Tuesday, May 25, 2021

ನರಸಿಂಹಾವತಾರ : ಕಥೆಯ ಮರ್ಮ (Narasinhavatara : Katheya Marma)

ಲೇಖಕರು: ಡಾ|| ಕೆ. ಎಸ್. ಕಣ್ಣನ್
(BSc, MA (Sanskrit), MPhil, PhD, ವಿದ್ವತ್)
(ಪ್ರತಿಕ್ರಿಯಿಸಿರಿ lekhana@ayvm.in)


ಸಾಲು ಸಾಲು ಹಬ್ಬಗಳು
ಜನಸಾಮಾನ್ಯರು ಚಿಂತಿಸುವ ಬಗೆಗೂ ಕನ್ನಡಿ ಹಿಡಿಯುವ ಸಾಮರ್ಥ್ಯವು ಮಹಾಕವಿಗಳಿಗೆ ಇರುತ್ತದಷ್ಟೆ. ಇದಕೊಂದು ಸಾಕ್ಷಿ ಕಾಳಿದಾಸನ ಈ ಕಿರುನುಡಿ: "ಉತ್ಸವಪ್ರಿಯಾಃ ಖಲು ಮನುಷ್ಯಾಃ" : ಮನುಜರು ಉತ್ಸವಪ್ರಿಯರು. ಪಿಳ್ಳೆನೆವವನ್ನಾದರೂ ಮಾಡಿಕೊಂಡು ಸಂಭ್ರಮಪಡುವಾಸೆ ಯಾರಿಗಿರದು? ಜನಸಾಮಾನ್ಯರ ಎನ್ಸೈಕ್ಲೋಪೀಡಿಯಾ (ವಿಶ್ವಕೋಶ) ಎಂದೇ ಕರೆಸಿಕೊಳ್ಳುವ ಪುರಾಣಗಳಲ್ಲಿ ನಿರೂಪಿಸಲಾದ ಹಬ್ಬಗಳು ಅದೆಷ್ಟು! ಅವುಗಳ ವೈವಿಧ್ಯ-ವೈಶಿಷ್ಟ್ಯಗಳಿಗಾಗಲಿ ಆ ಸಂದರ್ಭಗಳ ಅಡುಗೆ-ಆಚರಣೆಗಳಿಗಾಗಲಿ ಬೇರಾವ ದೇಶದಲ್ಲಿ ಎಣೆ ಕಾಣುವೆವು? ಹಬ್ಬಗಳೆಲ್ಲ ಭಗವಂತನ ಅವತಾರಗಳನ್ನು ಕುರಿತಾದವೇ. ಅವತಾರಗಳ ಉದ್ದೇಶವೊಂದೇ ಆದರೂ ಅವುಗಳ ಬಗೆ ಹಲವು.

