ಲೇಖಕರು: ವಿದ್ವಾನ್ ಛಾಯಾಪತಿಗಳು
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ
ಪ್ರಿಯಂಚ ನಾನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ
ಒಂದು ಕಡೆ ಶ್ಲೋಕವು ಸತ್ಯವನ್ನು ಹೇಳಬೇಕು ಎಂದು ನುಡಿದರೂ ಮತ್ತೊಂದು ಕಡೆ ಅದು ಬಹಳ ಜವಾಬ್ದಾರಿಯಾದ ಕೆಲಸ, ಯುಕ್ತಾಯುಕ್ತ ವಿವೇಚನಯಿoದ ಕೂಡಿ ಮಾಡುವ ಕಲಸ ಎಂಬುದನ್ನು ಒತ್ತಿ ಹೇಳುತ್ತದೆ. ಅದಕ್ಕೆ ಕಾರಣವನ್ನು ಹುಡುಕಲು ಬಹಳ ದೂರ ಹೋಗಬೇಕಾಗಿಲ್ಲ. - ಲೋಕದಲ್ಲಿ ಸತ್ಯವನ್ನು ಎದುರಿಸ ಬಲ್ಲವರು ತುಂಬ ವಿರಳ. ಆದುದರಿಂದಲೇ ಕೇಳುವವರ ಮನಸ್ಸಿನಲ್ಲಿ ನೋವು, ಉದ್ರೇಕ, ದ್ವೇಷ, ಆಸೂಯೆ ಇತ್ಯಾದಿಗಳುಂಟಾಗದಿರುವಂತೆ ಸತ್ಯವನ್ನು ಅಸತ್ಯ, ಅರ್ಧಸತ್ಯ, ಮೌನ ಇತ್ಯಾದಿಗಳಿಂದ ಮರೆಮಾಡಿ ನುಡಿಯಬೇಕಾದ ಸoದರ್ಭಗಳು ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಉಂಟಾಗುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಒಳ್ಳೆಯದನ್ನು ಸಾಧಿಸುವುದಕ್ಕೋಸ್ಕರ ಅಸತ್ಯವನ್ನು ಸಹ ಹೇಳಬೇಕಾದ ಪ್ರಮೇಯಗಳು ಸಹ ಉಂಟಾಗುತ್ತವೆ.
ಅಂತಹ ಸಂದರ್ಭಗಳನ್ನು ತೆಗೆದುಕೊಂಡು ಮಹಾಭಾರತವು ನಮ್ಮ ಯೋಚನೆಯನ್ನು ಉದ್ಬೋಧಗೊಳಿಸುವಂತೆ ಅನೇಕ ಭಾಗಗಳಲ್ಲಿ ಪರಿಶೀಲಿಸುವುದನ್ನು ನೋಡುತ್ತೇವೆ. ಅವುಗಳಲ್ಲಿ ಒಂದನ್ನು ಇಲ್ಲಿ ವಾಚಕರ ಅವಗಾಹನೆಗೆ ತರುತ್ತೇವೆ. ದ್ರೋಣನಿಂದ ಶಸ್ತ್ರಸನ್ಯಾಸ ಮಾಡಿಸುವುದಕ್ಕೋಸ್ಕರ ಧರ್ಮರಾಜನು "ಅಶ್ವತ್ಥಾಮೋ ಹತಃ" ಎಂದು