Monday, May 31, 2021

ಸೃಷ್ಟಿ-ದೃಷ್ಟಿ (Srushti - Drushti)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)




ನಾವಿಂದು ಸಮಾನತೆ ಎಂಬ ಶಬ್ದವನ್ನು ಪ್ರತಿನಿತ್ಯ ಕೇಳುತ್ತಿದ್ದೇವೆ. ಈ ಶಬ್ದವನ್ನೇ ಬಂಡವಾಳವಾಗಿ ಇಟ್ಟುಕೊಂಡು ತಮ್ಮ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವವರನ್ನು ಕಾಣುತ್ತಿದ್ದೇವೆ. ಸಮಾನತೆ ಎಂಬ ಶಬ್ದದ ವಿರುದ್ಧಾರ್ಥಕಪದವೇ ಅಸಮಾನತೆ. ಇದನ್ನು ಇಟ್ಟುಕೊಂಡು ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದೆಲ್ಲೆಲ್ಲೆಡೆ ಪರಸ್ಪರ ಘರ್ಷಣೆಯೂ ನಡೆದ ಇತಿಹಾಸವಿದೆ. ಹಾಗಾದರೆ ಇಂದು ಈ ವಿಷಯ ಎಷ್ಟು ಪ್ರಸ್ತುತ? ಮತ್ತು ನಮ್ಮ ಸನಾತನ ಸಮಾನತೆಯನ್ನು ತಿಳಿದಾಗ ಉಂಟಾಗುವ ಮಾನಸಿಕ ತಿಳಿ ಏನು? ಸಮಾನತೆಯು  ಸೃಷ್ಟಿಸಹಜವೇ? ಅಥವಾ ಮನುಷ್ಯಕಲ್ಪಿತವೇ? ಎಂಬುದರ ಬಗ್ಗೆ ಗಮನಿಸೋಣ. 

ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನೊಮ್ಮೆ ಗಮನಿಸೋಣ. ಕಲ್ಲು-ಬಂಡೆ, ನದಿ-ಝರಿ, ಅಜ-ಗಜ, ಅಪ್ಪ-ಮಕ್ಕಳು, ಗುರು-ಶಿಷ್ಯರು, ಹುಲಿ-ಹಸುಗಳು, ಹುಲ್ಲು-ಪೊದೆಗಳು ಇವೆಲ್ಲವೂ ಇವೆ. ಇವೆಲ್ಲವನ್ನು ಸಮಾನವಾಗಿ ಕಾಣಬೇಕೇ? ಅಥವಾ ವೈವಿಧ್ಯವಿದೆಯೇ? ಕಲ್ಲು-ಬಂಡೆಗಳ ಮೂಲ ಮಣ್ಣೆ. ನದಿ-ಝರಿಗಳ ಮೂಲ ನೀರಲ್ಲವೇ. ಅಜ-ಗಜಗಳು ಪ್ರಾಣಿಗಳಲ್ಲವೇ! ಅಪ್ಪ-ಮಕ್ಕಳು ಒಂದೇ ಕುಟುಂಬದವರಲ್ಲವೇ! ಗುರು-ಶಿಷ್ಯರು ಮನುಷ್ಯರಲ್ಲವೇ! ಇವರಲ್ಲಿ ಒಬ್ಬರು ದೊಡ್ದವರು ಇನ್ನೊಬ್ಬರು ಚಿಕ್ಕವರು, ಒಬ್ಬರಿಗೆ ಗೌರವ, ಇನ್ನೊಬ್ಬರಿಗೆ ಇಲ್ಲ. ಒಂದಕ್ಕೆ ರಾಜಮರ್ಯಾದೆ, ಇನ್ನೊಂದಕ್ಕೆ ಕತ್ತಿಭಾಗ್ಯ. ಒಂದು ದೃಷ್ಟಿಯಿಂದ ನೋಡಿದಾಗ ವೈರುಧ್ಯ. ಇನ್ನೊಂದು ದೃಷ್ಟಿಯಿಂದ ನೋಡಿದಾಗ ಸಾಮ್ಯ. ಹಾಗಾಗಿ ಸೃಷ್ಟಿಯಲ್ಲಿ ಇರುವ ವಸ್ತುಗಳು ಒಂದಕ್ಕೊಂದು ಪರಸ್ಪರ ವಿರೋಧವೆಂದು ಹೇಳೋಣವೇ ಅಥವಾ ಅವೆಲ್ಲವೂ ಒಂದೇ ಎಂದು ಹೇಳೋಣವೇ? ಇಲ್ಲಿ ಒಂದು ವಿಷಯವಂತೂ ಸ್ಪಷ್ಟ. ಎರಡಕ್ಕೂ ವಿಷಯವಿದೆ ಎಂಬುದು. ಆದರೆ ನೋಡುವ ನೋಟದಲ್ಲಿ ವ್ಯತ್ಯಾಸವಾದರೆ ವಿರೋಧವೂ ಸಮವಾಗಬಹುದು. ಅಥವಾ ಸಮವೂ ವಿರೋಧವಾದಂತೆ ಕಂಡುಬರುವುದು. 

