Saturday, May 1, 2021

ಯೋಗತಾರಾವಳಿ-5- ಬಂಧತ್ರಯ (Yogataravali-5-Bandhatraya)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)



ಬಂಧತ್ರಯ

ಜಾಲಂಧರೋಡ್ಯಾಣನ..


ಮೂರು ಬಂಧಗಳು


ಯೋಗಾಭ್ಯಾಸದಲ್ಲಿ ಹಲವು ಬಂಧಗಳನ್ನು ಹೇಳಿಕೊಡುವುದುಂಟು. ಅವುಗಳಲ್ಲಿ ಮುಖ್ಯವಾದವುಗಳು ಮೂಲ-ಬಂಧ, ಉಡ್ಯಾಣ-ಬಂಧ, ಹಾಗೂ ಜಾಲಂಧರ-ಬಂಧ. ಇವುಗಳು ಮೂರುಸ್ಥಾನಗಳಲ್ಲಿ ಆಗತಕ್ಕವು. ಮೂಲಬಂಧವು ಕೆಳಗೆ, ಉಡ್ಯಾಣಬಂಧವು ಮಧ್ಯದಲ್ಲಿ, ಹಾಗೂ ಜಾಲಂಧರಬಂಧವು ಮೇಲ್ಭಾಗದಲ್ಲಿ ಆಗತಕ್ಕವು.


ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಮೂಲಬಂಧವೆಂಬುದು ಮೂಲಾಧಾರದ ಸಮೀಪದಲ್ಲಿರುವ ಗುದಸ್ಥಾನದಲ್ಲಿ ಆಗತಕ್ಕದ್ದು. ಗುದವೆಂದರೆ ಮಲ-ವಿಸರ್ಜನ ಸ್ಥಾನ. ಹಾಗೆಯೇ ಉಡ್ಯಾಣಬಂಧವು ಸೊಂಟದಲ್ಲಿ ಅಥವಾ ಹೊಟ್ಟೆಯ ಸ್ಥಾನದಲ್ಲಿ ಆಗತಕ್ಕದ್ದು. ಇನ್ನು ಜಾಲಂಧರಬಂಧವೆಂಬುದು ಕಂಠದ ಸ್ಥಾನದಲ್ಲಿ ಆಗತಕ್ಕದ್ದು.


ಈ ಬಂಧಗಳು ಏನು? ಅವುಗಳನ್ನು ಏಕೆ ಮಾಡಿಕೊಳ್ಳಬೇಕು? ಅವುಗಳ ವಿಶೇಷಗಳೇನು? ಅವುಗಳಿಂದಾಗುವ ಲಾಭವೇನು? - ಎಂಬ ಪ್ರಶ್ನೆಗಳು ಏಳುವುದು ಸಹಜವೇ ಸರಿ. ಬಂಧವೆಂದರೆ ಕಟ್ಟು. ಬಂಧನವೆಂದರೆ ಕಟ್ಟಿಹಾಕುವುದು ತಾನೆ? ಹಾಗಿದ್ದರೆ ಇಲ್ಲಿ ಏನನ್ನು ಕಟ್ಟಿಹಾಕಬೇಕಾಗಿದೆ? - ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಇದಕ್ಕೆ ಉತ್ತರ: ಇಲ್ಲಾಗುವುದು ಪ್ರಾಣಾಪಾನಗಳ ಕಟ್ಟುಗಳು.


ಮೇಲ್ಮುಖವಾಗಿ ಸಂಚರಿಸುವುದು ಪ್ರಾಣ, ಅಧೋಮುಖವಾಗಿ ಸಂಚರಿಸತಕ್ಕದ್ದು ಅಪಾನ. ಮೂಲಬಂಧವನ್ನು ಮಾಡಿಕೊಳ್ಳುವಾಗ ಹಿಮ್ಮಡಿಯಿಂದ ಗುದವನ್ನು ಒತ್ತಿಹಿಡಿಯುವುದಾಗುತ್ತದೆ. ಗುದದ ಆಕುಂಚನವನ್ನೂ ಆಗ ಮಾಡಿಕೊಳ್ಳುವುದಾಗುತ್ತದೆ. ಆಕುಂಚನವೆಂದರೆ ಒಳಕ್ಕೆ ಎಳೆದುಕೊಳ್ಳುವುದು. ಹಾಗೆ ಮಾಡಿಕೊಂಡಾಗ ಅಪಾನವು ಅಧೋಮುಖವಾಗಿ ಹರಿಯುವುದನ್ನು ತಡೆದಂತಾಗುತ್ತದೆ.