ಧರ್ಮಗ್ಲಾನಿ
ಭಗವಂತನ ಅವತಾರವಾಗುವುದು "ಧರ್ಮಗ್ಲಾನಿ"ಯಾದಾಗ. ಗ್ಲಾನಿಯೆಂದರೆ ಬಾಡುವುದು. ಯಾವುದಾದರೂ ಬಾಡುವುದು ಅಲ್ಲಿಯ ರಸ ಬತ್ತಿದಾಗ. ಧರ್ಮದ ಹೊರತೋರಿಕೆ ಮಾತ್ರವಿದ್ದು, ಒಳಗೆ ರಸವಿಲ್ಲವಾದಾಗ ಧರ್ಮಗ್ಲಾನಿ. ಇದಾದಲ್ಲಿ ಅಸುರರ ಪ್ರಾಬಲ್ಯ ಹೆಚ್ಚಾಗಿದೆಯೆಂದೇ. ಹಿರಣ್ಯಾಕ್ಷ-ಹಿರಣ್ಯಕಶಿಪುಗಳಿಂದಾಗಿ ಹಾಗಾಯಿತು: ಭಗವದವತಾರವಾಗಬೇಕಾಯಿತು. ನರಸಿಂಹಾವತಾರದಲ್ಲಾದುದು ಹಿರಣ್ಯಕಶಿಪುವಿನ ಸಂಹಾರ. ಹಿರಣ್ಯಕಶಿಪು ಮಾಡಿದ ಉಗ್ರವಾದ ತಪಸ್ಸಿಗೆ ಬ್ರಹ್ಮನೇ ಮೆಚ್ಚಿ, "ಹಿಂದಿನ ಋಷಿಗಳೂ ಹೀಗೆ ಮಾಡಿದ್ದಿಲ್ಲ" ಎಂದ! ಅಸುರರು ಬಲು "ಜಾಣತನದ ವರ"ಗಳನ್ನು ಕೇಳಿಕೊಳ್ಳುವರೇ. "ಬ್ರಹ್ಮನೇ, ನೀನು ಸೃಷ್ಟಿಸಿದ ಜೀವಿಗಳಿಂದ ನನಗೆ ಸಾವು ಬರಬಾರದು; ಒಳಗಾಗಲಿ ಹೊರಗಾಗಲಿ (ನಾಂತರ್ ಬಹಿಃ), ಹಗಲಾಗಲಿ ಇರುಳಾಗಲಿ (ದಿವಾ ನಕ್ತಂ), ನೆಲದ ಮೇಲಾಗಲಿ ಆಕಾಶದಲ್ಲಾಗಲಿ (ನ ಭೂಮೌ ನಾಂಬರೇ), ಮನುಷ್ಯರಿಂದಾಗಲಿ ಪ್ರಾಣಿಗಳಿಂದಾಗಲಿ (ನ ನರೈಃ ನ ಮೃಗೈಃ), ಯಾವುದೇ ಆಯುಧದಿಂದಾಗಲಿ - ನನಗೆ ಸಾವು ಬರಬಾರದು" ಎಂದ. ಸುರಾರಿ ಚಾಪೆಯಡಿಯಲ್ಲಿ ತೂರಿದರೆ ಮುರಾರಿ ರಂಗೋಲೆಯಡಿಯಲ್ಲಿಯೇ ತೂರಿಬರುವನು, ತೋರಿಬರುವನು! ವರಬಲದಿಂದ ಚಿನ್ನದ ಮೈ ಬಂದಿತು (ಹೇಮಮಯಂ ವಪುಃ) ಹಿರಣ್ಯನಿಗೆ! ಸಾವಿನ ಭಯವಿಲ್ಲ: ಬಹುಬೇಗನೆ ಲೋಕಕಂಟಕನೇ ಆದ: ಉಪಟಳ ಉಲ್ಬಣವಾಯಿತು. ಕಂಗೆಟ್ಟು ದೇವತೆಗಳು ಲೋಕರಕ್ಷಕನತ್ತ ಧಾವಿಸಿದರು. "ಪುತ್ರ ಪ್ರಹ್ಲಾದನಿಗೆ ಆತ ತೊಂದರೆ ಕೊಡುತ್ತಾನಲ್ಲಾ, ಆಗಾಗುವುದು ಶಾಸ್ತಿ!" ಎಂದು ಧೈರ್ಯವಿತ್ತ, ವಿಷ್ಣು. "ಭಾಗವತರಲ್ಲಿ ಮೊದಲನೆಯ ರ್‍ಯಾಂಕ್ ಎಂದರೆ ಪ್ರಹ್ಲಾದನಿಗೇ" ಎಂದು ಪೂಜ್ಯರಂಗಪ್ರಿಯ ಸ್ವಾಮಿಗಳು ಉದ್ಗರಿಸಿದ್ದಾರೆ. "ಪ್ರಹ್ಲಾದೋ ಜನ್ಮವೈಷ್ಣವಃ"! "ನನ್ನ ಮಗನೇ ಆಗಿದ್ದೂ ನನ್ನ ವೈರಿಯಾದ ವಿಷ್ಣುವನ್ನು ಅರ್ಚಿಸುವುದೇ !" ಎಂದು ಕೆಂಡವಾದ ಹಿರಣ್ಯಕಶಿಪು ಪುಟ್ಟ ಪ್ರಹ್ಲಾದನಿಗೆ ಕೊಡದ ಕಿರುಕುಳವಿಲ್ಲ. ಭಗವದ್ಭಕ್ತಿಯ ಪರವಶತೆಯಲ್ಲಿ ಪ್ರಹ್ಲಾದನು ಮಾಡಿದ ವಿಷ್ಣುಸ್ತುತಿಯಿಂದ ಕೆರಳಿದ ಹಿರಣ್ಯಕಶಿಪು. "ಎಲ್ಲೆಡೆ ಇರುವ ನಿನ್ನ ವಿಷ್ಣುಈ ಕಂಭದಲ್ಲಿರುವನೋ?" ಎಂದು ಮೂದಲಿಸಿ ಆ ಸ್ತಂಭಕ್ಕೊಂದು ಮುಷ್ಟಿಪ್ರಹಾರ ಮಾಡಿದ. ತತ್-ಕ್ಷಣವೇ ಅಲ್ಲೇ ಆವಿರ್ಭವಿಸಿದವನೇ ನರಸಿಂಹ: "ನ ಮೃಗಂ ನ ಮಾನುಷಂ"! ಸ್ವನಖದಿಂದಲೇ ಹಿರಣ್ಯಕಶಿಪುವನ್ನು ಸಂಹರಿಸಿದ! ಲೋಕಕಂಟಕ ಧ್ವಂಸವಾಯಿತು! ಇಂತಹ ಅಲೌಕಿಕ ಘಟನೆಯ ನೆನೆಪಿಗಾಗಿ ಈ ಉತ್ಸವ.

