Sunday, May 30, 2021

ಶ್ರೀರಾಮನ ಗುಣಗಳು -7 ಬುದ್ಧಿಮಾನ್ – ಶ್ರೀರಾಮ (Sriramana Gunagalu -7 Buddhiman – Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಬುದ್ಧಿ ಉಳ್ಳವನು ಶ್ರೀರಾಮನು ಎಂದರೆ ಇದೂ ಒಂದು ಶ್ರೀರಾಮನ ಗುಣವಾಗುತ್ತದೆಯೋ? ಎಂಬ ಪ್ರಶ್ನೆ ಬರುತ್ತದೆ. 'ಬುದ್ಧಿ'ಎಂಬುದು ಎಲ್ಲರಲ್ಲೂ ಇರುವ ಸಾಮಾನ್ಯಗುಣ. ಇದು ಶ್ರೀರಾಮನಲ್ಲೂ ಇತ್ತು ಅಷ್ಟೆ! ಅದೇನು ಅವನಲ್ಲಿರುವುದಕ್ಕೆ ಅಂತಹವಿಶೇಷತೆ!. ಈ ಬುದ್ಧಿ ಎಂದರೆ ಯಾವುದು? ಮಹಾಭಾರತದಲ್ಲಿ- ಶುಶ್ರೂಷಾ, ಶ್ರವಣ, ಗ್ರಹಣ, ಧಾರಣ, ಊಹಾಪೋಹ,ಅರ್ಥವಿಜ್ಞಾನ, ತತ್ತ್ವಜ್ಞಾನ ಎಂಬುದಾಗಿ ಏಳು ಬುದ್ಧಿಯ ಗುಣಗಳು ಎನ್ನಲಾಗಿದೆ. ಹೀಗೆ ಯಾವುದೇ ರೀತಿಯಲ್ಲಿ ಬುದ್ಧಿಯವೈವಿಧ್ಯವನ್ನು ನೋಡಿದರೂ ಆ ಎಲ್ಲಾ ವಿವಿಧತೆಗಳೂ ಶ್ರೀರಾಮನಲ್ಲಿ ಏಕೀಭಾವವನ್ನು ಹೊಂದಿದ್ದವು. ಕೆಲವರಲ್ಲಿ ಕೆಲವುಗುಣಗಳನ್ನು ನೋಡಬಹುದು. ಆದರೆ ಶ್ರೀರಾಮನಲ್ಲಿ ಈ ಎಲ್ಲಾ ಗುಣಗಳನ್ನೂ ನೋಡಲು ಸಾಧ್ಯ. ಆದ್ದರಿಂದ 'ಬುದ್ಧಿಮಾನ್'ಎಂಬ ಗುಣ ಶ್ರೀರಾಮನಿಗೆ ಮಾತ್ರ ಸಲ್ಲುವಂತಹದ್ದು ಎಂದರೆ ತಪ್ಪಲ್ಲ.