ಹಾಗೆಯೇ ಜಾಲಂಧರಬಂಧವನ್ನು ಮಾಡುವಾಗಲೂ. ಕಂಠಸ್ಥಾನದಲ್ಲಿ ಒತ್ತಡವನ್ನು ಉಂಟುಮಾಡುವುದಲ್ಲದೆ ಗಲ್ಲವನ್ನು ಕಿಂಚಿತ್ತಾಗಿ ಎದೆಯತ್ತ ಎಳೆದುಕೊಳ್ಳುವುದೂ ಆಗಿರುತ್ತದೆ. ಆಗ ಉಂಟಾದ ಒಂದು ಬಂಧದಿಂದಾಗಿ ಪ್ರಾಣವು ಮೇಲ್ಮುಖವಾಗಿ ಸಂಚರಿಸುವುದನ್ನು ಇಲ್ಲಿ ತಡೆಗಟ್ಟುವುದಾಗುತ್ತದೆ.


ಉಡ್ಯಾಣ-ಬಂಧದ ಮರ್ಮ


ಉಡ್ಯಾಣಬಂಧವಾದಾಗ ಸೊಂಟದಲ್ಲಿ ಒತ್ತಡಬೀಳುತ್ತದೆ. ಇದರಿಂದಾಗಿ ಪ್ರಾಣ-ಅಪಾನಗಳೆರಡರ ಮೇಲೂ ನಿರೋಧನದ ಪ್ರಭಾವವಾಗುತ್ತದೆ. ಹೃದಯವು ಪ್ರಾಣದ ಸ್ಥಾನ; ಗುದವು ಅಪಾನದ ಸ್ಥಾನ. ಹೀಗಾಗಿ ಸೊಂಟವೆಂಬುದು ಇವೆರಡಕ್ಕೂ ಮಧ್ಯದ ಭಾಗವಾಗಿದ್ದು ಪ್ರಾಣಾಪಾನಗಳನ್ನು ಒಂದು ಹತೋಟಿಯಲ್ಲಿಡುವುದಾಗಿರುತ್ತದೆ. ಎರಡನ್ನೂ ಊರ್ಧ್ವಮುಖವಾಗಿ ಮಾಡುವುದಾಗುತ್ತದೆ.


ಮೂಲಬಂಧದಿಂದಾಗಿ ಅಪಾನವನ್ನು ಪ್ರಾಣದಲ್ಲಿ "ಹೋಮಮಾಡಿದಂತೆ" ಆಗುತ್ತದೆ. ಜಾಲಂಧರಬಂಧದಿಂದಾಗಿ ಪ್ರಾಣವನ್ನು ಅಪಾನದಲ್ಲಿ "ಹೋಮಮಾಡಿದಂತೆ" ಆಗುತ್ತದೆ. ಅಂತೂ ಪ್ರಾಣಾಪಾನಗಳ ಏಕೀಭವನವು ಈ ಮೂರೂ ಬಂಧಗಳಿಂದಲೂ ಏರ್ಪಡುತ್ತದೆ. ಇದಕ್ಕೆ ಉಡ್ಯಾಣಬಂಧವು ಸಹಕಾರಿಯಾಗಿರುತ್ತದೆ.


ಉಡ್ಯಾಣಬಂಧಕ್ಕೇ ಉಡ್ಡೀನ, ಉಡ್ಡೀಯನ, ಉಡ್ಡೀಯಾನ, ಓಡ್ಯಾಣ - ಎಂದೆಲ್ಲ ಹೆಸರಿದೆ. ಸಾಧಾರಣವಾಗಿ ಹೆಂಗಸರು ಸೊಂಟದಲ್ಲಿ ಧರಿಸುವ ಆಭರಣಕ್ಕೆ ಉಡ್ಯಾಣವೆಂದು ಹೆಸರು. ಇದು ಕನ್ನಡದ ಪದವೆಂದು ತೋರಿದರೂ ಇದು ಸಂಸ್ಕೃತಮೂಲದ ಪದವೇ.


