷದ ಮೇಲೆ ಕುಳಿತಿರುವ ಕಪ್ಪುಕಾಗೆ, ತಮೋರೂಪವಾದ ಪ್ರಕೃತಿ. ಕಾಗೆಗೆ ಮರದ ಮೇಲೆ ಜಾಗ ಸಿಕ್ಕಿದ್ದರಿಂದಾಗಿ, ಬೇವು, ಮಾವಿನ ಮರದ ಖ್ಯಾತಿಯನ್ನು ತಾನೇ ಸ್ವಾಹಾ ಮಾಡಿದಂತೆ ತಮೋರೂಪವಾದ ಪ್ರಕೃತಿಯು ಪರಮಪುರುಷನ ಜಾಗವನ್ನು ತಾನೇ ಆಶ್ರಯಿಸಿಕೊಂಡುಬಿಡುತ್ತದೆ. ಜನ ಭ್ರಾಂತರಾಗಿಬಿಡುತ್ತಾರೆ.

ಋಷಿಪರಂಪರೆಯಲ್ಲಿ ಮೂಲತಃ ಸರಿಯಾದ ವಿಚಾರಗಳೇ ಹೊರಟಿದ್ದರೂ, ಇಂದು ಕೆಲವೆಡೆಗಳಲ್ಲಿ ಸಾಕಷ್ಟು ಬದನಿಕೆಗಳು ಹುಟ್ಟಿ ಮೌಲಿಕವಾದ ವಿಚಾರಗಳಿಗೆ ಸ್ಥಾನವೇ ಇಲ್ಲವಾಗಿದೆ. ಋಷಿಗಳು ಕಂಡ ಪರಮಾತ್ಮನೆಂಬ ಒಳಬೆಳಕು, ಅದನ್ನು ಹೊಂದಲನುಗುಣವಾಗಿ  ಅವರು ಬೆಳೆಸಿದ ಜೀವನ ಸಂವಿಧಾನ ಇವುಗಳ ಬಗ್ಗೆ ದೃಷ್ಟಿಯುಳ್ಳವರು ಬಂದಾಗಷ್ಟೇ ಯಾವುದು ಮೂಲಕ್ಕೆ ಒಪ್ಪುವಂತಹದು, ಯಾವುದು ಅದಕ್ಕೆ ಸಲ್ಲದ್ದು ಎಂಬ ವಿಮರ್ಶೆಯನ್ನು ಮಾಡಬಹುದು. ಆಧುನಿಕ ವಿಜ್ಞಾನದ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಒಂದಂಶವನ್ನು ಗಮನಿಸಬಹುದು. ವೈಜ್ಞಾನಿಕ ಚಿಂತನೆ ಹಾಗೂ ಪ್ರಯೋಗಗಳ ಒರೆಗಲ್ಲಿಗೆ ಸಿಕ್ಕಾಗ ಒಂದು ಕಾಲಕ್ಕೆ  ಸರಿಯೆನಿಸಿದ್ದ ಎಷ್ಟೋ ವೈಜ್ಞಾನಿಕ ಸಿದ್ಧಾಂತಗಳು ಮುರಿದುಬಿದ್ದು, ಪ್ರಕಟಿತವಾಗಿದ್ದ  ಸಿದ್ಧಾಂತಗಳ ಸ್ಥಾನದಲ್ಲಿ ಹೊಸ ಸಿದ್ಧಾಂತಗಳು ಬಂದಿವೆ. ಇಂತಹ ಬದಲಾವಣೆಗಳನ್ನು ನಿಜವಾದ ವಿಜ್ಞಾನಿಗಳು ಸ್ವಾಗತಿಸುತ್ತಾರೆ. ಹಾಗೆಯೇ ನಾವೂ ವೈಜ್ಞಾನಿಕವಾದ ಮನೋಭಾವವುಳ್ಳವರೇ ಆದಲ್ಲಿ ಆರ್ಷಸಿದ್ಧಾಂತಗಳೆಂದು ಕರೆಸಿಕೊಳ್ಳಲ್ಪಡುವ ವಿಚಾರಗಳಲ್ಲಿ ಪೊಳ್ಳು ಯಾವುದು? ಸಾರ್ವಕಾಲಿಕ ಸತ್ಯಗಳಾವುವು? ಎಂಬುದನ್ನು ಪತ್ತೆ ಹಚ್ಚಬೇಕು. ಆ ಪ್ರಯತ್ನದಲ್ಲಿ ಇಂದು ಲಭ್ಯವಿರುವ ವೈಜ್ಞಾನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವುದಷ್ಟೇ ಅಲ್ಲದೇ ನಾವೂ ಋಷಿಗಳಂತೆಯೇ ಶುದ್ಧ ಪ್ರಕೃತಿಗಳೂ, ಅಂತರ್ದೃಷ್ಟಿಯುಳ್ಳವರೂ ಆಗುವುದು ಅನಿವಾರ್ಯವಾಗುತ್ತದೆ. ಹೊರಗಿನ ಪ್ರಯೋಗಾಲಯಗಳನ್ನು ಆಶ್ರಯಿಸದೆ, ಪರಮಾತ್ಮನೆಂಬ ಒಳಬೆಳಕಿನ ಸಹಾಯದಿಂದ ನಿಸರ್ಗವನ್ನು ನೋಡಿದುದೇ ನಮ್ಮ ದೇಶದ ಋಷಿಗಳ ಆವಿಷ್ಕಾರಗಳ ಒಳಮರ್ಮ. ಇಂತಹ ಮೌಲಿಕವಾದ ದೃಷ್ಟಿಕೋಣವನ್ನು ಋಷಿಕುಲಸಂಜಾತರಾದ ನಾವು ಪಡೆದಲ್ಲಿ ನಮ್ಮ ಬಾಳು ಹಸನಾದೀತು.  

ಸೂಚನೆ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.