ಉಚ್ಚಧ್ವನಿಯಲ್ಲಿಯೂ "ಕುಂಜರಃ" ಎಂಬುದನ್ನು ಮೆಲು ಧ್ವನಿಯಲ್ಲಿಯೂ ಹೇಳುತ್ತಾನೆ. ಆ ರೀತಿ ಸುಳ್ಳನ್ನು ಹೇಳಿದುದಕ್ಕೋಸ್ಕರ ಅವನಿಗೂ ಮತ್ತು ಹೇಳಲು ಪ್ರೇರಣೆಮಾಡಿದುದಕ್ಕೋಸ್ಕರ ಕೃಷ್ಣನಿಗೂ ತುಂಬ ಅಪಖ್ಯಾತಿಯು ವಿಮರ್ಶಕರ ಕಡೆಯಿಂದ ಬಂದೊದಗಿರುತ್ತದೆ. ಎಂತಹ ಸಂದರ್ಭದಲ್ಲಿಯೂ ಸತ್ಯವನ್ನು ನುಡಿಯಬೇಕು. ಅದಕ್ಕೆ ವಿಕಲ್ಪವಿಲ್ಲ ಎಂದು ಯೋಚಿಸುವ ಮಹನೀಯರು ಅವರಿಬ್ಬರನ್ನೂ ಕಪ್ಪುಬಣ್ಣದಲ್ಲಿ ಚಿತ್ರಿಸಿರುವುದು ಸಹಜವೇ ಆಗಿದೆ. ಅದೂ ಸ್ವಕಾರ್ಯ ಸಾಧನೆಗೋಸ್ಕರ ಆ ರೀತಿ ಮಾಡುವುದು ಅವರ ದೃಷ್ಟಿಯಲ್ಲಿ ಅಕ್ಷಮಣೀಯ. ಆದರೂ ಸಹ ಸಂದರ್ಭವನ್ನು ತಿಳಿಯಾದ ಮನಸ್ಸಿನಿಂದ ಪರಿಶೀಲಿಸಿದಾಗ, ಸಹೃದಯರು ಆ ರೀತಿ ಸುಳ್ಳು ಹೇಳಿದುದರಲ್ಲಿ ಕ್ಷಮಾರ್ಹತೆಯನ್ನು ಕಾಣುವರೆಂದು ನಮ್ಮ ಮನಸ್ಸು ಹೇಳುತ್ತವೆ. ಸನ್ನಿವೇಶ ಹೀಗಿದೆ ಪಾಂಚಾಲ ಮತ್ತು ಸೃಜಯ ಸೈನಿಕರು ದ್ರೋಣನ ಪೂರ್ವವೈರಿಗಳು. ತನ್ನ ಕಡೆಯ ಸಂಗ್ರಾಮದಲ್ಲಿ ಪರಮಾಸ್ತ್ರವಿತ್ತಾದ ಅವನು ದಾನವಾವಿಷ್ಟನಂತೆ( ನಾಗಿ) ಅವರನ್ನು ದೊಡ್ಡ ಸಂಖ್ಯೆಯಲ್ಲಿ ವಧಿಸುತ್ತಾನೆ. ಅವನ ಅಸ್ತ್ರಶಕ್ತಿಯನ್ನು ನೋಡಿ ಪಾoಡವರನ್ನು ಭಯವು ತುಂಬಿಕೊಳ್ಳುತ್ತದೆ. ಬೇಸಿಗೆಯಲ್ಲಿ ಹುಲ್ಲು ಮೆದೆಯನ್ನು ಸುಟ್ಟುಹಾಕುವ ಅಗ್ನಿಯಂತೆ ಅವನೆಲ್ಲಿ ತಮ್ಮೆಲ್ಲರನ್ನೂ ನಿಶ್ಶೇಷ ಮಾಡುತ್ತಾನೆಯೋ ಎಂಬ ಭೀತಿಯು ಅವರನ್ನು ಕಾಡುತ್ತದೆ. ಅರ್ಜುನನು ಅವನೆದುರು ನಿಲ್ಲಲು ಇಚ್ಛಿಸುವುದಿಲ್ಲ. ಪಾಂಡವರ ಅವಸ್ಥೆಯನ್ನು ನೋಡಿ ಕೃಷ್ಣನು, "ಎಲ್ಲಿಯವರೆಗೆ ಇವನ ಕೈಯಲ್ಲಿ ಧನುಸ್ಸಿರುತ್ತದೆಯೋ ಅಲ್ಲಿಯವರೆಗೆ ಇವನನ್ನು ಜಯಿಸಲಾಗುವುದಿಲ್ಲ. ಆದುದರಿಂದ ಧರ್ಮವನ್ನು ಬಿಟ್ಟು ಇವನನ್ನು ಜಯಿಸಲು ಒಂದು ಉಪಾಯವನ್ನು ಆಶ್ರಯಿಸಿರಿ. ನನ್ನ ಅಭಿಪ್ರಾಯದಲ್ಲಿ ಅಶ್ವತ್ಥಾಮನು ಸತ್ತರೆ ಇವನು ಯುದ್ಧ ಮಾಡನು. ಆದುದರಿಂದ ನಿಮ್ಮಲ್ಲಿ ಯಾರಾದರೂ ಅಶ್ವತ್ಥಾಮನು ಸತ್ತನೆಂದು ಇವನಿಗೆ ಹೇಳಿರಿ" ಎಂದು ಹೇಳುತ್ತಾನೆ. ಅರ್ಜುನನು ಅದನ್ನು ಅನುಮೋದಿಸುವುದಿಲ್ಲ. ಇತರರು ಅನುಮೋದಿಸುತ್ತಾರೆ. ತನ್ನ ಸೈನ್ಯಗಳ ರಕ್ಷಣೆಗೆ ಜವಾಬ್ದಾರನಾಗಿದ್ದೆ ಧರ್ಮರಾಜನು ಕಷ್ಟದಿಂದ ಅನುಮೋದಿಸುತ್ತಾನೆ. ಸುಳ್ಳನ್ನು ಹೇಳುವುದು ಪಾಂಡವರಿಗೆ ಸುಲಭವಲ್ಲ. ಭೀಮನು ಮಾಳವ ದೇಶದ ಇಂದ್ರವರ್ಮನ ಅಶ್ವತ್ಥಾಮನೆಂಬ ಹೆಸರಿನ ಆನೆಯನ್ನು ಕೊಂದು ದ್ರೋಣನ ಬಳಿ ಸಾರಿ ಲಜ್ಜೆಯಿಂದ "ಅಶ್ವತ್ಥಾಮನು ಹತನಾದನು" ಎಂದು ಉಚ್ಚ ಧ್ವನಿಯಲ್ಲಿ ಹೇಳುತ್ತಾನೆ. ಆ ಮಾತು ದ್ರೋಣನನ್ನು ನಡುಗಿಸಿಬಿಡುತ್ತದೆ. ಆದರೂ ಅವನು ತನ್ನ ಮಗನ ವೀರ್ಯವನ್ನು ನೆನೆದು ಅವನು ಸತ್ತಿರಲಿಕ್ಕಿಲ್ಲವೆಂದು ಯೋಚಿಸಿ ಯುದ್ಧವನ್ನು ಮುಂದುವರಿಸುತ್ತಾನೆ. ತನ್ನನ್ನು ಮುತ್ತಿದ್ದ ಇಪ್ಪತ್ತು ಸಾವಿರ ಜನ ಪಾಂಚಾಲರನ್ನು ಬ್ರಹ್ಮಾಸ್ತ್ರದಿಂದ ಅವರ ಗಜವಾಜಿಗಳ ಸಹಿತವಾಗಿ ನಾಶಮಾಡುತ್ತಾನೆ. ಅನೇಕ ಸಾವಿರ ಸಂಖ್ಯೆಯಲ್ಲಿ ತನ್ನ ಪೂರ್ವ ಶತ್ರುಗಳಾದ ಸೃಂಜಯರನ್ನು ಕೊಂದು ಕೆಡುವುತ್ತಾನೆ. ಅವನಲ್ಲಿ ಅಭಿವ್ಯಕ್ತವಾಗುವ ಕ್ರೌರ್ಯವನ್ನು ನೋಡಿ ಸರ್ವದರ್ಶಿಗಳಾದ ಋಷಿಗಳ ಹೃದಯವು