Monday, May 31, 2021

ಉಪದೇಶ ಮತ್ತು ಸತ್ಪಾತ್ರತೆ (Upadesha Mattu Satpatrate)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)


ಬ್ರಹ್ಮದೇವರ ಆದೇಶ ಹಾಗೂ ಅನುಗ್ರಹದೊಂದಿಗೆ, ದೇವರ್ಷಿ ನಾರದರ ಪ್ರೇರಣೆಯೂ ಸೇರಿ, ಶ್ರೀಮದ್ವಾಲ್ಮೀಕಿ ಮಹರ್ಷಿಗಳು ಲೋಕಕಲ್ಯಾಣಾರ್ಥವಾಗಿ ಶ್ರೀರಾಮಚಂದ್ರನ ಚರಿತೆಯನ್ನು ರಚಿಸಲು ಸಂಕಲ್ಪಿಸಿ ಧ್ಯಾನಸ್ಥರಾದಾಗ ಅವರಿಗೆ ಅಂಗೈಯಲ್ಲಿನ ಆಮಲಕದಂತೆ (ನೆಲ್ಲಿಕಾಯಿ) ಶ್ರೀರಾಮಚಂದ್ರನ ಒಳ ಹೊರ ಜೀವನ ಸತ್ಯಗಳನ್ನೊಳಗೊಂಡ ಸಮಗ್ರವಾದ ರಾಮಾಯಣ ಕಥಾಮೃತವು ಗೋಚರಿಸಿತು, ಅದನ್ನು ಆನಂದದಿಂದ ಆಸ್ವಾದಿಸಿ ಅಂತೆಯೇ ಹೃದಯದಲ್ಲಿ ಧರಿಸಿ ಪರಮ ಪವಿತ್ರವಾದ ರಾಮಾಯಣವನ್ನು ರಚಿಸಿದರು.

ಅನಂತರ ವೇದಾರ್ಥಸಹಿತವಾದ ರಾಮಾಯಣ ಕಥಾಮೃತವನ್ನು ಯಾರಿಗೆ ಉಪದೇಶಿಸಲಿ ಅದನ್ನು ಪಡೆಯಲು ಯಾರುಸತ್ಪಾತ್ರರು ಎಂಬ ಚಿಂತನೆಯಲ್ಲಿದ್ದಾಗ, ಅವರ ಸಾನ್ನಿಧ್ಯದಲ್ಲಿಯೇ ಬೆಳೆಯುತ್ತಿರುವ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯರ ಸುಪುತ್ರರಾದ, ವಿದ್ಯಾ ವಿನಯ ಸಂಪನ್ನರಾದ, ಶ್ರೀರಾಮನ ಪ್ರತಿಬಿಂಬದಂತಿರುವ ಕುಶ- ಲವರನ್ನು ಕಂಡು ಅತ್ಯಂತಸಂತೋಷಗೊಂಡು ಇವರೇ ಉಪದೇಶಕ್ಕೆ ಅರ್ಹರೆಂದು ಮನಗಂಡು ಅವರಿಬ್ಬರನ್ನು ಬಳಿಗೆ ಕರೆದು ಇಪ್ಪತ್ನಾಲ್ಕು ಸಾವಿರಶ್ಲೋಕಗಳಿಂದ ಕೂಡಿದ ಪುಣ್ಯತಮವಾದ ಶ್ರೀ ರಾಮಾಯಣ ಗೀತಾಮೃತವನ್ನು ಉಪದೇಶಿಸುತ್ತಾರೆ. ಕುಶ-ಲವರು ಹಾಗೆಯೇಅದನ್ನು ಧರಿಸಿ ಲೋಕದ ಮುಂದೆ ಹಾಗೂ ಸಾಕ್ಷಾತ್ ಶ್ರೀರಾಮನ ಸನ್ನಿಧಾನದಲ್ಲಿ ಅದರ ಗಾನಸುಧೆಯನ್ನು ಹರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ.ಯಾವುದೇ ವಿದ್ಯೆ ಅಥವಾ ಕಲೆಯನ್ನು ಸತ್ಪಾತ್ರರಿಗೆ ಉಪದೇಶಿಸುವುದು ನಮ್ಮ ಭಾರತೀಯ ಪರಂಪರೆಯಲ್ಲಿ ಬಂದಿದೆ.ಒಂದು ವೇಳೆ ಸತ್ಪಾತ್ರನಾಗಿಲ್ಲದಿದ್ದರೂ ಅವನ ಕೈಗೆಉಪದೇಶವನ್ನು ಕೊಡುವವನು ಮೊದಲು ಶಿಷ್ಯನನ್ನು ಸತ್ಪಾತ್ರನನ್ನಾಗಿಸಿ ನಂತರ ಉಪದೇಶಿಸುವುದು ನಮ್ಮ ಗುರುಕುಲ ಪರಂಪರೆಯಲ್ಲಿ ಬಂದಿರುವುದನ್ನು ನಾವು ಉಪನಿಷತ್ಕಥೆಗಳಲ್ಲಿ ಕಾಣುತ್ತೆವೆ. ಶಸ್ತ್ರವನ್ನಾಗಲೀ ಶಾಸ್ತ್ರವನ್ನಾಗಲೀ ಅನಧಿಕಾರಿಗಳ ಕೈಗೆ ಕೊಡಬಾರದು ಎಂಬ ಮಾತೂ ಇದೆ. ಹೇಗೆ ಶುದ್ಧವಾದ ಹಾಲನ್ನುಕಿಲುಬುಗಟ್ಟಿರುವ ಪಾತ್ರೆಗೆ ಹಾಕಿದಾಗ ಅದು ತನ್ನ ಸ್ವರೂಪವನ್ನು ಕಳೆದುಕೊಳ್ಳುವುದೋ ಅಂತೆಯೇ ಉತ್ತಮವಾದ ವಿದ್ಯೆಯನ್ನುಅಪಾತ್ರರಿಗೆ ಉಪದೇಶಿಸಿದಾಗ ಅದರ ಸ್ವರೂಪಕ್ಕೆ ಧಕ್ಕೆ ಉಂಟಾಗಿ ಮುಂದೆ ಅದು ಲೋಕದಲ್ಲಿ ರಸಹೀನವಾಗಿಯೂ ವಿನಾಶಕಾರಿಯಾಗಿಯೂ ಬೆಳೆಯುವುದಕ್ಕೆಅವಕಾಶವಿದೆ.


