Saturday, May 29, 2021

ಯೋಗತಾರಾವಳಿ -8 ಅಗ್ನಿ-ವಾಯು-ಚಂದ್ರ (Yogataravali-8 Agni-Vayu-Chandra)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)


ಉತ್ಥಾಪಿತಾಧಾರ..

ಯಾವ ಅಗ್ನಿ? 

ಮೂಲಾಧಾರದ ಸ್ಥಾನದಲ್ಲೊಂದು 'ಅಗ್ನಿ'ಯುಂಟು. ಅದರ 'ಜ್ವಾಲೆ'ಗಳಿಂದಲೂ, ಜೊತೆಗೆ ಅಪಾನವಾಯುವಿನ ಆಕುಂಚನವನ್ನು ಮತ್ತೆ ಮತ್ತೆ ಮಾಡುವುದರಿಂದಲೂ 'ಚಂದ್ರ'ನು ತಾಪಗೊಳ್ಳುವನು. ಆ ಚಂದ್ರನಿಂದ 'ಅಮೃತಧಾರೆ'ಯು ಸ್ರವಿಸುವುದು. ಅದನ್ನು ಪಾನಮಾಡುವವನೇ ಧನ್ಯ. ಹೀಗೆನ್ನುತ್ತದೆ ಈ ಪದ್ಯ. ಏನಿದರರ್ಥ? 

ಇಲ್ಲಿ ಹೇಳುವ ಅಗ್ನಿಯಾಗಲಿ ಜ್ವಾಲೆಯಾಗಲಿ ಭೌತಿಕವಾದವುಗಳಲ್ಲವಷ್ಟೆ. ಲೋಕವ್ಯವಹಾರದಲ್ಲೂ "ಜಠರಾಗ್ನಿ" ಎಂದಾಗಲೋ "ಕ್ರೋಧಾಗ್ನಿ" ಎಂದಾಗಲೋ, ಅಲ್ಲೇನೋ "ಇಷ್ಟು ಡಿಗ್ರಿ ಸೆಂಟಿಗ್ರೇಡ್‍ನ ಬೆಂಕಿಯಿದೆ"ಯೆಂದಲ್ಲವಲ್ಲವೆ? 'ಹೊಟ್ಟೆಯುರಿ' ಎಂದೋ, 'ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು ಗಾಂಧಾರಿಗೆ' - ಎಂದೋ ಹೇಳಿದಾಗಲೂ ಅಲ್ಲೇನೂ ಇದ್ದಿಲು-ಸೀಮೆಎಣ್ಣೆ-ಪೆಟ್ರೋಲುಗಳ, ಬೆಂಕಿಪೊಟ್ಟಣದ, ಸಮಾಚಾರವೇನಿಲ್ಲವಷ್ಟೆ. 

ಹಾಗೆಯೇ ಯೋಗಶಾಸ್ತ್ರ-ತಂತ್ರಶಾಸ್ತ್ರಗಳಲ್ಲಿ ಸೂರ್ಯ-ಚಂದ್ರ-ಅಗ್ನಿ-ಸರ್ಪ-ಚಕ್ರ-ಗಳೆಂದೆಲ್ಲ ಹೇಳಿದಾಗ ಆ ಮಾತಿನ ಆಶಯವೇನೆಂದು ತಿಳಿದುಕೊಳ್ಳದಿದ್ದಲ್ಲಿ ಅಪಾರ್ಥವೇ ಸರಿ. ಅಥವಾ ಇದಕ್ಕೆಲ್ಲ ಅರ್ಥವೇ ಇಲ್ಲವೆಂದು ಸಹ ತೋರಬಹುದು. ಪ್ರಕೃತ ಶ್ಲೋಕದಲ್ಲಂತೂ ಶಾಸ್ತ್ರಸಿದ್ಧಪರಿಭಾಷೆಯೂ ಕಾವ್ಯಶೈಲಿಯೂ ಮೇಳೈಸಿರುವುದಷ್ಟೇ ಅಲ್ಲದೆ, ಜೊತೆಗೇ ತಾತ್ತ್ವಿಕಾಂಶಗಳನ್ನೂ ನಿರೂಪಿಸಲಾಗುತ್ತಿದೆಯೆಂಬುದನ್ನು ಗಮನಿಸಿಕೊಳ್ಳಬೇಕು.

 ಪ್ರಾಣಾಯಾಮ ಮಾಡುವಾಗ ಮೈಯಲ್ಲಿ ತಾಪವು ಹೆಚ್ಚುವುದು, ಕೆಲವೊಮ್ಮೆ ಬೆವರುವುದು - ಇವುಗಳು ಸಹ ಆಗುವುದುಂಟು. ಹಾಗೆಯೇ ದೇಹದ ಅಧೋಭಾಗದಲ್ಲಿ ತಾಪವು ತೋರುವುದನ್ನೂ, ಜೊತೆಗೆ ಶರೀರಲ್ಲಾಗುವ ಮತ್ತೆ ಕೆಲವು ಪರಿಣಾಮಗಳನ್ನೂ, ಲಕ್ಷಿಸಿ ಇಲ್ಲಿ ಹೀಗೆ ಹೇಳಲಾಗಿದೆ.

ಅನಲ-ಅನಿಲ 

ಅಪಾನವಾಯುವೆಂಬುದು ಅಧೋಗಾಮಿ, ಕೆಳಕ್ಕೆ ಸೆಳೆಯುವಂತಹದು. ಅದರ ಆಕುಂಚನ ಅಥವಾ ಮೇಲ್ಮುಖವಾದ ಸೆಳೆತವನ್ನು ಮತ್ತೆ ಮತ್ತೆ ಮಾಡುತ್ತಿದ್ದಲ್ಲಿ ಅದು ತಿದಿಯೊತ್ತುವ ಹಾಗಾಗುತ್ತದೆ. ಅಗ್ನಿಯು "ವಾಯು-ಸಖ". ಎಂದರೆ ವಾಯುವನ್ನೇ "ಸ್ನೇಹಿತ"ನನ್ನಾಗಿ ಹೊಂದಿರುವಂತಹುದು. ಅನಲಕ್ಕೆ(=ಅಗ್ನಿಗೆ) ಅನಿಲವು(=ವಾಯುವು) ಪೋಷಕ, ಸಹಾಯಕ. ಸಖನೆಂದರೆ ಜೊತೆಗಾರನೇ: ಗಾಳಿಯು ಹೆಚ್ಚಾಗಿ ಬೀಸಿದಂತೆ ಬೆಂಕಿಯು ಉರಿಯುವುದೂ ಹೆಚ್ಚಲ್ಲವೇ? 

(ಅತಿಯಾಗಿ ಬೀಸಿದಾಗ ದೀಪಜ್ವಾಲೆಯು ಆರಿಹೋಗುವುದು ನಿಜವೇ ಆದರೂ) ಅನಲಕ್ಕೆ ಅನುಗುಣವಾದ ಅನಿಲವು ಆಡಿದಲ್ಲಿ ಅಗ್ನಿಯ ತಾಪವು ಹೆಚ್ಚುವುದಲ್ಲವೆ? ಹೀಗಾಗಿ ಮೂಲಾಧಾರ-ಸ್ಥಾನದಲ್ಲಿ ಉಂಟಾಗಿರುವ ಅಗ್ನಿಗೆ ಅಪಾನವಾಯುವಿನ ಸಹಕಾರವೇರ್ಪಟ್ಟಾಗ ಅಲ್ಲಿ ತಾಪವು ಹೆಚ್ಚುವುದು. 

ತಂಪಾಗಿಯೂ ಗಟ್ಟಿಯಾಗಿಯೂ ಇರುವ ಪದಾರ್ಥಗಳಿಗೆ ತಾಪವು ತಟ್ಟುತ್ತಲೇ ಅವು ದ್ರವಿಸುವುದುಂಟು: ನೀರಿನ ರಾಶಿಯು ಹೆಪ್ಪುಗಟ್ಟಿ ಮಂಜಿನ ಗಡ್ಡೆಯಂತೆ ಮೊದಲಿದ್ದದ್ದು, ತಾಪವು ತಗಲುತ್ತಲೇ ಕರಗಲು ಅಣಿಯಾಗುತ್ತದೆ. ತಾಪವು ಹೆಚ್ಚುತ್ತಿದ್ದಂತೆ ಕರಗಿ ಕೆಳಮುಖವಾಗಿ ಹರಿಯುವುದು. 