ತಲ್ಲಣಿಸುತ್ತದೆ. ಅವರು ಅವನ ಮುಂದೆ ಬಂದು, "ನೀನು ಅಧರ್ಮದಿಂದ ಯುದ್ಧ ಮಾಡುತ್ತಿರುವೆ. ಆಯುಧವನ್ನು ಕೆಳಗಿರಿಸಿ ನಮ್ಮತ್ತ ನೋಡು. ಇಂತಹ ಕ್ರೂರ ಕಾರ್ಯವನ್ನು ಮಾಡುವುದು ನಿನಗೆ ತಕ್ಕುದಲ್ಲ. ಅನಸ್ತ್ರಜ್ಞರನ್ನು ನೀನು ಬ್ರಹ್ಮಾಸ್ತ್ರದಿಂದ ಸುಟ್ಟಿರುತ್ತೀಯೆ. ಇದು ಸರಿಯಲ್ಲ. ಅಂತಹ ಪಾಪಿಷ್ಠವಾದ ಕರ್ಮವನ್ನು ಪುನಃ ಮಾಡಬೇಡ" ಎಂದು ನುಡಿಯುತ್ತಾರೆ. ಅವರು ಅವನಿಂದ ಶಸ್ತ್ರ ಸನ್ಯಾಸವನ್ನು ಬಯಸುತ್ತಾರೆ. ಅವರ ಆಶಯವೂ ಕೃಷ್ಣನ ಆಶಯವೇ ಆಗಿರುತ್ತದೆ.
ಅವರ ಮಾತನ್ನು ಕೇಳಿ ಪುನಃ ಅಧೀರನಾಗಿ ಅವನು ಧರ್ಮರಾಜನನ್ನು "ನನ್ನ ಮಗನು ಇದಾನೆಯೋ, ಹೋದನೋ ?" ಎಂದು ಕೇಳುತ್ತಾನೆ. ಬಾಲ್ಯದಿಂದ ಅನೇಕ ಜನ ಶಿಷ್ಯರ ಪೈಕಿ ಧರ್ಮರಾಜನಲ್ಲಿ ಮಾತ್ರ ಅವನಿಗೆ ಸತ್ಯಾಶೆ; ಅವನು ಸತ್ಯವನ್ನೇ ಹೇಳುತ್ತಾನೆಂಬ ಭರವಸೆ. ಅವನ ಪ್ರಶ್ನೆಗೆ ಉತ್ತರವಾಗಿ ಅಸತ್ಯವನ್ನು ಹೇಳಲು ಧರ್ಮರಾಜನು ಹಿಂದು ಮುಂದು ನೋಡುತ್ತಾನೆ. ಅವನು ಹಿಂಜರಿಯುವುದನ್ನು ನೋಡಿ ಕೃಷ್ಣನು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ. ಇವನು ಹೀಗೆಯೇ ಇನ್ನರ್ಧ ದಿವಸ ಯುದ್ಧ ಮಾಡಿದರೆ ನಿನ್ನ ಸೈನ್ಯವೆಲ್ಲವೂ ನಾಶವಾಗುತ್ತದೆ. ಸತ್ಯಕ್ಕಿಂತ ಅನೃತ ವಚನವೇ ದೊಡ್ಡದು. "ಸತ್ಯಾಜ್ಜ್ಯಾಯೋಽನೃತಂ ವಚಃ !" ದ್ರೋಣನಿಂದ ನಮ್ಮನ್ನು ಕಾಪಾಡು. ಜೀವರಕ್ಷಣೆಗೋಸ್ಕರ ಅನೃತವನ್ನು ಹೇಳಿದರೆ ಸುಳ್ಳು ಹೇಳಿದುದರ ಪಾಪವು ಮುಟ್ಟುವುದಿಲ್ಲ ಎಂದು ಅವನಿಗೆ ಹೇಳುತ್ತಾನೆ. ಭೀಮನು ತಾನು ಈ ಮೊದಲು