ಇಂದು ಭಾರತೀಯವಾದ ಅನೇಕ ವಿದ್ಯೆ ಹಾಗೂ ಕಲೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಸಾರರಹಿತವಾಗಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಭಾರತೀಯವಾದ ವಿದ್ಯೆ ಹಾಗೂ ಕಲೆಗಳೆಲ್ಲವೂ ವೇದಮೂಲವಾಗಿಯೇ ಹರಿದು ಬಂದಿವೆ, ಅವುಗಳ ಉಪದೇಶವನ್ನು ಸರಿಯಾಗಿ ಪಡೆದು ಅನುಸಂಧಾನ ಮಾಡಿದಾಗ ವೇದವೇದ್ಯನಾದ ಪರಮಾತ್ಮನವರೆಗೂ ತಲುಪಿಸುವಸಾಮರ್ಥ್ಯವನ್ನು ಹೊಂದಿವೆ ಎಂಬುದು ಅನುಭವಿಗಳ ಮಾತು. ಯಾವುದೇ ವಿಷಯವನ್ನಾಗಲೀ "ನಮ್ಮ ಬುದ್ಧಿಯ ಮಟ್ಟಕ್ಕೇ ನಾವು ತೆಗೆದುಕೊಳ್ಳುತ್ತೇವೆ, ಹಾಗಲ್ಲದೇ ಅದನ್ನು ರಚಿಸಿದ ಋಷಿಯ ಮನಸ್ಸಿನ ಮಟ್ಟಕ್ಕೇ ತೆಗೆದುಕೊಳ್ಳಬೇಕಾದರೂ ಅದರಲ್ಲಿರುವ ವಿಶೇಷಾರ್ಥಗಳನ್ನು ತೆಗೆದುಕೊಳ್ಳಬೇಕಾದರೂ ಉಪದೇಶವೊಂದು ಬೇಕೇ ಬೇಕಪ್ಪ, ಯಾವ ವಸ್ತುವೂ ದೂರದಲ್ಲಿದ್ದಾಗಕಾಣೋಲ್ಲ, ಅದೇ ವಸ್ತುವನ್ನೇ ನಮ್ಮ ಮನಸ್ಸು ಬುದ್ಧಿ ದೃಷ್ಟಿಗಳಿಗೆ ಗೋಚರವಾಗುವಂತೆ "ಉಪ "ಸಮೀಪವಾದ ದೇಶಕ್ಕೆ - ಸ್ಥಳಕ್ಕೆಕರೆದೊಯ್ಯುವ ಸಂವಿಧಾನ ಏನುಂಟೋ ಅದೇಪ್ಪ ಉಪದೇಶ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.

ಸೂಚನೆ: 31/5/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.