ನರಸಿಂಹಾವತಾರದ ತತ್ತ್ವ-ರಹಸ್ಯ
ಈ ಅವತಾರದ ತತ್ತ್ವವೇನು? – ಎಂಬುದರ ಎರಡು-ಮೂರು ಅಂಶಗಳನ್ನು ಇಲ್ಲಿ ಗಮನಿಸಬಹುದು. ಮೊದಲನೆಯದಾಗಿ, ತ್ರಿಮೂರ್ತಿಗಳ ಸಂಗಮ ನರಸಿಂಹ: ನಾಭಿಪರ್ಯಂತವಾಗಿ ಬ್ರಹ್ಮ; ಅಲ್ಲಿಂದ ಕಂಠಪರ್ಯಂತವಾಗಿ ವಿಷ್ಣು; ಅಲ್ಲಿಂದ ಶಿರಸ್ಸಿನವರೆಗೆ ರುದ್ರ; ಅದಕ್ಕೂ ಮೇಲೆ ಪರಬ್ರಹ್ಮವೇ ಆದವನು. ನಾವು ಹೇಳಿಕೊಳ್ಳುವ "ಗುರುರ್ಬ್ರಹ್ಮಾ ಗುರುರ್ವಿಷ್ಣುಃ…" ಎಂಬ ಶ್ಲೋಕದ ಮೂರ್ತರೂಪವಾದ ವ್ಯಾಖ್ಯಾನವೇ ಈ ಶ್ರೀಗುರು-ನರಸಿಂಹ! ಎರಡನೆಯದಾಗಿ ಇಲ್ಲಿಯ ಸಂಧ್ಯಾಕಾಲವೂ ನಮ್ಮೊಳಗಿನ ಸಂಧ್ಯೆಯ ಪ್ರತೀಕವೇ. ಲಯ-ವಿಕ್ಷೇಪಗಳ ಸಂಧಿಕಾಲವೇ ಯೋಗಸಾಧನೆಯಲ್ಲಿ ಸಮುನ್ನತಿಗೆ ಸುಸಮಯ. ಮೂರನೆಯದಾಗಿ, ನರಸಿಂಹನು ಆವಿರ್ಭವಿಸಿದ ಸ್ತಂಭವಾವುದು? ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿರುವಂತೆ ಅದು ನಮ್ಮ ಬೆನ್ನುಮೂಳೆಯೇ. ಅದಕ್ಕೇ ಮೇರುಸ್ತಂಭವೆಂದು ಹೆಸರು, ಯೋಗಶಾಸ್ತ್ರದಲ್ಲಿ. ಸುಷುಮ್ನೆಯಲ್ಲಿ ಗೊಚರಿಸುವ ಅಂತರ್ಜ್ಯೋತಿ- ಅಂತರ್ನಾದಗಳ ಒಂದು ಯೋಗವಿಶೇಷವೇ ಯೋಗಮೂರ್ತಿ ನರಸಿಂಹ. ಈ ಸು-ಯೋಗಪ್ರಾಪ್ತಿಯೇ ಧರ್ಮಸಾರ, ಧರ್ಮರಸ.

ಏಕಲಕ್ಷ್ಯ
ದೊಡ್ಡ ತಪಸ್ಸು ಮಾಡಿದ ದೊಡ್ಡ ಬಲದಿಂದ ಸ್ವಹಿತ-ಪರಹಿತಗಳನ್ನು ಸಾಧಿಸಬಹುದಿತ್ತು; ಬದಲಾಗಿ ಸ್ವಹಾನಿ-ಪರಹಾನಿಗಳನ್ನು ತಂದುಕೊಂಡ ಹಿರಣ್ಯಕಶಿಪು. ಬಲದ ದುರುಪಯೋಗವೆಂದರೆ ಧರ್ಮಗ್ಲಾನಿ ಸಿದ್ಧವೇ. ರೋಗದ ಉಗ್ರತೆಗೆ ಸರಿಸಮನಾಗಿ ಯೋಗದ ಮೂರ್ತಿಯಾಗಿ ಅವತರಿಸಿ ಧರ್ಮಸಂಸ್ಥಾಪನೆಯನ್ನು ಮಾಡಿದ ನರಸಿಂಹನೇ ನಮ್ಮ ಬುದ್ಧಿಯನ್ನು ಪ್ರಚೋದಿಸಲಿ: ತನ್ನೋ ನಾರಸಿಂಹಃ ಪ್ರಚೋದಯಾತ್ !.

ಸೂಚನೆ: 25/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.