ಮಾಡಿದ ಕೆಲಸವನ್ನು ಉಕ್ತಿಸಿ, ಸುಳ್ಳನ್ನು ಹೇಳಲು ಅಣ್ಣನಿಗೆ ಬಲವಂತ ಮಾಡುತ್ತಾನೆ. ಧರ್ಮರಾಜನಿಗೆ ಒಂದು ಕಡೆ ಸುಳ್ಳಿನ ಭಯ ಮತ್ತೊಂದು ಕಡೆ ಜಯಾಸಕ್ತಿ. ಕಡೆಗೆ "ಅಶ್ವತ್ಥಾಮನು ಸತ್ತನು" ಎಂದು ಹೇಳಿ ಅವ್ಯಕ್ತವಾದ ಧ್ವನಿಯಲ್ಲಿ "ಕುಂಜರಃ" ಎಂಬ ಶಬ್ದವನ್ನು ಉಚ್ಚರಿಸುತ್ತಾನೆ. ಸುಳ್ಳನ್ನು ಹೇಳಿದ ಮಾತ್ರಕ್ಕೆ ಭೂಮಿಯಿಂದ ನಾಲ್ಕಂಗುಲ ಮೇಲೆ ಸಂಚರಿಸುತ್ತಿದ್ದ ಅವನ ರಥವು ಭೂಮಿಗೆ ಇಳಿಯುತ್ತದೆ. ದ್ರೋಣನು ಶಸ್ತ್ರ ಸನ್ಯಾಸ ಮಾಡಿ ರಥದಲ್ಲಿ ಕುಳಿತು ಯೋಗದಿಂದ ಶರೀರತ್ಯಾಗ ಮಾಡಿ ಜ್ಯೋತೀ ಭೂತನಾಗಿ ಬ್ರಹ್ಮ ವಸ್ತುವಿನಲ್ಲಿ ಐಕ್ಯ ಪಡೆಯುತ್ತಾನೆ. ಧೃಷ್ಟದ್ಯುಮ್ಮನು ನಿರ್ಜೀವವಾದ ಶರೀರದಿಂದ ತಲೆಯನ್ನು ಕತ್ತರಿಸಿ ಕೆಡಹುತ್ತಾನೆ. ಆದರೆ ಸುಳ್ಳು ಹೇಳುವುದರ ಉದ್ದೇಶ ಇದಾಗಿರಲಿಲ್ಲವೆಂಬುದನ್ನು ಹೇಳಬೇಕಾಗಿಲ್ಲ. ದ್ರೋಣನಿಂದ ಶಸ್ತ್ರಸನ್ಯಾಸ ಮಾಡಿಸುವುದು ಮಾತ್ರ ಅವರ ಗುರಿಯಾಗಿದ್ದಿತು. ಸುಳ್ಳನ್ನು ಹೇಳದೆ ಕ್ರೂರಕರ್ಮನಾದ ದ್ರೋಣನಿಂದ ಪಾಂಡವರೆಲ್ಲರೂ ಮಡಿದಿದ್ದರೆ ಸತ್ಯಪ್ರಿಯರಾದ ವಿದ್ವಾಂಸರು ತಮ್ಮ ಉತ್ತರೀಯಗಳನ್ನು ಹಾರಿಸಿ ಧರ್ಮರಾಜನನ್ನು ಪ್ರಶಂಸಿಸುತ್ತಿದ್ದರೋ ಏನೋ ! ಆದರೆ ದ್ರೋಣನು ಎಸಗಿದ ಕಗ್ಗೊಲೆಯನ್ನು ಕಣ್ಣಿನಿಂದ ನೋಡಿದ ಕೃಷ್ಣನಿಗೆ ಏನಾದರೂ ಸರಿ, ಸತ್ಯವನ್ನೇ ಅನುಸರಿಸಬೇಕೆಂಬ ಧರ್ಮವು ತಪ್ಪಾಗಿ ಕಂಡಿರಬೇಕು. ಧರ್ಮಕ್ಕೋಸ್ಕರ ಸತ್ಯ, ಅದನ್ನು ಉಳಿಸಲು ಅಗತ್ಯವಿದ್ದರೆ ಅಸತ್ಯ ಹೇಳಿದರೆ ತಪ್ಪಿಲ್ಲ-ಇದು ಭಗವಂತನ ದೃಷ್ಟಿ.