ಹಾಗಾಗಿ ನೋಟವೇ ಸಮಾನತೆ ಮತ್ತು ಅಸಮಾನತೆಗೆ ಕಾರಣ ಎಂಬುದು ನಿರ್ಣಯ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಮ್ಮ ನೋಟ ಹೇಗಿರಬೇಕೆಂಬುದನ್ನು ಹೇಳುತ್ತಾನೆ. "ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ | ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||" ಎಂದು. ಅಂದರೆ ಪಂಡಿತರಾದವರು ವಿದ್ಯಾ ಮತ್ತು ವಿನಯಸಂಪನ್ನನಾದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ನಾಯಿಯನ್ನು ತಿನ್ನುವವನಲ್ಲಿ, 'ಸಮ'ವನ್ನೇ ಕಾಣುವರು. ಶ್ರೀರಂಗಮಹಾಗುರುವು ಹೇಳುವ ಮಾತು ನೆನಪಾಗುತ್ತದೆ- "ಸ್ವರೂಪ ಅರಿತರೆ ಬಾಳಾಟ, ಅರಿಯದಿದ್ದರೆ ಗೋಳಾಟ" ಎಂದು. ಬಾಹ್ಯವಾಗಿ ಇವೆಲ್ಲದರಲ್ಲೂ ವೈವಿಧ್ಯವಿದೆ. ಆದರೆ ಈ ವಿವಿಧತೆಯನ್ನು ಪರಿಗಣಿಸದೆ ಜ್ಞಾನಿಯಾದವನು ಅಲ್ಲಿ ಪರಬ್ರಹ್ಮವನ್ನೇ ಕಾಣುತ್ತಾನೆ. ಅವನ ಭಾವ ಅಂತಹದ್ದು. ಅವನು ತನ್ನ ನೋಟವನ್ನು ಸಂಸ್ಕರಿಸಿಕೊಂಡಿದ್ದಾನೆ. ಅಲ್ಲಿ ಅವನಿಗೆ ಕಾಣುವುದು ಸಮವಾದ ಪರಮಾತ್ಮ ಮಾತ್ರ. ಹಾಗಾಗಿ ಈ ದೃಷ್ಟಿಯಿದ್ದರೆ ಅಸಮಾನತೆಗೆ ಎಲ್ಲಿಯ ಅವಕಾಶ!. ನಾವಿಂದು ಯಾವ ಅಸಮಾನತೆಯ ಬೆಂಕಿಯಲ್ಲಿ ಬೇಯುತ್ತಿದ್ದೇವೋ ಅವೆಲ್ಲಕ್ಕೂ ಇದೇ ಪರಿಹಾರ. ಹೊರಗಡೆಯ ವಿವಿಧತೆಯನ್ನು ನಮ್ಮ ತಾತ್ಕಾಲಿಕ ವ್ಯವಹಾರಕ್ಕಾಗಿ ಬಳಸಿಕೊಂಡು, ಪಾರಮಾರ್ಥಿಕವಾಗಿ ಅವುಗಳಲ್ಲಿ ವಿವಿಧತೆಯನ್ನು ಕಾಣದಿರುವುದರಿಂದ ನಾವು ನೆಮ್ಮದಿಯ ಜೀವನವನ್ನು ನಡೆಸಬಹುದು.

ಸೂಚನೆ: 18/5/2021 ರಂದು ಈ ಲೇಖನ
ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.