ಹಾಗೆಯೇ ತಾಲು-ಮೂಲವನ್ನು ಚಂದ್ರ-ಸ್ಥಾನವೆನ್ನುವುದು ಯೋಗದ ಪರಿಭಾಷೆ. ತಾಲು-ಮೂಲವೆಂದರೆ ದವಡೆ: ನಾಲಿಗೆಯ ಮೂಲ-ಸ್ಥಾನ. ಮೇಲೆ ಸೂಚಿಸಿದ ಯೋಗ-ಕ್ರಿಯೆಯಿಂದಾಗಿ ಅಲ್ಲಿಂದೊಂದು ರಸವು ಒಳಗೇ ಹರಿಯುವುದು. ಆ ರಸವು ಅಮೃತದ ಧಾರೆಯ ಹಾಗೆ ಆಸ್ವಾದ್ಯವಾಗಿರುವುದು. ಇದರ ಪಾನವು ಒಂದು ವಿಶಿಷ್ಟವಾದ ಆನಂದವನ್ನು ಉಂಟುಮಾಡುವುದು. ಹೀಗೆ ರಸಾಸ್ವಾದ-ಆನಂದಾನುಭವಗಳು ಇಲ್ಲಿ ಉಂಟಾಗುವುವು.ಈ ಚಂದ್ರಾಮೃತಾಸ್ವಾದದಿಂದ ಒದಗಿ ಬರುವ ತೃಪ್ತಿಯೂ ವಿಶಿಷ್ಟವಾದದ್ದು. 

ಯಾರು ಧನ್ಯರು?

ಹಸಿವು-ನೀರಡಿಕೆಗಳ ಬಾಧೆಯು ಎಲ್ಲರಿಗೂ ಹಿಂಸೆಯೇ: ಯಾವುದೇ ಕ್ಷೇತ್ತ್ರದಲ್ಲಿಯ ಸಾಧನೆಯನ್ನು ಮಾಡುವವರಿಗೂ ಈ ಹಸಿವು-ಬಾಯಾರಿಕೆಗಳ ಹಿಂಸೆಯಿರಬಾರದಷ್ಟೆ.ದೊಡ್ಡ ಸಾಧನೆಯನ್ನು ಮಾಡಹೊರಡುವ ಮಂದಿ ಉಪಾಯವಾಗಿ ಮಿತಾಹಾರಿಗಳಾಗುವರು. ಮಿತಿಮೀರಿದ ಆಹಾರಸೇವನೆಯು ಉದರಭಾರ-ಮೈಭಾರಗಳ ಭಾವನೆಯನ್ನು ಕೊಡುವುದು; ಹೃದಯವು ಹೆಚ್ಚಾಗಿ ಹೊಡೆದುಕೊಳ್ಳುವುದು; ಮಂಪರು-ತೂಕಡಿಕೆ-ಆಲಸ್ಯಗಳ ಕಾಟವು ಆರಂಭವಾಗುವುದು; ಮನಸ್ಸನ್ನು ಏಕತ್ರ ಕೇಂದ್ರೀಕರಿಸಲಾಗದಂತಹ ಪರಿಸ್ಥಿತಿಯೇರ್ಪಡುವುದು. ಯೋಗದ ಸಾರವೇ ಏಕಾಗ್ರತೆ. ಅದಕ್ಕೇ ಧಕ್ಕೆಯಾಗುವುದಾದಲ್ಲಿ ಯೋಗ-ಪ್ರಗತಿಯ ಮಾತೆಲ್ಲಿ? 

ಈ ಚಂದ್ರ-ಸುಧಾ-ಪಾನದಿಂದ ಹಸಿವು-ನೀರಡಿಕೆಗಳು ಹತೋಟಿಗೆ ಬರುವುವು. ಸುಭೋಜನದಿಂದಾಗುವ ತೃಪ್ತಿಯನ್ನು ಮೀರಿಸುವ ತೃಪ್ತಿಯು ಉಂಟಾಗುವುದು.ಅದು ಯಾರಿಗೆ ಲಬ್ಧವಾಯಿತೋ ಅಂತಹವರನ್ನು ಧನ್ಯರೆಂದು ಇಲ್ಲಿ ಕರೆದಿದೆ.(ಹಸಿವು-ಬಾಯಾರಿಕೆಗಳ ಹಿಂಸೆಯಾಗುತ್ತಿರಬಾರದೆಂದೇ ಬಲಾ-ಅತಿಬಲಾ - ಎಂಬ ವಿದ್ಯೆಗಳನ್ನು ರಾಮ-ಲಕ್ಷ್ಮಣರಿಗೆ ವಿಶ್ವಾಮಿತ್ರರು ಉಪದೇಶಿಸಿದುದೂ.)

 

ಉತ್ಥಾಪಿತಾಧಾರ-ಹುತಾಶನೋಲ್ಕೈಃ

       ಆಕುಂಚನೈಃ ಶಶ್ವದ್ ಅಪಾನವಾಯೋಃ |

ಸಂತಾಪಿತಾತ್ ಚಂದ್ರಮಸಃ ಪತಂತೀಂ

      ಪೀಯೂಷ-ಧಾರಾಂ ಪಿಬತೀಹ ಧನ್ಯಃ ||೭||

ಸೂಚನೆ : 29/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.