ಬಹಳ ವಿಶೇಷವಾದ ಸಂದರ್ಭಗಳಲ್ಲಿ ಪ್ರಾಣ ರಕ್ಷಣೆ ಇತ್ಯಾದಿಗಳಿಗೋಸ್ಕರ ಸುಳ್ಳನ್ನು ಹೇಳುವುದರಿಂದ ಪಾಪವುಂಟಾಗುವುದಿಲ್ಲ ಎಂದು ಹೇಳುವುದು ಕೃಷ್ಣನ ಅಭಿಪ್ರಾಯವೇ ವಿನಹ ಸ್ವಭಾವವಾಗಿಯೇ ಅಸತ್ಯವನ್ನು ಹೇಳಬಹುದು ಎಂಬುದಲ್ಲ. ಸತ್ಯವೇ ಎಲ್ಲವೂ, ಸತ್ಯವನ್ನೇ ಹೇಳಬೇಕು, ಸತ್ಯದಿಂದ ಮನುಷ್ಯನ ವ್ಯಕ್ತಿತ್ವಕ್ಕೆ ಅನುಪಮವಾದ ಹೊಳಪು ದೊರಕುತ್ತದೆ, ಅದರಿಂದ ಅವನ ವ್ಯಕ್ತಿತ್ವವು ಉನ್ನತವಾಗಿ ಬೆಳೆಯುತ್ತದೆ, ಸತ್ಯದಿಂದ ಅವನು ಸ್ವರ್ಗವನ್ನು ಸಾಧಿಸುತ್ತಾನೆ, ಅಸತ್ಯದಿಂದ ನರಕಕ್ಕೆ ಹೋಗುತ್ತಾನೆ ಎನ್ನುವುದು ಸಕಲಶಾಸ್ತ್ರಗಳ ಸಾರವಾಗಿರುತ್ತದೆ :
ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ ॥ (ಸಮುದ್ರಕ್ಕೆ ನೌಕೆಯು ಹೇಗೋ ಹಾಗೆ ಸತ್ಯವು ಸ್ವರ್ಗಕ್ಕೆ ಸೋಪಾನ)
ಸತ್ಯಮೇಕ ಪದಂ ಬ್ರಹ್ಮ ಸತ್ಯೇ ಸರ್ವಂ ಪ್ರತಿಷ್ಠಿತಂ ॥ (ಸತ್ಯವು ಬ್ರಹ್ಮಕ್ಕೆ ಒಂದು ಹೆಜ್ಜೆ ಮಾತ್ರ; ಸತ್ಯದಲ್ಲಿ ಎಲ್ಲವೂ ನೆಲೆಗೊಂಡಿರುತ್ತದೆ.)
ಸತ್ಯಮೇವ ಜಯತೇ ನಾನೃತಂ ಸತ್ಯೇನ ಪಂಥಾವಿತತೋ ದೇವಯಾನಃ ॥ ( ಸತ್ಯವೇ ಜಯಿಸುತ್ತದೆ. ಅನೃತವಲ್ಲ; ಸತ್ಯದಿಂದ ಸ್ವರ್ಗದ ದಾರಿಯು ಅಗಲವಾಗುತ್ತದೆ).
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: 5 ಸಂಚಿಕೆ:3, ಆಗಸ್ಟ್ 1988 ತಿಂಗಳಲ್ಲಿ ಪ್ರಕಟವಾಗಿದೆ.