ಶುಶ್ರೂಷಾ ಎಂದರೆ ಹಿರಿಯರ-ವೃದ್ಧರ ಸೇವೆ ಮಾಡುವುದು. ಇದರಿಂದ ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲಗಳೆಂಬಶಕ್ತಿಯನ್ನು ಪಡೆಯಬಹುದು ಎಂದು ಸುಭಾಷಿತದ ಮಾತು. ಇದಕ್ಕೆ ಸಾಕ್ಷಾತ್ ಅನ್ವಯವಾಗುವಂತೆ ಶ್ರೀರಾಮನಿದ್ದ. ಶ್ರವಣಎಂದರೆ ಕೇಳುವುದು. ಹಿರಿಯರು, ತಿಳಿದವರು ಹೇಳುವುದನ್ನು ಸಾವಧಾನವಾಗಿ ಕೇಳಿಸಿಕೊಳ್ಳುವ ಗುಣ ಬಹಳ ಮುಖ್ಯ. ಅದನ್ನುಪೂರ್ತಿಯಾಗಿ ಕೇಳಿಸಿಕೊಂಡು ಆಮೇಲೆ ತನ್ನದೇ ಆದ ನಿರ್ಣಯವನ್ನು ತೆಗೆದುಕೊಳ್ಳುವುದು ಬುದ್ಧಿಯ ಅಸಾಧಾರಣತೆ. ಎಲ್ಲೂಹಿರಿಯರು ಹೇಳುವ ಮಾತನ್ನು ತಿರಸ್ಕಾರ ಬುದ್ಧಿಯಿಂದ ಕಾಣುತ್ತಿರಲಿಲ್ಲ ಎಂಬುದು ಇದರ ತಾತ್ಪರ್ಯ. ಗ್ರಹಣವೆಂದರೆಸ್ವೀಕರಿಸುವ ಮನೋಭಾವನೆ. ದುರಂಹಕಾರಿಗಳಿಗೆ ಬೇರೆಯವರ ಮಾತನ್ನು ಸ್ವೀಕರಿಸುವ ಮನಸ್ಸು ಇರುವುದಿಲ್ಲ.ಯುಕ್ತಾಯುಕ್ತವಾದ ಮಾತಾದರೆ ಅದು ಬಾಲನಿರಲಿ ಗಿಳಿಯೇ ಇರಲಿ, ಅದನ್ನು ಸ್ವೀಕರಿಸಬೇಕು. ದೊಡ್ದವರ ಜೊತೆ ದೊಡ್ದವನಾಗಿಮಕ್ಕಳ ಜೊತೆ ಮಗುವಾಗಿ ಇರುವಂತಹ ಮನೋವೈಶಾಲ್ಯ ಶ್ರೀರಾಮನದ್ದಾಗಿತ್ತು. ಧಾರಣವೆಂಬುದು ಬಹಳಕಾಲದವೆರೆಗೆಪಡೆದದ್ದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಈ ಗುಣದಿಂದಲೇ ಮಹರ್ಷಿ ವಿಶ್ವಾಮಿತ್ರರಿಂದ ಬಲ ಅತಿಬಲ ಎಂಬಮಹದಸ್ತ್ರವನ್ನು ಶ್ರೀರಾಮನು ಧರಿಸಲು ಸಾಧ್ಯವಾಯಿತು. ಧಾರಣಾಸಾಮರ್ಥ್ಯವಿರುವುದರಿಂದಲೇ ಯುದ್ಧಕ್ಕೆ ಬೇಕಾದ ಎಲ್ಲಾಅಸ್ತ್ರ-ಶಸ್ತ್ರಗಳನ್ನು ಪಡೆಯುತ್ತಾನೆ. ಊಹಾಪೋಹ ಎಂದರೆ ಮುಂದೆ ಆಗುವಂತಹ ಸಾಧಕ ಮತ್ತು ಬಾಧಕಗಳನ್ನು ತಿಳಿದು ಒಂದುನಿರ್ಣಯಕ್ಕೆ ಬರುವ ಯೋಗ್ಯತೆ. ಅರ್ಥವಿಜ್ಞಾನವು ಒಂದು ವಸ್ತುವಿನ ಬಾಹ್ಯವಾದ ಅರಿವು. ಇಂದ್ರಿಯಪಾಟವದಿಂದ ಮಾತ್ರಬಾಹ್ಯಜ್ಞಾನವು ಅರ್ಥದಿಂದ ಕೂಡಿಬರುತ್ತದೆ, ಮನಸ್ಸಿನಿಂದ ಬರುವ ಅರಿವೇ ಸೂಕ್ಷ್ಮ. ಮನಸ್ಸನ್ನು ಪಳಗಿಸಿದಾಗ ಮೂಡುವಅರಿವೇ ಅದಾಗಿದೆ. ಇವೆರಡನ್ನು ಸೇರಿಸಿ ಅರ್ಥಜ್ಞಾನ ಎನ್ನುವುದಾದರೆ, ತಾತ್ತ್ವಿಕವಾದ ಅಥವಾ ಮನಸ್ಸಿಗೂ ಮೀರಿದ ಅರಿವನ್ನೇತತ್ತ್ವಜ್ಞಾನ ಎಂದು ಕರೆಯಲಾಗುತ್ತದೆ. ಸೃಷ್ಟಿಯ ಎಲ್ಲಾ ಪದಾರ್ಥಗಳೂ ಒಂದೇ ತತ್ತ್ವದಿಂದ ಉಂಟಾಗಿದೆ ಎಂಬುದು ಜ್ಞಾನ. ಹೀಗೆಸ್ಥೂಲ ಸೂಕ್ಷ್ಮ ಮತ್ತು ಪರಾ ಎಂಬುದಾಗಿ ಮೂರು ಹಂತದ ಅರಿವಿರುವವನು ರಾಮ. ರಾಜಾಧಿರಾಜನಾದ ಶ್ರೀರಾಮನಲ್ಲಿ ಮಾತ್ರಇಂತಹ ಗುಣಗಳು ಇರಲು ಸಾಧ್ಯವಷ್ಟೇ!. ಹಾಗಾಗಿ ಶ್ರೀರಾಮನು 'ಬುದ್ಧಿಮಾನ್'.

ಸೂಚನೆ : 30/5/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.