ಶ್ರೀರಂಗಮಹಾಗುರುಗಳು ಇದರ ಮರ್ಮವನ್ನು ತೋರಿಸಿಕೊಡುತ್ತಾ ಯೋಗಬಂಧದಿಂದ ಆಗಬೇಕಾದ ಕೆಲಸವನ್ನು ಈ ಆಭರಣವೇ ಮಾಡಿಕೊಡುವುದೆಂಬುದನ್ನು ಸೂಚಿಸಿದ್ದರು. ಭಾರತೀಯರ ಆಭರಣಗಳಲ್ಲಿ ಸಹ ಯೋಗವಿದ್ಯೆಯ ಮರ್ಮಗಳಿರುವುದನ್ನು ತೋರಿಸಿಕೊಟ್ಟಿದ್ದರು.


ಬರೀ ಆಭರಣಗಳಲ್ಲಿ ಮಾತ್ರವಲ್ಲದೆ ಪಾರಂಪರಿಕವಾಗಿ ಧರಿಸುವ ಪಂಚೆ-ಸೀರೆ ಮುಂತಾದ ವಸ್ತ್ರಗಳ ವಿನ್ಯಾಸದಲ್ಲೂ ಈ ಮರ್ಮವಿರುವುದನ್ನು ತೋರಿಸಿಕೊಟ್ಟಿದ್ದರು. ಒಂದು ಕೆಲಸಕ್ಕಾಗಿ "ಸೊಂಟ ಕಟ್ಟಿ ನಿಲ್ಲುವುದು" ಈ ಮರ್ಮವನ್ನೇ ಅನುಸರಿಸಿರುವುದು. ಹಾಗೆಯೇ ಕಂಕಣ-ಬಂಧವೂ. ಅನೇಕ ಶುಭ-ಕರ್ಮಗಳಲ್ಲಿ ಈ ಬಂಧವನ್ನು ಮಾಡಿಕೊಂಡಮೇಲೆ ಆಶೌಚದ ಪ್ರಭಾವವೂ ತಟ್ಟಲಾರದೆಂಬ ಲೆಕ್ಕವಿದೆ. ಹಾಗೆಯೇ ಶುಭಕರ್ಮ-ಪುಣ್ಯಕರ್ಮಗಳಲ್ಲಿ ಧರಿಸುವ ದರ್ಭಕೃತ-ಪವಿತ್ರಕ್ಕೂ ಈ ಶಕ್ತಿಯಿದೆ.


ಪುಟ್ಟಕೃಷ್ಣನು ಚೇಷ್ಟೆ ಮಾಡುವನೆಂದು ಯಶೋದೆಯು ಅವನ ಸೊಂಟಕ್ಕೆ ದಾರವನ್ನು ಕಟ್ಟಿದಳೆಂದೇ ಆತನು "ದಾಮೋದರ"ನೆನೆಸಿದನೆಂದು ಕಥೆ. ವಸ್ತುತಃ ಅದು ಉಡ್ಯಾಣಬಂಧ. ಅಲ್ಲಿ ಉದರವು ಹಿಂದಕ್ಕೆ ಹೋಗಿರುತ್ತದಷ್ಟೆ. ಈ ಯೋಗಶಾಸ್ತ್ರೀಯ-ಕಾರಣವನ್ನೂ ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಪ್ರಾಣದ ಉಡ್ಡಯನವು ಎಲ್ಲಿ ನೆರವೇರುವುದೋ ಅದೇ ಉಡ್ಡೀಯನ ಅಥವಾ ಓಡ್ಯಾಣ. ಉಡ್ಡಯನವೆಂದರೆ ಮೇಲೆ ಹಾರುವಿಕೆ.


ಸೂಚನೆ : 1/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.